Tuesday, June 11, 2024

ಅಷ್ಟಾಕ್ಷರೀ 59 ಪರ-ಪಾಪೈಃ ವಿನಶ್ಯಂತಿ (Astaksari 59 – Parapapaih Vinashyanti)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in) ರಾಮಾಯಣದಲ್ಲಿ ಸೀತಾಪಹರಣವನ್ನು ಮಾಡಲು ರಾವಣನು ಹಾಕಿದ ಸಂಚು-ಹೊಂಚುಗಳ ಚಿತ್ರಣವು ರೋಚಕವಾಗಿದೆ.

ಸೀತೆಯನ್ನು ಅಪಹರಿಸುವ ದುರ್ಬೋಧನೆಯನ್ನು ರಾವಣನಿಗೆ ಮಾಡಿದವಳು ಶೂರ್ಪಣಖೆ. ಆದರೆ ಅದಕ್ಕಿಂತ ಮೊದಲೇ ಅದೇ ದುರ್ಬೋಧನೆಯನ್ನು ರಾವಣನಿಗೆ ಮಾಡಿದವನು ಅಕಂಪನ.

ಅಕಂಪನನು ಸುಮಾಲಿಯೆಂಬ ರಾಕ್ಷಸನ ಮಗ. ದೂಷಣ, ತ್ರಿಶಿರಸ್ ಹಾಗೂ ಖರ - ಇವರನ್ನು ಕೊಂದದ್ದಲ್ಲದೆ, ಹದಿನಾಲ್ಕುಸಹಸ್ರ ರಾಕ್ಷಸರನ್ನು ರಾಮನೊಬ್ಬನೇ ಪದಾತಿಯಾಗಿದ್ದೂ ಸಂಹರಿಸಿದನಲ್ಲವೇ? ಎಂದೇ, ತ್ವರೆ ಮಾಡುತ್ತ ವೇಗವಾಗಿ ಲಂಕೆಗೆ ಹೋಗಿ ರಾವಣನಿಗೆ ಎಲ್ಲವನ್ನೂ ಅಕಂಪನ ತಿಳಿಸಿದ. ಅದಕ್ಕೆ, ರಾಮ-ಲಕ್ಷ್ಮಣರಿಬ್ಬರನ್ನೂ ಸಂಹರಿಸುವುದಾಗಿ ಹೇಳಿದ, ರಾವಣ. ಅದು ಅಶಕ್ಯವೆಂದು ತಿಳಿಹೇಳಿದ ಅಕಂಪನ, ಸ್ತ್ರೀರತ್ನವೆನಿಸುವ ಸೀತೆಯ ಪರಮಸೌಂದರ್ಯವನ್ನು ಚಿತ್ರಿಸಿದ. ಅವಳೊಬ್ಬಳನ್ನು ಅಪಹರಿಸಿದರೆ, ರಾಮನು ಪ್ರಾಣಬಿಡುವನೆಂದ.

ಆತನ ಮಾತಿನ ಮೇರೆಗೆ ರಾವಣನು ಮಾರೀಚನಲ್ಲಿಗೆ ಹೋದ.  ರಾಮಭಾರ್ಯಾಪಹರಣದಲ್ಲಿ ಮಾರೀಚನ ಸಹಕಾರವನ್ನು ಯಾಚಿಸಿದ. ಆದರೆ ಮಾರೀಚ ರಾವಣನಿಗೇ ರಾಮನ ಎಲ್ಲೆಯಿಲ್ಲದ ಪರಾಕ್ರಮವನ್ನು ತಿಳಿಸಿ, "ರಾಮನನ್ನು ಕೆಣಕಿದೆಯಾದರೆ ನೀ ಕೆಟ್ಟೆ" - ಎಂದೆಚ್ಚರಿಸಿದ. ಮರುಮಾತಿಲ್ಲದೆ ರಾವಣ ಹಿಂದಿರುಗಿದ.

ಆಮೇಲೆ ಬಂದಳು ಶೂರ್ಪಣಖೆ. "ಬುದ್ಧಿಹೀನನಾದ ನೀನದೆಂತಹ ರಾಜ?  ಖರಾದಿ-ರಾಕ್ಷಸರು ಹದಿನಾಲ್ಕುಸಾವಿರ ಮಂದಿ ಹತರಾದರೂ ಎಚ್ಚೆತ್ತುಕೊಳ್ಳಲಿಲ್ಲವೆ? - ಎಂದು ಮೂದಲಿಸಿದಳು. ರಾವಣ ಕೆಂಡವಾದ. ಅವಳನ್ನೇ ವಿಚಾರಿಸಿದ, ರಾಮನ ಬಗ್ಗೆ. ರಾಮ-ಲಕ್ಷ್ಮಣರ ಮಹಾಪರಾಕ್ರಮವನ್ನಷ್ಟೇ ಅಲ್ಲದೆ, ಸೀತೆಯ ಪರಮಸೌಂದರ್ಯವನ್ನೂ ಬಣ್ಣಿಸಿದಳಾಕೆ. ಆತನ ಕಾಮವನ್ನು ಕೆರಳಿಸಲೆಂದೇ ಸೀತೆಯ ಸ್ತನ-ಜಘನಗಳ ಪೀನತೆ-ಸೌಷ್ಠವಗಳನ್ನೂ ಚಿತ್ರಿಸಿದಳು. "ನಿನಗೆ ಹೆಂಡತಿಯಾಗಲೆಂದು ಅವಳನ್ನು ತರಹೋಗಿ ನಾನು ವಿರೂಪಳಾದೆ" - ಎಂದು ಸುಳ್ಳೇ ತೋಡಿಕೊಂಡಳು!

ಮತ್ತೆ ಹೊರಟ ರಾವಣ, ಮಾರೀಚನಲ್ಲಿಗೆ. "ಬೆಳ್ಳಿಯ ಬೊಟ್ಟುಗಳಿರುವ ಚಿನ್ನದ ಜಿಂಕೆಯಾಗಿ ಸೀತೆಯ ಕಣ್ಣನ್ನು ಸೆಳೆ. ರಾಮಲಕ್ಷ್ಮಣರು ಅಲ್ಲಿಲ್ಲವಾಗಲು ಸೀತೆಯನ್ನು ನಾನಪಹರಿಸುವೆ" - ಎಂದ.

ಮಹಾಪ್ರಾಜ್ಞನಾದ ಮಾರೀಚ ರಾವಣನಿಗೆ ದೀರ್ಘವಾಗಿಯೇ ಉಪದೇಶಿಸಿದ. "ನಿನ್ನನ್ನು  ಕೊನೆಗಾಣಿಸಲೆಂದೇ ಸೀತೆ ಹುಟ್ಟಿರುವಳೇನು? ಅಪ್ರಮೇಯನಾದ ರಾಮ ಮೈತಾಳಿಬಂದಿರುವ ಧರ್ಮ. ಸೀತೆಯು ಆತನಿಗೆ ಪ್ರಾಣಿಕ್ಕಿಂತಲೂ ಹೆಚ್ಚು" ಎಂದನಲ್ಲದೆ, ರಾಮಬಾಣದ ರುಚಿಯನ್ನು ತಾನು ಹಿಂದೆಯೇ ಕಂಡಿರುವೆನೆಂದ. "ಬಾಲ್ಯದಲ್ಲೂ ಕಡುಪರಾಕ್ರಮಿ ರಾಮ! ಈ ಪರಸ್ತ್ರೀ-ಚಿಂತೆಯನ್ನು ಬಿಡು, ನೆಮ್ಮದಿಗಿದು ದಾರಿಯಲ್ಲ" ಎಂದೆಲ್ಲಾ ಪರಿಪರಿಯಾಗಿ ಎಚ್ಚರಿಸಿದ. ಕೇಡುಗಾಲ ಬಂದಿದ್ದ ರಾವಣ ಕೇಳಿಯಾನೇ?  

ತನ್ನ ಹಿತನುಡಿಗಳ ನಡುವೆ ಮಾರೀಚನಾಡಿದ ಮಾತೊಂದು ಮನನೀಯವಾಗಿದೆ: ಪಾಪ  ಮಾಡದವರೂ ಪಾಪಿ-ಸಂಗದಿಂದಾಗಿ, ಅವರ ಪಾಪಗಳಿಂದ ನಾಶಹೊಂದುವರು": ಪರ-ಪಾಪೈಃ ವಿನಶ್ಯಂತಿ.

ಏನಿದು? ಬೇರೆಯವರ ಪಾಪ ನಮಗೆ ತಟ್ಟುವುದೇ? ಯಾವ ನ್ಯಾಯವಿದು? ನಮ್ಮ ಕರ್ಮಕ್ಕೆ ನಾವು ಹೊಣೆಯೆಂದರೆ ಸರಿ. ಅನ್ಯರ ಕರ್ಮವೂ ನಮ್ಮನ್ನು ಬಾಧಿಸುವುದುಂಟೇ?

ಸಂಗದೋಷವೆನ್ನುವುದಿದನ್ನೇ. ಗುಣ-ದೋಷಗಳು ಒಬ್ಬರಿಂದೊಬ್ಬರಿಗೆ ಸಂಕ್ರಮಿಸುವುವು. "ನಾನು ಸರಿಯಾಗಿದ್ದರೆ ಸಾಕು; ನನ್ನ ಜೊತೆಗಾರರು ಏನನ್ನಾದರೂ ಮಾಡಿಕೊಳ್ಳಲಿ; ಅವರವರಿಗೆ ಅವರವರ ಪುಣ್ಯಪಾಪಗಳು. ಮಾಡಿದ್ದುಣ್ಣೋ ಮಹರಾಯ. ಒಬ್ಬರು ಮಾಡಿದ್ದನ್ನಿನ್ನೊಬ್ಬರುಣ್ಣುವುದುಂಟೇ? " - ಎಂದೆಲ್ಲಾ ಯೋಚಿಸುವವರುಂಟು. ಆದರದು ಸರಿಯಲ್ಲ.

ಕೆಲವೊಮ್ಮೆ ಕೆಟ್ಟದರ ಸೋಂಕು ಎಷ್ಟು ಬೇಗನೆ ಮತ್ತು ಎಷ್ಟು ತೀವ್ರವಾಗಿ ಪರಿಣಾಮ ಮಾಡಬಲ್ಲುದು! - ಎಂಬುದನ್ನು ತಿಳಿಯಪಡಿಸಲು ಶ್ರೀರಂಗಮಹಾಗುರುಗಳು ಸೆಪ್ಟಿಕ್ ಆಗುವುದರ ಉದಾಹರಣೆಯನ್ನು ನೀಡಿದ್ದರು. ಆಯುರ್ವೇದದ ಆಂತರ್ಯವನ್ನು ಅರಿತಿದ್ದ ಅವರ ನುಡಿಗಳಲ್ಲಿ ಆರೋಗ್ಯಸಂಬಂಧಿಯಾದ ಉದಾಹರಣೆಗಳು ಹೇರಳವಾಗಿ ಬರುತ್ತಿದ್ದವು: "ಕೆಟ್ಟ ರಕ್ತ ಮೈಯಲ್ಲಿದ್ದು ಅದು ಸೆಪ್ಟಿಕ್ ಆದರೆ ಮಹಾಹಾನಿ: ಆದ್ದರಿಂದ ಅದರ ಮೇಲೆ ದಾಳಿ ಮಾಡಿ ಅದನ್ನು ತೆಗೆದುಹಾಕಬೇಕು: ಸತ್ಯಸ್ವರೂಪಕ್ಕೆ ಅಡ್ಡಿಬರುವುದಾವುದಿದ್ದರೂ ಅದನ್ನು ತೊಲಗಿಸಬೇಕು" - ಎಂದು ಉದಾಹರಣೆ(ಯಿತ್ತು ಅದಕ್ಕೊಂದು ಅನ್ವಯವನ್ನೂ) ಕೊಟ್ಟಿದ್ದರು.

ಸೆಪ್ಟಿಕ್ ಆಗುವುದೆಂದರೆ ಸಾಮಾನ್ಯವಲ್ಲ. ಒಂದೆಡೆ ಅದು ಆರಂಭವಾಗುತ್ತಿದ್ದಂತೆಯೇ ಇಡೀ ಮೈಯನ್ನದು ಬೇಗನೆ ವ್ಯಾಪಿಸುವುದು. ಒಡನೆಯೇ ಅದಕ್ಕೆ ವೈದ್ಯಕೀಯ ಕ್ರಮ ಕೈಗೊಳ್ಳಲಿಲ್ಲವೋ ಸರ್ವಾಂಗಗಳಿಗೂ ಪ್ರಸರಿಸುವುದು. ರಕ್ತದೊತ್ತಡ ಹ್ರಾಸಗೊಳ್ಳುವುದು. ಕೈಕಾಲುಗಳು ತಣ್ಣಗಾಗುವುವು. ಉಸಿರಾಟವು ಕ್ಲಿಷ್ಟವಾಗುವುದು. ಚಿತ್ತಭ್ರಮಣವಾಗುವುದು. ಸಾವಿನ್ನು ದೂರವೇನಿಲ್ಲ!.

ಹೀಗೆ, ಆರೋಗ್ಯವಾಗಿಯೇ ಇದ್ದ ಅಂಗಗಳೂ ಸಹ, ಹದಗೆಟ್ಟ ಯಾವುದೋ ಒಂದಂಗ(ಶ)ದಿಂದಾಗಿ ಹತವಾಗುವುವು. ಎಂದೇ, ಘಾತಕ-ಪಾತಕಿಗಳ ಬಗ್ಗೆ ಎಚ್ಚರವಿರಬೇಕು.

ರಾಕ್ಷಸನೊಬ್ಬನ ನುಡಿಯಾದರೂ ಮಾರೀಚನ ಮಾತು ಸಾರವತ್ತಾದದ್ದು! ಆತನು ಹೇಳಿದಂತೆಯೇ ಮುಂದೆ ಘಟಿಸಿತಲ್ಲವೇ? 

ಸೂಚನೆ: 25/05/2024 ರಂದು ಈ ಲೇಖನ ವಿಜಯವಾಣಿಯ ಸುದಿನ ಲ್ಲಿ ಪ್ರಕಟವಾಗಿದೆ. 

Sunday, June 9, 2024

ಯಕ್ಷ ಪ್ರಶ್ನೆ93 (Yaksha prashne 93 )

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)


ಪ್ರಶ್ನೆ – 92 ಮಾನ ಎಂದರೆ ಯಾವುದು?

ಉತ್ತರ - ಆತ್ಮಾಭಿಮಾನ. 

