Sunday, November 1, 2020

ಆರ್ಯಸಂಸ್ಕೃತಿ ದರ್ಶನ - 16 (Arya Samskruti Darshana - 16)

ಜ್ಞಾನಿಗಳು ಕಂಡ ಸ್ವಾರಾಜ್ಯ-ಸುಖೀ ರಾಜ್ಯ
ಲೇಖಕರು: ವಿದ್ವಾನ್ ಶ್ರೀ ಛಾಯಪತಿ



ನಾಡಿನ ಆಗುಹೋಗುಗಳ ಚಾಲಕ ಶಕ್ತಿ ಅಲ್ಲಿನ ರಾಜಕೀಯ ವ್ಯವಸ್ಥೆ. ವಿಶ್ವದ ಎಲ್ಲ ರಾಷ್ಟ್ರಗಳಲ್ಲಿಯೂ ಈ ವ್ಯವಸ್ಥೆಯೇ ಮೇಟಿಗೋಲು. ನಾಡಿನ ಪ್ರತಿ ವ್ಯಕ್ತಿಯ ಜೀವಿತವು ಅರಳುವುದು ಈ ವ್ಯವಸ್ಥೆಯ ಅವಲಂಬನದಿಂದಲೇ. ಅದು ಸರ್ವಾಧಿಕಾರೀ ವ್ಯವಸ್ಥೆ ಯಾಗಲಿ, ಪ್ರಜಾಸತ್ತೆಯಾಗಲಿ, ಸಮತಾವಾದೀ ಆಡಳಿತವಾಗಲಿ, ನಾಡ ಮುನ್ನಡೆಯಲ್ಲಿ ಆಡಳಿತ ಸೂತ್ರಧಾರಿಗಳದೇ ನಿರ್ಣಾಯಕ ಪಾತ್ರ. ಶಿಕ್ಷಣ, ಕಲೆ, ವಿಜ್ಞಾನ, ವಾಣಿಜ್ಯ, ಕೈಗಾರಿಕೆ, ಹೀಗೆ ನಾಡಿನ ಎಲ್ಲ ಮುಖಗಳ ಆಗು ಹೋಗುಗಳೂ ರಾಜ್ಯ ವ್ಯವಸ್ಥೆಯ ರೀತಿ ನೀತಿಗಳನ್ನೇ ಅವಲಂಬಿಸಿರುತ್ತವೆ.

ವಿಶ್ವದಲ್ಲಿ ಕಂಡುಬರುವ ರಾಜ್ಯ ವ್ಯವಸ್ಥೆಗಳಲ್ಲಿ ಪ್ರಜಾಸತ್ತೆಯೇ ಅತ್ಯುತ್ತಮವಾದುದೆಂದು ನಮ್ಮ ನಾಡಿನ ರಾಜಕೀಯ ತಜ್ಞರು ನಿರ್ಣಯಿಸಿ, ಭಾರತ ಸರ್ವತಂತ್ರ ಸ್ವತಂತ್ರ ಗಣರಾಜ್ಯವೆಂದು ಘೋಷಿಸಿ, ಮೂವತ್ತು ವರ್ಷಗಳು ಸಂದಿವೆ. ಪ್ರತಿ ಪ್ರಜೆಯ ವ್ಯಕ್ತಿತ್ವ ವಿಕಾಸಕ್ಕೆ ಅವಕಾಶ ನೀಡಿ ಸುಖಿಯನ್ನಾಗಿ ಮಾಡುವ ಸುಖೀ ರಾಜ್ಯ ನಿರ್ಮಾಣದ ಸಂಕಲ್ಪದೊಂದಿಗೇ ನಮ್ಮ ಗಣರಾಜ್ಯವೂ ರೂಪುಗೊಂಡಿತು.

ಮುಂದುವರಿದ ದೇಶಗಳು ತಮ್ಮ ಪ್ರಜೆಗಳಿಗೆ ನೀಡುತ್ತಿರುವ ಸುಖ ಸಾಧನಗಳನ್ನು ಒದಗಿಸುವ ಮಹತ್ವಾಕಾಂಕ್ಷೆಯಿಂದ ನಾಡು ಬೃಹದ್ಯೋಜನೆಗಳನ್ನು ಕೈಗೊಂಡಿತು, ಭಾರೀ ಅಣೆಗಳು ನಿರ್ಮಾಣಗೊಂಡವು. ಬೃಹತ್ ಕೈಗಾರಿಕೆಗಳು ಸ್ಥಾಪಿತವಾದವು. ತಾಂತ್ರಿಕ ಪ್ರಗತಿ, ಬಾಹ್ಯಾಕಾಶ ಶೋಧನೆಗಳಲ್ಲಿಯೂ ಭಾರತ ಹಿಂದೆ ಬೀಳಲಿಲ್ಲ. ಇದೀಗ ತೊಂಭತ್ತೆಂಟು ಸಾವಿರ ಕೋಟಿ ರೂಪಾಯಿಗಳ ಆರನೆ ಯೋಜನೆಯನ್ನು ರೂಪಿಸುತ್ತಿದೆ. ಎಂತಹವರಿಗಾದರೂ ಹೆಮ್ಮೆ ಎನಿಸುವಂತಹ ಸಾಧನೆಯಲ್ಲವೇ ಇದು?

