ಲೇಖಕರು : ವಿದ್ವಾನ್ ನರಸಿಂಹ ಭಟ್
ಪ್ರತಿಕ್ರಿಯಿಸಿರಿ (lekhana@ayvm.in)
ಪ್ರಶ್ನೆ ೫ - ಮಾನವನು ಅತಿಮುಖ್ಯವಾಗಿ ಮಾಡಬೇಕಾದ ಕಾರ್ಯ ಯಾವುದು ?
ಉತ್ತರ - ತನಗೂ ಮತ್ತು ಪರರಿಗೂ ಹಿತವಾಗುವ ಕಾರ್ಯ.
ಈ ಸೃಷ್ಟಿಯಲ್ಲಿ ಇರುವ ಎಂಭತ್ತ ನಾಲ್ಕು ಲಕ್ಷ ಜೀವ ಜಾತಿಗಳ ಪೈಕಿ ಮಾನವಜನ್ಮಕ್ಕೆ ಅತಿವಿಶೇಷವಾದ ಸ್ಥಾನ ಉಂಟು. ಹಾಗಾಗಿ ಮಾನವನಾಗಿ ಹುಟ್ಟನ್ನು ಪಡೆದ ಬಳಿಕ ಅತ್ಯಂತ ಮುಖ್ಯವಾಗಿ ಮಾಡಬೇಕಾದ ಕೆಲಸ ಯಾವುದು? ಎಂಬುದು ಇಲ್ಲಿನ ಪ್ರಶ್ನೆಯಾಗಿದೆ. ಅಂದರೆ ಅವನು ಎಂತಹ ಜೀವನವನ್ನು ಸಾಗಿಸಬೇಕಾಗಿದೆ? ಎಂಬುದು ಈ ಪ್ರಶ್ನೆಯ ಅರ್ಥವಾಗಿದೆ. ಅದಕ್ಕೆ ಉತ್ತರ ಹೇಗಿದೆ- ಯಾರು ತನಗೂ ಮತ್ತು ಪರರಿಗೂ ಹಿತವಾಗುವ ರೀತಿಯಲ್ಲಿ ಕೆಲಸ ಮಾಡ್ತಾನೋ, ಅವನೇ ನಿಜವಾಗಿಯೂ ಮಾನವನಾಗಬಲ್ಲ; ಅಂದರೆ ಅವನು ಮಾಡುವ ಕಾರ್ಯವು ತನಗೂ ಮತ್ತು ಪರರಿಗೂ ಅನುಕೂಲವಾಗುವ ರೀತಿಯಲ್ಲಿ ಇರಬೇಕು ಎಂಬುದಾಗಿ. ಒಂದು ಸುಭಾಷಿತ ಹೀಗೆ ಇದೆ "ಪರೇಷಾಮ್ ಉಪಕಾರಾರ್ಥಂ ಯೋ ಜೀವತಿ ಸ ಜೀವತಿ" ಎಂಬುದಾಗಿ ಅಂದರೆ ಯಾವನ ಜೀವನವು ಪರೋಪಕಾರಕ್ಕಾಗಿ ಇರುತ್ತದೆಯೋ ಅವನು ನಿಜವಾಗಿ ಜೀವನ ಮಾಡುತ್ತಿದ್ದಾನೆ ಎಂದರ್ಥ. ಮನುಜನ ಜೀವನಕ್ಕೂ ಮತ್ತು ಉಳಿದ ಜೀವಿಗಳ ಜೀವನಕ್ಕೂ ಇಷ್ಟು ವ್ಯತ್ಯಾಸವನ್ನು ಕಾಣಬಹುದು, .
ಏನೆಂದರೆ ಉಳಿದ ಜೀವಿಗಳ ಬದುಕು ಸಹಜವಾಗಿಯೇ ಸೃಷ್ಟಿಯ ಸಮತೋಲನವನ್ನು ಕಾದುಕೊಳ್ಳುವ ರೀತಿಯಲ್ಲಿ ಇರುತ್ತದೆ. ಅದು ಅಪ್ರಯತ್ನ ಪೂರ್ವಕವಾಗಿ ಇರುತ್ತದೆ. ಅವುಗಳಿಗೆ ಈ ಪ್ರಪಂಚದ ಆಗುಹೋಗುಗಳನ್ನು ನಿಯಂತ್ರಿಸಬಲ್ಲ ಸಾಮರ್ಥ್ಯವಿರುವುದಿಲ. ಆದರೆ ಮನುಷ್ಯನ ಜೀವನ ಹಾಗಲ್ಲ; ಅವನು ಈ ಸೃಷ್ಟಿಯ ಮೇಲೆ ತನ್ನ ಕೈಯನ್ನು ಆಡಿಸಬಲ್ಲ. ತನ್ನ ಬುದ್ಧಿಯ ಬಲದಿಂದ ಅವನು ಈ ಪ್ರಕೃತಿಗೆ ಹೇಗೆ ಹಿತವಾಗುವ ಕಾರ್ಯವನ್ನು ಮಾಡಬಹುದೋ ಅಂತೆಯೇ ಅಹಿತವಾಗುವ ಕಾರ್ಯವನ್ನೂ ಮಾಡಬಹುದಾಗಿದೆ. ಅಂತಹ ವಿವೇಕ ಮತ್ತು ಅವಿವೇಕವು ಎರಡೂ ಮನುಷ್ಯನಿಗೆ ಬಿಟ್ಟು ಬೇರೆ ಯಾವ ಜೀವಿಗಳಿಗೂ ಇರುವುದಿಲ್ಲ. ಆತ ತನ್ನ ಸಾಮರ್ಥ್ಯದಿಂದ ಪ್ರಪಂಚದ ಮೇಲೆ ಹಿಡಿತ ಸಾಧಿಸಬಲ್ಲ. ಆದ್ದರಿಂದಲೇ ಈ ಪ್ರಶ್ನೆಯಲ್ಲಿ ಎಚ್ಚರಿಕೆಯನ್ನು ಕೊಟ್ಟಂತೆ ಕಾಣುತ್ತದೆ.