ಮಾನ ಎಂಬ ಶಬ್ದವನ್ನು ಅನೇಕ ಕಡೆ ಭಿನ್ನ ಭಿನ್ನವಾದ ಅರ್ಥದಲ್ಲಿ ಬಳಸುವುದನ್ನು ಕಾಣಬಹುದು. ಮಾನವೆಂದರೆ ಪ್ರಮಾಣ. ಮಾನವೆಂದರೆ ಗೌರವ, ನಾನು ಎಂಬ ಭಾವನೆ ಇತ್ಯಾದಿಯಾಗಿ. ಅಮರಕೋಷ ಎಂಬ ಶಬ್ದಕೋಷದಲ್ಲಿ ಮನಸ್ಸಿನ ಉನ್ನತವಾದ ಸ್ಥಿತಿ ಎಂದು ಹೇಳಲಾಗಿದೆ. ಒಂದು ಸುಭಾಷಿತವೂ ಇದೇ ಅರ್ಥವನ್ನು ತಿಳಿಸುತ್ತದೆ. 'ಮಾನೋ ಹಿ ಮಹತಾಂ ಧನಮ್' ಎಂದು. ಅಂದರೆ ಮಹಾತ್ಮರಾದವರು ಅವರ ಮನಸ್ಸಿನ ಸ್ಥಿತಿಯನ್ನು ಉನ್ನತವಾಗಿರುವಂತೆ ಮತ್ತು ಅದು ಎಂದೂ ಕೆಳಗಿಳಿಯದಂತೆ ನೋಡಿಕೊಳ್ಳುತ್ತಾರೆ. ಮನಸ್ಸಿನ ಯಾವ ಸ್ಥಿತಿ ಅಥವಾ ಭಾವವಿದ್ದರೆ ಅದು ಲೋಕಕ್ಷೇಮಕರವೋ ಮತ್ತು ಆತ್ಮದ ಉದ್ಧಾರಕ್ಕೂ ಸಹಕಾರಿಯೋ ಹಾಗೆ ಇರಲು ಮಹಾತ್ಮರ ಪ್ರಯತ್ನವಿರುತ್ತದೆ. ಅವರು ಯಾವುದೇ ಕಾರಣಕ್ಕೂ ಯಾವುದೇ ಆಮಿಷಕ್ಕೂ; ಪ್ರಲೋಭನೆಗೂ ಬಲಿಯಾಗುವುದಿಲ್ಲ. ಅಲ್ಲಿಂದ ಕೆಳಗಿಳಿಯಲು ಅವರಿಗೆ ಸರ್ವಥಾ ಇಷ್ಟವಿರುವುದಿಲ್ಲ. ಇಂತಹ ಸ್ಥಿತಿಯಿಂದ ಅವರು ಎಂದೂ ಜಾರುವುದಿಲ್ಲ. ಅದಕ್ಕೆ ಕಾರಣ ಇಷ್ಟೆ- 

ಮಾನವೆಂಬುದು ಅದರ ಮೂಲಕಾರಣವಾದ ತ್ರಿಗುಣದಿಂದ ಮೂರಾಗಿ ತೋರುತ್ತದೆ. ಸಾತ್ತ್ವಿಕ, ರಾಜಸಿಕ ಮತ್ತು ತಾಮಸಿಕ ಎಂದು. ಈ ಗುಣಗಳ ಕಾರಣದಿಂದ ಮನಸ್ಸಿನ ಪ್ರಭೇಧಗಳು ಉಂಟಾಗುತ್ತವೆ. ಸತ್ತ್ವಗುಣದ ಆಧಿಕ್ಯದಿಂದ ಉಂಟಾದ ಮಾನವನ್ನು ಸಾತ್ತ್ವಿಕ ಅಹಂಕಾರ, ಅಭಿಮಾನ ಅಥವಾ ಆತ್ಮಾಭಿಮಾನ ಎನ್ನಬಹುದು. ಉಳಿದ ರಾಜಸಿಕ ಮತ್ತು ತಾಮಸಿಕ ಗುಣಗಳ ಪ್ರಭಾವದಿಂದ ಉಂಟಾದ ಮಾನವನ್ನು ದುರಂಹಂಕಾರ ಅಥವಾ ಗರ್ವ, ದರ್ಪ ಇತ್ಯಾದಿ ಪದಗಳಿಂದ ಕರೆಯುತ್ತಾರೆ. ಆಂಗ್ಲಭಾಷೆಯಲ್ಲಿ ಇದಕ್ಕೆ 'ಈಗೋ' ಎಂದೂ ಕರೆಯುತ್ತಾರೆ. ಇಲ್ಲಿ ಸಾತ್ತ್ವಿಕವಾದ ಅಹಂಕಾರವು ಶ್ಲಾಘ್ಯವಾದುದು; ಉಳಿದೆರಡು ಅಹಂಕಾರಗಳು ನಿಂದ್ಯವಾದವು. ಸಾತ್ತ್ವಿಕವಾದ ಅಹಂಕಾರವುಳ್ಳವನು ಶಾಸ್ತ್ರದ ವಿಧಿಯನ್ನು ಎಂದು ಉಲ್ಲಂಘನೆ ಮಾಡುವುದಿಲ್ಲ. ಶಾಸ್ತ್ರವೆಂದರೆ ಸೃಷ್ಟಿಯ ನಿಯಮ. ಅದನ್ನು ಯಾವುದೇ ಕಾರಣಕ್ಕೂ ಆತ ಮೀರುವುದಿಲ್ಲ. ಮೀರಿದರೆ ಅವನ ಯಾವ ಚಿತ್ತಸಮುನ್ನತಿ ಎಂಬ ಅವಸ್ಥೆ ಉಂಟೋ ಅಲ್ಲಿಂದ ಆತ ಚ್ಯುತನಾಗುತ್ತಾನೆ. ಹಾಗಾಗಿ ಆತ ಕೇವಲ ಕರ್ತವ್ಯಬುದ್ಧಿಯಿಂದ ಮಾತ್ರ ಕಾರ್ಯವನ್ನು ಮಾಡುತ್ತಾನೆ. ಅಲ್ಲಿ ಯಾವುದೇ ಫಲದ ಅಪೇಕ್ಷೆ ಇರುವುದಿಲ್ಲ. ಫಲಾಪೇಕ್ಷೆ ಇಲ್ಲದ ಕಾರಣ ಅವನಲ್ಲಿ ಯಾವುದೇ ರಾಗ ಅಥವಾ ದ್ವೇಷಕ್ಕೆ ಅವಕಾಶವೇ ಇರುವುದಿಲ್ಲ. ಯಾರ ಕರ್ಮ ಫಲಾಪೇಕ್ಷೆಯಿಂದ ಕೂಡಿರುತ್ತದೆಯೋ; ಕರ್ಮವು ವಿಫಲವಾದ ಪಕ್ಷೆ ಆತನಿಗೆ ದ್ವೇಷಭಾವವು ಉಂಟಾಗುತ್ತದೆ. ಮತ್ತು ಫಲವನ್ನು ಹೇಗಾದರೂ ಆಗಲಿ ಪಡೆಯಲೇ ಬೇಕೆಂಬ ಪ್ರವೃತ್ತಿಯು ಉಂಟಾಗಿ ಅನ್ಯಾನ್ಯ ಮಾರ್ಗವನ್ನೂ ಅವಲಂಬಿಸುವ ತವಕ ಆತನಲ್ಲಿ ಸಂಭವಿಸುತ್ತದೆ. ಆದರೆ ಸಾತ್ತ್ವಿಕವಾದ ಅಹಂಕಾರವು ಮನಸ್ಸನ್ನು ನಿಷ್ಕಲ್ಮಷನನ್ನಾಗಿ ಮಾಡುತ್ತದೆ. ಇದರ ಪರಿಣಾಮವಾಗಿ ಅಧಃಪತನವು ಉಂಟಾಗುವುದಿಲ್ಲ. ಯಾವಾಗಲೂ ಆತನ ಪ್ರವೃತ್ತಿಯಲ್ಲಿ ಬದಲಾವಣೆಯನ್ನೂ ಕಾಣುವುದಿಲ್ಲ. ಇದನ್ನೇ 'ಸ್ಥಿರತೆ' ಆತ್ಮಾನಂದವನ್ನು ಅನುಭವಿಸುವ ಸ್ಥಿತಿ ಎಂದೂ ಕರೆಯುತ್ತಾರೆ. ಆದ್ದರಿಂದ ನಿಜವಾದ ಮಾನ, ಆತ್ಮಾಭಿಮಾನ, ಅಹಂಕಾರ ಇದುವೇ. ಇದು ಇರಬೇಕಾದುದು. ಇಲ್ಲದಿದ್ದರೆ ಪಡೆಯಬೇಕಾದುದು. ಇದಕ್ಕೆ ವಿರುದ್ಧವಾದುದು ಸರ್ವಥಾ ತ್ಯಾಜ್ಯವಷ್ಟೇ.

ಸೂಚನೆ : 9/6/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ವ್ಯಾಸ ವೀಕ್ಷಿತ 91 ಸುಂದೋಪಸುಂದರ ತಪಸ್ಸು (Vyasa Vikshita 91 Sundopasundara Tapassu)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)ದೈತ್ಯರಾದ ಆ ಸುಂದ ಮತ್ತು ಉಪಸುಂದರು ಏಕನಿಶ್ಚಯರು, ಎಂದರೆ ಒಂದೇಬಗೆಯಾದ ತೀರ್ಮಾನವುಳ್ಳವರು. ಯಾವುದೇ ಕೆಲಸವೆಂದರೂಸಹಮತವುಳ್ಳವರು. ಇಬ್ಬರ ದುಃಖವೂ ಒಂದೇ, ಇಬ್ಬರ ಸುಖವೂ ಒಂದೇ. ಇಬ್ಬರೂಒಟ್ಟಿಗೇ ಇರುತ್ತಿದ್ದರು; ಊಟಮಾಡುವುದೂ ಒಟ್ಟಿಗೇ. ಮತ್ತೊಬ್ಬರೊಂದಿಗೆಮಾತನಾಡುವುದೆಂದರೂ ಒಬ್ಬರನ್ನು ಬಿಟ್ಟು ಮತ್ತೊಬ್ಬರಿಲ್ಲ. ಇವನಿಗೇನುಸಂತೋಷವೋ ಅದನ್ನು ಅವನು ಮಾಡುವನು; ಅವನಿಗೆ ಏನು ಸಂತೋಷವೋಅದನ್ನು ಇವನು ಮಾಡುವನು. ಇಬ್ಬರೂ ಪರಸ್ಪರ ಪ್ರಿಯಂವದರೂ ಆಗಿದ್ದರು. ಒಬ್ಬನಿಗೆ ಪ್ರಿಯವಾದ ರೀತಿಯಲ್ಲಿ ಮತ್ತೊಬ್ಬನು ಮಾತನಾಡುತ್ತಿದ್ದನು. ಅವರಶೀಲವೂ ಆಚಾರವೂ ಏಕಪ್ರಕಾರದಲ್ಲಿದ್ದವು. ಒಂದೇ ಜೀವವೇ ಎರಡುಶರೀರದಲ್ಲಿದೆಯೋ ಎಂಬಂತಿದ್ದರು. ಇಬ್ಬರೂ ಮಹಾಪರಾಕ್ರಮಿಗಳಾಗಿಯೇಬೆಳೆದುಬಿಟ್ಟರು.  

ಏಕನಿಶ್ಚಯವುಳ್ಳ ಅವರು ತ್ರೈಲೋಕ್ಯವಿಜಯಕ್ಕೆಂದು ಹೊರಟರು. ದೀಕ್ಷೆಯನ್ನುಪಡೆದು ವಿಂಧ್ಯಪರ್ವತಕ್ಕೆ ಹೋದರು. ಉಗ್ರವಾದ ತಪಸ್ಸನ್ನು ಮಾಡಿದರು. ಜಟಾವಲ್ಕಲಧಾರಿಗಳಾಗಿ ದೀರ್ಘಕಾಲ ತಪಸ್ಸು ಮಾಡಿದರು. ಹಸಿವು-ಬಾಯಾರಿಕೆಗಳಾದವು; ಆದರೂ ತಪಸ್ಸನ್ನು ಬಿಡಲಿಲ್ಲ. ಅವರ ಮೈಮೇಲೆಕೊಳೆಸೇರಿಕೊಂಡಿತು, ಆದರೂ ಕೇವಲ ವಾಯುಭಕ್ಷರಾಗಿ ತಪಸ್ಸುಮುಂದುವರೆಸಿದರು. ಕಾಲಿನ ಹೆಬ್ಬೆರಳಿನ ಮೇಲೆ ನಿಂತುಕೊಂಡು, ತೋಳುಗಳನ್ನುಮೇಲಕ್ಕೆ ಚಾಚಿ, ಕಣ್ಣೇ ಮಿಟುಕಿಸದೆ ವ್ರತಸ್ಥರಾಗಿ ದೀರ್ಘಕಾಲ ತಪಸ್ಸು ಮಾಡಿದರು. ಅಗ್ನಿಯಲ್ಲಿ ಸ್ವ-ದೇಹ-ಮಾಂಸವನ್ನೇ ಆಹುತಿಯಾಗಿ ಕೊಟ್ಟದ್ದೂ ಉಂಟು. ಅವರದೀರ್ಘ ತಪಸ್ಸಿನ ಪ್ರಭಾವದಿಂದ, ವಿಂಧ್ಯಪರ್ವತಕ್ಕೆ ತಾಪವು ತಗುಲಿತು; ವಿಂಧ್ಯದಿಂದಹೊಗೆಯುಕ್ಕಿತು: ಅದು ನೋಡಲು ಆಶ್ಚರ್ಯಕರವಾಗಿತ್ತು. 

ದೇವತೆಗಳಿಗೆ ಆಗ ಭಯವುಂಟಾಯಿತು, ಅವರಿಬ್ಬರ ತಪಸ್ಸನ್ನು ಕಂಡು. ಅವರತಪಸ್ಸಿಗೆ ವಿಘಾತವಾಗಬೇಕು, ಎಂದರೆ ಅಡ್ಡಿಯಾಗಬೇಕು, ಎಂದು ಉದ್ದೇಶಿಸಿ, ಅವರು ವಿಘ್ನಗಳನ್ನು ಉಂಟುಮಾಡಿದರು. ರತ್ನಗಳ ಆಸೆಯನ್ನೊಡ್ಡಿದರು, ಸ್ತ್ರೀಯರನ್ನು ಕಳುಹಿಸಿದರು. ಆದರೆ ಸುಮಹಾವ್ರತರಾಗಿದ್ದ ಅವರಿಬ್ಬರೂ ತಮ್ಮತಪಸ್ಸನ್ನು ಮಾತ್ರ ಭಂಗಗೊಳಿಸಲಿಲ್ಲ.

ಈ ದೈತ್ಯರು ಹಾಗೆ ಮಾಡಲು ದೇವತೆಗಳಿಂದ ಮಾಯಾಪ್ರಯೋಗ ನಡೆಯಿತು:ದೈತ್ಯರ ಸೋದರಿಯರು, ತಾಯಂದಿರು, ಪತ್ನಿಯರು, ಸ್ವಜನರು - ಇವರುಗಳನ್ನುಶೂಲಪಾಣಿಯಾದ ರಕ್ಕಸನೊಬ್ಬನು ಬೀಳಿಸುತ್ತಿದ್ದನು; ಅವರ ಆಭರಣ-ಕೇಶಪಾಶಗಳು ಚೆಲ್ಲಾಪಿಲ್ಲಿಯಾಗಿ ಬಿದ್ದವು; ಅವರ ವೇಷ-ಭೂಷಣಗಳುಭ್ರಂಶಗೊಂಡವು; ಅವರೆಲ್ಲರೂ ಇವರಿಬ್ಬರನ್ನೂ ಸಂಬೋಧಿಸಿ, ಕಾಪಾಡು ಕಾಪಾಡು - ಎಂದು ಕಿರುಚಿಕೊಂಡರು. ಆದರೆ ಇವರಿಬ್ಬರು ಮಾತ್ರ ತಮ್ಮ ವ್ರತವನ್ನುಭಂಗಗೊಳಿಸಲಿಲ್ಲ. ಮತ್ತು ಯಾವಾಗ ಇವರಿಬ್ಬರಲ್ಲೊಬ್ಬರು ಸಹಕ್ಷುಭಿತರಾಗಲಿಲ್ಲವೋ ಸಂಕಟಪಡಲಿಲ್ಲವೋ, ಆಗ ಆ ಸ್ತ್ರೀಯರೂ ಆ ಭೂತವೂ - ಎಲ್ಲವೂ ಅದೃಶ್ಯವಾದವು.

ಅಷ್ಟರಲ್ಲಿ ಆ ಇಬ್ಬರು ಮಹಾಸುರರಿದ್ದೆಡೆಗೆ ಸರ್ವಲೋಕಹಿತಕಾರಿಯಾದ ಸಾಕ್ಷಾತ್ಪಿತಾಮಹನೇ ಆಗಮಿಸಿದನು. ನಿಮಗೇನು ವರ ಬೇಕೆಂದು ಕೇಳಿದನು. ಪಿತಾಮಹನನ್ನು ಕಂಡ ಅವರಿಬ್ಬರೂ ಕೈಜೋಡಿಸಿ ನಿಂತರು. ಪ್ರಭುವನ್ನು ಕುರಿತುಇಬ್ಬರೂ ಹೇಳಿದರು: "ನಮ್ಮಿಬ್ಬರ ಈ ತಪಸ್ಸಿನಿಂದ ಪಿತಾಮಹನು ಸಂತುಷ್ಟನಾಗಿದ್ದರೆ, ನಾವಿಬ್ಬರೂ ಮಾಯಾವಿದರಾಗಬೇಕು, ಅಸ್ತ್ರಜ್ಞರಾಗಬೇಕು, ಬಲಶಾಲಿಗಳಾಗಬೇಕು, ಕಾಮರೂಪಿಗಳಾಗಬೇಕು; ಇಬ್ಬರೂ ಅಮರರಾಗಬೇಕು; ನಮ್ಮಿಬ್ಬರ ವಿಷಯದಲ್ಲಿನೀನು ಸಂತುಷ್ಟನಾಗಿದ್ದರೆ" - ಎಂದರು.

ಅದಕ್ಕೆ ಬ್ರಹ್ಮನು ಹೇಳಿದನು: ಅಮರತ್ವವೊಂದನ್ನು ಬಿಟ್ಟರೆ ತಾವು ಕೇಳಿದುದೆಲ್ಲಆಗುತ್ತದೆ. ಮೃತ್ಯುವಿಗೆ ಪ್ರತಿಯಾಗಿ ಹಾಗೂ ದೇವರೊಂದಿಗೆ ಸಮನೆನಿಸಲುಬೇರೊಂದು ವರವನ್ನು ಕೇಳಿರಿ - ಎಂದನು. 

