Showing posts with label author_sumukhahebbar. Show all posts
Showing posts with label author_sumukhahebbar. Show all posts

Monday, December 19, 2022

ಮೂಲ ಗುರಿಯನ್ನು ಮರೆಯದಿರೋಣ (Mula Guriyannu Mareyadirona)

ಲೇಖಕರು : ಸುಮುಖ ಹೆಬ್ಬಾರ್ 
(ಪ್ರತಿಕ್ರಿಯಿಸಿರಿ lekhana@ayvm.in)


ಒಬ್ಬ ರಾಜನು ತನ್ನ ಪರಿವಾರದೊಡನೆ ಬೇಟೆಯಾಡಲು ದಟ್ಟವಾದ ಅರಣ್ಯವನ್ನು ಪ್ರವೇಶಿಸುತ್ತಾನೆ. ಅಲ್ಲಿ ಅವನಿಗೆ ಒಂದು ಆಕರ್ಷಕವಾದ ತರುಣ ಜಿಂಕೆಯು  ಎದುರಾಗುತ್ತದೆ. ಜಿಂಕೆಯನ್ನು ಬೇಟೆಯಾಡಲು ಉದ್ಯುಕ್ತನಾಗುತ್ತಾನೆ; ಬಾಣವನ್ನು ಪ್ರಯೋಗಿಸುತ್ತಾನೆ. ಜಿಂಕೆಯು  ತಪ್ಪಿಸಿಕೊಂಡು ಮುಂದೆ ಸಾಗುತ್ತದೆ. ಮತ್ತೆ ರಾಜನ ಎದುರು ಹುಲ್ಲನ್ನು ಬಾಯಲ್ಲಿ ಇಟ್ಟುಕೊಂಡು ಜಿಗಿಯುತ್ತಾ ಓಡಾಡುತ್ತದೆ. ಇದನ್ನು ಕಂಡ ರಾಜನು ಜಿಂಕೆಯು ತನ್ನ ಸಾಮರ್ಥ್ಯಕ್ಕೆ ಸವಾಲು ಎಂಬುದಾಗಿ ಭಾವಿಸಿ ಮತ್ತೆ ಬಾಣವನ್ನು ಪ್ರಯೋಗಿಸುತ್ತಾನೆ. ಈ ಬಾರಿ ಜಿಂಕೆಗೆ ಬಾಣವು ತಗುಲಿದರೂ, ಒಂದು ಮರಕ್ಕೆ ಉಜ್ಜುತ್ತಾ ದೇಹದಿಂದ ಉದುರಿಸಿಕೊಳ್ಳುತ್ತದೆ. ಜಿಂಕೆಯನ್ನು ಬೇಟೆಯಾಡಿಯೇ ತೀರಬೇಕೆಂಬ ಛಲದಿಂದ, ಜಿಗಿದೋಡುತ್ತಿರುವ ಜಿಂಕೆಯನ್ನು ಹಿಂಬಾಲಿಸುತ್ತಾ ರಾಜನು ತನ್ನ ಪರಿವಾರದಿಂದ ದೂರವಾಗುತ್ತಾನೆ. ಜಿಂಕೆಯನ್ನು ಬೇಟೆಯಾಡಬೇಕೆಂಬ ಆಸೆಯಿಂದ ರಾಜನು ದಟ್ಟ ಅರಣ್ಯದ ಮಧ್ಯದಲ್ಲಿ ಸಿಲುಕಿಕೊಳ್ಳುತ್ತಾನೆ. ಅತ್ತ ಜಿಂಕೆಯೂ ತಪ್ಪಿಸಿಕೊಂಡು ಹೋಗುತ್ತದೆ; ಇತ್ತ ರಾಜನಿಗೂ ಹೊರಗೆ ಬರುವ ದಾರಿ ಕಾಣದೆ ಒದ್ದಾಡುವ ಸ್ಥಿತಿ ಬಂದೊದಗುತ್ತದೆ.

ಭಾರತದ ಇತಿಹಾಸವನ್ನು ಗಮನಿಸಿದಾಗ ಕೆಲವು  ರಾಜರ ಕಥೆಗಳಲ್ಲಿ ಇದೇ ರೀತಿಯ ಸಂದರ್ಭಗಳು ಕಾಣಸಿಗುತ್ತವೆ. ಸನಾತನಾರ್ಯ ಮಹರ್ಷಿಗಳು ಭಗವಂತನ ಸಾಕ್ಷಾತ್ಕಾರವೇ ಮಾನವ ಜನ್ಮದ ಅಂತಿಮ ಗುರಿ ಎಂಬುದಾಗಿ ಬಗೆ ಬಗೆಯಾಗಿ ಸಾರುತ್ತಾರೆ. ಆದರೆ ಈಗಿನ ಸಮಾಜವು ಕೇವಲ ಅರ್ಥ-ಕಾಮಗಳ ಹಿಂದೆ ಓಡುವುದನ್ನು ಕಾಣುತ್ತೇವೆ.  ಆಕರ್ಷಕವಾದ ಜಿಂಕೆ ಎಂಬುದು, ನಮ್ಮ ಎದುರು ಓಡಾಡಿ, ಮನಸ್ಸನ್ನು ತನ್ನ ಕಡೆ ಸೆಳೆದುಕೊಳ್ಳುವ ಬಯಕೆಗಳು. ಅದರ ಹಿಂದೆ ಬಿದ್ದು, ಅದನ್ನು ಪಡೆಯಬೇಕೆಂಬ ಉತ್ಕಟತೆಯು ಏರ್ಪಟ್ಟಾಗ, ನಮ್ಮ ಜೀವನದ ಪರಮ ಧ್ಯೇಯವನ್ನು ಮರೆತು, ತನ್ನವರಿಂದ ದೂರವಾಗಿ, ಏಕಾಂಗಿಯಾಗಿ, ವಿವೇಚನೆಯಿಲ್ಲದೆ, ಸೆಳೆತದ ಹಿಂದೆ ಹೋಗುವಂತಾಗುತ್ತದೆ. ಹಠಕ್ಕೆ ಬಿದ್ದು ಅದನ್ನು ಪಡೆಯಬೇಕೆಂಬ ಕಾಮದಿಂದ ಆರಂಭವಾಗುವ ಈ ಪ್ರಕ್ರಿಯೆಯು, ಮುಂದುವರಿದು ಕೇವಲ ಇಂದ್ರಿಯಪ್ರಪಂಚದಲ್ಲಿ  ತಂದು ನಿಲ್ಲಿಸಿಬಿಡುತ್ತದೆ.  ಅಷ್ಟೇ ಅಲ್ಲದೆ "ಇದೋ ಸಿಕ್ಕಿತು!" ಎಂಬ ಭ್ರಮೆಯನ್ನು ನೀಡುತ್ತಾ, ಇಂತಹ ವಸ್ತು/ವಿಷಯ ದೊರಕದೆ ಹೋದರೆ!  ಎಂಬ ಆತಂಕವನ್ನು ಉಂಟುಮಾಡುತ್ತದೆ. ಒಟ್ಟಿನಲ್ಲಿ, ಅತೀಂದ್ರಿಯವಾದ ಸುಖವನ್ನು ಅನುಭವಿಸುವ ಯೋಗ್ಯತೆ ಇರುವ ಹಾಗೂ ಅದನ್ನೇ ಗುರಿಯಾಗಿಸಿಕೊಳ್ಳಬೇಕಾದ ನಮ್ಮನ್ನು, ಲೌಕಿಕ ಕ್ಷೇತ್ರದ ಸುಖಗಳಿಗಾಗಿಯೇ ಸೀಮಿತಗೊಳಿಸುತ್ತದೆ.

ಮಹರ್ಷಿಗಳು ಪುರುಷಾರ್ಥಕ್ಕೆ ವಿರೋಧವಲ್ಲದ ಕಾಮನೆಗಳನ್ನು ತಿರಸ್ಕರಿಸಿಲ್ಲ. ಆದರೆ ಸಂಸಾರದ ಸಾಗರದಲ್ಲಿ ನಮ್ಮನ್ನು ಸುತ್ತಿಸುವ ಆಸೆಗಳ ವಿಷಯದಲ್ಲಿ ಎಚ್ಚರಿಸಿದ್ದಾರೆ.  "ಇಂದ್ರಿಯಗಳಿಗೆ ವಿಷಯವನ್ನು ಕೊಡುವಾಗಲೂ ದೇವನವರೆಗೂ ತಟ್ಟುವಂತೆಯೇ ಕೊಟ್ಟರೆ, ಜೀವನವು ಅಂತರ್ಮುಖವಾಗಿ ಹರಿದು ಹೋದರೆ ಸೌಖ್ಯವಿರುತ್ತೆ" ಎಂಬುದು ಶ್ರೀರಂಗ ಮಹಾಗುರುಗಳ ಅಭಿಪ್ರಾಯವಾಗಿತ್ತು.  ಮಹರ್ಷಿಗಳು ಕೆಲವು ವಿಷಯಗಳನ್ನು ಸಂಸಾರದಲ್ಲಿ ಜಾರುವ ಭಾಗಗಳು ಎಂದು ಸೂಚಿಸಿ, ಅವುಗಳನ್ನು ದಾಟುವ ಬಗೆಯನ್ನೂ ಹೇಳಿದ್ದಾರೆ.  ಇಂತಹ ಮಹರ್ಷಿಗಳು ಹಾಕಿಕೊಟ್ಟ ಮಾರ್ಗದಲ್ಲಿ ನಡೆದು, ಮೂಲ ಉದ್ದೇಶವನ್ನು ಮರೆಸುವ ಕಾಮನೆಗಳಿಗೆ ವಶರಾಗದೆ, ಭಗವತ್ಕಾಮ ಹೊಂದಿ ಬದುಕುವವರಾಗೋಣ.  

ಸೂಚನೆ: 15/12/2022 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ದಲ್ಲಿ ಪ್ರಕಟವಾಗಿದೆ.

Monday, April 11, 2022

ಅಂತರಂಗ ಪ್ರಪಂಚದ ಸೊಬಗು (Antaranga Prapancada Sobagu)

ಲೇಖಕರು : ಸುಮುಖ ಹೆಬ್ಬಾರ್ 
(ಪ್ರತಿಕ್ರಿಯಿಸಿರಿ lekhana@ayvm.in)


ಪ್ರವೀಣನೆಂಬ ಯುವಕನು, ಒಂದು ನಗರವನ್ನು ನೋಡಿಕೊಂಡು ಬಂದು ತನ್ನವರ ಜೊತೆ, ಅಲ್ಲಿನ ಉದ್ಯಾನವನಗಳು, ಕಟ್ಟಡಗಳು, ನದಿ-ಸರೋವರಗಳು ಇತ್ಯಾದಿಗಳ ವಿಷಯವಾಗಿ ವಿವರಿಸುತ್ತಿದ್ದನು.  ಗುಂಪಿನಲ್ಲಿ ಕೇಳುತ್ತಿದ್ದ ತರುಣನಿಗೆ, ಪ್ರವೀಣನ ವಿವರಣೆಯನ್ನು ಕೇಳಿ, ಇಂತಹ ನಗರವು ಇರಲು ಸಾಧ್ಯವೇ  ಇಲ್ಲ ಎನ್ನಿಸಿತು. ಇದನ್ನೆಲ್ಲಾ ಪ್ರವೀಣನು ಕಲ್ಪಿಸಿಕೊಂಡು ಹೇಳುತ್ತಿದ್ದಾನೆ ಎಂದು ಆರೋಪಿಸಿದನು. ಇದನ್ನು ಸಾವಧಾನವಾಗಿ ಆಲಿಸಿದ ಪ್ರವೀಣನು, "ನೀನು ನನ್ನ ಜೊತೆಯಲ್ಲಿ ಬರುವುದಾದರೆ ಅದನ್ನೆಲ್ಲ ತೋರಿಸುವೆ. ಆದರೆ ಹೋಗುವ ದಾರಿ ತುಂಬಾ ದುರ್ಗಮವಾಗಿದೆ" ಎಂದನು. ಉತ್ಸಾಹಿಯಾದ ತರುಣನು ಇದನ್ನು ಸವಾಲಾಗಿ ಸ್ವೀಕರಿಸಿ, ಬರುವೆನೆಂದ. ಇಬ್ಬರೂ ಹೊರಟರು. ಅದು ಕಲ್ಲು-ಮುಳ್ಳು ಬೆಟ್ಟ ಕಾಡುಗಳಿಂದ ಕೂಡಿದ ಕಷ್ಟಕರವಾದ ಹಾದಿ. ಪ್ರವೀಣನಿಗೆ ಹಾದಿಯ ಪರಿಚಯವಿದ್ದುದರಿಂದ ಸುಲಭವಾಗಿ ಮುಂದೆ ಸಾಗುತ್ತಿದ್ದನು. ಆದರೆ ತರುಣನಿಗೆ ಪ್ರಯಾಣ ಹೊಸತಾದ್ದರಿಂದ, ಹಲವಾರು ಕಡೆಗಳಲ್ಲಿ ಆಯುತಪ್ಪಿ ಬಿದ್ದನು. ಪ್ರವೀಣನ ಸಹಾಯದಿಂದ ಎದ್ದು, ಬೀಳದಂತೆ ಮುಂದೆ ಸಾಗಲು ಮಾರ್ಗದರ್ಶನವನ್ನು ಪಡೆದನು. ಆಗಾಗ್ಗೆ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದನು. ಪ್ರವೀಣನ ಮಾತಿನಿಂದ ಸ್ಫೂರ್ತಿಯನ್ನು ಪಡೆಯುತ್ತಾ, ಮುಂದೆ ಸಾಗುತ್ತಾ ಬಂದನು. ಹೀಗೆಯೇ ಮುಂದುವರೆಯುತ್ತಾ, ಒಂದು ದಿನ ಆ ಅದ್ಭುತ ನಗರವನ್ನು ತಲುಪಿ, ಅದರ ಸೌಂದರ್ಯವನ್ನು ಆಸ್ವಾದಿಸಿದನು. ಪ್ರವೀಣನು ಹೇಳಿದಂತೆಯೇ ನಗರವು ಇರುವುದನ್ನು ಮನಗಂಡು, ಸತ್ಯವೆಂದು ಒಪ್ಪಿಕೊಂಡನು.  

ಭಾರತೀಯ ಇತಿಹಾಸ ಪುರಾಣಗಳಲ್ಲಿ ಅನೇಕ ಜಾಗಗಳ ಉಲ್ಲೇಖವಿದೆ. ಕೈಲಾಸವೆಂಬ ಜಾಗದಲ್ಲಿ ಶಿವನು ತನ್ನ ಗಣಗಳೊಡನೆ ವಾಸವಿರುವನಂತೆ. ಸಪ್ತದ್ವಾರದಾಚೆ ಹಾಲಿನ ಸಮುದ್ರದ ಮಧ್ಯದಲ್ಲಿ, ಒಂದು ಮಹಾಸರ್ಪದ ಮೇಲೆ ವಿಷ್ಣುವು ಪವಡಿಸಿದ್ದಾನಂತೆ. ಅದು ವೈಕುಂಠವಂತೆ. ಸ್ವರ್ಗವೆಂಬ ಇಂದ್ರನ ಆಸ್ಥಾನ. ಅಲ್ಲಿ ಇಂದ್ರ, ಅಗ್ನಿ, ವರುಣ ಮುಂತಾದ ದೇವತೆಗಳ ಉಪಸ್ಥಿತಿ ಇರುತ್ತದೆಯಂತೆ. ರಂಭೆ, ಊರ್ವಶಿ, ಮೇನಕೆ  ತಿಲೋತ್ತಮೆ ಮುಂತಾದ ಅಪ್ಸರೆಯರು ನರ್ತಿಸುವರಂತೆ. ಪಾಪಿಗಳನ್ನು ಶಿಕ್ಷಿಸುವ ಜಾಗ ಯಮಲೋಕವಂತೆ.  ಹೀಗೆ ಅನೇಕ ಜಾಗಗಳಷ್ಟೇ ಅಲ್ಲದೆ, ಅನೇಕ ದೇವತೆಗಳ ಆಕಾರಗಳು, ಅವರ ವೇಷಭೂಷಣಗಳು, ವಾಹನಗಳು ಮತ್ತು ಆಯುಧಗಳು ಮುಂತಾದವುಗಳ ವಿವರಣೆ ಸಿಗುತ್ತದೆ. ಇಂತಹವುಗಳನ್ನೆಲ್ಲಾ ಗಮನಿಸಿದಾಗ ಹೀಗೆ ಇರಲು ಸಾಧ್ಯವಿದೆಯೇ? ಅಥವಾ ಕಲ್ಪನೆಯೇ? ಎಂಬ ಪ್ರಶ್ನೆ ಬರುವುದು ಸಹಜವಷ್ಟೇ.       

ಮಹರ್ಷಿಗಳು ತಮ್ಮ ನೋಟವನ್ನು ಭೌತಿಕವಾದ ಪ್ರಪಂಚಕ್ಕಷ್ಟೇ ಸೀಮಿತಗೊಳಿಸದೆ, ಇಂದ್ರಿಯಗಳನ್ನು ನಿಗ್ರಹಗೊಳಿಸಿ ಅತಿದುರ್ಗಮವಾದ ಅಂತರ್ಯಾತ್ರೆಯನ್ನು ಮಾಡುತ್ತಾ, ಆಧಿದೈವಿಕ ಮತ್ತು ಆಧ್ಯಾತ್ಮಿಕ ಪ್ರಪಂಚದಲ್ಲಿ ವಿಹರಿಸುವ ಸಾಮರ್ಥ್ಯವುಳ್ಳವರಾಗಿದ್ದರು. ಅಂತರಂಗದಲ್ಲಿ ಕಂಡ ಅಮರವಾದ ಆನಂದಮಯವಾದ ಸತ್ಯವನ್ನು ಅಂತೆಯೇ ಇತಿಹಾಸ-ಪುರಾಣಗಳಲ್ಲಿ, ಕಾವ್ಯಗಳಲ್ಲಿ, ಸ್ತೋತ್ರಗಳಲ್ಲಿ ಮತ್ತು ದೇವಾಲಯಗಳ ವಿಗ್ರಹಗಳಲ್ಲಿ ಚಿತ್ರಿಸಿದ್ದಾರೆ. ಹಾಗೆಯೇ ಈ ಸತ್ಯವನ್ನು ಅರಿಯುವ ಮಾರ್ಗವನ್ನು ಹಾಕಿಕೊಟ್ಟಿದ್ದಾರೆ.  ಪ್ರವೀಣನು, ತರುಣನನ್ನು ದಾರಿಯಲ್ಲಿ ಮುನ್ನಡೆಸಿ ಕರೆದೊಯ್ಯುವಂತೆ, ಗುರು ಸ್ಥಾನದಲ್ಲಿರುವ ನಮ್ಮ ಋಷಿಗಳು ಅಂತಮಾರ್ಗದಲ್ಲಿ ಅಡೆತಡೆಗಳಿದ್ದರೂ ಶಿಷ್ಯರನ್ನು  ಮುನ್ನಡೆಸಿ, ಸತ್ಯದರ್ಶನದಿಂದ ಅವರನ್ನು  ಹೂಗುಟ್ಟುವಂತೆ ಮಾಡಿದ್ದಾರೆ. ಶ್ರೀರಂಗ ಮಹಾಗುರುಗಳು, "ಅಂತರಂಗದ ಸತ್ಯವನ್ನು ಕಂಡು, ನಮಗೆ ತಿಳಿಸುವವರನ್ನು ಆಪ್ತರು(ಪಡೆದವರು)" ಎಂಬುದಾಗಿ ಕರೆಯುತ್ತಿದ್ದರು. ಇಂತಹವರ ಸತ್ಯಸಿದ್ಧವಾದ ಮಾತುಗಳೇ  ಆಪ್ತವಾಕ್ಯಗಳು. ಅವನ್ನು ನಮ್ಮ ಜೀವನದಲ್ಲಿ  ಪ್ರಾಮಾಣಿಕವಾಗಿ  ಅನುಸರಿಸುತ್ತಾ ನಡೆಯುವಂತಾಗಿ  ನಮಗೂ ಅಂತಹ ಸತ್ಯದರ್ಶನವಾಗಲಿ ಎಂದು ಆಶಿಸೋಣ.

ಸೂಚನೆ: 11/04/2022 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ದಲ್ಲಿ ಪ್ರಕಟವಾಗಿದೆ.




Monday, November 15, 2021

ಜೀವನದಲ್ಲಿ ಸಮತೋಲನ ಇರಲಿ (Jivanadalli Samatolana Irali)

ಲೇಖಕರು : ಸುಮುಖ ಹೆಬ್ಬಾರ್
(ಪ್ರತಿಕ್ರಿಯಿಸಿರಿ lekhana@ayvm.in)


ಒಮ್ಮೆ ಒಬ್ಬ ಪುಟ್ಟ ಬಾಲಕ ತಂದೆಯ ಜೊತೆ ಸರ್ಕಸ್ ನೋಡಲು ಹೋಗಿದ್ದ. ಅಲ್ಲಿ ಸರ್ಕಸ್ ಪಟುಗಳು ಸೈಕಲ್ಲಿನ ಮೇಲೆ, ನಿಂತುಕೊಂಡು, ನರ್ತಿಸುತ್ತಾ ಸಾಗುವುದು ಮುಂತಾದ ಭಂಗಿಗಳು ಇವನನ್ನು ಆಶ್ಚರ್ಯಚಕಿತಗೊಳಿಸಿತು. ಅನುಕರಿಸಬೇಕೆಂಬ ಮನಸ್ಸಾಯಿತು. ಮನೆಗೆ ಬಂದೊಡನೆ, ಅಪ್ಪನೊಡನೆ ಹಠ ಮಾಡಿ ಒಂದು ಸೈಕಲ್ ಖರೀದಿಸಿದ. ಸೈಕಲ್ ಓಡಿಸಲು ಬೇಕಾದ ಸಮತೋಲನ ಅಥವಾ ಸಂಯಮ ಇವನಲ್ಲಿರಲಿಲ್ಲ. ಆದರೆ ಹುಮ್ಮಸ್ಸಿನಿಂದ ಮೊದಲಿಗೇ, ಸರ್ಕಸ್ಸಿನ ಭಂಗಿಗಳನ್ನು ಪ್ರಯತ್ನಿಸಿ ಬಿದ್ದ. ಕೈ-ಕಾಲುಗಳಿಗೆ ಪೆಟ್ಟಾಯಿತು. ಅಳುತ್ತಿದ್ದ ಮಗುವನ್ನು ತಂದೆಯು ಸಂತೈಸಿ " ಮೊದಲು ನೀನು ಸೈಕಲ್ಲಿನ ಸಮತೋಲನವನ್ನು ಅಭ್ಯಾಸದಿಂದ ಸಿದ್ಧಿಸಿಕೋ . ನಂತರ ಸರ್ಕಸ್ಸಿನ ಭಂಗಿಗಳನ್ನು ಪ್ರಯತ್ನಿಸು" ಎಂಬುದಾಗಿ ಸಲಹೆ ನೀಡಿದರು. ಮಗನು ತಂದೆಯ ಮಾತಿನಂತೆ ಪ್ರಯತ್ನಿಸಲಾಗಿ, ಕಾಲಕ್ರಮೇಣ  ಸಮತೋಲನ ಸಿದ್ಧಿಸಿತು. ಮುಂದೆ ಸರ್ಕಸ್ಸಿನ ಭಂಗಿಗಳಗಳಷ್ಟೇ  ಅಲ್ಲದೇ,  ಸೈಕಲ್ಲಿನಲ್ಲಿ ಇನ್ನೂ ಹಲವಾರು ಸಾಹಸಮಯ ಭಂಗಿಗಳನ್ನು ಮಾಡುವ  ಸಾಮರ್ಥ್ಯ ಬಂದಿತು.

ಅರ್ಥ-ಕಾಮಗಳ ಹಿಂದೆ ಓಡುತ್ತಿರುವ ನಮ್ಮ ಜೀವನ, ಸಮತೋಲನವಿಲ್ಲದೆ ಸಾಹಸವನ್ನು ಮಾಡಲು ಹೊರಟ ಹುಡುಗನಂತೆಯೇ ಆಗಿದೆ. ಅದು ನಮ್ಮನ್ನು ಮೋಕ್ಷಕ್ಕೆ ಕೊಂಡೊಯ್ಯದೆ, ಪತಿತರನ್ನಾಗಿ ಮಾಡುತ್ತದೆ. ಹಾಗಾಗಿ ಅನುಕರಣೆಯು ಪ್ರತಿಯೊಬ್ಬರ ಜೀವನದಲ್ಲಿಯೂ ಹಾಸುಹೊಕ್ಕಾಗಿರುವ ವಿಷಯವಾಗಿರುವುದರಿಂದ, ಪತಿತರಾಗದಂತೆ ಬದುಕಲು ಧರ್ಮಿಷ್ಠರ ಆದರ್ಶಗಳನ್ನು ಅನುಸರಿಸುವುದು ಅನುಕೂಲಕರ ಮತ್ತು ಕ್ಷೇಮ. ಭಾರತದ ಇತಿಹಾಸದಲ್ಲಿ ಆದರ್ಶವಾದ ಧರ್ಮಿಷ್ಠ ನಾಯಕರು ಅಸಂಖ್ಯಾತ. ಅಲ್ಲದೇ, ಮಹರ್ಷಿ ಪ್ರಣೀತವಾದ ರಾಮಾಯಣ, ಮಹಾಭಾರತ, ಅಭಿಜ್ಞಾನ-ಶಾಕುಂತಲ ಮುಂತಾದ ಮಹಾಕಾವ್ಯಗಳಲ್ಲಿ, ಅನುಕರಣೀಯ ನಾಯಕರನ್ನು ಮಹರ್ಷಿಗಳು ಚಿತ್ರಿಸಿಕೊಟ್ಟಿದ್ದಾರೆ.

