Sunday, November 29, 2020

ಆರ್ಯಸಂಸ್ಕೃತಿ ದರ್ಶನ - 19 (Arya Samskruti Darshana - 19)

ಪಂಚಾಯತನ ಪೂಜಾ
ಲೇಖಕರು: ವಿದ್ವಾನ್||ಶ್ರೀ ಶೇಷಾಚಲಶರ್ಮಾಆಸ್ತಿಕ ಭಾವನೆಯುಳ್ಳ ಜನರಲ್ಲಿ ದೇವತಾಪೂಜೆ, ದೇವತೋಪಾಸನೆಗಳು ಆಚರಣೆಯಲ್ಲಿರುವುದು ಸರ್ವವಿದಿತವಾದ ವಿಷಯ. ಉಪಾಸನೆಯೆಂದರೆ ಉಪಸಮೀಪೇ  ಆಸನಂ--ಅರ್ಥಾತ್ ಬಳಿಯಲ್ಲಿ ಇರುವುದು ಎಂದು ಶಬ್ದಾರ್ಥ. ದೇವತೋಪಾಸನೆ ಎಂಬಲ್ಲಿ ನಮ್ಮ  ಇಷ್ಟದೇವತೆಯ ಸಾನ್ನಿಧ್ಯದಲ್ಲಿಯೇ ನಾವು ಎಂದರೆ ನಮ್ಮ ಅಂತಕರಣ ಮತ್ತು ಬಹಿಃಕರಣಗಳು ಸದಾ ನೆಲೆಸಿರುವುದು ಎಂದು ತಾತ್ಪರ್ಯ. ಇಂತಹ ಉಪಾಸನೆಯ ಅಂಗವಾಗಿ ಪೂಜಾ ಎಂಬ ಕರ್ಮವನ್ನು ಆಚರಿಸುವುದು ಶಾಸ್ತ್ರವಿಹಿತವಾದ ಆಚರಣೆ. ಲೌಕಿಕವಾಗಿಯೂ, ನಮಗಿಂತ ಶ್ರೇಷ್ಠರಾದವರನ್ನು, ಎಂದರೆ ಗುರುಹಿರಿಯರನ್ನು ಪೂಜಿಸುವುದು-ಗೌರವಿಸುವುದು ವಾಡಿಕೆಯಲ್ಲಿದೆ. ಪೂಜೆಯಲ್ಲಿಯೂ ಬಾಹ್ಯಪೂಜೆ ಮತ್ತು ಅಂತರಂಗ ಪೂಜೆ ಅಥವಾ ಮಾನಸಪೂಜೆ ಎಂದು ಎರಡು ವಿಧವಿದೆ. ಎರಡು ವಿಧ ಪೂಜೆಗಳೂ ಶಾಸ್ತ್ರವಿಹಿತವಾದುವುಗಳು ಮತ್ತು ಸಂಪ್ರದಾಯ ಕ್ರಮದಲ್ಲಿ ಆಚರಿಸಲ್ಪಡತಕ್ಕವುಗಳು. ಮನಸ್ಸನ್ನು ಅಂತರ್ಮುಖವಾಗಿ ಮಾಡಲು ಪ್ರಾರಂಭದಲ್ಲಿ ಬಾಹ್ಯಪೂಜೆಯು ಅವಶ್ಯಕವಾಗಿರುತ್ತದೆ. ಮಾನಸಪೂಜೆಯ ಸಿದ್ಧಿಯನ್ನು ಪಡೆದಮೇಲೆಯೂ ಉಪಾಸಕನು ಲೋಕಯಾತ್ರೆಯನ್ನು ನಡೆಸುವಾಗ ತನ್ನ ಅಂತಃಕರಣ ಮತ್ತು ಬಹಿಃಕರಣಗಳು ಸದಾ ಭಗವನ್ಮಯವಾಗಿರುವಂತೆ ಮಾಡಿಕೊಳ್ಳಲು ಅಂತರಂಗಪೂಜೆ ಮತ್ತು ಬಹಿರಂಗ ಪೂಜೆಗಳನ್ನು ಆಚರಿಸುತ್ತಾನೆ. ಮತ್ತು ಲೋಕಶಿಕ್ಷಣಕ್ಕಾಗಿಯೂ ಅಂತಹವನು ಬಾಹ್ಯಪೂಜೆಯನ್ನು ವಿಧಿವತ್ತಾಗಿ ಆಚರಿಸುತ್ತಾನೆ. ತಾನು ಒಳಗೆ ಅನುಭವಿಸಿದುದನ್ನು ಹೊರಗೂ ತುಂಬಿಕೊಳ್ಳಲು ಬಾಹ್ಯಪೂಜೆಯೂ ಅವಶ್ಯಕವಾಗುತ್ತದೆ. ಅಂತರಂಗ ಪೂಜೆಯ ಶಕ್ತಿಯಿಂದ ಪವಿತ್ರವಾದ ಕರಣಗಳು ಬಾಹ್ಯವಾಗಿಯೂ ಅಂತಹ ಪವಿತ್ರ ಭಾವನೆಗಳನ್ನೇ ಹೊರಸೂಸುತ್ತಾ ಬಾಹ್ಯ ವ್ಯಾಪಾರಗಳನ್ನು ನಡೆಸುತ್ತವೆ. ಅಂತರಂಗದಲ್ಲಿ ಆಡುವ ದೈವೀಶಕ್ತಿಯ ಪ್ರಭಾವದಿಂದ ಬಾಹ್ಯಕರಣಗಳು ಮಾಡುವ ವ್ಯಾಪಾರಗಳೆಲ್ಲಾ ಒಂದು ರೀತಿಯಲ್ಲಿ ಪೂಜೆಯೆನಿಸುತ್ತವೆ. ಯಾವ ಮಹಾಶಕ್ತಿಯು ವಿಶ್ವದ ವಸ್ತುಗಳನ್ನು ಸೃಷ್ಟಿಸಿ ಅವುಗಳಲ್ಲಿ ಅಪ್ರತಿಹತವಾಗಿ ವ್ಯಾಪಿಸಿ ಸಂಚರಿಸುತ್ತಿದೆಯೋ, ಅಂತಹ ಶಕ್ತಿಯ ಆಕರ್ಷಣೆ ಮತ್ತು ಪ್ರಭಾವಗಳಿಂದ ಅಂತಃಕರಣ ಮತ್ತು ಬಹಿಃಕರಣಗಳು ಆಡತೊಡಗಿದಾಗ ಸೃಷ್ಟೀಶನಿಗೆ ಸಲ್ಲಬೇಕಾದ ವಸ್ತುಗಳು ಹೇಗಾದರೂ ಒದಗಿಬಂದು ಅವನ ಪೂಜಿಯು ಸಮರ್ಪಕವಾಗಿ ನಡೆದೇ ನಡೆಯುತ್ತದೆ. ಆ ಮಹಾಶಕ್ತಿಯ ಆವಿರ್ಭಾವ -ತಿರೋಭಾವಗಳ ರಹಸ್ಯಕ್ಕನುಗುಣವಾಗಿ ಆಯಾ ಪೂಜೆಯಲ್ಲಿನ ದ್ರವ್ಯಗಳು, ಪೂಜಾಸಾಮಗ್ರಿಗಳು, ಕ್ರಿಯಾಕಲಾಪಗಳು, ಬಂಧ -ಮುದ್ರೆಗಳು ಇರುತ್ತವೆ. ಸಿದ್ಧಪುರುಷನಲ್ಲಿ ಇವೆಲ್ಲಾ ಸಹಜವಾಗಿ ಸಂಗೃಹೀತವಾಗುತ್ತವೆ. ಸಾಧಕನಾದವನು ಇವುಗಳನ್ನು ದೈವೀಭಾವಕ್ಕೆ ಸಲ್ಲುವಂತೆ ಸಂಗ್ರಹಿಸಬೇಕಾದರೆ ಶಾಸ್ತ್ರವಿಧಿಗಳನ್ನು ಪಾಲಿಸಬೇಕು. ಅಂತರಂಗಪೂಜೆಯಲ್ಲಿ ತತ್ತ್ವಗಳೇ ಸಹಜವಾಗಿ ಪೂಜಾಸಾಮಗ್ರಿಯಾಗುತ್ತವೆ. ಆಯಾತತ್ತ್ವಗಳ ಶಕ್ತಿಗಳೇ ಸೃಷ್ಟಿಯ ದ್ರವ್ಯಗಳಲ್ಲೂ ಹರಿಯುವುದರಿಂದ, ಬಾಹ್ಯದೃಷ್ಟಿ ಮತ್ತು ಅಂತರ್ದೃಷ್ಟಿಗಳ ಸಾಮರಸ್ಯದಿಂದ ವಿಶಿಷ್ಟವಾದ ಪೂಜಾಸಾಮಗ್ರಿಯನ್ನು ಬಳಸಿದರೆ, ಬಹಿರಂಗದಲ್ಲಿ ದ್ರವ್ಯಮಯವಾಗಿ ನಡೆಯುವ ಪೂಜೆಯು ಅಂತರಂಗದಲ್ಲಿ ತತ್ತ್ವಮಯವಾಗಿ ವ್ಯಾಪಿಸಿ, ಸೃಷ್ಟಿಯ ಮೂಲ ಮಹಾಶಕ್ತಿಗೆ ಪೂಜೆಯನ್ನು ಸಲ್ಲಿಸಿದಂತಾಗುತ್ತದೆ. ಅಂತರಂಗ ಪೂಜೆಯ ಹಾಗೂ ಬಹಿರಂಗ ಪೂಜೆಯ ಗುಟ್ಟು ಈ ಪ್ರಕ್ರಿಯೆಯಲ್ಲಿ ಅಡಗಿದೆ. ಎಲ್ಲ ವಿಧವಾದ ಪೂಜೆಗಳ ಹಿಂದೆ ತಾತ್ತ್ವಿಕವಾದ ಒಂದು ರಹಸ್ಯವಿದೆ. ತತ್ತ್ವದೃಷ್ಟಿಯಿಂದ ನೋಡಿದಾಗ ವಿವಿಧ ಪೂಜಾ ವಿಧಾನಗಳ ಸಾಮರಸ್ಯ ಮನಸ್ಸಿಗೆ ಬರುತ್ತದೆ.

