Sunday, November 15, 2020

ಆರ್ಯಸಂಸ್ಕೃತಿ ದರ್ಶನ - 18 (Arya Samskruti Darshana - 18)

ಜ್ಯೋತಿ
ಲೇಖಕರು: ವಿದ್ವಾನ್ ಶ್ರೀ|| ಛಾಯಾಪತಿ " ಜ್ಯೋತಿ"! ಭಾರತೀಯ ಪರಂಪರೆಯಲ್ಲಿ ಬಾಳುವ ಪ್ರತಿಯೊಬ್ಬನೂ ಈ ಪದವನ್ನು ಕೇಳಿದ ಮಾತ್ರಕ್ಕೇ ಪುಳಕಿತನಾಗುತ್ತಾನೆ. ಇದರ ಹಿಂಬದಿಯಲ್ಲಿ ಕಾರಣವೇನಿರಬಹುದು? ಪ್ರಶ್ನೆ ಏಳುವುದು ಸಹಜ. ಸಮರ್ಪಕವಾದ ಉತ್ತರವನ್ನು ಪಡೆಯುವುದು ಶ್ರಮಸಾಧ್ಯ

ಈಗಿನ ವಿಜ್ಞಾನ ಪ್ರಪಂಚದಲ್ಲಿ ಬೆಳೆದವರಿಗೆ ಬೆಳಕಿನ ಬಗ್ಗೆ ವೈಜ್ಞಾನಿಕವಾದ ದೃಷ್ಟಿಕೋಣ ಮಾತ್ರ ಪರಿಚಿತವಾಗಿರುತ್ತದೆ. ಭೌತಿಕ ಪ್ರಪಂಚದಲ್ಲಿ ಬೆಳಕಿನ ಪಾತ್ರವೇನು? ಅದರಿಂದ ಜೀವಲೋಕಕ್ಕೆ ಪ್ರಯೋಜನಗಳೇನು? ಬೆಳಕಿನ ಮೂಲಗಳಾವುವು? ಎಂದು ಮುಂತಾದ ಪ್ರಶ್ನೆಗಳಿಗೆ ಆಧುನಿಕ ವಿಜ್ಞಾನ ಉತ್ತರ ಕೊಡಬಹುದು. ಖಗೋಳ ವಿಜ್ಞಾನಿಯು ಸೌರವ್ಯೂಹವನ್ನು ಪರಿಶೀಲಿಸಿ ಸೂರ್ಯನ ಪ್ರಾಧಾನ್ಯವನ್ನು ವಿವರಿಸುತ್ತಾನೆ. ಸೂರ್ಯ ಎಂಬ ಹೆಸರು ಅನ್ವರ್ಥವಾದುದು. ಲೋಕವನ್ನೆಲ್ಲಾ ಪ್ರೇರಿಸುವವನೇ ಸೂರ್ಯ. ಸೂರ್ಯನ ತೇಜಸ್ಸು, ಶಾಖ, ಆಕರ್ಷಣೆ ಮುಂತಾದವುಗಳಿಗೆ ಜೀವ ಲೋಕದಲ್ಲಿ ಎಷ್ಟು ಮಹತ್ವವಿದೆಯೆಂಬುದು ಸರ್ವವಿದಿತವಾದ ವಿಷಯ. ಅಂತೆಯೇ ಬೆಳಕಿನ ರೂಪದಲ್ಲಿರುವ ಗ್ರಹಗಳ ಸ್ವರೂಪ ಮತ್ತು ಮಹತ್ವಗಳನ್ನು ವಿಜ್ಞಾನದ ದೃಷ್ಟಿಯಿಂದ ಮಾನವನು ಪರಿಶೀಲಿಸಿದ್ದಾನೆ. ಸೂರ್ಯ ಗ್ರಹವಿಲ್ಲದಿದ್ದರೆ ಬಹುಶಃ ಜೀವಲೋಕದ ಅಸ್ತಿತ್ವವೇ ಇರುವುದಿಲ್ಲವೆಂದು ವಿಜ್ಞಾನಿಯು ಘೋಷಿಸುತ್ತಾನೆ.. ಭೌತಿಕ ವಿಜ್ಞಾನದ ದೃಷ್ಟಿಯಿಂದ ಇದು ಒಪ್ಪುವ ವಿಚಾರವೇ ಸರಿ.