ಹೌದು, ಅದು ನಿಜ. ಈ ಸಾಧನೆಗಳ ಸಿದ್ಧಿಯನ್ನು ಗಮನಿಸಿ ನಾಡಿನ ವಿವಿಧ ರಂಗವನ್ನೂ, ಜನ ಜೀವನವನ್ನೂ, ಗಮನಿಸಿದಾಗ ಮೂಡುವ ಚಿತ್ರವೇ ಬೇರೆ. ಪಕ್ಷ ಪ್ರತಿಪಕ್ಷಗಳ ಕಿತ್ತಾಟ, ಸ್ವಾರ್ಥಪೂರಿತ ರಾಜಕಾರಣಿಗಳ ಪಕ್ಷಾಂತರಗಳ ಹಾವಳಿ, ತಾವು ನೀಡುವ ಆಶ್ವಾಸನೆಯನ್ನು ಸ್ಥಳದಲ್ಲೇ ಮರೆಯುವ ನಾಯಕಗಣ, ರಾಷ್ಟ್ರದ ಮುನ್ನಡೆಯರಿಯದ, ದೂರಗಾಮಿ ನೋಟವಿಲ್ಲದ ಜನಗಳಿಂದ ತುಂಬಿದ ರಾಜಕೀಯ, "ರಾಜಕೀಯ ಮೂರ್ಖರ ಹವ್ಯಾಸ" ಎನ್ನುವುದನ್ನು ನಿಜವಾಗಿಸಿದೆ. ಮೂರ್ಖರಷ್ಟೇ ಆದರೆ ಚಿಂತೆಯಿಲ್ಲ, ಕಿಡಿಗೇಡಿಗಳ ಹವ್ಯಾಸವಾಗಿ ಉಳಿದಿದೆ. ವಿಶ್ವಾಸಾರ್ಹ ನಾಯಕರನ್ನೇ ಕಾಣದ ಪ್ರಜಾವರ್ಗ ಹತಾಶೆಯಿಂದ ತತ್ತಸುತ್ತಿದೆ. ಗುರಿಯಿಲ್ಲದ ಸುಧಾರಣೆಗಳಿಂದ ಅವ್ಯವಸ್ಥಿತವಾದ ಶಿಕ್ಷಣ ರಂಗ, ಅದರಿಂದ ಕ್ಷೋಭೆಗೊಂಡ ವಿದ್ಯಾರ್ಥಿಗಳ ಗಲಭೆ, ದೇಶಕ್ಕೆ ತಲೆನೋವಾಗಿದೆ. ದೊಂಬಿ, ಗಲಭೆ, ಮುಷ್ಕರ, ಬಂದ್ ಗಳು ದಿನನಿತ್ಯದ ಮಾತಾಗಿದೆ. ಕಾರ್ಮಿಕ, ರೈತ, ನೌಕರರು, ವಾಣಿಜ್ಯರಂಗ, ಹೀಗೆ ಪ್ರತಿವರ್ಗಗಳ ಜನರೂ ಬಾಳು ದುಸ್ಸ್ಸಹವಾಗಿ ಸಂಘರ್ಷಕ್ಕಿಳಿಯುತ್ತಿದ್ದಾರೆ. ಹೊರಲಾಗದ ಕರಭಾರ, ಏರುಬೆಲೆಗಳು, ಕಪ್ಪು ಹಣದ ವಿಷಜಾಲ, ವಿದೇಶಿ ಸಾಲದ ಹೊರೆ, ಹಣದುಬ್ಬರ ಇವುಗಳಿಂದ ಆರ್ಥಿಕರಂಗ ತತ್ತರಿಸುತ್ತಿದೆ. ತಾಳಲಾರದ ನೋವಿನಿಂದ ಬಳಲುವ ಜನಗಳ ಕೋಪ ಬಗೆಬಗೆಯಲ್ಲಿ ಹೊಮ್ಮುತ್ತಿದೆ. ದೇಶವೇ ಅಶಾಂತಿಯ ಅಗ್ನಿಕುಂಡವಾಗುತ್ತಿದೆ. ಪ್ರತಿಶತ ನಲವತ್ತೆಂಟಕ್ಕೂ ಹೆಚ್ಚು ಜನ ದಾರಿದ್ರ್ಯರೇಖೆಯ ಕೆಳ ಹಂತದಲ್ಲಿದ್ದಾರೆಂಬ ಅಂಕಿ ಅಂಶಗಳ ದಾಖಲೆ ಯಾವ ಆಳ್ವಿಕೆಗೆ ತಾನೇ ಮಾನ ತರುವಂತಹುದು? ಪರಿಹಾರ ಕಾಣದ ಹತಾಶ ಭಾವನೆ ನಾಡಿನ ಎಲ್ಲ ರಂಗವನ್ನೂ ತುಂಬಿಕೊಂಡಿದೆ.

ಇದು ಸುಖೀ ರಾಜ್ಯ ನಿರ್ಮಾಣದತ್ತ ನಾಡು ನಡೆದಿರುವ ಹಾದಿ. ಇಂದಿಗಿಂತ ನಾಳೆ ಸುಖ ಎನ್ನುವ ನಿರೀಕ್ಷೆಯಿರಲಿ, ಇಂದಿರುವ ಸ್ಥಿತಿಯಾದರೂ ನಾಳೆ ಉಳಿದಿರಲಿ, ನಾಳೆ ಮತ್ತಷ್ಟು ವಿಷಮ ಸ್ಥಿತಿಯನ್ನು ಕಾಣದಿದ್ದರೆ ಸಾಕು ಎಂದು ಹಂಬಲಿಸುತ್ತಿದೆ ಜನತೆ. ಅನ್ನ, ವಸ್ತ್ರ, ವಸತಿಗಳಂತಹ ಅನಿವಾರ್ಯ ಅಗತ್ಯಗಳನ್ನೂ ಜನತೆ ಪಡೆಯದಿರುವಾಗ ಸಮೃದ್ಧ ದೇಶಗಳ ಸೌಲಭ್ಯಗಳನ್ನು ಪಡೆಯುವುದು ಅತಿ ನಿರೀಕ್ಷಿಯೇ ಸರಿ.

