Sunday, May 22, 2022

ಶ್ರೀ ರಾಮನ ಗುಣಗಳು - 55 ಮಹಾರಾಜ- ಶ್ರೀರಾಮ (Sriramana Gunagalu-55 Mararaja Srirama)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ಟ
(ಪ್ರತಿಕ್ರಿಯಿಸಿರಿ lekhana@ayvm.in)


'ಮಹಾರಾಜ' ಎಂಬ ವಿಶೇಷಗುಣ ಶ್ರೀರಾಮನಿಗೇಕೆ? ರಾಜನೆಂದರೆ ಸಾಲದೆ? 'ರಾಜ' ಎಂಬ ಪದಕ್ಕೂ ಸಂಸ್ಕೃತದಲ್ಲಿ ಬಹಳ ವಿಶೇಷ ಅರ್ಥವೇ ಉಂಟು. ಅದಕ್ಕೇನು ಅರ್ಥದಲ್ಲಿ ದಾರಿದ್ರ್ಯವುಂಟಾಗಿ 'ಮಹತ್' ಎಂಬ ವಿಶೇಷಣವನ್ನು ಸೇರಿಸಿದ್ದೇ? 'ರಾಜತೇ - ಪ್ರಕಾಶತೇ' ಎಲ್ಲೆಲ್ಲೂ ರಾರಾಜಿಸುವವನು ಅಥವಾ ಎಲ್ಲಾ ಕಡೆ ತನ್ನ ಪ್ರಕಾಶವನ್ನು- ಜ್ಞಾನವನ್ನು ಬೀರುವವನು ಎಂಬ ಅರ್ಥದಲ್ಲೇ 'ರಾಜ' ಎಂಬ ಪದದ ಬಳಕೆ ಉಂಟು. ಹಾಗಾದರೆ ಈ 'ಮಹತ್' ಎಂಬ ಇನ್ನೊಂದು ಪದ ವ್ಯರ್ಥವಲ್ಲವೇ? ರಾಜನೆಂದರೆ ಒಂದು ಸಣ್ಣ ರಾಜ್ಯಕ್ಕೆ ಅಧಿಪತಿ. ಅಂತಹ ಅನೇಕ ರಾಜ್ಯಗಳನ್ನು- ಅಂತಹ ಅನೇಕ ರಾಜರನ್ನು ತನ್ನ ಹಿಡಿತದಲ್ಲಿ ಇಟ್ಟುಕೊಂಡವನು 'ಮಹಾರಾಜ' ಎಂದು ಕರೆಯುವ ಅಭ್ಯಾಸ ಬಂದಿದೆ. ಇದು ತಪ್ಪಲ್ಲ. ಆದರೆ ರಾಜ ಎಂಬುದರಿಂದಲೇ ಅತಿಶಯವಾದ ಅರ್ಥವು ತೋರಲು, ಮತ್ತೊಂದು ಪದದ ಬಳಕೆ ಕೆಲವೊಮ್ಮೆ ವ್ಯರ್ಥವೇ ಆದೀತು. ಆದರೆ ವಿಶೇಷಣಪದಕ್ಕೆ ಇನ್ನೂ ವಿಶಿಷ್ಟವಾದ ಅರ್ಥವನ್ನು ಹೇಳಲು ಬಯಸುವಂತಿದ್ದರೆ, ಆಗ ಮತ್ತೊಂದು ಪದದ ಬಳಕೆ ವ್ಯರ್ಥ ಎನಿಸಿಕೊಳ್ಳದು. ಅಂತಹ ಸಂಗತಿ ಇಲ್ಲೂ ಉಂಟು. ಹಾಗಾಗಿ ಇಲ್ಲಿ 'ಮಹಾರಾಜ' ಎಂದು ಹೇಳಿದ್ದರ ವಿಶಿಷ್ಟವಾದ ಅರ್ಥವೇನು?


