Saturday, November 28, 2020

ಯೋಗಾಂಗ - ಸತ್ಯ (Yoganga - Satya)

ಲೇಖಕರು: ಶ್ರೀ ಜಿ. ನಾಗರಾಜ.
(ಪ್ರತಿಕ್ರಿಯಿಸಿರಿ lekhana@ayvm.in)



ಯಮದ ಎರಡನೇ ಅಭ್ಯಾಸವಾದ ಸತ್ಯಕ್ಕೆ ವಿವಿಧ ಶಾಸ್ತ್ರಗಳಲ್ಲಿ ಬೇರೆ ಶಬ್ದಪ್ರಯೋಗವುಳ್ಳ, ಆದರೆ ಬಹುತೇಕ ಒಂದೇ ಆಶಯವುಳ್ಳ ವ್ಯಾಖ್ಯಾನಗಳಿವೆ. ಅವುಗಳಲ್ಲಿ ಶ್ರೀರಂಗಮಹಾಗುರುಗಳು ಭೂತಹಿತವೂ ಯಥಾರ್ಥವೂ  ಆದುದೇ ಸತ್ಯ ಎನ್ನುವ ವಿವರಣೆಯನ್ನು ಹೆಚ್ಚು ಬಳಸುತ್ತಿದ್ದರು. ಭೂತಹಿತ ಎಂದರೆ ಜೀವಿಗಳಿಗೆ ಹಿತವಾಗುವಂತಹದು , ಮತ್ತು ಯಥಾರ್ಥ ಅಂದರೆ ಇರುವುದನ್ನು ಹಾಗೆಯೇ ವ್ಯಕ್ತಪಡಿಸುವುದು. ಈ ಎರಡೂ ಲಕ್ಷಣಗಳಿದ್ದರೆ ಅಂತಹದನ್ನು ಸತ್ಯ ಎನ್ನುತ್ತಾರೆ.

ಉದಾಹರಣೆಗೆ, ಒಬ್ಬ ತಪಸ್ವಿಯು ವಿಶ್ರಮಿಸುತ್ತಿರುವಾಗ, ಸಾಲಂಕೃತ ಸ್ತ್ರೀಯೊಬ್ಬಳನ್ನು ದೋಚಲು ದುಷ್ಟನೊಬ್ಬ ಅಟ್ಟಿಸಿಕೊಂಡು ಬರುತ್ತಿರಬೇಕಾದರೆ, ಸ್ತ್ರೀಯು ಆಶ್ರಯಕ್ಕಾಗಿ ಆಶ್ರಮದೊಳಗೆ ಅಡಗಿದಾಗ, ದುಷ್ಟನು "ಇಲ್ಲೊಬ್ಬ ಸ್ತ್ರೀ ಓಡಿ ಬರುತ್ತಿದ್ದಳು, ನೀವೇನಾದರೂ ನೋಡಿದಿರಾ?" ಎಂದು ಕೇಳಿದರೆ, ತಪಸ್ವಿಯು "ನೋಡಿದೆ, ಇಲ್ಲೇ ಆಶ್ರಮದೊಳಗೆ ಅಡಗಿದ್ದಾಳೆ" ಎಂದು ಹೇಳಿಬಿಟ್ಟರೆ ದುಷ್ಟನು ಹಾನಿ ಮಾಡುತ್ತಾನಾದುದರಿಂದ ಆ ಮಾತಿನಲ್ಲಿ ಭೂತಹಿತವಿಲ್ಲ. ಹೀಗಾಗಿ ಯಥಾರ್ಥವಾದರೂ ಸಹ ಈ ಮಾತು ಸತ್ಯವಲ್ಲ. ಯಥಾರ್ಥವು ಭೂತಹಿತವಲ್ಲದಿದ್ದಾಗ, ಭೂತಹಿತವಾದ ಮಾತು ಅಯಥಾರ್ಥವಾದರೂ ಸತ್ಯವೆಂದೇ ಪರಿಗಣಿಸಲ್ಪಡುತ್ತದೆ. ಈ ಉದಾಹರಣೆಯಲ್ಲಿ, "ನಾನು ನೋಡಿಲ್ಲ" ಎನ್ನುವ ಸುಳ್ಳೇ ಸತ್ಯವೆಂದು ಪರಿಗಣಿಸಲ್ಪಡುತ್ತದೆ.

