Saturday, March 22, 2025

ಹಿತ ನುಡಿಗಳ ಹಿತತೆಯ ಪರಿಕಿಸುವ ಪರಿ (Hita Nudigala Hitateya Parikisuva Pari)

ಲೇಖಕರು : ಡಾ. ಹಚ್.ಆರ್. ಮೀರಾ

(ಪ್ರತಿಕ್ರಿಯಿಸಿರಿ lekhana@ayvm.in)


ನಮ್ಮ ಹಿತವನ್ನು ಬಯಸುವವರ ಮಾತುಗಳನ್ನು ಕೇಳಬೇಕೇ ಬೇಡವೇ? ಇದನ್ನು ಇತ್ಯರ್ಥ ಮಾಡಬೇಕಾದ ಸಂನಿವೇಶ ಬಂದಾಗ, ಹಲವು ವಿಷಯಗಳನ್ನು ನಾವು ಮನಸ್ಸಿನಲ್ಲಿ ಅಳೆದು ಸುರಿದು ನೋಡಬೇಕಾಗುತ್ತದೆ. ಹೇಳುವವರೆಂತಹವರು? ಹೇಳುತ್ತಿರುವ ವಿಷಯ ಎಂತಹುದು? ಅದರಲ್ಲಿ ಅವರ ಸ್ವಾರ್ಥವೇನಾದರೂ ಇದೆಯೇ? - ಇತ್ಯಾದಿ. ರಾಮಾಯಣದಲ್ಲೇ ಬರುವ ಎರಡು ಘಟನೆಗಳನ್ನು ಹೋಲಿಸಿ ನೋಡಿದಾಗ ನಮಗೆ ಇದರ ಬಗ್ಗೆ ಒಂದು ಚಿತ್ರ ಮೂಡಬಹುದು.

ರಾಮನ ಯೌವರಾಜ್ಯಾಭಿಷೇಕಕ್ಕೆ ಆಗುತ್ತಿರುವ ಸಂನಾಹವನ್ನು ಮಂಥರೆ ಕಂಡಳು. ರಾಮನ ವಿಷಯದಲ್ಲಿ ಪ್ರೀತಿಯಿಂದಲೇ ಇದ್ದ ಕೈಕೇಯಿಯು ಸುವಾರ್ತೆಯಿಂದ ಸಂಭ್ರಮಿಸುತ್ತಿದ್ದಾಗ, ತನಗುಕ್ಕಿದ ಕೋಪವನ್ನು ಅವಳ ಮುಂದೆ ಚೆಲ್ಲಿದಳು. "ಮೂಢೆ" ಎಂದು ಬೈದು, ಅವಳಿಗೆ ಈಗ ಆಪತ್ತು ಬಂದಿದೆಯೆಂದು ಉಸುರಿದಳು. ದಶರಥನ ವಿಷಯದಲ್ಲೂ ರಾಮ-ಕೌಸಲ್ಯೆಯರ ವಿಷಯದಲ್ಲೂ ಒಡಕುಬುದ್ಧಿಯುಂಟುಮಾಡುವಂತಹ ಮಾತುಗಳನ್ನಾಡಿದಳು. ದಶರಥನು ಕಪಟಿಯೆಂದೂ, ಭರತನನ್ನು ದೂರ ಕಳಿಸಿ ರಾಮನಿಗೆ ಪಟ್ಟಾಭಿಷೇಕ ಮಾಡುತ್ತಿದ್ದಾನೆಂದೂ ಕಿವಿ ಊದಿದಳು. ಕೈಕೇಯಿಗೆ ಸಂತೋಷವೇ ಆಯಿತು ಸುಖವಾರ್ತೆಯನ್ನು ಕೇಳಿ. ಮಂಥರೆಗಾದರೋ ದುಃಖ-ಕೋಪಗಳ ಕಟ್ಟೆಯೊಡೆಯಿತು. ರಾಮನಿಗೆ ಅಭಿಷೇಕವಾದರೆ ಆಗಬಹುದಾದ ಅನಾಹುತಪರಂಪರೆಯ ಬಗ್ಗೆ ಬಣ್ಣಿಸಿ ಬಣ್ಣಿಸಿ ಕೈಕೇಯಿಗೆ ಹೇಳತೊಡಗಿದಳು. ಕೌಸಲ್ಯೆ ಇವಳನ್ನು ಮುಂದೆ ಹೇಗೆ ನಡೆಸಿಕೊಳ್ಳುತ್ತಾಳೆಂದು ದುಃಖಿಸಿದಳು. ಆದಾಗ್ಯೂ ಕೈಕೇಯಿಗೆ ರಾಮನ ಸದ್ಗುಣಗಳೇ ಮನಸ್ಸಿನಲ್ಲಾಡಿದವು. ಭರತನು ತನಗೆ ಹೇಗೋ, ರಾಮನೂ ಹಾಗೇ ಎಂದಳು. ಮಂಥರೆ ಅಲ್ಲಿಗೆ ಬಿಡದೇ, ಮತ್ತೆ ನಿಟ್ಟುಸಿರು ಬಿಡುತ್ತಾ ಮುಂದೆ ಬರುವ ಕಷ್ಟಪರಂಪರೆಯನ್ನು ವಿವರಿಸಿ ಹೇಳಿದಳು, ರಾಮನು ಮುಂದೆ ರಾಜನಾದರೆ ಭರತನನ್ನು ರಾಜ್ಯದಿಂದಲೇ ನಿಷ್ಕಾಸನ ಮಾಡುವುದರಲ್ಲಿ ಸಂದೇಹವೇ ಇಲ್ಲ ಎಂದೆಲ್ಲಾ ವರ್ಣಿಸಿ ಹೇಳಿದಳು. ಪದೇ ಪದೇ ಕಿವಿಯ ಮೇಲೆ ಬಿದ್ದ ಈ ಮಾತಿಗೆ ಕೈಕೇಯಿ ಮರುಳಾದಳು. ನಂತರ ಘಟಿಸಿದ ಖೇದನೀಯ ವಿಷಯಗಳೆಲ್ಲಾ ಎಲ್ಲರಿಗೂ ತಿಳಿದೇ ಇದೆ.