ಶ್ರೀರಂಗಮಹಾಗುರುಗಳು 'ಮಹತ್' ಎಂಬುದಕ್ಕೆ ಅನ್ಯತರಸಾಧಾರಣವಾದ ವಿವರಣೆಯನ್ನು ಕೊಟ್ಟಿದ್ದರು. ಅದನ್ನು ಅರ್ಥಮಾಡಿಕೊಂಡಾಗ ಮಾತ್ರ ಈ ಪದದ ಬಳಕೆಯ ಔಚಿತ್ಯ ಮನಸ್ಸಿಗೆ ಬರಲು ಸಾಧ್ಯ. ಸಾಂಖ್ಯರು ಈ ಪ್ರಕೃತಿಯನ್ನು ಅಥವಾ ಪ್ರಪಂಚವನ್ನು ೨೪ ತತ್ತ್ವಗಳನ್ನಾಗಿ ವಿಭಾಗಿಸುತ್ತಾರೆ. ಅವುಗಳಲ್ಲಿ 'ಮಹತ್' ಎಂಬುದು ಒಂದು ತತ್ತ್ವವಾಗಿದೆ. ಸೂಕ್ಷ್ಮವಾದ ರೂಪವನ್ನು ತತ್ತ್ವವೆಂದು ಕರೆಯಲಾಗುತ್ತದೆ. ಅದು ದೇವತಾತ್ಮಕವಾಗಿಯೋ ಅಥವಾ ತದ್ಭಿನ್ನರೂಪವಾಗಿಯೋ ಇರಬಹುದು. ಇದನ್ನು ಕಾಣುವುದು ಅಥವಾ ಇವುಗಳ ದರ್ಶನವೇ ಮುಕ್ತಿಗೆ ಸಾಧನ ಎನ್ನುವಷ್ಟರ ಮಟ್ಟಿಗೆ ಈ ತತ್ತ್ವಗಳ ಪ್ರಾಧಾನ್ಯವನ್ನು ತಿಳಿಸುತ್ತಾರೆ ಸಾಂಖ್ಯರು. ಯೋಗಸಾಧನೆಯಲ್ಲೂ ಇದೇ ಮಾರ್ಗವನ್ನು ಹೇಳಲಾಗುತ್ತದೆ. ಮನಸ್ಸು ಒಂದೊಂದೇ ತತ್ತ್ವದಲ್ಲಿ ಲಯವಾಗುತ್ತಾ ಹೋಗಿ ಕೊನೆಗೆ ಆತ್ಮವು ಪರಮಾತ್ಮನಲ್ಲಿ ಲಯ ಹೊಂದಿದರೆ ಅದುವೇ ಮೋಕ್ಷ ಎಂದು. ಈ ಎಲ್ಲಾ ಕ್ರಮದಲ್ಲೂ 'ಮಹತ್' ಎಂಬುದು ಒಂದು ತತ್ತ್ವ ಅಥವ ಒಂದು ಪದ-ಸ್ಥಾನ. ಇದನ್ನು ಯಾರು ದಾಟುತ್ತಾರೋ ಅಥವಾ ಯಾರು ಮನಸ್ಸನ್ನು ಆ ತತ್ತ್ವದಲ್ಲಿ ಲಯಗೊಳಿಸುತ್ತಾರೋ ಅಂತಹವರಿಗೆ ಕೊಡುವ ಪದವೇ ಇದಾಗಿದೆ. ಈ ಹಿನ್ನೆಲೆಯಲ್ಲೆ ಋಷಿ, ಮಹರ್ಷಿ, ಬ್ರಹ್ಮರ್ಷಿ ಇತ್ಯಾದಿ ಪದವಿಗಳು ಬಂದಿವೆ ಎಂಬುದಾಗಿ ವಿವರಣೆಯನ್ನು ಕೊಟ್ಟಿದ್ದರು ಎಂಬುದಾಗಿ ನಾವು ನಮ್ಮ ಹಿರಿಯರಿಂದ ಕೇಳಿದ್ದೇವೆ. ಈ ವಿವರಣೆಯ ಆಧಾರದ ಮೇಲೆ 'ಮಹಾರಾಜ' ಎಂಬ ಪದವನ್ನು ಅರ್ಥಮಾಡಿಕೊಳ್ಳಬೇಕು. ಯಾವನು ಮಹತ್ ತತ್ತ್ವದಲ್ಲಿ ಮನಸ್ಸನ್ನು ಲೀನಮಾಡುವ ಯೋಗ್ಯತೆಯನ್ನು ಸಂಪಾದಿಸಿರುವನೋ ಅಂತಹವನನ್ನು 'ಮಹಾರಾಜ' ಎಂದು ಕರೆಯಬೇಕು. 