ಇನ್ನು ಯರ್ಥಾರ್ಥ ಎನ್ನುವ ನೇರದಲ್ಲಿ ಸತ್ಯಕ್ಕೆ ಬಹಳ ಗಹನವಾದ ಅರ್ಥಗಳಿವೆ. ಸತ್ ಎಂದರೆ ಇರುವಿಕೆ ಎಂದರ್ಥ; ಹೀಗಾಗಿಯೇ ಇರುವಿಕೆಯನ್ನೇ ವ್ಯಕ್ತ ಪಡಿಸುವ ನುಡಿಯೂ ಸಹಾ ಸತ್ಯ. ಇರುವಿಕೆ ಅಥವಾ ಅಸ್ತಿತ್ವಕ್ಕೆ ಮೂರು ಸ್ತರಗಳಿವೆ - ಭೌತಿಕ, ದೈವಿಕ ಮತ್ತು ಆಧ್ಯಾತ್ಮಿಕ. ನೋಡಿ, ಅನುಭವಿಸಿದ ವಿಷಯವನ್ನು ಅಂತೆಯೇ ಮಾತಿನಿಂದ ಹೊರತರುವುದು ಭೌತಿಕ ಸತ್ಯ. ಭೌತಿಕ ಸ್ತರದಲ್ಲಿ ಇರುವಿಕೆಯು ಬದಲಾವಣೆಗೆ ಒಳಪಡುತ್ತಿರುತ್ತದೆ. ಆದರೆ, ಶಾಶ್ವತವಾದ, ಎಂದಿಗೂ ಬದಲಾಗದ ಅಸ್ತಿತ್ವವಾದ ಯಾವ ಆತ್ಮವಸ್ತುವುಂಟೋ ಅದೇ ಅಧ್ಯಾತ್ಮಿಕ ಸ್ತರದಲ್ಲಿ ಸತ್ಯ ಎನ್ನಿಸಿಕೊಳ್ಳುತ್ತದೆ. ಸತ್ಯ ಎಂದರೆ, ಮೂಲತಃ ಈ ಅಧ್ಯಾತ್ಮಿಕ ಸತ್ಯವೇ ಆಗಿದೆ. ಇನ್ನು ಬದಲಾಗುತ್ತಿರುವ ಭೌತಿಕ ಪ್ರಪಂಚಕ್ಕೂ ಮತ್ತು ಶಾಶ್ವತವಾದ ಅಧ್ಯಾತ್ಮ ಪ್ರಪಂಚಕ್ಕೂ ಕೊಂಡಿಯಾಗಿರುವ ದೈವಿಕ ಸ್ತರದಲ್ಲಿ ಸುಷುಮ್ನಾ ಮಾರ್ಗಕ್ಕೇ ಸತ್ಯ ಎಂದು ಹೆಸರು. ಭೌತಿಕ ಸ್ತರದಲ್ಲಿ ಸತ್ಯನುಡಿಗಳನ್ನಾಡುತ್ತಿದ್ದರೆ, ಈ ಅಭ್ಯಾಸವು ಪ್ರಾಣಶಕ್ತಿಯು ಸುಷುಮ್ನಾ ಮಾರ್ಗದಲ್ಲಿ ಸಂಚರಿಸಿ ಆತ್ಮನ ನೆಲೆಯನ್ನು ತಲುಪಿ ಆತ್ಮಸಾಕ್ಷಾತ್ಕಾರವಾಗುವುದಕ್ಕೆ ಅನುಕೂಲವುಂಟು ಮಾಡುವುದರಿಂದ ಸತ್ಯವು ಯೋಗಕ್ಕೆ ಬಹಳ ಸಹಜವೂ ಮತ್ತು ಅವಿಭಾಜ್ಯವೂ ಆದ ಅಂಗವಾಗಿದೆ.

ಸೂಚನೆ:28/11/2020 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ .