ಲೇಖಕರು: ಪ್ರಸಾದ್ ಸುಂದರರಾಘವನ್
(ಪ್ರತಿಕ್ರಿಯಿಸಿರಿ lekhana@ayvm.in)
"ಉಂಡಾಡಿ ಗುಂಡ ಮದುವೆ ಮನೆಗ್ಹೋದ, ಹತ್ ಲಾಡು ತಿಂದ, ಇನ್ನೂ ಬೇಕು ಅಂದ, ಅಮ್ಮ ದೊಣ್ಣೆ ತಂದ್ರು, ಕೈಕಟ್ಟು-ಬಾಯ್ಮುಚ್ಚು" - ಈ ಪದ್ಯವನ್ನು ಸಾಮಾನ್ಯವಾಗಿ ನಾವೆಲ್ಲರೂ ಚಿಕ್ಕ ವಯಸ್ಸಿನಲ್ಲಿ ಕೇಳಿಯೇ ಇರುತ್ತೇವೆ. ತನ್ನ ಇಚ್ಚೆಯಂತೆ ಒಂದು ಡಜನ್ಗೂ ಹೆಚ್ಚಿನ ಸಂಖ್ಯೆಯಲ್ಲಿ ಲಾಡು ತಿನ್ನಲು ಅಮ್ಮನ ಪ್ರತಿಬಂಧದ ಬಗ್ಗೆ ಗುಂಡನಿಗೆ ಬೇಸರ. ನಿತ್ಯ ಜೀವನದಲ್ಲಿ ನಾವೆಲ್ಲರೂ ಉಂಡಾಡಿ ಗುಂಡರೇ. ಗುಂಡನಿಗೆ ಲಾಡುವಿನಲ್ಲಿ ಅಭಿರುಚಿ ಇದ್ದರೆ ಮತ್ತೆ ಕೆಲವರಿಗೆ ಆಟ, ಪಾಠ, ಮಾತು, ಮನೆ, ಮನೋರಂಜನೆ, ಆಹಾರ, ವಿಹಾರ ಇತ್ಯಾದಿ ನಾನಾರೀತಿಯ ವಿಚಾರಗಳಲ್ಲಿ ಅತಿಯಾದ ಆಸೆ. ನಾವೆಲ್ಲರೂ ಸ್ವೇಚ್ಛೆಯಂತಿರಲು ಸ್ವಾತಂತ್ರ್ಯವನ್ನು ಬಯಸುತ್ತೇವೆ. ಯಾವುದೇ ನಿಯಮ-ಕಾಯ್ದೆ ಅಡ್ಡಿಬಂದಲ್ಲಿ 'ಎಲ್ಲಿ ಹೋಯಿತು ಸ್ವಾತಂತ್ರ್ಯ? ಹೆಸರಿಗೆಮಾತ್ರ ಲೋಕತಂತ್ರ' ಎಂಬ ಕೂಗು ಕೇಳಿಸುತ್ತದೆ. ಇದು ನಿಜವಾದ ಸ್ವಾತಂತ್ರ್ಯವೇ? ಸ್ವಾತಂತ್ರ್ಯಕ್ಕೆ ಇತಿ-ಮಿತಿ ಇದೆಯೇ? ಇದನ್ನು ಅಳೆಯುವುದಾದರೂ ಹೇಗೆ?
ಸ್ವಾತಂತ್ರ್ಯವೆಂದರೆ "ನನ್ನ ಇಷ್ಟ, ನನ್ನ ಏಳಿಗೆ, ನನ್ನ ಬಯಕೆ, ನನ್ನ ಸಂತೋಷ " ಎಂಬುದು ಸಾಮಾನ್ಯ ಭಾವನೆ. ಇಲ್ಲಿ 'ನಾನು', 'ನನ್ನ', 'ನನಗೆ' ಎಂಬುದೇ ಕೇಂದ್ರಬಿಂದು. ಆದರೆ ಸ್ವಾತಂತ್ರ್ಯದ ಹೆಸರಿನಲ್ಲಿ ಒಂದು ಸೀಮೆಯನ್ನು ದಾಟಿದರೆ 'ನಾನು' ಎಂಬುದರ ಅಸ್ತಿತ್ವಕ್ಕೇ ಧಕ್ಕೆ ಉಂಟಾದರೆ ಈ ಸ್ವಾತಂತ್ರ್ಯದಿಂದ ಏನು ಪ್ರಯೋಜನ? ಮಿತಿಮೀರಿದರೆ ಲಾಡು 'ನನ್ನ' ಆರೋಗ್ಯ ಕೆಡಿಸುತ್ತದೆ. ಅಪಾಯವೆಂಬ ಸೂಚನೆ ನಿರ್ಲಕ್ಷಿಸಿ, ಬೆಟ್ಟದ ತುದಿಯಲ್ಲಿ ವಿಹರಿಸಿದರೆ 'ನಾನು' ಇಲ್ಲವಾಗಬಹುದು. 