ಆದ್ದರಿಂದ ನಿಜಾರ್ಥದಲ್ಲಿ 'ಮಹಾರಾಜ' ಎಂದು ಕರೆಸಿಕೊಳ್ಳಲು ಶ್ರೀರಾಮನಂತಹವರಿಗಲ್ಲದೇ ಇನ್ನೊಬ್ಬರಿಗೆ ಸಾಧ್ಯವೇ? ಮೇಲಿನ ನಿಜಾರ್ಥ ಪರಿಚಯವಾಗಿದ್ದರೆ ಇನ್ನೊಬ್ಬರನ್ನು ಹೀಗೆ ಕರೆಯಲು  ಮುಜುಗರ ಉಂಟಾಗುತ್ತದೆ. ಶ್ರೀರಾಮನು ಕೇವಲ ಮಹಾರಾಜನಲ್ಲ. ರಾಜನೂ ಅಲ್ಲ. ರಾಜಾಧಿರಾಜ.


ಸೂಚನೆ : 22/5/2022 ರಂದು ಈ ಲೇಖನ ಹೊಸದಿಗಂತ  ಪತ್ರಿಕೆಯ  ಅಂಕಣದಲ್ಲಿ ಪ್ರಕಟವಾಗಿದೆ.


ಅಷ್ಟಾಕ್ಷರೀ​ - 11 ಬುದ್ಧಿನಾಶಾತ್ ಪ್ರಣಶ್ಯತಿ (Astakshara Darshana 11 Buddhinashat Pranashyati)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)


ತಾನು ಚೆನ್ನಾಗಬೇಕು - ಎಂಬ ಆಸೆ ಯಾರಿಗಿಲ್ಲ? ಏನೋ ದುಃಖಾತಿರೇಕವಾದಾಗ ಬದುಕೇ ಬೇಡವೆನಿಸಿ, ಸಾಯುವ ಆಸೆ ಹುಟ್ಟಿಕೊಳ್ಳಬಹುದು. ಅದರೆ ಆಸೆ ಬಹುಮಂದಿಗೆ ಬಹುಕಾಲ ನಿಲ್ಲುವುದಿಲ್ಲ, ನಿಲ್ಲುವುದಲ್ಲ. ತೀರಾ ಬುದ್ಧಿಗೆಟ್ಟವರು, ಎಷ್ಟೋ ಕೋಟಿಗೊಬ್ಬರು, ಆ ದೃಢಸಂಕಲ್ಪವನ್ನು ದೀರ್ಘಕಾಲ ಏಕರೂಪವಾಗಿ ಉಳಿಸಿಕೊಂಡಾರು. ಅಂತಹವರನ್ನು  ಬಿಟ್ಟರೆ, ಸಾಯಬೇಕೆಂದುಕೊಂಡವರಿಗೆ ಸರಿಯಾಗಿ ಸಾಂತ್ವನ ಹೇಳುವವವರು ಸಮಯಕ್ಕೆ ಸರಿಯಾಗಿ ಸಿಕ್ಕರೆ, ಸಾಯುವ ಸಂಕಲ್ಪವು ಸಡಿಲವಾಗುವುದು. ಆದರೆ ಬುದ್ಧಿ ಹಾಳಾದವರಿಗೆ ಮಾತ್ರ ಹಿತೈಷಿಗಳ ಮಾತೂ ಪಥ್ಯವಲ್ಲ: ರಾವಣನಿಗೆ ವಿಭೀಷಣನ ನುಡಿ ಹಿಡಿಸಲಿಲ್ಲ; ವಾಲಿಗೆ ತಾರೆಯ ಮಾತು ರುಚಿಸಲಿಲ್ಲ.

