ಲೇಖಕಿ : ಮೈಥಿಲೀ ರಾಘವನ್
(ಪ್ರತಿಕ್ರಿಯಿಸಿರಿ lekhana@ayvm.in)
ಧರ್ಮರಕ್ಷಣೆಗಾಗಿ ಹೋರಾಡುತ್ತಿದ್ದ ಶಿವಾಜಿ ಮಹಾರಾಜನನ್ನೂ ಆತನ ಮಗ ಸಂಭಾಜಿಯನ್ನೂ ಔರಂಗಜೇಬನು ಕಪಟದಿಂದ ಬಂಧಿಸಿದನು. ಬಂಧನದಿಂದ ವೇಷ ಬದಲಾಯಿಸಿಕೊಂಡು ತಪ್ಪಿಸಿಕೊಂಡ ಅವರೀರ್ವರೂ ದೆಹಲಿಯಲ್ಲಿದ್ದ ಪುರುಷೋತ್ತಮನೆಂಬ ಬ್ರಾಹ್ಮಣನ ಮನೆಗೆ ಬಂದರು. ಆತನು ಸತ್ಯವನ್ನೇ ಹೇಳುವ ವ್ರತತೊಟ್ಟವನೆಂದು ಸುಪ್ರಸಿದ್ಧನಾಗಿದ್ದ. ಶಿವಾಜಿಯು ತನ್ನ ಮಗನನ್ನು ಸ್ವಲ್ಪ ಕಾಲ ಹೇಗಾದರೂ ಕಾಪಾಡಬೇಕೆಂದು ಪ್ರಾರ್ಥಿಸಿ ಅವನಲ್ಲಿ ಬಿಟ್ಟು ಹೊರಟುಬಂದ. ಈ ಸುದ್ದಿ ತಿಳಿದ ಬಾದಶಾಹನ ಆಳುಗಳು ಬ್ರಾಹ್ಮಣನನ್ನು, ಮನೆಯಲ್ಲಿನ ಹೊಸಬ ಯಾರೆಂದು ಪ್ರಶ್ನಿಸಿದಾಗ, ಅತನು ಅತಿಥಿಯು ತನ್ನ ಸಂಬಂಧಿಯೆಂದ. ಪುರುಷೋತ್ತಮನ ಸತ್ಯನಿಷ್ಠೆಯಲ್ಲಿ ನಂಬಿಕೆಯಿದ್ದರೂ ಸೈನಿಕರು "ನೀನು ಸತ್ಯವನ್ನೇ ಹೇಳುತ್ತಿರುವುದಾದರೆ ಅವನೊಡನೆ ಸಹಪಂಕ್ತಿಭೋಜನ ಮಾಡಿತೋರಿಸು" ಎಂದರು. (ಬ್ರಾಹ್ಮಣರು ಕ್ಷತ್ರಿಯರೊಡನೆ ಸಹಪಂಕ್ತಿಯಲ್ಲಿ ಕುಳಿತು ಭೋಜನಮಾಡುವ ಅಭ್ಯಾಸ ಆಗಿನಕಾಲದ ಆಚಾರವಂತ ಬ್ರಾಹ್ಮಣರಲ್ಲಿರಲಿಲ್ಲ.) ಪುರುಷೋತ್ತಮನೂ ಸಂಭಾಜಿಯನ್ನು ರಕ್ಷಿಸಲೋಸುಗ ತನ್ನ ನಿಯಮವನ್ನು ಬಿಟ್ಟು ಸಹಪಂಕ್ತಿಭೋಜನ ಮಾಡಿ ಸೈನಿಕರನ್ನು ನಂಬಿಸಿದನು. ಕೆಲವು ದಿನಗಳ ನಂತರ ಶಿವಾಜಿಯ ಆದೇಶದಂತೆ ಸಂಭಾಜಿಯನ್ನು ಕಳುಹಿಸಿಕೊಟ್ಟು ಶಿವಾಜಿಗೆ ಕೊಟ್ಟ ಮಾತನ್ನು ಉಳಿಸಿಕೊಂಡ.
