Saturday, November 21, 2020

ಅಹಿಂಸೆಯನ್ನು ಅಭ್ಯಾಸದಲ್ಲಿಟ್ಟುಕೊಳ್ಳುವುದು ಹೇಗೆ ? Ahimseyannu Abhyasadallittukolluvudu Hege ?

ಲೇಖಕರು: ಶ್ರೀ ಜಿ. ನಾಗರಾಜ.
(ಪ್ರತಿಕ್ರಿಯಿಸಿರಿ lekhana@ayvm.in)



ಅಹಿಂಸೆಯ ನವವಿಧಗಳನ್ನು ಅರ್ಥ ಮಾಡಿಕೊಂಡರೆ ಹೆಜ್ಜೆ ಹೆಜ್ಜೆಗೂ ಅಹಿಂಸೆಯನ್ನು ಆಚರಿಸಬಹುದು. ಉದಾಹರಣೆಗೆ, ನಾವು ಕಾರಿನಲ್ಲಿ ಪ್ರಯಾಣಿಸಬೇಕಾದರೆ ಮತ್ತೊಬ್ಬನು ಒಡ್ಡೊಡ್ಡಾಗಿ ಚಾಲನೆ ಮಾಡುತ್ತಾ ನಮಗೆ ಅಡ್ಡ ಬಂದು, ನಮ್ಮ ಮೇಲೆಯೇ ಕೂಗಾಡಿ ಹೊರಟು ಹೋಗುತ್ತಾನೆಂದುಕೊಳ್ಳೋಣ. ನಾವು ಕೋಪಗೊಂಡು, ಆ ಚಾಲಕನನ್ನು ಮಾನಸಿಕವಾಗಿಯೋ, ವಾಚಿಕವಾಗಿಯೋ ಬಯ್ದುಕೊಳ್ಳುತ್ತೇವೆ. ನಾವು ಹೀಗೆ, ನಮ್ಮ ಕಾರಿನಲ್ಲಿ, ಆ ಚಾಲಕನಿಗೆ ತಿಳಿಯದಂತೆ ಬಯ್ದುಕೊಳ್ಳುವುದರಿಂದ ಅವನಿಗೆ ಏನೂ ಪರಿಣಾಮವಾಗುವುದಿಲ್ಲ. ಅದರ ಬದಲು ನಮ್ಮ ಪ್ರಸನ್ನತೆಯೇ ಹಾಳಾಗುತ್ತದೆ. ಇಲ್ಲಿ ನಾವು ವಾಚಿಕ ಹಾಗೂ ಮಾನಸಿಕ ಅಹಿಂಸೆಯನ್ನು ನೆನಪಿನಲ್ಲಿಟ್ಟುಕೊಂಡು ಕ್ರೋಧಕ್ಕೆ ಒಳಗಾಗದೇ ಪ್ರಸನ್ನತೆಯನ್ನು ಉಳಿಸಿಕೊಂಡರೆ, ನಮ್ಮ ಶಕ್ತಿಯು ಅಪವ್ಯಯವಾಗದಂತೆ ಕಾಪಾಡಿಕೊಳ್ಳುತ್ತೇವೆ. ಹೀಗೆ, ನಮ್ಮ ನಿತ್ಯ ಜೀವನದ ಘಟನೆಗಳಲ್ಲಿ, ಕುಟುಂಬದವರ ಜೊತೆ, ಸಹೋದ್ಯೋಗಿಗಳ ಜೊತೆ, ವ್ಯವಹಾರದ ಅನೇಕ ಸಂದರ್ಭಗಳಲ್ಲಿ ವಾಚಿಕ, ಮಾನಸಿಕ ಅಹಿಂಸೆಯನ್ನು ಆಚರಿಸಲು ಆಸ್ಪದವಿರುತ್ತದೆ.