ಸಾಧಕನು ಪೂಜಿಸುವ ದೇವತೆಗಳ ಸಂಖ್ಯೆಯನ್ನು ಶಾಸ್ತ್ರಗಳಲ್ಲಿ ಪರಿಶೀಲಿಸಿದರೆ ಲೆಕ್ಕ ಮಾಡುವುದೇ ಕಷ್ಟವೆನಿಸುವಂತಿದೆ. ಒಂದು, ಎರಡು, ಮೂರು, ಐದು, ಮೂವತ್ತಮೂರು, ಹೀಗೇ ಬೆಳೆಯುತ್ತಾ ಮೂವತ್ತಮೂರು ಕೋಟಿ ದೇವತೆಗಳೆಂದು ಹೇಳುವುದನ್ನು ಶಾಸ್ತ್ರ, ಪುರಾಣ, ಇತಿಹಾಸಗಳಲ್ಲಿ ಕಾಣುತ್ತೇವೆ. "ಏಕಂ ಸದ್ವಿಪ್ರಾ ಬಹುಧಾ ವದಂತಿ" ಎಂಬಂತೆ ವಿಶ್ವವ್ಯಾಪಿಯಾದ ಪರಮಾತ್ಮನೊಬ್ಬನನ್ನೇ ಬೇರೆ ಬೇರೆ ಹೆಸರಿನಿಂದ ಜ್ಞಾನಿಗಳು ಕರೆಯುತ್ತಾರೆಂದು ಶ್ರುತಿಯು ಒಂದೆಡೆ ತಿಳಿಸುತ್ತದೆ. ಬೀಜದಲ್ಲಿ ಅಡಗಿರುವ ಒಂದೇ ಮಹಾಶಕ್ತಿಯು ಅಂಕುರ, ಕಾಂಡ, ಶಾಖೆ, ಉಪಶಾಖೆ, ಹೂ, ಕಾಯಿ, ಹಣ್ಣು  -- ಎಂಬುದಾಗಿ ವಿಕಾಸಹೊಂದಿದಾಗ ಬೇರೆ ಬೇರೆ ನಾಮರೂಪಗಳನ್ನು ತಾಳುವುದು ಸರಿಯಷ್ಟೆ. ಆದರೆ ವಿವಿಧವಾದ ಈ ನಾಮರೂಪಗಳಲ್ಲಿ ಅವ್ಯಾಹತವಾಗಿ ಆಡುತ್ತಿರುವುದು ಆ ಮಹಾಶಕ್ತಿಯೊಂದೇ. ಆ ಮಹಾಶಕ್ತಿಯನ್ನು ಸೇವಿಸುವವನು ಕಾಲ-ದೇಶಗಳ ಉಪಾಧಿಯ ಸ್ಥಿತಿಯಲ್ಲಿ ವಿವಿಧ ನಾಮರೂಪಗಳನ್ನು ಸೇವಿಸಬೇಕಾದುದೇನೋ ನಿಜ. ಆದರೆ ಆ ವೈವಿಧ್ಯದ ಮೂಲಕ ತಾತ್ತ್ವಿಕವಾಗಿ ಸಾಮರಸ್ಯವನ್ನೇ ಅವನು ಸೇವಿಸಬೇಕಾದುದು ಎಂಬುದನ್ನು ಮರೆಯಬಾರದು.

