Sunday, March 16, 2025

ವ್ಯಾಸ ವೀಕ್ಷಿತ 128 ಇಂದ್ರನೇ ಹಿಂದಿರುಗಿಹೋದ! (Vyaasa Vikshita 128)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in





ಪಿಶಾಚ-ಸರ್ಪ-ರಾಕ್ಷಸರುಗಳನ್ನು ಸಂಹರಿಸುತ್ತಿದ್ದ ಸರ್ವಭೂತಾತ್ಮನಾಗಿದ್ದ ಆ ಕೃಷ್ಣನ ರೂಪವು ಆಗ ಅತ್ಯುಗ್ರವಾಗಿ ಕಂಡಿತು.


ಆ ಸಂದರ್ಭದಲ್ಲಿ ಎಲ್ಲೆಡೆಗಳಿಂದಲೂ ಸಹ ದಾನವರು ಸೇರಿದ್ದರೂ, ಅವರಲ್ಲಾರೊಬ್ಬರೂ ಸಹ ಕೃಷ್ಣ-ಪಾಂಡವರೊಂದಿಗಿನ ಆ ಸಂಗ್ರಾಮದಲ್ಲಿ ಜಯಿಸಲು ಸಮರ್ಥರಾಗಲಿಲ್ಲ. ಅವರಿಬ್ಬರ, ಎಂದರೆ ಶ್ರೀಕೃಷ್ಣಾರ್ಜುನರ, ಬಲದಿಂದಾಗಿ ಆ ಕಾಡನ್ನು ರಕ್ಷಿಸಲು ಯಾವಾಗ ಆ ಸುರರು ಅಸಮರ್ಥರಾದರೋ, ಅಗ್ನಿಯನ್ನು ಶಮನಮಾಡಲೂ ಸಹ ಅಶಕ್ತರಾದರೋ, ಆಗ ಆ ದೇವತೆಗಳು ಪರಾಙ್ಮುಖರಾದರು, ಎಂದರೆ ಬೆನ್ನು ತೋರಿಸಿ ಓಡಿಹೋದರು.


ಹೀಗೆ ವಿಮುಖರಾಗಿ ಹೋದ ಅಮರರನ್ನು ಕಂಡು ಇಂದ್ರನು ಮುದಿತನೇ ಆದನು, ಎಂದರೆ ಸಂತೋಷಗೊಂಡನು. ಹಾಗೂ ಕೇಶವಾರ್ಜುನರ ಪ್ರಶಂಸೆಯನ್ನೇ ಮಾಡಿದನು.


ದೇವತೆಗಳು ಹಿಂದಿರುಗಲಾಗಿ, ಅಶರೀರವಾಣಿಯೊಂದು ನುಡಿಯಿತು. ಆ ನುಡಿಯು ಗಂಭೀರಸ್ವರದಿಂದ ಕೂಡಿದ ಧ್ವನಿಯನ್ನುಳ್ಳದ್ದಾಗಿತ್ತು. ಹಾಗೂ ಅದು ಇಂದ್ರನನ್ನು ಉದ್ದೇಶಿಸಿ ಹೇಳಿದ ಮಾತಾಗಿತ್ತು.


"ಓ ಇಂದ್ರನೇ, ನಿನ್ನ ಸ್ನೇಹಿತನಾದ ಸರ್ಪಶ್ರೇಷ್ಠನಾದ ತಕ್ಷಕನು ಈಗಿಲ್ಲಿಲ್ಲ. ಖಾಂಡವದ ದಹನದ ಸಮಯಕ್ಕೆ ಆತನು ಕುರುಕ್ಷೇತ್ರಕ್ಕೆ ಹೋಗಿದ್ದಾನೆ.


ನನ್ನ ಮಾತನ್ನು ಕೇಳು ಇಂದ್ರಾ, ಈ ವಾಸುದೇವಾರ್ಜುನರನ್ನು ಯುದ್ಧದಲ್ಲಿ ನೀ ಗೆಲ್ಲಲು ಸರ್ವಥಾ ಆಗದು. ಇವರಿಬ್ಬರು ನರನಾರಾಯಣರು: ನರನಾರಾಯಣಾವೇತೌ. ಹಿಂದೆ ದೇವತೆಗಳಾಗಿದ್ದವರು. ದೇವಲೋಕದಲ್ಲಿ ಖ್ಯಾತಿಹೊಂದಿದವರು.


ಇವರು ಎಂತಹ ವೀರ್ಯದಿಂದ ಕೂಡಿರುವವರು, ಹಾಗೂ ಎಂತಹ ಪರಾಕ್ರಮದಿಂದ ಸಂಪನ್ನರಾಗಿರುವವರು - ಎಂಬುದನ್ನು ನೀನೂ ಈಗ ಅರಿತುಕೊಂಡಿದ್ದೀಯೇ. ಇವರು ಅಜಿತರು, ಎಂದರೆ ಎಂದೂ ಸೋಲು ಕಂಡಿರದವರು. ಯುದ್ಧದಲ್ಲಿ ಇವರನ್ನು ಕೆಡವಲು ಯಾರೂ ಸಮರ್ಥರಲ್ಲ.