ರಾಜಕೀಯಸ್ಥರ ತಪ್ಪು ನೀತಿಗಳು, ಜನರ ಅಜ್ಞಾನ, ಏರುತ್ತಿರುವ ಪ್ರಜಾ ಸಂಖ್ಯೆ ಇವುಗಳು ಈ ಸ್ಥಿತಿಗೆ ಸಾಕಷ್ಟು ಕಾರಣವಾಗಿದೆ ಎಂಬುದು ನಿಜ. ಆದರೆ ಸಮೃದ್ಧ ದೇಶಗಳೆಂದು ನಾವು ತಿಳಿದಿರುವ ದೇಶದ ಜನಗಳು ಎಲ್ಲ ಬಗೆಯಲ್ಲಿಯೂ ಸುಖಿಗಳೆ?  ಅವರಿಗೆ ಯಾವ ಕೊರತೆಯೂ ಇಲ್ಲವೆ?  ಹೌದು ಎನ್ನಬಹುದಾದರೂ ಇಲ್ಲವೆನ್ನುತ್ತವೆ ಅಲ್ಲಿಯ ವರದಿಗಳು. ಅವರಿಗೆ ಅನ್ನವಿದೆ, ವಸ್ತ್ರವಿದೆ, ಸುಸಜ್ಜಿತ ವಸತಿಯಿದೆ, ವಾಹನ ಸೌಲಭ್ಯವಿದೆ, ಮನರಂಜನಾ ಸಾಧನಗಳಿವೆ, ಬಯಸಿದ ಸಾಮಗ್ರಿಗಳನ್ನು ಪಡೆಯುವಷ್ಟು ಸಂಪತ್ತಿದೆ. ಅತ್ಯುತ್ಕೃಷ್ಟ ಅಣ್ವಸ್ತ್ರ ಸಜ್ಜಿತ ಶಸ್ತ್ರಾಗಾರ ಅವರ ರಕ್ಷಣೆಗಿದೆ. ಬಾಹ್ಯಾಕಾಶ ಸಂಶೋಧನೆಯ ಶಿಖರದಲ್ಲಿವೆ ಆ ದೇಶಗಳು, ಆದರೂ ಅಲ್ಲಿನ ಜನತೆಯ ಮನಸ್ಸು ಕಾತರ, ಕಳವಳ, ಅಸುಖದ ಮನೋಭಾವದಿಂದ ಪರಿತಪಿಸುತ್ತಿದೆ -- ಎಂದು ಅಲ್ಲಿನವರ ಬರಹಗಳೇ ಬಿಂಬಿಸುತ್ತವೆ. ಏನು ಇದಕ್ಕೆ ಕಾರಣ?  ಬಗೆಬಗೆಯ ಸುಖ ಸಾಮಗ್ರಿಗಳಿಂದ ಜೀವನವನ್ನು ತುಂಬಿ ಬಿಟ್ಟರೆ ಪ್ರಜೆಗಳನ್ನು ಸುಖಿಗಳನ್ನಾಗಿ ಮಾಡಿದಂತಾಯಿತು -- ಎಂಬುದು ಇಂದಿನ ಆಡಳಿತ ಸೂತ್ರಧಾರಿಗಳ ಭಾವನೆ. ಅದಕ್ಕಾಗಿ ಶೋಧ, ಅದಕ್ಕಾಗಿ ಸ್ಪರ್ಧೆ. ಮಾನವನ ಬಯಕೆಯ ಪಟ್ಟಿ ಏರಿ ನಿಸರ್ಗ ಬರಿದಾಗುತ್ತಿದೆಯೇ ಹೊರತು, ಬಯಕೆ ಹಿಂಗಿಲ್ಲ, ತೃಪ್ತಿ ಕಂಡಿಲ್ಲ.

ಏಕೆ ಹೀಗೆ? ಮಾನವನ ಮನದ ಪ್ರವೃತ್ತಿಯೇ ಹೀಗೆ. ಒಂದು ಬಯಕೆ ತೀರಿದೊಡನೆ ಆ ಜಾಗದಲ್ಲಿ ಎರಡು ಏಳುತ್ತವೆ. ಅವು ಮುಗಿಯುವುದರೊಳಗೆ ಮತ್ತೆ ನಾಲ್ಕು. ಹೀಗೆ ಪುಟಿಯುವ ಬಯಕೆಗಳನ್ನೆಲ್ಲಾ ತಣಿಸ ಹೊರಡುವುದು, ಸಾಗರದ ಅಲೆಗಳನ್ನೆಲ್ಲಾ ಎಣಿಸ ಹೊರಡುವುದೂ ಎರಡೂ ಒಂದೇ. ವ್ಯರ್ಥಪ್ರಯಾಸ. ಬೇಕೆನ್ನುವುದನ್ನೆಲ್ಲಾ ತುಂಬುವುದು ಸುಖದ ಹಾದಿ ಎಂಬುದು ಮರೀಚಿಕೆ ಮಾತ್ರ. ನಿತ್ಯ ಪುಟಿಯುವ ಹೊಸ ಬಯಕೆಗಳುಳ್ಳ ಪ್ರಜಾವರ್ಗಗಳನ್ನೊಳಗೊಂಡ ಸಮೃದ್ಧ ದೇಶಗಳೂ ಸುಖೀರಾಜ್ಯಗಳೇನಲ್ಲ ಎಂಬುದಷ್ಟೇ ಇಲ್ಲಿ ಗಮನಾರ್ಹ ಅಂಶ.