ದೇವಪೂಜಾಕಲ್ಪದಲ್ಲಿ ಪಂಚದೇವಪೂಜೆ ಅಥವಾ ಪಂಚಾಯತನ ಪೂಜೆ ಬಹಳ ವ್ಯಾಪಕವಾಗಿ ಆಚರಣೆಯಲ್ಲಿದೆ. ಈ ಪೂಜೆ ಬಹಳ ಗಂಭೀರವಾದುದು ಮತ್ತು ಅತ್ಯಂತ ತಾತ್ತ್ವಿಕವಾಗಿದ್ದು, ಆಧ್ಯಾತ್ಮಿಕ ದಿವ್ಯ ರಹಸ್ಯಗಳನ್ನು ಒಳಗೊಂಡಿದೆ. ಬೇರೆ ಬೇರೆ ದೇವಪೂಜೆಗಳನ್ನು ಮಾಡವವರೂ ಪೂಜಾಸಿದ್ಧಿಗಾಗಿ ಪಂಚಾಯತನ ಪೂಜೆಯನ್ನು ಆಚರಿಸುತ್ತಾರೆ. ಈ ಪಂಚಾಯತನ ಪೂಜೆಯ ರಹಸ್ಯವು ಅತ್ಯಂತ ಉತ್ತಮೋತ್ತಮವಾದ ಸ್ಫೂರ್ತಿದಾಯಕವಾದ ಪೂಜೆಯಾಗಿದೆ. ಗಣೇಶ, ದೇವೀ, ಶಂಕರ, ವಿಷ್ಣು ಮತ್ತು ಸೂರ್ಯ –ಇವರೇ ಪಂಚಾಯತನ ಪೂಜೆಯ ದೇವತೆಗಳು. ಶಾಸ್ತ್ರಗ್ರಂಥಗಳಲ್ಲಿ

"ಆದಿತ್ಯಂ ಗಣನಾಥಂ ಚ ದೇವೀಂ ರುದ್ರಂ ಚ ಕೇಶವಂ|
ಪಂಚದೈವತಮಿತ್ಯುಕ್ತಂ ಸರ್ವಕರ್ಮಸು ಪೂಜಯೇತ್||

ಎಂಬುದಾಗಿ ಸರ್ವಕಾರ್ಯಗಳಲ್ಲಿಯೂ ಈ ಐದು ಮಂದಿ ದೇವತೆಗಳನ್ನು ಪೂಜಿಸಬೇಕು ಎಂಬ ವಿಧಿಯನ್ನು ಕಾಣುತ್ತೇವೆ. ಈ ಐದು ದೇವತೆಗಳಲ್ಲಿ ಭೇದವನ್ನೆಣಿಸದೆ ಅಭೇದ ಭಾವನೆಯನ್ನು ಹೊಂದುವುದೇ ಸರ್ವಶ್ರೇಷ್ಠವಾದ ಯೋಗವೆಂಬುದಾಗಿ ಗಣೇಶ ಪುರಾಣದಲ್ಲಿ ಉಕ್ತವಾಗಿದೆ:-
 "ಶಿವೇ ವಿಷ್ಣೌ ತಥಾ ಶಕ್ತೌ ಸೂರ್ಯೇ ಮಯಿ ನರಾಧಿಪ।
ಯಾಭೇದ ಬುದ್ಧಿರ್ಯೋಗಃ ಸ ಸಮ್ಯಗ್ಯೋಗ್ಯತಮೋ ಮತಃ||"

ಶ್ರೇಷ್ಠತಮ ಯೋಗವೆನಿಸಿದ ಈ ಪಂಚಾಯತನ ಪೂಜೆಯ ರಹಸ್ಯವಾದರೂ ಏನು? ಸೃಷ್ಟಿಯು ಪಂಚಭೂತಾತ್ಮಕವಾಗಿದೆ. ಮೂಲಪರತತ್ತ್ವದಿಂದ ಪಂಚಭೂತಗಳು ವಿಕಾಸಗೊಂಡು ಈ ಕಾರ್ಯ ಪ್ರಪಂಚರೂಪವಾಗಿ ತೋರುತ್ತಿವೆ. ಬ್ರಹ್ಮಾಂಡದಲ್ಲಿ ತಮ್ಮ ವಿಕಾಸ ಕ್ರಮವಿರುವಂತಯೇ ಪಿಂಡಾಂಡದಲ್ಲಿಯೂ ಕ್ರಮಬದ್ಧವಾಗಿ ತತ್ತ್ವಗಳು ವಿಕಾಸಗೊಂಡಿವೆ. ಪಿಂಡಾಂಡ-ಬ್ರಹ್ಮಾಂಡಗಳ ಸಾಮರಸ್ಯವೇ ಯೋಗ ಸಾಧನೆಯ ರಹಸ್ಯ. ಪಂಚಭೂತಗಳು ಕ್ರಮವಾಗಿ ಪೃಥ್ವೀ, ಜಲ, ತೇಜಸ್ಸು, ವಾಯು ಮತ್ತು ಆಕಾಶ ಎಂಬುದಾಗಿ ಐದು ಇವೆ. ಪಂಚಾಯತನ ಪೂಜೆಯ ದೇವತೆಗಳ ಭಾವನೆಯಲ್ಲಿಯೂ ಒಂದು ಕ್ರಮ ವಿದೆ. ಕ್ರಮವಾಗಿ ಗಣೇಶ, ದೇವೀ, ಶಿವ, ವಿಷ್ಣು ಮತ್ತು ಸೂರ್ಯ ಎಂಬುದಾಗಿ ಈ ಪೂಜೆಯಲ್ಲಿ ದೇವತೆಗಳು ಭಾವಿಸಲ್ಪಡುತ್ತಾರೆ. ಈ ದೇವತಾಶಕ್ತಿಗಳಿಗೂ ಪಂಚಭೂತಗಳಿಗೂ ತಾತ್ವಿಕವಾದ ಸಂಬಂಧವಿದೆ. ಈ ಪಂಚಭೂತಶಕ್ತಿಗಳೇ ಸೂಕ್ಷ್ಮ-ಸ್ಥೂಲ ವಿಧಾನಗಳಿಂದ ನಮ್ಮಶರೀರೇಂದ್ರಿಯ ಮನಸ್ಸು ಪ್ರಾಣಗಳ ರೂಪದಲ್ಲಿ ವಿಕಾಸ ಹೊಂದಿವೆ. ಈ ಐದು ದೇವತೆಗಳೂ ಒಂದೊಂದು ಭೂತಕ್ಕೆ ಅಧಿಪತಿಗಳು. ಪೃಥಿವೀ ತತ್ತ್ವಕ್ಕೆ ಶಿವನು ಅಧಿಪತಿ; ಜಲ ತತ್ತ್ವಕ್ಕೆ ಗಣೇಶನು; ತೇಜಸ್ತತ್ತ್ವಕ್ಕೆ ದೇವಿಯು; ವಾಯು ತತ್ತ್ವಕ್ಕೆಸೂರ್ಯನು; ಆಕಾಶ ತತ್ತ್ವಕ್ಕೆ ವಿಷ್ಣು; ಈ ವಿಷಯವನ್ನೇ ಶಾಸ್ತ್ರವು

"ಆಕಾಶಸ್ಯಾಧಿಪೋ ವಿಷ್ಣುರಗ್ನೇಶ್ಚೈವ ಮಹೇಶ್ವರೀ |
ವಾಯೋಃ  ಸೂರ್ಯಃ ಕ್ಷಿತೇರೀಶೋ ಜೀವನಸ್ಯ ಗಣಾಧಿಪಃ||

ಎಂದು ವರ್ಣಿಸುತ್ತದೆ. ಪೃಥ್ವೀ ತತ್ತ್ವಕ್ಕೂ ಶಿವನಿಗೂ ಸಂಬಂಧವಿರುವುದರಿಂದ ಪಂಚಾಯತನ ಪೂಜೆಯ ಒಂದು ಕಲ್ಪದ ಪ್ರಕಾರ ಶಿವನನ್ನು ಪಾರ್ಥಿವ ಲಿಂಗರೂಪದಲ್ಲಿ ಪೂಜಿಸಬೇಕೆಂಬ ವಿಧಾನವಿದೆ. ಜಲತತ್ತ್ವಕ್ಕೆ ಸೇರಿದ ಗಣಪತಿಯನ್ನು ಆರಂಭದಲ್ಲಿ ಪೂಜಿಸಿ ಜಲತತ್ತ್ವದಲ್ಲಿ ಲಯಗೊಳಿಸಬೇಕು, "ಅಪ ಏವ ಸಸರ್ಜಾದೌ" ಎಂದು ಸೃಷ್ಟಿವಿಕಾಸ ಕ್ರಮದಲ್ಲಿ ಜಲತತ್ತ್ವಕ್ಕೆ ಆದ್ಯತೆ ಇದೆ. "ಗಣೇಶಾದಿ ಪಂಚದೇವತಾಭ್ಯೋ ನಮಃ" ಎಂಬ ಕ್ರಮವು ಈ ತಾತ್ತ್ವಿಕ ರಹಸ್ಯವನ್ನು ಒಳಗೊಂಡಿದೆ. ಅಗ್ನಿ ತತ್ತ್ವಕ್ಕೆ ಸೇರಿದ ದೇವಿಯ ಪೂಜೆಯಲ್ಲಿ ಪ್ರಧಾನವಾಗಿ ಅಗ್ನಿಕುಂಡದಲ್ಲಿ ಹೋಮರೂಪದಿಂದ ಮಾಡಬೇಕಾದ ವಿಧಾನವಿದೆ. ಆಕಾಶತತ್ತ್ವದಲ್ಲಿ ವಿಷ್ಣುವಿನ ಪೂಜೆ ಪ್ರಣವೋಪಾಸನೆ ಮುಂತಾದ ಶಬ್ದ ರೂಪವಾಗಿ ನಡೆಯುತ್ತದೆ, ಸೂರ್ಯನು ಜಗತ್ತಿನ ಆತ್ಮಭೂತನು. ಪ್ರಾಣರೂಪನು. "ಸೂರ್ಯ ಆತ್ಮಾ ಜಗತಃ ತಸ್ಥುಷಶ್ಚ" ಎಂದು ವರ್ಣಿತನಾಗಿದ್ದಾನೆ. ಒಂದೇ ದೇವತೆಯನ್ನು ಪ್ರಧಾನವಾಗಿ ಇಷ್ಟದೇವತೆಯನ್ನಾಗಿ ಮಾಡಿಕೊಂಡು ಪೂಜಿಸುವವರು ಮಧ್ಯದಲ್ಲಿ ಇಷ್ಟದೇವತೆಯನ್ನಿಟ್ಟು ಇತರನಾಲ್ಕುಕಡೆಗೆ ನಾಲ್ಕು ದೇವತೆಗಳನ್ನು ಇಟ್ಟು ಪೂಜೆಮಾಡುತ್ತಾರೆ.  