ಬುದ್ಧಿ ವೃತ್ತಿಯಾದ ವಿಜ್ಞಾನಕ್ಕೂ ಮೀರಿದ ಸನಾತನ ಸತ್ಯ ಜ್ಯೋತಿಯೊಂದುಂಟು. ಜ್ಞಾನಿಗಳು, ಮಹರ್ಷಿಗಳು ತಪೋಮಯವಾದ ದೃಷ್ಟಿಯಿಂದ ಆ ಸತ್ಯ ಜ್ಯೋತಿಯನ್ನು ಕಂಡವರು. ಆದ್ದರಿಂದಲೇ "ತಮೇವ ಭಾಂತಮನು ಭಾತಿ ಸರ್ವಮ್, ತಸ್ಯ ಭಾಸಾ ಸರ್ವಮಿದಮ್ ವಿಭಾತಿ" ಎಂದು ಅವರು ಸಾರಿದರು. ಬೆಳಕನ್ನು ನೀಡಬಲ್ಲ ಸೂರ್ಯ, ಚಂದ್ರ, ಮುಂತಾದ ಗ್ರಹಗಳು, ವಿದ್ಯುತ್, ನಕ್ಷತ್ರ ಮುಂತಾದವುಗಳೆಲ್ಲಾ ಸತ್ಯಜ್ಯೋತಿಯ ಮುಂದೆ ಪ್ರಕಾಶ ಹೀನವಾದವುಗಳೇ ಸರಿ. "ನತತ್ರ ಸೂರ್ಯೋ ಭಾತಿ ನ ಚಂದ್ರತಾರಕಮ್ ನೇಮಾ ವಿದ್ಯುತೋ ಭಾಂತಿ ಕುತೋsಯಮಗ್ನಿಃ" ಎಂಬ ಉಪನಿಷದ್ವಚನವು ಈ ವಿಷಯವನ್ನೇ ಸ್ಪಷ್ಟಪಡಿಸುತ್ತದೆ. ವಾಸ್ತವಿಕವಾಗಿ ವಿಶ್ವವನ್ನೆಲ್ಲಾ ಬೆಳಗುತ್ತಿರುವುದು ಆ ಸತ್ಯ ಜ್ಯೋತಿಯೇ. ಅದೇ ಪರಮಾತ್ಮ ಜ್ಯೋತಿ. ಅದನ್ನು ಕಂಡ ಜೀವಿಯು ಧನ್ಯನು. ಅದನ್ನು ಕಂಡವನೇ  ಕೃತಾರ್ಥನು.            