ಸೂಚನೆ : 9/6/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಕೃಷ್ಣಕರ್ಣಾಮೃತ - 17 ಪಶ್ಚಾತ್ತಾಪ ಸಾಕೇ? ಪ್ರಾಯಶ್ಚಿತ್ತ ಬೇಕೇ?((Krishnakarnamrta - 17 Pashcattapa Sake? Prayashchitta Beke?)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)

ಮಾತನ್ನು ಹೇಗೆಲ್ಲಾ ಬಳಸಬಹುದು - ಒಳ್ಳೆಯ ಉದ್ದೇಶಗಳಿಗೆ! ಆದರೆ ಏನೇನನ್ನೋ ಮಾತನಾಡುತ್ತೇವೆ! ಬೇಡದ ಮಾತೇ ಹೆಚ್ಚು. ಸುಳ್ಳು ಹೇಳುವುದೇನು, ಚಾಡಿ ಹೇಳುವುದೇನು, ಅನ್ಯರ ಮನಸ್ಸನ್ನು ನೋಯಿಸುವುದೇನು? - ಒಂದೇ ಎರಡೇ? ಮಾಡಿದವರ ಪಾಪ ಆಡಿದವರ ಬಾಯಿಗೆ - ಎನ್ನುತ್ತಾರೆ; ಆದರೆ ಪರನಿಂದೆಯಲ್ಲೇ ನಮ್ಮ ನಲಿವು!

ಸಾರವಾಗಿ, ಉದ್ವೇಗಕರವೋ ಅಸತ್ಯವೋ ಅಪ್ರಿಯವೋ ಅಹಿತವೋ ಆದ ಮಾತುಗಳು ಹೊಮ್ಮುತ್ತಲೇ ಇರುತ್ತವೆ, ಸದಾ ವಟಗುಟ್ಟುವ ನಮ್ಮ ಬಾಯಿಂದ! ಇಷ್ಟು ಮಾತ್ರವಲ್ಲ, ಯಾರಾದರೂ ತುಂಬ ಒಳ್ಳೆಯ ಕೆಲಸ ಮಾಡಿದಾಗ ಬಾಯ್ತುಂಬ ಹೊಗಳುವ ಬದಲು, ಮೌನವಹಿಸಿಬಿಡುವುದೂ ಗರ್ಹ್ಯವೇ! ಗರ್ಹ್ಯವೆಂದರೆ ನಿಂದ್ಯ.

ಅಂತೂ ಮಾತನ್ನು ಅಯುಕ್ತವಾಗಿ ಆಡಿ ಅಕೃತ್ಯವೆಸಗುತ್ತಿರುವುದು; ಯುಕ್ತವಾಗಿ ಆಡದೆಯೂ ಅಕೃತ್ಯವೆಸಗುತ್ತಿರುವುದು! ಇದು ಅನೇಕ ಮಂದಿಯ ನಿತ್ಯ-ಚರಿತ: ದುಶ್ಚರಿತ! ವಾಕ್ಕಿನ ಸದುಪಯೋಗವನ್ನು ಮಾಡುತ್ತಲೇ ಇಲ್ಲವೆಂದಲ್ಲ; ದುರುಪಯೋಗವೇ ಬಹುತೇಕ!

ಹೊಟ್ಟೆಹೊರೆಯುವುದಕ್ಕಾಗಿ ಮೇಲಧಿಕಾರಿಗಳನ್ನು ಓಲೈಸಲಂತೂ ನಮ್ಮ ವಾಕ್-ಚಮತ್ಕಾರವನ್ನೆಲ್ಲ ಖರ್ಚುಮಾಡುತ್ತೇವೆ! ಪಿಠರ ಎಂದರೆ ಮಡಕೆ; ಪುಟ್ಟ ಮಡಕೆಯು ಪಿಠರಿ. ಹೀಗೆ ಜಠರ-ಪಿಠರಿಯ ಪೂರೈಕೆಗಾಗಿ ಅನುಚಿತವಾದ ಮಾತುಗಳು: ಖಳರೆದುರಿಗೆ ಹೊಗಳಿಕೆಯ ಮಾತುಗಳು; ನಾಚಿಕೆಬಿಟ್ಟು ಆಡುವಂತಹವುಗಳು! 

"ಯಾವ ಕೆಲಸವನ್ನು ಮಾಡುವ ಮೊದಲು, ಅಥವಾ ಮಾಡುತ್ತಿರುವಾಗ, ಅಥವಾ ಮಾಡಿಯಾದ ಬಳಿಕ - ಲಜ್ಜೆಯುಂಟಾಗುವುದೋ, ಅಂತಹ ಕೆಲಸವನ್ನು ಮಾಡಬೇಡ" - ಎನ್ನುತ್ತದೆ ಮನುಸ್ಮೃತಿ. ಕೆಲವೊಮ್ಮೆಯಂತೂ ಮೂರೂ ಸಂದರ್ಭಗಳಲ್ಲೂ ಲಜ್ಜಾ-ಪ್ರಸಂಗಗಳು!

ಲಜ್ಜೆಯಾಗಬೇಕಾದ ಸಂನಿವೇಶದಲ್ಲೂ ನಾಚಿಕೆಪಟ್ಟುಕೊಳ್ಳದಿರುವುದನ್ನೇ ಭಂಡತನವೆನ್ನುವುದು. ಅನುಚಿತವಾದ ಕ್ರಿಯೆಗಳಲ್ಲಿ ತೊಡಗುವಾಗ ಮೊದಮೊದಲು ಹಿಂಸೆಯು ಉತ್ಕಟವೇ ಆಗುವುದು; ಆದರೂ ಮತ್ತೆ ಮತ್ತೆ ಅದರಲ್ಲೇ ತೊಡಗಿದ್ದರೆ, ಬರಬರುತ್ತಾ ಆ ಉತ್ಕಟತೆಯು ಕ್ಷೀಣಿಸುವುದು; ಲಜ್ಜೆಯೂ ದುರ್ಬಲವಾಗುವುದು.

"ಇದು ಸರಿಯೇ ತಪ್ಪೇ?" ಎಂಬ ಚಿಂತೆ-ಜಿಜ್ಞಾಸೆಗಳಿಗೆ ಆಶಂಕೆಯೆನ್ನುವರು; ಅದಿಲ್ಲವಾದಲ್ಲಿ 'ಅಸ್ತಾಶಂಕ': ಆಶಂಕೆಯು ಅಸ್ತವಾಗಿದ್ದರೆ, ಎಂದರೆ ಮುಳುಗಿದ್ದರೆ, ಅದು ಅಸ್ತಾಶಂಕ. ಅಕಾರ್ಯದಲ್ಲೇ ಮುಳುಗಿರುವವರಿಗೆ ಯಾವ ಆಶಂಕೆ?

ಬೇರೆಯವರ ವರ್ತನೆ ಹೀಗೆ - ಎಂಬುದಾಗಿ ಲೀಲಾಶುಕನು ಹೇಳುತ್ತಿಲ್ಲ. ಬದಲಾಗಿ, ತಾನೇ ಹಾಗೆಲ್ಲ ಮಾಡಿರುವನೆಂದು ಹೇಳಿಕೊಳ್ಳುತ್ತಾನೆ! "ಕೆಟ್ಟವರೆದುರಿಗೇ ಅವರನ್ನು ಕೊಂಡಾಡುವುದಾಗಿಹೋಗಿದೆ, ಅದೂ ಅಸ್ತಾಶಂಕವಾಗಿ; ಇದಕ್ಕಿಂತಲೂ ಮಿಗಿಲಾಗಿ ಅನುಚಿತವಾದದ್ದು ಮತ್ತೇನೂ ಇರಲಾರದು" ಎಂಬ ಅಭಿಪ್ರಾಯವವನದು; ಅದನ್ನು ಆತನು ಹೇಳುವ ಪರಿಯೇ ವಿಶಿಷ್ಟವಾದದ್ದು.

ಜಠರ-ಪಿಠರಿಯನ್ನು ತುಂಬಿಸಲು ತಾನೇ ಹಾಗೆ ಮಾಡಿರುವುದನ್ನು ಕವಿ ನೆನಸುತ್ತಾನೆ. ಇಂತಹ ಸಂದರ್ಭಗಳಲ್ಲಿ ಹೊಮ್ಮುವ ಮಾತಿನ ಆಟ ವಿಚಿತ್ರವಾದದ್ದು. ಎಂದೇ ತನ್ನ ಮಾತನ್ನು ಆ ಪರಿಯಲ್ಲಿ "ಕುಣಿಸಿರುವುದಾಗಿ" ಹೇಳಿಕೊಳ್ಳುತ್ತಾನೆ. ಆಡುವುದಕ್ಕಿಂತಲೂ ಹಾಡು ಹೆಚ್ಚು ಪ್ರಭಾವಶಾಲಿ; ಹಾಡಿಗಿಂತಲೂ ಕುಣಿತವು ಹೆಚ್ಚು ಪರಿಣಾಮಕಾರಿ. ನರ್ತನವಂತೂ ಮೋಹಕವೇ ಸರಿ.

ಆದರೆ ಕುಲ-ಶೀಲ-ಸಮನ್ವಿತೆಯಾದವಳು ದುಷ್ಟರೆದುರಿಗೆ ಮೈಚೆಲ್ಲಿ ನರ್ತಿಸಿಯಾಳೆ? ಕವಿಯು ತನ್ನ ವಾಣಿಯನ್ನು, ಎಂದರೆ ಮಾತನ್ನು, ಕುರಿತು ಹೀಗೆ ಹೇಳಿಕೊಳ್ಳುತ್ತಿದ್ದಾನೆ. "ನನ್ನ ವಾಣಿಯೇ, ನಿನ್ನನ್ನು ಹಾಗೆಲ್ಲಾ ನಿರ್ಲಜ್ಜವಾಗಿ ಕುಣಿಯುವಂತೆ ಮಾಡಿಬಿಟ್ಟಿದ್ದೇನೆ – ಅಯ್ಯೋ!"

ಮಾಡಬಾರದ್ದನ್ನು ಮಾಡಿದರೆ, "ಆಮೇಲೆ ಅಯ್ಯೋ ಹೀಗೆ ಮಾಡಿಬಿಟ್ಟೆನೆಲ್ಲಾ?" - ಎಂದು ಪರಿತಾಪವುಂಟಾಗುವುದು. ಹೀಗೆ ಆಮೇಲಾಗುವ ತಾಪಕ್ಕೇ ಪಶ್ಚಾತ್-ತಾಪವೆನ್ನುವುದು. ಏಕೆಂದರೆ, ಪಶ್ಚಾತ್ ಎಂದರೆ ಆಮೇಲೆ.

ಎಷ್ಟೋ ಮಂದಿ ಪಶ್ಚಾತ್ತಾಪಪಟ್ಟಿದ್ದೇವೆಂದು ಹೇಳಿಕೊಳ್ಳುವುದುಂಟು. ಅದು ನಿಜವೇ ಆಗಿದ್ದಲ್ಲಿ, ಯಾವುದನ್ನು ಮಾಡಿದ್ದರಿಂದಾಗಿ ತಾಪವುಂಟಾಯಿತೋ  ಅಂತಹ ಕೃತ್ಯವನ್ನು ಮತ್ತೆ ಮಾಡಲೇ ಆರರು! ನಿಜವಾದ ಪಶ್ಚಾತ್ತಾಪದ ಲಕ್ಷಣವೆಂದರೆ, ಆ ಅಕೃತ್ಯದಲ್ಲಿ ಮತ್ತೆ ತೊಡಗಲು ಪ್ರವೃತ್ತಿಯೇ ಬಾರದಿರುವುದು; ವಸ್ತುತಃ ಮತ್ತೆ ಅಂತೆಯೇ ಮಾಡಲು ಲಜ್ಜೆ-ಭಯಗಳು ಉಂಟಾಗುವಂತಹುದು. ಅದಕ್ಕಾಗಿಯೇ ಕವಿಯು ಹೇಳುತ್ತಿರುವುದು "ಇನ್ನು ಮುಂದೆ ಹೀಗೆಂದೂ ಮಾಡೆ" (ನ ಅತಃ ಪರಂ).

ಅಕೃತ್ಯವನ್ನು ಮಾಡಿರುವುದು ಖಚಿತವೇ ಆಗಿದ್ದ ಪಕ್ಷದಲ್ಲಿ, ಪಶ್ಚಾತ್ತಾಪವೊಂದೇ ಸಾಲದು; ಮಾಡಿಯಾಗಿರುವ ತಪ್ಪಿಗೆ ಪರಿಹಾರವೆಂಬುದೂ ಬೇಕಾದ ಒಂದು ಅಂಶವೇ.

"ಅಯ್ಯೋ ಹೀಗೆ ಮಾಡಿಬಿಟ್ಟೆನೆಲ್ಲಾ" ಎಂದು ನೊಂದುಕೊಳ್ಳುವುದು ಪಶ್ಚಾತ್ತಾಪ; ಅದನ್ನು ಕವಿಯು ಶ್ಲೋಕ-ಪೂರ್ವಾರ್ಧದಲ್ಲಿ ಹೇಳಿಕೊಂಡಿದ್ದಾನೆ. ಆಗಿಹೋದ ಅಕಾರ್ಯದ ದುಷ್ಪರಿಣಾಮವು ತಗ್ಗಲೆಂದು/ತಟ್ಟದಿರಲೆಂದು ಮಾಡಿಕೊಳ್ಳಬೇಕಾದುದೇ ಪ್ರಾಯಶ್ಚಿತ್ತ.  ಮುಂದಾಗುವ ಅನರ್ಥವನ್ನು ಪಶ್ಚಾತ್ತಾಪವು ತಡೆಯುತ್ತದೆ; ಈಗಾಗಲೇ ಆಗಿಹೋಗಿರುವ ಅನರ್ಥದ ದುಷ್ಪರಿಣಾಮವನ್ನು ಪ್ರಾಯಶ್ಚಿತ್ತವು ಇಳಿ(ಲ್ಲವಾಗಿ)ಸುತ್ತದೆ. 

ಉತ್ತರಾರ್ಧದಲ್ಲಿ ಪ್ರಾಯಶ್ಚಿತ್ತವನ್ನು ಕವಿಯು ಹೇಳಿಕೊಳ್ಳುತ್ತಾನೆ: ಕವಿಗಳಿಗೆ ವಾಣಿಯು ತಾಯಿಯಂತೆ. ವಾಣಿಯೆಂದರೆ ಮಾತು. ವಾಣಿಯೆಂದರೆ ವಾಗ್ದೇವಿ ಸರಸ್ವತಿಯೂ ಹೌದು. ತಾಯಿಯು ಎಂದಿಗೂ ವತ್ಸಲೆ. ಎಂದರೆ ವಾತ್ಸಲ್ಯ ತೋರುವವಳು, ತಪ್ಪುಗಳನ್ನು ಮನ್ನಿಸುವವಳು. ಎಂದೇ ಅವಳ ಕ್ಷಮೆಯನ್ನು ಯಾಚಿಸುತ್ತಾನೆ.

ಪ್ರಾಯಶ್ಚಿತ್ತದತ್ತ ಇಡುವ ಮೊದಲ ಹೆಜ್ಜೆಯೆಂದರೆ ಕ್ಷಮೆಬೇಡುವುದು; ಯಾರಿಗೆ ಅಪಚಾರವೆಸಗಲಾಗಿದೆಯೋ ಅವರಲ್ಲೇ ಬೇಡುವುದು. ಹಾಗೆ ಕೇಳುತ್ತಲೇ, ಅದು ಹಾರ್ದವಾದ ಯಾಚನೆಯೆಂದು ತೋರಿದೊಡನೆಯೇ, ಕೆರಳಿದ್ದವರ ಕೋಪವೂ ಇಳಿದೀತು! ತಾಯಿಯ ಮನಸ್ಸಂತೂ ಬೇಗನೆ ಕರಗೀತು! ಈ ಬಗೆಯ ಸಹಜ-ಸರಲತೆಯು ಅವಳಲ್ಲಿರುವುದು.

ವಾಸ್ತವವಾದ ಪ್ರಾಯಶ್ಚಿತ್ತವೆಂದರೇನೆಂಬುದನ್ನು ಅಂತಿಮ-ಪಾದದಲ್ಲಿ (ಎಂದರೆ ಕೊನೆಯ ಸಾಲಿನಲ್ಲಿ) ಹೇಳಿದೆ: ಗೋಪ-ವೇಷ-ಧಾರಿಯಾದ ವಿಷ್ಣುವಿನ ಗುಣ-ಗಾನವೇ ಪ್ರಾಯಶ್ಚಿತ್ತ.

