Monday, November 23, 2020

ಭಯ ನಿವಾರಣೆ ಹೇಗೆ? (Bhaya Nivarane Hege?)

ಲೇಖಕರು : ಡಾII ಹರ್ಷ ಸಿಂಹ
(ಪ್ರತಿಕ್ರಿಯಿಸಿರಿ lekhana@ayvm.in)



ಶ್ರೀಕೃಷ್ಣದೇವರಾಯನು ಒಮ್ಮೆ ತನ್ನ ಆಸ್ಥಾನದ ವಿದ್ವಾಂಸರನ್ನು ಪರೀಕ್ಷಿಸಲು ಒಂದು ಸವಾಲನ್ನು ಒಡ್ಡಿದನು. ಸಭೆಯಲ್ಲಿ ಗಣ್ಯರೆಲ್ಲರೂ ಉಪಸ್ಥಿತರಾಗಿದ್ದಾಗ, ಒಂದು ಕರಿ ಫಲಕವನ್ನು ತರೆಸಿ ಅದರಲ್ಲಿ ಸುಣ್ಣದಿಂದ ಒಂದು ಲಂಬರೇಖೆಯನ್ನು ಎಳೆದನು. ನಂತರ, ಸಭಾಸದರನ್ನು ಉದ್ದೇಶಿಸಿ "ಮಹನೀಯರೆ! ಇಲ್ಲಿ ಒಂದು ಲಂಬರೇಖೆಯನ್ನು ನೀವೆಲ್ಲರೂ ಕಾಣುತ್ತಿದ್ದೀರಿ. ಈ ರೇಖೆಯನ್ನು ಅಳಿಸದೆಯೇ, ರೇಖೆಯನ್ನು ಗಿಡ್ಡವಾಗಿಸಬೇಕು" ಎಂದನು. ಮೊದಲನೋಟಕ್ಕೆ ಪ್ರಶ್ನೆ ಸಾಮಾನ್ಯದ್ದು ಎಂದೆನಿಸಿದರೂ, ಸಭಾಸದರಲ್ಲಿ ಯಾರಿಗೂ ಆ ಲಂಬರೇಖೆಯನ್ನು ಗಿಡ್ಡವಾಗಿಸುವ ಬಗೆ ತೋಚದಾಯಿತು.

ಆ ಸಭೆಯ ಮಧ್ಯದಲ್ಲಿ ಇದ್ದ ಕುಶಲಮತಿಯಾದ ತೆನಾಲಿ ರಾಮಕೃಷ್ಣನು ರಾಜನ ಅನುಮತಿಯನ್ನು ಪಡೆದು, ಸುಣ್ಣದಿಂದ, ಆ ಲಂಬ ರೇಖೆಯ ಪಕ್ಕದಲ್ಲಿಯೇ ಇನ್ನೂ ಉದ್ದವಾದ ಮತ್ತೊಂದು ಲಂಬ ರೇಖೆಯನ್ನು ಎಳೆದೆನು. ಸಭಾಸದರ ಮನಸ್ಸು ತೆನಾಲಿಯ ಉದ್ದವಾದ ರೇಖೆಯೆಡೆಗೆ ಹರಿದೊಡನೆ, ಪಕ್ಕದಲ್ಲಿದ್ದ ರಾಜನ ಲಂಬರೇಖೆಯು ಗಿಡ್ಡವೆನಿಸಿತು! ತೆನಾಲಿಯ ಉತ್ತರದಲ್ಲಿ ಇದ್ದ ಚಮತ್ಕಾರವನ್ನು ಕಂಡು ಎಲ್ಲರೂ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

ಇಂದು, ಕರೋನದಿಂದಾಗಿ ಒಂದು ಭಯದ ವಾತಾವರಣದಲ್ಲಿ ಜೀವನವನ್ನು ಸಾಗಿಸುತ್ತಿದ್ದೇವೆ. ಸಾಮಾಜಿಕ ಜಾಲತಾಣಗಳೂ, ಸುದ್ದಿ ಮಾಧ್ಯಮಗಳೂ ಸದಾಕಾಲದಲ್ಲಿಯೂ ಕರೋನಾ ಬಗೆಗಿನ ವಿಷಯಗಳನ್ನು ನಮ್ಮ ಮನಸ್ಸಿಗೆ ಒದಗಿಸುತ್ತಲೇ ಇವೆ. ನಮ್ಮ ಮನಸ್ಸು ಅನುಭವಿಸುತ್ತಿರುವ ಭಯಾನಕ ರಸವನ್ನು ಉತ್ತೇಜಿಸುವ  ಸಾಮಗ್ರಿಗಳಾಗಿ ಇವು ಪರಿಣಮಿಸಿವೆ. ಇಂತಹ ಹತ್ತು ಹಲವು ಭಯಜನಕ ವಿಷಯಗಳಿಂದ ಸುತ್ತುವರೆದ ನಮ್ಮಗಳ ಜೀವನದಲ್ಲಿ ಭಯವು ಸ್ಥಾಯೀಭಾವವಾಗಿಬಿಟ್ಟಿದೆ!

