Saturday, November 21, 2020

ಹತ್ತಿರವಿದ್ದರೂ ಪರಿಚಯವಿಲ್ಲದ ವಸ್ತು (Hattiraviddaru Paricayavillada Vastu)

ಲೇಖಕರು : ಸುಮುಖ ಹೆಬ್ಬಾರ್
(ಪ್ರತಿಕ್ರಿಯಿಸಿರಿ lekhana@ayvm.in)ಒಂದು ಮಗುವಿಗೆ ಆಟದ ಚೀಲದಲ್ಲಿ ಒಂದು ಆಶ್ಚರ್ಯಕರವಾದ ಆಟಿಕೆ ಕಾಣಿಸಿತು. ಅದೊಂದು ಪ್ಲಾಸ್ಟಿಕ್ ನಿಂದ ಮಾಡಲ್ಪಟ್ಟ ಸಾಮಾನ್ಯ ವಸ್ತು ಎನಿಸಿತು. ಅದರಲ್ಲಿನ ಗುಂಡಿಗಳನ್ನು ಒತ್ತಿದಾಗ, ಅತ್ತ ಕಡೆಯಿಂದ ಪರಿಚಯಸ್ಥರು ಮಾತನಾಡುವುದು ಕೇಳಿತು. ಖುಷಿಯಿಂದ ಮಾತನಾಡಿತು. ಕಾಲಕ್ರಮೇಣ ಬೆಳೆದ ಮಗುವು, ಅದರಲ್ಲಿ ಸಂದೇಶವನ್ನು ರವಾನಿಸಿತು. ಆಟಗಳನ್ನೂ ಆಡಬಹುದೆಂದು ತಿಳಿದುಕೊಂಡಿತು. ಇಷ್ಟವಾದ ಹಾಡುಗಳನ್ನು ಕೇಳಲು ಕಲಿಯಿತು. ಭಾವಚಿತ್ರ ಮತ್ತು ದೃಶ್ಯವನ್ನು ಸೆರೆಹಿಡಿಯಿತು. ಇನ್ನೂ ಬೆಳೆದು ಹುಡುಗನಾಗಿ, ಅಂತರ್ಜಾಲವನ್ನು ಇದರಲ್ಲಿ ಬಳಸಿಕೊಂಡಾಗ ಹೊಸ ಪ್ರಪಂಚವೇ ಎದುರು ತೆರೆದು ನಿಂತಿತ್ತು. ಮಗುವಾಗಿದ್ದಾಗ ಸಾಮಾನ್ಯ ಎಂದೆನಿಸಿದ್ದ ವಸ್ತು, ಅದ್ಭುತಗಳ ಆಗರವಾದ ಮೊಬೈಲ್ ಎಂದು ಅರ್ಥವಾಗಿತ್ತು.

ನಮ್ಮ ಜೀವನದಲ್ಲಿಯೂ ಪ್ರಯೋಜನವನ್ನು ತಿಳಿಯದ ಅನೇಕ ವಿಷಯಗಳಲ್ಲಿ ನಮ್ಮ ದೇಹವೂ ಒಂದಾಗಿದೆ. ದಿನವಿಡೀ ದೇಹವನ್ನು ಹೊತ್ತು ತಿರುಗುತ್ತಿದ್ದರೂ, ಅದರ ಬಗೆಗಿನ ಪೂರ್ಣ ಪರಿಚಯವಿಲ್ಲ. ದಿನದಿಂದ ದಿನಕ್ಕೆ ಮಾನವ ದೇಹದ ವೈಶಿಷ್ಟ್ಯಗಳನ್ನು ವೈದ್ಯಕೀಯ ಲೋಕದ ಸಂಶೋಧನೆ ಬಿಚ್ಚಿಡುತ್ತಲೇ ಇದೆ. ಸಾಮಾನ್ಯ ದೃಷ್ಟಿಯಲ್ಲಿ ನೋಡಿದಾಗ ಇದೊಂದು ಚರ್ಮದಿಂದ ಸುತ್ತಿಕೊಂಡ ಮೂಳೆ ಮಾಂಸದ ಮುದ್ದೆ. ದೇಹವು, ಇಂದ್ರಿಯ ಸುಖ ಅನುಭವಿಸುವ ಜಾಗ. ಸುಖವನ್ನು ಅನುಭವಿಸಲು ಅರ್ಥದ ಸಂಪಾದನೆ, ತನ್ಮೂಲಕ ಕಾಮನೆಗಳ ಸೇವನೆ, ಎಂಬಂತೆ ಇಷ್ಟರಲ್ಲೇ ಸಮಾಜದ ಕೆಲವರಲ್ಲಿ ನಡೆ ಕಾಣುತ್ತಿದೆ. ವಿಶೇಷವಾಗಿ ಮಾನವನಲ್ಲಿ ವಿವೇಚನಾ ಶಕ್ತಿಯುಂಟು. 