"ಗೋಪ-ವೇಷಸ್ಯ ವಿಷ್ಣೋಃ" ಎನ್ನುವ ಪದ-ಗುಚ್ಛ ಕಾಳಿದಾಸನದು. ಅದನ್ನೇ ಲೀಲಾಶುಕ ಇಲ್ಲಿ ಬಳಸಿರುವುದು. ಕೃಷ್ಣಾವತಾರದಲ್ಲಲ್ಲದೆ ಮತ್ತಿನ್ನಾವ ಅವತಾರದಲ್ಲೂ ವಿಷ್ಣುವು ಗೋಪ-ವೇಷವನ್ನು ಧರಿಸಿಲ್ಲ. ಗೋವುಗಳನ್ನು ಯಾರು ಪಾಲನೆ ಮಾಡುವನೋ ಆತನೇ ಗೋ-ಪ. ಭೂಮಿಯನ್ನು ಪಾಲಿಸುವವನು ಭೂ-ಪ ಎನ್ನುವಂತೆ. ಗೋಪನೆಂದರೆ ಗೊಲ್ಲ. ಕೃಷ್ಣನೂ ಕ್ಷತ್ರಿಯನೇ ಆದರೂ ಗೊಲ್ಲರ ನಡುವೆ ಬೆಳೆದನಲ್ಲವೇ? ಶ್ರೀಕೃಷ್ಣನ ಸಾರಲ್ಯವನ್ನು, ಎಂದರೆ ಸರಲತೆಯನ್ನು, ಶ್ರೀರಂಗ-ಮಹಾಗುರುಗಳು ಹೀಗೆ ನಿರೂಪಿಸಿರುವರು: "ಬಾಲರ ಜೊತೆಯಲ್ಲಿ ಬಾಲನಾಗಿ, ಋಷಿಗಳ ಜೊತೆಯಲ್ಲಿ ಋಷಿಯಾಗಿ, ಗೋಪಿಯರ ಜೊತೆ ಗೊಲ್ಲನಾಗಿ ಓಡಾಡಿದ ಮಹಾಮಹಿಮ ಶ್ರೀಕೃಷ್ಣ" 

ಅಂತಹ ಮಹಾಮಹಿಮನ ಗುಣ-ಗಣನವೇ ಪ್ರಾಯಶ್ಚಿತ್ತ. ವಸ್ತುತಃ ಭಗವಂತನ ಗುಣಗಳು ಅಸಂಖ್ಯೇಯ, ಎಂದರೆ ಎಣಿಸಲಾಗದ್ದು. ಆದರೂ ಅವಲ್ಲಿ ಎಷ್ಟೆಷ್ಟನ್ನು ಸ್ಮರಿಸಿಕೊಂಡರೆ ಅಷ್ಟಷ್ಟು ಪುಣ್ಯ; ಎಷ್ಟೆಷ್ಟನ್ನು ಆಸ್ವಾದಿಸಿದರೆ ಅಷ್ಟಷ್ಟು ಪಾಪ-ಪರಿಹಾರ.

ಅಂತೂ ತನ್ನ ಅಪರಾಧವನ್ನೇ ತೋಡಿಕೊಳ್ಳುವ ನೆಪದಲ್ಲಿ, ಕವಿಯು ನಾವು ಮಾಡಬಾರದ್ದನ್ನೂ, ಅಂತಹುದನ್ನು ಮಾಡಿದ್ದರೆ ಸರಿಪಡಿಸಿಕೊಳ್ಳುವ ವಿಧಾನವನ್ನೂ, ನಮಗೆ ಮನಮುಟ್ಟುವಂತೆ ಸೂಚಿಸುತ್ತಿದ್ದಾನಲ್ಲವೇ?

ಶ್ಲೋಕವಿದು:

ಮಾತರ್ನಾತಃ ಪರಮನುಚಿತಂ ಯತ್ ಖಲಾನಾಂ ಪುರಸ್ತಾದ್ /

ಅಸ್ತಾಶಂಕಂ ಜಠರ-ಪಿಠರೀ-ಪೂರ್ತಯೇ ನರ್ತಿತಾಸಿ |

ತತ್ ಕ್ಷಂತವ್ಯಂ ಸಹಜ-ಸರಲೇ! ವತ್ಸಲೇ! ವಾಣಿ! ಕುರ್ಯಾಂ /

ಪ್ರಾಯಶ್ಚಿತ್ತಂ ಗುಣ-ಗಣನಯಾ ಗೋಪ-ವೇಷಸ್ಯ ವಿಷ್ಣೋಃ ||

ಸೂಚನೆ : 8/6/2024 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ  ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಅಷ್ಟಾಕ್ಷರೀ 60 ಜಗಾಮಾತ್ಮಸಮಾಧಿನಾ (Astaksari -60 Jagamatmasamadhina)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)ನಮ್ಮ ಧರ್ಮಶಾಸ್ತ್ರಗಳನ್ನು ತಿರುವಿಹಾಕಿದರೆ, ಒಂದಂಶವು ಗೋಚರವಾಗುತ್ತದೆ. ಅದೆಂದರೆ, ಅವನ್ನೆಲ್ಲಾ ಪ್ರಧಾನವಾಗಿ ಗಂಡಸರಿಗಾಗಿಯೇ ಬರೆದಿರುವುದು. ಗಂಡಸರಿಗೆಂದರೂ ಪ್ರಧಾನವಾಗಿ ಬ್ರಾಹ್ಮಣರಿಗಾಗಿಯೇ ಹೇಳಿರುವುದು. ಇದೆಲ್ಲ ಪಕ್ಷಪಾತವಲ್ಲವೇ? - ಎಂದೆನಿಸುವುದು ಸಹಜವೇ - ಆಳವಾಗಿ ಅಧ್ಯಯನ ಮಾಡಿಲ್ಲದಿದ್ದರೆ.

ವಾಲ್ಮೀಕಿ-ರಾಮಾಯಣದ ಶಬರೀ-ಪ್ರಸಂಗವೊಂದನ್ನವಲೋಕಿಸಿದರೆ ಸಹ, ವಸ್ತುಸ್ಥಿತಿಯು ಹಾಗಿಲ್ಲವೆಂಬುದು ಗೋಚರವಾಗುತ್ತದೆ.

ಶಬರಿಯ ವಿಷಯವನ್ನು ರಾಮಲಕ್ಷ್ಮಣರಿಗೆ ತಿಳಿಸುವುದು ಕಬಂಧ: ಅವಳು ಪರಿಚಾರಿಣಿ, ಮತಂಗಮುನಿಯ ಶಿಷ್ಯರುಗಳ ಸೇವೆ ಮಾಡಿಕೊಂಡಿರುವವಳು; ಚಿರಜೀವಿನಿ, ಸಾಕಷ್ಟು ವಯಸ್ಸಾದವಳು; ಮತ್ತು ಅವಳೊಬ್ಬ ಶ್ರಮಣೀ.

ಶ್ರಮಣನೆಂಬ ಪದವನ್ನು ಧ್ಯಾನಪರರಾದ ಯೋಗಿಗಳಿಗೆ, ತಪಸ್ವಿಗಳಿಗೆ ಬಳಸುವುದುಂಟು. ಶ್ರಮಣ-ಶ್ರಮಣಿಯರೆಂದರೆ ಶ್ರಮದಿಂದ ಜೀವಿಸುವವರು; ಎಷ್ಟಾದರೂ, ತಪಸ್ಸೆಂಬುದು ಬಹು-ಶ್ರಮ-ಸಾಧ್ಯವೇ ಸರಿ. ಶಬರನೆಂದರೆ ಭಿಲ್ಲ, ಕಿರಾತ; ಹೀಗಾಗಿ, ಶಬರಿಯೆಂದರೆ ಬೇಡರ ಜಾತಿಯವಳು, ಭಿಲ್ಲೆ.

ರಾಮಾಯಣದ ಶಬರಿಯು ತಪಸ್ಸಿದ್ಧಿಯನ್ನು ಪಡೆದಿರುವವಳು; ಅವಳ ತಪೋನಿಯಮಗಳು ಉಗ್ರವಾಗಿದ್ದವು. ಅವಳು ಸಿದ್ಧ-ಮಾನ್ಯೆ: ಅವಳ ತಪಃಪ್ರಗತಿಯು ಅನ್ಯ-ತಪಸ್ವಿಗಳಿಗೂ ವಿದಿತವಾಗಿತ್ತು.

ರಾಮ-ಲಕ್ಷ್ಮಣರನ್ನವಳು ವಿಧ್ಯುಕ್ತವಾಗಿ ಸ್ವಾಗತಿಸಿದಳು. ಅವಳ ಕುಶಲ-ಪ್ರಶ್ನೆ ಮಾಡುತ್ತಾ, ಅವಳ ವಿಘ್ನ-ಜಯ, ಕ್ರೋಧ-ಜಯ, ಆಹಾರ-ನಿಯತತೆ, ತಪೋನಿಯಮ-ಪಾಲನ, ಮನಸ್ಸೌಖ್ಯ, ಗುರುಶುಶ್ರೂಷಾ-ಸಾಫಲ್ಯ, ತಪೋವೃದ್ಧಿ - ಇವನ್ನು ವಿಚಾರಿಸಿದ, ಶ್ರೀರಾಮ.

ಅದಕ್ಕವಳೆಂದಳು: "ದೇವಶ್ರೇಷ್ಠನಾದ ನಿನ್ನನ್ನು ಪೂಜಿಸಿದೆನಾಗಿ, ಇಂದು ನನ್ನ ತಪಸ್ಸು ಸಿದ್ಧಿಯನ್ನು ಪಡೆಯಿತು; ಜನ್ಮವೇ ಸಫಲವಾಯಿತು; ಹಿರಿಯರನ್ನು ನಾನು ಚೆನ್ನಾಗಿಯೇ ಅರ್ಚಿಸಿದ್ದೇನೆ - ಎಂದೇ ನಿನ್ನ ದರ್ಶನವೆನಗಾಗಿರುವುದು. ನನಗೆ ಸ್ವರ್ಗ-ಪ್ರಾಪ್ತಿಯಾಗುವುದು; ನಿನ್ನ ಸೌಮ್ಯ-ಚಕ್ಷುಸ್ಸಿನಿಂದಲೇ ನಾನು ಪೂತಳಾಗಿದ್ದೇನೆ (ಅರ್ಥಾತ್, ಪವಿತ್ರಳಾಗಿದ್ದೇನೆ.) ನಿನ್ನ ಪ್ರಸಾದದಿಂದಾಗಿ ನಾನು ಅಕ್ಷಯವಾದ ಲೋಕಗಳನ್ನು ಹೊಂದತಕ್ಕವಳು. ಯಾರ ಪರಿಚಾರಣೆಯನ್ನು, ಎಂದರೆ ಸೇವೆಯನ್ನು, ನಾನು ಮಾಡಿದೆನೋ, ಅವರುಗಳು ದಿವ್ಯ-ವಿಮಾನಗಳನ್ನೇರಿ ಇಲ್ಲಿಂದಲೇ ಸ್ವರ್ಗಕ್ಕೆ ಹೊರಟುಬಂದರು. ಹೊರಡುವ ಮೊದಲು ಹೇಳಿದ್ದರು: ನಿನ್ನೀ ಪುಣ್ಯಾಶ್ರಮಕ್ಕೆ ರಾಮನು ಬರುವನು; ಆತನನ್ನು ಕಂಡ ಬಳಿಕ ನೀನು ಶ್ರೇಷ್ಠವೂ ಅಕ್ಷಯವೂ ಆದ ಲೋಕಗಳನ್ನು ಸೇರುವೆ – ಎಂಬುದಾಗಿ."

ಹೀಗೆ ಹೇಳಿ, ತಾನು ಅವರಿಗಾಗಿ ತಂದಿಟ್ಟಿದ್ದ ಫಲಗಳನ್ನು ಅರ್ಪಿಸಿದಳು. ಆಗ ರಾಮನು "ವಿಜ್ಞಾನದಲ್ಲಿ ಅಬಹಿಷ್ಕೃತಳಾದ" ಆಕೆಯನ್ನು ಕುರಿತು, "ನಿನ್ನ ತಪಃಪ್ರಭಾವವನ್ನು ಕೇಳಿ ಬಲ್ಲೆ" - ಎಂದನು.

ಆಗ ಶಬರಿಯು ಆ ಮತಂಗವನ-ಮಾಹಾತ್ಮ್ಯವನ್ನು ತಿಳಿಸಿ, "ನಿನ್ನ ಅನುಮತಿಯನ್ನು ಪಡೆದು ನಾನು ಈ ಶರೀರವನ್ನು ಬಿಟ್ಟುಹೋಗಬೇಕೆಂದಿರುವೆ" ಎಂದಳು. ರಾಮನೂ ಅದಕ್ಕೆ, "ನೀನು ಭಕ್ತಿಯಿಂದ ನನ್ನನ್ನರ್ಚಿಸಿದ್ದೀಯೆ. ನಿನಗೆ ಹೇಗಿಷ್ಟವೋ ಹಾಗೆ ಮಾಡು" ಎಂದನು.

ತನ್ನ ಜೀರ್ಣವಾದ ದೇಹವನ್ನು ಶಬರಿಯು ಆಗ ಅಗ್ನಿಯಲ್ಲಿ ಹೋಮಮಾಡಿಕೊಂಡಳು. ಅಗ್ನಿಯಂತೆ ಬೆಳಗುತ್ತಾ ಸ್ವರ್ಗತಳಾದಳು. ಪುಣ್ಯಾತ್ಮರಾದ ಮಹರ್ಷಿಗಳು ಸೇರುವೆಡೆಯನ್ನೇ "ಆತ್ಮ-ಸಮಾಧಿಯಿಂದ" ಸೇರಿದಳು (ಜಗಾಮ ಆತ್ಮ-ಸಮಾಧಿನಾ).

ಇಲ್ಲಿ ಎರಡು ಪದಗಳಿಗೆ ವಿವರಣೆ ಅಪೇಕ್ಷಿತ. ಶಬರಿಯು ವಿಜ್ಞಾನದಲ್ಲಿ ಅಬಹಿಷ್ಕೃತಳು - ಎಂದರೇನು? ಆತ್ಮಸಮಾಧಿಯಿಂದ ಸ್ವಸ್-ಸ್ಥಾನವನ್ನು ಸೇರಿದಳು - ಎಂದರೇನು?

ಇಲ್ಲಿರುವ ವಿಜ್ಞಾನವೆಂಬ ಪದಕ್ಕೆ ಇಂದು ನಾವು ಬಳಸುತ್ತಿರುವ ಅರ್ಥವಲ್ಲ. ಆತ್ಮಜ್ಞಾನವನ್ನೇ ಹೇಳುವ ಪದವದು. ಆ ಆತ್ಮವಿಜ್ಞಾನದ ವಿಷಯದಲ್ಲಿ ಅವಳಿಗೆ ಎಂದೂ ಬಹಿಷ್ಕಾರವಿರಲಿಲ್ಲ. ಅರ್ಥಾತ್ ಅವಳು ಆಚಾರ್ಯಾನುಗ್ರಹದಿಂದ ಬ್ರಹ್ಮಜ್ಞಾನವನ್ನು ಪಡೆದಿದ್ದಳಷ್ಟೇ ಅಲ್ಲದೆ, ಅದರ ಅಂತರಂಗವನ್ನೇ ಅರಿತಿದ್ದಳು - ಎಂದದರರ್ಥ.

ಯೋಗಿಗಳು ಆತ್ಮ-ಸಮಾಧಿಯಿಂದ ಪರಮ-ಪದವನ್ನು ಮುಟ್ಟುವರು. ಇವಳು ನಾರಿಯೆಂದೋ ನಿಕೃಷ್ಟ-ಜಾತಿಯವಳೆಂದೋ ಅವಳಿಗೆ ಮಹರ್ಷಿಗಳು ಸತ್ಸಂಸ್ಕಾರ-ಮಾರ್ಗದರ್ಶನಗಳನ್ನು ಕೊಡದಿರಲಿಲ್ಲ – ಎಂಬುದನ್ನಿಲ್ಲಿ ಗಮನಿಸಬೇಕು.

ಮಾನವ-ಶರೀರದಿಂದ ಸಾಧಿಸಬೇಕಾದುದು ಆತ್ಮಜ್ಞಾನ-ಸಂಪಾದನೆ. ಅದನ್ನು ಸಂಪಾದಿಸಿ, ಆತ್ಮ-ಸಮಾಧಿಯಲ್ಲಿ ನೆಲೆಗೊಂಡವಳಾಗಿ, ಈ ಶರೀರದಿಂದ ಇನ್ನಾಗಬೇಕಾದುದೇನೂ ಇಲ್ಲವೆಂಬುದನ್ನರಿತುಕೊಂಡು, ಸಂಕಲ್ಪ-ಪೂರ್ವಕವಾಗಿ ರಾಮ-ಲಕ್ಷ್ಮಣರೆದುರಿನಲ್ಲಿ ಕೃತ-ಕೃತ್ಯತೆಯ ಭಾವದಿಂದ ಶರೀರ-ತ್ಯಾಗವನ್ನು ಸ್ವ-ತೇಜೋ-ಬಲದಿಂದ  ಮಾಡಿದ ಶಬರಿಯೇ ಧನ್ಯೆ!

