Sunday, November 29, 2020

ಸತ್ಪುರುಷರು ಯಾರು ? (Satpurusaru yaru?)

ಲೇಖಕರು ; ವಿದ್ವಾನ್ ನರಸಿಂಹ ಭಟ್ ಬಡಗು 
(ಪ್ರತಿಕ್ರಿಯಿಸಿರಿ lekhana@ayvm.in)



ಮನಸಿ ವಚಸಿ ಕಾಯೇ ಪುಣ್ಯಪೀಯೂಷಪೂರ್ಣಾಃ ತ್ರಿಭುವನಮುಪಕಾರಶ್ರೇಣಿಭಿಃ ಪ್ರೀಣಯಂತಃ |
ಪರಗುಣಪರಮಾಣೂನ್ ಪರ್ವತೀಕೃತ್ಯ ನಿತ್ಯಂ ನಿಜಹೃದಿ ವಿಕಸಂತಃ ಸಂತಿ ಸಂತಃ ಕಿಯಂತಃ || ಸುಭಾಷಿತನೀತಿಶತ


ಅರ್ಥ-ಯಾರ ಮನಸ್ಸಿನಲ್ಲಿ ಮಾತಿನಲ್ಲಿ ಕೃತಿಯಲ್ಲಿ ಪುಣ್ಯ ಅಮೃತವು ತುಂಬಿದೆಯೋ ಯಾರು ಹಿತಾಚರಣ ಪರಂಪರೆಯಿಂದ ಮೂರು ಲೋಕಗಳನ್ನೂ ಸಂತೋಷಿಸುತ್ತಿರುವರೋ ಯಾರು ಬೇರೆಯವರಲ್ಲಿರುವ ಅತ್ಯಲ್ಪ ಗುಣವನ್ನೂ ಮಹತ್ತರವನ್ನಾಗಿಸುತ್ತಾ ಎತ್ತಿತೋರಿಸುವರೋ ಯಾರು ತಮ್ಮ ಅಂತಃಕರಣದಲ್ಲೇ ಸಂತೋಷಪಡುತ್ತಾರೋ ಅಂತಹ ಸತ್ಪುರುಷರು ಎಷ್ಟು ತಾನೆ ಇರಲು ಸಾಧ್ಯ!!!  

ವಿವರಣೆ - ನಿಜವಾದ ಸತ್ಪುಷರು ಯಾರು ಎಂಬ ಬಗ್ಗೆ ಅತಿ ಸುಂದರವಾದ ವಿವರಣೆ ಇಲ್ಲಿದೆ. ಮನಸ್ಸಿನಲ್ಲಿ, ಮಾತಿನಲ್ಲಿ ಕೃತಿಯಲ್ಲಿ ಹೀಗೆ ಮೂರರಲ್ಲೂ ಯಾರು ಏಕರೂಪವಾಗಿರುತ್ತಾರೋ ಅಂತವರು ಮಹಾತ್ಮರು. ಮನಸ್ಸಿನಲ್ಲಿ ಒಂದು ಮಾತಿನಲ್ಲಿ ಮತ್ತೊಂದು ಕೃತಿಯಲ್ಲಿ ಬೇರೊಂದು ಹೀಗೇ ಮೂರೂ ಭಿನ್ನರೂಪವಾಗಿರುತ್ತಾರೋ ಅಂತವರು ದುರಾತ್ಮರು. ಕಾಯ ವಾಕ್ ಮನಸ್ಸು ಯಾವ ಕಾರ್ಯದಲ್ಲಿ ಏಕಾಗ್ರವಾಗಿರುತ್ತದೆಯೋ ಆ ಕಾರ್ಯವು ಸಿದ್ಧ ಎಂದೇ ಅರ್ಥ. ಎತ್ತು ಏರಿಗೆ ಎಳೆದರೆ ಕೋಣ ನೀರಿಗೆ ಎಳೆಯಿತು ಎಂದಾದರೆ ಆರಂಭಿಸಿದ ಕಾರ್ಯ ಸಂಪನ್ನವಾಗಲು ಹೇಗೆ ಸಾಧ್ಯ? ಮಹಾತ್ಮರ ಕರ್ಮದಿಂದ ಪುಣ್ಯ ಸಂಪಾದಿತವಾಗುತ್ತದೆ. ಮತ್ತು ಇದರಿಂದ ಅಮೃತತ್ವವೂ ಸಿದ್ಧಿಸುವುದು. ಇಂತವರು ಮಾಡುವ ಆಚರಣೆಗಳು ಮನುಷ್ಯರಿಗೆ ಮಾತ್ರವಲ್ಲ ದೇವತೆಗಳಿಗೂ ಪ್ರಿಯವಾಗುತ್ತವೆ. ಇವರಿಗೆ ಬೇರೆಯವರಲ್ಲಿ ಇರುವ ದೋಷಗಳೇ ಕಾಣಿಸುವುದಿಲ್ಲ. ಸಣ್ಣ ಸದ್ಗುಣವನ್ನೂ ಹೇಳಿ ದೋಷ ಮಾಯವಾಗುವಂತೆ ಮಾಡುತ್ತಾರೆ. ಬೇರೆಯವರಲ್ಲಿರುವ ಸಣ್ಣ ಸದ್ಗುಣವನ್ನು ಕಂಡು ತಮ್ಮ ಒಳಗೇ ಆ ಗುಣವನ್ನು ಅನುಭವಿಸುತ್ತಾ ಅನಂದಿಸುತ್ತಾರೆ. ಮೊದಲು ಒಂದು ಗುಣವಾಗಿದ್ದರೂ ಅದೇ ಗುಣಗಣವಾಗುತ್ತದೆ. ದೋಷಿಯನ್ನೂ ನಿರ್ದೋಷಿಯನ್ನಾಗಿ ಪರಿವರ್ತಿಸುತ್ತದೆ. ಋಣಾತ್ಮಕತೆಯಿಂದ ಧನಾತ್ಮಕತೆಗೆ ನಮ್ಮನ್ನು ತೊಡಗಿಸುತ್ತದೆ. ಇಂತಹ ಸಂತರಾಗೋಣ. ಸಂತತವಾಗಿ ಸಂತೋಷಿಸೋಣ. ಎಲ್ಲರನ್ನೂ ಸಂತೋಷಪಡಿಸೋಣ. 

ಸೂಚನೆ: 28/11/2020 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ 
ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.