ಸಂಪ್ರದಾಯಭೇದದಿಂದ ಉಪಾಸನಾಭೇದ ಕಂಡುಬಂದರೂ, ಒಟ್ಟಿನಲ್ಲಿ ಪಂಚದೇವತಾಪೂಜೆಯು ಎಲ್ಲ ಸಂಪ್ರದಾಯಗಳಲ್ಲಿಯೂ ಕಂಡುಬರುತ್ತದೆ. ಆದರೆ ಕೆಲವು ಸಂಪ್ರದಾಯಗಳಲ್ಲಿ ಮೂಲ ತಾತ್ತ್ವಿಕ ಸ್ವರೂಪವು ಮರೆಯಾಗಿ, ಮಧ್ಯಕಾಲದಲ್ಲಿ ಅವಿವೇಕದಿಂದ ಕೆಲವು ವಿಷಯಗಳು ಸೇರಿಕೊಂಡು ತಾತ್ತ್ವಿಕವಾದ ಸಂಪ್ರದಾಯಕ್ಕೆ ವಿರುದ್ಧವಾದ ಆಚರಣೆಯು ನಡೆಯುತ್ತಿರುತ್ತದೆ. ತತ್ತ್ವವನ್ನರಿತು ಸಂಪ್ರದಾಯವನ್ನು ಬೆಳೆಸುವ ಜ್ಞಾನಿಯಾದ ಗುರುವಿನ ಉಪದೇಶವನ್ನು ಪಡೆದು ಪೂಜಾ ಸಾಧನವನ್ನು ಮಾಡಿದರೆ ಅದರ ಫಲವು ನಿಶ್ಚಯವಾಗಿಯೂ ಪ್ರಾಪ್ತವಾಗುತ್ತದೆ. ಪ್ರಕೃತಿಭೇದದಿಂದ ಅಧಿಕಾರಿಗಳು ಭಿನ್ನ ಭಿನ್ನವಾಗುವುದರಿಂದ ಸಂಪ್ರದಾಯ ಭೇದಗಳು ಉಂಟಾಗುವುದು ಸಹಜವಾಗಿಯೇ ಇದೆ -
"ಮಾನವಾನಾಂ ಪ್ರಕೃತಯಃ ಪಂಚಧಾ ಪರಿಕೀರ್ತಿತಾಃ|
ಯತೋ ನಿರೂಪ್ಯತೇ ಸರ್ಗಃ ಪಂಚಭೂತಾತ್ಮಕೋಬುಧೈಃ||
ಭಿನ್ನಾ ಯದ್ಯಪಿ ಭೂತಾನಾಂ ಪ್ರಕೃತಿಃ ಪ್ರಕೃತೇರ್ವಶಾತ್|
ತಥಾಪಿ ಪಂಚತತ್ತ್ವಾನಾಮಾನುಸಾರೇಣ ತತ್ತ್ವವಿತ್||
ಪ್ರಮೇಯ ತತ್ತ್ವಪ್ರಾಚುರ್ಯಂ ವಿಮೃಶ್ಯ ವಿಧಿಪೂರ್ವಕಮ್|
ಉಪಾಸನಾಧಿಕಾರಸ್ಯ ಪಂಚಭೇದಮವರ್ಣಯತ್||

"ಜ್ಞಾನಿಗಳು ಸೃಷ್ಟಿಯು ಪಂಚಭೂತಾತ್ಮಕವಾಗಿದೆಯೆಂದು ಹೇಳುತ್ತಾರೆ. ಆದ್ದರಿಂದಲೇ ಮನುಷ್ಯರ ಪ್ರಕೃತಿಗಳೂ ಐದು ವಿಧವಾಗಿರುತ್ತವೆ. ಪ್ರಕೃತಿಯ ವಶದಿಂದ ಜೀವಿಗಳ ಸ್ವಭಾವವು ಯದ್ಯಪಿ ಭಿನ್ನ ಭಿನ್ನವಾಗಿರುತ್ತದೆ. ಆದರೂ ತತ್ತ್ವಜ್ಞಾನಿಯಾದವನು ಪಂಚತತ್ತ್ವಗಳ ಕ್ರಮವನ್ನು ಅನುಸರಿಸಿ, ಪ್ರಮೇಯುಭೂತವಾದ ತತ್ತ್ವಗಳ ಪ್ರಾಚುರ್ಯವನ್ನು ವಿಧಿಪೂರ್ವಕವಾಗಿ ವಿಮರ್ಶಿಸಿ, ಉಪಾಸನೆಯ ಅಧಿಕಾರದಲ್ಲಿ ಐದು ಭೇದಗಳನ್ನು ವರ್ಣಿಸಿದ್ದಾನೆ."
