ಲೇಖಕರು : ವಿದ್ವಾನ್ ನರಸಿಂಹ ಭಟ್
ಪ್ರಶ್ನೆ ೫ - ಅತಿಶಯವಾದ ಪಥ್ಯ ಯಾವುದು ?
ಉತ್ತರ - ಧರ್ಮ
ಈ ಮುಂದಿನ ಪ್ರಶ್ನೆ 'ಅತಿಶಯವಾದ ಪಥ್ಯ ಯಾವುದು?' ಎಂಬುದಾಗಿ. ಅದಕ್ಕೆ ಉತ್ತರ 'ಧರ್ಮ'. ಈ ಪ್ರಶ್ನೋತ್ತರದಲ್ಲಿ ನಾವು ಚಿಂತಿಸಬೇಕಾದ ವಿಷಯ ಇಷ್ಟು, ಪಥ್ಯ ಎಂದರೇನು? ಅದು ಧರ್ಮ ಹೇಗೆ? ಎಂಬುದು. ಸಾಮಾನ್ಯವಾಗಿ ನಾವು ಪಥ್ಯ ಎಂದರೆ ಅಜೀರ್ಣವಾದಾಗ ಯಾವುದೇ ಆಹಾರವನ್ನು ತೆಗೆದುಕೊಳ್ಳದೆ ಇರುವಂತಹದ್ದು ಎಂಬುದಾಗಿ ಸಾಮಾನ್ಯವಾದ ವಿವರಣೆಯನ್ನು ಕೇಳಿರುತ್ತೇವೆ. ಆದರೆ ಇಲ್ಲಿನ ವಿವರಣೆ ಸ್ವಲ್ಪ ಭಿನ್ನವಾದದು. ಪಥ್ಯ ಎಂದರೆ ಪಥಿ - ಮಾರ್ಗ, ಅದಕ್ಕೆ ಯೋಗ್ಯವಾದದ್ದು ಯಾವುದುಂಟೋ ಅದಕ್ಕೆ 'ಪಥ್ಯ' ಎಂದು ಕರೆಯುತ್ತಾರೆ. ನಮ್ಮ ದಾರಿಯ ಯಾವುದು? ನಮ್ಮ ಗುರಿ ಏನು? ನಮ್ಮ ಗುರಿಗೆ ಅತ್ಯಂತ ಅವಶ್ಯಕವಾದದ್ದು ಯಾವುದು? ಹೀಗೆ ಇದೆಲ್ಲವನ್ನು ಒಟ್ಟಾರೆ ತಿಳಿದಾಗ ಧರ್ಮ ಎಂಬುದು ಪಥ್ಯವಾಗುತ್ತದೆ. ಅಂದರೆ ನಮ್ಮ ದಾರಿ ಯಾವುದು? ಗಮ್ಯ ಸ್ಥಾನ ಯಾವುದು? ಆ ಧರ್ಮವು ಗಮ್ಯವನ್ನು ತಲುಪಲು ಹೇಗೆ ಸಹಕಾರಿಯಾಗುತ್ತದೆ? ಎಂಬುದು ಇಲ್ಲಿ ಚಿಂತಿಸಬೇಕಾದ ವಿಷಯವಾಗಿದೆ.
ಪ್ರತಿಯೊಬ್ಬ ಮಾನವನು ಜನ್ಮ ಪಡೆದ ಮೇಲೆ ಸಾಧಿಸಬೇಕಾದದ್ದು ಅದುವೇ ಮೋಕ್ಷ. ಶ್ರೀರಂಗಮಹಾಗುರುಗಳು ಹೇಳುತ್ತಿದ್ದರು - "ಮಾನವ ಜನ್ಮ ಪಡೆದ ಆ ಕ್ಷಣದಿಂದ ಅವನ ಹಕ್ಕಾಗಿರುವಂತದ್ದು ಮೋಕ್ಷಪ್ಪ, ಹೇಗೆ ಭಾರತೀಯ ಪ್ರಜೆಗೆ ಹದಿನೆಂಟು ವರ್ಷವಾದರೆ ಮತ ಚಲಾಯಿಸುವ ಹಕ್ಕು ತಾನಾಗಿಯೇ ಬರುತ್ತದೆಯೋ, ಹಾಗೆ ಮನುಷ್ಯ ಜನ್ಮ ಪಡೆದಾಗಲೇ ಅವನಿಗೆ ಮೋಕ್ಷ ಪಡೆಯುವುದು ಕೂಡ ಹಕ್ಕಾಗಿ ಬರುತ್ತದೆ" ಎಂಬುದಾಗಿ. ಅಂದರೆ ನಾವು ಪಡೆಯಲೇ ಬೇಕಾದುದು. ಅಲ್ಲ ಸಿಗಬೇಕದುದು ಮುಕ್ತಿ. ಆದ್ದರಿಂದಲೇ ಅದಕ್ಕೆ ಅಪವರ್ಗ ಎಂದೂ ಹೇಳುತ್ತಾರೆ. ಧರ್ಮ, ಅರ್ಥ ಮತ್ತು ಕಾಮ ಎಂಬ ಮೂರು ಪುರುಷಾರ್ಥಗಳನ್ನು ಪಡೆದು ಅವು ಮೂರನ್ನು ಬಿಟ್ಟಾಗ ಸಿಗುವಂತಹದ್ದು ಯಾವುದಿದೆಯೋ ಅದಕ್ಕೆ ಮೋಕ್ಷ ಎಂಬುದಾಗಿ ಕರೆಯುತ್ತಾರೆ. ಹಾಗಾಗಿ ಇದು ಅಪವರ್ಗ. ಧರ್ಮವು ಅತ್ಯಂತ ಅವಶ್ಯಕವಾಗಿ ಬೇಕಾಗಿದದ್ದು.