ಚಿನ್ಮಯವಾದ ಜ್ಯೋತಿ ಅವ್ಯಕ್ತವಾದುದು. ಇಂದ್ರಿಯಾತೀತವಾದುದು. ಸಾಮಾನ್ಯ ದೃಷ್ಟಿಗೂ, ಪ್ರಾಕೃತ ಬುದ್ಧಿಗೂ ಗೋಚರವಾಗದಿರುವ ಆ ಜ್ಯೋತಿಯ ಕಡೆಗೆ ದಿಗ್ದರ್ಶನ ಮಾಡುವುದಕ್ಕಾಗಿಯೇ ಉಪನಿಷತ್ತುಗಳಲ್ಲಿ ಅನೇಕ ವಿಧವಾದ ಪ್ರತೀಕೋಪಾಸನೆಗಳು ನಿರ್ದಿಷ್ಟವಾಗಿವೆ. ಪೂಜೆ, ಉಪಾಸನೆ, ಯಜ್ಞ, ಮುಂತಾದ ಸಮಸ್ತ ಕರ್ಮಗಳಲ್ಲೂ, ಭಾರತೀಯರು ಮೊದಲು ದೀಪವನ್ನು ಬೆಳಗಿ ನಂತರ ಮುಂದಿನ ಆಚರಣೆಗಳನ್ನು ನಡೆಸುತ್ತಾರೆ. ಈ ಸಮಸ್ತ ವಿಧವಾದ ಆಚರಣೆಯಲ್ಲೂ ಆತ್ಮ ಜ್ಯೋತಿಯ ಕಡೆಗೆ  ನಮ್ಮ ಮನಸ್ಸು, ಬುದ್ಧಿ, ಆತ್ಮಗಳನ್ನು ಒಯ್ಯುವ ಒಂದು ಯತಾರ್ಥವಾದ ಸುಂದರ ವಿಧಾನವಿದೆ. ಸಮಸ್ತ ವರ್ಣದವರೂ ಪ್ರಾತಃಕಾಲದಲ್ಲಿ ಮೊದಲು ಸೂರ್ಯ ಭಗವಂತನಿಗೆ ಅಭಿವಾದನ ಮಾಡುವ ಸಂಪ್ರದಾಯವಿದೆ. ಹೊರ ನೋಟಕ್ಕೆ ಪ್ರಕಾಶ ಬೀರುವ ಬೆಳಕಿನ ಗೋಳಕ್ಕೆ ಮಾತ್ರ ನಮಸ್ಕಾರ ಮಾಡುವುದು ಈ ಸಂಪ್ರದಾಯದ ತಾತ್ಪರ್ಯವಲ್ಲ. ಸೂರ್ಯ ನಮಸ್ಕಾರ, ಸೂರ್ಯ ಧ್ಯಾನವನ್ನ ನಿರೂಪಿಸುವ ಅನೇಕ ಸ್ತೋತ್ರಗಳಲ್ಲಿ  ಈ ಕೆಳಗಿನ ಧ್ಯಾನ ಶ್ಲೋಕ ಎಲ್ಲೆಲ್ಲೂ ಪ್ರಸಿದ್ಧವಾಗಿದೆ.

ಧ್ಯೇಯಃ ಸದಾ ಸವಿತೃ ಮಂಡಲಮಧ್ಯವರ್ತೀ
ನಾರಾಯಣಃ ಸರಸಿಜಾಸನಸಂನಿವಿಷ್ಟಃ|
ಕೇಯೂರವಾನ್ ಮಕರ ಕುಂಡಲವಾನ್ ಕಿರೀಟೀ
ಹಾರೀ ಹಿರಣ್ಮಯವಪುರ್ಧೃತಶಂಖಚಕ್ರಃ||ಚರ್ಮ ಚಕ್ಷುಸ್ಸಿಗೆ ಕಾಣುತ್ತಿರುವ ಬೆಳಕಿನ ಗೋಳವನ್ನು ಆಕಾಶದಲ್ಲಿ ಕಾಣುತ್ತಿದ್ದರೂ, ಅದನ್ನು ಪ್ರತೀಕವನ್ನಾಗಿ ಮಾಡಿಕೊಂಡು ಆ ಗೋಳದೊಳಗೆ ಅಂತೆಯೇ ಸರ್ವ ಭೂತಗಳಲ್ಲಿಯೂ ಬೆಳಗುತ್ತಿರುವ ಚಿನ್ಮಯನಾದ ಜ್ಯೋತಿರ್ನಾರಾಯಣನನ್ನು ಭಾವಿಸುತ್ತಾ ಉಪಾಸನೆ ಮಾಡುವುದೇ ಇದರ ಗುರಿ. ಯಜ್ಞ ಕರ್ಮಗಳಲ್ಲಿ  ಹೊರಗಿನ  ಕುಂಡದಲ್ಲಿ ಅಗ್ನಿಯನ್ನು ಪ್ರಜ್ವಲಗೊಳಿಸಿ ಹೋಮ ಮಾಡುವ ಯಾಜ್ಞಿಕರೂ ಯೋಗ ವಿಧಾನದಿಂದ ಆತ್ಮಾಗ್ನಿಯನ್ನೇ ಆವಾಹನೆ ಮಾಡಿಕೊಂಡು, ಯಜ್ಞಕರ್ಮವನ್ನು ಮುಗಿಸಿ ಕೊನೆಗೆ ತಮ್ಮ ಆತ್ಮದಲ್ಲೇ ಉಪಸಂಹಾರ ಮಾಡಿಕೊಳ್ಳುವ ಆಚರಣೆಯ ಹಿಂಬದಿಯಲ್ಲಿ ಅಡಗಿರುವ ರಹಸ್ಯವೂ ಇದೇ ಆಗಿದೆ. ಪ್ರಣವ ಯೋಗವನ್ನು ಅವಲಂಬಿಸಿ ಯೋಗಿಗಳು ಆತ್ಮ ಜ್ಯೋತಿಯನ್ನು ಸಾಕ್ಷಾತ್ಕಾರ ಮಾಡಿಕೊಂಡು  ಕೃತ ಕೃತ್ಯರಾಗುತ್ತಾರೆ. ತಾಯಿಯ ಗರ್ಭದಲ್ಲಿದ್ದಾಗ ಎಂಟು-ಒಂಭತ್ತನೆಯ ತಿಂಗಳಿನಲ್ಲಿ ಶಿಶುವಿಗೆ ಆತ್ಮ ಜ್ಯೋತಿಯ ದರ್ಶನ ಉಂಟಾಗುತ್ತದೆಯೆಂದು ಉಪನಿಷತ್ತುಗಳು ತಿಳಿಸುತ್ತವೆ. ವೈಷ್ಣವೀಮಾಯೆಗೆ ಸಿಕ್ಕಿ ಭೂಪತನ ಹೊಂದಿದ ಶಿಶುವಿಗೆ ಪ್ರಕೃತಿಯ ಪರದೆ ಆ ಜ್ಯೋತಿಯನ್ನು ಮರೆಮಾಡುತ್ತದೆ.

ಇಂದ್ರಿಯ ಕ್ಷೇತ್ರದ ಕಡೆಗೆ ಸೆಳೆತವಿದ್ದರೂ, ಮತ್ತೆ ಆ ಜ್ಯೋತಿಯ ಸ್ಮರಣೆ ಮೂಡಿಬಂದು ಶಿಶುವಿಗೆ ತನ್ನ ಸ್ವರೂಪದ ಮರೆವು ಉಂಟಾಗದಿರಲಿ ಎಂಬ ಉದ್ದೇಶದಿಂದ ಸೂತಿಕಾ ಗೃಹದಲ್ಲಿ ತ್ರಿಕೋಣಾಕಾರವಾದ ಹಣತೆಯಲ್ಲಿ ಅಂಗುಷ್ಠಮಾತ್ರ ಶಿಖೆಯ ಆಕಾರವುಳ್ಳ ದೀಪವನ್ನು ಬೆಳೆಗಿಸುವುದು ಭಾರತೀಯರ ಸನಾತನ ಸಂಪ್ರದಾಯವಾಗಿದೆ. ಇಂದಿನ ನಾಗರಿಕತೆಯ ವಾತಾವರಣದಲ್ಲಿ ಈ ಸಂಪ್ರದಾಯ ಮರೆಯಾಗುತ್ತಿರುವುದಕ್ಕೆ ಭಾರತೀಯರಿಗೆ ತಮ್ಮ ಉತ್ತಮ ಧರ್ಮ ಸಂಪ್ರದಾಯಗಳ ತಾತ್ತ್ವಿಕ ರಹಸ್ಯಾರ್ಥಗಳ ಬಗ್ಗೆ ಉಂಟಾಗಿರುವ ಅಜ್ಞಾನವೇ ಕಾರಣ.  "ಪ್ರಾತಃ ಸ್ಮರಾಮಿ ಹೃದಿ ಸಂಸ್ಫುರದಾತ್ಮ ತತ್ತ್ವಂ" ಎಂದು ಮುಂತಾದಾಗಿ ಬೆಳಿಗ್ಗೆ ಎದ್ದ ಕೂಡಲೇ ಆತ್ಮ ಜ್ಯೋತಿಯ ಧ್ಯಾನವನ್ನು ಮಾಡುವ ನಮ್ಮ ಪ್ರಾಚೀನ ಸಂಪ್ರದಾಯ 