ಹಾಗಾದರೆ ಸುಖೀ ರಾಜ್ಯ ಕೇವಲ ಕನಸೇ?  ಮರು ಮರೀಚಿಕೆಯೇ? ಪ್ರಜೆಗಳನ್ನು ಸುಖ-ಸಂತೃಪ್ತರನ್ನಾಗಿಡುವ ರಾಜ್ಯ ವ್ಯವಸ್ಥೆ ಕಾರ್ಯ ಸಾಧ್ಯವಲ್ಲವೆ? ಎಂಬ ಪ್ರಶ್ನೆಗಳೂ ಇಲ್ಲಿ ಏಳುತ್ತವೆ.

ಮಿತಿಯಿಲ್ಲದ ಬಯಕೆಗಳನ್ನು ಹರಡಿ ಅವನ್ನು ತುಂಬಲಾಗದೇ ಬವಣೆಪಡುವುದರಲ್ಲಿಲ್ಲ ಸುಖ. ಬಯಕೆಗಳಿಗೆ ಒಂದು ಸಹಜ ಮಿತಿಯನ್ನು ಗುರುತಿಸಿ ಇಷ್ಟು ಸಾಕು ಎಂಬುದರಲ್ಲಿದೆ ಸಂತೃಪ್ತಿಯ ಸುಖ. ಮನದ ಬಯಕೆಯ ಸಹಜ ಮಿತಿ ಯಾವುದು? ಬಾಳಿಗೆ ಎಷ್ಟು ದೊರೆತರೆ ಸಾಕು? ಬಾಳ ಗುರಿ ಏನು? ಅದರ ಈಡೇರಿಕೆಗೆ ಬೇಕಾದುದೆಷ್ಟು?  ಸಾಕು ಎಂಬ ಸಂತೃಪ್ತಿ ಮನದಲ್ಲಿ ಮೂಡುವುದೆಂತು? ಎಂಬ ಅಂಶಗಳೂ ಇಲ್ಲಿ ವಿಚಾರಾರ್ಹವಾಗಿವೆ. ಬಾಳ ಗುರಿಯನ್ನೂ, ಅಗತ್ಯವನ್ನೂ ಗುರುತಿಸಿ ಆ ನೇರಕ್ಕೆ ತಕ್ಕಂತೆ ಮನದ ಬಯಕೆಗಳನ್ನು ಅಳವಡಿಸಿಕೊಂಡರೆ, ಗುರಿ ಮುಟ್ಟಿದ ಬಾಳು ಸಂತೃಪ್ತವಾಗುವುದು ಸಾಧ್ಯ. ಆದರೆ ಈ ನಿರ್ಣಾಯಕ ಪ್ರಜ್ಞೆ ಬಾಳಿನ ಹರಹು, ತಾಳು, ತುದಿಗಳ ಸಮಗ್ರ ನೋಟವನ್ನೂ ಬಯಸುತ್ತದೆ ಎಂಬುದನ್ನು ಮರೆಯಬಾರದು.

ಹಾಗೆ ಬಾಳ ಗುರಿಯನ್ನರಿತು, ಅದಕ್ಕೆ ಹೊಂದಿಕೊಳ್ಳುವಂತೆ ರಾಜ್ಯ ವ್ಯವಸ್ಥೆಯ ಗುರಿಯನ್ನೂ ಅಳವಡಿಸಿ, ಸಂತೃಪ್ತಿಯ ಬಾಳನ್ನು ಪ್ರಜಾವರ್ಗ ಪಡೆಯುವಂತೆ, ರೂಪಿಸಿದ ವ್ಯವಸ್ಥೆಯುಂಟೇ ಎಂಬತ್ತಲೂ ನಾವು ಮನಹರಿಸಬೇಕಾಗಿದೆ,

ಭಾರತೀಯ ಮಹರ್ಷಿಗಳು -ಜ್ಞಾನಿಗಳು ರೂಪಿಸಿದ ರಾಜ್ಯ ವ್ಯವಸ್ಥೆಯ ಕಡೆಗೆ ನಮ್ಮ ಮನಹರಿಸಿದಾಗ ಅವರು ಅಂತಹ ರಾಜ್ಯ ವ್ಯವಸ್ಥೆಯ ಶಿಲ್ಪಿಗಳವರಾಗಿದ್ದರು ಎಂಬುದಕ್ಕೆ ಸಾಕಷ್ಟು ದಾಖಲೆಗಳು ಸಿಗುತ್ತವೆ.

ವಿಶ್ವದ ಪ್ರತಿ ಜೀವಿಗೂ ಅನ್ವಯಿಸಬಹುದಾದ ಬಾಳ ಗುರಿ ಏನು ?ಅದನ್ನು ಎಲ್ಲಿ ಹುಡುಕಬೇಕು? ಅದರ ನಿರ್ಣಯ ಹೇಗೆ?

