Sunday, June 2, 2024

ಕೃಷ್ಣಕರ್ಣಾಮೃತ - 16 ತರುಣ-ದೈವವು ಕರುಣಿಸುವ ಜೀವ ತಣಿಪ ತಂಪು (Taruna-daivavu karuNisuva Jiva TaNipa Tampu

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)



ಬೆಳಕನ್ನು ಬಯಸದ ಯಾವ ಜೀವಿಯೂ ಇರಲಾರದೇನೋ? ರಾತ್ರಿಯ ಹೊತ್ತು ಮಾತ್ರವೇ ಸಂಚರಿಸುವ ಪ್ರಾಣಿಗಳಿಗೆ ಬೆಳಕು ಸ್ವಲ್ಪವಷ್ಟೇ ಸಾಕು - ಎನ್ನುವುದನ್ನು ಬಿಟ್ಟರೆ, ಅವುಗಳಿಗೂ ಬೇಳಕು ಬೇಕೇ. ಬೆಳಕು ಬೇಕೆನ್ನುವ ನಮಗೂ ಇಷ್ಟು ಬೇಕು, ಅಷ್ಟು ಬೇಡ (ಕಣ್ಣು ಕುಕ್ಕುವಷ್ಟು ಬೇಡ) - ಎಂಬ ಇತಿಮಿತಿಗಳು ಇದ್ದೇ ಇರುತ್ತವೆ. ಇದೆಲ್ಲಾ ನಾವು ಕಾಣುವ ಹೊರಬೆಳಕಿನ ಬಗೆಗಿನ ಮಾತು. ಆದರೆ ಎಲ್ಲ ಬೆಳಕಿಗೂ ಮೂಲವಾದ ಬೆಳಕು ಒಂದಿದೆ. ಭಗವಂತನೆಂಬ ಆ ಬೆಳಕು ಅತಿಪ್ರಕಾಶಮಯ; ಆದರೂ ಅಷ್ಟೇ ಆಹ್ಲಾದಕರವಾದದ್ದೂ ಹೌದು.

ಅಂತಹ ಬೆಳಕು ನಮ್ಮ ಚಿತ್ತದಲ್ಲಿ ಬೆಳಗಲಿ - ಎಂದು ಆಶಿಸುತ್ತಾನೆ, ಲೀಲಾಶುಕ. ಆ ಜ್ಯೋತಿಸ್ಸು ಕೆಲವೊಮ್ಮೆ ಮೈತಾಳಿ ಬರುವುದೂ ಉಂಟು. ರಾಮ, ಕೃಷ್ಣ - ಮುಂತಾದ ಭಗವದ್-ಅವತಾರಗಳು, ನಮ್ಮ ಬಾಳು ಬೆಳಕಾಗಲೆಂದೇ ಶರೀರ-ಧಾರಣೆ ಮಾಡಿರುವ ಆ ಜ್ಯೋತಿಯೇ.

ಕವಿಯ ಇಷ್ಟ-ದೈವವಾದ ಕೃಷ್ಣನು ಜಗತ್ತಿನಲ್ಲೇ ಒಂದು ಅದ್ಭುತ. ಯಾವಯಾವುದನ್ನೋ ಅದ್ಭುತವೆಂದುಕೊಳ್ಳುತ್ತೇವೆ. ಆದರೆ ನಮ್ಮ ಚೇತಸ್ಸಿನಲ್ಲಿ ಬೆಳಗುವ ಈ ಅದ್ಭುತ-ಜ್ಯೋತಿಯು ವಿಶಿಷ್ಟವಾದದ್ದು. ಅದು ಏಕಾಭಿರಾಮವಾದದ್ದು. ಅಭಿರಾಮವೆಂದರೆ ಅತ್ಯಂತವಾಗಿ ಸಂತೋಷವನ್ನು ಕೊಡುವಂತಹುದು. ಏಕವೆಂಬುದರ ಅರ್ಥ ಅನೇಕ: ಯಾವುದು ಮುಖ್ಯವೋ ಅದು ಏಕ; ಯಾವುದಕ್ಕೆ ಸರಿಸಾಟಿಯಿಲ್ಲವೋ ಅದು ಏಕ; ಮಿಕ್ಕವು ಅಳಿದರೂ ಅಳಿಯದೇ ಉಳಿಯುವುದು ಏಕ. ಹೀಗಾಗಿ, ಏಕಾಭಿರಾಮವೆಂದರೆ ತನ್ನಷ್ಟು ಸಂತೋಷಪ್ರದವಾದುದು ಮತ್ತೊಂದಿಲ್ಲದಿರುವುದು.