'ನನ್ನ' ಇಷ್ಟ-ಹವ್ಯಾಸ ಮಿತಿಮೀರಿದರೆ, ನನ್ನ ಮನೆ-ಮಠವೆಲ್ಲಾ ಹರಾಜಿಗೆ ಬಂದೀತು. ಆದ್ದರಿಂದ ಸ್ವಾತಂತ್ರ್ಯಕ್ಕೆ ಇತಿ-ಮಿತಿಗಳಿರುವುದು ಸಹಜವೇ ಆಗಿದೆ. ಭಾರತೀಯ ಸಂಸ್ಕೃತಿಯ ವೈಶಿಷ್ಟ್ಯವೆಂದರೆ ಪದವೇ ಪದಾರ್ಥದ ನಿಜ ಪರಿಚಯ ಮಾಡಿಸುತ್ತದೆ. 'ಸ್ವತಂತ್ರ' ಎಂಬ ಪದದ ಒಳಹೊಕ್ಕು ನೋಡಿದರೇ 'ಸ್ವ' ಎಂಬುದು ಎದ್ದು ಕಾಣುತ್ತದೆ. ಸ್ವದೇಶ, ಸ್ವಸ್ಥ, ಸ್ವರಾಜ್ಯ, ಸ್ವಾಧ್ಯಾಯ ಮುಂತಾದ ಪದಗಳಲ್ಲಿ ಇದರ ಬಳಕೆ ನೋಡಬಹುದು. ನಾನು(ಸ್ವ) ಚೆನ್ನಾಗಿ ಇರುವುದಕ್ಕೊಸ್ಕರ ರೂಪಿಸಿಕೊಳ್ಳುವಂತಹ ಯೋಜನೆ(ತಂತ್ರ) ಸ್ವಾತಂತ್ರ್ಯ. 'ಚೆನ್ನು' ಎಂಬುದರ ವ್ಯಾಪ್ತಿ ನಾನಾ ಸ್ತರಗಳಲ್ಲಿ ಇರುತ್ತದೆ. ಮೊದಲನೆಯ ಸ್ತರದಲ್ಲಿ ಸ್ವಾತಂತ್ರ್ಯ ಎಂದರೆ ಇಂದ್ರಿಯ ಸುಖಕ್ಕೆ ಒಂದು ಯೋಜನೆ. ಎರಡನೆಯ ಸ್ತರದಲ್ಲಿ ಬೌದ್ಧಿಕ-ಮಾನಸಿಕ ಆಲೋಚನೆಯ ಸುಖಕ್ಕೆ ಯೋಜನೆ. ನಮ್ಮ ಒಳ ಹೊರ ಜೀವನದಲ್ಲಿ ಶಕ್ತಿರೂಪವಾಗಿ ಕಾಯುವ ದೇವತೆಗಳ ತೃಪ್ತಿಯೂ ಒಂದುಂಟು. ಅದನ್ನು ಪಡೆವ ವಿಧಾನ, ಯೋಜನೆಗಳುಂಟು. ಆದರೆ ಇವೆಲ್ಲವನ್ನೂ ಮೀರಿ ಇರುವಂತಹ ಸ್ತರವೇ ಆತ್ಮತೃಪ್ತಿ ಅಥವಾ ಆತ್ಮಸುಖ ಎಂಬುದು. ಈ ಕಟ್ಟಕಡೆಯ ಸ್ತರವು ಪರಮಾತ್ಮ ಎಂಬ ಅಭಿಪ್ರಾಯದಲ್ಲಿದೆ. ಸ್ವಾತಂತ್ರ್ಯ ಎಂಬ ಯೋಜನೆಯು ಇಂದ್ರಿಯಸುಖ, ಮಾನಸಿಕ ತೃಪ್ತಿ, ದೇವತಾಪ್ರಸನ್ನತೆ, ಮತ್ತು ಆ ಪರಮಾತ್ಮನ ಪರಮಾನಂದದ ವರೆವಿಗೂ ಸೌಖ್ಯವನ್ನು ನೀಡುವ ಯೋಜನೆ ಎಂಬುದು ಮಹರ್ಷಿಗಳ ದೃಷ್ಟಿ.
ಶ್ರೀರಂಗಮಹಾಗುರುಗಳು ಸಾರಿದ ಸ್ವಾತಂತ್ರ್ಯ-ಸ್ವದೇಶಗಳ ಮರ್ಮವಿದು. ಭಾರತ ಮಹರ್ಷಿಗಳ 'ಸ್ವದೇಶೋ ಭುವನತ್ರಯಂ' ಎಂಬ ಉದ್ಘೋಷದ ಒಳಾರ್ಥವೂ ಇದೇ ಆಗಿದೆ.
ಸೂಚನೆ: 12/11/2020 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ದಲ್ಲಿ ಪ್ರಕಟವಾಗಿದೆ.