ಬುದ್ಧಿ ಕೆಡುವುದು ಎಂದರೇನು? ಅದು ಹಾಗೆ ಆಗುವುದು ಯಾವಾಗ, ಏತಕ್ಕೆ? - ಎಂಬ ಪ್ರಶ್ನೆಗಳು ಬರುವಂತಹವೇ. "ನನ್ನ ರೂಪವು ಕೆಡಲಿ" "ನನ್ನ ಆರೋಗ್ಯವು ಹೋಗಲಿ" ಎಂದು ಯಾರಿಗಾದರೂ ಬಯಕೆ ಬಂದೀತೇ? ಅವೆರಡಕ್ಕಿಂತಲೂ ಮನಸ್ಸಿನ ಆರೋಗ್ಯ ಬಹುಮುಖ್ಯವೇ ಸರಿ: ದೈಹಿಕರೋಗಗಳಿಗೆ ಪರಿಹಾರಗಳು ಸಿಕ್ಕಾವು; ಆದರೆ ಮನಸ್ಸಿಗೋ ಬುದ್ಧಿಗೋ ರೋಗ ಹತ್ತಿತೆಂದರೆ ಅದಕ್ಕೆ ಪರಿಹಾರವನ್ನು ಕೊಡುವುದು ಯಾರಿಗೂ ಸುಲಭವಲ್ಲ.

ಸ್ವಾಸ್ಥ್ಯವೆಂದರೆ ಆರೋಗ್ಯವೆಂಬುದು ಎಲ್ಲರಿಗೂ ತಿಳಿದಿರುವುದೇ. ಆದರೂ ಪದಗಳ ಮೂಲಕ್ಕೇ ಹೋಗಿ ನೋಡಿದರೆ ಭೇದವು ಗೋಚರವಾಗುತ್ತದೆ. ಯಾವನಿಗೆ ಏನೂ ರೋಗವಿಲ್ಲವೋ ಅಂತಹವನು "ಅರೋಗ". ಅರೋಗನ ಸ್ಥಿತಿಯೇ (ಅಥವಾ ಭಾವವೇ) ಅರೋಗತೆ. ಅರೋಗತೆಯೇ "ಆರೋಗ್ಯ": ಆರೋಗ್ಯವೆಂದರೆ ರೋಗಗಳಿಲ್ಲದಿರುವಿಕೆ.

ಸ್ವಾಸ್ಥ್ಯವು ಅಷ್ಟುಮಾತ್ರವಲ್ಲ. ಸ್ವಸ್ಥನ ಸ್ಥಿತಿಯು (ಅಥವಾ ಭಾವವು) ಸ್ವಾಸ್ಥ್ಯ. ಸ್ವಸ್ಥನಾರು? - ಎಂಬ ಪ್ರಶ್ನೆಗೆ ಸುಶ್ರುತನಿತ್ತ ಉತ್ತರವನ್ನು ಶ್ರೀರಂಗಮಹಾಗುರುಗಳು ಆಗಾಗ್ಗೆ ಜ್ಞಾಪಿಸುತ್ತಿದ್ದರು. ಶರೀರದಲ್ಲಿ (ವಾತ-ಪಿತ್ತ-ಕಫಗಳೆಂಬ ಮೂರು) 'ದೋಷ'ಗಳಿರುತ್ತವೆ; ಅವು 'ಸಮ'ನಾಗಿರಬೇಕು. ಹಾಗೆಯೇ ಶರೀರದಲ್ಲಿಯ ಅಗ್ನಿ-ಧಾತುಕ್ರಿಯೆ-ಮಲಕ್ರಿಯೆಗಳೂ ಸಮನಾಗಿರಬೇಕು. ಮತ್ತು ಇವೆಲ್ಲಕ್ಕೂ ಆಧಾರಭೂತವಾಗಿ, ಆತ್ಮ-ಇಂದ್ರಿಯ-ಮನಸ್ಸುಗಳು ಪ್ರಸನ್ನವಾಗಿರಬೇಕು - ಎಂದು ಲಕ್ಷಣವು ಹೇಳುತ್ತದೆ. (ಇಲ್ಲಿಯ ಪಾರಿಭಾಷಿಕವಿಷಯಕ್ಕೆ ಬಹುವಿಸ್ತೃತವಾದ ವಿವರಣೆಯೇ ಬೇಕಲ್ಲವೇ?) ಇಷ್ಟೆಲ್ಲ ಲೆಕ್ಕಾಚಾರಗಳಿರುವುದರಿಂದಲೇ, "ಆಸ್ಪತ್ರೆಗೆ ಸೇರಿಲ್ಲದವರೆಲ್ಲ ಸ್ವಸ್ಥರೆಂದೇನಲ್ಲ" ಎಂಬುದಾಗಿ ಶ್ರೀರಂಗಮಹಾಗುರುಗಳು ವಿನೋದವಾಗಿ ಪ್ರತಿಪಾದಿಸುತ್ತಿದ್ದರು.