ಯೋಗವಿದ್ಯೆಯಿಂದ, ಅದರಲ್ಲೂ ಅದರ ಉನ್ನತ-ಸೋಪಾನವೆನಿಸುವ ಧ್ಯಾನದಿಂದ, ಸ್ತ್ರೀಯರೂ ಪರಮ-ಪದವನ್ನು ಇಂದೂ ಮುಟ್ಟಬಲ್ಲರು - ಎಂಬುದನ್ನು ತಮ್ಮ ಉಪದೇಶದಿಂದ ಮಾತ್ರವಲ್ಲದೆ, ಸ್ವತಃ ಯುಕ್ತ-ಮಾರ್ಗ-ದರ್ಶನದಿಂದಲೂ ಶ್ರೀರಂಗಮಹಾಗುರುಗಳು ಪ್ರತಿಪಾದಿಸಿರುವರು.

ಪಾರ್ವತಿಯು ತಪಸ್ಸಮಾಧಿಯಿಂದ ಈಶ್ವರನನ್ನು ಮೆಚ್ಚಿಸಿದುದನ್ನು ಕಾಳಿದಾಸನ ಕುಮಾರಸಂಭವವು ನಿರೂಪಿಸುತ್ತದೆಯಲ್ಲವೇ? ಕೌಸಲ್ಯೆಯು ಪ್ರಾಣಾಯಾಮ-ಪರಾಯಣಳಾಗಿದ್ದುದನ್ನು ರಾಮಾಯಣವೇ ಹೇಳಿದೆಯಲ್ಲವೇ?

ಹೀಗಾಗಿ, ಆತ್ಮವಿದ್ಯೆ-ಯೋಗಸಮಾಧಿಗಳು ಸ್ತ್ರೀಯರಿಗೂ ಇಂದಿಗೂ ಸಾಧ್ಯವಾಗತಕ್ಕವೇ ಸರಿ.

ಸೂಚನೆ: 25/05/2024 ರಂದು ಈ ಲೇಖನ ವಿಜಯವಾಣಿಯ ಸುದಿನ ಲ್ಲಿ ಪ್ರಕಟವಾಗಿದೆ. 


Friday, June 7, 2024

ಸಂಪತ್ತಿನ ಸದ್ವಿನಿಯೋಗ ಯಾವಾಗ ? (Sampattina Sadviniyoga Yavaga?)


ಲೇಖಕರು; ವಿದುಷಿ ಸೌಮ್ಯಾ ಪ್ರದೀಪ್  ಎ. ಜೆ.

ಪ್ರತಿಕ್ರಿಯಿಸಿರಿ (lekhana@ayvm.in)
ಶ್ರೀಕೃಷ್ಣ ಮತ್ತು ಸುಧಾಮರು ಬಾಲ್ಯ ಸ್ನೇಹಿತರು. ಸಾಂದೀಪನಿ ಮಹರ್ಷಿಗಳ ಗುರುಕುಲದಲ್ಲಿ ಒಟ್ಟಿಗೆ ವಿದ್ಯಾಭ್ಯಾಸವನ್ನು ಮಾಡಿದವರು. ಅವರಿಬ್ಬರ ಗುರುಕುಲವಾಸ ಪೂರ್ಣವಾದ ಬಳಿಕ ಶ್ರೀಕೃಷ್ಣನು ದ್ವಾರಕೆಗೆ ಹಿಂತಿರುಗುತ್ತಾನೆ. ಸುಧಾಮನು ತನ್ನ ಸ್ವಗೃಹಕ್ಕೆ ತೆರಳುತ್ತಾನೆ. ಶ್ರೀಕೃಷ್ಣನು ದ್ವಾರಕೆಯಲ್ಲಿ ಅರಮನೆಯ ವಾಸದಲ್ಲಿರುತ್ತಾನೆ. ಸುಧಾಮನಾದರೋ ಅತ್ಯಂತ ಬಡವ, ಒಂದು ಹೊತ್ತಿನ ಊಟಕ್ಕೂ ಪರದಾಡುವಂತಹ ಸ್ಥಿತಿ ಅವನದು.

ಸುಧಾಮನ ಹೆಂಡತಿಗೆ ಶ್ರೀಕೃಷ್ಣನು ತನ್ನ ಪತಿಯ ಪ್ರಿಯಮಿತ್ರ ಎಂಬುದು ತಿಳಿದಿರುತ್ತದೆ. ಅವಳು ಒಮ್ಮೆ ಪತಿಯನ್ನು ಕುರಿತು ತಾವು ದ್ವಾರಕೆಗೆ ಹೋಗಿ  ಕೃಷ್ಣನ ಸಹಾಯವನ್ನು ಕೇಳಬಹುದಲ್ಲವೇ ? ಅದರಿಂದ ನಮ್ಮ ಪರಿಸ್ಥಿತಿ  ಸುಧಾರಿಸಬಹುದು ಎಂಬುದಾಗಿ ಸೂಚಿಸುತ್ತಾಳೆ.  ಸುಧಾಮನಿಗೆ ತಮ್ಮ ದಾರಿದ್ರ್ಯವನ್ನು ಅವನಲ್ಲಿ ಅರಿಕೆ ಮಾಡಿಕೊಳ್ಳುವುದು ಇಷ್ಟವಿಲ್ಲದಿದ್ದರೂ ಪತ್ನಿಯ ಪ್ರೇರೇಪಣೆಯಿಂದ ದ್ವಾರಕೆಗೆ ಬರುತ್ತಾನೆ.

 ಶ್ರೀಕೃಷ್ಣನು ಸುಧಾಮನ ಆಗಮನದ ವಾರ್ತೆಯನ್ನು ತಿಳಿದು ಅತ್ಯಂತ ಸಂತೋಷಗೊಂಡವನಾಗಿ ಅವನನ್ನು ಆತ್ಮೀಯವಾಗಿ ಎದುರುಗೊಂಡು ಪ್ರೀತಿಯಿಂದ ಸತ್ಕಾರವನ್ನು ಮಾಡುತ್ತಾನೆ. ಅವನ  ಆದರಪೂರ್ಣವಾದ ಸತ್ಕಾರದಿಂದ ಸುಧಾಮನ ಮನಸ್ಸು ಆನಂದದಿಂದ ತುಂಬಿ ಹೋಗುತ್ತದೆ. ಶ್ರೀಕೃಷ್ಣ ಪರಮಾತ್ಮನ ಸಾನಿಧ್ಯ ಸೌಖ್ಯದಲ್ಲಿ ಅವನಿಗೆ ತನ್ನ ಕಷ್ಟ ಪರಂಪರೆ ನೆನಪಾಗುವುದೇ ಇಲ್ಲ!. ಅವನು ತನ್ನ ಆಗಮನದ ಕಾರಣವನ್ನೇ ಮರೆತುಬಿಡುತ್ತಾನೆ. ಸರ್ವಾಂತರ್ಯಾಮಿಯಾದ ಶ್ರೀಕೃಷ್ಣನಿಗೆ ಸುಧಾಮನ ಮನದಾಳದ ಬಯಕೆ ತಿಳಿಯದೇ ಇರುತ್ತದೆಯೇ ? ಸುಧಾಮನು ಕೆಲವು ದಿನಗಳು  ಕೃಷ್ಣನ ಜೊತೆಯಲ್ಲಿಯೇ ಇದ್ದು ನಂತರ ತನ್ನೂರಿಗೆ ಹೊರಡುತ್ತಾನೆ. ದಾರಿಯಲ್ಲಿ ಬರುವಾಗ ಅವನಿಗೆ ತನ್ನ ದಾರಿದ್ರ್ಯದ ನೆನಪಾಗಿ ತಾನು ಕೇಳಬೇಕೆಂದುಕೊಂಡಿದ್ದನ್ನು ಕೃಷ್ಣನ ಬಳಿ ಕೇಳಲೇ ಇಲ್ಲವಲ್ಲ ಎಂದು ಯೋಚಿಸುತ್ತಾನೆ. ಆದರೆ ತನ್ನ ಮನೆಯ ಹತ್ತಿರ ಬಂದಾಗ ಸುಧಾಮನಿಗೆ ಆಶ್ಚರ್ಯ ಕಾದಿರುತ್ತದೆ. ತನ್ನ ಗುಡಿಸಲು ಇರುವ ಜಾಗದಲ್ಲಿ ಭವ್ಯವಾದ ಬಂಗಲೆ ನಿರ್ಮಿತವಾಗಿರುತ್ತದೆ, ಮನೆಯು ಧನ ಧಾನ್ಯದಿಂದ ತುಂಬಿರುತ್ತದೆ, ಹೆಂಡತಿ ಮಕ್ಕಳು ಹೊಸ ಬಟ್ಟೆ,ಆಭರಣಗಳನ್ನು ತೊಟ್ಟುಕೊಂಡು ಓಡಾಡುತ್ತಿರುತ್ತಾರೆ. ಇವೆಲ್ಲವೂ ಶ್ರೀಕೃಷ್ಣ ಪರಮಾತ್ಮನ ಅನುಗ್ರಹ ಎಂಬುದು ಅವನಿಗೆ ಸ್ಪಷ್ಟವಾಗುತ್ತದೆ.  ತನಗೆ ಸಂಪತ್ತನ್ನು ಅನುಗ್ರಹಿಸಿರುವ ಶ್ರೀ ಕೃಷ್ಣನನ್ನು ಕೃತಜ್ಞತೆಯಿಂದ ಸ್ಮರಿಸಿ,  ಸದ್ಗೃಹಸ್ಥನಾಗಿ, ಭಗವಂತನಿಂದ ಕೊಡಲ್ಪಟ್ಟ ಸಂಪತ್ತನ್ನು  ಭಗವಂತನ ಸ್ಮರಣೆಯೊಂದಿಗೆ ಸದ್ವಿನಿಯೋಗಮಾಡುತ್ತಾ ಸುಖ, ಶಾಂತಿಯಿಂದ ಜೀವನವನ್ನು ನಡೆಸುತ್ತಾನೆ.

 ಈ ಸೃಷ್ಟಿಯಲ್ಲಿ ಭೌತಿಕವಾದ ಸಂಪತ್ತು ಅನ್ನುವುದು ಎಲ್ಲರಿಗೂ, ಎಲ್ಲಾ ಕಾಲದಲ್ಲಿಯೂ ಒಂದೇ ತರಹ ಇರುವುದಿಲ್ಲ. ಅವರವರ ಪೂರ್ವಕೃತ ಕರ್ಮಕ್ಕನುಗುಣವಾಗಿ, ಪರಿಶ್ರಮಕ್ಕನುಗುಣವಾಗಿ, ಅದೃಷ್ಟದ ಮೇರೆಗೆ ಬದಲಾಗುತ್ತಾ ಇರುತ್ತದೆ. ಸಂಪತ್ತಿರುವೆಡೆ ಸುಖ ಶಾಂತಿ ನೆಲೆಸಿರುತ್ತದೆ ಎಂಬುದೂ ಇಲ್ಲ. ಭಗವಂತನಿಂದ ದಯಪಾಲಿಸಲ್ಪಟ್ಟ ಸಂಪತ್ತನ್ನು ಯಾವ ರೀತಿ ಉಪಯೋಗಿಸಿದಾಗ ಅದು ನಮ್ಮ ಭೌತಿಕ ಜೀವನವನ್ನು ಸುಖಮಯವಾಗಿಸಿ, ಮನಸ್ಸಿಗೆ ಶಾಂತಿಯನ್ನು ನೀಡುವ ಪಾರಮಾರ್ಥಿಕ ಜೀವನಕ್ಕೂ ಪೋಷಕವಾಗಬಲ್ಲದು ಎಂಬ ಅರಿವು ಅವಶ್ಯಕ.

ಭಗವಂತನನ್ನು ಮರೆಸುವ ಸಂಪತ್ತು ವಿಪತ್ತೇ ಆಗುತ್ತದೆ. "ಒಂದು ದ್ರವ್ಯವೂ ಇದ್ದು ಅದರ ಸರಿಯಾದ ವಿನಿಯೋಗವೆಂದರೆ ಪರಮ ಯೋಗದಲ್ಲಿ ಮುಕ್ತಾಯವಾಗುವುದು" ಎಂಬ ಶ್ರೀರಂಗಮಹಾಗುರುಗಳ ವಾಣಿಯು ಇಲ್ಲಿ ಸ್ಮರಣೀಯವಾಗಿದೆ.
 
ಭಗವಂತನ ಸ್ಮರಣೆಯೊಂದಿಗೆ ಧರ್ಮ ಸಮ್ಮತವಾಗಿ ಸಂಪತ್ತನ್ನು ತಾನೂ ಅನುಭವಿಸಿ,  ಸತ್ಕಾರ್ಯಕ್ಕೆ ಅದನ್ನು ವಿನಿಯೋಗ ಮಾಡುತ್ತಾ ಬಂದಾಗ ಅದು ಪರಮಯೋಗದಲ್ಲಿ ನಮ್ಮನ್ನು ನೆಲೆ ನಿಲ್ಲಿಸಲು ಸಹಕಾರಿಯಾಗುವುದರೊಂದಿಗೆ ಆ ಸಂಪತ್ತಿನ ಸಾರ್ಥಕವಾದ ಬಳಕೆಯಾದಂತಾಗುತ್ತದೆ.

ಸೂಚನೆ: 07/06/2024 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ದಲ್ಲಿ ಪ್ರಕಟವಾಗಿದೆ.

Monday, June 3, 2024

ವ್ಯಾಸ ವೀಕ್ಷಿತ 90 ನಾರದರ ಆಗಮನ – ಸುಂದ-ಉಪಸುಂದರ ಪ್ರಸ್ತಾವ (Vyasa Vikshita 90 Naradara Agamana - Sunda-Upasundara Prastava)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)

ಪೌರಕಾರ್ಯಗಳನ್ನು ಎಲ್ಲವನ್ನೂ ಕಾಲಕಾಲಕ್ಕೆ ಮಾಡುತ್ತಾ (ಎಂದರೆ ಸ್ವಕರ್ತವ್ಯಗಳನ್ನು ಸಮುಚಿತವಾಗಿ ನಿರ್ವಹಿಸುತ್ತಾ) ಪುರುಷಶ್ರೇಷ್ಠರಾದ ಪಾಂಡವರು ತಮ್ಮ ರಾಜಾಸನದಲ್ಲಿ ಕುಳಿತುಕೊಳ್ಳುತ್ತಿದ್ದರು.

ಅವರು ಹಾಗೆ ಕುಳಿತಿರಲು, ಆಕಸ್ಮಿಕವಾಗಿ ಒಮ್ಮೆ ಅವರಲ್ಲಿಗೆ ಆಗಮಿಸಿದರು, ನಾರದಮಹರ್ಷಿಗಳು. ಬಂದ ಋಷಿವರ್ಯನಿಗೆ ಯುಧಿಷ್ಠಿರನು ಪ್ರತ್ಯುದ್ಗಮನ (ಎಂದರೆ ಎದುರ್ಗೊಳ್ಳುವುದು), ಅಭಿವಾದನ (ಎಂದರೆ ವಿಹಿತವಾದ ಬಗೆಯಲ್ಲಿ ನಮಸ್ಕಾರಮಾಡುವುದು), ಆಸನ-ಪ್ರದಾನ (ಎಂದರೆ ಕುಳಿತುಕೊಳ್ಳಲು ಆಸನವನ್ನು ಕೊಡುವುದು) - ಇವನ್ನು ಮಾಡಿದನು. ದೇವರ್ಷಿ-ನಾರದರು ಕುಳಿತರು. ಆಗ ಅವರ ಕೈಗೆ ಅರ್ಘ್ಯವನ್ನು (ಎಂದರೆ ಹಸ್ತ-ಶುದ್ಧಿಗಾಗಿ ಕೊಡಬೇಕಾದ ಜಲವನ್ನು) ಕೊಟ್ಟನು. ತನ್ನ ಇಡೀ ರಾಜ್ಯವನ್ನೇ ಅವರಿಗೆ ಸಮರ್ಪಿಸಿದನು.