ಪರಮಪಾವನವಾದುದು. ವೇದೋಪನಿಷತ್ತುಗಳೂ, ಸಕಲ ಶಾಸ್ತ್ರಗಳೂ ಆತ್ಮ ಜ್ಯೋತಿಯ ಸಾಕ್ಷಾತ್ಕಾರವೇ ಜೀವನದ ಗುರಿ ಎಂದು ಬೋಧಿಸುತ್ತವೆ. ಆತ್ಮದರ್ಶಿಯಾದ ಸದ್ಗುರುವು ಶಿಷ್ಯನಲ್ಲಿ ಜ್ಞಾನ ಪ್ರಬೋಧವನ್ನುಂಟುಮಾಡಿ ಆತ್ಮ ಜ್ಯೋತಿಯ ಸಾಕ್ಷಾತ್ಕಾರವನ್ನು ಮಾಡಿಸುತ್ತಾನೆ. ನಮ್ಮ ನಾಡಿನಲ್ಲಿ ಸತ್ಸಂಪ್ರದಾಯವನ್ನು ಬೆಳೆಸಿ ಜ್ಞಾನದ ಬೆಳಕನ್ನು ಬೆಳಗಿಸಿದ ಮಹನೀಯಚರಿತರಾದ ಶ್ರೀಶಂಕರಭಗವತ್ಪಾದರು ಆತ್ಮ ಜ್ಯೋತಿಯನ್ನು ಬಹಳ ಸರಳವೂ, ಸುಲಭವೂ ಆದ ಶೈಲಿಯಿಂದ ಬೋಧಿಸವಂತಹ ಒಂದು ಸುಂದರ ಪದ್ಯವನ್ನು ರಚಿಸಿದ್ದಾರೆ. ಈ ಪದ್ಯ "ಏಕ ಶ್ಲೋಕೀ" ಎಂಬ ಹೆಸರಿನಿಂದ ಪ್ರಸಿದ್ಧವಾಗಿದೆ. ಈ ಪದ್ಯದಲ್ಲಿ ಶಾಸ್ತ್ರಗಳ ಕಠಿಣ ಶೈಲಿಯಿಲ್ಲ. ಕಷ್ಟವಾದ ಪಾರಿಭಾಷಿಕ ಪದಗಳಿಂದ ಬೋಧನೆಯು ಜಟಿಲವಾಗಿಲ್ಲ. ಅತ್ಯಂತ ಸಹಜವೂ, ಸುಂದರವೂ, ಸರಳವೂ ಆದ ಭಾಷೆ ಮತ್ತು ಶೈಲಿಯಿಂದ ಅತ್ಯಂತ ಗಹನವಾದ ತತ್ತ್ವವನ್ನು ಸಾಮಾನ್ಯಬುದ್ಧಿಗೆ ಬೋಧವಾಗುವಂತೆ ನಿರೂಪಿಸಿದ್ದಾರೆ. ಈ ಪದ್ಯ ಈ ರೀತಿ ಇದೆ.