ಬಾಳ ಗುರಿಯನ್ನು ಬಾಳು ಎಲ್ಲಿ ಅರಳುತ್ತಿದೆಯೋ ಆ ಬಾಳಿನಲ್ಲಿ ತಾನೇ ಹುಡುಕ ಬೇಕು?  ಒಂದು ಸಸ್ಯದ ಬೆಳವಣಿಗೆಯ ವಿಧಾನವನ್ನು ಎಲ್ಲಿ ಗಮನಿಸ ಬೇಕು?  ಸಸ್ಯ ಎಲ್ಲಿ ಬೆಳೆಯುತ್ತಿದೆಯೋ ಅಲ್ಲಿ ಗಮನಿಸಬೇಕು. ಹೇಗೆ ಹುಡುಕಬೇಕು? ಬಾಳ ಮೊದಲನ್ನು ಕೊನೆಯನ್ನೂ ಗುರುತಿಸಿ ಸಮಗ್ರವಾಗಿ ಹುಡುಕಬೇಕು. ಮಾವಿನ ಮರವೊಂದು ಹೇಗೆ ಅರಳುತ್ತದೆ? ಮಾವಿನ ಓಟೆಯಿಂದ ಆರಂಭಗೊಂಡು ಮೊಳೆ, ಎಲೆ, ಬೇರು, ಕಾಂಡ, ಚಿಗುರು, ಹೂವು, ಮಿಡಿ, ಕಾಯಿ, ಹಣ್ಣು, ಹೀಗೆ ಬೆಳೆದು ಮತ್ತೆ ಹಣ್ಣಿನೊಳಗೆ ಓಟೆಯಲ್ಲಿಯೇ ನಿಲ್ಲುವುದಿಲ್ಲವೇ ಆ ಬೆಳವಣಿಗೆ. ಆ ಬೀಜದಿಂದ ಮತ್ತೆ ಬೀಜವಾಗುವವರೆಗೆ ಬೆಳೆಯುವುದೇ ಅದರ ಗುರಿ.ಅದಕ್ಕನುಗುಣವಾಗಿ ಬೇಕಾದ ಅಗತ್ಯವನ್ನು ಪೂರೈಸುವುದೇ ಮಾವಿನ ವ್ಯವಸಾಯ ಕ್ರಮ.

ಅಂತೆಯೇ ಜೀವನ ವೃಕ್ಷಕ್ಕೂ ಒಂದು ಗೊತ್ತಾದ ವಿಕಾಸಕ್ರಮವಿದೆ. ಕಾಣುವ ದೇಹ ಅದರ ವಿಕಾಸದ ಮಧ್ಯದ ಸ್ಥಿತಿ. ದೇಹದ ರಚನೆ ಜೀವಾಣುವಿನಿಂದ ಅದಕ್ಕೂ ಹಿಂದೆ, ಹೊರ ಅಳತೆಗೆ ಸಿಲುಕದ, ಜ್ಞಾನಿಗಳ ಒಳ ನೋಟಕ್ಕೆ ಸಿಕ್ಕುವ ಪ್ರಕಾಶ ರೂಪದ ಚೈತನ್ಯ ಶಕ್ತಿ. ಆ ಬೆಳಕಿನ ರೂಪದ ಚೈತನ್ಯ ಶಕ್ತಿಯೇ ಮುಂದೆ ಬೆಳೆದ ಎಲ್ಲವನ್ನೂ ತುಂಬಿಕೊಳ್ಳುವ ಆತ್ಮ. ಅದೇ ಜೀವನದ ಬೀಜ. ಆತ್ಮರೂಪವಾದ ಬೀಜವು ಬುದ್ಧಿ, ಮನಸ್ಸು, ಇಂದ್ರಿಯ, ದೇಹಗಳ ರೂಪದಲ್ಲಿ ತನ್ನನ್ನು ಬಿಚ್ಚಿಕೊಂಡು ಬೆಳೆದಿದೆ. ಮತ್ತೆ ಆತ್ಮ ರೂಪದಲ್ಲಿಯೇ ನಿಲ್ಲುವುದು ಅದರ ಗುರಿ. ಇದು ಎಲ್ಲ ಜೀವಿಗಳ ಸಹಜ ಗುರಿ. ಅದಕ್ಕನುಗುಣವಾಗಿ ಬಾಳಿನ ಅಗತ್ಯವನ್ನು ಪೂರೈಸುವುದೇ ಜೀವನದ ವ್ಯವಸಾಯ ಕ್ರಮ. ಅದೇ ಜ್ಞಾನಿಗಳು ಆಳವಡಿಸಿಕೊಟ್ಟ ಬಾಳಾಟದ ಕ್ರಮ.

ಬಾಳಾಟದ ಸಾಧನಗಳಲ್ಲಿ ಮನಸ್ಸಿಗೆ ಪ್ರಾಮುಖ್ಯವುಂಟು. ಸುಖಾನುಭವ ತಟ್ಟುವುದೇ ಅಲ್ಲಿಗೆ. ಬಯಕೆ ಪುಟಿಯುವುದೇ ಅಲ್ಲಿ. ಅಲ್ಲಿ ಪುಟಿಯುವ ಬಯಕೆಗಳನ್ನೆಲ್ಲಾ ತಣಿಸ ಹೊರಟು, ತಣಿಸಲಾಗದೆ ಬಾಳನ್ನು ಮುಗಿಸುವುದು ಇಂದು ವಿಶ್ವ ಅನುಸರಿಸುತ್ತಿರುವ ಹಾದಿಯಾಗಿದೆ. ಆತ್ಮ ಬೀಜದ ವಿಕಾಸವು ವಿಶ್ವರೂಪದಲ್ಲಿಯೇ ನಿಲ್ಲುವುದಕ್ಕೆ ತಕ್ಕಂತೆ ಮನವನ್ನು ತಿರುಗಿಸಿ ಬಯಕೆಗಳನ್ನು ಅಳವಡಿಸಿಕೊಂಡರೆ ಬಯಕೆಯಲ್ಲಿ ಮಿತಿ ಏರ್ಪಡುತ್ತದೆ. ಬಾಳು ಗುರಿ ಮುಟ್ಟಿ ಸಾರ್ಥಕವಾಗುತ್ತದೆ. ಇದು ಬಾಳ ದಡಗಂಡ ಭಾರತೀಯ ಮಹರ್ಷಿಗಳು ತೋರಿದ ಬಾಳಹಾದಿ.