ಶ್ರೀರಂಗ ಮಹಾಗುರುಗಳ ಹಿರಿಯ ಶಿಷ್ಯರೊಬ್ಬರು ಒಬ್ಬ ಕಿರಿಯ ಸಾಧಕನನ್ನು ಕೇಳಿದರು - ನೀನು ಮಕ್ಕಳನ್ನು ದಂಡಿಸಬೇಕಾದರೆ, ಅವರ ತಪ್ಪು ನಿನಗೆ ಹಿಡಿಸಲಿಲ್ಲ ಎಂದು ದಂಡಿಸುತ್ತೀಯೋ ಅಥವಾ ಅವರ ತಪ್ಪು ಅವರಿಗೆ ಒಳ್ಳೆಯದಲ್ಲಾ ಎಂದು ದಂಡಿಸುತ್ತೀಯೋ ಎಂದು ಕೇಳಿದ್ದರು. ಈ ಪ್ರಶ್ನೆಯನ್ನು ಗಂಭೀರವಾಗಿ ಪರಿಗಣಿಸಿದ ಕಿರಿಯ ಸಾಧಕನು ತನ್ನ ಪತ್ನಿಯ ಜೊತೆ ಈ ವಿಷಯವನ್ನು ಚರ್ಚಿಸಿ ತನ್ನ ವರ್ತನೆಯ ಪರಿಣಾಮ ಮಕ್ಕಳ ಮೇಲೆ ಏನಾಗುತ್ತಿದೆಯೆಂದು ಪತ್ನಿಯ ಮೂಲಕ ಗಮನಿಸಿಕೊಳ್ಳಲು ಪ್ರಾರಂಭಿಸಿದನು. ಇದರಿಂದ ಕಂಡುಬಂದುದೇನೆಂದರೆ, ಯಾವಾಗಲೆಲ್ಲಾ ಮಕ್ಕಳ ತಪ್ಪಿನಿಂದ ಕ್ರೋಧಕ್ಕೆ ಒಳಗಾಗಿ ಅವರನ್ನು ದಂಡಿಸಿದಾಗ ಮಕ್ಕಳ ಮನಸ್ಸಿನಲ್ಲಿ ತಂದೆ ಬಯ್ದರು ಅಥವಾ ಹೊಡೆದರು ಎನ್ನುವ ಭಾವನೆ ಉಳಿದುಕೊಳ್ಳುತ್ತಿತ್ತು ಅಷ್ಟೇ ಹೊರತು ತಮ್ಮ ತಪ್ಪಿನ ಅರಿವಾಗುತ್ತಿರುಲಿಲ್ಲ. ಆದರೆ, ಕ್ರೋಧಕ್ಕೆ ಒಳಗಾಗದೆ, ಅವರ ತಪ್ಪು ಅವರಿಗೇ ಒಳ್ಳೆಯದಲ್ಲಾ ಎನ್ನುವ ಭಾವನೆಯಲ್ಲಿ ಸಮಾಧಾನವಾಗಿಯೇ ತಿಳಿಹೇಳುವುದು ಅಥವಾ ಅವಶ್ಯಕವಾದಲ್ಲಿ ಸ್ವಲ್ಪ ಕ್ರೋಧವನ್ನು ತಂದುಕೊಂಡು ದಂಡಿಸಿದರೆ, ಮಕ್ಕಳಿಗೆ ತಪ್ಪಿನ ಅರಿವಾಗಿ ತಿದ್ದುಕೊಳ್ಳುವ ಭಾವನೆ ಉಂಟಾಗುತ್ತಿತ್ತು.

ಒಮ್ಮೆ ಶ್ರೀರಂಗಮಹಾಗುರುಗಳು ಇರುವೆ ಮುತ್ತಿದ್ದ ಔಷಧಿ ಬೇರನ್ನು ಒದರಿಕೊಂಡು ಬರಲು ಶಿಷ್ಯರೊಬ್ಬರಿಗೆ ತಿಳಿಸಿದರು. ಶಿಷ್ಯರು ಇದನ್ನು ನೀರಿನಲ್ಲಿ ಅದ್ದಿಬಿಟ್ಟರೆ ಇರುವೆಗಳು ಸತ್ತು ಬೇರನ್ನು ಸುಲಭವಾಗಿ ಶುದ್ಧಿಪಡಿಸಬಹುದಲ್ಲಾ ಎಂದು ಹೇಳಿದಾಗ, ಹಾಗಾಗಬಾರದು ಎಂದೇ ಒದರಿಕೊಂಡು ಬರಲು ಹೇಳಿದ್ದಪ್ಪಾ ಎಂದು ಅನವಶ್ಯಕವಾಗಿ ಹಿಂಸೆ ಮಾಡಬಾರದೆಂದು ತೋರಿಸಿಕೊಟ್ಟಿದ್ದರು.

ಹೀಗೆ, ನಿತ್ಯ ಜೀವನದ ಸನ್ನಿವೇಶಗಳಲ್ಲಿ ಅಹಿಂಸಾಚರಣೆಯನ್ನಿಟ್ಟುಕೊಂಡಲ್ಲಿ ಮಹಾಲಾಭವಾಗುತ್ತದೆ. 

ಸೂಚನೆ:21/11/2020 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.