ಉದಾಹರಣೆಗೆ, ಶ್ರೀರಾಮನ ಆದರ್ಶ."ರಾಮೋ ವಿಗ್ರಹವಾನ್ ಧರ್ಮ:" - ಧರ್ಮದ ಮೂರ್ತಿ ಶ್ರೀರಾಮ. ಸಮತೋಲನದ ಜೀವನವು ಧರ್ಮಾತ್ಮರ ಲಕ್ಷಣ. ಶ್ರೀರಾಮನು ಸುಖ-ದುಃಖಾದಿ ದ್ವಂದ್ವಗಳಲನ್ನು ಸಮವಾಗಿ ಸ್ವೀಕರಿಸುತ್ತಿದ್ದ. ಭೋಗಕ್ಕೆ ಎಂದಿಗೂ ಅಂಟಿಕೊಂಡಿರಲಿಲ್ಲ.ಪಟ್ಟಾಭಿಷೇಕಕ್ಕೆಂದು ಬಂದಾಗಲೂ, ಮುಂದೆ ವನವಾಸವನ್ನು ಮಾಡಬೇಕೆಂದು ಹೇಳಿದಾಗಲೂ ಅವನ ಮುಖದಲ್ಲಿ ಬದಲಾವಣೆಗಳಿರಲಿಲ್ಲ. ಅಂತಹ ಧರ್ಮಿಷ್ಠ, ಮುಂದೆ ಅರ್ಥ-ಕಾಮಗಳನ್ನು ಹೇಗೆ ಅನುಭವಿಸುತ್ತಾನೆ? ಸಂಕಷ್ಟದಲ್ಲಿ ಸಿಲುಕಿದಾಗಲೂ, ಧರ್ಮವನ್ನು ಹೇಗೆ ಬಿಡದೆ ಪಾಲಿಸುತ್ತಾನೆ ಎನ್ನುವುದು, ಇತರರಿಗೆ ಆದರ್ಶ. ಬಾಲಕನಿಗೆ ತಂದೆಯು ಹೇಳಿದಂತೆ, ಇಂತಹ ನಾಯಕರ ಆದರ್ಶವು ನಮಗೆ ತಂದೆಯ ಸ್ಥಾನದಲ್ಲಿ ನಿಂತು, "ಧರ್ಮವೆಂಬ ಸಮತೋಲನವನ್ನು ಬೆಳೆಸಿಕೋ. ಧರ್ಮವು ನಿನ್ನಲ್ಲಿ ಚೆನ್ನಾಗಿ ಊರಿದ ಮೇಲೆ, ನಂತರ ಅರ್ಥ-ಕಾಮಗಳಲ್ಲಿ ಆಟವಾಡು. ಆಗ ಅದು ಮೋಕ್ಷದಲ್ಲೇ ಪರ್ಯಾವಸಾನವಾಗುತ್ತದೆ" ಎಂಬ ದಿಗ್ದರ್ಶನ ಮಾಡುತ್ತದೆ. "ಹೃದಯಗುಹೆಯಲ್ಲಿರುವ ಧರ್ಮವನ್ನರಿತು ತಿಳಿಸಬಲ್ಲ ಮಹಾಜನರು ಯಾವ ಮಾರ್ಗವನ್ನು ಅನುಸರಿಸುತ್ತಾರೋ ಅದು ಸರಿಯಾದ ಹಾದಿ" ಎಂದು ಶ್ರೀರಂಗ ಮಹಾಗುರುಗಳು ಹೇಳುತ್ತಿದ್ದರು. ಹಾಗಾಗಿ ಕಾವ್ಯಗಳಲ್ಲಿನ ನಾಯಕನ ಮತ್ತು ಆದರ್ಶ ಪಾತ್ರಗಳ ಕಥಾನುಸಂಧಾನ ಹಾಗೂ ಅನುಕರಣೆಯು ಲೌಕಿಕ ಸಮಸ್ಯೆಗಳಿಗೂ ಮಾರ್ಗದರ್ಶಕವಾಗಿ, ಮೋಕ್ಷಪ್ರದವೂ ಆಗಿರುತ್ತದೆ.ಇಂತಹ ಆದರ್ಶ ನಾಯಕರಿಗೆ ಒಡಲಾದ ಭಾರತಭೂಮಿಗೂ ಹಾಗೂ ಕಾವ್ಯಗಳನ್ನು ರಚಿಸಿಕೊಟ್ಟು ನಮ್ಮನ್ನು ಉದ್ಧರಿಸಲು ಪ್ರಯತ್ನಿಸಿರುವ ಮಹರ್ಷಿಗಳ ಪರಂಪರೆಗೆ ನಮೋ ನಮಃ
ಸೂಚನೆ: 15/11/2020 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ದಲ್ಲಿ ಪ್ರಕಟವಾಗಿದೆ.

Thursday, April 1, 2021

ನಮ್ಮೊಳಗಿನ ನಾದ (Nammolagina Nada)

ಲೇಖಕರು : ಸುಮುಖ ಹೆಬ್ಬಾರ್
(ಪ್ರತಿಕ್ರಿಯಿಸಿರಿ lekhana@ayvm.in)


ಹಿಂದೆ ಒಂದು ಕಾಲದಲ್ಲಿ ಮನೆಯವರೆಲ್ಲರೂ ಒಟ್ಟಾಗಿ ಕುಳಿತು ಕೇಳುತ್ತಿದ್ದ ರೇಡಿಯೋವನ್ನು, ಒಬ್ಬ ಹುಡುಗನು ಮನೆಯ ಅಟ್ಟದ ಒಂದು ಮೂಲೆಯಿಂದ  ಎತ್ತಿಕೊಂಡು ಬಂದನು. ಅದು ತುಂಬಾ ಧೂಳಾಗಿದ್ದುದರಿಂದ, ಅದನ್ನು ಬಟ್ಟೆಯಿಂದ ಒರೆಸಿ ಶುಚಿಗೊಳಿಸಿದನು. ಥಂಡಿ ಹಿಡಿದಿದ್ದ  ರೇಡಿಯೋವನ್ನು ಬಿಸಿಲಿಗೆ ಸ್ವಲ್ಪ ಹೊತ್ತು ಇಟ್ಟನು. ರೇಡಿಯೋವಿನ ಬ್ಯಾಟೆರಿಯನ್ನು  ಬದಲಿಸಿದನು. ಸ್ವಲ್ಪ ಸಮಯದ ನಂತರ ಬಾನುಲಿಪ್ರಸಾರ ಆರಂಭವಾಯಿತು. ಅದರ ಮುಂದೆ ಇದ್ದ ಚಕ್ರಾಕೃತಿಯನ್ನು(knob) ತಿರುಗಿಸಿದಂತೆ, ಪ್ರದರ್ಶಕದ ಮೇಲಿದ್ದ ಒಂದು ಮುಳ್ಳು ಚಲಿಸಲಾರಂಭಿಸಿತು. ಪ್ರದರ್ಶಕದ ಮೇಲಿದ್ದ ತರಂಗಾಂತರದ ಸಂಖ್ಯೆಗಳನ್ನು ಗುರುತಿಸಿಕೊಂಡನು. ಒಂದು ತುದಿಯಿಂದ ಮುಳ್ಳನ್ನು ಬಲಕ್ಕೆ ಸರಿಸುತ್ತಾ ಬಂದಾಗ, ಯಾವುದೋ ಒಂದು ತರಂಗಾಂತರಕ್ಕೆ ಮುಳ್ಳು ಬಂದು ನಿಂತಾಗ, ಆ ತರಂಗಾಂತರದಲ್ಲಿ ಪ್ರಸಾರವಾಗುತ್ತಿದ್ದ ಕಾರ್ಯಕ್ರಮ ಕೇಳಿಸತೊಡಗಿತು. ಸ್ವಲ್ಪ ಹೊತ್ತು ಆಲಿಸಿ, ನಂತರ ಮುಂದೆ ಸಾಗಿದಾಗ ಇನ್ನೊಂದು ಕಾರ್ಯಕ್ರಮ ಕೇಳಿಸತೊಡಗಿತು. ಹಾಗೆಯೇ ಹಲವಾರು ಜಾಗಗಳಲ್ಲಿ ಕಾರ್ಯಕ್ರಮಗಳನ್ನು ಕೇಳಿ ಸಂತೋಷದಿಂದ ಆಸ್ವಾದಿಸಿದನು.

ಹಿಂದೆ ಒಂದು ಕಾಲದಲ್ಲಿ, ಮಹರ್ಷಿಗಳ ಪರಂಪರೆಯಲ್ಲಿ ಇಂದ್ರಿಯಗಳನ್ನು ನಿಗ್ರಹಗೊಳಿಸಿ ಅಂತರ್ಮಾರ್ಗದಲ್ಲಿ ಸಾಗುವ ಪ್ರವೃತ್ತಿಯಿತ್ತು. ಹಾಗೆ ಸಾಗಿದಾಗ, ರೇಡಿಯೋವಿನ ಮುಳ್ಳು ಒಂದೊಂದು ಜಾಗ ತಲುಪಿದಾಗ, ಒಂದೊಂದು ಕಾರ್ಯಕ್ರಮ ನಮಗೆ ಕೇಳಿಸಿದಂತೆ, ಅಂತರಂಗದ ಒಂದೊಂದು ಸ್ಥಿತಿಗಳಲ್ಲೂ ನಾದಗಳನ್ನು ಮಹರ್ಷಿಗಳು ಕೇಳಿದರು. ಇಂತಹ ಅಂತ:ಶ್ರವಣದ ನಾದವನ್ನು ನಮ್ಮವರೆಗೂ ತಂದು, ನಮ್ಮನ್ನು ಆ ಸ್ಥಿತಿಗೆ ಒಯ್ಯಲು, ನಾನಾ ವಾದ್ಯಗಳನ್ನೊಳಗೊಂಡ ಭಾರತೀಯ ಸಂಗೀತವನ್ನು ತಂದರು. ಇನ್ನೂ ಕೆಲವು  ಸ್ಥಿತಿಗಳಲ್ಲಿ ಹಾಗೆಯೇ ಹಲವಾರು ವಾಕ್ಯಗಳು ತಾನಾಗಿಯೇ  ಶ್ರುತವಾದವು. ಅವುಗಳನ್ನು ಶ್ರುತಿಯೆಂದು (ವೇದಗಳೆಂದು) ಕರೆದರು. ಹಾಗೆಯೇ ಮುಂದೆ ಸಾಗಿದಾಗ ಒಂದು ಅನಾಹತ( ಪದಾರ್ಥಗಳ ಘರ್ಷಣೆ ಇಲ್ಲದೆ ಕೇಳಿಬರುವ)ವಾದ ನಾದದ ಶ್ರವಣವನ್ನು ಮಾಡಿದರು. ಅದನ್ನು ಪ್ರಣವವೆಂದು ಕರೆದರು.

ಇಂದು ನಮ್ಮ ದೇಹಯಂತ್ರವೂ ಕೂಡ, ಹಾಳಾಗಿರುವ ರೇಡಿಯೋದಂತೆಯೇ ಆಗಿದೆ. ಹುಡುಗನು ರೇಡಿಯೋವನ್ನು ಕೇಳಲು ಸಿದ್ಧಪಡಿಸಿದಂತೆ, ನಮ್ಮ ದೇಹವನ್ನು ಸಿದ್ಧಪಡಿಸಬೇಕಿದೆ. ಅದಕ್ಕಾಗಿ ಬೇಕಾದ ಬಗೆ-ಬಗೆಯ ಅಷ್ಟೂ ಸಂಸ್ಕಾರಗಳನ್ನು ನಮ್ಮ ಮಹರ್ಷಿಗಳು ನಮ್ಮ ಸಂಸ್ಕೃತಿ, ಆಚಾರ- ವಿಚಾರ, ಸಂಪ್ರದಾಯಗಳಲ್ಲಿ ಸೇರಿಸಿದ್ದಾರೆ. ಅಷ್ಟೇ ಅಲ್ಲದೆ ಭಾರತೀಯ ವಾದ್ಯಗಳ ಆಕಾರ, ಹಾಗೂ ಅವುಗಳನ್ನು ನಿರ್ಮಿಸುವ ದ್ರವ್ಯದಿಂದ ಮೊದಲುಗೊಂಡು, ಅದು ಹೊರಹೊಮ್ಮಿಸುವ ನಾದ ಹಾಗೂ ಆ ನಾದದ ಪರಿಣಾಮಗಳು ಅಂತರಂಗದ ನಾದದೆಡೆಗೆ ಕೊಂಡೊಯ್ಯುವಂತೆ ಶ್ರಮಿಸಿದ್ದಾರೆ. ಅಂತರಂಗದಲ್ಲಿ ತಾನೇ ತಾನಾಗಿ ಕೇಳುವ ಶ್ರುತಿಯು, ಜ್ಞಾನಿಗಳ ಬಾಯಿಂದ ಶ್ರುತವಾಗುತ್ತಿರುವಂತೆಯೇ , ಕಂಠಸ್ಥ  ಮಾಡುವ (ಪುಸ್ತಕವಿಲ್ಲದೆ) ಪದ್ಧತಿಯನ್ನು ರೂಢಿಸಿದ್ದರು. ಪ್ರಣವವನ್ನು ನಮ್ಮೆಲ್ಲರಿಗೂ ಮೂಲವೆಂದು ಮನಗಂಡು ಹಾಗೂ ನಾವು ತಲುಪಬೇಕಾದ ಗಮ್ಯಸ್ಥಾನವೆಂದು ಗುರುತಿಸಿ, ನಮ್ಮ ಎಲ್ಲಾ ಆಚಾರ-ವಿಚಾರ ಸಂಪ್ರದಾಯಗಳು ಓಂಕಾರದಿಂದಲೇ ಆರಂಭಗೊಂಡು ಮತ್ತು ಅದರಲ್ಲಿಯೇ ಪರಿಸಮಾಪ್ತಿ ಹೊಂದುವ ಪದ್ಧತಿಯನ್ನು ಹಾಕಿಕೊಟ್ಟರು.

"ಪ್ರಣವವು ಇಂದ್ರಿಯ ಸಂಯಮ ಮಾಡಿ ಹೋದಾಗ ಕೇಳಿಬರುವ ಧ್ವನಿ, ಜ್ಞಾನಿಗಳು ತಮ್ಮದೇ ಆದ ಸ್ಥಿತಿಯಲ್ಲಿ, ದಹರಕುಹರದಲ್ಲಿ(ಅಂತರಂಗದಲ್ಲಿ), ಒಳಗಿವಿಯಲ್ಲಿ, ಕೇಳುವ ಸದ್ದು." ಎಂದು ಶ್ರೀರಂಗಮಹಾಗುರುಗಳು ಎತ್ತಿ ಹೇಳುತ್ತಿದ್ದರು. ಈ ಅಂತರ್ನಾದಗಳನ್ನು ಬಾಹ್ಯ ಪ್ರಪಂಚಕ್ಕೆ ತರಲು ಶ್ರಮಪಟ್ಟ ನಮ್ಮ ಮಹರ್ಷಿಗಳ ಪರಿಶ್ರಮವನ್ನು ಮರೆಯದಿರೋಣ.

ಸೂಚನೆ: 1/4/2020 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ದಲ್ಲಿ ಪ್ರಕಟವಾಗಿದೆ.

Sunday, December 13, 2020

ದೇವಾಲಯವೆಂಬ ಅಭಿಜ್ಞಾನ (Devalayavemba abhijnana)

ಲೇಖಕರು : ಸುಮುಖ ಹೆಬ್ಬಾರ್
(ಪ್ರತಿಕ್ರಿಯಿಸಿರಿ lekhana@ayvm.in)


ಮಹರ್ಷಿ ಕಣ್ವರ ಪವಿತ್ರವಾದ ಆಶ್ರಮಕ್ಕೆ ದುಷ್ಯಂತ ಮಹಾರಾಜನ ಆಗಮನವಾಗಿ, ಅಲ್ಲಿದ್ದ ಋಷಿ ಕನ್ಯೆ (ಕ್ಷತ್ರಿಯ ಕನ್ಯೆ)ಶಕುಂತಲೆಯಲ್ಲಿ ಅನುರಕ್ತನಾಗಿ ಗಾಂಧರ್ವ ರೀತಿಯಲ್ಲಿ ವಿವಾಹವಾದ. ಒಂದು ಉಂಗುರವನ್ನು ನೆನಪಿಗಾಗಿ ನೀಡಿ, ತನ್ನ ರಾಜ್ಯಕ್ಕೆ ಮರಳಿದ. ದುಷ್ಯಂತನ ಚಿಂತನೆಯನ್ನೇ ಮಾಡುತ್ತಿದ್ದ ಶಕುಂತಲೆಗೆ ದೂರ್ವಾಸರು ಆಶ್ರಮಕ್ಕೆ ಆಗಮಿಸಿದ್ದು ಗಮನಕ್ಕೆ ಬರಲಿಲ್ಲ. ಹಿರಿಯರಿಗೆ ಗೌರವ ನೀಡದ ಮನೋಧರ್ಮವನ್ನು ಸಹಿಸದ ಮುನಿವರ್ಯರು ಶಕುಂತಲೆಗೆ, ಸ್ಮರಿಸುತ್ತಿರುವ ವ್ಯಕ್ತಿಗೆ, ಈಕೆ ಮರೆತು ಹೋಗಲಿ ಎಂಬ ಶಾಪವಿತ್ತರು. ನಂತರ ಶಾಂತವಾಗಿ, ಅಭಿಜ್ಞಾನವಾದ ಉಂಗುರದಿಂದ ಸ್ಮರಣೆ ಬರುವಂತೆ ಅನುಗ್ರಹಿಸಿದರು. ಶಾಪದಂತೆ ಇತ್ತ ದುಷ್ಯಂತ, ಶಕುಂತಲೆಯನ್ನು ಮರೆತ. ಶಕುಂತಲೆ ಉಂಗುರ ಕಳೆದುಕೊಂಡಳು. ಎದುರಿಗೆ ಬಂದು ನಿಂತು ಹೇಳಿದರೂ, ಎಲ್ಲಾ ಋಷಿಗಳು ಹೇಳಿದರೂ, ದುಷ್ಯಂತನಿಗೆ ಶಕುಂತಲೆಯ ನೆನಪಾಗಲಿಲ್ಲ. ಎಲ್ಲವೂ ಸುಳ್ಳು ಎಂದು ಭಾಸವಾಯಿತು. ಕಾಲಕ್ರಮದಲ್ಲಿ ಉಂಗುರದ ನೋಟದಿಂದ, ಹಿಂದೆ ನಡೆದ ಘಟನಾವಳಿಗಳೆಲ್ಲವೂ ಸ್ಮರಣೆಗೆ ಬಂದಿತು. ಶಕುಂತಲೆಯನ್ನು ಒಪ್ಪಿಕೊಂಡು ವಿವಾಹವಾದನು.

ನಮ್ಮ ಜೀವನದಲ್ಲಿ ಕೆಲವು ವಸ್ತುಗಳನ್ನು ಇಟ್ಟುಕೊಳ್ಳುವುದುಂಟು.  ಪ್ರೀತಿಯಿಂದ ಅಪ್ಪ ಕೊಡಿಸಿದ ಕೈಗಡಿಯಾರ ಎಂದು ಹಾಳಾಗಿದ್ದರೂ, ಭದ್ರವಾಗಿ ಜೋಪಾನ ಮಾಡಿರುವುದುಂಟು. ಅಂತೆಯೇ ಭೇಟಿ ನೀಡಿದ ಸ್ಥಳದ ನೆನಪಿಗಾಗಿ ಏನನ್ನೋ ಕೊಳ್ಳುವುದುಂಟು. ಅಂಗಡಿಗೆ ಹೋದಾಗ, ಹೇಳಿದ ಸಾಮಾನು ತರಲು ಮರೆಯಬಾರದು ಎಂದು, ಬಟ್ಟೆಯ ತುದಿಯನ್ನು ಗಂಟು ಹಾಕಿಕೊಳ್ಳುವುದುಂಟು. ಇಂತಹ ವಸ್ತುಗಳು ಅಥವಾ ಗುರುತುಗಳು ಅಭಿಜ್ಞಾನವಾಗಿ ವ್ಯಕ್ತಿಯ, ಸ್ಥಳದ ಅಥವಾ ಘಟನೆಯ ಸ್ಮರಣೆಯನ್ನು ತಂದುಕೊಡುತ್ತದೆ.

ನಾವೂ ದುಷ್ಯಂತನಂತೆ ನಮ್ಮವರನ್ನೂ, ನಮ್ಮ ಪೂರ್ವೇತಿಹಾಸವನ್ನೂ ಮರೆತಿದ್ದೇವೆ. ನಾವೆಲ್ಲರೂ ತಾಯಿಯ ಗರ್ಭದ ೮ನೇ ತಿಂಗಳಿನಲ್ಲಿ ಭಗವಂತನ ದರ್ಶನ ಪಡೆದಿರುತ್ತೇವೆಂದು ಗರ್ಭೋಪನಿಷತ್ತು ಪ್ರತಿಪಾದಿಸುತ್ತದೆ. ಹುಟ್ಟಿದನಂತರ ಮಾಯೆಯಿಂದ ಇದರ ವಿಸ್ಮರಣೆಯುಂಟಾಗಿರುತ್ತದೆ. ಆ ಅನುಭವದ ಸ್ಮರಣೆಯನ್ನು ತಂದುಕೊಡಲು ಮಹರ್ಷಿಗಳು ಅಭಿಜ್ಞಾನವಾಗಿ ದೇವಾಲಯಗಳನ್ನು ತಂದಿದ್ದಾರೆ. ಮಹರ್ಷಿಗಳು ಅಂತರಂಗದಲ್ಲಿ ಅಬಾಧಿತವಾಗಿ ಸಪ್ತಲೋಕದಲ್ಲೂ ವಿಹರಿಸಬಲ್ಲವರಾಗಿದ್ದರು.  ಹೀಗೆ ಸಂಚರಿಸುತ್ತ ಅನೇಕ ದರ್ಶನಗಳನ್ನು ಪಡೆದರು. ಅವರು ಕಂಡ ಅತ್ಯಮೋಘವಾದ , ಪರಮ ರಮಣೀಯವಾದ ಒಳದರ್ಶನಗಳನ್ನು ನಮ್ಮೆಲ್ಲರ ಬಗೆಗಿನ ಕರುಣೆಯಿಂದ ನಮ್ಮ ದೇವಾಲಯಗಳಲ್ಲಿ ದೇವತಾ ಮೂರ್ತಿಗಳಾಗಿ ಸ್ಥಾಪಿಸಿದರು. ತಮ್ಮ ಅಂತರಂಗದ ಶಕ್ತಿಯನ್ನು ಅದರಲ್ಲಿ ಪ್ರತಿಷ್ಠಾಪಿಸಿದರು. ನೋಡಿದವರಿಗೆಲ್ಲ ತಮ್ಮ ಸ್ವಸ್ವರೂಪದ ಸ್ಮರಣೆಯಾಗಿ ಎಲ್ಲರೂ ಸಂತೋಷ ಪಡುವಂತಾಗಲಿ ಎಂಬ ಕರುಣೆ ಅವರದು. ದೇವಾಲಯಗಳು ಮೂಲವನ್ನು ಜ್ಞಾಪಿಸುವ ಅಭಿಜ್ಞಾನ,

ಈ ಕಾರಣದಿಂದಲೇ ಶ್ರೀರಂಗ ಮಹಾಗುರುಗಳು ದೇವಾಲಯವನ್ನು "ಸ್ಮಾರಕ ಮಂದಿರ (Memory Hall)" ಎಂಬುದಾಗಿ ಕರೆಯುತಿದ್ದರು. ಅಲ್ಲಿ ಹೃದಯಗರ್ಭದಲ್ಲಿ ಬೆಳಗುವ ದೇವನನ್ನು ನೆನಪಿಸುವ ಗರ್ಭಗುಡಿಯುಂಟು. ಹೊರಗೆ ತ್ರಿಗುಣಗಳನ್ನು ಸ್ಮರಣೆಗೆ ತರಿಸುವ ಮೂರು ಬಣ್ಣದ ತೆರೆಗಳು೦ಟು. ಒಳಗೆ ಸಾಕ್ಷಾತ್ ಪ್ರತಿನಿಧಿಯಾದ ಮೂರ್ತಿಯ ದರ್ಶನವೂ ಉಂಟು. ಹೊಂಬಣ್ಣದ ಬೆಳಕಿನಲ್ಲಿ ಕಂಗೊಳಿಸುವಂತೆ ಮಾಡಿಸುವ ಮಂಗಳ ಆರತಿಯುಂಟು.  ಪ್ರಣವವನ್ನು ಹೋಲುವ ಘಂಟಾ ನಾದವುಂಟು. ಮಹರ್ಷಿಗಳ ಈ ವಿಜ್ಞಾನದೊಂದಿಗೆ ನಾವೆಲ್ಲರೂ ದೇವಾಲಯಗಳನ್ನು ನೋಡುವಂತಾಗಲಿ.   