ಇಲ್ಲಿ ನಮಗೆ ಕೊನೆಯ ಅಂಶ ಪ್ರಸ್ತುತ. ಆತ್ಮನ ಅಥವಾ ಮನಸ್ಸಿನ ಪ್ರಸನ್ನತೆಯೆಂದರೇನು? ಹಾಗೆಯೇ, ಬುದ್ಧಿಯು ನಾಶವಾಗುವುದೆಂತು? - ಎಂಬ ಎರಡೂ ಪ್ರಶ್ನೆಗಳಿಗೂ ಭಗವದ್ಗೀತೆಯಲ್ಲಿ ಉತ್ತರವನ್ನು ಕಾಣಬಹುದು. ಜೀವನವು ಅತ್ಯಂತಸಂಕೀರ್ಣವೆಂಬುದು ನಿರ್ವಿವಾದ. ಆದರೆ ಕಾರ್ಯ-ಕಾರಣ-ಭಾವವು ಮಾತ್ರ ಎಲ್ಲೆಡೆಯೂ ಇರುವುದೇ: ಪ್ರತಿಯೊಂದು ಕಾರ್ಯದ ಹಿಂದೆಯೂ ಕಾರಣವೊಂದು ಇದ್ದೇ ಇರುವುದು. ಪ್ರತಿಯೊಂದು ಕಾರಣದಿಂದಲೂ ಏನೋ ಪರಿಣಾಮವೊಂದು ಆಗಿಯೇ ತೀರುವುದು. ಒಂದೆಂದರೆ ಒಂದೇ ಅಲ್ಲ. ಒಂದು ಕಾರ್ಯದ ಹಿಂದೆ ಹಲವು ಕಾರಣಗಳಿದ್ದಾವು; ಒಂದು ಕಾರಣದಿಂದ ಹಲವು ಕಾರ್ಯಗಳು ಜನಿಸಿಯಾವು. ಆದರೆ ಕಾರ್ಯ-ಕಾರಣ-ಭಾವದ ಸರಪಣಿಯು ಮಾತ್ರ ಸರ್ವವ್ಯಾಪಿ. ಒಂದರ್ಥದಲ್ಲಿ ಇಡೀ ವಿಜ್ಞಾನದ ಸಾರಾಂಶವೇ ಇದು.

ಬುದ್ಧಿನಾಶದ ಹಿಂದೆಯಿರುವ  ಕಾರ್ಯಕಾರಣಭಾವ-ಶೃಂಖಲೆಯನ್ನು ಗೀತೆಯು ಸುಭಗವಾಗಿ ತೋರಿಗೊಟ್ಟಿದೆ: "[ಇಂದ್ರಿಯ]ವಿಷಯಗಳ ಧ್ಯಾನದಿಂದಾಗಿ ಅವುಗಳ ಬಗ್ಗೆ ಒಂದು ಸಂಗವು (ಎಂದರೆ ಆಸಕ್ತಿಯು) ಉಂಟಾಗುತ್ತದೆ. ಉತ್ಕಟವಾದ ಸಂಗದಿಂದ ಕಾಮವು (ಎಂದರೆ ಬಯಕೆಯು) ಜನಿಸುತ್ತದೆ (ಎಂದರೆ, ಬಯಸಿದ್ದು ಬೇಕೇಬೇಕೆನಿಸುತ್ತದೆ); [ಬಯಕೆಯೀಡೇರದಿದ್ದಾಗ] ಅದು ಕ್ರೋಧಕ್ಕೆ ಎಡೆಮಾಡಿಕೊಡುತ್ತದೆ; ಕ್ರೋಧದಿಂದ ಸಂಮೋಹವು (ಎಂದರೆ ಸರಿ-ತಪ್ಪುಗಳು ಗೊತ್ತಾಗದಿರುವುದು) ಉಂಟಾಗುತ್ತದೆ; ಸಂಮೋಹದಿಂದ ಸ್ಮೃತಿಯ ಭ್ರಮೆಯಾಗುತ್ತದೆ (ಎಂದರೆ ಶಾಸ್ತ್ರದಿಂದಲೋ ಹಿರಿಯರಿಂದಲೋ ಪಡೆದ ಸದುಪದೇಶವು ಜಾರುತ್ತದೆ: ಗೊತ್ತಿದ್ದ ಸರಿದಾರಿಯೂ ಮರೆಯುತ್ತದೆ); ಸ್ಮೃತಿಭ್ರಂಶದಿಂದ ಬುದ್ಧಿನಾಶವಾಗುತ್ತದೆ (ಎಂದರೆ, ಯಾವುದನ್ನು ಮಾಡಬೇಕು, ಯಾವುದನ್ನು ಮಾಡಬಾರದು ಎಂಬ ವಿವೇಚನೆಯು ಹಾಳಾಗುತ್ತದೆ); ಹಾಗೂ ಕೊನೆಯದಾಗಿ, ಬುದ್ಧಿನಾಶವಾದವನು ಪೂರ್ಣವಾಗಿ ಹಾಳಾಗುತ್ತಾನೆ. ಹೀಗೆ ಇಲ್ಲಿ ಎಂಟು ಘಟ್ಟಗಳನ್ನೂ, ಒಂದರಿಂದ ಮತ್ತೊಂದು ಮತ್ತೊಂದರಿಂದ ಮಗದೊಂದು ಜನಿಸುವುದನ್ನೂ, ಕಾರ್ಯ-ಕಾರಣಗಳ ಕೊಂಡಿಗಳಾಗಿ ಕಾಣಿಸಿದೆ.