ಇದಕ್ಕೆ ವ್ಯತಿರಿಕ್ತವಾದ ಇನ್ನೊಂದು ಪರಿಸ್ಥಿತಿಯೆಂದರೆ, ಯುದ್ಧಕಾಂಡದಲ್ಲಿ ರಾಮನಲ್ಲಿ ಶರಣಾಗಿ ಬಂದ ವಿಭೀಷಣನನ್ನು ತಮ್ಮೆಡೆ ಕರೆದುಕೊಳ್ಳಬೇಕೋ ಬೇಡವೋ ಎಂದು ಸುಗ್ರೀವಾದಿಗಳು ರಾಮನಲ್ಲಿ ಅರಿಕೆ ಮಾಡಿಕೊಂಡದ್ದು. ಸುಗ್ರೀವ ಹೇಳಿದ್ದಾದರೂ, "ವಿಭೀಷಣನಾದರೋ ರಾಕ್ಷಸ, ರಾವಣನ ಸಾಕ್ಷಾದ್ ಅನುಜ. ರಾಕ್ಷಸರು ಕಾಮರೂಪಿಗಳು, ನಿಕೃತಿಜ್ಞರು, ಎಂದರೆ ಕಪಟೋಪಾಯಗಳನ್ನು ಬಲ್ಲವರು. ಆದ್ದರಿಂದ ವಿಭೀಷಣನು ರಾವಣನ ಗೂಢಚಾರನಾಗಿ ಬಂದಿದ್ದಲ್ಲಿ ಆಶ್ಚರ್ಯವೇನಿಲ್ಲ. ಇತ್ಯಾದಿಯಾಗಿ. ಕಪಿಸೈನ್ಯದ ವಿವಿಧ ಪ್ರಾಜ್ಞರೂ "ವಿಭೀಷಣನನ್ನು ಪರೀಕ್ಷಿಸಬೇಕು, ಅವನನ್ನು ಹಾಗೆಯೇ ನಂಬಲಾರದು", "ಯಾವ ಪಕ್ಷದಲ್ಲಿಯೂ ನಂಬಲರ್ಹನಲ್ಲ ಅವನು" ಮುಂತಾಗಿ ಅಭಿಪ್ರಾಯವಿತ್ತರು. ಹನುಮಂತನಾದರೂ "ಬೇರೆಯವರು ಹೇಳಿದ್ದರಲ್ಲಿ ಯುಕ್ತವಾದದ್ದಿದ್ದರೂ, ವಿಭೀಷಣನು ಶರಣಾಗತನಾಗಿ ಬರಲು ಇದೊಂದೇ ಸರಿಯಾದ ದೇಶ-ಕಾಲ. ಚಾರನ ಮೂಲ ಪರೀಕ್ಷಿಸಿದರೆ - ಅವನು ಶತ್ರುವಾಗಿದ್ದ ಪಕ್ಷೇ ಸಂದೇಹಿಸಿಬಹುದು, ಮಿತ್ರನಾಗಿದ್ದ ಪಕ್ಷೇ ಮನಸ್ಸು ಕೆಡಬಹುದು. ಅಲ್ಲದೇ, ಆತ ರಾವಣನ ದುರ್ವರ್ತನೆಯನ್ನೂ ನೋಡಿದ್ದಾನೆ, ನಿನ್ನ ಪರಾಕ್ರಮದ ಬಗ್ಗೆ ತಿಳಿದು ಇಲ್ಲಿಗೆ ರಾಜ್ಯಕಾಂಕ್ಷಿಯಾಗಿ ಬಂದಿದ್ದಾನೆ" ಎಂದು ಹೇಳಿ ಅವನು ಗಮನಿಸಿದ ಅಕುಟಿಲತೆ, ಭಯರಾಹಿತ್ಯ ಇವುಗಳ ಬಲದ ಮೇಲೆ ವಿಭೀಷಣನು ಮಿತ್ರನೇ ಎಂದು ಹೇಳುತ್ತಾನೆ. ಹನುಮಂತನ ವಿಮರ್ಶೆಯನ್ನೂ ಅವನ ಮಾತಿನ ತೂಕವನ್ನೂ ಮನಸ್ಸಿಗೆ ತಂದುಕೊಂಡು, ರಾಮನು ವಿಭೀಷಣನಿಗೆ ಅಭಯ ಕೊಡಲು ನಿಶ್ಚಯಿಸುತ್ತಾನೆ. ಸುಗ್ರೀವನಿಗೆ ಆಗಲೂ ಸಮಾಧಾನವಿರುವುದಿಲ್ಲ. ಕೊನೆಗೆ, ವಿಭೀಷಣನು ಶತ್ರುವೇ ಆಗಿದ್ದ ಪಕ್ಷದಲ್ಲೂ ತನಗೇನೂ ಮಾಡಲಾರನೆಂದೂ (ರಾಮನಿಗೆ ತನ್ನ ಸಾಮರ್ಥ್ಯದ ಬಗ್ಗೆ ಇದ್ದ ವಿಶ್ವಾಸ ಇಲ್ಲಿ ತೋರುತ್ತದೆ), ಶರಣು ಎಂದು ಬಂದವನಿಗೆ ಒಲ್ಲೆ ಎನ್ನಲಾರೆನೆಂದೂ ಹೇಳಿ ಸಮಾಧಾನಪಡಿಸಿದನು.