ಯುಧಿಷ್ಠಿರನಿತ್ತ ಈ ಪೂಜೆಯಿಂದ ನಾರದರಿಗೆ ಸಂತೋಷವಾಯಿತು. ಆತನಿಗೆ ಆಶೀರ್ವಾದವಿತ್ತು, ಕುಳಿತುಕೊಳ್ಳಲು ಹೇಳಿದರು. ಅವರ ಆಣತಿಯಂತೆ

ಪೂಜ್ಯರು ಆಗಮಿಸಿರುವುದನ್ನು ಕೃಷ್ಣೆಗೆ ತಿಳಿಸಿದನು. ಅವಳು ಅಲ್ಲಿ ಶುಚಿರ್ಭೂತಳಾಗಿ ಆಗಮಿಸಿದಳು. ಅವರ ಚರಣಗಳಿಗೆ ವಂದಿಸಿದಳು. ಅಂಜಲಿ-ಬಂಧದೊಂದಿಗೆ (ಎಂದರೆ ಕೈಜೋಡಿಸಿದವಳಾಗಿ) ನಿಂತುಕೊಂಡಳು. ರಾಜಕುಮಾರಿಯಾದ ದ್ರೌಪದಿಗೆ ನಾರದರು ವಿವಿಧವಾಗಿ ಆಶೀರ್ವಾದ ಮಾಡಿದರು. ಆಮೇಲೆ, "ನೀನಿನ್ನು ಹೋಗಬಹುದು" ಎಂದು ಅವಳಿಗೆ ಸೂಚಿಸಿದರು. ಅವಳು ಒಳಗೆ ಹೋದ ಬಳಿಕ, ಏಕಾಂತದಲ್ಲಿ ಪಾಂಡವರೆಲ್ಲರನ್ನು ಕುರಿತು ನಾರದರು ಈ ಮಾತುಗಳನ್ನಾಡಿದರು:

ನಿಮ್ಮೆಲ್ಲರಿಗೂ ಪಾಂಚಾಲಿಯೊಬ್ಬಳೇ ಧರ್ಮಪತ್ನಿಯಾಗಿ ಇದ್ದಾಳಷ್ಟೆ. ತನ್ನಿಮಿತ್ತ (ಎಂದರೆ ಆ ಕಾರಣಕ್ಕಾಗಿ) ನಿಮ್ಮ ನಿಮ್ಮಲ್ಲೇ ಒಡಕು ಉಂಟಾಗಬಾರದು – ಅದಕ್ಕೆ ಸಲ್ಲುವ ರೀತಿಯಲ್ಲಿ ನೀತಿಯೊಂದನ್ನು ನೀವು ನಿಮಗಾಗಿಯೇ ನಿರ್ಮಿಸಿಕೊಳ್ಳಬೇಕು.

ಹಿಂದೆ ಸುಂದ-ಉಪಸುಂದ - ಎಂಬ ಭ್ರಾತೃಗಳಿಬ್ಬರಿದ್ದರು. ಅವರು ಸದಾ ಒಟ್ಟಿಗೇ ಇರುತ್ತಿದ್ದರು. ಮತ್ತು ಅವರು ಬೇರೆಯವರಿಗೆ ಅವಧ್ಯರಾಗಿದ್ದರು. (ಎಂದರೆ ಅವರನ್ನು ಯಾರೂ ಸಂಹರಿಸಲಾಗುತ್ತಿರಲಿಲ್ಲ). ಹಾಗೆಂಬುದಾಗಿ ಮೂರೂ ಲೋಕಗಳಲ್ಲೂ ಕೀರ್ತಿಯನ್ನೂ ಅವರು ಸಂಪಾದಿಸಿದ್ದರು. ಇಬ್ಬರಿಗೂ ಸೇರಿ ಒಂದೇ ರಾಜ್ಯ; ಇಬ್ಬರ ವಾಸವೆಂಬುದೂ ಒಂದೇ ಮನೆಯಲ್ಲಿ; ಇಬ್ಬರೂ ಒಂದೇ ಹಾಸಿಗೆಯಲ್ಲಿ ಮಲಗುವರು. ಒಂದೇ ಆಸನದಲ್ಲೇ ಕುಳಿತುಕೊಳ್ಳುವರು ಕೂಡ. ಆದರೆ ಒಬ್ಬರನ್ನೊಬ್ಬರು ಸಾಯಿಸಿವುದಾಯಿತು - ತಿಲೋತ್ತಮೆಯ ಸಲುವಾಗಿ.

ಆದುದರಿಂದಲೇ ಅನ್ಯೋನ್ಯ-ಪ್ರೀತಿ-ವರ್ಧಕವಾದ ರೀತಿಯಲ್ಲಿ ನಿಮ್ಮ ಸೌಹೃದವನ್ನು (ಎಂದರೆ ಸುಹೃದ್-ಭಾವನೆಯನ್ನು, ಒಳ್ಳೆಯ ಮನಸ್ಸನ್ನು, ಸ್ನೇಹಿತರಂತೆ ಇರುವುದನ್ನು) ಇಟ್ಟುಕೊಳ್ಳಿರಿ - ಎಂದರು.

ಅವರು ಹಾಗೆ ಹೇಳಲು, ಯುಧಿಷ್ಠಿರನು ಕೇಳಿದನು: ಮಹಾಮುನಿಯೇ, ಯಾರ ಮಕ್ಕಳು ಈ ಸುಂದ-ಉಪಸುಂದರೆಂಬುವರು? ಅವರಿಬ್ಬರಲ್ಲೂ ಒಡಕು ಏತಕ್ಕಾಗಿ ಉಂಟಾಯಿತು? ಪರಸ್ಪರ ಒಬ್ಬರನ್ನೊಬ್ಬರು ಸಾಯಿಸಿದುದು ಹೇಗೆ? ಅಪ್ಸರೆಯೋ ದೇವಕನ್ಯೆಯೋ ತಿಲೋತ್ತಮೆಯೋ - ಯಾವಳಲ್ಲಿಯ ಕಾಮದಿಂದಾಗಿ ಅವರಿಬ್ಬರೂ ಪರಸ್ಪರ ಸಾಯಿಸಿಕೊಂಡರು? ಇದೆಲ್ಲವನ್ನೂ ಯಥಾವತ್ತಾಗಿ ವಿಸ್ತೃತವಾಗಿ ತಿಳಿಸಿ, ತಪೋಧನರೇ. ನಾವಿದನ್ನು ಕೇಳಬಯಸುವೆವು. ನಮಗಿದರ ಬಗ್ಗೆ ಬಹಳವೇ ಕುತೂಹಲವಾಗಿವೆ - ಎಂದನು.

ಆಗ ನಾರದರು ಹೇಳಿದರು: ಹಿಂದೆ ಮಹಾಸುರನಾದ ಹಿರಣ್ಯಕಶಿಪುವಿನ ವಂಶದಲ್ಲಿ ನಿಕುಂಭನೆಂಬ ದೈತ್ಯರಾಜನು ಜನಿಸಿದನು. ಆತನು ತೇಜಸ್ವಿಯೂ ಬಲಶಾಲಿಯೂ ಆಗಿದ್ದನು. ಆತನಿಗಿಬ್ಬರು ಮಕ್ಕಳಾದರು. ಇಬ್ಬರೂ ಮಹಾವೀರ್ಯರು. ಇಬ್ಬರೂ ಭಯಂಕರ-ಪರಾಕ್ರಮವುಳ್ಳವರು. ಜೊತೆಗೆ ಘೋರರು, ಕ್ರೂರ-ಮನಸ್ಕರು. ಅವರೇ ಸುಂದ-ಉಪಸುಂದ - ಎಂಬ ಇಬ್ಬರು ದೈತ್ಯರಾಜರು – ಎಂದು ಹೇಳಿದರು.

ಸೂಚನೆ : 2/6/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

Sunday, June 2, 2024

ಕಾಲಕ್ಕೆ ರಾಜನೇ ಕಾರಣ (Kalakke Rajane Karana)

ಲೇಖಕರು : ಡಾ. ಹಚ್.ಆರ್. ಮೀರಾ
(ಪ್ರತಿಕ್ರಿಯಿಸಿರಿ lekhana@ayvm.in)
ರಾಜಾ ಅಂಬರೀಷನ ಹೆಸರನ್ನು ಕೇಳಿಲ್ಲದವರಾರು? ಅಯೋಧ್ಯೆಯ ಒಬ್ಬ ಧರ್ಮಿಷ್ಠನೂ ಬಲಿಷ್ಠನೂ ಆದ ರಾಜ ಇವನಾಗಿದ್ದನು. ತನ್ನ ಧರ್ಮವನ್ನನುಸರಿಸಿ ಯಜ್ಞ ಮಾಡುತ್ತಿದ್ದಾಗ, ಅದರ ಯಜ್ಞಪಶುವನ್ನು ಅಪಹರಿಸಲಾಯಿತು. ಅದು ಸಕಾಲಕ್ಕೆ ಸಿಕ್ಕದಿದ್ದರೆ, ಯಜ್ಞದ ಯಜಮಾನನಾದ ಇವನ ಹೊಣೆಗಾರಿಕೆಯಲ್ಲಿ ಯಜ್ಞವು ವಿಫಲವಾಗುವಂತಾಗುತ್ತಿತ್ತು. ಆದ್ದರಿಂದ ಪುರೋಹಿತರು ಅವನಿಗೆ ಕೊಟ್ಟ ಆದೇಶದಂತೆ, ಅವನು ಅದರ ಸ್ಥಾನದಲ್ಲಿ ಬಲಿಯಾಗಲು ನರಪಶುವೊಂದು ದೊರೆಯುವುದೋ? - ಎಂದು ಹುಡುಕಿಕೊಂಡು ಹೊರಟನು.

ನಾನಾದೇಶಗಳನ್ನು ಹುಡುಕುತ್ತಿದ್ದ ಆತನಿಗೆ  ಕೊನೆಗೆ ಭೃಗುತುಂಗವೆಂಬ ಪರ್ವತಶಿಖರದಲ್ಲಿ ತಪಸ್ಸಾಚರಿಸುತ್ತಿದ್ದ ಋಚೀಕಮುನಿಯ ಭೇಟಿಯಾಯಿತು. ಆ ಬ್ರಹ್ಮರ್ಷಿಗಿದ್ದ ಮೂವರು ಗಂಡುಮಕ್ಕಳಲ್ಲಿ ಒಬ್ಬರು ಈ ಯಜ್ಞಕ್ಕೆ ಪಶುವಾಗಲೊಪ್ಪಿದರೆ, ತಾನು ಅವರಿಗೆ ಒಂದು ಲಕ್ಷ ಗೋವುಗಳನ್ನು ಕೊಡುವುದಾಗಿ ರಾಜನು ಹೇಳಿದನು. ತಂದೆಯು ಹಿರಿಯ ಮಗನನ್ನೂ, ತಾಯಿಯು ಕಿರಿಯ ಮಗನನ್ನೂ ಬಿಟ್ಟಿರಲಾರೆವೆಂದಾಗ, ಮಧ್ಯಮಪುತ್ರನಾದ ಶುನಃಶೇಫನು ತನ್ನನ್ನೇ ತನ್ನ ತಂದೆ-ತಾಯಿಯರು ಕೊಡಲೊಪ್ಪಿದ್ದಾರೆ ಎಂದು ನಿಶ್ಚಯಿಸಿ, ಧರ್ಮಕಾರ್ಯಕ್ಕೆ ಮುಂದಾದನು. 

ಅವನು ಬಲಿಪಶುವಾಗಲು ಒಪ್ಪಿ, ರಾಜನೊಂದಿಗೆ ಹೊರಟಾದ ಮೇಲೆ ದಾರಿಯಲ್ಲಿ ಸಿಕ್ಕವರು ವಿಶ್ವಾಮಿತ್ರಮುನಿಗಳು. ಅವರು ತನ್ನ ಸೋದರಮಾವ. ಅವರನ್ನು ಕಂಡು, ಪ್ರಯಾಣದಿಂದ ಆಯಾಸಗೊಂಡಿದ್ದ ಶುನಃಶೇಫನಿಗೆ ಉತ್ಕಟವಾದ ದುಃಖವುಂಟಾಯಿತು. ಅವರಿಗೆ ಶರಣುಹೋಗಿ, ಅವರ ಧರ್ಮದೃಷ್ಟಿಯನ್ನೂ ಕೊಂಡಾಡಿ, ಅವನು ಅವರಲ್ಲಿ ಹೀಗೆ ಬೇಡಿಕೊಂಡನು: "ಮುನಿಗಳೇ! ರಾಜನ ಯಜ್ಞವೂ ಸಂಪನ್ನಗೊಳ್ಳಬೇಕು. ನಾನೂ ಉಳಿದುಕೊಂಡು ದೀರ್ಘಾಯುವಾಗಿ, ತಪಸ್ಸನ್ನಾಚರಿಸುವಂತಾಗಬೇಕು. ತಾವೇ ನನ್ನನ್ನು ಕಾಪಾಡಬೇಕು", ಎಂದು.

ವಿಶ್ವಾಮಿತ್ರರಿಗೆ ಮೊದಲು ಹೊಳೆದ ದಾರಿಯೆಂದರೆ, ತಮ್ಮ ಮಕ್ಕಳನ್ನೇ ಶುನಃಶೇಫನ ಸ್ಥಾನದಲ್ಲಿ ಕಳಿಸಿಕೊಡುವಂತಹುದು. ಧರ್ಮಪರಾಯಣರಾದ ತಮ್ಮ ಮಕ್ಕಳು ಈ ದೊಡ್ಡ ಧರ್ಮಕಾರ್ಯಕ್ಕೆ ಸಹಾಯಕರಾದರೆ, ಅವರಿಗೂ, ಅವರನ್ನು ಪುತ್ರರನ್ನಾಗಿ ಪಡೆದ ತಮಗೂ, ಶ್ರೇಯಸ್ಸೆಂದೆಣಿಸಿದರು. ಆದರೆ ಆ ಮಕ್ಕಳು ನಕ್ಕುಬಿಟ್ಟು ಅಹಂಕಾರದಿಂದ ನಿರಾಕರಿಸಿ ಶಾಪಕ್ಕೆ ತುತ್ತಾದರು. 

ಆದರೂ ಶರಣಾಗತನಾಗಿದ್ದ ಈ ಬಾಲಕನಿಗೆ ಬೇರೊಂದು ರಕ್ಷಣೆ ಯೋಚಿಸಲೇಬೇಕೆಂದು, ಮೇಧಾವಿಗಳೂ ತಪಸ್ವಿಗಳೂ ಆಗಿದ್ದ ಆ ಮುನಿಗಳು ಎರಡು ರಹಸ್ಯಮಂತ್ರಗಳನ್ನು ಶುನಃಶೇಫನಿಗೆ ಉಪದೇಶಿಸಿದರು. ಯಜ್ಞಕಾಲದಲ್ಲಿ ದೇವತೆಗಳನ್ನು ಅವುಗಳ ಮೂಲಕ ಸ್ತುತಿಸಲು ಅವನಿಗೆ ಹೇಳಿದರು. ಸಮಾಧಾನಗೊಂಡ ಆ ಬಾಲಕನು ಸಂತೋಷವಾಗಿ ರಾಜನೊಂದಿಗೆ ಯಜ್ಞಕ್ಕೆ ತೆರಳಿದನು. ಅವನನ್ನು ಯೂಪಸ್ತಂಭ(ಯಜ್ಞದಲ್ಲಿ ಬಲಿಪಶುವನ್ನು ಕಟ್ಟುವ ಕಂಬ)ಕ್ಕೆ ಕಟ್ಟಿದಾಗ, ಆ ರಹಸ್ಯಮಂತ್ರಗಳಿಂದ ಇಂದ್ರ-ಉಪೇಂದ್ರರನ್ನು ಭಕ್ತಿಯಿಂದ ಸ್ತುತಿಸಿದನು. ಪ್ರಸನ್ನರಾದ ಆ ದೇವತೆಗಳು ಅವನಿಗೆ ದೀರ್ಘಾಯುಸ್ಸನ್ನೂ, ರಾಜನಿಗೆ ಸಂಪೂರ್ಣ ಯಜ್ಞಫಲವನ್ನೂ ಕರುಣಿಸಿದರು.