ಕಿಂಜ್ಯೋತಿಸ್ತವ ಭಾನುಮಾನಹನಿಮೇ ರಾತ್ರೌಪ್ರದೀಪಾದಿಕಂ
ಸ್ಯಾದೇವಂ ರವಿದೀಪದರ್ಶನವಿಧೌ ಕಿಂ ಜ್ಯೋತಿ ರಾಖ್ಯಾಹಿ ಮೇ|
ಚಕ್ಷುಸ್ತಸ್ಯ ನಿಮೀಲನಾದಿ ಸಮಯೇ ಕಿಂಧೀರ್ಧಿಯೋ ದರ್ಶನೇ
ಕಿಂ  ತತ್ರಾಹ ಮತೋಭವಾನ್ ಪರಮಕಂ ಜ್ಯೋತಿಸ್ತದಸ್ಮಿ ಪ್ರಭೋ||

ಉತ್ತಮ ಸಂಸ್ಕಾರ ಸಂಪನ್ನನಾಗಿ ಸರಳ ಭಾವದಿಂದ ತತ್ತ್ವವನ್ನರಿಯುವ ಹಂಬಲವುಳ್ಳ ಶಿಷ್ಯನನ್ನು ಕುರಿತು ಅತ್ಯಂತ ವಾತ್ಸಲ್ಯದಿಂದ ಗುರುವು ತತ್ತ್ವೋಪದೇಶ ಮಾಡುವ ವಿಧಾನ ಇಲ್ಲಿ ಕಂಡುಬರುತ್ತದೆ. ಸ್ವಯಂ ತತ್ತ್ವದರ್ಶಿಯಾದ ಆಚಾರ್ಯನು ಶಿಷ್ಯನನ್ನು ಪ್ರಶ್ನೆ ಮಾಡುತ್ತಾನೆ :-
ಕಿಂ ಜ್ಯೋತಿಸ್ತವ? ಎಂದರೆ ನಿನಗೆ ಜ್ಯೋತಿ ಯಾವುದು?
ಬೆಳಕಿಲ್ಲದೆ ವಿಷಯ ಪ್ರಕಾಶವಾಗುವುದಿಲ್ಲ. ಇದು ಎಲ್ಲರಿಗೂ ಗೊತ್ತಿರುವ ವಿಷಯ. ಮುಂದೆ ಆತ್ಮಜ್ಯೋತಿಯ ಕಡೆಗೆ  ಶಿಷ್ಯನ ಮನಸ್ಸನ್ನು  ಹರಿಸುವುದಕ್ಕಾಗಿ ಪ್ರಾರಂಭದಲ್ಲಿ ಗುರುವು ಈ ಸರಳ ಪ್ರಶ್ನೆಯನ್ನು ಹಾಕುತ್ತಾನೆ. ವಸ್ತು ಪ್ರಕಾಶವನ್ನುಂಟುಮಾಡುವ ಬೆಳಕು ಯಾವುದು? ಎಂಬ ಅರ್ಥವನ್ನು ಗ್ರಹಿಸಿದ ಶಿಷ್ಯನು ಉತ್ತರ ಕೊಡುತ್ತಾನೆ:-
"ಭಾನುಮಾನಹನಿಮೇ ರಾತ್ರೌಪ್ರದೀಪಾದಿಕಂ" ಎಂದರೆ ನನಗೆ ಹಗಲಿನಲ್ಲಿ ಸೂರ್ಯನೇ ಬೆಳಕು. ರಾತ್ರಿಯಲ್ಲಿ ದೀಪ ಮೊದಲಾದುದು. ಎಂದರೆ ಹಗಲಿನಲ್ಲಿ ಸೂರ್ಯನ ಬೆಳಕಿನ ಸಹಾಯದಿಂದಲೂ, ರಾತ್ರಿಯಲ್ಲಿ ದೀಪ ಮೊದಲಾದವುಗಳ ಬೆಳಕಿನ ಸಹಾಯದಿಂದಲೂ ನಾನು ವಸ್ತುಗಳನ್ನು ನೋಡಿ ತಿಳಯುತ್ತೇನೆ, ಎಂದ ಶಿಷ್ಯನ ಉತ್ತರದ ಅಭಿಪ್ರಾಯ. ಆಗ ಗುರು ಮತ್ತೆ ಪ್ರಶ್ನೆ ಮಾಡುತ್ತಾನೆ:- "ಸ್ಯಾದೇವಂ ರವಿದೀಪದರ್ಶನವಿಧೌ ಕಿಂ ಜ್ಯೋತಿ ರಖ್ಯಾಹಿಮೇ". ಅಂದರೆ, ಹೀಗಿರಬಹುದು, ಆದರೆ ಸೂರ್ಯ, ದೀಪ ಮುಂತಾದವುಗಳನ್ನೂ ನೋಡಬೇಕಾದರೆ ಬೆಳಕು ಯಾವುದು ಎಂಬುದನ್ನು ನನಗೆ ಹೇಳು. ಈ ಪ್ರಶ್ನೆಗೂ ಶಿಷ್ಯ ಉತ್ತರ ಹೇಳಿತ್ತಾನೆ:- "ಚಕ್ಷು:" ಅಂದರೆ ಕಣ್ಣು. ಕಣ್ಣಿನ ಸಹಾಯದಿಂದ ನೋಡಿ ವಸ್ತುಗಳನ್ನು ತಿಳಿಯುತ್ತೇನೆ, ಎಂದು ಶಿಷ್ಯನ ಉತ್ತರದ ಅಭಿಪ್ರಾಯ. ಆಗ ಗುರು ಮತ್ತೆ ಪ್ರಶ್ನೆ ಮಾಡುತ್ತಾನೆ.