ಸರ್ವಲೋಕಗಳಲ್ಲಿಯೂ ಸಹ ಪುರಾತನರೆನಿಸಿದ ಋಷಿಶ್ರೇಷ್ಠರು, ಇವರಿಬ್ಬರು. ಸುರರೂ ಅಸುರರೂ, ಯಕ್ಷರೂ ರಾಕ್ಷಸರೂ ಗಂಧರ್ವರೂ, ನರರೂ ಕಿಂನರರೂ ಪನ್ನಗರೂ (ಎಂದರೆ ನಾಗರೂ) - ಇವರೆಲ್ಲರಿಗೂ ಪೂಜ್ಯರಾದವರು, ಇವರು.


ಆ ಕಾರಣದಿಂದಾಗಿ ದೇವತೆಗಳೊಂದಿಗೆ ನೀನು ಇಲ್ಲಿಂದ ಹಿಂದಿರುಗಿಹೋಗುವುದೇ ಲೇಸು. ಖಾಂಡವದ ವಿನಾಶವೆಂಬುದು ಸಹ ದೈವದಿಂದಲೇ, ಎಂದರೆ ಪೂರ್ವಕರ್ಮಗಳ ಫಲದಿಂದಲೇ, ಆಗಿರುವಂತಹುದೆಂಬುದನ್ನು ನೀ ಮನಗಾಣಬೇಕು."


ಈ ಪ್ರಕಾರವಾದ ಉಪಶ್ರುತಿಯನ್ನು ಕೇಳಿದ ಇಂದ್ರನು ಇದು ತಥ್ಯವೆಂಬುದನ್ನು ಕಂಡುಕೊಂಡು, ತನ್ನ ಕ್ರೋಧ ಹಾಗೂ ಅಸಹನೆಗಳನ್ನು ತೊರೆದು, ಸ್ವರ್ಗದತ್ತ ಸಾರಿದನು. ಆ ಮಹಾತ್ಮನೇ ಹಾಗೆ ಹೊರಟಿರುವುದನ್ನು ಕಂಡವರಾಗಿ ದೇವತೆಗಳೆಲ್ಲರೂ ಸಹ ಸೇನಾಸಮೇತರಾಗಿ ಇಂದ್ರನ ಬಳಿಗೆ ಸಾರಿದರು. ದೇವತೆಗಳೊಂದಿಗೆ ದೇವರಾಜನಾದ ಇಂದ್ರನೇ ಹೊರಟುಹೋಗುತ್ತಿರುವುದನ್ನು ಕಂಡು ವೀರ ಕೃಷ್ಣಾರ್ಜುನರಿಬ್ಬರೂ ಸಹ ಸಿಂಹನಾದವನ್ನು ಗೈದರು.


ದೇವರಾಜನಾದ ಇಂದ್ರನೇ ಹೋಗಿರಲಾಗಿ, ಕೇಶವಾರ್ಜುನರು ಪ್ರಹರ್ಷಗೊಂಡರು. ಇನ್ನು ಮುಂದಕ್ಕೆ ಆ ವನವನ್ನು ಯಾವುದೇ ಆತಂಕವಿಲ್ಲದೆ ಸುಟ್ಟುಹಾಕಿದರು. ಗಾಳಿಯು ಯಾವ ರೀತಿಯಲ್ಲಿ ಮೋಡಗಳನ್ನು ಚಲ್ಲಾಪಿಲ್ಲಿ ಮಾಡುವುದೋ ಅದೇ ರೀತಿಯಲ್ಲಿ ಅರ್ಜುನನು ದೇವತೆಗಳನ್ನು ಚಲ್ಲಾಪಿಲ್ಲಿಯಾಗಿಸಿದನು. ಖಾಂಡವದಲ್ಲಿ ಮನೆಮಾಡಿದ್ದ ಪ್ರಾಣಿಗಳನ್ನು ತನ್ನ ಶರಸ್ತೋಮದಿಂದ ಧ್ವಂಸಮಾಡಿದನು. ಅರ್ಜುನನು ಬಾಣಗಳನ್ನು ಪ್ರಯೋಗಿಸಿ ಕತ್ತರಿಸಿಹಾಕುತ್ತಿರಲು, ಯಾವೊಂದು ಪ್ರಾಣಿಯೂ ಸಹ ಅಲ್ಲಿಂದ, ಎಂದರೆ ಖಾಂಡವದಿಂದ, ಆಚೆ ಹೋಗಲು ಶಕ್ತವಾಗಲಿಲ್ಲ.


ಅಮೋಘವಾದ ಅಸ್ತ್ರಗಳನ್ನು ಹೊಂದಿದ್ದ ಅರ್ಜುನನನ್ನು ದೊಡ್ಡದೊಡ್ಡ ಪ್ರಾಣಿಗಳೂ ಸಹ ದಿಟ್ಟಿಸಿನೋಡಲೂ ಆಗದಾದವು, ಇನ್ನು ಅವನೊಡನೆ ಯುದ್ಧಮಾಡುವುದೆಲ್ಲಿ ಬಂತು?


ಸೂಚನೆ : 16/3/2025 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.