ಲೇಖಕರು : ವಿದ್ವಾನ್ ನರಸಿಂಹ ಭಟ್
ಪ್ರತಿಕ್ರಿಯಿಸಿರಿ (lekhana@ayvm.in)
ಪ್ರಶ್ನೆ ೯. ಯಾವುದು ವಿಷ ?
ಉತ್ತರ - ಗುರುಜನರ ಬಗ್ಗೆ ತಿರಸ್ಕಾರ.
ಪ್ರಸ್ತುತ ಪ್ರಶ್ನೆ ಇದಾಗಿದೆ - ಯಾವುದು ವಿಷ? ಎಂಬುದು? ಪ್ರಶ್ನೆಯ ಅರ್ಥ ಹೀಗಿದೆ ಎಂಬುದಾಗಿ ಭಾವಿಸ ಬಹುದು. ವಿಷ ಎಂದರೆ ವಿಷಮ. ಅಥವಾ ಫಲಸಾಧನೆಗೆ ಯಾವುದು ವಿಘ್ನವನ್ನು ಉಂಟುಮಾಡುವ ವಿಷಯವಾಗಿದೆಯೋ ಅಥವಾ ಉದಿಷ್ಟವಾದ ಪ್ರಯೋಜನಕ್ಕೆ ಯಾವುದು ಪ್ರತಿಬಂಧಕವೋ ಸಾಮಾನ್ಯವಾಗಿ ಅದನ್ನು 'ವಿಷ ಎಂಬುದಾಗಿ ಕರೆಯಬಹುದು ವಿಷವು ವಿಷಮತೆಯನ್ನು ಉಂಟುಮಾಡುತ್ತದೆ. ಯಾವುದೋ ಒಂದು ಇರುವ ಸ್ಥಿತಿಯನ್ನು ಕೆಡಿಸುತ್ತದೆ. ಧರ್ಮವನ್ನು ಕೆಡಿಸುತ್ತದೆ. ಹೀಗೆ ಕೆಡಿಸುವ ಸ್ವಭಾವವುಳ್ಳದ್ದು ವಿಷ ಎಂದರ್ಥ. ವಿಷವನ್ನು ಪಡೆದವನು ಸ್ವಸ್ಥವಾಗಿ ಇರಲು ಸಾಧ್ಯವೇ? ವಿಷವನ್ನು ಸೇವಿಸುತ್ತಾ ಸೇವಿಸುತ್ತಾ ವ್ಯಕ್ತಿಯ ಬಾಳೇ ನಾಶದತ್ತ ಸಾಗುತ್ತದೆ. ಪ್ರಗತಿ ಅಲ್ಲಿ ಸಾಧ್ಯವಾಗುವುದಿಲ್ಲವಷ್ಟೆ.
ಪ್ರಸ್ತುತ ಪ್ರಶ್ನೆಯು ಬಾಳಿನ ವಿಷಮತೆಗೆ ಕಾರಣವನ್ನು ಕೇಳುತ್ತಿದೆ. ವಿಷ ಯಾವುದು ಎಂಬುದಕ್ಕೆ ಪ್ರಶ್ನೆಗೆ, ಗುರುಜನರ ಬಗ್ಗೆ ತಿರಸ್ಕಾರ, ಅಂದರೆ ಗುರು ಜನರ ವಿಷಯದಲ್ಲಿ ತೋರಿಸಲೇಬೇಕಾದ ಗೌರವ, ಆದರ, ಸತ್ಕಾರ, ಪ್ರೀತಿ, ಶ್ರದ್ಧೆ ಇತ್ಯಾದಿ ಸಂಗತಿಗಳನ್ನು ತೋರಿಸದಿರುವಿಕೆ ಎಂದರ್ಥ. ಇಲ್ಲಿ ಗುರುಜನ ಎಂದರೆ ತಂದೆ, ತಾಯಿ, ಕಲಸಿದ ಗುರು, ಶಿಕ್ಷಕ, ಅತಿಥಿ, ಜ್ಞಾನವೃದ್ಧರು ಅಥವಾ ವಯೋವೃದ್ಧರು, ದುಃಖಿತರು, ದೀನಜನರು ದಯೆಗೆ - ಕಾರುಣ್ಯಕ್ಕೆ ಯೋಗ್ಯರಾದವರು, ಅನುಭವದಲ್ಲಿ ಮತ್ತು ವಿದ್ಯೆಯಲ್ಲಿ ನಮಗಿಂತ ದೊಡ್ಡವರು ಇವರೆಲ್ಲರನ್ನು ಸತ್ಕರಿಸುವುದು, ಆದರಿಸುವುದು ಅತ್ಯಂತ ಅವಶ್ಯಕ ಮತ್ತು ಆದ್ಯಕರ್ತವ್ಯ. ತಂದೆತಾಯಿ ವೃದ್ಧರಾಗಿದ್ದಾಗ ಅವರಿಗೆ ನೋವುಂಟಾಗದಂತೆ ವರ್ತಿಸುವುದು, ವಿದ್ಯೆಯನ್ನು ಪಡೆದ ಗುರುವಿನಲ್ಲಿ ಕೃತಜ್ಞತಾಭಾವವನ್ನು ಇಟ್ಟುಕೊಳ್ಳುವುದು, ವೃದ್ಧರಲ್ಲಿ ಸಂದರ್ಭವನ್ನು ಅರಿತು ವರ್ತಿಸುವುದು, ವೃದ್ಧರನ್ನು, ರೋಗಿಗಳ ಶುಶ್ರೂಷೆ ಮಾಡುವುದು. ಇಂತಹ ಅನೇಕ ನಡವಳಿಕೆಗಳಿಂದ ಗುರುಹಿರಿಯರ ಪ್ರೀತಿಗೆ ಆತ ಪಾತ್ರನಾಗುತ್ತಾನೆ. ಇದನ್ನು ಮಾಡದಿರುವವನು ಅವನ ಜೀವನಕ್ಕೆ ವಿಷಮತೆಯನ್ನು ತಂದುಕೊಳ್ಳುತ್ತಾನೆ ಎಂಬುದು ಈ ಪ್ರಶ್ನೋತ್ತರದ ತಾತ್ಪರ್ಯವಾಗಿದೆ.