ಇಷ್ಟು ಮಾತ್ರವಲ್ಲದೆ, ಮತ್ತು ಇದಕ್ಕೆ ಪ್ರತಿಯಾಗಿ, ಸಂಕ್ಷೇಪವಾಗಿ ಪ್ರಸನ್ನತೆಯನ್ನು ಪಡೆಯುವ ಬಗೆಯನ್ನೂ ಅಲ್ಲೇ ತಿಳಿಸಿದೆ. ಇಂದ್ರಿಯವಿಷಯಗಳನ್ನೇ ರಾಗದ್ವೇಷಗಳಿಲ್ಲದ, ಹಾಗೂ ತನ್ನ ವಶದಲ್ಲೇ ಇರುವ, ಇಂದ್ರಿಯ-ಮನಸ್ಸುಗಳಿಂದ ಅನುಭವಿಸುತ್ತಿರುವವನು ಪ್ರಸಾದವನ್ನು ಹೊಂದುವನು - ಎಂದೂ ತಿಳಿಸಿದೆ. (ಪ್ರಸಾದವೆಂದರೆ ಪ್ರಸನ್ನತೆಯೇ).

ಅಂತೂ ಇವಿಷ್ಟರ ಒಟ್ಟಾರೆ ನೋಟವನ್ನು ಹೀಗೆ ಹೇಳಬಹುದು. ಇಂದ್ರಿಯಗಳಿಂದ ನಾನಾಸುಖಗಳನ್ನು ಪಡೆಯುವುದೇ ದೋಷವೆಂದಲ್ಲ. ಸಂಗವೇ ತಪ್ಪಲ್ಲ. ಇಂದ್ರಿಯಗಳ ಮೇಲೆ ಹಿಡಿತವಿದ್ದಲ್ಲಿ ತೊಂದರೆಯಿಲ್ಲ. ಬದಲಾಗಿ, ಹಾಗಿಲ್ಲದಾದಾಗ, ಪರಿಣಾಮಪರಂಪರೆಯಿಂದ ಬುದ್ಧಿನಾಶವೂ, ಅದರಿಂದಾಗಿ ಅಧೋಗತಿಯೂ, ಸಿದ್ಧವೇ.

ಬುದ್ಧಿಯನ್ನು ಚೆನ್ನಾಗಿಟ್ಟುಕೊಳ್ಳೋಣ, ಸ್ವಸ್ಥರಾಗೋಣ!

ಸೂಚನೆ: 22/05/2022 ರಂದು ಈ ಲೇಖನ ವಿಜಯವಾಣಿಯ ಸುದಿನ ದಲ್ಲಿ ಪ್ರಕಟವಾಗಿದೆ.