ಸೂಚನೆ: 12/12/2020 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ದಲ್ಲಿ ಪ್ರಕಟವಾಗಿದೆ. 

Saturday, November 21, 2020

ಹತ್ತಿರವಿದ್ದರೂ ಪರಿಚಯವಿಲ್ಲದ ವಸ್ತು (Hattiraviddaru Paricayavillada Vastu)

ಲೇಖಕರು : ಸುಮುಖ ಹೆಬ್ಬಾರ್
(ಪ್ರತಿಕ್ರಿಯಿಸಿರಿ lekhana@ayvm.in)



ಒಂದು ಮಗುವಿಗೆ ಆಟದ ಚೀಲದಲ್ಲಿ ಒಂದು ಆಶ್ಚರ್ಯಕರವಾದ ಆಟಿಕೆ ಕಾಣಿಸಿತು. ಅದೊಂದು ಪ್ಲಾಸ್ಟಿಕ್ ನಿಂದ ಮಾಡಲ್ಪಟ್ಟ ಸಾಮಾನ್ಯ ವಸ್ತು ಎನಿಸಿತು. ಅದರಲ್ಲಿನ ಗುಂಡಿಗಳನ್ನು ಒತ್ತಿದಾಗ, ಅತ್ತ ಕಡೆಯಿಂದ ಪರಿಚಯಸ್ಥರು ಮಾತನಾಡುವುದು ಕೇಳಿತು. ಖುಷಿಯಿಂದ ಮಾತನಾಡಿತು. ಕಾಲಕ್ರಮೇಣ ಬೆಳೆದ ಮಗುವು, ಅದರಲ್ಲಿ ಸಂದೇಶವನ್ನು ರವಾನಿಸಿತು. ಆಟಗಳನ್ನೂ ಆಡಬಹುದೆಂದು ತಿಳಿದುಕೊಂಡಿತು. ಇಷ್ಟವಾದ ಹಾಡುಗಳನ್ನು ಕೇಳಲು ಕಲಿಯಿತು. ಭಾವಚಿತ್ರ ಮತ್ತು ದೃಶ್ಯವನ್ನು ಸೆರೆಹಿಡಿಯಿತು. ಇನ್ನೂ ಬೆಳೆದು ಹುಡುಗನಾಗಿ, ಅಂತರ್ಜಾಲವನ್ನು ಇದರಲ್ಲಿ ಬಳಸಿಕೊಂಡಾಗ ಹೊಸ ಪ್ರಪಂಚವೇ ಎದುರು ತೆರೆದು ನಿಂತಿತ್ತು. ಮಗುವಾಗಿದ್ದಾಗ ಸಾಮಾನ್ಯ ಎಂದೆನಿಸಿದ್ದ ವಸ್ತು, ಅದ್ಭುತಗಳ ಆಗರವಾದ ಮೊಬೈಲ್ ಎಂದು ಅರ್ಥವಾಗಿತ್ತು.

ನಮ್ಮ ಜೀವನದಲ್ಲಿಯೂ ಪ್ರಯೋಜನವನ್ನು ತಿಳಿಯದ ಅನೇಕ ವಿಷಯಗಳಲ್ಲಿ ನಮ್ಮ ದೇಹವೂ ಒಂದಾಗಿದೆ. ದಿನವಿಡೀ ದೇಹವನ್ನು ಹೊತ್ತು ತಿರುಗುತ್ತಿದ್ದರೂ, ಅದರ ಬಗೆಗಿನ ಪೂರ್ಣ ಪರಿಚಯವಿಲ್ಲ. ದಿನದಿಂದ ದಿನಕ್ಕೆ ಮಾನವ ದೇಹದ ವೈಶಿಷ್ಟ್ಯಗಳನ್ನು ವೈದ್ಯಕೀಯ ಲೋಕದ ಸಂಶೋಧನೆ ಬಿಚ್ಚಿಡುತ್ತಲೇ ಇದೆ. ಸಾಮಾನ್ಯ ದೃಷ್ಟಿಯಲ್ಲಿ ನೋಡಿದಾಗ ಇದೊಂದು ಚರ್ಮದಿಂದ ಸುತ್ತಿಕೊಂಡ ಮೂಳೆ ಮಾಂಸದ ಮುದ್ದೆ. ದೇಹವು, ಇಂದ್ರಿಯ ಸುಖ ಅನುಭವಿಸುವ ಜಾಗ. ಸುಖವನ್ನು ಅನುಭವಿಸಲು ಅರ್ಥದ ಸಂಪಾದನೆ, ತನ್ಮೂಲಕ ಕಾಮನೆಗಳ ಸೇವನೆ, ಎಂಬಂತೆ ಇಷ್ಟರಲ್ಲೇ ಸಮಾಜದ ಕೆಲವರಲ್ಲಿ ನಡೆ ಕಾಣುತ್ತಿದೆ. ವಿಶೇಷವಾಗಿ ಮಾನವನಲ್ಲಿ ವಿವೇಚನಾ ಶಕ್ತಿಯುಂಟು. 

 ಬ್ರಹ್ಮನು ಸೃಷ್ಟಿಯನ್ನು ಮಾಡುತ್ತಾ ಮಾನವನನ್ನು ಸೃಷ್ಟಿಸಿದಾಗ, ತಾನು ಎಂತಹ ಅದ್ಬುತ ಸೃಷ್ಟಿ ಮಾಡಿಬಿಟ್ಟೆ ಎಂದು ನಿಬ್ಬೆರಗಾದನಂತೆ. ಅದರ ವೈಶಿಷ್ಟ್ಯವನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಂಡವರು ಮಹರ್ಷಿಗಳು. ಮೊಬೈಲ್ ನ ಒಳಹೊಕ್ಕು ನೋಡಿದಷ್ಟೂ ಅದರಲ್ಲಿನ ಉಪಯೋಗಗಳು ಮತ್ತು ಒಳಗೊಂಡಿರುವ ಅಂಶಗಳು ಹೊರಬರುವಂತೆ, ಮಹರ್ಷಿಗಳ ದೃಷ್ಟಿಕೋನದಲ್ಲಿ, ಮಾನವ ದೇಹವು ಅಂತರಂಗದಲ್ಲಿ ಅಪಾರವಾದ ಸುಖವನ್ನು ಅನುಭವಿಸಲಾಗುವ ಒಡಲು. ಒಬ್ಬ ಇಡೀ ಭೂಮಂಡಲಕ್ಕೆ ರಾಜನಾದವನು, ತನ್ನ ಜೀವಿತಾವಧಿಯಲ್ಲಿ ಅನುಭವಿಸುವ ಆನಂದದ ಕೋಟಿ ಕೋಟಿ ಪಾಲಿನಷ್ಟು ಸುಖವನ್ನು, ಈ ದೇಹದಲ್ಲಿ ಬ್ರಹ್ಮಾನುಭವದಿಂದ ಅನುಭವಿಸಲು ಸಾಧ್ಯವಿದೆ. ಈ ಸುಖವನ್ನು ಅನುಭವಿಸುವುದಕ್ಕೋಸ್ಕರವೇ ಮಾನವ ದೇಹದ ಸೃಷ್ಟಿಯಾಗಿದೆ. ಇದೇ ಜೀವನದ ಗುರಿ. ಹಾಗಾಗಿ ದೇಹವನ್ನು ಧರ್ಮ-ಸಾಧನ  ಎಂಬುದಾಗಿ, ಭಗವಂತನ ಬಳಿಗೆ ತಲುಪಿಸುವ ರಥ, ಸೇತುವೆ, ಏಣಿ ಅಥವಾ ವಿಮಾನವಾಗಿಯೂ ಕಂಡಿದ್ದಾರೆ. ಆತ್ಮಸಾಧಕನಿಗೆ, ಸಾಧನೆ ಮಾಡಲು ಕ್ಷೇತ್ರವೂ ಆಗಿದೆ.

ನಮ್ಮ ಶರೀರಕ್ಕೆ ಏನು ಬೆಲೆ ಎಂದು ಕೇಳಿದರೆ "ಸ್ವಾಮಿ ಇದರಲ್ಲೇನಿದೆ? ಇಷ್ಟು ಕ್ಯಾಲ್ಸಿಯಂ, ಸ್ವಲ್ಪ ಐರನ್" ಎಂದು, ಒಟ್ಟು ಇವತ್ತಿನ ಬೆಲೆಯಲ್ಲಿ ಒಂದು ಹನ್ನೆರಡಾಣೆ   ಸಾಮಾನು ಆಗಬಹುದು ಎನ್ನುತ್ತಾನೆ. ಅದೇ ಮಹರ್ಷಿಗಳನ್ನು ಕೇಳಿದರೆ, "ಅದು ಅನರ್ಘ್ಯವಾದುದು, ಜಗತ್ತಿನಲ್ಲಿ ಇನ್ನಾವುದೂ ಈ ತರಹ ಬೆಲೆಬಾಳುವ ವಸ್ತುವಿಲ್ಲ ಎನ್ನುತ್ತಾರೆ" ಎಂಬುದು ಮಹರ್ಷಿ ಹೃದಯವೇದಿಗಳಾದ  ಶ್ರೀರಂಗ ಮಹಾಗುರುಗಳ ಅಭಿಪ್ರಾಯವಾಗಿತ್ತು. ಸಂವಹನಕ್ಕಾಗಿ ಸೃಷ್ಟಿಯಾಗಿರುವ ಮೊಬೈಲ್, ಬರಿ ಆಟವಾಡಲು ಬಳಕೆಯಾದರೆ, ಅದರ ಪೂರ್ಣ ಪ್ರಯೋಜನ ಪಡೆದಂತೆ ಆಗಲಾರದು.  ಹಾಗೆಯೇ  ಭಗವತ್ಸಾಕ್ಷಾತ್ಕಾರಕ್ಕೆಂದು ಸೃಷ್ಟಿಯಾದ ಮಾನವ ದೇಹವು ಇಂದ್ರಿಯ ಸುಖಗಳಿಗೆ ಸೀಮಿತವಾದರೆ, ಅದು ವ್ಯರ್ಥವಾದಂತೆಯೇ ಸರಿ. ಆದ್ದರಿಂದ ನಮ್ಮ ದೇಹವು ಸೃಷ್ಟಿಯಾದ ಉದ್ದೇಶಕ್ಕೆ ಅನುಗುಣವಾಗಿ, ಪರಮಸುಖವನ್ನು ಅನುಭವಿಸುವಂತಾಗಲಿ ಎಂದು ಪ್ರಾರ್ಥಿಸೋಣ


ಸೂಚನೆ: 21/11/2020 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ದಲ್ಲಿ ಪ್ರಕಟವಾಗಿದೆ.   

Saturday, October 17, 2020

ನಾವು ನಿಜವಾಗಲೂ ಸ್ವತಂತ್ರರೇ ? ( Navu Nijavagalu Svatantrare?)

ಲೇಖಕರು: ಸುಮುಖ ಹೆಬ್ಬಾರ್
(ಪ್ರತಿಕ್ರಿಯಿಸಿರಿ : lekhana@ayvm.in)




ಒಂದು ಕಪಿಗಳ ಗುಂಪು, ಹಳ್ಳಿಯ ಪಕ್ಕದಲ್ಲಿದ್ದ ಕಾಡಿನಂಚಿನಲ್ಲಿ ವಾಸವಾಗಿತ್ತು. ಅಲ್ಲಿಗೆ ದೇವಸ್ಥಾನವನ್ನು ಕಟ್ಟಲು ಜನರ ಗುಂಪೊಂದು ಸೇರಿತು. ಹಿರಿಯ ಕಪಿಯು, "ಅವರಿಗೆ ತೊಂದರೆ ಕೊಡಬೇಡಿ. ಮುಂದೆ ದೇವರಿಗೆ ಸಮರ್ಪಿಸುವ ಸಿಹಿ ತಿಂಡಿಗಳು ನಮಗೆ ಸಿಗುತ್ತವೆ" ಎಂದಿತು. ಕಪಿಗಳೂ ಒಪ್ಪಿದವು. ಆದರೆ ತುಂಟ ಕಪಿಯೊಂದು, ಹಿರಿಯ ಕಪಿಯ ಮಾತನ್ನು ಕೇಳದೆ, ತನ್ನಿಚ್ಛೆಯಂತೆ ದೇವಸ್ಥಾನವನ್ನು ಕಟ್ಟುವ ಸಲಕರಣೆಗಳು ಮತ್ತು ಹಲಗೆಗಳನ್ನು ಕಪಿಬುದ್ಧಿಯಿಂದ ಅಲುಗಾಡಿಸಲು ಆರಂಭಿಸಿತು. ಆಧಾರಕ್ಕಾಗಿ ನೀಡಿದ್ದ ಹಲಗೆಯೊಂದನ್ನು ಅಲುಗಾಡಿಸಿದಾಗ, ಗೋಡೆಯೊಂದು ಕುಸಿದು, ದೇಹ ನುಜ್ಜುಗುಜ್ಜಾಗಿ, ಕೋತಿ ಸಾವನ್ನಪ್ಪಿತು.

ಇಂದು ನಾವು ಬ್ರಿಟಿಷರಿಂದ ಸ್ವತಂತ್ರರು. ಪ್ರತಿಯೊಬ್ಬರಿಗೂ ತನ್ನಿಚ್ಛೆಯಂತೆ ಬದುಕಲು ಮುಕ್ತ ಅವಕಾಶವಿದೆ.  ಆದರೆ ನಿಜವಾಗಲೂ ನಾವು ಸ್ವತಂತ್ರರೇ? ಎಂಬ ಪ್ರಶ್ನೆಯನ್ನು ಕೇಳಿಕೊಳ್ಳುವುದು ಒಳಿತು.  ಮೇಲಿನ ಕಥೆಯನ್ನು ಅವಲೋಕಿಸಿದರೆ, ಕಪಿಗೆ ತುಂಟತನದ ಸ್ವಾತಂತ್ರ್ಯವಿತ್ತು. ಎಲ್ಲರಿಗೂ ಹಿತವನ್ನುಂಟು ಮಾಡುವಂತಹ ಹಿರಿಯ ಕಪಿಯ ವಿವೇಕದ ಮಾತನ್ನು ಮೀರಿ ತನ್ನ ತುಂಟತನದ ಸ್ವಾತಂತ್ರ್ಯದ ಬಳಕೆಯಿಂದಾಗಿ  ಪ್ರಾಣ ಕಳೆದುಕೊಂಡಿತು.  ಅಂತೆಯೇ ಇಂದು, ಸ್ವಾತಂತ್ರ್ಯವಿದೆಯೆಂದು,ಲೈಸೆನ್ಸ್ ಇಲ್ಲದೆ ಅಥವಾ  ಭಾರತದ ರಸ್ತೆಗಳ  ಬಲಭಾಗದಲ್ಲಿ ವಾಹನ ಚಾಲನೆ ಮಾಡಬಹುದೇ? ಈಗಿನ ದಿನಗಳಲ್ಲಿ ಮಾಸ್ಕ್ ಧರಿಸದೇ ನಮ್ಮಿಚ್ಛೆಯಂತೆ ಓಡಾಟ ಮಾಡಬಹುದೇ? ಇಲ್ಲ! ದಂಡನಾರ್ಹ ಅಪರಾಧಗಳಿವು. ಹಾಗಾದರೆ ಸ್ವಾತಂತ್ರ್ಯಕ್ಕೇನು ಅರ್ಥವೆಂದೆನಿಸುವುದು ಸಹಜ.

ಸ್ವ-ತಂತ್ರಕ್ಕೆ ಕಟ್ಟುಪಾಡುಗಳು ಇಲ್ಲದಿಲ್ಲ. ಜನರ ಹಿತವನ್ನು ಗಮನದಲ್ಲಿಟ್ಟುಕೊಂಡು, ತಿಳಿದವರು ಹಾಕಿದ ಕಟ್ಟುಪಾಡಿನ ಚೌಕಟ್ಟಿನೊಳಗೆ ಸ್ವಾತಂತ್ರ್ಯವನ್ನು ಬಳಸುವುದು ಲೇಸು. ಅಂತಹ ಚೌಕಟ್ಟನ್ನು ಹೇಳುವ ಭಾರತ ಸಂವಿಧಾನಕ್ಕೆ ನಾವು ಬದ್ಧರಾಗಿದ್ದೇವೆ. ಅದರಲ್ಲಿ ಮೂಲಭೂತ ಹಕ್ಕುಗಳಲ್ಲಿಯೇ ಸ್ವಾತಂತ್ರ್ಯವೆಂಬುದನ್ನು ಸೇರಿಸಿದ್ದರೂ, ಸಂವಿಧಾನವನ್ನು ಮೀರಿ ನಡೆದಾಗ ಶಿಕ್ಷೆಯಿದೆ.

ಇನ್ನು ಬೆಳಗ್ಗೆ ಎದ್ದು ಹಲ್ಲುಜ್ಜಬೇಕು, ಕಸವನ್ನು ಬಾಯಿಗೆ ಹಾಕಬಾರದೆಂಬ ನಿಯಮಗಳು ಸಂವಿಧಾನದಲ್ಲಿವೆಯೇ? ಭಾರತದ ಸಂವಿಧಾನದಲ್ಲಿಲ್ಲದಿದ್ದರೂ ಇಂತಹ ಅನೇಕ ಕಟ್ಟುಪಾಡುಗಳು ಪ್ರಕೃತಿಮಾತೆಯ ಸಂವಿಧಾನದಲ್ಲಿರುವ ಕಾರಣ, ಆ ನಿಯಮಗಳಿಗೆ ಬದ್ಧರಾಗಿರಬೇಕು. ಅಂತೆಯೇ ನಮ್ಮೊಳಗೆ ಆತ್ಮಸಾಮ್ರಾಜ್ಯದ ಸಂವಿಧಾನವೂ ಒಂದಿದೆ. ಬೀಜದಿಂದ ಹೊರಟು, ಕಾಂಡ, ಶಾಖೆ, ಪುಷ್ಪ, ಕಾಯಿ, ಹಣ್ಣಾಗಿ ಮುಂದೆ ಬೀಜದಲ್ಲಿ ಬಂದು ನಿಂತಾಗ, ವೃಕ್ಷಕ್ಕೆ ಒಂದು ಸಾರ್ಥಕತೆ; ಪರಿಪೂರ್ಣವೆಂಬ ಭಾವ. ಹಾಗೆಯೇ ನಮ್ಮ ಜೀವ, ಪ್ರಕೃತಿಯಲ್ಲಿ ಹುಟ್ಟಿ ಬೆಳೆದರೂ ತನ್ನೊಳಗಿನ ಆತ್ಮಾನಂದವೆಂಬ ಫಲವನ್ನು ಅನುಭವಿಸಿದರೆ ಜೀವನ ಪರಿಪೂರ್ಣವೆನಿಸುತ್ತದೆ. ಅದನ್ನು ಪಡೆಯಬೇಕಾದರೆ, ಆತ್ಮರಾಜ್ಯದ ಸಂವಿಧಾನವನ್ನು ಮೀರದೆ ಸ್ವಾತಂತ್ರ್ಯವನ್ನು ಬಳಸಬೇಕು. ಸಮಾಜ, ರಾಷ್ಟ, ಪ್ರಕೃತಿ ಮತ್ತು ಆತ್ಮ ಹಿತಗಳನ್ನೂ ಗಮನದಲ್ಲಿಟ್ಟುಕೊಂಡು ರಚಿಸಿದ ಸಂವಿಧಾನವೇ ಭಾರತ ಮಹರ್ಷಿಗಳು ತಂದುಕೊಟ್ಟ ಶಾಸ್ತ್ರ-ಸಂಪ್ರದಾಯಗಳು.    

೧೮ ವರ್ಷ ತುಂಬಿದ ಕೂಡಲೆ ಮತದಾನದ ಹಕ್ಕು ಬರುವಂತೆ ಭಗವತ್ಸಾಕ್ಷಾತ್ಕಾರವು ಪ್ರತಿಯೊಬ್ಬ ಮಾನವನಿಗೂ ಜನ್ಮಸಿದ್ಧ ಹಕ್ಕೆಂಬುದು ಶ್ರೀರಂಗಮಹಾಗುರುಗಳ ಅಭಿಪ್ರಾಯವಾಗಿತ್ತು. ಈ ಹಕ್ಕನ್ನು ನಮ್ಮದಾಗಿಸಿಕೊಂಡು ಆ ಪರಮ ಸುಖವನ್ನು ಪಡೆಯಲು, ಆತ್ಮಸಂವಿಧಾನದ ಚೌಕಟ್ಟಿನೊಳಗೆ ವೀರಯೋಧರಂತೆ ವರ್ತಿಸಬೇಕಾಗಿದೆ.  ಭಗವಂತನ ಕರುಣೆಯಿಂದ ಆತ್ಮರಾಜ್ಯದ ಸಂವಿಧಾನಕ್ಕೆ ಒಳಪಟ್ಟು, ಆತ್ಮಸುಖದ ಸ್ವಾತಂತ್ರ್ಯವು ನಮಗೂ ಒಲಿಯಲಿ ಎಂದು ಪ್ರಾರ್ಥಿಸೋಣ.

ಸೂಚನೆ: 17/10/2020 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ದಲ್ಲಿ ಪ್ರಕಟವಾಗಿದೆ. 

Wednesday, September 23, 2020

ಖಟ್ವಾ೦ಗನ ಆದರ್ಶ (Khatvaogana Adharsa)

ಲೇಖಕರು: ಸುಮುಖ ಹೆಬ್ಬಾರ್
(ಪ್ರತಿಕ್ರಿಯಿಸಿರಿ : lekhana@ayvm.in)



ಖಟ್ವಾ೦ಗ  ಮಹಾಪರಾಕ್ರಮಿಯಾದ ರಘುವಂಶದ ಚಕ್ರವರ್ತಿ. ಯುದ್ಧದಲ್ಲಿ ಅವನನ್ನು ಜಯಿಸಲು ಯಾರಿಂದಲೂ ಸಾಧ್ಯವಾಗುತ್ತಿರಲಿಲ್ಲ.  ಅವನು ದೇವತೆಗಳ ಪ್ರಾರ್ಥನೆಯಂತೆ, ದೇವೆತೆಗಳ ಪರವಾಗಿ ಅನೇಕ ವರ್ಷಗಳ ಕಾಲ ಯುದ್ಧ ಮಾಡಿದನು. ತನ್ನ ಸಾಮರ್ಥ್ಯ ಮತ್ತು ಕೌಶಲ್ಯದಿಂದ ದೈತ್ಯರನ್ನು ಸಂಹರಿಸಿದನು. ತನ್ನ ಕರ್ತವ್ಯವನ್ನು ಮುಗಿಸಿ, ದೇವತೆಗಳು ಬೀಳ್ಕೊಡುವ ಸಮಯ. ಕೃತಜ್ಞರಾದ ದೇವತೆಗಳು ಆತನಿಗೆ ಏನಾದರೂ ಪ್ರತ್ಯುಪಕಾರ ಮಾಡಲು ಬಯಸಿದರು. ಆದರೆ ಖಟ್ವಾ೦ಗನಿಗೆ ಯಾವ ಬಯಕೆಯೂ ಇರಲಿಲ್ಲ. ಆತ ನಿರ್ಲಿಪ್ತ, ತೃಪ್ತ ಮನಸ್ಕನಾದ ರಾಜರ್ಷಿ.  ಕೊನೆಯಲ್ಲಿ "ತನ್ನ ಆಯುಷ್ಯ ಎಷ್ಟು ಉಳಿದಿದೆ?" ಎಂಬುದಾಗಿ ಮಾತ್ರ ಪ್ರಶ್ನಿಸಿದ. ದೇವತೆಗಳು ದಿವ್ಯ ದೃಷ್ಟಿಯಿಂದ ನೋಡಿ ಸ್ವಲ್ಪ ಗಾಬರಿಗೊಂಡರು. "ರಾಜನ್, ನಿನ್ನ ಆಯುಷ್ಯದಲ್ಲಿ ಒಂದು ಮುಹೂರ್ತ ಕಾಲ ಮಾತ್ರ ಉಳಿದಿದೆ !!" ಎಂಬ ಕಟು ಸತ್ಯವನ್ನು ತಿಳಿಸಿದರು. ಆದರೂ, ಖಟ್ವಾ೦ಗನ ಮುಖಮಂಡಲದಲ್ಲಿ ಸ್ವಲ್ಪವೂ ಬೇಸರ ಇರಲಿಲ್ಲ. ತುರ್ತಾಗಿ ತನ್ನ ವಾಸಸ್ಥಾನಕ್ಕೆ ತೆರಳಿದ. ಅರ್ಧ ಮುಹೂರ್ತ ಕಾಲದಲ್ಲಿ ಮನಸ್ಸನ್ನು ಸಂಯಮಿಸಿ, ಒಳಗೆ ಯೋಗಸ್ಥಿತಿಯಲ್ಲಿ ಮುಳುಗಿದ. ನಿಗದಿತ ಆಯುಷ್ಯಕಾಲ ಮುಗಿದು ಮೃತ್ಯು ಎಳೆದೊಯ್ಯುವ ಮುನ್ನವೇ, ತನ್ನ ಯೋಗಬಲದಿಂದ ಶರೀರವನ್ನು, ಧರಿಸಿದ ಬಟ್ಟೆಯಂತೆ ತ್ಯಾಗ ಮಾಡಿ ಪರಮಾತ್ಮನ ಪಾದವನ್ನು ಸೇರಿದ. ಶ್ರೀರಾಮನ ಪೂರ್ವಜನಾದ ಈ ರಘುವಂಶಿಯು ಕಾಳಿದಾಸನು ಹೇಳುವ "ಯೋಗೇನಾ೦ತೇ ತನುತ್ಯಜಾಮ್ " ಎನ್ನುವಂತೆ, ಯೋಗಬಲದಿಂದಲೇ ತನ್ನ ಶರೀರವನ್ನು ಕಳಚಿ ಹಾಕಿದ. 