ಪ್ರಾಮಾಣಿಕವಾಗಿ ಪರಮ ಪುರುಷಾರ್ಥವನ್ನು ಪಡೆಯಲಪೇಕ್ಷಿಸುವ ಸಾಧಕನು ಸದ್ಗುರುವಿನಿಂದ ಉಪದೇಶ ಪಡೆದು ಬಹಿರಂಗಪೂಜೆ ಮತ್ತು ಅಂತರಂಗ ಪೂಜೆಗಳ ರಹಸ್ಯವನ್ನು ಅರಿತು ಇಷ್ಟದೇವತೆಯನ್ನು ಉಪಾಸನೆ ಮಾಡಿ ಪೂಜಿಸಬೇಕು. ಈ ರೀತಿಯ ಪೂಜೆಯು ಒಂದು ಮಹಾ ಯೋಗವೇ ಸರಿ. ಹೀಗೆ ಪೂಜೆ ಮತ್ತು ಉಪಾಸನೆಗಳು ನಡೆದರೆ, ಪಂಚವಿಧವಾದ ಉಪಾಸನೆಯೂ ಏಕರೂಪವಾದ ಬ್ರಹ್ಮೋಪಾಸನೆಯೇ ಆಗುತ್ತದೆ. "ಉಪಾಸನಮ್ ಪಂಚವಿಧಂ ಬ್ರಹ್ಮೋಪಾಸನಮೇವತತ್||" ಎಂದು ಶಾಸ್ತ್ರವು ಸಾರುತ್ತದೆ. ಬ್ರಹ್ಮಾಂಡದ ಸ್ವರೂಪವನ್ನು ಪಿಂಡಾಡದ ರಹಸ್ಯವನ್ನೂ ಅರಿತು ಸಾಧಕನು ಯೋಗಾಯತನವೂ, ದೇವಾಯತನವೂ ಆದ ತನ್ನ ಶರೀರದಲ್ಲಿ ಪರಾಶಕ್ತಿಯ ಆವಿರ್ಭಾವ, ಊರ್ಧ್ವಗತಿ, ಪರಮ ಪದದ ನೆಲೆಗಳನ್ನು ಗುರುವಿನ ಅನುಗ್ರಹದಿಂದ ಅರಿತು, ಮೇರುದಂಡಸ್ಥವಾದ ಮೂಲಾಧಾರಾದಿ ಚಕ್ರಗಳಲ್ಲಿ ತಾತ್ವಿಕ ಪೂಜೆಯನ್ನು ನಡೆಸಬೇಕು. ಮೂಲಾಧಾರ ಚಕ್ರದಲ್ಲಿ ಪೃಥ್ವೀತತ್ತ್ವ ಶಕ್ತಿಯು ನೆಲೆಸಿದೆ. ಸ್ವಾಧಿಷ್ಠಾನದಲ್ಲಿ ಜಲತತ್ತ್ವ ಶಕ್ತಿ; ಮಣಿಪೂರದಲ್ಲಿ ಅಗ್ನಿತತ್ತ್ವ ಶಕ್ತಿ; ಅನಾಹತ ಚಕ್ರದಲ್ಲಿ ವಾಯುತತ್ತ್ವಶಕ್ತಿ; ವಿಶುದ್ಧಿ ಚಕ್ರದಲ್ಲಿ ಆಕಾಶ ತತ್ತ್ವಶಕ್ತಿ. ಆಜ್ಞಾಚಕ್ರವು ಗುರುಪೀಠ. ಇಲ್ಲಿ ಗುರುತತ್ತ್ವವನ್ನು ಪೂಜಿಸಬೇಕು.ಹೀಗೆ ಪಂಚ ತತ್ತ್ವಗಳ ಶಕ್ತಿಗಳನ್ನು ಬಹಿರಂಗಪೂಜೆಯ ಜೊತೆಗೆ ತಾತ್ತ್ವಿಕವಾಗಿ ಅಂತರಂಗದಲ್ಲಿ ಸಾಧಿಸಿ ಪರಮಪದವಾದ ಸಹಸ್ರಾರದಲ್ಲಿ ತನ್ನ ಇಷ್ಟದೈವವನ್ನು ಪರಬ್ರಹ್ಮರೂಪದಿಂದ ಉಪಾಸಿಸಿ ಪರಮಾತ್ಮೈಕ್ಯವನ್ನು ಹೊಂದಬೇಕು. ಹೀಗೆ ಬ್ರಹ್ಮಾತ್ಮಭಾವದಿಂದ ಪಂಚಾಯತನ ಪೂಜೆಯನ್ನು ಆಚರಿಸುವವರು ಆ ಬ್ರಹ್ಮಶಕ್ತಿಯೇ ಗಣೇಶಾದಿರೂಪದಿಂದ ಮೂಲಾಧಾರಾದಿ ಚಕ್ರಗಳಲ್ಲಿ ವ್ಯಕ್ತವಾಗುವುದೆಂಬುದನ್ನು ಮರೆಯಬಾರದು. ಆದ್ದರಿಂದಲೇ ಶಿವ, ವಿಷ್ಣು, ಶಕ್ತಿ, ಸೂರ್ಯ ಮತ್ತು ಗಣೇಶರಲ್ಲಿ ಅಭೇದಬುದ್ಧಿಯನ್ನು ಹೊಂದುವದೇ ಶ್ರೇಷ್ಠತಮವಾದ ಮಹಾಯೋಗ. ಆದ್ದರಿಂದಲೇ
"ಉಭಯೋರಂತರಂ ನಾಸ್ತಿ ಹ್ಯಾದಿತ್ಯಸ್ಯ ಶಿವಸ್ಯ ಚ "
(ಆದಿತ್ಯ ಮತ್ತು ಶಿವರಲ್ಲಿ ಅನ್ಯೋನ್ಯ ಭೇದವಿಲ್ಲ)
"ತ್ರಿಮೂರ್ತ್ಯಾತ್ಮಾ ತ್ರಿದೇವಾತ್ಮಾ ಸರ್ವದೇವಮಯೋರವಿಃ"
(ತ್ರಿಮೂರ್ತಿರೂಪನೂ, ತ್ರಿದೇವಾತ್ಮಕನೂ ಆದ ಸೂರ್ಯನು ಸರ್ವದೇವಮಯನು)
ಹೀಗೆಯೇ ಗಣಪತಿಯನ್ನು ಕುರಿತು,
"ತ್ವಮೇವ ಸರ್ವಂ ಖಲ್ವಿದಂ ಬ್ರಹ್ಮಾಸಿ| ತ್ವಂಸಾಕ್ಷಾದಾತ್ಮಾಸಿತ್ಯಮ್|"
(ಇದೆಲ್ಲವೂ ನೀನೇ, ನೀನೇ ಬ್ರಹ್ಮ. ನೀನೇ ಸಾಕ್ಷಾತ್ ಶಾಶ್ವತವಾದ ಆತ್ಮ )
ಎಂದು ಮುಂತಾದಾಗಿ ಶ್ರುತಿ ಮುಂತಾದೆಡೆಗಳಲ್ಲಿ ಪಂಚದೇವತೆಗಳಿಗೂ ಪರಬ್ರಹ್ಮನಿಗೂ ಐಕ್ಯವನ್ನು ವರ್ಣಿಸಿರುವುದನ್ನು ಕಾಣುತ್ತೇವೆ. ದೇವಿಯೂ ಪರಬ್ರಹ್ಮರೂಪಳೇ. ಎಲ್ಲ ದೇವತೆಗಳನ್ನೂ ಅಂತರಂಗಕ್ಕೆ ಪೋಷಕವಾದ  ಉಚಿತ ಬಾಹ್ಯದ್ರವ್ಯಗಳಿಂದ ಪೂಜಿಸಿ, ಅಂತರಂಗದಲ್ಲಿ ತತ್ತ್ವಮಯವಾಗಿ, ಯೋಗಮಯವಾಗಿ, ಪೂಜೆಯನ್ನು ನಡೆಸಿ, ಕೊನೆಗೆ ಪರಬ್ರಹ್ಮನಲ್ಲಿ ಐಕ್ಯಗೊಳಿಸಬೇಕು. ಇದೇ ಪೂಜಾರಹಸ್ಯ. ಇದೇ ಯೋಗರಹಸ್ಯ. ಇದೇ ಬ್ರಹ್ಮಾನುಭವ.

ಬ್ರಹ್ಮಾರ್ಪಣಂ ಬ್ರಹ್ಮಹವಿಃ ಬ್ರಹ್ಮಾಗ್ನೌ ಬ್ರಹ್ಮಣಾ ಹುತಮ್|
ಬ್ರಹ್ಮೈವ ತೇನ ಗಂತವ್ಯಂ ಬ್ರಹ್ಮಕರ್ಮ ಸಮಾಧಿನಾ||

ಸೂಚನೆ : ಈ ಲೇಖನವು ಶ್ರೀಮಂದಿರದಿಂದ ಪ್ರಕಾಶಿತವಾಗುವ ಆರ್ಯಸಂಸ್ಕೃತಿ ಮಾಸ ಪತ್ರಿಕೆಯ ಸಂಪುಟ: ೦೩ ಸಂಚಿಕೆ:  ೧೦. ೧೯೮೧ : ಆಗಸ್ಟ್  ತಿಂಗಳಲ್ಲಿ  ಪ್ರಕಟವಾಗಿದೆ.