Sunday, November 8, 2020

ಯೋಗದ ಅಂಗಗಳು ; ಯಮ - ಅಹಿಂಸೆ (Yogada Angagalu ; Yama - Ahimse)

ಲೇಖಕರು: ಶ್ರೀ. ಜಿ ನಾಗರಾಜ
(ಪ್ರತಿಕ್ರಿಯಿಸಿರಿ lekhana@ayvm.in)


ಯಮ ಪದದ ಸಮಾನಾರ್ಥಕ ಪದಗಳು ಸಂಯಮ ಅಥವಾ ಹತೋಟಿ. ಯಾವುದಾದರೂ ಒತ್ತಡ ಅಥವಾ ವೇಗಕ್ಕೆ ಒಳಗಾಗಿ ಮಾಡುವ ಪ್ರಕ್ರಿಯೆಯನ್ನು ತಡೆಯುವುದೇ ಯಮ. ಹಿಂಸೆಯನ್ನು ಮಾಡದಿರುವುದು ಅಹಿಂಸೆ, ಸುಳ್ಳು ಹೇಳದಿರುವುದು ಸತ್ಯ, ಕಾಯಾ, ವಾಚಾ, ಮನಸಾ ಕಳ್ಳತನವನ್ನು ಮಾಡದೇ ಇರುವುದು ಅಸ್ತೇಯ, ಅವಿವಾಹಿತರು ಕಾಯಾ, ವಾಚಾ, ಮನಸಾ ಸ್ತ್ರೀಸಂಗವನ್ನು, ವಿವಾಹಿತರು ಪರಸ್ತ್ರೀಸಂಗವನ್ನೂ ಮಾಡದೇ ಇರುವುದು ಬ್ರಹ್ಮಚರ್ಯ, ಹಾಗೂ ದಾನವನ್ನು ಸ್ವೀಕರಿಸದೇ ಇರುವುದು ಅಪರಿಗ್ರಹ; ಈ ಐದು ಉಪಾಯಗಳು ಪಾತಂಜಲ ಯೋಗಸೂತ್ರದಲ್ಲಿ ಯಮ ಎಂದು ಪ್ರಸಿದ್ಧವಾಗಿವೆ.

ಯಮದಲ್ಲಿ ಮೊದಲನೆಯದಾದ ಅಹಿಂಸೆಯ ಬಗ್ಗೆ ಇಂದು ಸೀಮಿತವಾದ ಅಭಿಪ್ರಾಯಗಳಿವೆ. ಅಹಿಂಸೆಯು ಒಂದೋ ಸಂಪೂರ್ಣವಾಗಿ ಪಾಲನೆ ಮಾಡುವ ಇಲ್ಲದಿದ್ದರೆ ಕೊಂಚವೂ ಪಾಲನೆ ಮಾಡದೇ ಇರುವಂತಹ ಆಚರಣೆಯಾಗಿದ್ದು ಮಹಾತ್ಮ ಗಾಂಧೀಜಿ, ಜೈನ ಮುನಿಗಳು ಅಥವಾ ಅವರ ಅನುಯಾಯಿಗಳಿಗೆ ಮಾತ್ರ ಅದರ ಪೂರ್ಣ ಆಚರಣೆ, ಉಳಿದವರಿಗೆ ಅದರ ಸಂಬಂಧವಿಲ್ಲ ಎನ್ನುವ ಅಪ್ರಕಟಿತ ಇಂಗಿತ ಜನಮನಗಳಲ್ಲಿ ಮನೆ ಮಾಡಿರುತ್ತದೆ. ಆದರೆ, ಅಹಿಂಸೆಯು ಎಲ್ಲರಿಗೂ ಅವಶ್ಯವಾದ ವ್ರತವಾಗಿದ್ದು ಅದು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಅಭ್ಯಾಸವಾಗಿದೆ.

ಹಿಂಸೆಯು, ಕಾಯಾ, ವಾಚಾ, ಮನಸಾ ಎಂದು ಮೂರು ವಿಧವಾಗಿರುತ್ತದೆ. ಹೊಡೆದು, ಬಡಿದು, ಶಾರೀರಿಕವಾದ ನೋವನ್ನುಂಟು ಮಾಡುವುದು ಕಾಯಿಕ ಹಿಂಸೆಯಾದರೆ, ಮಾತಿನಿಂದ ನೋಯಿಸುವುದು ವಾಚಿಕ ಹಿಂಸೆಯಾಗಿರುತ್ತದೆ. ಅಂತೆಯೇ ವರ್ತನೆಯಿಂದ, ಭಾವನೆಗಳಿಂದ ಮತ್ತೊಬ್ಬರ ಮನಸ್ಸನ್ನು ನೋಯಿಸುವುದು ಮಾನಸಿಕ ಹಿಂಸೆ ಎಂದು ಪರಿಗಣಿಸಲ್ಪಡುತ್ತದೆ. ಇದಲ್ಲದೇ ಅಹಿಂಸೆಗೆ ಇನ್ನೂ ಮೂರು ವಿಧವೂ ಉಂಟು - ಕೃತ, ಕಾರಿತ, ಅನುಮೋದಿತ. ಅಂದರೆ, ನಾವೇ ಮಾಡುವ ಹಿಂಸೆಯು 'ಕೃತ', ನಾವು ಮತ್ತೊಬ್ಬರನ್ನು ಪ್ರಚೋದಿಸಿ ಮಾಡಿಸುವ ಹಿಂಸೆಯು 'ಕಾರಿತ' ಆಗುತ್ತದೆ. ಇವೆರಡಲ್ಲದೇ, ಯಾರೋ ಒಬ್ಬರು ಮತ್ತೊಬ್ಬರನ್ನು ಹಿಂಸಿಸುವಾಗ, ಹಾಗೇ ಆಗಬೇಕಿತ್ತು ಎಂದು ಅದನ್ನು ಅನುಮೋದಿಸುವುದು 'ಅನುಮೋದಿತ' ಹಿಂಸೆಯಾಗುತ್ತದೆ. ಮೊದಲ ಮೂರರ ಪ್ರತಿಯೊಂದು ವಿಧದಲ್ಲೂ ಎರಡನೆಯ ಮೂರು ವಿಧಗಳು ಅಡಕವಾಗಿದ್ದು, ಹಿಂಸೆಯು ಒಟ್ಟು ಒಂಬತ್ತು ವಿಧವಾಗಿರುತ್ತದೆ. ಅಂದರೆ - ಕಾಯಾ-ಕೃತ , ಕಾಯಾ-ಕಾರಿತ, ಕಾಯಾ-ಅನುಮೋದಿತ ಎಂದು ಕಾಯಿಕ ಹಿಂಸೆಗಳು ಮೂರು ವಿಧವಾಗಿರುವಂತೆ, ವಾಚಿಕ, ಅನುಮೋದಿತ ಹಿಂಸೆಗಳು ಮೂರು, ಮೂರು ವಿಧವಾಗಿದ್ದು ನವವಿಧ ಹಿಂಸೆಗಳಾಗುತ್ತವೆ. ಈ ಎಲ್ಲ ವಿಧವಾದ  ಹಿಂಸೆಗಳನ್ನು ಆಚರಿಸದಿರುವುದು (ಅಹಿಂಸೆಯು), ಆಚರಿಸಲು ಯೋಗ್ಯವಾದ ಪರಮ ಶ್ರೇಷ್ಠವಾದ ವ್ರತವಾಗಿದೆ.  

ಸೂಚನೆ: 31/10/2020 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.