 ಬ್ರಹ್ಮನು ಸೃಷ್ಟಿಯನ್ನು ಮಾಡುತ್ತಾ ಮಾನವನನ್ನು ಸೃಷ್ಟಿಸಿದಾಗ, ತಾನು ಎಂತಹ ಅದ್ಬುತ ಸೃಷ್ಟಿ ಮಾಡಿಬಿಟ್ಟೆ ಎಂದು ನಿಬ್ಬೆರಗಾದನಂತೆ. ಅದರ ವೈಶಿಷ್ಟ್ಯವನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಂಡವರು ಮಹರ್ಷಿಗಳು. ಮೊಬೈಲ್ ನ ಒಳಹೊಕ್ಕು ನೋಡಿದಷ್ಟೂ ಅದರಲ್ಲಿನ ಉಪಯೋಗಗಳು ಮತ್ತು ಒಳಗೊಂಡಿರುವ ಅಂಶಗಳು ಹೊರಬರುವಂತೆ, ಮಹರ್ಷಿಗಳ ದೃಷ್ಟಿಕೋನದಲ್ಲಿ, ಮಾನವ ದೇಹವು ಅಂತರಂಗದಲ್ಲಿ ಅಪಾರವಾದ ಸುಖವನ್ನು ಅನುಭವಿಸಲಾಗುವ ಒಡಲು. ಒಬ್ಬ ಇಡೀ ಭೂಮಂಡಲಕ್ಕೆ ರಾಜನಾದವನು, ತನ್ನ ಜೀವಿತಾವಧಿಯಲ್ಲಿ ಅನುಭವಿಸುವ ಆನಂದದ ಕೋಟಿ ಕೋಟಿ ಪಾಲಿನಷ್ಟು ಸುಖವನ್ನು, ಈ ದೇಹದಲ್ಲಿ ಬ್ರಹ್ಮಾನುಭವದಿಂದ ಅನುಭವಿಸಲು ಸಾಧ್ಯವಿದೆ. ಈ ಸುಖವನ್ನು ಅನುಭವಿಸುವುದಕ್ಕೋಸ್ಕರವೇ ಮಾನವ ದೇಹದ ಸೃಷ್ಟಿಯಾಗಿದೆ. ಇದೇ ಜೀವನದ ಗುರಿ. ಹಾಗಾಗಿ ದೇಹವನ್ನು ಧರ್ಮ-ಸಾಧನ  ಎಂಬುದಾಗಿ, ಭಗವಂತನ ಬಳಿಗೆ ತಲುಪಿಸುವ ರಥ, ಸೇತುವೆ, ಏಣಿ ಅಥವಾ ವಿಮಾನವಾಗಿಯೂ ಕಂಡಿದ್ದಾರೆ. ಆತ್ಮಸಾಧಕನಿಗೆ, ಸಾಧನೆ ಮಾಡಲು ಕ್ಷೇತ್ರವೂ ಆಗಿದೆ.

ನಮ್ಮ ಶರೀರಕ್ಕೆ ಏನು ಬೆಲೆ ಎಂದು ಕೇಳಿದರೆ "ಸ್ವಾಮಿ ಇದರಲ್ಲೇನಿದೆ? ಇಷ್ಟು ಕ್ಯಾಲ್ಸಿಯಂ, ಸ್ವಲ್ಪ ಐರನ್" ಎಂದು, ಒಟ್ಟು ಇವತ್ತಿನ ಬೆಲೆಯಲ್ಲಿ ಒಂದು ಹನ್ನೆರಡಾಣೆ   ಸಾಮಾನು ಆಗಬಹುದು ಎನ್ನುತ್ತಾನೆ. ಅದೇ ಮಹರ್ಷಿಗಳನ್ನು ಕೇಳಿದರೆ, "ಅದು ಅನರ್ಘ್ಯವಾದುದು, ಜಗತ್ತಿನಲ್ಲಿ ಇನ್ನಾವುದೂ ಈ ತರಹ ಬೆಲೆಬಾಳುವ ವಸ್ತುವಿಲ್ಲ ಎನ್ನುತ್ತಾರೆ" ಎಂಬುದು ಮಹರ್ಷಿ ಹೃದಯವೇದಿಗಳಾದ  ಶ್ರೀರಂಗ ಮಹಾಗುರುಗಳ ಅಭಿಪ್ರಾಯವಾಗಿತ್ತು. ಸಂವಹನಕ್ಕಾಗಿ ಸೃಷ್ಟಿಯಾಗಿರುವ ಮೊಬೈಲ್, ಬರಿ ಆಟವಾಡಲು ಬಳಕೆಯಾದರೆ, ಅದರ ಪೂರ್ಣ ಪ್ರಯೋಜನ ಪಡೆದಂತೆ ಆಗಲಾರದು.  ಹಾಗೆಯೇ  ಭಗವತ್ಸಾಕ್ಷಾತ್ಕಾರಕ್ಕೆಂದು ಸೃಷ್ಟಿಯಾದ ಮಾನವ ದೇಹವು ಇಂದ್ರಿಯ ಸುಖಗಳಿಗೆ ಸೀಮಿತವಾದರೆ, ಅದು ವ್ಯರ್ಥವಾದಂತೆಯೇ ಸರಿ. ದ್ದರಿಂದ ನಮ್ಮ ದೇಹವು ಸೃಷ್ಟಿಯಾದ ಉದ್ದೇಶಕ್ಕೆ ಅನುಗುಣವಾಗಿ, ಪರಮಸುಖವನ್ನು ಅನುಭವಿಸುವಂತಾಗಲಿ ಎಂದು ಪ್ರಾರ್ಥಿಸೋಣ


ಸೂಚನೆ: 21/11/2020 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ದಲ್ಲಿ ಪ್ರಕಟವಾಗಿದೆ.