Wednesday, November 4, 2020

ಅವಧೂತ ಗೀತಯ ಪಾಠ (Avadhuta Geetaya Paṭha)

ಲೇಖಕರು: ಶ್ರೀಮತಿ ರತ್ನಾಸುರೇಶ

(ಪ್ರತಿಕ್ರಿಯಿಸಿರಿ lekhana@ayvm.in)




ಗುರು-ಕತ್ತಲೆಯನ್ನು ಹೋಗಲಾಡಿಸಿ ಒಳಬೆಳಕನ್ನು ತೋರಿಸುವ ತತ್ತ್ವ. ಇದು ಮನುಷ್ಯರೂಪದಲ್ಲಿರಬಹುದು; ಬೇರೆ ರೂಪದಲ್ಲೂ ಇರಬಹುದು. ಶ್ರೀಮದ್ಭಾಗವತದಲ್ಲಿ ಅವಧೂತ-

ಯದು-ಇವರ ಸಂವಾದದಲ್ಲಿ ಅವಧೂತನು ಭೂಮಿ, ಪರ್ವತ, ಆಕಾಶ, ನೀರು, ಅಗ್ನಿ, ಚಂದ್ರ, ಸೂರ್ಯ, ಪಾರಿವಾಳ, ಹೆಬ್ಬಾವು, ಸಮುದ್ರ, ಪತಂಗ, ದುಂಬಿ, ಆನೆ, ಜೇನುತೆಗೆಯುವವನು, ಜಿಂಕೆ, ಮೀನು, ಪಿಂಗಳ- ವೇಶ್ಯೆ, ಕುರರ ಪಕ್ಷಿ, ಮಗು, ಕುಮಾರಿ, ಬಿಲ್ಲುಗಾರ, ಸರ್ಪ, ಜೇಡರಹುಳು – ಹೀಗೆ ತನಗೆ ೨೪ ಗುರುಗಳಿದ್ದಾರೆ ಎಂದು ಹೇಳುತ್ತಾನೆ. ಯಾರಿಂದ ಯಾವ ಶಿಕ್ಷಣ ಪಡೆದೆ ಎಂಬುದನ್ನು ವಿಸ್ತಾರವಾಗಿ ವಿವರಿಸುತ್ತಾನೆ. ಅವುಗಳಲ್ಲಿ ಕೆಲವನ್ನು ನೋಡೋಣ.

ಭೂಮಿ: ಭೂದೇವಿಯ ಮೇಲೆ ಯಾರು ಎಷ್ಟಾದರೂ ತುಳಿದಾಡಲಿ ಗಲೀಜುಮಾಡಲಿ, ಅದು ದೈವದ ಕಟ್ಟಳೆಯೆಂದು ತಿಳಿದು ಕ್ಷಮಾನಿಧಿಯಾದ ಭೂದೇವಿಯು ಕಂಪಿಸದೇ ಇರುತ್ತಾಳೆ. ಹಾಗೆಯೇ ದೈವದ ಆಣತಿಗೆ ಒಳಪಟ್ಟು ಅಸಂಖ್ಯಾತ ಪ್ರಾಣಿಗಳು ತನ್ನನ್ನು ಆಕ್ರಮಿಸಿದರೂ ತಾನು ಸತ್ಯದಿಂದ ವಿಚಲಿತನಾಗಬಾರದೆಂಬ ಪಾಠವನ್ನು ಕಲಿತೆ.

ಬಿಲ್ಲುಗಾರ:-ಲಕ್ಷ್ಯಕ್ಕೆ ಗುರಿ ಇಟ್ಟ ಬಿಲ್ಲುಗಾರನಿಗೆ ಹೇಗೆ ಪಕ್ಕದಲ್ಲಿ ಯಾವುದೇ ಮೆರವಣಿಗೆಯು ಹೋದರೂ, ಅದಾವುದರ ಪರಿವೆಯೂ ಇಲ್ಲದೇ ಕೇವಲ ಲಕ್ಷ್ಯದತ್ತ ಗುರಿ ಇರುತ್ತದೋ ಹಾಗೆಯೇ ನಮ್ಮ ಮನಸ್ಸಿಗೆ ಭಗವಂತನೊಬ್ಬನೇ ಲಕ್ಷ್ಯವಾಗಿರಬೇಕೆಂಬುದನ್ನು ಕಲಿತೆ.