ಬಾಳ ಗುರಿ ನಿರ್ಣಯವಾದೊಡನೆಯೇ ಅದಕ್ಕೆ ತಕ್ಕಂತೆ ಅಗತ್ಯಗಳೂ ಮಿತಗೊಳ್ಳುತ್ತವೆ. ಅಂತೆ ಬಾಳನ್ನು ಬೆಳೆಸುವ ಚೈತನ್ಯ ಶಕ್ತಿಯನ್ನೇ ಅವರು "ಪುರುಷ" ಎಂದು ಕರೆದರು. ಈ ಅರ್ಥದಲ್ಲಿ ವಿಶ್ವ ಜೀವಿಗಳೆಲ್ಲರೂ ಪುರುಷರೇ. ಕೇವಲ ಗಂಡಸರು ಎಂದೇನೂ ಅಲ್ಲ. ಆ ಪುರುಷನ ಅರ್ಥ ಅಥವಾ ಬಯಕೆಯೇ ಪುರುಷಾರ್ಥ, ಪುರುಷಾರ್ಥವು ನಾಲ್ಕು ಬಗೆ. ಧರ್ಮ-ಅರ್ಥ-ಕಾಮ-ಮೋಕ್ಷ ಎಂದು. ಆತ್ಮ-ಮನಸ್ಸು, ಬುದ್ಧಿ, ಇಂದ್ರಿಯಗಳ ಸ್ವರೂಪ ಸ್ವಭಾವಗಳಿಗೆ ಧಕ್ಕೆ ತಾರದಂತೆ ಅವುಗಳನ್ನು ಸಹಜ ಸ್ಥಿತಿಯಲ್ಲಿ ಕಾಪಾಡಿಕೊಳ್ಳುವುದೇ ಧರ್ಮ. ನೋಟ ಕೆಡದಂತೆ ಕಣ್ಣನ್ನು ಕಾಪಾಡಿದರೆ ಕಣ್ಣಿನ ಧರ್ಮ ಉಳಿದಂತಾಯಿತು. ಆರೋಗ್ಯ ಕೆಡದಂತೆ ದೇಹ ರಕ್ಷಿಸಿದರೆ, ದೇಹ ಧರ್ಮ ಕಾಪಾಡಿದಂತಾಯಿತು. ಅಂತೆಯೇ ಎಲ್ಲ ಜೀವನದ ಉಪಕರಣಗಳ ಧರ್ಮ ಕೆಡಿಸದಂತೆ ಬಳಸುವ ವಸ್ತುಗಳೇ ಅರ್ಥ. ಕೇವಲ ಹಣವಲ್ಲ. ಧರ್ಮ ಕೆಡದಂತೆ ವಸ್ತುಗಳ ಬಳಕೆ. ಆಹಾರ ಸ್ವೀಕರಿಸಿ. ಆರೋಗ್ಯ ಕೆಡುವ ಬಗ್ಗೆ ಎಚ್ಚರಿಕೆಯೂ ಇರಲಿ. ಅಂತೆಯೇ ಆತ್ಮದಿಂದ ಹಿಡಿದು ದೇಹದವರೆಗಿನ ಯಾವ ವಸ್ತುವಿನ ಸ್ವರೂಪವೂ ಕೆಡದಂತೆ ಬಯಕೆಗಳನ್ನು ಅಳವಡಿಸಿಕೊಳ್ಳುವುದು, ಅದು ಕಾಮ. ಬಯಸಿ-- ಆದರೆ ನಿಮ್ಮ ಬಯಕೆ ಮೇಲೆ ಹೇಳಿದ ಯಾವುದಕ್ಕೂ ಹಾನಿಕಾರಕವಾಗದಂತೆ ಬಯಸಿ. ಹೀಗೆ ಅರ್ಥ—ಕಾಮಗಳು    ಜೀವನ ಮತ್ತು ಅದರ ಉಪಕರಣಗಳಿಗೆ ಘಾತಕವಾಗದಂತೆ ಅಳವಡಿಸಿಕೊಂಡರೆ, ಬಾಳು ಸಹಜವಾಗಿಯೇ ಸತ್ಯ ಅಥವಾ ಮೋಕ್ಷದಲ್ಲಿ ನಿಲ್ಲುತ್ತದೆ. ಅದೇ ಜೀವಿತದ ಗುರಿ. ಆದ್ದರಿಂದ ಈ ನಾಲ್ಕು ಪುರುಷಾರ್ಥಗಳೇ ಪ್ರತಿ ಜೀವಿಯು ಪಡೆಯ ಬೇಕಾದ ಮೌಲ್ಯಗಳು. ಪುರುಷಾರ್ಥ ಸಾಧನೆಯೇ ಜೀವಿಯ  ಗುರಿ. ಇದೇ ಬಾಳ ವ್ಯವಸ್ಥೆ.