" ತಸ್ಯ ನಿಮೀಲನಾದಿ ಸಮಯೇ ಕಿಂ?" ಎಂದರೆ, ಕಣ್ಣು ಮುಚ್ಚಿದಾಗ, ನಿದ್ರೆ ಮಾಡುವಾಗ- ಮುಂತಾದ ಸಮಯಗಳಲ್ಲಿ ಯಾವ ಬೆಳಕು ಇರುತ್ತದೆ? ಇದಕ್ಕೆ ಶಿಷ್ಯನು ಉತ್ತರಿಸುತ್ತಾನೆ:- "ಧೀಃ" ಎಂದರೆ ಬುದ್ಧಿ. ಬುದ್ಧಿಯ ಸಹಾಯದಿಂದ ತಾನು ವಸ್ತು ಜ್ಞಾನವನ್ನು ಪಡೆಯುತ್ತೇನೆ ಎಂದು ಅಭಿಪ್ರಾಯ. ಗುರು ಮತ್ತೆ ಕೇಳುತ್ತಾನೆ:-  "ಧಿಯೋ ದರ್ಶನೇ ಕಿಂ?" ಎಂದರೆ ಆ ಬುದ್ಧಿಯನ್ನೂ ತಿಳಿಯಬೇಕಾದರೆ ಬೆಳಕು ಯಾವುದು? ಅಲ್ಲಿಗೆ ಶಿಷ್ಯನ ಬುದ್ಧಿ ಸಾಮರ್ಥ್ಯ ನಿಂತಿತು. ಆಗ ವಿಚಾರ ಮಾಡಿ ಶಿಷ್ಯನು ಹೇಳುತ್ತಾನೆ:-"ತತ್ರಾಹಂ" ಎಂದರೆ ಅಲ್ಲಿ ನಾನೇ ತಿಳಿಯುತ್ತೇನೆ ಎಂದು ಅಭಿಪ್ರಾಯ.  ಆತ್ಮನ ನೇರಕ್ಕೆ ಮುಟ್ಟಿದ ಶಿಷ್ಯನನ್ನು ಕುರಿತು ಈಗ ಗುರು ಹೇಳುತ್ತಾನೆ. "ಅತೋ ಭವಾನ್ ಪರಮಕಂ ಜ್ಯೋತಿಃ" ಎಂದರೆ, ಆದ್ದರಿಂದ ನೀನೇ ಪರಮಜ್ಯೋತಿ ಎಂದರ್ಥ. ಈ ಪರಾತ್ಪರ ಜ್ಯೋತಿಯನ್ನೇ ಕುರಿತು ಉಪನಿಷತ್ತುಗಳು "ಜ್ಯೋತಿಷಾಮಪಿ ತಜ್ಜ್ಯೋತಿಃ ತಮಸಃ ಪರಮುಚ್ಯತೇ" ಎಂದು ಕೊಂಡಾಡುತ್ತವೆ. ಜ್ಯೋತಿಗಳಿಗೂ ಜ್ಯೋತಿಯಾಗಿ ಕತ್ತಲೆಯ ಆಚೆ ಇರುವುದೇ ಈ ಪರಮಾತ್ಮ ತತ್ತ್ವ. ಈ ಹಂತದಲ್ಲಿ ಶಿಷ್ಯನಿಗೆ ಸತ್ಯದ ಅರಿವುಂಟಾಯಿತು. ಆತ್ಮ ಪ್ರಬೋಧವಾಯಿತು.