ಲೋಕದಲ್ಲಿ ನಾವು ಕಾಣುವ ಅದ್ಭುತಗಳು ಸ್ವಲ್ಪ  ಕಾಲದ ಮೇಲೆ ತಮ್ಮ ಆಕರ್ಷಣೆಯನ್ನು  ಕಳೆದುಕೊಳ್ಳುತವೆ. ಎಷ್ಟೆಷ್ಟು ಕಂಡರೂ ಮತ್ತಷ್ಟು ಆಸ್ವಾದಿಸಬೇಕೆನಿಸುವ, ಸಾಟಿಯಿಲ್ಲದ ಸವಿಯ, ಒಳಬೆಳಕೇ ಕೃಷ್ಣರೂಪವಾಗಿ ಬಂದಿರುವ ಜ್ಯೋತಿಸ್ಸು.

ಹೀಗೆ ಹೇಳಿದರೆ, ಆಹಾ ಅದು ಹೇಗಿರುವುದು ಎಂದು ವಿಸ್ತರಿಸಿ ಹೇಳಬಾರದೆ? - ಎಂಬ ಅಪೇಕ್ಷೆಯು ಉಂಟಾಗುವುದು ಸಹಜವೇ. ಅದರ ರೂಪವೆಂತು, ಗುಣವೆಂತು, ಕ್ರಿಯೆಯೆಂತು? - ಇವನ್ನೆಲ್ಲ ತಿಳಿಯಬೇಕೆನಿಸುವ ನಮ್ಮ ಅಪೇಕ್ಷೆಗೆ ಅನುಗುಣವಾಗಿಯೇ ಲೀಲಾಶುಕನು ಅವೆಲ್ಲವನ್ನೂ ಚಿತ್ರಿಸುತ್ತಾನೆ.

ಎಳೆ ಮಕ್ಕಳಲ್ಲೊಂದು ಜೀವಕಳೆ ತುಂಬಿರುತ್ತದೆ; ವಾರ್ಧಕದಲ್ಲೂ ಹಸನ್ಮುಖರಾಗಿ ಸಂತೋಷ-ಪ್ರದರು ಇರಬಹುದು; ಆದರೆ ಯೌವನದ ಸೊಬಗಿಗೆ ಸಮನುಂಟೇ? ಯೌವನದಲ್ಲೂ ಆದಿ-ಮಧ್ಯ-ಅಂತಗಳಿರುವುವು. ಅವೆಲ್ಲದರಲ್ಲೂ ನವ-ಯೌವನವು ಸೊಗಸಿನ ಅವಸ್ಥೆ. ಇನ್ನು ಶ್ರೀಕೃಷ್ಣನ ನವ-ಯೌವನವೆಂದರೆ ಮತ್ತೂ ವಿಶೇಷವೇ ಸರಿ. ಅಲ್ಲದೆ ಅದು ಸದಾ ಪ್ರೋನ್ಮೀಲನಗೊಳ್ಳುತ್ತಿರುವುದು; ಮತ್ತೆ ಮತ್ತೆ ಉಕ್ಕುತ್ತಿರುವ ಯುವಾವಸ್ಥೆಯದು; ಕಳೆಗುಂದದ ಜವ್ವನ ಕೃಷ್ಣನದು.