ಪ್ರತಿಯೊಂದು ಜೀವಿಯಲ್ಲಿಯೂ ಮೃತ್ಯುಭಯ ಸಹಜ. ಎಂದೋ ಘಟಿಸುವುದಕ್ಕೆ ಹೆದರುವ ನಾವು, ಇನ್ನು ಒಂದು ಗಂಟೆ ಕಾಲದಲ್ಲಿ ಮೃತ್ಯು ಕಾದಿದೆ ಎಂದು ತಿಳಿದರೆ?!  "ಹೆಂಡತಿ ಮಕ್ಕಳನ್ನು ಒಮ್ಮೆಯಾದರೂ ನೋಡಬೇಕು", "ಬಂಧು-ಬಾಂಧವರನ್ನು ಸಂಧಿಸಬೇಕು",  "ಇಷ್ಟು ದಿನ ಏನು ಸಾಧಿಸಿದೆ?" ಮುಂತಾದ  ಆಲೋಚನೆಗಳು ಮನಸ್ಸಿನಲ್ಲಿ ಮೂಡುವುದಲ್ಲವೇ?. ಏತನ್ಮಧ್ಯೆ ಯೋಗಸಾಧನೆ, ಸಮಾಧಿಗಳೆಂತು?

ತತ್ವಾತ್ಮಕವಾಗಿ ಗಮನಿಸುವುದಾದರೆ, ನಮ್ಮಲ್ಲಿ ಶರೀರ, ಇಂದ್ರಿಯ, ಮನೋಬುದ್ಧಿಗಳ ಸಹಜ ವಿಕಾಸಾಭಿವೃದ್ಧಿ ಮತ್ತು ಒಳತತ್ವ ದರ್ಶನಕ್ಕೆ ಸಹಾಯಕವಾದ ಶಕ್ತಿಗಳೇ ದೈವೀಶಕ್ತಿಗಳು. ಅಲ್ಲದೆ, ಅರಿಷಡ್ವರ್ಗದೆಡೆಗೆ ಸೆಳೆಯುವ ಶಕ್ತಿಗಳು ಆಸುರೀ ಶಕ್ತಿಗಳು. ಇಂದ್ರಿಯ ಭೋಗ ಮತ್ತು ಒಳತತ್ವ ದರ್ಶನಕ್ಕೆ ಅಡಚಣೆಯಿಲ್ಲದೆ, ವ್ಯವಹಾರ ನಿರ್ವಹಣೆಯೇ ಅಂತರಂಗದ ದೇವಾಸುರ ಯುದ್ಧ. ಇದರಲ್ಲಿ ದೇವತೆಗಳ ಜಯ ಸಾಧಿಸಿದವರಿಗೆ ಕೊನೆಗಾಲದಲ್ಲಿ ಸಮಸ್ಥಿತಿಯುಂಟು. ಸಂಯಮವುಂಟು.

ಶರೀರವೇ ನಮ್ಮ ಮನೆ. ಬ್ರಹ್ಮದಂಡವೇ ಮೂಲ ನೆಲೆ. ಅದರೊಳಗೆ ಪ್ರವೇಶ ಮಾಡಿ ಯೋಗದಿಂದ ಶರೀರ ತ್ಯಾಗ ಮಾಡಿದರೆ   "ಯೋಗೇನಾ೦ತೇ ತನುತ್ಯಜಾಮ್".  ಇದು ಆಗಬೇಕಾದರೆ,  ಬಾಲ್ಯದಲ್ಲಿ ಧಾತುಗತವಾಗುವಂತೆ ವಿದ್ಯೆಯ ಅಧ್ಯಯನವಾಗಿ, ಯೌವನದಲ್ಲಿ ಧರ್ಮದಿಂದ ಕೂಡಿದ ಅರ್ಥ-ಕಾಮಗಳನ್ನು ಅನುಭವಿಸಬೇಕು. ಜೀವನದ  ಗಾಡಿ ಓಡಿಸುವಾಗ ಧರ್ಮವೆಂಬ ನಿಯಂತ್ರಣವಿಲ್ಲದಿದ್ದರೆ ಅಪಘಾತವಾಗುವುದು  ಸರ್ವೇ ಸಾಮಾನ್ಯ . ವಾರ್ಧಕ್ಯದಲ್ಲಿ ಒಳತತ್ವ ಒಂದೇ ಸತ್ಯ ನಿತ್ಯ ಎಂದು ತಿಳಿದು, ಕೊನೆಯಲ್ಲಿ ಶರೀರ ಕವಚ ಸ್ವೇಚ್ಛೆಯಿಂದ ತೊರೆದವರೇ ಧೀರರು. ಖಟ್ವಾ೦ಗ,  ದದೀಚಿ ಮಹರ್ಷಿಗಳು ಮತ್ತು ಭೀಷ್ಮಾಚಾರ್ಯರಂತಹ ಧೀರರ ಹೆಜ್ಜೆಯಲ್ಲಿ ನಾವೂ ಬಾಳುವಂತಾಗಲಿ ಎಂದು ಆಶಿಸೋಣ.

ಸೂಚನೆ: 23/09/2020 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ದಲ್ಲಿ ಪ್ರಕಟವಾಗಿದೆ.  

Thursday, September 3, 2020

ಸಂಪ್ರದಾಯದ ಹಿನ್ನೆಲೆ (Sampradayada Hinnele)

ಲೇಖಕರು: ಸುಮುಖ ಹೆಬ್ಬಾರ್
(ಪ್ರತಿಕ್ರಿಯಿಸಿರಿ : lekhana@ayvm.in)



 

ಒಮ್ಮೆ ಶಿಕ್ಷಕರೊಬ್ಬರು "ಸತ್ಯಂ ವದ" ಎಂಬುದಾಗಿ ಕಾಪಿ ಬರೆಯಲು ಮೊದಲ ಸಾಲನ್ನು ತಿದ್ದಿಕೊಟ್ಟು ವಿದ್ಯಾರ್ಥಿಗೆ ಅದನ್ನು ಕೆಳಗಿನ ಸಾಲುಗಳಲ್ಲಿ ಅನುಕರಿಸುವಂತೆ ಆದೇಶಿಸಿದರು. ವಿದ್ಯಾರ್ಥಿಯು  ಮನೆಗೆ ಬಂದು, ಕಾಪಿ ಬರೆಯಲು ಶುರು ಮಾಡಿದ. ಮೊದಲ ಸಾಲನ್ನು ಶಿಕ್ಷಕರು ತಿದ್ದಿಕೊಟ್ಟಿದ್ದನ್ನು ನೋಡುತ್ತಾ ಬರೆದ. ಮುಂದಿನ ಸಾಲುಗಳನ್ನು ಬರೆಯುವಾಗ ಶಿಕ್ಷಕರು ತಿದ್ದಿಕೊಟ್ಟಿದ್ದನ್ನು ನೋಡದೆ, ತಾನು ಹಿಂದೆ ಬರೆದ ಸಾಲುಗಳನ್ನು ನೋಡುತ್ತಾ ಬರೆಯಲು ಶುರು ಮಾಡಿದ. ಹೀಗೆ ಅರ್ಧ ಬರೆದು, ಪುಸ್ತಕ ಮುಚ್ಚಿಟ್ಟು, ಬೇರೆ ಕೆಲಸ ಮಾಡಲು ಹೊರಟ. ಮುಚ್ಚಿಡುವಾಗ, ಒಂದು ನೊಣ, ಪುಸ್ತಕದ ನಡುವೆ ಸೇರಿ ಸತ್ತುಹೋಯಿತು. ಮತ್ತೆ ವಿದ್ಯಾರ್ಥಿಯು ಬಂದು ಪುಸ್ತಕ ತೆರೆಯುವಾಗ ನೊಣ ಸತ್ತಿದ್ದು, ತಾನು ಬರೆದ ಕೊನೆಯ ಸಾಲಿನಲ್ಲಿ "ಸತ್ಯಂ ವಧ" ಎಂಬುದಾಗಿ ತೋರುವಂತೆ ಮಾಡಿತ್ತು. ವಿದ್ಯಾರ್ಥಿಯು ಹಿಂದಿನ ಸಾಲನ್ನು ನೋಡಿ ಬರೆಯುವ ಪ್ರವೃತ್ತಿಯವನಾದ್ದರಿಂದ,  ಮುಂದೆ "ಸತ್ಯಂ ವಧ" ಎಂಬುದಾಗಿ ಕೊನೆಯವರೆಗೂ ಬರೆದ. "ಸತ್ಯವನ್ನು ಹೇಳು" ಎಂಬ ಮಾತು, "ಸತ್ಯವನ್ನು ಕೊಲ್ಲು" ಎಂಬುದಾಗಿ ರೂಪಾಂತರ ಹೊಂದಿಬಿಟ್ಟಿತ್ತು.

ಶ್ರೀರಂಗಮಹಾಗುರುಗಳು ಈ ಕಥೆಯನ್ನು ಹೇಳುತ್ತಾ,  ನಮ್ಮ ಸಂಪ್ರದಾಯಗಳು ಹೀಗೆ ಕಾಲಕ್ರಮದಲ್ಲಿ ಸತ್ಯಕ್ಕೆ ಸಲ್ಲದ ಬದಲಾವಣೆ ಹೊಂದಿದವು ಎಂದು ವಿವರಿಸುತ್ತಿದ್ದರು. ನಮ್ಮ ಮಹರ್ಷಿಗಳು ಅತಿ ದುರ್ಲಭವಾದ ಶಾಶ್ವತ ಸಂತೋಷವನ್ನು ಅಂತರಂಗದಲ್ಲಿ ಸಾಕ್ಷಾತ್ಕಾರ ಮಾಡಿಕೊಂಡು, ಅದನ್ನು ನಾವು ಅನುಭವಿಸುವಂತೆ ಮಾಡಲೋಸುಗ, ಸಂಪ್ರದಾಯಗಳ ರೂಪದಲ್ಲಿ ಕೆಲವು ಆಚರಣೆಗಳನ್ನು ತಂದರು. ಸಂಪ್ರದಾಯವೆಂದರೆ  ಆ ಪದವೇ ಹೇಳುವಂತೆ "ಚೆನ್ನಾಗಿ ಕೊಡಲ್ಪಟ್ಟದ್ದು". ಅಂದರೆ ಮಹರ್ಷಿಗಳು ಅಂತ:ಸತ್ಯವನ್ನು ಅರಿತವರಾಗಿ, ಒಂದು ಮನೋಧರ್ಮದಿಂದ (ಸ್ಪಿರಿಟ್) ಕೊಟ್ಟಿದ್ದಾರೆ. ಅದು ಸಂತೋಷದ ಬಳಿ ಒಯ್ಯುವ ಮಾರ್ಗವೂ ಆಗಿತ್ತು. ನಾವು ಆಚರಿಸುವ ಹಬ್ಬ-ಹರಿದಿನಗಳು, ನಡೆ-ನುಡಿ, ಆಚಾರ-ವಿಚಾರ, ಪೂಜೆ-ಪುರಸ್ಕಾರಗಳು, ವಿದ್ಯೆ ಕಲೆಗಳೆಲ್ಲವೂ ಸಂಪ್ರದಾಯವೆಂಬ ನೆಲೆಗಟ್ಟಿನಲ್ಲಿ ಮಹರ್ಷಿಗಳು ತಂದಿದ್ದಾರೆ. ಮಹರ್ಷಿಗಳ ಮನಸ್ಸನ್ನು ಅರ್ಥ ಮಾಡಿಕೊಂಡು, ಅವರ ಮನೋಧರ್ಮವನ್ನರಿತು ಅವರು ಹೇಳಿದಂತೆಯೇ ಆಚರಿಸಿದ್ದರೆ, ಇಂದಿಗೂ ಅದೇ ಅಂತ:ಸುಖವನ್ನು ನೀಡುತ್ತಿತ್ತು.  ಆದರೆ ಕಾಪಿ ಬರೆಯುವಾಗ, ತಾನು ಬರೆದ ಹಿಂದಿನ ಸಾಲು ನೋಡಿ ಬರೆದಂತೆ, ನಾವು ನಮ್ಮ ಹಿಂದಿನ ತಲೆಮಾರನ್ನು ಅನುಕರಿಸಿದ್ದೇವೆ. ಅವರು ಕರ್ಮಾಚರಣೆಯಲ್ಲಿ ವ್ಯತ್ಯಾಸ ಮಾಡಿದ್ದರೆ, ಅದನ್ನೂ ಹಾಗೆಯೇ ನಾವೂ ಅನುಸರಿಸುತ್ತಿದ್ದೇವೆ. ಒಬ್ಬ ಗೃಹಸ್ಥನ ಮನೆಯಲ್ಲಿ ತುಂಟ ಬೆಕ್ಕು ಇತ್ತು. ಶ್ರಾದ್ಧದ ಸಂದರ್ಭದಲ್ಲಿ ಬೆಕ್ಕಿನಿಂದ ತೊಂದರೆಯಾಗುತ್ತದೆಯೆಂದು, ಬೆಕ್ಕನ್ನು ಬುಟ್ಟಿಯಲ್ಲಿ ಮುಚ್ಚಿಡುತ್ತಿದ್ದನಂತೆ. ಮುಂದೆ, ಅವನ ಮಕ್ಕಳು ಶ್ರಾದ್ಧದಲ್ಲಿ ಒಂದು ಬೆಕ್ಕನ್ನು ಹಿಡಿದು ತಂದು, ಬುಟ್ಟಿಯಲ್ಲಿ ಮುಚ್ಚಿಟ್ಟು ಶ್ರಾದ್ಧ ಕಾರ್ಯ ಮಾಡಿದರಂತೆ. ಹೀಗೆ ಸಂಪ್ರದಾಯದಲ್ಲಿ ಕೆಲವು ಅನವಶ್ಯಕ  ಕರ್ಮಗಳು ಸೇರಿಕೊಳ್ಳುವ ಸಂಭವವಿರುತ್ತೆ. 

ಕರ್ಮಗಳನ್ನು ಮರ್ಮವರಿತು ಆಚರಿಸಬೇಕು ಎಂಬುದು ಶ್ರೀರಂಗಮಹಾಗುರುಗಳ ಸ್ಪಷ್ಟ ಅಭಿಪ್ರಾಯ. ಅವರ ಮಾತಿನಂತೆ ಸಂಪ್ರದಾಯಗಳ ಮರ್ಮ ಮತ್ತು ಋಷಿಗಳ ಮನೋಧರ್ಮ, ನಮ್ಮ ಮನಸ್ಸಿಗೆ ಬರುವಂತಾಗಲಿ ಎಂದು ಆಶಿಸೋಣ.

ಸೂಚನೆ: 03/09/2020 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ದಲ್ಲಿ ಪ್ರಕಟವಾಗಿದೆ. 

Wednesday, July 15, 2020

ಆತ್ಮ ಸಾಕ್ಷಿಯ ಆಶಯ ( Athma Sakshiya Ashaya )

ಲೇಖಕರು: ಸುಮುಖ ಹೆಬ್ಬಾರ್
(ಪ್ರತಿಕ್ರಿಯಿಸಿರಿ lekhana@ayvm.in)


ಅದೊಂದು ಬಗೆಹರಿಯದ ವ್ಯಾಜ್ಯ. ಕೋರ್ಟಿನಲ್ಲಿ ವಾದ-ಪ್ರತಿವಾದಗಳು ಇನ್ನೇನು ಆರಂಭವಾಗುವ ಸಮಯ. ಅಷ್ಟರಲ್ಲಿ ವ್ಯಾಜ್ಯದ ಪ್ರಮುಖ ಸಾಕ್ಷಿಯ ಆಗಮನವಾಯಿತು. ಸತ್ಯ ಹೇಳಬೇಕಾದದ್ದು ಅವನ ಕರ್ತವ್ಯವಾಗಿತ್ತು. ಸಾಕ್ಷಿಯು ಕಟಕಟೆಯಲ್ಲಿ ಬಂದು ನಿಂತ. ಆದರೆ ಆರೋಪಿಯು ಸಾಕಷ್ಟು ಬೆದರಿಕೆಯನ್ನು ಹಾಕಿದ್ದ. ಹಾಗಾಗಿ ಮುಂದೆ ಸಾಕ್ಷಿಯ ಬಳಿ ಪ್ರಶ್ನೆಗಳನ್ನು ಕೇಳಿದಾಗ ಆರೋಪಿಯ ಬೆದರಿಕೆಯ ಪ್ರಭಾವಕ್ಕೊಳಗಾಗಿ ಘಟನೆಯನ್ನು ತಿರುಚಿ, ಆರೋಪಿಯ ಪರವಾಗಿಯೇ ಮಾತನಾಡಿದ. ಆರೋಪಿಯು ಶಿಕ್ಷೆಯಿಂದ ಬಚಾವಾಗುವ ಹಂತ ತಲುಪಿತ್ತು.  

ಆದರೆ ನ್ಯಾಯಾಧೀಶನಿಗೆ ಸಾಕ್ಷಿಯ ಮಾತಿನ ಮೇಲೆ ನಂಬಿಕೆ ಬರಲಿಲ್ಲ. ಸಾಕ್ಷಿಯ ಮನಸ್ಸಿಗೂ ಮಾತಿಗೂ ತಾಳೆ ಬರದಿದ್ದುದು ಸ್ಪಷ್ಟವಾಗಿತ್ತು. ಸಾಕ್ಷಿಯನ್ನು ಪ್ರತ್ಯೇಕವಾಗಿ ಒಂದು ಕೋಣೆಗೆ ಕರೆದುಕೊಂಡು ಹೋಗಿ ಸಾಕ್ಷಿಗೆ - "ನಿನಗೆ ಯಾರಿಂದಲೂ ತೊಂದರೆ ಆಗದಂತೆ ನೋಡಿಕೊಳ್ಳುತ್ತೇನೆ" ಎಂಬ ಧೈರ್ಯವಿತ್ತ. ಎಲ್ಲ ಮಾನಸಿಕ ಸಂಕೋಲೆಗಳಿಂದ ಸಾಕ್ಷಿಯನ್ನು ಬಿಡಿಸಿದ. ಸತ್ಯವನ್ನು ಹೇಳುವಂತೆ ವಿಜ್ಞಾಪಿಸಿಕೊಂಡ. ಆಗ ಸಾಕ್ಷಿಯು ಯಾವ ಪ್ರಲೋಭನೆ, ಬೆದರಿಕೆಗಳಿಗೂ ವಶನಾಗದೇ ನಡೆದ ಘಟನೆ ಹೇಳಿ, ಆರೋಪದ  ಪುರಾವೆಯನ್ನೂ ನೀಡಿ, ನ್ಯಾಯ ತೀರ್ಮಾನಕ್ಕೆ ಸಹಕರಿಸಿದ. ಆರೋಪಿಗೂ ಶಿಕ್ಷೆಯಾಯಿತು.  

ಆ ಸಾಕ್ಷಿಯ ಜಾಗದಲ್ಲಿ, ನಮ್ಮ ಆತ್ಮಸಾಕ್ಷಿಯನ್ನು ಇಟ್ಟುಕೊಂಡು ಅವಲೋಕನ ಮಾಡಬೇಕಾದ ಕಥೆಯಿದು. ಭಗವಂತನ ಮಡಿಲಲ್ಲಿ ಆಟವಾಡುತ್ತಿದ್ದ ನಾವು ಈ ಪ್ರಕೃತಿಯಲ್ಲಿ ಇಳಿದು, ಪ್ರಕೃತಿಯ ಮಾಯಾಜಾಲಕ್ಕೆ ಸಿಕ್ಕಿಹಾಕಿಕೊಂಡಿದ್ದೇವೆ. ನಮ್ಮ ಆಲೋಚನೆಗಳನ್ನೂ,  ಪ್ರವೃತ್ತಿಗಳನ್ನೂ, ಈ ಪ್ರಕೃತಿಯೇ ಆಳುತ್ತಿದೆ. ಅದರ ಪ್ರಭಾವಕ್ಕೊಳಗಾದ ನಮ್ಮ ಮನಸ್ಸುಗಳನ್ನು ನಮ್ಮ ಪೂರ್ವ ಸಂಸ್ಕಾರಕ್ಕನುಗುಣವಾಗಿ ಹರಿಯಬಿಟ್ಟಿದ್ದೇವೆ. ಕಾಮ-ಕ್ರೋಧಾದಿ ಅರಿಷಡ್ವರ್ಗಗಳು ಮನಸ್ಸಿನಲ್ಲಿ ಅಲೆಯನ್ನು ಎಬ್ಬಿಸುತ್ತಿವೆ. ಹಾಗಾಗಿ ಪ್ರತಿಯೊಬ್ಬ ಮನುಷ್ಯನೂ ಅವುಗಳ ಪ್ರಭಾವಕ್ಕೊಳಗಾಗಿ ನನಗೆ ಆಸ್ತಿ ಬೇಕು, ಹಣ ಬೇಕು, ಕೀರ್ತಿ ಬೇಕು ಇತ್ಯಾದಿ ತಮ್ಮ ಅಪೇಕ್ಷೆಗಳನ್ನು ಬಿಚ್ಚಿಡುವುದನ್ನು ಕಾಣುತ್ತೇವೆ. ಆದರೆ ಇವೆಲ್ಲ ಆಸೆಗಳು ಆತ್ಮಮೂಲವಾಗಿ ಬಂದಿದೆಯೇ? ಅಥವಾ ಪ್ರಕೃತಿಯ ಮಾಯೆಯಿಂದ ಪ್ರೇರಿತವಾಗಿದೆಯೇ? ಎಂಬುದನ್ನು ಅರಿಯಲಾಗುತ್ತಿಲ್ಲ. ಆ ನ್ಯಾಯಾಧೀಶನಂತೆ ಜ್ಞಾನಿಯಾದ ಗುರುವೊಬ್ಬನು ಇವೆಲ್ಲವುಗಳಿಂದ ನಮ್ಮನ್ನು ಬಿಡಿಸಬಲ್ಲನಾದರೆ ನಾವೂ ಆತ್ಮದ ಕೂಗಿಗೆ ಓಗೊಡ ಬಹುದೇನೋ!

ಶ್ರೀರಂಗ ಮಹಾಗುರುಗಳ ದಿಗ್ದರ್ಶನ ಇಲ್ಲಿ ಸ್ಮರಣೀಯ. " ಕಣ್ಣಿಗೆ ದೃಶ್ಯ, ಕಿವಿಗೆ ಶಬ್ದ , ನಾಲಗೆಗೆ ರುಚಿ ಹೀಗೆ ಎಲ್ಲಾ ಇಂದ್ರಿಯಗಳಿಗೂ ಒಂದೊಂದು ವಿಷಯವಿದೆಯೋ, ಹಾಗೆಯೇ ಜೀವಕ್ಕೂ ಒಂದು ವಿಷಯವಿದೆ. ಬಯಕೆಯಿದೆ. ಪ್ರಕೃತಿಯಲ್ಲಿ ಸಿಕ್ಕಿಹಾಕಿಕೊಂಡಿರುವುದರಿಂದ ಆ ಬಯಕೆಯ ಕೂಗು ನಮ್ಮವರೆಗೂ ತಲುಪುತ್ತಿಲ್ಲ. ಜೀವಕ್ಕೆ ದೇವನೇ ವಿಷಯ. ಈ ಪ್ರಕೃತಿಯ ಸಂಕೋಲೆಗಳಿಂದ ಬಿಡಿಸಿಕೊಂಡಾಗ, ಜೀವದ ಕೂಗು "ನಾನು ಭಗವಂತನಿಂದ ಬಂದಿದ್ದೇನೆ. ಮತ್ತೆ ಅಲ್ಲಿಗೆ ಹೋಗಿ ತಲುಪಬೇಕು" ಎಂಬುದಾಗಿ ಕೇಳುತ್ತಲೇ ಇದೆ, ಎಂದು  ಅನುಭವದಿಂದ ವಿವರಿಸುತ್ತಿದ್ದರು. ಅಂತಹ ಜೀವದ ಕೂಗಿಗೆ ಓಗೊಟ್ಟು, ನಮ್ಮ ಜೀವನ ನಡೆಸುವಂತೆ ನಮ್ಮ ಇಂದ್ರಿಯ ಮನೋಬುದ್ಧಿಗಳು ಅಣಿಯಾಗಲಿ ಎಂದು ಆಶಿಸೋಣ. ಅದಕ್ಕಾಗಿ ಜ್ಞಾನಿಗಳು ನಿರ್ದೇಶಿಸಿದ ಅಂತಹ ಸಂಸ್ಕಾರಗಳನ್ನು ನಮ್ಮದಾಗಿಸಿಕೊಳ್ಳೋಣ.   

ಸೂಚನೆ: 8/06/2020 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ದಲ್ಲಿ ಪ್ರಕಟವಾಗಿದೆ.   

Thursday, July 9, 2020

ಗುರುಭಕ್ತಿಯ ಪಾಠ (Gurubhaktiya Patha)

ಲೇಖಕರು: ಸುಮುಖ ಹೆಬ್ಬಾರ್
(ಪ್ರತಿಕ್ರಿಯಿಸಿರಿ lekhana@ayvm.in)

ಶ್ರೀ ಶಂಕರಭಗವತ್ಪಾದರ ಶಿಷ್ಯವಾತ್ಸಲ್ಯಕ್ಕೆ ಕೈಗನ್ನಡಿಯಂತಿರುವ ಒಂದು ಪ್ರಸಂಗ. ಆನಂದಗಿರಿ, ಅವರ ನೆಚ್ಚಿನ ಶಿಷ್ಯರಲ್ಲೊಬ್ಬರು. ಇವರಿಗೆ ಗುರುಗಳು ಮಾಡುತ್ತಿದ್ದ ವೇದಾಂತ ಪಾಠದಲ್ಲಿ ಅಷ್ಟಾಗಿ ಆಸಕ್ತಿ ಇರುವಂತೆ ಕಾಣುತ್ತಿರಲಿಲ್ಲ. ಪಾಠವನ್ನು ಮಾಡುವಾಗ ಕಲ್ಲಿನಂತೆ ಸುಮ್ಮನೆ ಇರುತ್ತಿದ್ದರು. ವಿಷಯಗಳನ್ನು ಪ್ರಶ್ನಿಸಿ ತಿಳಿದುಕೊಳ್ಳುವುದಾಗಲಿ ಅಥವಾ ಜಿಜ್ಞಾಸೆ ಪರಿಹಾರಕ್ಕಾಗಿ ಶ್ರಮಿಸುವುದಾಗಲಿ ಇವರಲ್ಲಿ ಕಾಣುತ್ತಿರಲಿಲ್ಲ.  ಆದರೆ ಸದಾಕಾಲವೂ ಗುರುವಿನ  ಸೇವೆಯಲ್ಲಿ ನಿರತರಾಗಿದ್ದರು. ಗುರು-ಶಿಷ್ಯರ ಸಂಬಂಧ ಹೇಗಿರಬೇಕು? ಗುರುವಿನಲ್ಲಿ ಯಾವ ರೀತಿ ವಿನೀತನಾಗಿ ಇರಬೇಕು ಎಂಬುದಕ್ಕೆ ಇವರು ಉತ್ತಮ ನಿದರ್ಶನ .

 ಇವರ ದಿನಚರಿಯಲ್ಲಿ ಗುರುಸೇವೆಯು ಪ್ರಧಾನ ಕರ್ತವ್ಯವಾಗಿತ್ತು . ತಾನೇ  ಮೊದಲು ಸ್ನಾನ ಮಾಡಿ, ನಂತರ ಗುರುಗಳ ಕಮಂಡಲ, ವಸ್ತ್ರಾದಿಗಳನ್ನು ತೊಳೆಯುವುದು, ಪಾಠ ಪ್ರವಚನಕ್ಕೆ ಮೃದುವಾದ ಆಸನ ಸಿದ್ಧಪಡಿಸುವುದು, ದಂತಧಾವನಕಾಷ್ಠ, ವಸ್ತ್ರಾದಿಗಳನ್ನು ಸಿದ್ಧಪಡಿಸುವುದು, ದಿನವೂ ಪಾದ ಸೇವೆ ಮಾಡುವುದು ಇವರ ಕಾಯಕವಾಗಿತ್ತು . ಗುರುವಿನ ಮಾತನ್ನು ಎಂದೂ ಉಪೇಕ್ಷಿಸಿದೆ, ಅತ್ಯಂತ ವಿನಯದಿಂದ ಕೇಳುವುದು. ಹೋದ ಕಡೆ ಅನುಸರಿಸುವುದು, ಹಿತವಾದ ಕೆಲಸವನ್ನು ಮಾಡುವುದು ಹೀಗೆ ಬಗೆ ಬಗೆಯಾಗಿ ಗುರು ಸೇವಾ ಕೈಂಕರ್ಯವನ್ನು ನೆರವೇರಿಸುತ್ತಿದ್ದರು.

ಒಂದು ದಿನ, ಶ್ರೀ ಕ್ಷೇತ್ರ ಶೃಂಗೇರಿಯಲ್ಲಿ ಶಂಕರಭಗವತ್ಪಾದರು ಶಿಷ್ಯರಿಗೆ ಪಾಠವನ್ನು ಅನುಗ್ರಹಿಸಲು ಅಣಿಯಾಗಿದ್ದರು. ಗಿರಿಯು ಆ ವೇಳೆಗೆ ಗುರುಗಳ ವಸ್ತ್ರ ತೊಳೆಯಲು ನದಿಯ ಕಡೆಗೆ ಹೋಗಿದ್ದರು. ಅಷ್ಟರಲ್ಲಿ ಉಳಿದ ಶಿಷ್ಯರು ಶಾಂತಿ ಪಾಠವನ್ನು ಪ್ರಾರಂಭಿಸಿ ಎಂದು ಬಿನ್ನವಿಸಿದರು. ಭಗವತ್ಪಾದರು- "ಸ್ವಲ್ಪ ನಿಲ್ಲಿ, ಗಿರಿಯು ಕ್ಷಣಮಾತ್ರದಲ್ಲಿ ಬರಲಿದ್ದಾನೆ" ಎಂದರು. ಗುರುಗಳ ಮಾತನ್ನು ಕೇಳಿ-  " ಒಂದು ದಿನವೂ ಗಿರಿಯು ಪಾಠವನ್ನು ಒಪ್ಪಿಸಿಲ್ಲ. ಪ್ರಶ್ನೆಗಳನ್ನು ಕೇಳಿ ಸಂದೇಹ ಪರಿಹರಿಸಿಕೊಂಡಿಲ್ಲ, ಶಾಸ್ತ್ರಜ್ಞಾನದಲ್ಲಿ ಮಂದಬುದ್ಧಿಯವನಾದ , ಇವನನ್ನು ಕಾಯುವುದೇಕೆ ?" ಎಂದು ಶಿಷ್ಯರು ವಿಜ್ಞಾಪಿಸಿಕೊಂಡರು. ತಮ್ಮ ಸಹಪಾಠಿ ಗಿರಿಯ ಬಗೆಗಿನ ತಾತ್ಸಾರ ಭಾವ , ಮತ್ತು ತಮ್ಮ ಬಗ್ಗೆ  ಅಹಂಕಾರ ಇವು ಶಂಕರರ ಗಮನಕ್ಕೆ ಬಂದಿತು. ಇವರೆಲ್ಲರಿಗೂ ಗಿರಿಯ ಭಕ್ತಿಯ ಪರಾಕಾಷ್ಠೆಯನ್ನು ಪರಿಚಯಿಸಬೇಕೆಂದು ನಿಶ್ಚಯಿಸಿದರು.

ಶಂಕರರು ಕುಳಿತಲ್ಲಿಂದಲೇ ಗಿರಿಯನ್ನು ಅನುಗ್ರಹಿಸಿದರು. ಗಿರಿಯು ಗುರುಗಳ ವಸ್ತ್ರವನ್ನು ತೊಳೆದು ನದಿಯ ಸೋಪಾನವನ್ನು ಹತ್ತಿ ಬರುತ್ತಾ  ಒಂದು ಆಶುಕವಿತೆಯನ್ನು ರಚಿಸಿದರು. "ವಿದಿತಾಖಿಲ ಶಾಸ್ತ್ರ ಸುಧಾ ಜಲಧೇ ಮಹಿತೋಪನಿಷತ್ ಕಥಿತಾರ್ಥನಿಧೇ, ಹೃದಯೇ ಕಲಯೇ ವಿಮಲಂ ಚರಣಂ,ಭವ ಶಂಕರ ದೇಶಿಕ ಮೇ ಶರಣಂ" ಎಂದು ಆರಂಭವಾಗುವ  ಅದು ಶ್ರೇಷ್ಠವಾದ ಗುರುಸ್ತುತಿಯೂ ಆಗಿತ್ತಲ್ಲದೇ ಉಪನಿಷತ್ತುಗಳ ಸಾರವನ್ನು ಧರಿಸಿದ ಎಂಟು ಶ್ಲೋಕಗಳಿಂದ ಕೂಡಿದ ಸುಂದರವಾದ ಸ್ತೋತ್ರಮಾಲೆಯಾಗಿತ್ತು. ತೋಟಕ ವೃತ್ತದಲ್ಲಿದ್ದು, ಮುಂದೆ "ತೋಟಕಾಷ್ಟಕ" ಎಂಬುದಾಗಿ ಪ್ರಸಿದ್ಧವಾಯಿತು. ಗಿರಿಯ ನಾಮಧೇಯ ತೋಟಕಾಚಾರ್ಯ ಎಂದಾಯಿತು.

ಗುರುಭಕ್ತಿಯ ಪರಮಫಲವಾಗಿ ಎಲ್ಲ ವಿದ್ಯೆಗಳೂ ತೋಟಕಾಚಾರ್ಯರಿಗೆ ಒಲಿದವು. ಇತರ ಶಿಷ್ಯರಿಗೆ ಸರ್ವಥಾ ಅಹಂಕಾರ ವರ್ಜ್ಯವೆಂಬ ಪಾಠವಾಗಿ ಪಶ್ಚಾತಾಪವೂ ಆಯಿತು. ಶಂಕರ ಭಗವತ್ಪಾದರ ಜೀವನದ ಈ ಘಟನೆ ನಮ್ಮೆಲ್ಲರಿಗೂ ದಾರಿದೀಪವಾಗಲಿ ಎಂದು ಆಶಿಸೋಣ. 

ಸೂಚನೆ:  9/7/2020 ರಂದು ಈ ಲೇಖನವು ವಿಶ್ವವಾಣಿಯ ಗುರುಪುರವಾಣಿ ಯಲ್ಲಿ ಪ್ರಕಟವಾಗಿದೆ.  

Monday, June 8, 2020

ಯುದ್ಧದಲ್ಲಿ ಕಾರುಣ್ಯಕ್ಕೆ ಎಡೆಯಿದೆಯೇ? (Yuddhadalli Karunyakke Edeyideye?)

ಲೇಖಕರು : ಸುಮುಖ ಹೆಬ್ಬಾರ್
(ಪ್ರತಿಕ್ರಿಯಿಸಿರಿ lekhana@ayvm.in)
  

ಯುದ್ಧದಲ್ಲಿ ಇನ್ನೇನು ಶತ್ರು ಸಂಹಾರ ಮಾಡಿಬಿಡುವ ಹಂತ. ವೀರಯೋಧನು "ಇದೋ ನೋಡು! ನಾನು ಹೂಡಿರುವ ಬಾಣ ನಿನ್ನನ್ನು ಕೊಲ್ಲುತ್ತದೆ. ನಿನ್ನ ಇಷ್ಟ ದೇವತೆಯನ್ನು ಪ್ರಾರ್ಥಿಸಿಕೋ" ಎಂಬುದಾಗಿ  ನುಡಿಯುತ್ತಾನೆ. ಆಡಿದ ಮಾತಿನ೦ತೆಯೇ ಬಿಟ್ಟ ಬಾಣವು, ಶತ್ರುವನ್ನು ಮೃತ್ಯುಕೂಪಕ್ಕೆ ತಳ್ಳುತ್ತದೆ. ವೀರನು ಹೇಳುವ ಈ ಮಾತುಗಳು, ತನ್ನ ಸಾಮರ್ಥ್ಯದ ಮೇಲಿನ ಅಪಾರ ನಂಬಿಕೆಯೋ ಅಥವಾ ಅಹಂಕಾರದ ಮಾತುಗಳೋ ಎನಿಸುವಂತಿರುತ್ತದೆ. ಮಹಾಭಾರತ ಮುಂತಾದ ಮಹಾಕಾವ್ಯಗಳಲ್ಲಿ ಇಂತಹ ಮಾತುಗಳು ಅಲ್ಲಲ್ಲಿ ಕಾಣಸಿಗುತ್ತವೆ.  
      
ಕಾಲಿಗೆ ಒಂದು ಮುಳ್ಳು ಚುಚ್ಚಿದರೆ, ಮುಳ್ಳನ್ನು ತೆಗೆಯುತ್ತೇವೆ. ಗ್ಯಾಂಗ್ರೀನ್ ನಂತಹ ರೋಗ ಕಾಲಿನ ಬೆರಳಿಗೆ ಬಂದರೆ, ಬೆರಳು ತೆಗೆಯುವುದು ಸೂಕ್ತ. ಅದೇ ಇಡೀ ಪಾದ ಮತ್ತು ಪೂರ್ತಿ ಕಾಲಿಗೆ ಹರಡಿದರೆ, ಇಡೀ ದೇಹಕ್ಕೆ ಹರಡದಂತೆ ನಿಯಂತ್ರಿಸಲು ಕಾಲನ್ನು ಕತ್ತರಿಸುವುದು ಜಾಣತನವೆನಿಸಿಕೊಳ್ಳುತ್ತದೆ. ಹಾಗೆಯೇ ಅಧರ್ಮದ ನಡೆ ಚಿಕ್ಕದಾಗಿದ್ದಾಗ ತುಳಿಯದಿದ್ದರೆ, ಅದು ಬೆಳೆದು ಮಾನವನ ತ್ರಿಕರಣಗಳನ್ನೂ ವ್ಯಾಪಿಸಿ ಅಧರ್ಮಿಯನನ್ನಾಗಿ ಮಾಡಿಬಿಡುತ್ತದೆ. ಅಂತಹ ಅಧರ್ಮಿಯು ರಾಜನಾದರೆ ಪ್ರಜೆಗಳ ಗತಿಯೇನು? ಧರ್ಮಕ್ಕೆ ಆ ರಾಜ್ಯದಲ್ಲಿ ಜಾಗವೆಲ್ಲಿ?

ಹಿಂದಿನ ಕಾಲದಲ್ಲಿ ಯುದ್ಧವು ಸಾಮ್ರಾಜ್ಯ ವಿಸ್ತಾರಕ್ಕಾಗಲೀ, ಸಾಮರ್ಥ್ಯ ಪ್ರದರ್ಶನಕ್ಕಾಗಲೀ ಅಥವಾ ಧನಕನಕ ವೃದ್ಧಿಗಾಗಲೀ ಅಷ್ಟೇ ಅಲ್ಲದೆ, ಪ್ರಮುಖವಾಗಿ ಧರ್ಮ ಸಂಸ್ಥಾಪನೆಗಾಗಿ ನಡೆಯುತ್ತಿತ್ತು. ಧರ್ಮಹೀನನ ಅಥವಾ ಅಧರ್ಮಿ ರಾಜನ ಮೇಲೆ ಧರ್ಮಿಷ್ಠನಾದ ರಾಜ, ಯುದ್ಧ ಸಾರುತ್ತಿದ್ದ. ಇಡೀ ದೇಹದಲ್ಲಿ ಅಧರ್ಮವನ್ನೇ ತುಂಬಿಕೊಂಡು, ಲೋಕಕಂಟಕನಾಗಿರುವ ವ್ಯಕ್ತಿಯ, ಪ್ರವೃತ್ತಿಯನ್ನು ತಿದ್ದುವುದು ಬಹಳ ಕಷ್ಟದ ಕೆಲಸ. ತ್ರಿಕರಣಪೂರ್ವಕವಾಗಿ ಕೆಟ್ಟದ್ದನ್ನೇ ಮಾಡುವ ಆಶಯವಿದ್ದರೆ, ಅಂತಹ ಕೆಲಸಗಳಿಂದ ಈ ಜನ್ಮದಲ್ಲಿ, ವಿಷಮವಾದ ಪಾಪಗಳನ್ನು ಕಟ್ಟಿಕೊಳ್ಳುವ ಬದಲು, ಮುಂದಿನ ಜನ್ಮದಲ್ಲಾದರೂ ಉತ್ಕೃಷ್ಟ ಸಂಸ್ಕಾರ ಸಿಕ್ಕಿ, ಉದ್ಧಾರವಾಗಲಿ ಎಂಬುದು ಜ್ಞಾನಿಗಳ ಆಶಯ. "ಮುಳ್ಳುಗಳು, ಶರಣಾಗತರಾಗಿದ್ದೇವೆ. ಪಾದಸೇವೆ ಮಾಡುತ್ತೇವೆಂದರೆ, ಇರಲಿ ಎಂದು ಬಿಡುವುದು ಕಾಲಿಗೆ ಅಪಾಯ. ಆದ್ದರಿಂದ ಧರ್ಮ ಉಳಿಸಲು ಧರ್ಮಕಂಟಕರನ್ನು ಅಳಿಸಲೇಬೇಕು" ಎಂಬುದಾಗಿ ಶ್ರೀರಂಗ ಮಹಾಗುರುಗಳು ಎಚ್ಚರಿಸುತ್ತಿದ್ದರು. ಹಾಗಾಗಿ ಸಂಹಾರ ಅನಿವಾರ್ಯ.

ಪ್ರಾಣ ಹೋಗುವ ಮುನ್ನ ಜೀವ ಏನು ಬಯಸುತ್ತದೋ, ಅದು ಜೀವಿಯ ಮುಂದಿನ ಜನ್ಮದ ಯೋನಿಗೆ ದಾರಿಯಾಗುತ್ತದೆ. ಹಾಗಾಗಿ ಕೊಲ್ಲುವ ಮುನ್ನ, ಶತ್ರುವಿಗೆ "ಈ ಬಾಣದಿಂದ ಹತನಾಗುವೆ" ಎಂಬ ಎಚ್ಚರಿಕೆ ನೀಡಿ, ಇಷ್ಟದೇವರ ಪ್ರಾರ್ಥನೆಗೆ ಅವಕಾಶ ನೀಡುವುದು ವೀರರ ಲಕ್ಷಣ. ಯುದ್ಧದ ನಿಯಮಗಳಲ್ಲೊಂದು. ಹಾಗೆಯೇ ಭಯದಿಂದಿರುವ, ನಿಶಸ್ತ್ರನಾದ ಮತ್ತು ಶರಣಾಗತನಾದ ಶತ್ರುವನ್ನು ಕೊಲ್ಲುವ ಹಾಗಿಲ್ಲ ಎಂಬ ನಿಯಮವೂ, ಇದೇ ಆಶಯದಿಂದ ಕೂಡಿದೆ.  ಬಿಲ್ವಿದ್ಯಾ ಪಾರಂಗತರಿಗೆ, ಯಾವ ಮರ್ಮಸ್ಥಾನಕ್ಕೆ ಹೊಡೆದರೆ, ಜೀವವು ಅನಾಯಾಸವಾಗಿ ಮತ್ತು ಉದ್ಧಾರವಾಗುವಂತೆ ಪ್ರಾಣ ತ್ಯಜಿಸುತ್ತದೆ ಎಂಬ ಅರಿವಿರುತ್ತಿತ್ತು. ಆದ್ದರಿಂದಲೇ ಭೀಷ್ಮಾರ್ಜುನರ ಬಾಣದಿಂದ ಹತರಾಗಬೇಕು, ಎಂಬ ಆಶಯದಿಂದ ಇದ್ದವರನ್ನು ಮಹಾಭಾರತದಲ್ಲಿ ಕಾಣುತ್ತೇವೆ. ಇದು ಭಾರತೀಯ ವಿದ್ಯೆಗಳಲ್ಲೊಂದಾದ ಬಿಲ್ವಿದ್ಯೆಯ ವೈಶಿಷ್ಟ್ಯವೂ ಹೌದು. ಹೀಗಾಗಿ ಹಿಂಸೆಯೇ ಪ್ರಧಾನ ಎಂಬುದಾಗಿ ಮೇಲ್ನೋಟಕ್ಕೆ ಕಂಡರೂ, ಧರ್ಮದ ರಕ್ಷಣೆ ಮತ್ತು ಜೀವಿಯ ಮೇಲಿನ ಕರುಣೆ, ಯುದ್ಧದ ಭಾಗವಾಗಿದೆ ಎಂದು ತಿಳಿದಾಗ ಮಹರ್ಷಿಗಳು ಕೊಟ್ಟ ಯುದ್ಧ ನಿಯಮಗಳು ಮತ್ತು ಧರ್ಮ ರಕ್ಷಣೆಯ ಚಿಂತನೆ ಎಷ್ಟು ಸೊಗಸಾಗಿದೆ ಎನಿಸುತ್ತದಲ್ಲವೇ?  

ಸೂಚನೆ: 8/06/2020 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ದಲ್ಲಿ ಪ್ರಕಟವಾಗಿದೆ.  

Tuesday, April 21, 2020

ಪ್ರತಿನಿಧಿಯ ಪೂಜೆ, ನಿಧಿಯ ಪೂಜೆಯೇ? (Pratinidhiya Pooje Nidhiya Poojeye?)

ಲೇಖಕರು: ಸುಮುಖ ಹೆಬ್ಬಾರ್
(ಪ್ರತಿಕ್ರಿಯಿಸಿರಿ lekhana@ayvm.in)



ನಮ್ಮ ಸಂಸ್ಕೃತಿ, ಆಚಾರ, ಸಂಪ್ರದಾಯಗಳಲ್ಲಿ ಗುರು-ಹಿರಿಯರಿಗೆ, ಪೂಜನೀಯರಿಗೆ ಗೌರವ ನೀಡುವ ಪದ್ಧತಿಯಿದೆ. ತುಂಬಾ ಶ್ರೇಷ್ಠರೆಂದು ಪೂಜಿಸುವ ವಿಷಯವೂ ಇದೆ. ವ್ಯಕ್ತಿಪೂಜೆ ಸರಿಯೇ ಎಂಬುದು ಸಮಾಜದಲ್ಲಿ ಪ್ರಶ್ನಾರ್ಹ ವಿಷಯವೂ ಆಗಿದೆ. ಇದನ್ನು ಶ್ರೀರಂಗ ಮಹಾಗುರುಗಳು ಕೊಡುತ್ತಿದ್ದ ಒಂದು ದೃಷ್ಟಾಂತದ ಮೂಲಕ ಅರ್ಥಮಾಡಿಕೊಳ್ಳಬೇಕಿದೆ.

ಒಬ್ಬ ವ್ಯಕ್ತಿಯ ಆತ್ಮೀಯ ಸಂಬಂಧಿಕರ ಮನೆಯಲ್ಲಿ ಶುಭ ಸಮಾರಂಭ. ಅವರು ಪ್ರೀತಿಯಿಂದ ಮತ್ತು ಒತ್ತಾಯ ಪೂರ್ವಕವಾಗಿ ಆಮಂತ್ರಿಸಿರುತ್ತಾರೆ. ಆದರೆ ಈ ವ್ಯಕ್ತಿಗೆ ಅತ್ಯಂತ ಒತ್ತಡದ ಮತ್ತು ಜವಾಬ್ದಾರಿಯುತವಾದ ಕೆಲಸ. ಹಾಗಾಗಿ ಸಮಾರಂಭಕ್ಕೆ ಹೋಗಲಾಗುತ್ತಿಲ್ಲ. ಹೋಗದಿದ್ದರೆ ಆತ್ಮೀಯರಿಗೆ ಬೇಸರವಾಗುತ್ತದೆ ಎಂಬ ಚಿಂತೆ. ಹಾಗಾಗಿ ತನ್ನ ಮಗನನ್ನು, ತನ್ನ ಪ್ರತಿನಿಧಿಯಾಗಿ ಕಳುಹಿಸಿದ. ಸಮಾರಂಭದಲ್ಲಿ ಸಂಬಂಧಿಕರು ವ್ಯಕ್ತಿಯ ಪ್ರತಿನಿಧಿಯಾಗಿ ಬಂದ ಮಗನನ್ನು ಆತ್ಮೀಯವಾಗಿ ಸ್ವಾಗತಿಸಿದರು. ಸಣ್ಣವನೆಂದು ಪರಿಗಣಿಸದೆ, ಆ ವ್ಯಕ್ತಿಗೆ ಹಾಕುತ್ತಿದ್ದ ಆಸನದಲ್ಲಿಯೇ ಕೂರಿಸಿದರು. ಅಷ್ಟೇ ಗೌರವದಿಂದ ಉಪಚರಿಸಿದರು. ಆ ವ್ಯಕ್ತಿಗೆ ನೀಡಬೇಕಿದ್ದ ಉಡುಗೊರೆಗಳನ್ನೆಲ್ಲಾ, ಇವನಿಗೆ ನೀಡಿದರು. ಕೊನೆಯಲ್ಲಿ ಅಷ್ಟೇ ಪ್ರೀತಿಯಿಂದ ಬೀಳ್ಕೊಟ್ಟರು.