ಈ ಎರಡೂ ಘಟನೆಗಳನ್ನು ವಿಮರ್ಶಿಸಿದಲ್ಲಿ, ನಾವು ಇಷ್ಟನ್ನು ಅರಿಯಬಹುದು. ರಾಮನ ವಿಷಯದಲ್ಲಿ ಅಷ್ಟು ಪ್ರೀತಿಯಿಟ್ಟಿದ್ದ ಕೈಕೇಯಿ ಮಾಡಿದ ಒಂದೇ ತಪ್ಪೆಂದರೆ ತನಗೆ ಹಿತೈಷಿಣಿ ಎಂದೆಣಿಸಿದ್ದ ಮಂಥರೆಯ ಮಾತನ್ನು ಕೇಳಿದ್ದು. ಮಂಥರೆಯಾದರೂ ಕೈಕೇಯಿಯ ತವರಿನಿಂದ ಅವಳೊಟ್ಟಿಗೆ ಬಂದಿದ್ದ ದಾಸಿ. ಒಳ್ಳೆಯ ನಡತೆಯಿತ್ತೆಂದಾಗಲೀ ಜ್ಞಾನವಿತ್ತೆಂದಾಗಲೀ ಇಲ್ಲ, ಅವಳಿಗೆ. ಯಾವ ಸಂಸ್ಕಾರದಿಂದ ಕೂಡಿದ್ದಳೋ ತಿಳಿದಿಲ್ಲ. ಕೈಕೇಯಿಯ ವಿಷಯದಲ್ಲಿದ್ದ ಅವಳ ಆಸ್ಥೆಯೊಂದೇ ಅವಳ ಗುಣವೆನ್ನಬಹುದೇನೋ. ನಿಜಕ್ಕೂ ನೋಡಿದರೆ ಅಸೂಯಾಪರಳಾದ ಅವಳು ಹಿತಮಾಡುವ ಸೋಗಿನಲ್ಲಿ ಕೈಕೇಯಿಗೆ ಮಾಡಿದ್ದು ಕೆಡುಕನ್ನೇ. ಕೈಕೇಯಿಯಾದರೋ ರಾಮನ ವಿಷಯದಲ್ಲಿ ಬಹಳ ಪ್ರೀತಿಯಿಟ್ಟುಕೊಂಡಿದ್ದವಳೇ. ದಶರಥನು ತನಗೆ ಕೊಟ್ಟಿದ್ದ ವರಗಳನ್ನು ಸಹ ಅವಳು ಮರೆತಿದ್ದಳು - ಮಂಥರೆಯೇ ಅವನ್ನು ಜ್ಞಾಪಿಸಿಕೊಟ್ಟದ್ದು. ಇಂತಹ ಸನ್ನಡತೆಯುಳ್ಳವಳಿಗೂ ಒಡಕುಬುದ್ಧಿಯ ಮಾತು ಕಿವಿಯ ಮೇಲೆ ಪದೇ ಪದೇ ಬೀಳುತ್ತಿದ್ದಾಗ, ಅದನ್ನು ನಂಬುವಂತಾಯಿತು - ಮತ್ತೆ ಮತ್ತೆ ಬಿದ್ದ ನೀರಿನಿಂದ ಕಲ್ಲೂ ಕೊರೆದುಹೋದಂತೆ. ರಾಮನೆಂತಹವನು, ದಶರಥನೆಂತಹವನು - ಹೀಗೆ ತನ್ನ ಸ್ವಂತ ಅನುಭವಗಳನ್ನೇ ಅವಳು ಮರೆಯುವಂತಾಯಿತು. ತನ್ನ ವಿವೇಕ, ಅನುಭವಗಳನ್ನು ಮುಂದಿಟ್ಟುಕೊಂಡು ಯೋಚಿಸದೇ, ಪೈಶುನ್ಯಕ್ಕೆ ಬಲಿಯಾಗಿ, ತನ್ನ ಮೇಲೆ ಮಾತ್ರವಲ್ಲದೇ ತನ್ನ ಪರಿವಾರ-ರಾಜ್ಯಗಳೆಲ್ಲಕ್ಕೂ ಆಪತ್ತನ್ನು ತಂದೊಡ್ಡಿದಳು.