" ಯಸ್ಮನ್ ವಿಜ್ಞಾತೇ ಸರ್ವಂ ವಿಜ್ಞಾತಂ ಭವತಿ" ಎಂಬ ಬ್ರಾಹ್ಮೀಸ್ಥಿತಿ ಉಂಟಾಯಿತು. ಕೃತ ಕೃತ್ಯನಾದ ಶಿಷ್ಯನು ಆನಂದ ತುಂದಿಲನಾಗಿ ವಿನಯದಿಂದ ಉತ್ತರಿಸುತ್ತಾನೆ.
 "ತದಸ್ಮಿ ಪ್ರಭೋ!" ಎಂದರೆ "ಸ್ವಾಮಿ! ನಾನು ಆ ಜ್ಯೋತಿಯೇ ಆಗಿದ್ದೇನೆ". ಆತ್ಮ ದರ್ಶಿಯೂ, ಉಪಾಯ ಕುಶಲನೂ ಆದ ಗುರುವಿನ ಅತ್ಯಂತ ಸರಳವಾದ ಈ ಉಪದೇಶ ವಿಧಾನದಿಂದ ಶಿಷ್ಯನ ಅಜ್ಞಾನವೆಲ್ಲ ತೊಲಗಿ ಜ್ಞಾನ ದೀಪವು ಬೆಳಗಿ ಆತ್ಮದರ್ಶನವುಂಟಾಯಿತು.

" ತೇಷಾಮೇವಾನುಕಂಪಾರ್ಥ ಮಹಮಜ್ಞಾನಜಂ ತಮಃ|
ನಾಶಯಾಮ್ಯಾತ್ಮ ಭಾವಸ್ಥೋ ಜ್ಞಾನದೀಪೇನ ಭಾಸ್ವತಾ||

ಎಂಬ ಭಗವದ್ವಾಣಿಯ ರಹಸ್ಯವೂ ಇದೇ ಆಗಿದೆ. ಈ ಅಧ್ಯಾತ್ಮ ದೀಪಮಾಲೆಯು ಭಾರತ ನಾಡಿನಲ್ಲೆಲ್ಲಾ ಬೆಳಗಲಿ.

ಸೂಚನೆ : ಈ ಲೇಖನವು ಶ್ರೀಮಂದಿರದಿಂದ ಪ್ರಕಾಶಿತವಾಗುವ ಆರ್ಯಸಂಸ್ಕೃತಿ ಮಾಸ ಪತ್ರಿಕೆಯ ಸಂಪುಟ: ೦೩ ಸಂಚಿಕೆ: ೪, ೧೯೮೧ :ಫೆಬ್ರುವರಿ ತಿಂಗಳಲ್ಲಿ  ಪ್ರಕಟವಾಗಿದೆ.