ಈ ಕಥೆಯ ಪ್ರಸಂಗದಲ್ಲಿ ಬರುವ ಪ್ರಶ್ನೆಗಳೂ ಹಲವು, ಪಾಠಗಳೂ ಹಲವು. ಅದಲ್ಲಿ ಕೆಲವನ್ನು ಇಲ್ಲಿ ವಿಮರ್ಶಿಸೋಣ. ವಿಶ್ವಾಮಿತ್ರರೂ ಇತರ ಋಷಿಗಳೂ ವಿನಾ (ಭೌತಿಕ)ಕಾರಣವೇ ಯಜ್ಞವನ್ನಾಚರಿಸುತ್ತಿದ್ದದ್ದು. ಈಗ ಅಂಬರೀಷನು ಮಾಡುತ್ತಿದ್ದ ಯಾಗಕ್ಕ್ಕೂ ಇಂಥದ್ದೇ ಕಾರಣವೆಂದಿರಲಿಲ್ಲ: ಯಜ್ಞಗಳನ್ನೂ ತಪಸ್ಸನ್ನೂ ಧರ್ಮಿಷ್ಠರು ನಡೆಸುತ್ತಿದ್ದುದು ಧರ್ಮರಕ್ಷಣೆಗಾಗಿ. ಅಂಬರೀಷನಾದರೋ ಬಲಿಷ್ಠನಾದ ರಾಜ. ಅವನಿಗೆ ಒಬ್ಬ ನರಪಶು ಮಾತ್ರ ಬೇಕಿದ್ದರೆ, ಬಲಪ್ರಯೋಗದಿಂದ ಯಾರನ್ನಾದರೂ ಒಯ್ಯಬಹುದಿತ್ತು. ಆದರೆ ಬಲವಿದ್ದರೂ ಧರ್ಮಿಯಾಗಿದ್ದ ಅವನು  ಹಾಗೆ ಮಾಡದೇ, ಧರ್ಮ್ಯವಾದ ರೀತಿಯಲ್ಲೇ ಅರಸಿ ಹೊರಟನು. 

ಅವನ ಧರ್ಮೋದ್ದೇಶವನ್ನು ಗುರುತಿಸಿಯೇ ಶುನಃಶೇಫನೂ ತನ್ನನ್ನು ಕೊಟ್ಟುಕೊಂಡದ್ದು (ತನ್ನ ತಂದೆತಾಯಿಯ ಪಕ್ಷಪಾತವನ್ನು ಕಂಡು ಸ್ವಲ್ಪ ಬೇಸರಿಸಿದ್ದರೂ). ಶ್ರೀರಂಗಮಹಾಗುರುಗಳು ವಿವರಿಸಿದಂತೆ " ಸತ್ಯಮೇವೋದ್ಧರಾಮ್ಯಹಮ್ ಎಂದು ಮೇಲೆತ್ತಿ ಬೆಳಗಿಸಿದಂಥ ಸತ್ಯ-ಧರ್ಮಗಳಿಗೆ ಅವನು [ರಾಜನು] ಪ್ರತಿನಿಧಿಯಾಗಿರುವಾಗ ಮಾತ್ರ ಅವನಿಗೆ ಪ್ರಜೆಗಳು ತಲೆಬಾಗಿದ್ದು". 

ಶುನಃಶೇಫನಿಗೆ ವಿಶ್ವಾಮಿತ್ರರನ್ನು ಕಂಡಾಗ ತಾನು ಜೀವಿಸಬೇಕೆಂಬಾಸೆ ಉಂಟಾದರೂ, ಅಂಬರೀಷನ ಧ್ಯೇಯೋದ್ದೇಶಗಳ ಬಗ್ಗೆ ಅವನಿಗೆ ಸಂಪೂರ್ಣ ನಂಬಿಕೆಯಿದ್ದ ಕಾರಣದಿಂದಲೇ ರಾಜನ ಯಜ್ಞವೂ ಸಫಲವಾಗಬೇಕೆಂಬ ಬೇಡಿಕೆಯಿಟ್ಟದ್ದು. ಇಲ್ಲಿ ರಾಜನ ಧಾರ್ಮಿಕವಾದ ನಡತೆ-ಶಾಸನಗಳಿಂದ ಆ ದೇಶದಲ್ಲಿದ್ದ ಧರ್ಮದ ಪಾರಮ್ಯ ಅರಿವಿಗೆ ಬರುತ್ತದೆ. 

ಮಹಾಭಾರತದಲ್ಲಿ ಬಂದೊಂದು ಪ್ರಶ್ನೆಯೆಂದರೆ "ಕಾಲವು ರಾಜನಿಗೆ ಕಾರಣವೋ, ರಾಜನು ಕಾಲಕ್ಕೆ ಕಾರಣನೋ?" ಎಂದು. ಅಲ್ಲಿಯೇ ಬರುವ ಉತ್ತರವೆಂದರೆ: ಇದರ ವಿಷಯದಲ್ಲಿ ಸಂಶಯವೇ ಬೇಡ - ರಾಜನೇ ಕಾಲಕ್ಕೆ ಕಾರಣ (ರಾಜಾ ಕಾಲಸ್ಯ ಕಾರಣಮ್). 

ಆಳುವವ ಒಳ್ಳೆಯವನಾಗಿದ್ದರೆ  ರಾಜ್ಯಕ್ಕೆ ಒಳ್ಳೆಯ ಕಾಲ ಬರುವುದು - ಎಂಬ ನಿಶ್ಚಯ ಅಲ್ಲಿ ಬಂದಿದೆ. ಈಚೆಗೆ ಅದು ನಮ್ಮ ನಿಮ್ಮ ಅನುಭವಕ್ಕೂ ಬಂದಿರಬಹುದು, ಅಲ್ಲವೆ?

ಸೂಚನೆ: 2/06/2024 ರಂದು ಈ ಲೇಖನ ವಿಜಯವಾಣಿಯ ಸುದಿನ ಲ್ಲಿ ಪ್ರಕಟವಾಗಿದೆ.

ಯಕ್ಷ ಪ್ರಶ್ನೆ 92 (Yaksha prashne 92)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)


ಪ್ರಶ್ನೆ – 91 ಮೋಹ ಎಂದರೆ ಯಾವುದು?

ಉತ್ತರ - ಧರ್ಮದ ವಿಷಯದಲ್ಲಿ ಸರಿಯಾದ ಅರಿವು ಇಲ್ಲದಿರುವುದು.  

ಮೋಹ ಎಂಬುದು ಮನಸ್ಸಿನ ಅಂಧಕಾರ. ಯಾವುದನ್ನು ಮನಸ್ಸು ಸರಿಯಾಗಿ ತಿಳಿದುಕೊಳ್ಳಬೇಕಿತ್ತೋ ಅದನ್ನು ಹಾಗೆ ತಿಳಿಯದೇ ವಿಪರೀತವಾಗಿ ತಿಳಿಯುವುದು. ಸಾಮಾನ್ಯವಾಗಿ ಪುತ್ರಮೋಹ, ಧನಮೋಹ, ಅಧಿಕಾರದ ಮೋಹ ಎಂದೆಲ್ಲಾ ನಾವುಕೇಳಿದ್ದೇವೆ. ಆದರೆ ಇಲ್ಲಿ ಯಕ್ಷನ ಪ್ರಶ್ನೆಯ ಆಶಯ ಇದಕ್ಕೂ ಮೂಲವಾದುದು. ಮತ್ತು ಇಂಥ ಮೋಹದ ಆವಿರ್ಭಾವಕ್ಕೆ ಕಾರಣೀಭೂತವಾದು ಯಾವುದು ? ಎಂಬುದು. ಧರ್ಮದ ವಿಷಯದಲ್ಲಿ ಅರಿವಿನ ಕೊರತೆ ಅಥವಾ ಅರಿವೇ ಇಲ್ಲದಿರುವುದು ಅಥವಾ ವಿರುದ್ಧವಾದ ಅವಿವೇಕದ ಅರಿವು. ತುಂಬಾ ಜನರಿಗೆ ಧರ್ಮದ ಎಂದರೇನು? ಎಂಬುದಕ್ಕೆ ತುಂಬಾ ಗೊಂದಲವಿದೆ. ಈ ಗೊಂದಲವೂ ಸರಿಯಾದ ಧರ್ಮದ ಅರಿವಿಗೆ ತೊಡಕಾಗಿದೆ. ಅದನ್ನು ಬಿಡಿಸಲು ಧರ್ಮರಾಜನಿಗೆ ಈ ಪ್ರಶ್ನೆಯನ್ನು ಕೇಳಿರಬಹುದು. ಅದಕ್ಕೆ ಧರ್ಮಜನ ಉತ್ತರ ನಿಜಕ್ಕೂ ಹೆಮ್ಮೆ ಪಡುವಂತಹದ್ದು. ಗೊಂದಲದ ನಿವಾರಣೆಗೆ ಅದರ ಮೂಲಕಾರಣವನ್ನು ಉತ್ಪಾಟನೆ ಮಾಡುವುದೇ ಶ್ರೇಷ್ಠವಾದ ವಿಧಾನ. ಅದನ್ನೇ ಇಲ್ಲಿ ಧರ್ಮಜನು ಹೇಳಿದ್ದು. ಹಾಗಾಗಿ ನಾವಿಲ್ಲಿ ಧರ್ಮದ ನಿಜವಾದ ಅರಿವನ್ನು ಪಡೆದರೆ ಅದು ಯಾವ ರೀತಿ ಮೋಹನಾಶಕ ಎಂಬುದನ್ನು ಸುಲಭವಾಗಿ ಪತ್ತೆಹಚ್ಚಬಹುದು. 

ಧರ್ಮದ ನಿಜವಾದ ಅರಿವೇ ಇಲ್ಲದಿದ್ದಾಗ ಏನಾಗುತ್ತದೆ? ಶ್ರೀರಂಗ ಮಹಾಗುರುಗಳು ಧರ್ಮದ ಬಗ್ಗೆ ವಿಷಯವನ್ನು ತಿಳಿಸುವಾಗ ಈ ಕಥೆಯನ್ನು ಉದಾಹರಿಸಿದ್ದರಂತೆ. 'ಹಾಲು ನೆತ್ತಿಗೆ ಏರಿ ಮಗು ಸತ್ತಾಗ, ಕುರುಡಗಂಡನಿಗೆ ಬಿಳ್ಳಗಿರುವ ಹಾಲನ್ನು ಪರಿಚಯಿಸುವಾಗ ಬೆಳ್ಳಗಿರುವ ಕೊಕ್ಕರೆಯಂತೆ' ಎಂದಳಂತೆ. ಆಗ ಗಂಡನು "ಕೊಕ್ಕರೆಯಂತಹ ಹಾಲನು ಕುಡಿದರೆ ಮಗು ಸಾಯಿದೆ ಇರುವುದೇ?" ಎಂದನಂತೆ. ಇದೇ ರೀತಿಯಾಗಿದೆ ಧರ್ಮದ ಬಗೆಗಿನ ಇಂದಿನ ವಿವರಣೆ. ಪ್ರತಿಯೊಂದು ವಸ್ತುವಿನ ಅದರದರ ಸಹಜವಾದ ಸ್ಥಿತಿ ಎಂಬ ಅರ್ಥವನ್ನು ಧರ್ಮ ಎಂಬ ಪದವು ಕೊಡುತ್ತದೆ? ಅದರದರ ಸಹಜವಾದ ಸ್ಥಿತಿಯಿಂದ ಜಾರಿದಾಗ ಧರ್ಮ ಕೆಟ್ಟಿತು ಎಂಬ ಪದವು ಬರುತ್ತದೆ. ಆದ್ದರಿಂದ ಒಂದು ಬಗೆಯ ಕಂಡೀಶನ್ ಅಥವಾ ಒಂದು ಸ್ಥಿತಿಯನ್ನೇ 'ಧರ್ಮ' ಎನ್ನುತ್ತಾರೆ. ಹಾಗಾಗಿ ಈ ನಿಸರ್ಗದಲ್ಲಿರುವ ಪ್ರತಿಯೊಂದು ಪದಾರ್ಥದ ಅದರದರ ತನವನ್ನು ನಾವು ಅರಿತಿರಬೇಕಾಗುತ್ತದೆ. ಅಂದರೆ ಯಾವುದೇ ಪದಾರ್ಥವನ್ನು ಸೃಷ್ಟಿಸುವ ಮೊದಲು ಅದಕ್ಕೆ ಯಾವ ಉದ್ದೇಶವನ್ನು ಈಡಿರಿಸುವಂತೆ ಆ ಸೃಷ್ಟಿಕರ್ತನ ಸಂಕಲ್ಪವಿರುತ್ತದೆಯೋ ಅದನ್ನೇ ಧರ್ಮ ಎನ್ನಬಹುದು. ಮತ್ತು ಅದು ಹಾಗೇ ಉಳಿಸಬೇಕಾದರೆ ಅದಕ್ಕೊಂದು ಕಾರ್ಯ ಅಥವಾ ಆಚರಣೆ ಬೇಕಾಗುತ್ತದೆ. ಅದನ್ನೂ ಧರ್ಮ ಎಂದೇ ಕರೆಯುತ್ತಾರೆ. ಅಂದರೆ ಯಾವ ಸ್ಥಿವಿಶೇಷವನ್ನು ಉಳಿಸಬೇಕಾದರೆ ಯಾವ ಬಗೆಯ ಸಾಧಸಂಪತ್ತಿಗಳು ಯಾವ ಯಾವ ಎಷ್ಟು ? ಹೇಗೆ? ಇತ್ಯಾದಿಯಾದ ಪ್ರಮಾಣಸಮ್ಮತವಾದ ವಿಷಯ ಬರುವುದೋ ಅದನ್ನು ಧರ್ಮ ಎನ್ನಬೇಕಾಗುತ್ತದೆ. ಇಂತಹ ಅರಿವು ಉಳ್ಳವನನ್ನು 'ಧರ್ಮಜ್ಞ' ಎಂದು ಕರೆಯುತ್ತಾರೆ. ಇಂತವರಿಗೆ ಯಾವ ಬಗೆಯ ಮೋಹಕ್ಕೂ ಆಸ್ಪದವಿರುವುದಿಲ್ಲ. ಅವನು ಮಾಡುವ ಪ್ರತಿಯೊಂದು ಕಾರ್ಯವೂ ಕಾರ್ಯಕಾರಣಭಾವ ಸಂಗತವಾಗಿಯೇ ಇರುತ್ತದೆ. ಇಲ್ಲಿ ಯಾವುದೇ ಕಾರಣಕ್ಕೂ ಮೋಹವೆಂಬುದು ಬರಲು ಸಾಧ್ಯವೇ ಇಲ್ಲ ಎಂಬುದು ಧರ್ಮಜ್ಞರ ಮಾತಾಗಿದೆ.  

ಸೂಚನೆ : 2/6/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಕೃಷ್ಣಕರ್ಣಾಮೃತ - 16 ತರುಣ-ದೈವವು ಕರುಣಿಸುವ ಜೀವ ತಣಿಪ ತಂಪು (Taruna-daivavu karuNisuva Jiva TaNipa Tampu

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)ಬೆಳಕನ್ನು ಬಯಸದ ಯಾವ ಜೀವಿಯೂ ಇರಲಾರದೇನೋ? ರಾತ್ರಿಯ ಹೊತ್ತು ಮಾತ್ರವೇ ಸಂಚರಿಸುವ ಪ್ರಾಣಿಗಳಿಗೆ ಬೆಳಕು ಸ್ವಲ್ಪವಷ್ಟೇ ಸಾಕು - ಎನ್ನುವುದನ್ನು ಬಿಟ್ಟರೆ, ಅವುಗಳಿಗೂ ಬೇಳಕು ಬೇಕೇ. ಬೆಳಕು ಬೇಕೆನ್ನುವ ನಮಗೂ ಇಷ್ಟು ಬೇಕು, ಅಷ್ಟು ಬೇಡ (ಕಣ್ಣು ಕುಕ್ಕುವಷ್ಟು ಬೇಡ) - ಎಂಬ ಇತಿಮಿತಿಗಳು ಇದ್ದೇ ಇರುತ್ತವೆ. ಇದೆಲ್ಲಾ ನಾವು ಕಾಣುವ ಹೊರಬೆಳಕಿನ ಬಗೆಗಿನ ಮಾತು. ಆದರೆ ಎಲ್ಲ ಬೆಳಕಿಗೂ ಮೂಲವಾದ ಬೆಳಕು ಒಂದಿದೆ. ಭಗವಂತನೆಂಬ ಆ ಬೆಳಕು ಅತಿಪ್ರಕಾಶಮಯ; ಆದರೂ ಅಷ್ಟೇ ಆಹ್ಲಾದಕರವಾದದ್ದೂ ಹೌದು.

ಅಂತಹ ಬೆಳಕು ನಮ್ಮ ಚಿತ್ತದಲ್ಲಿ ಬೆಳಗಲಿ - ಎಂದು ಆಶಿಸುತ್ತಾನೆ, ಲೀಲಾಶುಕ. ಆ ಜ್ಯೋತಿಸ್ಸು ಕೆಲವೊಮ್ಮೆ ಮೈತಾಳಿ ಬರುವುದೂ ಉಂಟು. ರಾಮ, ಕೃಷ್ಣ - ಮುಂತಾದ ಭಗವದ್-ಅವತಾರಗಳು, ನಮ್ಮ ಬಾಳು ಬೆಳಕಾಗಲೆಂದೇ ಶರೀರ-ಧಾರಣೆ ಮಾಡಿರುವ ಆ ಜ್ಯೋತಿಯೇ.