ಇಲ್ಲಿ ಪುರುಷೋತ್ತಮನ ಸತ್ಯನಿಷ್ಠೆಗೆ ಭಂಗವಾದಂತೆ ತೋರುತ್ತದೆ. ಆದರೆ ಇಂತಹ ಸನ್ನಿವೇಶಗಳನ್ನಳೆಯಲು ಶ್ರೀರಂಗಮಹಾಗುರುಗಳು ಕೊಟ್ಟ ಸೂತ್ರವನ್ನವಲಂಬಿಸಬಹುದಾಗಿದೆ – ದೊಡ್ಡಧರ್ಮದ ರಕ್ಷಣೆಗಾಗಿ ಸಣ್ಣಧರ್ಮವನ್ನು ತ್ಯಜಿಸುವುದೇ ಉತ್ತಮ. ಉದಾಹರಣೆಗೆ, ಕಾಲನ್ನು ಸೂಜಿಯಿಂದ ಚುಚ್ಚುವುದು ಪಾಪಕಾರ್ಯವಾದರೂ ಕಾಲಲ್ಲಿ ಮುಳ್ಳು ಚುಚ್ಚಿಕೊಂಡಾಗ ಅದನ್ನು ತೆಗೆಯಲು ಸೂಜಿಯಿಂದ ಚುಚ್ಚುತ್ತೇವೆ. ಮುಳ್ಳನ್ನು ತೆಗೆಯಲೇಬೇಕೆಂಬುದು ದೊಡ್ಡಧರ್ಮವಾದ್ದರಿಂದ ಅದಕ್ಕಾಗಿ 'ಚುಚ್ಚಬಾರದು' ಎಂಬ ಸಣ್ಣಧರ್ಮವನ್ನು ತ್ಯಜಿಸುವುದೇ ಉತ್ತಮ.
ಸತ್ಯವನ್ನಾಡಬೇಕೆಂಬ ಸಾಮಾನ್ಯ ಧರ್ಮಕ್ಕಿಂತಲೂ ಧರ್ಮಕಂಟಕನಿಂದ ಧರ್ಮಿಷ್ಠರನ್ನು ಕಾಪಾಡಬೇಕೆನ್ನುವುದು ಹಿರಿದಾದ ಧರ್ಮ. ಅದಕ್ಕಾಗಿ ನುಡಿದ ಸುಳ್ಳಿನಿಂದ ಸತ್ಯನಿಷ್ಠೆಗೆ ಚ್ಯುತಿಯಿಲ್ಲ. ಅತ್ಯಂತ ಭೂತಹಿತವಾವುದೋ ಅದೇ ಸತ್ಯವೆಂಬ ಶಾಸ್ತ್ರವಚನಕ್ಕೂ ಇದು ಹೊಂದಿಕೆಯಾಗುತ್ತದೆ.
'ಸತ್ಯ' ಎಂದರೆ 'ಸತ್'–ಸದಾ ಇರುವುದು, ವಿಕಾರವಾಗದೇ ಇರುವುದು. ಪರಬ್ರಹ್ಮವೊಂದೇ ಎಂದಿಗೂ ವಿಕಾರವಾಗದ ಸತ್ಯ. ವ್ಯವಹಾರದಲ್ಲೂ, ಇರುವ ವಿಷಯವನ್ನು ವಿಕಾರಗೊಳಿಸದೆ, ಇರುವಂತೆಯೇ ಹೇಳುವುದನ್ನು ಸತ್ಯವೆನ್ನುತ್ತೇವೆ. ವ್ಯಾವಹಾರಿಕಸತ್ಯವು ಮೂಲಸತ್ಯದ ಛಾಯೆಯೇ ಆಗಿರುವುದರಿಂದ ಅದನ್ನು ಪಾಲಿಸುವುದು ಸತ್ಯದ ಮೂಲರೂಪವನ್ನು ನೆನಪಿಸಿ, ಅಲ್ಲಿಗೆ ಕರೆದೊಯ್ಯಲು ಸಹಾಯಕವಾಗುತ್ತದೆ. ಆದರೂ ಮೇಲೆ ಹೇಳಿದ ಧರ್ಮಸೂಕ್ಷ್ಮವನ್ನೂ ಅರಿತು ಸತ್ಯನಿಷ್ಠೆಯನ್ನು ವಿವೇಕದಿಂದ ಪಾಲಿಸಬೇಕಾದ ಕರ್ತವ್ಯವನ್ನೂ ಮರೆಯಬಾರದು.
ಸೂಚನೆ: 18/11/2020 ರಂದು ಈ ಲೇಖನ ಉದಯವಾಣಿ ಯಲ್ಲಿ ಪ್ರಕಟವಾಗಿದೆ.