ಯೌವನವು ಇಡೀ ಶರೀರದಲ್ಲೇ ಕಾಣಿಸಿಕೊಳ್ಳುತ್ತದಷ್ಟೆ? ಸರ್ವಾಂಗಗಳಿಗೂ ಸೌಂದರ್ಯವನ್ನು ಸುರಿಯುವ ಸ್ಥಿತಿಯೇ ಯೌವನ. ಅದು ವಿಶೇಷವಾಗಿ ತೋರಿಕೊಳ್ಳುವುದು ಮುಖದಲ್ಲಿಯೇ. ಶ್ರೀಕೃಷ್ಣನ ಆನನವು ಮಾಧುರ್ಯ-ಮಗ್ನವಾದುದು. ಎಂದರೆ ಮಧುರತೆಯಲ್ಲಿಯೇ ಮುಳುಗಿರುವಂತಹುದು. ಮಧುರ-ರಸದಲ್ಲಿ ಮಜ್ಜನಮಾಡಿರುವ ಮೊಗವಿದು.

ಚಿತ್ರದಲ್ಲಿ ಕೃಷ್ಣನ ಛಾಪು ಮೂಡಿಸಲು ಚಿತ್ರಕಾರರು ಕಷ್ಟಪಡಬೇಕಾದುದೇ ಇಲ್ಲ. ಮೇಲೆ ನವಿಲುಗರಿಯ ರೇಖೆಯನ್ನು ಎಳೆಯುತ್ತಲೇ ಕೃಷ್ಣನ ಸ್ಫುರಣವನ್ನದು ತಂದುಕೊಡುವುದು. ಕೃಷ್ಣನ ಉತ್ತಂಸವೇ ಈ ಬರ್ಹ. ಉತ್ತಂಸವೆಂದರೆ ಶಿರೋ-ಭೂಷಣ, ತಲೆಗೆ ಅಲಂಕಾರವಾದದ್ದು. ಬರ್ಹವೆಂದರೆ ಗರಿ; ಎಂದೇ ನವಿಲಿಗೆ ಬರ್ಹಿಯೆನ್ನುವುದು.

ಶ್ರೀಕೃಷ್ಣನ ಕುಂತಲ-ಭರವನ್ನು, ಎಂದರೆ ಕೇಶ-ರಾಶಿಯನ್ನು, ಅಲಂಕರಿಸಿದೆ ಈ ಗರಿ. ಅದಾದರೂ ವಿಲಾಸಮಯವಾದದ್ದು. ಮಂದಾನಿಲವು ಬೀಸಿದಾಗ ಆ ಬರ್ಹವು ಒಂದಿಷ್ಟು ಈ ಕಡೆಗೂ ಆ ಕಡೆಗೂ ಆಡುವುದಿದೆಯಲ್ಲಾ, ಅದುವೇ ಅದರ ವಿಲಾಸ: ನಿಂತಾಗಿನ ಕುಳಿತಾಗಿನ ಭಂಗಿಯಲ್ಲೂ, ನಡೆಯಲ್ಲೂ ಕಾಣುವ ಅದೇನೋ ವೈಶಿಷ್ಟ್ಯವೇ ವಿಲಾಸ. ಹೀಗೆ ವಿಲಾಸವುಳ್ಳ ಬರ್ಹವು ಕೃಷ್ಣನ ದಟ್ಟವಾದ ಕುಂತಲಗಳ ನಡುವಣವಿರುವ ಶೀರ್ಷಾಲಂಕಾರವಾಗಿದೆ. ನವಿಲುಗರಿಯ ಆಕರ್ಷಣೆ ಯಾರಿಗಿಲ್ಲ? ಹೀಗೆ, ಸೆಳೆಯುವ ಗರಿಯು, ಸೊಗಸನ್ನು ಬೆಳೆಸಿದೆ, ಕೃಷ್ಣನ ಮಧುರ-ಮುಖದಲ್ಲಿ.