ಅತ್ತ ರಾಮನ ಸಂದರ್ಭದಲ್ಲಿ ವಿಭೀಷಣನ ಬಗ್ಗೆ ಅವನಿಗೆ ಸಲಹೆಗಳನ್ನಿತ್ತವರೆಲ್ಲಾ ಪ್ರಾಜ್ಞರು, ಗುಣವಂತರು. ರಾಮನ ಹಿತವನ್ನೇ ಬಯಸಿ, ಸುಗ್ರೀವ, ಅಂಗದ, ಮುಂತಾದವರು ವಿಭೀಷಣನ ಬಗ್ಗೆ ಸಂದೇಹದ ಕಣ್ಗಳಿಂದಲೇ ಇದ್ದವರು. ಹನುಮಂತ ಅವರ ಸಂದೇಹಗಳ ವಿಮರ್ಶೆ ಮಾಡಿ, ಆ ರೀತಿ ಮಾಡುವುದರಿಂದ ಆಗುವ ನಷ್ಟದ ಬಗ್ಗೆಯೂ ಹೇಳಿದನು. ಹೀಗೆ ಒಳ್ಳೆಯ ಮೇಧೆ-ಸಂಸ್ಕಾರಗಳಿದ್ದವರಾದ ಇವರೆಲ್ಲರೂ ಕೊಟ್ಟ ವಿಮರ್ಶೆ-ಅಭಿಪ್ರಾಯಗಳನ್ನು ಗಮನಕ್ಕೆ ತಂದುಕೊಂಡರೂ, ರಾಮನು ನಿಶ್ಚಯ ಮಾಡಿದ್ದು ತನ್ನ ಬುದ್ಧಿ-ವಿವೇಕಗಳಿಂದಲೇ. ತನ್ನ ಸಾಮರ್ಥ್ಯವನ್ನೂ ಧರ್ಮಪ್ರಜ್ಞೆಯನ್ನು ಮನಸ್ಸಿನಲ್ಲಿಟ್ಟುಕೊಂಡೇ. ಶ್ರೀರಂಗಮಹಾಗುರುಗಳು ಹೇಳಿದ ಮಾತುಗಳು ಇಲ್ಲಿ ಮನನೀಯ: "ಒಂದು ವಿಷಯವನ್ನು ಮೋಸಹೋಗದೇ ನೋಡಬೇಕಾದರೆ ಪ್ರಮಾಣಬದ್ಧವಾಗಿದೆಯೇ ಎಂದು ಪರಿಶೀಲಿಸಿ ನೋಡಬೇಕು. ಎಲ್ಲ ರೀತಿಯಿಂದಲೂ ಪರೀಕ್ಷಿಸಿ ನೋಡಬೇಕು. ನಂತರ ನಿರ್ಣಯಕ್ಕೆ ಬರಬೇಕು.". ಕೈಕೇಯಿಯು ತನ್ನ ಅನುಭವಕ್ಕೆ ಬಂದ ಸತ್ಯವನ್ನೂ ಲೆಕ್ಕಿಸದೆ, ಬೇರೊಬ್ಬಳ ಪ್ರಮಾಣವಿಲ್ಲದ ಮಾತುಗಳನ್ನು ನಂಬಿ ಆಪತ್ತಿಗೆ ಸಿಕ್ಕಿಬಿದ್ದಳು. ರಾಮನು ಎಲ್ಲ ರೀತಿಯಲ್ಲೂ ವಿಷಯದ ಪರಾಮರ್ಶೆ ಮಾಡಿ ತನ್ನ ಸಾಮರ್ಥ್ಯ-ಕರ್ತವ್ಯ-ಧರ್ಮಗಳನ್ನು ಮರೆಯದೇ ನಿರ್ಣಯಕ್ಕೆ ಬಂದನು.


ಹೀಗೆ ಹಿತೈಷಿಗಳ ಮಾತನ್ನು ಕೇಳುವಾಗ ಅವರ ಸಾಮರ್ಥ್ಯಾಸಾಮರ್ಥ್ಯಗಳ ವಿವೇಚನೆ ಮಾತ್ರವಲ್ಲದೆ, ನಮ್ಮ ಸ್ವಂತ ಬುದ್ಧಿ-ವಿವೇಕಗಳಿಂದ, ಸಂನಿವೇಶದ ಪರಿಣಾಮಗಳನ್ನು ಮನಸ್ಸಿನಲ್ಲಿಟ್ಟುಕೊಂಡು ನಿರ್ಧಾರ ತೆಗೆದುಕೊಳ್ಳುವುದು ಉಚಿತವಲ್ಲವೇ?


ಸೂಚನೆ : 22/03/2025 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.