ಕವಿಯ ಇಷ್ಟ-ದೈವವಾದ ಕೃಷ್ಣನು ಜಗತ್ತಿನಲ್ಲೇ ಒಂದು ಅದ್ಭುತ. ಯಾವಯಾವುದನ್ನೋ ಅದ್ಭುತವೆಂದುಕೊಳ್ಳುತ್ತೇವೆ. ಆದರೆ ನಮ್ಮ ಚೇತಸ್ಸಿನಲ್ಲಿ ಬೆಳಗುವ ಈ ಅದ್ಭುತ-ಜ್ಯೋತಿಯು ವಿಶಿಷ್ಟವಾದದ್ದು. ಅದು ಏಕಾಭಿರಾಮವಾದದ್ದು. ಅಭಿರಾಮವೆಂದರೆ ಅತ್ಯಂತವಾಗಿ ಸಂತೋಷವನ್ನು ಕೊಡುವಂತಹುದು. ಏಕವೆಂಬುದರ ಅರ್ಥ ಅನೇಕ: ಯಾವುದು ಮುಖ್ಯವೋ ಅದು ಏಕ; ಯಾವುದಕ್ಕೆ ಸರಿಸಾಟಿಯಿಲ್ಲವೋ ಅದು ಏಕ; ಮಿಕ್ಕವು ಅಳಿದರೂ ಅಳಿಯದೇ ಉಳಿಯುವುದು ಏಕ. ಹೀಗಾಗಿ, ಏಕಾಭಿರಾಮವೆಂದರೆ ತನ್ನಷ್ಟು ಸಂತೋಷಪ್ರದವಾದುದು ಮತ್ತೊಂದಿಲ್ಲದಿರುವುದು.

ಲೋಕದಲ್ಲಿ ನಾವು ಕಾಣುವ ಅದ್ಭುತಗಳು ಸ್ವಲ್ಪ  ಕಾಲದ ಮೇಲೆ ತಮ್ಮ ಆಕರ್ಷಣೆಯನ್ನು  ಕಳೆದುಕೊಳ್ಳುತವೆ. ಎಷ್ಟೆಷ್ಟು ಕಂಡರೂ ಮತ್ತಷ್ಟು ಆಸ್ವಾದಿಸಬೇಕೆನಿಸುವ, ಸಾಟಿಯಿಲ್ಲದ ಸವಿಯ, ಒಳಬೆಳಕೇ ಕೃಷ್ಣರೂಪವಾಗಿ ಬಂದಿರುವ ಜ್ಯೋತಿಸ್ಸು.

ಹೀಗೆ ಹೇಳಿದರೆ, ಆಹಾ ಅದು ಹೇಗಿರುವುದು ಎಂದು ವಿಸ್ತರಿಸಿ ಹೇಳಬಾರದೆ? - ಎಂಬ ಅಪೇಕ್ಷೆಯು ಉಂಟಾಗುವುದು ಸಹಜವೇ. ಅದರ ರೂಪವೆಂತು, ಗುಣವೆಂತು, ಕ್ರಿಯೆಯೆಂತು? - ಇವನ್ನೆಲ್ಲ ತಿಳಿಯಬೇಕೆನಿಸುವ ನಮ್ಮ ಅಪೇಕ್ಷೆಗೆ ಅನುಗುಣವಾಗಿಯೇ ಲೀಲಾಶುಕನು ಅವೆಲ್ಲವನ್ನೂ ಚಿತ್ರಿಸುತ್ತಾನೆ.

ಎಳೆ ಮಕ್ಕಳಲ್ಲೊಂದು ಜೀವಕಳೆ ತುಂಬಿರುತ್ತದೆ; ವಾರ್ಧಕದಲ್ಲೂ ಹಸನ್ಮುಖರಾಗಿ ಸಂತೋಷ-ಪ್ರದರು ಇರಬಹುದು; ಆದರೆ ಯೌವನದ ಸೊಬಗಿಗೆ ಸಮನುಂಟೇ? ಯೌವನದಲ್ಲೂ ಆದಿ-ಮಧ್ಯ-ಅಂತಗಳಿರುವುವು. ಅವೆಲ್ಲದರಲ್ಲೂ ನವ-ಯೌವನವು ಸೊಗಸಿನ ಅವಸ್ಥೆ. ಇನ್ನು ಶ್ರೀಕೃಷ್ಣನ ನವ-ಯೌವನವೆಂದರೆ ಮತ್ತೂ ವಿಶೇಷವೇ ಸರಿ. ಅಲ್ಲದೆ ಅದು ಸದಾ ಪ್ರೋನ್ಮೀಲನಗೊಳ್ಳುತ್ತಿರುವುದು; ಮತ್ತೆ ಮತ್ತೆ ಉಕ್ಕುತ್ತಿರುವ ಯುವಾವಸ್ಥೆಯದು; ಕಳೆಗುಂದದ ಜವ್ವನ ಕೃಷ್ಣನದು.

ಯೌವನವು ಇಡೀ ಶರೀರದಲ್ಲೇ ಕಾಣಿಸಿಕೊಳ್ಳುತ್ತದಷ್ಟೆ? ಸರ್ವಾಂಗಗಳಿಗೂ ಸೌಂದರ್ಯವನ್ನು ಸುರಿಯುವ ಸ್ಥಿತಿಯೇ ಯೌವನ. ಅದು ವಿಶೇಷವಾಗಿ ತೋರಿಕೊಳ್ಳುವುದು ಮುಖದಲ್ಲಿಯೇ. ಶ್ರೀಕೃಷ್ಣನ ಆನನವು ಮಾಧುರ್ಯ-ಮಗ್ನವಾದುದು. ಎಂದರೆ ಮಧುರತೆಯಲ್ಲಿಯೇ ಮುಳುಗಿರುವಂತಹುದು. ಮಧುರ-ರಸದಲ್ಲಿ ಮಜ್ಜನಮಾಡಿರುವ ಮೊಗವಿದು.

ಚಿತ್ರದಲ್ಲಿ ಕೃಷ್ಣನ ಛಾಪು ಮೂಡಿಸಲು ಚಿತ್ರಕಾರರು ಕಷ್ಟಪಡಬೇಕಾದುದೇ ಇಲ್ಲ. ಮೇಲೆ ನವಿಲುಗರಿಯ ರೇಖೆಯನ್ನು ಎಳೆಯುತ್ತಲೇ ಕೃಷ್ಣನ ಸ್ಫುರಣವನ್ನದು ತಂದುಕೊಡುವುದು. ಕೃಷ್ಣನ ಉತ್ತಂಸವೇ ಈ ಬರ್ಹ. ಉತ್ತಂಸವೆಂದರೆ ಶಿರೋ-ಭೂಷಣ, ತಲೆಗೆ ಅಲಂಕಾರವಾದದ್ದು. ಬರ್ಹವೆಂದರೆ ಗರಿ; ಎಂದೇ ನವಿಲಿಗೆ ಬರ್ಹಿಯೆನ್ನುವುದು.

ಶ್ರೀಕೃಷ್ಣನ ಕುಂತಲ-ಭರವನ್ನು, ಎಂದರೆ ಕೇಶ-ರಾಶಿಯನ್ನು, ಅಲಂಕರಿಸಿದೆ ಈ ಗರಿ. ಅದಾದರೂ ವಿಲಾಸಮಯವಾದದ್ದು. ಮಂದಾನಿಲವು ಬೀಸಿದಾಗ ಆ ಬರ್ಹವು ಒಂದಿಷ್ಟು ಈ ಕಡೆಗೂ ಆ ಕಡೆಗೂ ಆಡುವುದಿದೆಯಲ್ಲಾ, ಅದುವೇ ಅದರ ವಿಲಾಸ: ನಿಂತಾಗಿನ ಕುಳಿತಾಗಿನ ಭಂಗಿಯಲ್ಲೂ, ನಡೆಯಲ್ಲೂ ಕಾಣುವ ಅದೇನೋ ವೈಶಿಷ್ಟ್ಯವೇ ವಿಲಾಸ. ಹೀಗೆ ವಿಲಾಸವುಳ್ಳ ಬರ್ಹವು ಕೃಷ್ಣನ ದಟ್ಟವಾದ ಕುಂತಲಗಳ ನಡುವಣವಿರುವ ಶೀರ್ಷಾಲಂಕಾರವಾಗಿದೆ. ನವಿಲುಗರಿಯ ಆಕರ್ಷಣೆ ಯಾರಿಗಿಲ್ಲ? ಹೀಗೆ, ಸೆಳೆಯುವ ಗರಿಯು, ಸೊಗಸನ್ನು ಬೆಳೆಸಿದೆ, ಕೃಷ್ಣನ ಮಧುರ-ಮುಖದಲ್ಲಿ.

ಇದು ಆತನ ನೋಟದ ಸೊಬಗಾದರೆ, ಆತನ ಚೇಷ್ಟೆಯ ಸೊಬಗೂ ಹೃದ್ಯವೇ. ಶಿರದ ಗರಿಯ ಜೊತೆಗೆ ಕೈಯ ಕೊಳಲೆಂದರೆ ಅದು ಕೃಷ್ಣನಲ್ಲದೆ ಮತ್ತಾರು? ಕೃಷ್ಣನು ಗಾನ-ಲೋಲನು ಹೌದೇ; ಜೊತೆಗೆ ಕಿವಿಗಳನ್ನು ತಣಿಸುವ ನಾದವು ಆತನ ವೇಣುವಿನಿಂದ ಹೊಮ್ಮುವುದೇ. ಬರೀ ಕಿವಿಗಳನ್ನೇನು? ಜೀವವನ್ನೇ ತಣಿಸುವ ಪರಿ ಕೃಷ್ಣನ ಕೊಳಲಿನದು. ಎಂದೇ ನಮ್ಮ ಕವಿಯು ಕೇವಲ 'ವೇಣುನಾದ'ವೆನ್ನುವುದಿಲ್ಲ. 'ವೇಣುಪ್ರಣಾದ'ವೆನ್ನುತ್ತಾನೆ. ಏನು ಪ್ರಣಾದವೆಂದರೆ? ಪ್ರಕೃಷ್ಟವಾದ ನಾದವೇ ಪ್ರಣಾದ. ಯಾವುದರಲ್ಲಿ ಪ್ರಕರ್ಷವಿರುತ್ತದೋ ಅದು ಪ್ರಕೃಷ್ಟ. ಪ್ರಕರ್ಷವೆಂದರೆ ಹೆಚ್ಚುಗಾರಿಕೆ. ಹೀಗಾಗಿ ಅತಿಶಯಿತವಾದ ನಾದವನ್ನು ತರುತ್ತಿದೆ, ಕೃಷ್ಣನ ಕೊಳಲು.

ಕೃಷ್ಣನು ಹಿಂದೆಂದೋ ಕೊಳಲನ್ನು ನುಡಿಸಿದ್ದನಲ್ಲವೇ? - ಎಂದೆನ್ನಬೇಡಿ. ಏಕೆ? ಅದು ಈಗಲೂ ಕೇಳಿಬರುವಂತಹುದು, ಕೇಳಿಬರುತ್ತಿರುವಂತಹುದು – ಲೀಲಾಶುಕನಿಗೆ, ಅವನಂತಿರುವವರಿಗೆ. ಎಂದೇ ಅದನ್ನು ಪ್ರವಿಲಸತ್ - ಎನ್ನುತ್ತಾನೆ. ಅದರ ವಿಲಾಸವು ಈಗಲೂ ನಡೆಯುತ್ತಿರುವಂತಹುದು. ಆ ವಿಲಾಸವೂ ಉತ್ಕೃಷ್ಟವಾದುದೇ. ಎಂದೇ ಅದು ಪ್ರವಿಲಾಸ. ಹೀಗೆ ವೇಣುವಿನಿಂದ ಹೊಮ್ಮುತ್ತಿರುವುದು ಬರೀ ನಾದವಲ್ಲ, ಪ್ರಣಾದ; ವೇಣುಪ್ರಣಾದದ ವಿಲಾಸವೆಂದರೆ ಸಾಲದು, ಪ್ರವಿಲಾಸವೆಂದೇ ಹೇಳಬೇಕು.

ಒಣಗಿದ ಬಾಯಿಯು ತಣಿಯುವುದು ತಣ್ಣೀರಿನಿಂದ; ಆದರೆ ಜೀವವು ತಣಿಯುವುದು ಅಮೃತವೊಂದರಿಂದಲೇ. ಕೃಷ್ಣನ ವೇಣುವಿನಿಂದ ಹೊಮ್ಮುವ ನಾದವು ಕಿವಿಗಳಿಗೂ ಇಂಪೇ. ಕೇಳಿದರೆ ಮತ್ತಷ್ಟು ಕೇಳಬೇಕೆನ್ನಿಸುವುದೇ. ಆದರೆ ಅದು ಕಿವಿಗಳನ್ನು ತಣಿಸುವುದು ಮಾತ್ರವಲ್ಲ. ಕಿವಿದೆರೆಯ ಮೂಲಕ ಪ್ರವೇಶಿಸಿ ಜೀವವನ್ನೇ ಮುಟ್ಟುವಂತಹುದು. ಅರ್ಥಾತ್, ಇಂದ್ರಿಯದ ಕ್ಷೇತ್ರಕ್ಕಷ್ಟೇ ಸೀಮಿತವಲ್ಲ, ಅದು; ಇಂದ್ರಿಯಾತೀತವನ್ನೂ ಅದು ಸ್ಪರ್ಶಿಸುವುದು. ಸ್ಪರ್ಶಿಸುವುದೇನು? ತಣಿಸುವುದು. ತಾಪಗೊಂಡವರಿಗೆ ಬೇಕಾದದ್ದೇ ತಂಪು; ಜೀವನದಲ್ಲಿ ತಾಪಪಡದವರುಂಟೇ? ತಂಪು ಬಯಸದವರುಂಟೇ?

ಜೀವಕ್ಕೆ ತಂಪನ್ನು ತರುವುದು ಅಮೃತವೇ. ಶ್ರೀಕೃಷ್ಣನ ವೇಣುಪ್ರಣಾದವು ಹರಿಸುತ್ತಿರುವುದೂ ಅಮೃತವನ್ನೇ. ಅದು ಎಂದೋ ನಡೆದುಹೋದದ್ದೆನಿಸದೆ ಇಂದಿಗೂ ಪ್ರಸ್ತುತವಾದದ್ದೆಂಬುದನ್ನು ಕವಿಯು ತಿಳಿಸಿಕೊಡುತ್ತಿದ್ದಾನೆ.

ಹೀಗೆ ಜೀವತಣಿಯುವಂತಿರುವ ವೇಣುನಾದವು ಯಾರ ಮೇಲೆ ಏನು ಪರಿಣಾಮ ಬೀರಿತೆಂದು ಕೇಳುವುದು ಮುಂದಿನ ಪ್ರಶ್ನೆ.

ಮತ್ತಾರು? ಆತನ ರೂಪ-ಗುಣ-ಕ್ರಿಯೆಗಳಿಗೆ ಮನಸೋತ ಗೋಪಿಕೆಯರು. ತುಂಬಿದೆದೆಯ ಗೋಪಿಯರು ಆತನನ್ನು ಆರಾಧಿಸುವರು. ತಮ್ಮ ಕಾಮವನ್ನೂ ಭಗವಂತನಿಗೆ ಸಮರ್ಪಿಸುವ ಭಾಗ್ಯವುಳ್ಳವರವರು. ತಮ್ಮ ಸೌಂದರ್ಯವೆಲ್ಲವೂ ಭಗವತ್-ಪ್ರೀತಿ-ಕರವಾಗಲೆಂದು ಹಂಬಲಿಸುವ ಆ ಗೋಪಿಕೆಯರೇ ಧನ್ಯರು.

ಶ್ಲೋಕ ಹೀಗಿದೆ:

ಬರ್ಹೋತ್ತಂಸ-ವಿಲಾಸ-ಕುಂತಲ-ಭರಂ ಮಾಧುರ್ಯ-ಮಗ್ನಾನನಂ

ಪ್ರೋನ್ಮೀಲನ್ನವ-ಯೌವನಂ ಪ್ರವಿಲಸದ್-ವೇಣು-ಪ್ರಣಾದಾಮೃತಮ್ |

ಆಪೀನ-ಸ್ತನ-ಕುಡ್ಮಲಾಭಿರಭಿತೋ ಗೋಪೀಭಿರಾರಾಧಿತಂ

ಜ್ಯೋತಿಶ್ಚೇತಸಿ ನಶ್ಚಕಾಸ್ತು ಜಗತಾಮೇಕಾಭಿರಾಮಾದ್ಭುತಮ್ ||


ಸೂಚನೆ : 2/6/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.