ಇದು ಆತನ ನೋಟದ ಸೊಬಗಾದರೆ, ಆತನ ಚೇಷ್ಟೆಯ ಸೊಬಗೂ ಹೃದ್ಯವೇ. ಶಿರದ ಗರಿಯ ಜೊತೆಗೆ ಕೈಯ ಕೊಳಲೆಂದರೆ ಅದು ಕೃಷ್ಣನಲ್ಲದೆ ಮತ್ತಾರು? ಕೃಷ್ಣನು ಗಾನ-ಲೋಲನು ಹೌದೇ; ಜೊತೆಗೆ ಕಿವಿಗಳನ್ನು ತಣಿಸುವ ನಾದವು ಆತನ ವೇಣುವಿನಿಂದ ಹೊಮ್ಮುವುದೇ. ಬರೀ ಕಿವಿಗಳನ್ನೇನು? ಜೀವವನ್ನೇ ತಣಿಸುವ ಪರಿ ಕೃಷ್ಣನ ಕೊಳಲಿನದು. ಎಂದೇ ನಮ್ಮ ಕವಿಯು ಕೇವಲ 'ವೇಣುನಾದ'ವೆನ್ನುವುದಿಲ್ಲ. 'ವೇಣುಪ್ರಣಾದ'ವೆನ್ನುತ್ತಾನೆ. ಏನು ಪ್ರಣಾದವೆಂದರೆ? ಪ್ರಕೃಷ್ಟವಾದ ನಾದವೇ ಪ್ರಣಾದ. ಯಾವುದರಲ್ಲಿ ಪ್ರಕರ್ಷವಿರುತ್ತದೋ ಅದು ಪ್ರಕೃಷ್ಟ. ಪ್ರಕರ್ಷವೆಂದರೆ ಹೆಚ್ಚುಗಾರಿಕೆ. ಹೀಗಾಗಿ ಅತಿಶಯಿತವಾದ ನಾದವನ್ನು ತರುತ್ತಿದೆ, ಕೃಷ್ಣನ ಕೊಳಲು.

ಕೃಷ್ಣನು ಹಿಂದೆಂದೋ ಕೊಳಲನ್ನು ನುಡಿಸಿದ್ದನಲ್ಲವೇ? - ಎಂದೆನ್ನಬೇಡಿ. ಏಕೆ? ಅದು ಈಗಲೂ ಕೇಳಿಬರುವಂತಹುದು, ಕೇಳಿಬರುತ್ತಿರುವಂತಹುದು – ಲೀಲಾಶುಕನಿಗೆ, ಅವನಂತಿರುವವರಿಗೆ. ಎಂದೇ ಅದನ್ನು ಪ್ರವಿಲಸತ್ - ಎನ್ನುತ್ತಾನೆ. ಅದರ ವಿಲಾಸವು ಈಗಲೂ ನಡೆಯುತ್ತಿರುವಂತಹುದು. ಆ ವಿಲಾಸವೂ ಉತ್ಕೃಷ್ಟವಾದುದೇ. ಎಂದೇ ಅದು ಪ್ರವಿಲಾಸ. ಹೀಗೆ ವೇಣುವಿನಿಂದ ಹೊಮ್ಮುತ್ತಿರುವುದು ಬರೀ ನಾದವಲ್ಲ, ಪ್ರಣಾದ; ವೇಣುಪ್ರಣಾದದ ವಿಲಾಸವೆಂದರೆ ಸಾಲದು, ಪ್ರವಿಲಾಸವೆಂದೇ ಹೇಳಬೇಕು.

ಒಣಗಿದ ಬಾಯಿಯು ತಣಿಯುವುದು ತಣ್ಣೀರಿನಿಂದ; ಆದರೆ ಜೀವವು ತಣಿಯುವುದು ಅಮೃತವೊಂದರಿಂದಲೇ. ಕೃಷ್ಣನ ವೇಣುವಿನಿಂದ ಹೊಮ್ಮುವ ನಾದವು ಕಿವಿಗಳಿಗೂ ಇಂಪೇ. ಕೇಳಿದರೆ ಮತ್ತಷ್ಟು ಕೇಳಬೇಕೆನ್ನಿಸುವುದೇ. ಆದರೆ ಅದು ಕಿವಿಗಳನ್ನು ತಣಿಸುವುದು ಮಾತ್ರವಲ್ಲ. ಕಿವಿದೆರೆಯ ಮೂಲಕ ಪ್ರವೇಶಿಸಿ ಜೀವವನ್ನೇ ಮುಟ್ಟುವಂತಹುದು. ಅರ್ಥಾತ್, ಇಂದ್ರಿಯದ ಕ್ಷೇತ್ರಕ್ಕಷ್ಟೇ ಸೀಮಿತವಲ್ಲ, ಅದು; ಇಂದ್ರಿಯಾತೀತವನ್ನೂ ಅದು ಸ್ಪರ್ಶಿಸುವುದು. ಸ್ಪರ್ಶಿಸುವುದೇನು? ತಣಿಸುವುದು. ತಾಪಗೊಂಡವರಿಗೆ ಬೇಕಾದದ್ದೇ ತಂಪು; ಜೀವನದಲ್ಲಿ ತಾಪಪಡದವರುಂಟೇ? ತಂಪು ಬಯಸದವರುಂಟೇ?