ಎಲ್ಲರ ಜೀವನದಲ್ಲಿಯೂ ನಡೆಯುವ ಸಾಮಾನ್ಯ ಘಟನೆ ಇದು. ಇಲ್ಲಿ ಆಗಮಿಸಿದ ಪ್ರತಿನಿಧಿಗೆ ಎಲ್ಲಾ ರೀತಿಯ ಗೌರವವೂ ದೊರೆಯಿತು. ಹಾಗೆಯೇ ಪೂಜಾ ಸಂಧರ್ಭಗಳಲ್ಲಿ ನಿಧಿಯ ಸ್ಥಾನದಲ್ಲಿ ಭಗವಂತನನ್ನು ನೋಡಬೇಕು. ಯಾರು ಭಗವಂತನನ್ನು ಸಾಕ್ಷಾತ್ಕಾರ ಮಾಡಿಕೊಂಡಿರುತ್ತಾರೋ ಅಂತಹವರು ಪ್ರತಿನಿಧಿಯ ಸ್ಥಾನದಲ್ಲಿ ಪರಿಗಣಿಸಲು ಯೋಗ್ಯರಾದವರಾಗುತ್ತಾರೆ.

ಒಂದು ಕಬ್ಬಿಣದ ತುಂಡು ಕೆಂಡದ ಮಧ್ಯದಲ್ಲಿ ಸೇರಿಕೊಂಡಿದೆ ಎಂದುಕೊಳ್ಳೋಣ. ಬಹಳ ಸಮಯದ ನಂತರ, ಕೆಂಡದ ಸಾಂಗತ್ಯದಿಂದ, ಕಬ್ಬಿಣದ ತುಂಡು, ಕೆಂಡದಂತೆಯೇ ಕಾಣುತ್ತದೆ. ಕೆಂಡದ ಮಧ್ಯದಲ್ಲಿ ಕಬ್ಬಿಣದ ತುಂಡು ಸೇರಿಕೊಂಡಿದೆ ಎಂದು ಗುರುತಿಸಲಾಗದ ಮಟ್ಟಿಗೆ, ಕಬ್ಬಿಣದ ತುಂಡಿನಲ್ಲಿ ಮಾರ್ಪಾಡು ಕಂಡುಬರುತ್ತದೆ. ಭಗವಂತನನ್ನು ಸಾಕ್ಷಾತ್ಕಾರ ಮಾಡಿಕೊಂಡ ಒಬ್ಬ ಜ್ಞಾನಿಯೂ ಹಾಗೆಯೇ ಭಗವದ್ರಸದಲ್ಲಿ ಸದಾ ಕಾಲದಲ್ಲಿಯೂ ಮುಳುಗಿರುತ್ತಾನೆ. ಹಾಗಾಗಿ ಭಗವದ್ರಸವನ್ನು ತನ್ನ ಸಪ್ತ-ಧಾತುಗಳಲ್ಲಿಯೂ, ತ್ರಿಕರಣಗಳಲ್ಲಿಯೂ ತುಂಬಿಕೊಂಡಿರುತ್ತಾನೆ.  ಏಲಕ್ಕಿ ತಿಂದು ಮಾತನಾಡುವವನ ಬಾಯಿಂದ ಮಾತಿನ ಜೊತೆಗೆ, ಏಲಕ್ಕಿಯ ಪರಿಮಳ ಸಹಜವಾಗಿ ಪಸರಿಸುತ್ತದೆ. ಹಾಗೆಯೇ ಅಂತಹ ಜ್ಞಾನಿಯ ಎಲ್ಲಾ ಕೆಲಸಗಳಲ್ಲಿಯೂ, ನಡೆಗಳಲ್ಲಿಯೂ ಭಗವದ್ರಸ ಎದ್ದು ಕಾಣುವಂತಿರುತ್ತದೆ. ಅಂತಹ ಜ್ಞಾನಿಯು ಸಿಕ್ಕರೆ, ಆತನಿಗೆ ಸಮರ್ಪಿಸಿದ ಎಲ್ಲವನ್ನೂ ಭಗವಂತನಿಗೆ ತಲುಪಿಸುವ ಮತ್ತು ಅಲ್ಲಿಂದ ಬಂದ ಪ್ರೇರಣೆಯನ್ನು ನಮ್ಮೆಡೆಗೆ ತಲುಪಿಸುವ ವಾಹಕನಾಗಿ ಕೆಲಸ ಮಾಡುತ್ತಾನೆ. ಅಂತಹವನಿಗೆ ಪೂಜೆ ಮಾಡಿದರೆ, ನೇರವಾಗಿ ಭಗವಂತನಿಗೆ ಪೂಜೆ ಮಾಡಿದಂತೆ. ಅಂತಹವನು ಸರ್ವಾತ್ಮನಾ ಪೂಜ್ಯ.

ಹಾಗಾಗಿ ಜ್ಞಾನಿಗೆ ಪೂಜೆ ಮಾಡುವ ವಿಷಯ ಯಾವುದೊ ಒಂದು ವ್ಯಕ್ತಿಗೆ ಸಲ್ಲಿಸುವ ಪೂಜೆ ಅಥವಾ ಗೌರವ ಎಂದು ಭಾವಿಸಬಾರದು. ಜ್ಞಾನಿ ಎಂಬ ಪ್ರತಿನಿಧಿಯ ಮೂಲಕ, ಇಡೀ ಜಗತ್ತಿಗೇ ನಿಧಿಯಾಗಿರುವ ಪರಮಾತ್ಮನಿಗೆ ಸಲ್ಲಿಸುವ ಪೂಜೆ. ಹಿಂದಿನ ಕಾಲದಲ್ಲಿ ಗುರು-ಹಿರಿಯರು ಇಂತಹ ಜ್ಞಾನಿಗಳಾಗಿರುತ್ತಿದ್ದರು. ಹಾಗಾಗಿ ಅವರನ್ನು ಗೌರವಿಸುವ ಪೂಜಿಸುವ ಪದ್ಧತಿ ನಮ್ಮ ಸಂಸ್ಕೃತಿಯಲ್ಲಿ ಸೇರಿಕೊಂಡಿದೆ. ಇಂತಹ ಪದ್ದತಿಗಳನ್ನು ನಮ್ಮ ಸಂಸ್ಕೃತಿಯಲ್ಲಿ ಸೇರಿಸಿದ ಮಹರ್ಷಿಗಳಿಗೆ ನತಮಸ್ತಕರಾಗೋಣ.   

ಸೂಚನೆ: 21/04/2020 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ದಲ್ಲಿ ಪ್ರಕಟವಾಗಿದೆ.   

Thursday, March 12, 2020

ಅಲ್ಲಿರುವುದು ನಮ್ಮನೆ, ಇಲ್ಲಿಗೆ ಬಂದೆ ಸುಮ್ಮನೆ ! (Alliruvudu nammane, illige bande summane !)

ಲೇಖಕರು: ಸುಮುಖ ಹೆಬ್ಬಾರ್
(ಪ್ರತಿಕ್ರಿಯಿಸಿರಿ : lekhana@ayvm.in)



ರಥಸಪ್ತಮಿಯ ನಂತರ ಪ್ರತಿ ಊರಿನಲ್ಲಿಯೂ ಜಾತ್ರೆಯ ಸಂಭ್ರಮ. ಅಂಗಡಿಯ ಸಾಲು. ವಿಶೇಷ ಆಕರ್ಷಕ ಮಾರಾಟ ವಸ್ತುಗಳು.  ಮಕ್ಕಳಿಗಂತೂ ಬಗೆಬಗೆಯ ಆಟದ ವಸ್ತುಗಳ ಮೇಲೆ ಒಲವು. ಸರ್ಕಸ್ಸಿನ ಪ್ರಾಣಿಗಳನ್ನು ಪಳಗಿಸಿರುವ ರೀತಿ, ಅವುಗಳು ತೋರುವ ಬುದ್ಧಿಶಕ್ತಿ,  ಮೂಗಿನ ಮೇಲೆ ಬೆರಳಿಡುವಂತೆ ಮಾಡುತ್ತದೆ. ರುಚಿಯಾದ ಖಾದ್ಯಗಳೇನು, ಬಟ್ಟೆ, ಪಾತ್ರೆಗಳ ವೈವಿದ್ಯಗಳೇನು? ರಥಬೀದಿಯ ಅಲಂಕಾರ, ಝಗಮಗಿಸುವ ದೀಪಗಳು, ದೇವಾಲಯದ ಕಾರ್ಯಕಲಾಪಗಳು, ಸ್ನೇಹಿತರು ಮತ್ತು ಬಂಧು-ಬಾಂಧವರ ಭೇಟಿಯ ಸಂಭ್ರಮ, ಮಾತು-ಕತೆ, ಹರಟೆ, ನಗು, ಸಂತೋಷ. ಅಬ್ಬಬ್ಬಾ ಒಂದೇ, ಎರಡೇ, ಜಾತ್ರೆಯ ವೈಭವ ಎಷ್ಟು ಚಂದ!!

ಹೀಗೆ ಜಾತ್ರೆಯನ್ನು ಆಸ್ವಾದಿಸುತ್ತಿರುವ ಅಸಾಮಿಗೆ, ನಾನು ಮನೆಯಿಂದ ಜಾತ್ರೆಗೆ ಬಂದಿದ್ದೇನೆ. ಪುನಃ ಮನೆಗೆ ವಾಪಸ್ಸು ಹಿಂತಿರುಗಬೇಕು ಎಂಬ ವಿಷಯವೇ ಮರೆತುಹೋದರೆ?! ಎರಡು ದಿನದಲ್ಲಿ ಮುಗಿಯುವ ಜಾತ್ರೆಯಲ್ಲಿಯೇ  ಮನಸ್ಸು ಲಗ್ನಗೊಂಡು ಅಲ್ಲಿಯೇ ಉಳಿದುಬಿಟ್ಟರೆ? ಆ ವ್ಯಕ್ತಿಯ ಮೇಲೆ ಅನುಕಂಪ ಮೂಡುವುದು ಸಹಜವಷ್ಟೇ. "ಅಯ್ಯಾ!, ನಿನಗೊಂದು ಮನೆ ಇದೆ. ಅಲ್ಲಿ ನಿನಗಾಗಿ, ನಿನ್ನವರು ಕಾಯುತ್ತಿರುತ್ತಾರೆ. ನೀನು ಅಲ್ಲಿಗೆ ಹಿಂದಿರುಗಬೇಕು" ಎಂದು ಹೇಳುವ ಮನಸ್ಸಾಗುತ್ತದೆಯಲ್ಲವೇ?"

ವಾಸ್ತವವಾಗಿ ಜಾತ್ರೆಯಲ್ಲಿ ಸಿಕ್ಕಿಹಾಕಿಕೊಂಡ ಅಸಾಮಿಯಯ ಸ್ಥಿತಿಯೇ ನಮ್ಮದೂ ಆಗಿದೆ. ಒಂದು ಕಾಲದಲ್ಲಿ ನಾವೆಲ್ಲರೂ ಭಗವಂತನ ಮಡಿಲಿನಲ್ಲಿ ಆಟವಾಡುತ್ತಾ ಇದ್ದವರಂತೆ. ಭಗವಂತನು ಈ ಪ್ರಕೃತಿಯನ್ನು ಸೃಷ್ಟಿಸಿ, ಇದನ್ನು ಒಮ್ಮೆ ನೋಡಿಕೊಂಡು ಬಾ ಎಂದು ನಮ್ಮನ್ನು ಕಳುಹಿಸಿದನಂತೆ. ಅವನಿಂದ ಹೊರಟ ನಾವು, ಸೃಷ್ಟಿಯನ್ನು ನೋಡುತ್ತಾ, ನೋಡುತ್ತಾ, ಅದರ ಆಸ್ವಾದನೆಯಲ್ಲಿಯೇ ಎಲ್ಲವನ್ನೂ ಮರೆಯುತ್ತಾ ಬಹುದೂರ ಬಂದುಬಿಟ್ಟಿದ್ದೇವಂತೆ.  ಅದೆಷ್ಟು ದೂರ ಬಂದೆವೆಂದರೆ, ಹಿಂದೆತಿರುಗಿ ನೋಡಿದಾಗ, ಹೊರಟ ಜಾಗವೇ ಮರೆಯುವಷ್ಟು. ಬಂದ ದಾರಿಯೂ ನೆನಪಲ್ಲಿ ಉಳಿಯದಷ್ಟು.  ನಾವು ಭಗವಂತನ ಬಳಿಯಿಂದ ಬಂದವರು ಪುನಃ ಅವನಲ್ಲೇ ಹೋಗಿ ಸೇರಬೇಕು ಎಂಬ ವಿಷಯವೇ ನಮ್ಮಿಂದ ಮರೆಯಾಗಿದೆ.

ಮಗ ಜಾತ್ರೆಗೆ ಹೋಗಿ ಮನೆಗೆ ಬಾರದಿದ್ದರೆ, ತಂದೆಯು ಮಗನ ನಿರೀಕ್ಷೆಯಲ್ಲಿರುತ್ತಾರೆ ಅಲ್ಲವೇ? ಸಾಕಷ್ಟು ಕಾದು, ನಂತರ ತಂದೆಯೇ ಜಾತ್ರೆಗೆ ಹೋಗಿ, ಮಗನನ್ನು ಹುಡುಕಿತರುವುದು ಸಹಜವೇ ತಾನೇ. ಹಾಗೆಯೇ ಭಗವಂತನು ನಮ್ಮ ನಿರೀಕ್ಷೆಯಲ್ಲಿರುತ್ತಾನಂತೆ.  "ಒಂದು ಜೀವ ಭಗವಂತನ ಕಡೆ ಒಂದು ಹೆಜ್ಜೆ ಹಾಕಿದರೆ, ಭಗವಂತ ಜೀವದ ಕಡೆ ಹತ್ತು ಹೆಜ್ಜೆ ಹಾಕಿ ಬರುತ್ತಾನಪ್ಪ" ಎಂದು ಶ್ರೀರಂಗ ಮಹಾಗುರುಗಳು ಹೇಳುತ್ತಿದ್ದರು. ಒಂದೊಮ್ಮೆ ಸೃಷ್ಟಿಯ ಚಕ್ರದಲ್ಲಿ ಸಿಲುಕಿ ದಾರಿಯೇ ಗೊತ್ತಾಗದಿದ್ದಾಗ ಪರಮ ಕರುಣೆಯಿಂದ, ಸಾಕ್ಷಾತ್ಭಗವಂತನೇ  ಅವತರಿಸಿ ಬರುವುದುಂಟು. ಜ್ಞಾನಿಗಳ ಮೂಲಕ ನಮ್ಮ ಮನೆ ನೆನಪಿಸಲು ಪ್ರಕಟವಾಗುವುದುಂಟು. ಹೀಗೆ,ರಾಮ - ಕೃಷ್ಣರಂತಹ ಅವತಾರ ನಡೆದಾಗ ಅವರನ್ನು ಅವಲಂಬಿಸಿ ಮನೆ ತಲುಪಿದ ಧನ್ಯಜೀವಿಗಳೆಷ್ಟೋ!  ನಾವೆಲ್ಲರೂ ಅವತಾರ ಪುರುಷರ, ಜ್ಞಾನಿಗಳ ಸಹಕಾರದಿಂದ ಮತ್ತೆ ನಮ್ಮ ಮನೆಗೆ ಮರಳುವಂತಾಗಲಿ ಎಂದು ಆಶಿಸೋಣ.

ಸೂಚನೆ:  12/03/2020 ರಂದು ಈ ಲೇಖನವು ವಿಶ್ವವಾಣಿಯ ಗುರುಪುರವಾಣಿ ಯಲ್ಲಿ ಪ್ರಕಟವಾಗಿದೆ.

Saturday, September 7, 2019

ಗಣೇಶ ಚತುರ್ಥಿ (Ganesha chathurthi)

ಸಂಗ್ರಹ : ಸುಮುಖ ಹೆಬ್ಬಾರ್   


ಭಾದ್ರಪದ ಮಾಸದ, ಶುಕ್ಲಪಕ್ಷದ, ಚೌತಿ ದಿನದಂದು ಆಚರಿಸುವಂತಹ ಗಣೇಶ ಚತುರ್ಥಿ ಹಬ್ಬವು ಭಾರತದಲ್ಲಿ ತುಂಬಾ ಪ್ರಸಿದ್ಧವಾದ ಹಬ್ಬಗಳಲ್ಲಿ ಒಂದು. ಉತ್ತರ ಮತ್ತು ದಕ್ಷಿಣ ಭಾರತಗಳಲ್ಲಿ ಬಹಳ ವಿಜೃಂಭಣೆಯಿಂದ ಆಚರಿಸಲ್ಪಡುತ್ತದೆ. ವೃತ್ತಿಪರರಿಗೆ ರಜೆಯ ಖುಷಿಯಾದರೆ, ಮಕ್ಕಳಿಗೆ ಹೊಸ ಬಟ್ಟೆ, ಕಡುಬು, ಚಕ್ಕುಲಿ, ಪಂಚಕಜ್ಜಾಯ ಇತ್ಯಾದಿಗಳನ್ನು ಸವಿಯುವ ಸಂಭ್ರಮ. ಮನೆಮನೆಯಲ್ಲೂ ಆಚರಿಸುವ ಹಬ್ಬ. ಸಂಘ-ಸಂಸ್ಥೆಯಿಂದ ಆಚರಿಸುವುದೂ ಉಂಟು. ಊರಿನ ಜನರೆಲ್ಲಾ ಸೇರಿ ಒಟ್ಟಿಗೆ ಆಚರಿಸುವುದು ಕೂಡ ಕಂಡುಬರುತ್ತದೆ. ಕೆಲವೆಡೆ ೧ ದಿನ, ೩ ದಿನ ಅಥವಾ ೨೧ ದಿನ, ಹೀಗೆ ಅವರವರ ಅನುಕೂಲಕ್ಕೆ ತಕ್ಕಂತೆ, ಇಂತಿಷ್ಟು ದಿನಗಳ ಕಾಲ ಗಣಪತಿಯನ್ನು ಕೂರಿಸಿ, ಪೂಜಿಸುವುದು ಕಂಡುಬರುತ್ತದೆ. ಈ ಸಂದರ್ಭಗಳಲ್ಲಿ ಕೆಲವು ಭಜನೆ, ಹಾಡು, ನೃತ್ಯ ಹಾಗೂ ಇನ್ನಿತರ ಕಲೆಗಳಿಗೆ ಸಂಬಂಧಿಸಿದ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನ ಕೊಡುವುದು ಸಾಮಾನ್ಯವಾಗಿದೆ. ಹಾಗೆಯೇ ಸಂಗೀತದಲ್ಲಿ ಅಥವಾ ಇನ್ನಿತರ ಕಲೆಯಲ್ಲಿ ಸಾಧಕರನ್ನು ಕರೆಯಿಸಿ, ಅವರಿಂದ ವಿಶೇಷ ಕಾರ್ಯಕ್ರಮಗಳನ್ನು ಆಯೊಜಿಸುವುದು ಕೂಡ ಇಂದಿನ ಸಮಾಜದಲ್ಲಿ ಕಾಣಸಿಗುತ್ತದೆ.

ಇವತ್ತಿನ ಆಚರಣೆಗಳು:

ಆದರೆ ಇತ್ತೀಚಿನ ಕೆಲವು ಆಚರಣೆಗಳು ಜುಗುಪ್ಸೆ ತರುವಂತೆ ಇವೆ. ಗಣೇಶ ಕೂರಿಸಿದಲ್ಲಿ ಇರುವ ಧ್ವನಿವರ್ಧಕದಿಂದ, ಗಣೇಶನಿಗೆ ಯಾವ ರೀತಿಯಿಂದಲೂ ಸಂಬಂಧಪಡದ ಹಾಡುಗಳು, ಡ್ಯಾನ್ಸ್ ಇತ್ಯಾದಿಗಳು ಸಭ್ಯ ಸಮಾಜದ ಆಕ್ಷೇಪಕ್ಕೆ ಕಾರಣವಾಗಿವೆ. ಮತ್ತು “ಗಣೇಶ ಕಾರ್ಟೂನ್ಕೆಟ್ಟು ಹೋದ” ಅನ್ನುವಂತೆ, ಗಣೇಶನಿಗೆ ತರಹೇವಾರಿ ರೂಪವನ್ನುಕೊಟ್ಟು, ದೇವತೆಯ ಗಾಂಭೀರ್ಯವನ್ನೇ ಇಲ್ಲವಾಗಿಸುವ ಕೆಲಸವೂ ನಡೆಯುತ್ತಿದೆ. ವಿಶ್ವ ಕಪ್ ಕ್ರಿಕೆಟ್ ಪಂದ್ಯಗಳ ಸಂದರ್ಭದಲ್ಲಿ, ಗಣೇಶನ ಕೈಯಲ್ಲಿ ಚೆಂಡು –ದಾಂಡು ಇತ್ಯಾದಿಗಳನ್ನು ಕೊಟ್ಟು ವಿಚಿತ್ರ ಆಕೃತಿ ಮಾಡಿಬಿಡುತ್ತಾರೆ.

ಆಚರಣೆ ಇತ್ತೀಚಿನದೇ, ಪುರಾತನವೇ?

ವಾಸ್ತವವಾಗಿ ಇದು ಮಹರ್ಷಿಪ್ರಣೀತವಾದ ಅತಿ ಪುರಾತನವಾದ ಹಬ್ಬವಾಗಿದ್ದರೂ, ಇದು ಪುರಾತನ ಕಾಲದಿಂದಲೂ ವಿಜೃಂಭಣೆಯಿಂದ ಆಚರಿಸಿಕೊಂಡುಬಂದ ಹಬ್ಬವಲ್ಲ. ಸುಮಾರು 150 ವರ್ಷದ ಹಿಂದೆ ಜನರನ್ನು ಬ್ರಿಟಿಷರ ವಿರುದ್ಧ ಸಂಘಟಿಸುವುದಕ್ಕೋಸ್ಕರ, ಜನರನ್ನು ಒಂದೆಡೆ ಸೇರಿಸಬೇಕಾಗಿತ್ತು. ಅದಕ್ಕೋಸ್ಕರ ಈ ಹಬ್ಬವನ್ನು ದೊಡ್ಡಮಟ್ಟದಲ್ಲಿ ಆಚರಿಸುವುದಕ್ಕೆ ಪ್ರಾರಂಭ ಮಾಡಲಾಯಿತು ಎಂಬುದಾಗಿ, ಗಣಪತಿ ಹಬ್ಬದ, ಈ ಮಟ್ಟದ ವಿಜೃಂಭಣೆಯ ಬಗ್ಗೆ ಒಂದು ಅಭಿಪ್ರಾಯ ಇದೆ. ಇವಿಷ್ಟರ ಹಿನ್ನೆಲೆಯಲ್ಲಿ ಗಣೇಶ ಚತುರ್ಥಿಯ ಆಚರಣೆಯ ಔಚಿತ್ಯದ ಬಗ್ಗೆ ಗಮನ ಹರಿಸ ಬೇಕಾಗಿದೆ. ಅದಕ್ಕೆ ಮೊದಲು ಈ ಹಬ್ಬಕ್ಕೆ ಕೇಂದ್ರ ಬಿಂದುವಾದ ಗಣೇಶನ ಬಗ್ಗೆ ಚಿಂತನೆಯನ್ನು ನಡೆಸಿ ಮುಂದುವರೆಯೋಣ.   

ಗಣೇಶನ ರೂಪ:



ಆನೆಯ ಮುಖ, ಬೀಸು ಕಿವಿ, ತುಂಡಾದ ಹಲ್ಲು. ದೊಡ್ಡ ಹೊಟ್ಟೆ. ಹೊಟ್ಟೆಗೋ ಹಾವಿನ ಬಿಗಿತ. ನಾಲ್ಕು ಕೈಗಳು ಬೇರೆ. ಒಂದು ಕೈಯಲ್ಲಿ ಅಂಕುಶ. ಮತ್ತೊಂದು ಕೈಯಲ್ಲಿ ಇಕ್ಷುದಂಡ (ಕಬ್ಬಿನಜಲ್ಲೆ) ಅಥವಾ ಮೋದಕ. ಮತ್ತೊಂದು ಕೈಯಲ್ಲಿ ಹಗ್ಗ. ಇನ್ನೊಂದು ಅಭಯಹಸ್ತ. ಇಷ್ಟು ದೊಡ್ಡದಾಗಿರುವ ಶರೀರ ಕುಳಿತಿರುವುದು ಒಂದು ಪುಟ್ಟ ಇಲಿಯ ಮೇಲೆ. ಅದು ಇವನಿಗೆ ವಾಹನವಂತೆ.