ಪ್ರತಿ ಜೀವಿಯ ಬಾಳ ಗುರಿ ತಾನು ಯಾವ ಆತ್ಮ ಬೀಜದಿಂದ ವಿಕಾಸಗೊಂಡನೋ ಆ ಆತ್ಮರೂಪದಲ್ಲಿಯೇ ನಿಲ್ಲುವುದು. ಮನಸ್ಸನ್ನು ವಿಶ್ವದ ಮೇಲೆ ಹರಡಿದರೆ ಹೊಸ ಬಯಕೆಗಳು ಪುಟಿಯುತ್ತವೆ, ನಿಜ. ಆದರೆ ಮನಸ್ಸನ್ನು ಅದಕ್ಕೂ ಹಿಂದಿನ ಆತ್ಮದತ್ತ ಹಿಂಸೆಳೆದರೆ ಒಂದು ಸ್ಥಿತಿಯಲ್ಲಿ ಅದರ ಮನೋ ರೂಪವೇ ಕರಗಿ ಆತ್ಮ ರೂಪದಲ್ಲಿ ಒಂದಾಗಿ ಬಿಡುತ್ತದೆ. ಆಗ ಜೀವಿ ಪಡೆಯುವ ಸುಖ ಶಬ್ದಗಳಿಂದ ವರ್ಣಿಸಲಾಗದ ಅನುಭವ ಗೋಚರವಾದ ಸುಖ. ಆ ಸುಖ ಪಡೆದವರು ಜೀವಿ ಪಡೆಯಬಹುದಾದ ಎಲ್ಲ ಸುಖಗಳಿಗಿಂತ ಅತ್ಯುತ್ಕೃಷ್ಟವಾದುದು ಅದು ಎಂದು ಏಕ ಕಂಠದಿಂದ ಸಾರಿರುವರು. ಪರಮ ಸುಖವೆಂದು, ಪರಮಾನಂದ ಸುಧೆಯೆಂದೂ, ಅದು ಅನುಭವ ಮಾತ್ರ ಗೋಚರವೆಂದೂ ವರ್ಣಿಸಿರುವರು. ಅಂತಹ ಆತ್ಮನ ಸುಖವು ತಟ್ಟಿದಾಗ, ಸುಖ ಸಾಮ್ರಾಜ್ಯವೇ ತನ್ನ ಕೈವಶವಾಯಿತೆಂಬ ಅರಿವು ಜೀವಿಯಲ್ಲಿ ಮೂಡುವುದು. ಅಂತಹ ಜೀವಿಯು ಆಪ್ತ ಕಾಮ, ಪಡೆದ ಬಯಕೆಯುಳ್ಳವವನಾಗುವನು.

ಇಂತಹ ಸುಖವನ್ನು ಜೀವಿಗೆ ಕೊಡುವುದೇ ಜ್ಞಾನಿಗಳ ರಾಜ್ಯ ವ್ಯವಸ್ಥೆಯ ತಿರುಳಾಗಿತ್ತು. ಜ್ಞಾನಿಗಳ ದೃಷ್ಟಿಯಲ್ಲಿ ಜೀವನವನ್ನು ತುಂಬಿ ಬೆಳಗುವ ಆತ್ಮನೇ "ರಾಜ". ಈ ಪದವು "ಬೆಳಗುವವನು" ಎಂಬರ್ಥವನ್ನೇ ಪಡೆದಿದೆ. ಅವನು ಬೆಳಗುವ ಎಡೆಯು ರಾಜ್ಯ. ಆದು ಸ್ವಾರಾಜ್ಯ. ಆತ್ಮರಾಜ್ಯ. ಪ್ರತಿ ಜೀವಿಯನ್ನೂ ಅಂತಹ  ಸ್ವಾರಾಜ್ಯಾನುಭವದತ್ತ ಸಾಗಿಸಬೇಕು ಎಂಬುದೇ ಅವನ ಗುರಿ.

ಅದಕ್ಕನುಗುಣವಾಗಿ ಅವರು ಆತ್ಮ ರೂಪವನ್ನು ಕಂಡ ನಾಯಕಗುಣವುಳ್ಳವನನ್ನೇ ಆತ್ಮನ ಪ್ರತಿನಿಧಿಯಾಗಿ ರಾಜ್ಯವ್ಯವಸ್ಥೆಯ ಶಿಖರದಲ್ಲಿರಿಸಿದರು. ಅವನಿಗೂ ಆತ್ಮನಿಗೆ ಕೊಟ್ಟ "ರಾಜ" ಎಂಬ ಹೆಸರನ್ನೇ ಕೊಟ್ಟರು. "ಆತ್ಮವಾನ್ ರಾಜಾ" ಎಂಬಂತೆ-- ಆತ್ಮವಂತನೇ ರಾಜನಾದರೆ, ಅವನಿಗೆ ಸಲಹೆ ನೀಡುವ ಮಂತ್ರಿಗಳೂ   ಆತ್ಮವಿದರಾಗಬೇಕು.  "ಆತ್ಮವಂತಂ ಮಂತ್ರಿಣಮಾಪಾದಯೇತ್." ಎಂಬುದು ಅವರ ಸೂತ್ರ. ಅಂತೆಯೇ ಸೇನಾಪತಿ, ಕೋಶಾಧಿಕಾರಿ, ಮೊದಲಾದ ಪ್ರಮುಖ ಸ್ಥಾನಗಳಲ್ಲಿ ಆತ್ಮವಿದರಾದ ಜನಗಳನ್ನು ನಿಲ್ಲಿಸಿ, ಅದಕ್ಕನುಗುಣವಾದ ವ್ಯವಸ್ಥೆಯನ್ನು ರೂಪಿಸಿದರು. ರಾಜ್ಯದ ಗುರಿಯನ್ನು ಸಾರುವಾಗ "ಧರ್ಮಾರ್ಥ ಕಾಮ ಮೋಕ್ಷ ರೂಪ ಸರ್ವ ಪುರುಷಾರ್ಥ ಫಲಮಿದಂ ರಾಜ್ಯಂ" ಎಂದು ಪುರುಷಾರ್ಥ ಸಾಧನೆಯನ್ನೇ ಗುರಿಯಾಗಿಟ್ಟರು. ಜೀವನವನ್ನು ಆಳುವುದೂ ಪ್ರಕಾಶ ರೂಪವಾದ ಜ್ಞಾನ. ರಾಜ್ಯವನ್ನಾಳಬೇಕಾದುದೂ ಅದೇ ಎಂಬುದು ಅವರ ನಿಲುವು.ಆ ರಾಜ್ಯ ವ್ಯವಸ್ಥೆಯ ತಿರುಳರಿತ ಅಂಬರೀಷನೆಂಬೊಬ್ಬ ರಾಜನ ಹೇಳಿಕೆ ಹೀಗಿದೆ.