ಮಾನವ ಕೇವಲ ಸ್ವಾರ್ಥಕ್ಕಾಗಿ ಮಾತ್ರ ಜೀವಿಸಿದರೆ ಪ್ರಪಂಚಕ್ಕೆ ಸಾಲದು; ಆತ ಪ್ರಪಂಚದ ಪ್ರತಿಯೊಂದು ಜೀವವೂ ಸ್ವತಂತ್ರವಾಗಿ, ನಿರ್ಭೀತವಾಗಿ ಜೀವನ ಮಾಡುವಂತಾಗಬೇಕು. ಆ ರೀತಿಯಲ್ಲಿ ಮಾನವನ ಜೀವಿತ ಇರುವಂತೆ ನೋಡಿಕೊಳ್ಳಬೇಕಾದುದು ಮಾನವನದ್ದೇ ಹೊಣೆಗಾರಿಕೆಯೂ ಹೌದು. ಮಾನವನ ಜೀವನ ಕೇವಲ ತನ್ನ ಉದ್ಧಾರಕ್ಕಾಗಿ ಮಾತ್ರ ಅಲ್ಲ, ತಾನು ಉದ್ಧಾರವಾಗುವುದರ ಜೊತೆಯಲ್ಲಿ ಎಲ್ಲ ಜೀವಜಾತಿಗಳನ್ನು ಒಗ್ಗೂಡಿಸಿಕೊಂಡು ಅವುಗಳಿಗೆ ಅನುಕೂಲವಾಗುವ ರೀತಿಯಲ್ಲಿ ಅವನ ಜೀವನ ಸಾಗಬೇಕಾದದ್ದು ಎಂಬುದು ಇದರ ಅರ್ಥ. ಹಾಗಾಗಿ ಯಾವ ಮನುಷ್ಯನು ಈ ರೀತಿಯಾಗಿ ಬದುಕುತ್ತಾನೋ ಅವನು ನಿಜವಾದ ಮನುಷ್ಯ ಎಂಬುದಾಗಿ ಕರೆಸಿಕೊಳ್ಳಬಲ್ಲ. ಇದಕ್ಕೆ ವಿರುದ್ಧವಾಗಿ ನಡೆದುಕೊಂಡಲ್ಲಿ ಅವನು ರಾಕ್ಷಸನಾಗುತ್ತಾನೆ ಉಳಿದ ಪ್ರಾಣಿಗಳಲ್ಲಿ ಸೌಮ್ಯಪ್ರಾಣಿಗಳು, ಕ್ರೂರಪ್ರಾಣಿಗಳು ಎಂಬುದಾಗಿ ಸೃಷ್ಟಿಸಹಜವಾಗಿ ಆ ಸ್ವಭಾವಕ್ಕೆ ಅನುಗುಣವಾಗಿ ವಿಭಾಗವನ್ನು ಕಾಣಬಹುದು. ಅವು ಬದುಕಿನುದ್ದಕ್ಕೂ ಅದೇ ಸ್ವಭಾವದ್ದಾಗಿರುತ್ತವೆ. ಸ್ವಭಾವಪರಿವರ್ತನೆ ಅಲ್ಲಿ ಅಸಾಧ್ಯ. ಆದರೆ ಮನುಷ್ಯನು ತನ್ನ ಸಜ್ಜನಿಕೆಯಿಂದ ಈ ಪ್ರಪಂಚದಲ್ಲಿ ಸಮತೋಲನವನ್ನು ಉಂಟುಮಾಡುವಂತೆ ಜೀವಿಸಲು ಸಾಧ್ಯ. ದುಷ್ಟನಾಗಿ ಅದನ್ನು ಕೆಡಿಸಲೂ ಸಾಧ್ಯ. ಹಾಗಾಗಿ ಮನುಷ್ಯನ ಸಮತೋಲನವಾದ ಬದುಕು ಹೇಗಿರಬೇಕೆಂದನ್ನು ಪ್ರಶ್ನೋತ್ತರ ಸಾರುತ್ತದೆ.