ಇಂತಹ ಆಕಾರವನ್ನು ಭೂಮಿಯ ಮೇಲೆ ಯಾವತ್ತಾದರೂ, ಯಾರಾದರೂ ನೋಡಿದವರಿದ್ದಾರಾ? ಅಕಸ್ಮಾತ್ತಾಗಿ ಭೂಮಿಯ ಯಾವುದೇ ಮೂಲೆಯಲ್ಲಿ ಕಾಣಲು ದೊರೆತಿದ್ದರೆ, ಈಗಿನ ಕಾಲದ ಮಾಧ್ಯಮಗಳು ಯಾವ ಮಟ್ಟದ ಪ್ರಚಾರ ಕೊಟ್ಟುಬಿಡುತ್ತಿದ್ದವು! ಯಾವುದಾದರೂ ತಾಯಿ ಇಂತಹ ಮಗುವಿಗೆ ಜನ್ಮವಿತ್ತರೆ, ಸಂತಸದ ವಿಷಯವೋ ಅಥವಾ ದುಃಖಪಡಬೇಕೋ? ಇದು ಸುರೂಪವೋ? ಕುರೂಪವೋ? ಎಂದು ಯೋಚಿಸಬೇಕಾಗಿದೆ.

ಈತನೇ ಗಣೇಶ, ಗಣಪತಿ, ವಿನಾಯಕ, ವಕ್ರತುಂಡ, ಶೂರ್ಪಕರ್ಣ ಇತ್ಯಾದಿ ಹೆಸರುಗಳಿಂದ ಗುರುತಿಸಲ್ಪಡುವ ದೇವತೆ. ಪ್ರಥಮ ಪೂಜೆಗೆ ಅರ್ಹನಾದ ದೇವತೆ. ವಿಘ್ನನಿವಾರಕ.

ಆಕಾರದ ವಿಷಯದಲ್ಲಿ ಗೊಂದಲ:

ಈತನ ಆಕಾರದ ಕುರಿತು ಬಹಳ ಗೊಂದಲಗಳಿವೆ. ಮೊದಲನೆಯದಾಗಿ, ಇವನು ಶಿವ-ಪಾರ್ವತಿಯರ ಸುಪುತ್ರ. ಶಿವನೋ ಸುಂದರೇಶ್ವರ. ಪಾರ್ವತಿಗೆ ತ್ರಿಪುರಸುಂದರಿ ಎಂಬ ಹೆಗ್ಗಳಿಕೆ. ಈ ಸುಂದರ-ಸುಂದರಿಗೆ ಹುಟ್ಟಿದಂತಹ ಮಗುವಿನ ಆಕೃತಿ, ವಿಚಿತ್ರವಾಗಿ ತೋರುತ್ತಿದೆ. ಇದು ನಿಜರೂಪವೋ? ಕಲ್ಪನೆಯೋ? ನಿಜವಾಗಿ ನೋಡಿದ್ದರೆ, ಯಾರು ನೋಡಿದ್ದಾರೆ? ಎಲ್ಲಿ ನೋಡಿದ್ದಾರೆ? ಕಲ್ಪನೆ ಆಗಿದ್ದರೆ, ಕಲ್ಪಿಸಿಕೊಂಡವರ ಸೌಂದರ್ಯಪ್ರಜ್ಞೆ ಎಂತಹದ್ದು? ಅವರ ಮನಸ್ಸಲ್ಲಿ ಏನು ಆಡಿದ್ದಿರಬಹುದು? ಬರೀಕಲ್ಪನೆ ಆದ ಪಕ್ಷದಲ್ಲಿ ಮನೋರಂಜನೆಗೆ ಸರಿಯಷ್ಟೆ. ಆತ್ಮರಂಜನೆಗೆ ತಕ್ಕದಾದುದಲ್ಲ. ಆದರೆ ಗಣಪತಿಯ ಪೂಜೆ-ಪುನಸ್ಕಾರ ಆತ್ಮಕಲ್ಯಾಣಕ್ಕಾಗಿ ಹಾಕಿಕೊಟ್ಟಿರುವ ಮಾರ್ಗ ಎಂದು ಪರಿಗಣಿಸುವಾಗ, ಕಲ್ಪನೆಯ ಪರಿಮಿತಿಯಿಂದ ಹೊರಬಂದು ಆಕಾರವನ್ನು ವಿಮರ್ಶಿಸುವುದು ಸೂಕ್ತ ಎಂದೆನಿಸುವುದು ಸಹಜ.

ಗಣೇಶನ ಹುಟ್ಟಿನ ಬಗೆಗಿನ ಕಥೆಗಳು:

ಪುರಾಣ ಕಥೆಗಳ ಅನುಸಂಧಾನವೂ ಕೂಡ, ಗಣೇಶನ ಸ್ಪಷ್ಟ ಚಿತ್ರಣವನ್ನು ನೀಡುವುದಿಲ್ಲ. ಒಂದು ಕಡೆಯಲ್ಲಿ ಪಾರ್ವತಿ-ಪರಮೇಶ್ವರರ ಮಗು ಅಂತ ಹೇಳಿದರೆ, ಇನ್ನೊಂದು ಕಡೆಯಲ್ಲಿ ಪಾರ್ವತಿಯ ಮೈಮೇಲಿನ ಕೊಳೆ ಅಥವಾ ಬೆವರಿನಿಂದ ಹುಟ್ಟಿದವನು ಅಂತ ಹೇಳಿದೆ. ಉಮಾಮಲಸಮುದ್ಭವ. ಅಷ್ಟೇ ಅಲ್ಲದೆ, ಇದಕ್ಕಿಂತ ಇನ್ನೂ ಹೆಚ್ಚು ಗೊಂದಲವನ್ನು ಉಂಟುಮಾಡುವ ಕಥೆಯೊಂದಿದೆ. ಅದರಲ್ಲಿ ಗಣೇಶ ಪಾರ್ವತಿ ಪರಮೇಶ್ವರರ ಮಗನೇ! ಅದರಲ್ಲೇನೂ ಸಂಶಯವಿಲ್ಲ. ಆದರೆ ಪಾರ್ವತಿ-ಪರಮೇಶ್ವರರ ವಿವಾಹ ಸಂದರ್ಭದಲ್ಲಿ, ಮೊದಲು ಗಣೇಶನ ಪೂಜೆ ಮಾಡಿ ಆನಂತರ ವಿವಾಹಕಾರ್ಯ ನೆರವೇರಿತು ಎಂಬುದಾಗಿ ಇದೆ.

ಅವನ ರೂಪ ವರ್ಣನೆಯಲ್ಲೇ ಅವನ ಪ್ರಸನ್ನತೆ:

ಇನ್ನೊಂದು ಎಲ್ಲರಲ್ಲೂ ಬರುವ ಸಾಮಾನ್ಯ ಜಿಜ್ಞಾಸೆ. ಸಾಮಾನ್ಯವಾಗಿ ಅಂಗಾಂಗಗಳಲ್ಲಿ ಊನ ಇದ್ದವರಿಗೆ ಅದನ್ನು ಎತ್ತಿ ಹೇಳಿದರೆ ಸಹ್ಯವಲ್ಲ. ಕೋಪ ಬರುವುದುಂಟು. ಉದಾಹರಣೆಗೆ ಉಬ್ಬು ಹಲ್ಲು ಇರುವರಿಗೆ ಹಲ್ಲುಬ್ಬ ಅಂದರೆ, ಸಹಿಸಿಕೊಳ್ಳುವವರು ಅಪರೂಪ. ಆದರೆ ಗಣಪತಿ ವಿಷಯದಲ್ಲಿ ಇದು ವಿರುದ್ಧ. ಇವನ ಅಂಗಾಂಗಗಳ ಬಗ್ಗೆ ಎತ್ತಿ ಹೇಳಿದರೆ, ಲಂಬೋದರ, ಏಕದಂತ, ಗಜಾನನ, ಶೂರ್ಪಕರ್ಣ ಎಂದು ಸ್ತುತಿಸಿದರೆ ಇವನು ಸುಪ್ರೀತನಾಗುತ್ತಾನೆ.

ಇದೇನು ರೂಪ ರಹಸ್ಯ?

ಗಣೇಶನ ಇರುವಿಕೆಯೇ ಒಂದು ಕಲ್ಪನೆ ಎಂದು ತೀರ್ಮಾನಿಸಿ ಆ ಕಲ್ಪನಾ ಜಾಲ ಮತ್ತು ಅದಕ್ಕೆ ವಿವರಣೆಯನ್ನು ಹೀಗೆ ಹೆಣೆದಿರುವುದು ಕಂಡುಬರುತ್ತದೆ.

ಕಲ್ಪನೆ:-1

ಒಂದು ಕೃಷಿಕ ವರ್ಗದ ಬೆಳೆಗಳನ್ನೆಲ್ಲಾ ಕಾಡಾನೆಗಳು ನಾಶಮಾಡುತ್ತಿತ್ತು. ಈ ಕಾಟಕ್ಕೆ ಹೆದರಿ, ಆನೆ ಮುಖದ ಒಂದು ದೇವರ ಕಲ್ಪನೆ ಮಾಡಿದರು. ಧವಸ-ಧಾನ್ಯಗಳ ಶತ್ರುವೇ ಇಲಿ. ಹಾಗಾಗಿ ಅವನ ವಾಹನ ಇಲಿಯನ್ನು ಮೆಟ್ಟಿದರೆ ತಾನೇ, ಧವಸ –ಧಾನ್ಯ ಉಳಿದೀತು. ಧವಸ-ಧಾನ್ಯಗಳ ಉಗ್ರಾಣವೇ ಹೊಟ್ಟೆ. ಧಾನ್ಯದ ಮೂಟೆಗೆ ಕಟ್ಟಿರುವ ಹಗ್ಗವೇ ಸರ್ಪ. ಸರ್ಪಗಾವಲು ಧಾನ್ಯದ ರಕ್ಷಣೆಗೆ ಎಂಬಂತೆ.

ಮೇಲ್ನೋಟಕ್ಕೆ ಸಮಸ್ಯೆ ಬಗೆಹರಿದಂತಿದ್ದರೂ,  ಹಲವು ಸಂದಿಗ್ಧತೆ ತಂದೊಡ್ಡುತ್ತಿದೆ. ಪೂಜೆಗೆ ಇಡೀ ದೇಹವನ್ನ ಯಾಕೆ ಇಟ್ಟುಕೊಂಡಿಲ್ಲ? ಬರಿಮುಖಕ್ಕೇಕೆ? ಪೂಜೆ ಮಾಡುವುದರಿಂದ ದಾಳಿ ನಿಂತಿದೆಯೇ? ಇವತ್ತಿಗೂ ಆನೆಗಳಿಂದ ದಾಳಿ ನಡೆಯುವುದುಂಟು. ಅಲ್ಲದೇ, ಹಂದಿ, ನರಿ, ತೋಳ ಮುಂತಾದವುಗಳೂ ದಾಳಿ ಮಾಡುತ್ತವೆ. ಅವುಗಳಿಗೆ ಪೂಜೆ ಬೇಡವೇ? ಉತ್ತರವಿಲ್ಲ.

ಕಲ್ಪನೆ:-2

ಇದು ವೈಜ್ಞಾನಿಕವಾದ ವಿಮರ್ಶೆ. ವಿಕಾಸವಾದದಲ್ಲಿ ,ಭೂಮಿಯಲ್ಲಿ ಮೊದಲು ಜೀವಿಗಳು ಇರಲಿಲ್ಲ. ಕಾಲಕಳೆದಂತೆ ಜಲಚರ, ಸ್ಥಲಚರ, ಆಮೇಲೆ ಮನುಷ್ಯನ ಉಗಮ. ಈ ವಿಕಾಸದ ಹಾದಿಯಲ್ಲಿ ಮಾನವ ಮತ್ತು ಮೃಗದ ಮಧ್ಯ ಕೊಂಡಿ ತೋರಿಸಲು, ಈ ಮಿಶ್ರಿತ ಕಲ್ಪನೆ. ಗ್ರೀಕರಲ್ಲೂ ಇಂತಹ ದೇವತೆಗಳಿವೆ.
ಹಾಗಿದ್ದರೆ ಬರೀ ಆನೆ ಜೊತೆ ಮಿಶ್ರಿತವಾಗಿರುವ ಶರೀರ ಯಾಕೆ? ಇತರ ಪ್ರಾಣಿಗಳ ಜೊತೆ ಯಾಕಿಲ್ಲ? ಆನೆಯ ಮುಖದಿಂದ ಹಲ್ಲು ಹೇಗೆ ಕಳಚಿತು? ಮುಂತಾದ ಪ್ರಶ್ನೆಗಳಿಗೆ ಉತ್ತರ ಇಲ್ಲೂ ಇಲ್ಲ.

ಕಲ್ಪನೆ:-3

ಗಣೇಶನ ಮೂರ್ತಿಯೊಂದು ಜಾಣರ ಕಲ್ಪನೆ. ಶಕ್ತಿ ಯುಕ್ತಿಗಳ ಸಮನ್ವಯಮೂರ್ತಿ. ಆನೆ ಶಕ್ತಿಯ ಪ್ರತೀಕ. ಉಗ್ರಾಣದಲ್ಲಿಟ್ಟ ಧಾನ್ಯವನ್ನು ಉಪಾಯದಿಂದ ಕದಿಯುವ ಇಲಿ, ಯುಕ್ತಿಯ ಪ್ರತೀಕ. ಕಾರ್ಯಸಾಧನೆಗೆ ಶಕ್ತಿ ಮತ್ತು ಯುಕ್ತಿ ಅವಶ್ಯವಾಗಿರುವಂತೆ, ಇವೆರಡನ್ನೂ ಕಲ್ಪಿಸಿಕೊಂಡಿದ್ದಾರೆ. ಕಬ್ಬಿನಜಲ್ಲೆ ಆನೆಗೆ ಪ್ರೋತ್ಸಾಹಕ. ಅಂಕುಶ ಮತ್ತು ಹಗ್ಗ ನಿಯಂತ್ರಕಗಳು. ಎಲ್ಲವೂ ಸಮತೋಲನವಾಗಿದೆ.

ಈ ಕಲ್ಪನೆಯಲ್ಲಿ ಪ್ರಬುದ್ಧತೆ ಇದೆ. ಪರಿಣಿತಿ ಇದೆ. ಆದರೆ ಎಲ್ಲರೂ ಒಪ್ಪುವಂತಿಲ್ಲ. ಏಕೆಂದರೆ ಯುಕ್ತಿಗೆ ತುಂಬಾ ಪ್ರಸಿದ್ಧ ಪ್ರಾಣಿ ನರಿ. ಹಾಗೆ ತನ್ನ ನಿಯಂತ್ರಕವಾದ ಅಂಕುಶ ಮತ್ತು ಹಗ್ಗವನ್ನು, ಯಾವ ಆನೆ ತಾನೆ ಹಿಡಿದುಕೊಳ್ಳುವುದು? ಬಗೆಹರಿಯುತ್ತಿಲ್ಲ.

ಹಾಗಾದರೆ ಗಣೇಶ ನಿಜವೇ, ಕಲ್ಪನೆಯೇ?

ಒಂದು ಸೂಕ್ಷ್ಮಾಣು ಜೀವಿ ಉಪಕರಣಗಳ ಸಹಾಯದಿಂದ ನೋಡಿದಾಗ ಕಾಣಸಿಗುವ ವಿಷಯ. ಹಾಗಾಗಿ ಬರಿಗಣ್ಣಿಗೆ ಕಾಣದ ಮಾತ್ರಕ್ಕೆ ಕಲ್ಪನೆ ಎನ್ನುವುದು ಎಷ್ಟು ಸರಿ? ವಿಜ್ಞಾನಿಗಳು ಅನ್ವೇಷಣೆ ಮಾಡಿ ಸೂಕ್ಷ್ಮಜೀವಿಗಳ ಇರುವಿಕೆಯನ್ನು ದೃಢಪಡಿಸಿದರೆ, ಇವತ್ತು ಸಮಾಜ ನಂಬುವ ಹಾಗೆ, ನಮ್ಮ ಮಹರ್ಷಿಗಳ ಅಂತರಂಗದ ಅನ್ವೇಷಣೆಗೆ ಬೆಲೆ ಕೊಡಬೇಕಲ್ಲವೇ?. ನಮ್ಮ ಮಹರ್ಷಿಗಳು ನಿಸರ್ಗದ ಮೇಲೆ ಅನ್ವೇಷಣೆ ನಡೆಸಿದರು. ಹೊರ ಬ್ರಹ್ಮಾಂಡ ಅಷ್ಟೇ ಅಲ್ಲದೆ, ಈ ಪಿಂಡಾಂಡದಲ್ಲಿಯೂ ತಮ್ಮ ಯೋಗ ಸಾಧನೆಯಿಂದ ಅನ್ವೇಷಣೆ ನಡೆಸುವಾಗ ಅವರಿಗೆ ಕಂಡಂತಹ ಸತ್ಯವೇ ಗಣಪತಿಯ ರೂಪ. ಅವರು ಒಳಗೆ ಕಂಡು ಅನುಭವಿಸಿದ ಸತ್ಯವನ್ನೇ ನಮ್ಮವರೆಗೂ ತಂದುಕೊಟ್ಟರು. ಆ ಸತ್ಯವನ್ನು ಕಂಡುಕೊಳ್ಳಲು ಮಾರ್ಗವನ್ನು ಹಾಕಿಕೊಟ್ಟರು. ವಿಶಿಷ್ಟ ಸಾಧನೆಯಿಂದ ಎಲ್ಲ ಮಾನವರೂ ಅವನನ್ನು ನೋಡಬಹುದೆಂಬುದನ್ನು ತೋರಿಸಿ, ಸತ್ಯದ ಇರುವಿಕೆಯ ಬಗ್ಗೆ ನಂಬುವಂತೆ ಮಾಡಿದರು. ಗಣೇಶನನ್ನು ಕಾಣುವ, ಅವನ ಪ್ರಸನ್ನತೆಯನ್ನು ಪಡೆಯುವ ಉಪಾಯಗಳನ್ನು, ಸಂಪ್ರದಾಯದಲ್ಲಿ ಪೂಜೆ-ಪುನಸ್ಕಾರಗಳ ವಿಧಾನಗಳಲ್ಲಿ  ಜೋಡಿಸಿದರು. ಕಾಲಕ್ರಮೇಣ ಗಣಪತಿಯ ಕೇವಲ ಕೊಂಡಾಟ, ಅವನ ಪೂಜೆಯ ವಿಜೃಂಭಣೆ, ಮೂರ್ತಿ ಆರಾಧನೆ ಅಷ್ಟೇ ಉಳಿಸಿಕೊಂಡು, ಮೂಲಭೂತವಾದ ವಿಷಯಗಳು ಕಳಚಿಹೋಗಿಬಿಟ್ಟಿವೆ.

ಶ್ರೀರಂಗ ಮಹಾಗುರುಗಳ ವಿವರಣೆ:

ಇಂತಹ ಸಂದರ್ಭದಲ್ಲಿ ಮಹರ್ಷಿಗಳ ಹೃದಯವನ್ನು ಅರ್ಥಮಾಡಿಕೊಂಡು, ಅವರ ಜಾಡನ್ನು ಹಿಡಿದು ಋಷಿಗಳು ಕಂಡ ಸತ್ಯವನ್ನು ಕಂಡುಕೊಂಡು, ಗಣಪತಿಯ ಇರುವಿಕೆಯನ್ನು ದೃಢಪಡಿಸಿದವರು ಶ್ರೀರಂಗಮಹಾಗುರುಗಳು. ಅವರು “ಗಣೇಶನ ರಹಸ್ಯವನ್ನು ಅವನೇ ಬಿಚ್ಚಿಕೊಡಬೇಕಪ್ಪ”ಎನ್ನುತ್ತಿದ್ದರು. ಮರ ಹಿಂದೆ ಬೀಜವಾಗಿತ್ತು. ಆಮೇಲೆ ಮೊಳಕೆ, ಬೇರು, ಕಾಂಡ, ಕೊಂಬೆ, ಹೂವು, ಮಿಡಿ, ಕಾಯಿ, ಹಣ್ಣು ಆಗಿ ಮತ್ತೆ ಬೀಜದಲ್ಲೇ ಬಂದು ನಿಲ್ಲುತ್ತೆ. ಅಲ್ಲಿಗೆ ಮರದ ರಹಸ್ಯ ಬೀಜದಲ್ಲಿದೆ ಎಂದಾಯ್ತು. ಹಾಗೆ ಗಣೇಶನ ರಹಸ್ಯವನ್ನು ಅವನಿಂದಲೇ ತಿಳಿಯಬೇಕು ಅಂದರೆ, ಗಣೇಶ ಎಲ್ಲಿದ್ದಾನೋ ಅಲ್ಲೇ ಹೋಗಿ, ಅವನನ್ನು ನೋಡಿ ದೃಢಪಡಿಸಿದರೆ ತಾನೇ ಅವನ ರಹಸ್ಯವನ್ನು ಬಿಚ್ಚಿದಂತಾಗುತ್ತೆ.

ಹಾಗಿದ್ದರೆ ಅವನೆಲ್ಲಿದ್ದಾನೆ? ಅವನನ್ನು ನೋಡುವ ಬಗೆ ಹೇಗೆ? ಮಾನವನ ಬೆನ್ನುಹುರಿ, ಜ್ಞಾನರಜ್ಜು, ಮೇರುದಂಡದ ಕೆಳಗೆ ಇರುವ ಮೂಲಾಧಾರ ಚಕ್ರದಲ್ಲಿ ಅವನವಾಸ. ಅವನು ಆ ಜಾಗದಲ್ಲಿ ಕಾಣುವ ತೇಜೋರೂಪಿ. ಆ ಪ್ರಕಾಶಕ್ಕೆ ದೇವ ಎಂಬುದಾಗಿ ಹೆಸರು. ತೇಜೋರೂಪಿ ಆಗಿರುವುದರಿಂದ ಅವನು ದೇವತೆ. “ತ್ವಂ ಮೂಲಾಧಾರ ಸ್ಥಿತೋsಸಿ ನಿತ್ಯಂ” ಎಂಬ ಗಣಪತಿ ಅಥರ್ವ ಶೀರ್ಷದ ಮಾತು ಇದೇ ಸತ್ಯವನ್ನು ಹೇಳುತ್ತದೆ. ಯೋಗ ಮಾರ್ಗದಿಂದ ಅಲ್ಲಿ ಹೋಗಿ ನೋಡಿದರೆ ಗಣೇಶನ ದರ್ಶನವಾಗುತ್ತದೆ. ಅವನು ಸಹಜವಾಗಿ ಮತ್ತು ಸುಂದರವಾಗಿ ಅಲ್ಲಿ ಬೆಳಗುತ್ತಿದ್ದಾನೆ.

ಆನೆಮುಖ, ದೇಹದಾಕಾರ, ಇತ್ಯಾದಿ ಇರೋದೆಲ್ಲ ಸೌಂದರ್ಯವೇ? ಸೌಂದರ್ಯ ಅಂದರೇನು? ತುಂಬಾ ಸಹಜವಾಗಿದ್ದರೆ ಅದೇ ಸೌಂದರ್ಯ. ಒಂದು ಗಡಿಯಾರಕ್ಕೆ ದೊಡ್ಡಮುಳ್ಳು, ಚಿಕ್ಕಮಳ್ಳು ಮತ್ತು ನಿಮಿಷದ ಮುಳ್ಳು ಇದ್ದರೆ ಅದು ಸಹಜ. ಅದಕ್ಕೆ ತಳಿರು-ತೋರಣ ಮಲ್ಲಿಗೆಯಿಂದ ಸಿಂಗರಿಸಿದರೆ ಅಸಹಜ. ಈ ನಿಟ್ಟಿನಲ್ಲಿ ಗಣೇಶನ ದರ್ಶನ ಒಳಗೆ ಆನೆ ಮುಖದಲ್ಲೇ ಆಗುವುದರಿಂದ ಅದೇ ಅವನಿಗೆ ಸಹಜ ಸೌಂದರ್ಯ.

ಗಜಕುಂಡಕ್ಷೇತ್ರ:

ಗಣೇಶ ಬೆಳಗುತ್ತಿರುವ ಜಾಗಕ್ಕೆ ಯೋಗಶಾಸ್ತ್ರದಲ್ಲಿ ಗಜಕುಂಡಕ್ಷೇತ್ರ/ಗಜಕುಂಡಚಕ್ರ ಎಂದು ಹೆಸರು. ಹಾಗಾಗಿ ಇದು ಸತ್ಯಕ್ಕೆ ಕೊಟ್ಟಿರುವ ರೂಪ ಅಥವಾ ಸತ್ಯವೇ ತಾಳಿರುವ ರೂಪ. ಹಾಗಾಗಿ ಇದು ಸಹಜವಾಗಿದೆ. 

ದಂತಗಳು ಜ್ಞಾನದ ಪ್ರತೀಕ:

ಮತ್ತು ಆತನ ಬಿಳಿಯಾಗಿರುವ ಶುಭ್ರವಾಗಿರುವ, ನಿರ್ಮಲವಾಗಿರುವ ದಂತಗಳು ಶುದ್ಧವಾದ ಜ್ಞಾನವನ್ನು ಸೂಚಿಸುತ್ತವೆ. ಬಿಳಿ ಬಣ್ಣವು ಸತ್ವಗುಣದ ಪ್ರತೀಕ. ಸತ್ವಗುಣದ ಪ್ರಭೋದವಾದಾಗ ಜ್ಞಾನದಲ್ಲಿ ಪರ್ಯವಸಾನವಾಗುವುದು.