ಕಣಜದ ಹುಳು: ಕಣಜದ ಹುಳುವೊಂದು ತನ್ನ ಆಹಾರಕ್ಕಾಗಿ ಬೇರೊಂದು ಹುಳುವನ್ನು ತಂದು ತನ್ನ ಗೂಡಿನಲ್ಲಿ ತಂದಿಟ್ಟಾಗ ಕೀಟವು ಕಣಜವನ್ನೇ ಭಯದಿಂದ ಧ್ಯಾನಿಸುತ್ತಾ ಕಣಜದ ತಾದಾತ್ಮ್ಯವನ್ನೇ ಪಡೆಯುವುದು. ಹಾಗೆಯೇ ಭಗವಂತನನ್ನೇ ನಿರಂತರ ಧ್ಯಾನಿಸುತ್ತಿದ್ದರೆ ಅಂತಹವರು ಭಗವಂತನ ಸಾರೂಪ್ಯ ಪಡೆಯುವುದರಲ್ಲಿ ಆಶ್ಚರ್ಯವೇನಿಲ್ಲ ಎಂಬುದನ್ನು ಕಲಿತೆ.


ನಮ್ಮ ಲಕ್ಷ್ಯಸಾಧನೆಗೆ ಅನುಕೂಲವಾಗುವ ಅಂಶಗಳು ಏನಾದರೂ ನಿಸರ್ಗದಲ್ಲೇ ಇವೆಯೇ ಎಂಬ ಅನ್ವೇಷಕ ಬುದ್ಧಿಯಿಂದ ಆ ಅವಧೂತನು ನಿಸರ್ಗದ ವಸ್ತು, ಪ್ರಾಣಿಗಳಲ್ಲೆಲ್ಲಾ ಗುರುವೆಂದು ಭಾವಿಸಿದುದು ಮನೋಜ್ಞವಾಗಿದೆ. ನಮ್ಮನ್ನು ನಾವು ಜೀವನದ ಪರಮಲಕ್ಷ್ಯವಾದ ಸತ್ಯ ಸಾಕ್ಷಾತ್ಕಾರಕ್ಕಾಗಿ ಸಿದ್ಧಗೊಳಿಸಿಕೊಳ್ಳುವಾಗ ನಮ್ಮ ಮನಸ್ಸನ್ನು ಹೀಗೆ ತೆರೆದಿಟ್ಟು ಆ ಅವಧೂತನಂತೆ ಪ್ರೇರಣೆ ಪಡೆಯಬೇಕೆಂಬುದು ಇಲ್ಲಿಯ ಪಾಠ. ಮನುಷ್ಯನ ಬಂಧಮೋಕ್ಷಗಳಿಗೆ ಮನಸ್ಸೇ ಕಾರಣ. ಅದು ಅತ್ಯಂತ ಬಲವಾದ ಇಂದ್ರಿಯ. ಅದನ್ನು ಕಟ್ಟಿಹಾಕುವುದು ದುಷ್ಕರ.

"ಮದಿಸಿದ ಆನೆಯನ್ನಾದರೂ ಕಟ್ಟಿಹಾಕಬಹುದು ,ಆದರೆ ಮನಸ್ಸನ್ನು ಕಟ್ಟಿಹಾಕುವುದು ಕಷ್ಟ. ಪಳಗಿದ ಆನೆಯ ಸಹಾಯವಿದ್ದರೆ ಮದಿಸಿದ ಆನೆಯನ್ನೂ ಪಳಗಿಸಿಬಿಡಬಹುದಲ್ಲವೇ. ಹಾಗೆಯೇ ಪರಮಾತ್ಮನಲ್ಲಿ ನಿಬದ್ಧನಾಗಿ ಚೆನ್ನಾಗಿ ಪಳಗಿರುವ ಗುರುವಿಗೆ ನಿಮ್ಮ ಮನಸ್ಸನ್ನು ಒಪ್ಪಿಸಿಕೊಂಡರೆ ಅದೂ ಕಾಲಕ್ರಮದಲ್ಲಿ ಪಳಗಿಬಿಡುತ್ತದೆ" ಎಂಬುದು ಶ್ರೀರಂಗಮಹಾಗುರುಗಳ ಮಾತು.

ಸೂಚನೆ: 04/11/2020 ರಂದು ಈ ಲೇಖನ ಉದಯವಾಣಿ ಯಲ್ಲಿ ಪ್ರಕಟವಾಗಿದೆ.