ಹಾಗಾದರೆ ಧರ್ಮ ಎಂದರೇನು? ಈ ಮೋಕ್ಷವನ್ನು ಪಡೆಯಲು ಧರ್ಮ ಹೇಗೆ ಸಹಕಾರಿ? ಅಂದರೆ ನಾವು ಕೇಳುವಂತಹ 'ಧರ್ಮ' ಎಂಬ ಶಬ್ದವು ಸಾಮಾನ್ಯವಾಗಿ ಬೇರೆ ಬೇರೆ ಅರ್ಥದಲ್ಲಿ ಇದೆ. ಆದರೆ ಆ ಎಲ್ಲಾ ಅರ್ಥವನ್ನು ವಿವರಿಸುವ ಸಂದರ್ಭ ಇದಲ್ಲ ಎಂಬುದಾಗಿ ಭಾವಿಸಿ, ಧರ್ಮ ಎಂಬ ಶಬ್ದಕ್ಕೆ ಒಂದು ಬಗೆಯ ಕಂಡೀಶನ್ ಅಥವಾ ಒಂದು ಸ್ಥಿತಿ ಎಂಬುದಾಗಿ ಶ್ರೀರಂಗಮಹಾಗುರುಗಳು ನೀಡಿದ ವಿವರಣೆಯನ್ನು ಮುಂದಿಟ್ಟುಕೊಂಡು ಧರ್ಮವಿಷಯವನ್ನು ಅರ್ಥಮಾಡಿಕೊಳ್ಳಬೇಕು. ಅದನ್ನು ನಾವಿಲ್ಲಿ ತೆಗೆದುಕೊಂಡು ಧರ್ಮ ಎಂದರೆ ಮೋಕ್ಷವನ್ನು ಪಡೆಯಲು ಆಗುವ ಸ್ಥಿತಿ. ಮತ್ತು ಅದನ್ನು ಪಡೆಯುವ ಸಾಧನ. ಒಂದು ಉದಾಹರಣೆಯನ್ನು ಗಮನಿಸುವುದಾದರೆ, ನಾವು ನಿದ್ದೆಯನ್ನು ಮಾಡುತ್ತೇವೆ. ವಸ್ತುತಃ ನಿದ್ದೆ ಮಾಡುವಂತದ್ದಲ್ಲ; ಅದು ಬರುವಂತದ್ದು. ನಿದ್ದೆಗೆ ಪ್ರತಿಬಂಧಕವಾದ ವಿಷಯಗಳನ್ನೆಲ್ಲಾ ದೂರ ಮಾಡಿದಾಗ ನಿದ್ದೆಗೆ ಬೇಕಾದ ಸಂದರ್ಭ ತಾನಾಗಿಯೇ ಬರುತ್ತದೆ; ನಿದ್ದೆ ತಾನಾಗಿಯೇ ಹತ್ತುತ್ತದೆ. ಹಾಗೆಯೇ ಮುಕ್ತಿಗೆ ಪ್ರತಿಬಂಧಕವಾದದ್ದನ್ನು ತೆಗೆದಾಗ, ದೂರ ಮಾಡಿಕೊಂಡಾಗ ಆ ಮುಕ್ತಿಯು ಅಥವಾ ಮೋಕ್ಷವು ಸಹಜವಾಗಿ ಸಿದ್ಧವಾಗುವುದು ಎಂಬುದು ಇದರ ತಾತ್ಪರ್ಯ. ಹಾಗಾಗಿ ಮೋಕ್ಷ ಎಂಬ ಗಮ್ಯಸ್ಥಾನಕ್ಕೆ ಧರ್ಮ ಎಂಬುದು ಪಥ್ಯ, ಆ ಮಾರ್ಗಕ್ಕೆ ಅತ್ಯಂತ ಉಚಿತವಾದದು ಎಂಬುದು ಈ ಪ್ರಶ್ನೋತ್ತರ ಸಾರವಾಗಿದೆ