ತಸ್ಮಾದೇನಂ ಸಮ್ಯಗವೇಕ್ಷ್ಯ ಲೋಭಂ
ನಿಗೃಹ್ಯ ಧೃತಾತ್ಮ ನಿ ರಾಜ್ಯ ಮಿಚ್ಛೇತ್|
ಏತದ್ರಾಜ್ಯಂ ನಾನ್ಯದಸ್ತೀಹ ರಾಜ್ಯಂ
ಆತ್ಮೈವ ರಾಜಾ ವಿದಿತೋ ಯಥಾವತ್||

ಲೋಭವನ್ನು ವಿವೇಕದಿಂದ ನಿಗ್ರಹಿಸಿ ಆತ್ಮ ರಾಜ್ಯವನ್ನು ಪಡೆಯಬೇಕು. ಇದೇ ನಿಜವಾದ ರಾಜ್ಯ. ಬೇರೆಯದಲ್ಲ. ಸರಿಯಾಗಿ ಅರಿಯಲ್ಪಟ್ಟ ಆತ್ಮನೇ ನಿಜವಾದ ರಾಜ. "ಯದಕ್ಷರೇ ಪರಮೇ ಪ್ರಜಾಃ" ನಾಶ ರಹಿತವಾದ ಆತ್ಮವೇ ಪ್ರಜೆಗಳ ನೆಲೆ ಎಂಬ ಮಾತು ಪ್ರಜೆಗಳ ಜೀವನ ಎಲ್ಲಿ ನಿಲ್ಲಬೇಕೆಂಬ ಅವರ ಸ್ಪಷ್ಟ ಅರಿವನ್ನು ಬಯಲಿಗೆ ತರುತ್ತದೆ.

ಭೋಗ ನಿರಾಕರಣೆಯಲ್ಲ, ಅವರ ರಾಜ್ಯವ್ಯವಸ್ಥೆಯ ಗುರಿ. ಆತ್ಮ ಯೋಗಕ್ಕನುಗುಣವಾಗಿ ಭೋಗದ ಅಳವಡಿಕೆ. ಭೋಗ ಸಂಕುಲಗಳತ್ತ ಧಾವಿಸಿ ಮನಸ್ಸನ್ನು ಹರಡುವುದಲ್ಲ. ಮನಸ್ಸನ್ನು ಯೋಗದ ಹಾದಿಯಲ್ಲಿ ಹಿಂಸೆಳೆದು, ಅದರ ಮೂಲದಲ್ಲಿ ನೆಲೆಗೊಳಿಸಿ, ಸ್ವಾರಾಜ್ಯಾನುಭವವನ್ನು ಮಾಡಿಸುವುದು. ಪ್ರಜೆಗಳಿಗೆ ಅಸಮಾನವಾದ ಸುಖಾನುಭವ ಮಾಡಿಸಿ ಸುಖಿಗಳನ್ನಾಗಿ ಮಾಡುವುದೇ ಅವರ ಸುಖೀ ರಾಜ್ಯದ ಗುರಿ. ಅವರ ರಾಜ್ಯ ವ್ಯವಸ್ಥೆಯ ಎಲ್ಲ ಹಂತಗಳಲ್ಲಿಯೂ ಈ ನೋಟವನ್ನು ಕಾಣಬಹುದು.  ಆದರೆ ಈ ಸಂಕ್ಷಿಪ್ತ ಲೇಖನದಲ್ಲಿ ಈ ಎಲ್ಲ ಹಂತಗಳನ್ನೂ ಬಿಚ್ಚಿ ನೋಡುವುದು ಆಗದು. ಜೀವನ ಸಹಜವಾಗಿ ಯಾವ ತಳಹದಿಯ ಮೇಲೆ ಅರಳಿದೆಯೋ, ಆ ಹಾದಿಯನ್ನೇ ಅನುಸರಿಸಿ ರಾಜ್ಯ ವ್ಯವಸ್ಥೆಯನ್ನು ರೂಪಿಸಿದ ಅವರ ಕೌಶಲ ಎಲ್ಲ ಕಾಲಕ್ಕೂ ಮಾದರಿಯಾಗಿ ನಿಲ್ಲುವಂತಹುದು. ಅಂತಹ ಸುಖೀ ರಾಜ್ಯವನ್ನು ರೂಪಿಸಿದ, ಕಾರ್ಯ ಸಾಧ್ಯವಾಗಿಸಿದ ಜ್ಞಾನಿಗಳಿಗೆ ನಮಿಸಿ,  ನಾಡಿನ ಬಗ್ಗೆ ಜ್ಞಾನಿಗಳ ನೋಟವನ್ನು ನನ್ನ ಬುದ್ಧಿ ಭೂಮಿಕೆಯಲ್ಲಿ ಬಿತ್ತರಿಸಿ, ಈ  ಲೇಖನದ ಮೂಲ ಸ್ಫೂರ್ತಿಯಾದ ಶ್ರೀರಂಗ ಮಹಾಗುರುವಿಗೆ ಈ ಬರಹವನ್ನರ್ಪಿಸುತ್ತೇನೆ.

ಸೂಚನೆ : ಈ ಲೇಖನವು ಶ್ರೀಮಂದಿರದಿಂದ ಪ್ರಕಾಶಿತವಾಗುವ ಆರ್ಯಸಂಸ್ಕೃತಿ ಮಾಸ ಪತ್ರಿಕೆಯ ಸಂಪುಟ: ೦೩ ಸಂಚಿಕೆ: ೪,  ಫೆಬ್ರವರಿ ೧೯೮೧ ತಿಂಗಳಲ್ಲಿ  ಪ್ರಕಟವಾಗಿದೆ