ಸೊಂಡಿಲು ಪ್ರಣವ ಸ್ವರೂಪ:

“ಪ್ರಣವಸ್ವರೂಪಂವಕ್ರತುಂಡಂ” ಎಂಬ ಮಾತಿನಂತೆ ಸೊಂಡಿಲು ಓಂಕಾರ (ಪ್ರಣವ)ವನ್ನು ನಿರ್ದೇಶಿಸುತ್ತದೆ. ಬಲಮುರಿ ಆಗಿದ್ದರೆ ಓಂಕಾರದ ಹಿಂದಿರುವ ಜ್ಞಾನವನ್ನುಸೂಚಿಸುತ್ತದೆ. ಆದ್ದರಿಂದ ಆತ ಮೋಕ್ಷಪ್ರದ. ಅದೇ ಎಡಮುರಿಯಾಗಿದ್ದರೆ, ದೈವಕ್ಕೆ ವಿರೋಧವಿಲ್ಲದಂತಹ ಭೋಗಸಂಪತ್ತನ್ನು ದಯಪಾಲಿಸುವವ. ಹಾಗಾಗಿ ಯೋಗ-ಭೋಗವೆರಡನ್ನೂ ದಯಪಾಲಿಸುವನು ಗಣಪತಿ.

ಬೆಳಗುವ ತಾಣ –ಪೃಥ್ವಿ ತತ್ತ್ವ:

ಅವನು ಬೆಳಗುವ ಜಾಗ ಪೃಥ್ವಿತತ್ವ. ಹಾಗೆಯೇ ಅವನು ಜಲ ತತ್ವದತನಕ ವ್ಯಾಪಿಸಿರುವಂತಹ ತೇಜಸ್ಸನ್ನು ಹೊಂದಿದ್ದಾನೆ. ಇನ್ನೊಂದು ದೃಷ್ಟಿಯಲ್ಲಿ ಮೂಲಾಧಾರ ಚಕ್ರದಿಂದ ಸ್ವಾಧಿಷ್ಠಾನ ಚಕ್ರದವರೆಗೆ ಇವನ ವ್ಯಾಪ್ತಿ. ಇಷ್ಟು ದೊಡ್ಡ ವ್ಯಾಪ್ತಿಯನ್ನು ತತ್ವಾತ್ಮಕವಾಗಿ, ದೊಡ್ಡ ಹೊಟ್ಟೆಯಿಂದ ತೋರಿಸಿದೆ.

ಕುಂಡಲಿನಿ-ಒಡ್ಯಾಣ:

ಹೊಟ್ಟೆಗೆ ಕಟ್ಟಿರುವ ಹಾವು ಯಾವುದದೆಂದರೆ, ಯೋಗಿಗಳು ಅಂತರಂಗದಲ್ಲಿ ಕಾಣುವಂತಹ ಕುಂಡಲಿನೀ ಶಕ್ತಿ. ಅದರ ಒಂದು ಕಟ್ಟು-ಯೋಗಿಗಳಿಗೆ ಉದರಪ್ರದೇಶದಲ್ಲಿ ಎರ್ಪಡುವಂತಹ ಉಡ್ಯಾಣಬಂಧ. ಅದು ಸಹಜವಾಗಿ ಉಂಟಾಗುವಂತಹದ್ದು ಮತ್ತು ಆನಂದದಾಯಕವಾದದ್ದು. ಹಾಗಾಗಿ ಇದು ಗಣೇಶನ ಯೋಗವೈಭವ ಸಾರುವ ದಿವ್ಯಾಭರಣ.

ಅಂಕುಶ ಪಾಶಗಳ ವಿಶೇಷತೆ:

ಅವನ ಬಾಹುಗಳು ಪ್ರಕಾಶದ ವಿಸ್ತಾರವೇ ಆಗಿದೆ. ಒಂದು ಕೈಯಲ್ಲಿ ಹಿಡಿದಿರುವ ಅಂಕುಶ ತನ್ನ ನಿಗ್ರಹಕ್ಕಲ್ಲ, ಬದಲಿಗೆ ಇನ್ನೊಂದು ಆನೆಯನ್ನು ಹೆದರಿಸಲು. ಮೂಲಾಧಾರ ಕ್ಷೇತ್ರದಲ್ಲಿ ಒಂದು ಆನೆಯ ಮುಖ ಧರಿಸಿದ ಆಸುರೀಶಕ್ತಿ ಇದೆ. ಆ ಅಸುರನ ಗರ್ವಭಂಜಕನಾಗಿ ಗಣಪತಿ ಅಂಕುಶ ಹಿಡಿದಿದ್ದಾನೆ. ಶಂಕರಭಗವತ್ಪಾದರು “ನಿರಸ್ತದೈತ್ಯಕುಂಜರಂ” ಎಂದು ಗುರುತಿಸಿದ ವಿಷಯವೂ ಇದೇ ಆಗಿದೆ. ಇನ್ನೊಂದು ಕೈಯಲ್ಲಿ ಪಾಶ. ಅದು ಲೌಕಿಕ ಜೀವಿಗಳಿಗೆ ಕಟ್ಟುವ ಕಟ್ಟು. ಮುಮುಕ್ಷುಗಳಿಗೆ ಬಿಚ್ಚುವಹಗ್ಗ. ಲೌಕಿಕವಾದ ಮಾಯೆಯ ಅಪಾಯದಿಂದ ಬಿಡಿಸುವಂತಹವನು ಗಣೇಶ.

ಮೋದಕದ ರಹಸ್ಯ:

ಮತ್ತೊಂದು ಕೈಯಲ್ಲಿ ಮೋದಕವನ್ನು ಹಿಡಿದುಕೊಂಡಿದ್ದಾನೆ. ಒಳಗೆ ಸಿಹಿಯಾದ ಹೂರಣದಿಂದ ಕೂಡಿದ ಭಕ್ಷ್ಯ ಮೋದಕ. ಮೋದ ಅಂದರೆ ಸಂತೋಷ. ಮೋದಕ ಅಂದರೆ ಸಂತೋಷವನ್ನು ಉಂಟುಮಾಡುವಂತಹದ್ದು. ಮೋದಕವು ಗಣಪತಿಗೆ ಸಂಬಂಧಿಸಿದ ಕ್ಷೇತ್ರಗಳನ್ನು ವಿಕಾಸಗೊಳಿಸುತ್ತದೆ. ಮನಸ್ಸು ಗಣಪತಿಯಲ್ಲಿ ನಿಲ್ಲುವಂತೆ ಮಾಡುತ್ತದೆ. ಹಾಗೆ ಮನಸ್ಸು ಹರಿದಾಗ ಮೋದ, ಸಂತೋಷ ಆಗುತ್ತದೆ. ಆ ಸಂತೋಷದ ಸೂಚಕವನ್ನೇ “ಮುದಾಕರಾತ್ತ ಮೊದಕಂ ಸದಾ ವಿಮುಕ್ತಿ ಸಾಧಕಂ” ಎಂದು ಶಂಕರಾಚಾರ್ಯರು ಗುರುತಿಸಿದ್ದಾರೆ. “ಮುಮುಕ್ಷೋ: ಮಾಧುರ್ಯಮ್” ಎಂಬ ಮಾತು ಯೋಗಶಾಸ್ತ್ರದಲ್ಲಿದೆ. ಮುಮುಕ್ಷುವಿಗೆ ಮಧುರವಾದ ಆಹಾರ ಯೋಗ್ಯವಾದದ್ದು. ಇದೇ ಮೋದಕದ ರಹಸ್ಯ.

ಕಬ್ಬಿಣ ಜಲ್ಲೆಯ ಔಚಿತ್ಯ, ಅಭಯ ಮುದ್ರೆ:

ಅವನ ಕೈಯಲ್ಲಿರುವ ಕಬ್ಬಿನ ಜಲ್ಲೆ ಯೋಗಿಗಳಿಗೆ ಅಂತರಮಾರ್ಗದಲ್ಲಿ ಸಿಗುವ ಸುಷುಮ್ನಾ ಪರ್ವಗಳನ್ನು ನೆನಪಿಗೆ ತರುವಂತಹದ್ದು. ಈ ಜ್ಞಾನಹಾದಿಯ ಸೂಚಕವಾಗಿ ಕಬ್ಬು ಇದೆಯೇ ಹೊರತು, ಆನೆಗೆ ಪ್ರಿಯವೆಂಬ ಅರ್ಥದಲ್ಲಿ ಅಲ್ಲ. ಹಾಗೆಯೇ ಇನ್ನೊಂದು ಕೈಯಲ್ಲಿ ಅಭಯ ಮುದ್ರೆ ಇದೆ. ಜೀವನದ ಒಳಬದಿಯ ಸತ್ಯವನ್ನು ಕಂಡವರಿಗೆ, ಯಾವುದೇ ಭಯವಿಲ್ಲ ಎಂಬ ಸೂಚನೆ. ಇದು ನಾಲ್ಕು ಕೈಗಳ ಸೊಬಗು ರೂಪರಹಸ್ಯ.

ವಾಹನ ಇಲಿ?

ಈತನ ವಾಹನ ಇಲಿ. ಎಲ್ಲ ದೇವತೆಗಳಿಗೂ ಒಳ್ಳೆಯ ವಾಹನ ಕೊಟ್ಟು, ಇವನಿಗೆ ಅವಮಾನ ಮಾಡಿದ್ದಾರೆ ಎನ್ನುವ ಅಭಿಪ್ರಾಯ ಸಮಾಜದಲ್ಲಿದೆ. ವಾಹನದ ತಾತ್ವಿಕ ಅಭಿಪ್ರಾಯ ಮನಸ್ಸಿಗೆ ಬರದಿದ್ದಾಗ ಹೀಗೆಲ್ಲ ಆಗುತ್ತದೆ. ಮೂಷಿಕ-ಮುಷಸ್ತೇಯೇ. ಮುಷ್ ಧಾತುವಿನಿಂದ ಕೂಡಿದ ಈ ಪದ, ಕದಿಯುವುದನ್ನು ಹೇಳುತ್ತದೆ. ಕದಿಯುವ ಕೆಲಸ ಚೆನ್ನಾಗಿ ಮಾಡುವುದು ಇಲಿ. ಯೋಗಮಾರ್ಗದಲ್ಲಿ ಸಂಚರಿಸ ಬಯಸುವ ತಪಸ್ವಿಗಳ, ತಪಸ್ಸಿನ ಶಕ್ತಿಯನ್ನು ಕದಿಯುವಂತಹ ಶಕ್ತಿಯನ್ನು ತಾತ್ವಿಕವಾಗಿ ಇಲಿ ಎಂದು ತೋರಿಸಿದೆ. ಇಂತಹ ಯೋಗವಿಘ್ನಗಳ ಶಕ್ತಿಯನ್ನುಅಡಗಿಸಿ, ಅವುಗಳ ಮೇಲೆ ಸವಾರಿಮಾಡುವವನು ಗಣೇಶ. ಮೂಲಾಧಾರವನ್ನು ಆಳುವ ಸ್ವಾಮಿ, ಅಲ್ಲಿಯ ವಿಘ್ನಗಳನ್ನು ಮೆಟ್ಟುವುದು ಸಹಜವಾಗಿಯೇ ಇದೆ. ಗಣಪತಿಗೆ ವಿಘ್ನ ಶಕ್ತಿಯನ್ನು ಅಡಗಿಸಲು ಗೊತ್ತು. ಪ್ರಯೋಗಿಸಲೂ ಗೊತ್ತು. ಹಾಗಾಗಿ ವಾಹನಇಲಿ ಅವಮಾನವಲ್ಲ. ವಿಜಯದ ಸಮ್ಮಾನ.

ಪುರಾಣ ಕಥೆಗಳ ಅಂತರಾರ್ಥ:

ಅವನ ಆಕಾರದ ಬಗ್ಗೆ ಇಷ್ಟು ಗಮನಿಸಿ, ಇನ್ನು ಪುರಾಣಗಳಲ್ಲಿರುವ ಗೊಂದಲಗಳ ಬಗ್ಗೆ ಗಮನಿಸೋಣ. “ಉಮಾಮಲಸಮುದ್ಭವ” ಪಾರ್ವತಿಯ ದೇಹದ ಕೊಳೆಯಿಂದ ಮಾಡಲ್ಪಟ್ಟವನು. ಇದು ಅವನಿಗೆ ಕಳಂಕವನ್ನು ತರುವ ವಿಷಯವಲ್ಲ. ಪಾರ್ವತಿ ಅಂದರೆ ಪ್ರಕೃತಿಮಾತೆ. ಅವಳ ಬೆವರು ಅಥವಾ ಕೊಳೆ ಅಂದರೆ ಪ್ರಕೃತಿಯ ಹೊರಪದರ. ಅಂದರೆ ಪೃಥ್ವೀತತ್ವ. ಅದಕ್ಕೆ ಅಧಿಷ್ಠಾತೃ ದೇವತೆಯಾಗಿ ಗಣಪತಿಯನ್ನು ಮಾಡಿ, ಚೈತನ್ಯವನ್ನು ತುಂಬಿದಳು. ಹಾಗಾಗಿ ಇವನು ಪಾರ್ವತಿಯ ಮಗ. ಮೂಲಾಧಾರವು ಪೃಥ್ವೀತತ್ವದ ಸ್ಥಾನ. ಅದರ ಒಡೆಯ ಗಣಪ.

ಶಿವ-ಪಾರ್ವತಿಯರ ಪುತ್ರ:



ಶಿವ ಪುರುಷ. ಪಾರ್ವತಿ ಪ್ರಕೃತಿ. ಪಿಂಡಾಂಡದಲ್ಲಿ ಇಡಾ-ಪಿಂಗಳ ನಾಡೀ  ರೂಪವಾಗಿ ಶಿವ ಶಿವೆಯರು ಕಾರ್ಯನಿರ್ವಹಿಸುತ್ತಾರೆ. ಶಕ್ತಿಯಾಗಿ ನೋಡಿದರೆ ಪ್ರಾಣ-ಅಪಾನಗಳಾಗಿ ಕಾರ್ಯನಿರ್ವಹಿಸುತ್ತಾರೆ. ಅವೆರಡೂ ಬಂದು ಸೇರುವ ಜಾಗ ಮೂಲಾಧಾರಚಕ್ರ. ಅಲ್ಲಿ ಕಾಣಿಸಿಕೊಳ್ಳುವನು ಗಣಪತಿ. ಹಾಗಾಗಿ ಇವನು ಶಿವ-ಶಿವೆಯರ ಪುತ್ರ.

ಶಿವ ಶಿವೆಯರ ವಿವಾಹದಲ್ಲಿ ಗಣೇಶನಿಗೆ ಪ್ರಥಮ ಪೂಜೆ?

ಇನ್ನೊಂದು ಕಥೆ ಶಿವ-ಪಾರ್ವತಿಯರ ವಿವಾಹಕ್ಕೆ ಸಂಬಂಧಪಟ್ಟದ್ದು. ಜೀವ-ದೇವರ ಸಮ್ಮಿಲನವನ್ನು ತಾತ್ವಿಕವಾಗಿ ವಿವಾಹ, ಕಲ್ಯಾಣ ಇತ್ಯಾದಿ ಪದಗಳಿಂದ ಸಂಭೋಧಿಸಿದ್ದಾರೆ. ಇದು ನಡೆಯುವುದು ಸಹಸ್ರಾರ ಕಮಲದಲ್ಲಿ. “ಸಹಸ್ರಾರೇ ಮಹಾಪದ್ಮೇ ಶಿವೇsನ ಸಹ ಮೋದತೆ” ಎಂಬ ಜ್ಞಾನಿಗಳ ಮಾತು ಇದಕ್ಕೆ ಪೂರಕ. ಸಹಸ್ರಾರ ತಲುಪಲು, ಹಿಂದಿನ ಚಕ್ರಗಳನ್ನು ದಾಟಿ ಹೋಗಲೇಬೇಕು. ಹೀಗೆ ಹೊರಟಾಗ ಜೀವ ಮೊದಲು ಸಂಧಿಸುವುದು ಮುಲಾಧಾರ ಚಕ್ರವನ್ನು. ಅದರಲ್ಲಿ ಪ್ರವೇಶಿಸಿ, ಅದರ ಒಡೆಯನಾದ ಗಣೇಶನ ಪ್ರಸನ್ನತೆಯನ್ನು ಪಡೆದೇ ಮುಂದುವರಿಯಬೇಕು ಎನ್ನುವುದು ಕಥೆಯ ತತ್ವಾರ್ಥ.

ಹಾಗೆಯೇ ಅವನ ಕೊಂಡಾಟ ಗಜಾನನ, ವಕ್ರತುಂಡ, ಏಕದಂತ ಏನೇ ಕರೆದರೂ ಕೂಡ ಅವನಿಗೆ ಪ್ರಿಯವಾಗಿರುತ್ತದೆ. ಏಕೆಂದರೆ ಒಂದೊಂದು ವಿಷಯವೂ ಕೂಡ, ಸತ್ಯದ ಕಡೆ ಬೊಟ್ಟು ಮಾಡಿ ತೋರಿಸುತ್ತದೆ. ಹಾಗಾಗಿ ಅದರಿಂದ ಗಣಪತಿ ಸಂತುಷ್ಟನಾಗುತ್ತಾನೆ.

ಸರ್ವಮೂಲ ಗಣೇಶ:

ಗಣೇಶ ಶಿವ-ಪಾರ್ವತಿಯರ ಮಗ. ಆದರೂ ಮಹಿಮೆಯಲ್ಲಿ ಅವರಿಗಿಂತ ಕಡಿಮೆ ಏನು ಇಲ್ಲ. ಪಂಚಾಯತನ ದೇವತೆಗಳಲ್ಲಿ ಒಬ್ಬ. ಶಿವನಿಗೆ ಸಮಾನವಾಗಿ ಪೂಜೆ ಸ್ವೀಕರಿಸುವವ. ಇವನೇ ಪರತತ್ವ. ಸೃಷ್ಟಿ-ಸ್ಥಿತಿ-ಲಯಕ್ಕೂ ಕಾರಣೀಭೂತ. ಸರ್ವಮೂಲವು, ಸರ್ವಮಯವೂ ಆಗಿರುವವನು. “ತ್ವಮೇವಕೇವಲಂಕರ್ತಾsಸಿ| ತ್ವಮೇವಕೇವಲಂಧರ್ತಾsಸಿ| ತ್ವಮೇವಕೇವಲಂಹರ್ತಾsಸಿ|”. “ತ್ವಂಬ್ರಹ್ಮಾ ತ್ವಂವಿಷ್ಣುಸ್ತ್ವಂರುದ್ರಸ್ತ್ವಮಿಂದ್ರಸ್ತ್ವಮಗ್ನಿಸ್ತ್ವಂವಾಯುಸ್ತ್ವಂಸೂರ್ಯಸ್ತ್ವಂಚಂದ್ರಮಾಸ್ತ್ವಂಬ್ರಹ್ಮಭೂರ್ಭುವ: ಸುವರೋಮ್”.  ಗಣಪತಿ ಅಥರ್ವಶೀರ್ಷದಲ್ಲಿ ಬರುವ ಈ ಮಾತುಗಳು ಅವನ ಮಹಿಮೆಯನ್ನು ಹೇಳುತ್ತದೆ.

ಮಣ್ಣಿನ ಗಣಪತಿಯ ಪೂಜೆ:



ಇನ್ನು ಗಣಪತಿಯ ಹಬ್ಬದಂದು ಮಾಡುವಂತಹ ಕ್ರಿಯೆಗಳ ಬಗ್ಗೆ ಗಮನಹರಿಸೋಣ. ಮೊದಲನೆಯದು, ಮಣ್ಣಿನ ವಿಗ್ರಹವನ್ನು ಮಾಡಿ, ಪೂಜೆಯಾದ ನಂತರ ಅದನ್ನು ನೀರಿನಲ್ಲಿ ವಿಸರ್ಜನೆ ಮಾಡುವುದು. “ನಿಮ್ಮ ದೇವರನ್ನು ನೀರುಪಾಲು ಮಾಡಿಬಿಟ್ಟಿರಲ್ಲ” ಎಂಬ ಕುಹಕದ ಮಾತು ಇದಕ್ಕೆ ಅಂಟಿಕೊಂಡಿದೆ. ಮೂಲಾಧಾರ ಚಕ್ರವು ಪೃಥ್ವಿತತ್ವದ ಸ್ಥಾನ ಸ್ವಾಧಿಷ್ಠಾನ ಜಲತತ್ವದ ಸ್ಥಾನ. ಅಂತರಂಗದಲ್ಲಿ ಯೋಗಿಗಳು ಮೂಲಧಾರ ಪ್ರದೇಶದಲ್ಲಿ ಗಣೇಶನನ್ನು ಪೂಜಿಸಿ, ಅದರ ಮೇಲಿರುವ ಸ್ವಾಧಿಷ್ಠಾನ ಚಕ್ರದಲ್ಲಿ ಗಣೇಶನೊಡನೆ ಮನೋಲಯ ಮಾಡುತ್ತಾರೆ. ಆದರೆ ಯೋಗಿಗಳಲ್ಲದವರಿಗೆ, ಒಳಪ್ರಪಂಚದ ಸಂಸ್ಕಾರವನ್ನು ಉಂಟುಮಾಡಿ ಅವರೂ ಗಣೇಶನ ಅನುಗ್ರಹಕ್ಕೆ ಪಾತ್ರರಾಗಲು, ಪೃಥ್ವಿತತ್ವದ ಸೂಚಕವಾಗಿ ಮಣ್ಣನ್ನು ತೆಗೆದುಕೊಂಡು, ಅದರಲ್ಲಿ ಗಣಪತಿಯ ವಿಗ್ರಹವನ್ನು ಮಾಡಿ, ಅದನ್ನು ನೀರಿನಲ್ಲಿ (ಜಲತತ್ವದಲ್ಲಿ) ಲಯಗೊಳಿಸುವುದು ಎನ್ನುವ ಯುಕ್ತಿಯಿಂದ ಸಂಪ್ರದಾಯವನ್ನು ತಂದಿದ್ದಾರೆ.

ಚಂದ್ರ ದರ್ಶನ ನಿಷೇಧ:

ಚೌತಿ ದಿನದಂದು ಚಂದ್ರನನ್ನು ನೋಡಬಾರದು. ಪ್ರಕೃತಿಯ ಕೆಲವು ದೃಶ್ಯಗಳು, ಕೆಲವು ಘಟನೆಗಳು, ಮನಸ್ಸಿನ ಮೇಲೆ ಪರಿಣಾಮ ಬೀರುವುದು ತಿಳಿದಿರುವ ವಿಷಯವೇ. ಗಣೇಶ ಚತುರ್ಥಿಯ ರಾತ್ರಿಯಲ್ಲಿ ಗಣೇಶನ ನಿಜಸ್ವರೂಪ ಅನುಭವಿಸುತ್ತಾ ಆನಂದವಾಗಿರಬೇಕು. ಆ ದಿನ, ಚಂದ್ರನನ್ನು ನೋಡಿದರೆ, ಗಣೇಶನನ್ನೇ ಹಾಸ್ಯ ಮಾಡುವ ದುರ್ಬುದ್ಧಿ ಉಂಟಾಗುತ್ತದೆ. ಪೀಡಾ ಪರಿಹಾರಕ ಕೇಂದ್ರಗಳು ಅರಳುವ ಬದಲು, ಅಪಯಶಸ್ಸು, ಪೀಡೆಗೆ  ಕಾರಣವಾದಕೇಂದ್ರಗಳು ಅರಳುತ್ತವೆ. ಹಾಗಾಗಿ ಪರಿಹಾರಕ್ಕೋಸ್ಕರವಾಗಿ ಸ್ಯಮಂತಕೋಪಾಖ್ಯಾನವನ್ನು ಶ್ರದ್ಧಾಭಕ್ತಿಯಿಂದ ಕೇಳಬೇಕು.

ನೈವೇದ್ಯದಲ್ಲಿ ಬಳಸುವ ದ್ರವ್ಯಗಳ ಮಹತ್ವ:

ನೈವೇದ್ಯಗಳಾದ ಕಡುಬು, ಮೋದಕ, ಚಕ್ಕುಲಿ, ಪಂಚಕಜ್ಜಾಯ ಗಣಪತಿಗೆ ಸಂಬಂಧಿಸಿದ ಕೇಂದ್ರಗಳನ್ನು ತೆರೆಸುತ್ತವೆ. ಗರಿಕೆ ಗಣೇಶನಿಗೆ ಗಣಪತಿಯಲ್ಲಿ ಮನಸ್ಸನ್ನು ನಿಲ್ಲಿಸಲು ಸಹಾಯಕವಾಗುತ್ತದೆ.

ಹೀಗೆ ನಮ್ಮಲ್ಲೇ ಅನವರತವೂ ಬೆಳಗುತ್ತಿರುವ ಗಣೇಶನನ್ನು ಅವನ ಪ್ರಸನ್ನತೆಗೆ ಕೂಡಿ ಬರುವ ಕಾಲ ವಿಶೇಷವಾದ, ಯೋಗ-ಭೋಗವನ್ನೂ ನೀಡುವ ಈ ಗಣೇಶ ಚತುರ್ಥಿ ಹಬ್ಬವನ್ನು, ಋಷಿಗಳ ಮೂಲ ಆಶಯದಂತೆ ಆಚರಿಸಿ ಭಗವಂತನ ಕೃಪೆಗೆ ಪಾತ್ರರಾಗೋಣ.