ಈ ಭಯವನ್ನು ನಿವಾರಿಸಿಕೊಳ್ಳುವ ಬಗೆಯನ್ನು ತೆನಾಲಿಯ ಚಮತ್ಕಾರದ ಉತ್ತರದಲ್ಲಿ ಕಾಣಬಹುದು. ಸಭಾಸದರ ಮನಸ್ಸು ತೆನಾಲಿಯ ಉದ್ದವಾದ ರೇಖೆಯೆಡೆಗೆ ಹರಿದೊಡನೆ, ಪಕ್ಕದಲ್ಲಿದ್ದ ರಾಜನ ಲಂಬರೇಖೆಯು ಗೌಣವೆನಿಸಿತಷ್ಟೇ?! ಅಂತೆಯೇ, ಈ ಭಯಜನಕ ವಸ್ತುಗಳನ್ನು ಗೌಣವಾಗಿಸಬೇಕಾದರೆ, ನಮ್ಮ ಮನಸ್ಸು ಒಂದು ಹಿರಿದಾದ ವಸ್ತುವಿನೆಡೆಗೆ ಹರಿಯಬೇಕಾಗಿದೆ. ಅಂತಹ ವಸ್ತುವು ಶಾಶ್ವತವಾಗಿಲ್ಲದಿದ್ದಲ್ಲಿ, ಆ ವಸ್ತುವು ಕಳೆದುಹೋಗಬಹುದೆಂಬ ಇನ್ನೊಂದು ಭಯವು ಮನಸ್ಸನ್ನು ಆವರಿಸುವುದು! ಆದ್ದರಿಂದ ಅದು ಶಾಶ್ವತವಾದದ್ದೂ ಆಗಿದ್ದು, ಶಾಂತರಸದಾಯಕವೂ ಆಗಿರಬೇಕು. ಆ ಹಿರಿದಾದ, ಶಾಶ್ವತವೂ ಆದ, ಶಾಂತರಸದಾಯಕವೂ ಆದ ವಸ್ತುವೇ ಬ್ರಹ್ಮವಸ್ತು. ಮನಸ್ಸು ಆ ಬ್ರಹ್ಮವಸ್ತುವಿನೆಡೆಗೆ ಹರಿದಾಗ,  ಇತರ ವಿಷಯಗಳು ಗೌಣವಾಗಿ, ಭಯವೇ ಮೊದಲಾದ ಮನಸ್ಸಿನ ತಳಮಳಗಳೆಲ್ಲವೂ ಸಹಜವಾಗಿಯೇ ನೀಗುವುವು.

ಆದರೆ ಇದು ಸುಲಭವೇ? ಆ ಭಗವಂತನಿಗೆ ನಮ್ಮ ಮನಸ್ಸಿನಲ್ಲಿ ಸ್ವಲ್ಪ ಜಾಗವನ್ನು ಕೊಟ್ಟರೂ ಸಾಕು. ನಿತ್ಯವೂ ಸ್ವಲ್ಪಹೊತ್ತು ಅವನೆಡೆಗೆ ನಮ್ಮ ಮನಸ್ಸನ್ನು ಹರಿಸಿದರೂ ಸಾಕು. ಅವನು ವಾಮನನಾಗಿ ಬಂದು ತ್ರಿವಿಕ್ರಮನಾಗಿ ಬೆಳೆದು ಮನಸ್ಸನ್ನು ಪೂರ್ಣವಾಗಿ ಆವರಿಸುವನು. ಮನಸ್ಸು ಶಾಂತಭಾವದಲ್ಲಿ ನೆಲೆ ನಿಲ್ಲುವುದು! ಈ ನಿಟ್ಟಿನಲ್ಲಿ, ಭಾರತೀಯ ಮಹರ್ಷಿಗಳು ತಂದುಕೊಟ್ಟಿರುವ ಜಪ-ಧ್ಯಾನ-ಪೂಜಾಕ್ರಮಗಳೆಲ್ಲವೂ, ನಿತ್ಯದ ಜಂಜಾಟಗಳಿಂದ ನಮ್ಮ ಮನಸ್ಸನ್ನು ಸೆಳೆದು, ಸಚ್ಚಿದಾನಂದಘನದೆಡೆಗೆ ಹರಿಸಿ ಬ್ರಹ್ಮಸ್ವರೂಪವನ್ನು ಅರಿಯುವಂತಾಗಲು ಮಾಡಿರುವ ಉಪಾಯಗಳೇ ಆಗಿವೆ.  "ಸ್ವರೂಪವನ್ನು ಅರಿತರೆ ನಮ್ಮ ಬಾಳಾಟ, ಅರಿಯದಿದ್ದರೆ ಗೋಳಾಟ!" ಎಂಬ ಶ್ರೀರಂಗಮಹಾಗುರುವಿನ ಸೂತ್ರಪ್ರಾಯವಾದ ವಾಣಿಯು ಇಲ್ಲಿ ಸ್ಮರಣೀಯ.

ಸೂಚನೆ: 21/11/2020 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ದಲ್ಲಿ ಪ್ರಕಟವಾಗಿದೆ.