ಜೀವಕ್ಕೆ ತಂಪನ್ನು ತರುವುದು ಅಮೃತವೇ. ಶ್ರೀಕೃಷ್ಣನ ವೇಣುಪ್ರಣಾದವು ಹರಿಸುತ್ತಿರುವುದೂ ಅಮೃತವನ್ನೇ. ಅದು ಎಂದೋ ನಡೆದುಹೋದದ್ದೆನಿಸದೆ ಇಂದಿಗೂ ಪ್ರಸ್ತುತವಾದದ್ದೆಂಬುದನ್ನು ಕವಿಯು ತಿಳಿಸಿಕೊಡುತ್ತಿದ್ದಾನೆ.

ಹೀಗೆ ಜೀವತಣಿಯುವಂತಿರುವ ವೇಣುನಾದವು ಯಾರ ಮೇಲೆ ಏನು ಪರಿಣಾಮ ಬೀರಿತೆಂದು ಕೇಳುವುದು ಮುಂದಿನ ಪ್ರಶ್ನೆ.

ಮತ್ತಾರು? ಆತನ ರೂಪ-ಗುಣ-ಕ್ರಿಯೆಗಳಿಗೆ ಮನಸೋತ ಗೋಪಿಕೆಯರು. ತುಂಬಿದೆದೆಯ ಗೋಪಿಯರು ಆತನನ್ನು ಆರಾಧಿಸುವರು. ತಮ್ಮ ಕಾಮವನ್ನೂ ಭಗವಂತನಿಗೆ ಸಮರ್ಪಿಸುವ ಭಾಗ್ಯವುಳ್ಳವರವರು. ತಮ್ಮ ಸೌಂದರ್ಯವೆಲ್ಲವೂ ಭಗವತ್-ಪ್ರೀತಿ-ಕರವಾಗಲೆಂದು ಹಂಬಲಿಸುವ ಆ ಗೋಪಿಕೆಯರೇ ಧನ್ಯರು.

ಶ್ಲೋಕ ಹೀಗಿದೆ:

ಬರ್ಹೋತ್ತಂಸ-ವಿಲಾಸ-ಕುಂತಲ-ಭರಂ ಮಾಧುರ್ಯ-ಮಗ್ನಾನನಂ

ಪ್ರೋನ್ಮೀಲನ್ನವ-ಯೌವನಂ ಪ್ರವಿಲಸದ್-ವೇಣು-ಪ್ರಣಾದಾಮೃತಮ್ |

ಆಪೀನ-ಸ್ತನ-ಕುಡ್ಮಲಾಭಿರಭಿತೋ ಗೋಪೀಭಿರಾರಾಧಿತಂ

ಜ್ಯೋತಿಶ್ಚೇತಸಿ ನಶ್ಚಕಾಸ್ತು ಜಗತಾಮೇಕಾಭಿರಾಮಾದ್ಭುತಮ್ ||


ಸೂಚನೆ : 2/6/2024 ರಂದು ಈ ಲೇಖನವು ಬೋಧಿ ವೃಕ್ಷದ ಪತ್ರಿಕೆಯಲ್ಲಿ ಪ್ರಕಟವಾಗಿದೆ.