ಒಬ್ಬ ವ್ಯಕ್ತಿ ಯಾವ ಉತ್ತಮವಾದ ಜೀವನವನ್ನು ಸಾಗಿಸಬೇಕಾಗಿದೆಯೋ, ಅದಕ್ಕೆ ಅನೇಕ ರೀತಿಯ ಸಾಧನಸಾಮಗ್ರಿಗಳು, ಪೋಷಕ ಅಂಶಗಳು ಬೇಕಾಗುತ್ತವೆ. ಆ ಎಲ್ಲಾ ಅಂಶಗಳು ವೃದ್ಧರ, ಹಿರಿಯರ, ಗೌರವಕ್ಕೆ ಅರ್ಹರಾದವರನ್ನು ಪುರಸ್ಕರಿಸುವುದರಿಂದ ಪಡೆಯಬಹುದು. ಅವರನ್ನು ತಿರಸ್ಕರಿಸುವುದರಿಂದ ಅವರಿಂದ ನಮ್ಮ ಬಾಳಿಗೆ ಸಿಗಬೇಕಾದ ಪೋಷಕ ವಿಚಾರಗಳು ಅಲಭ್ಯವಾಗುವವು. ಅವರನ್ನು ಹೇಗೆ ನೋಡಿಕೊಳ್ಳಬೇಕು? ಎಂಬುದರ ಬಗ್ಗೆ ವಿವೇಕದ ಅವಶ್ಯಕತೆ ಇದೆ; ಒಂದು ಸಾಮಾನ್ಯಜ್ಞಾನದ ಅವಶ್ಯಕತೆ ಇದೆ;. ಸತ್ಕರಿಸುವುದು ಪೂಜಿಸುವುದು ಎಂದರೆ ದೇವರ ಪೂಜೆಯನ್ನು ಮಾಡಿದಂತೆ ಗಂಧ ಪುಷ್ಪ ಅಕ್ಷತಾ ಇವುಗಳನ್ನು ಸಮರ್ಪಿಸುವುದು ಎಂದರ್ಥವಲ್ಲ. ಯಾರನ್ನು ಹೇಗೆ ನೋಡಿಕೊಳ್ಳಬೇಕು ಹಾಗೆ ನೋಡಿಕೊಳ್ಳುವುದು. ಅದೇ ಅವರಿಗೆ ಸಲ್ಲಿಸುವ ಗೌರವ ಅಥವಾ ಪುರಸ್ಕಾರವಾಗಿರುತ್ತದೆ. "ಜ್ಞಾನದ ಕಡೆಗೆ ಒಯ್ಯುವ ಜಾಗಕ್ಕೆ ಬಗ್ಗಬೇಕು" ಎಂಬ ಶ್ರೀರಂಗಮಹಾಗುರುಗಳ ಮಾತು ಸ್ಮರಣೀಯ. ಹಾಗೆ ಅಂತಹ ಸ್ಥಾನಕ್ಕೆ ಗೌರವವನ್ನು ಸಲ್ಲಿಸದಿದ್ದರೆ ಅದೇ ತಿರಸ್ಕಾರವಾಗುತ್ತದೆ. ಹಾಗಾದಾಗ ಜೀವನವು ವಿಷಮತೆಗೆ ಸಾಗುತ್ತದೆ. ಆದ್ದರಿಂದ ಪ್ರತಿಯೊಬ್ಬ ಮಾನವನೂ ಗುರುಹಿರಿಯರಿಗೆ ಗೌರವಾದರಗಳನ್ನು ಸಮರ್ಪಿಸಬೇಕು ಎಂಬುದು ಈ ಪ್ರಶ್ನೋತ್ತರದ ಸಾರವಾಗಿದೆ.