Sunday, June 23, 2024

ಯಕ್ಷ ಪ್ರಶ್ನೆ95 (Yaksha prashne 95)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)

ಪ್ರಶ್ನೆ – 94 ಯಾವುದು ಶೋಕ ?

ಉತ್ತರ - ಅಜ್ಞಾನವೇ ಶೋಕ. 

ಶೋಕಕ್ಕೆ ಕಾರಣ ಏನು ? ಎಂಬುದೇ ಈ ಪ್ರಶ್ನೆಯಲ್ಲಿನ ಉತ್ತರವಾಗಿದೆ. ಅಜ್ಞಾನದಿಂದಲೇ ಶೋಕವೆಂಬುದು ಉಂಟಾಗುತ್ತದೆ. ಹಾಗಾಗಿ ಇಲ್ಲಿ ನಾವು ಅಜ್ಞಾನ ಮತ್ತು ಶೋಕ ಎಂಬ ಎರಡು ಅಂಶಗಳನ್ನು ವಿಚಾರಮಾಡಬೇಕಾಗಿದೆ. ಆಗ ಅಜ್ಞಾನ ಹೇಗೆ ಶೋಕಕ್ಕೆ ಕಾರಣ ಎಂಬುದು ಸ್ಪಷ್ಟವಾಗುತ್ತದೆ.  ಜ್ಞಾನಕ್ಕೆ ವಿರುದ್ಧವಾದ ಪದವೇ ಅಜ್ಞಾನ. ಜ್ಞಾನವೆಂದರೆ ವಸ್ತು ಅಥವಾ ವಿಷಯದ ಅರಿವು. ಮತ್ತು ಇವೆಲ್ಲದರ ಸಮಷ್ಟಿಯಾದ ಈ ಪ್ರಪಂಚದ ಬಗೆಗಿನ ಅರಿವೂ ಕೂಡ. ಅಂದರೆ ಈ ಸೃಷ್ಟಿಯಲ್ಲಿನ ತತ್ತ್ವಗಳನ್ನು ತಿಳಿದಾಗ ಮಾತ್ರ ಅವುಗಳ ಉಪಯೋಗ ತಿಳಿಯಲು ಸಾಧ್ಯ. ಆಯಾ ಪದಾರ್ಥಗಳ ಸರಿಯಾದ ಬಳಕೆಯಿಂದ ಆ ಪದಾರ್ಥವೂ ಸಾರ್ಥಕವಾಗುತ್ತದೆ. ಮತ್ತು ಆಯಾ ಪದಾರ್ಥದಿಂದ ನಮಗೂ ಉಪಯೋಗವಾದಂತಾಗುತ್ತದೆ. ಇದನ್ನು ಪಡೆದುಕೊಳ್ಳುವ ವಿಧಾನವೇ ಅರಿವು ಅಥವಾ ಜ್ಞಾನ.  ಇದು ಇಲ್ಲದಿರುವುದನ್ನೇ ಅಜ್ಞಾನ ಎಂಬ ಪದದಿಂದ ಕರೆಯಬಹುದು. ಇಂತಹ ಅಜ್ಞಾನವೇ ಶೋಕ ಮತ್ತು ಮೋಹಕ್ಕೂ ಕಾರಣವಾಗಬಹುದು ಎಂಬುದು ಈ ಪ್ರಶ್ನೋತ್ತರದ ಆಶಯ.   

ಶ್ರೀರಂಗ ಮಹಾಗುರುಗಳು ಭಗವದ್ಗೀತೆಯ "ನಷ್ಟೋ ಮೋಹಃ ಸ್ಮತಿರ್ಲಬ್ಧಾ ತ್ವತ್ಪ್ರಸಾದಾತ್ ಮಹೇಶ್ವರ- ಮೋಹ ಕಳೆಯಿತು ನಿನ್ನ ಪ್ರಸಾದದಿಂದ ಸ್ಮೃತಿಯು ಪ್ರಾಪ್ತವಾಯಿತು" ಎಂಬ  ಶ್ಲೋಕವನ್ನು ಅವರ ಪಾಠಪ್ರವಚನಗಳಲ್ಲಿ ಉದಾಹರಿಸುತ್ತಿರುವುದನ್ನು ಇಲ್ಲಿ ನೆನಪಿಸಿಕೊಳ್ಳುತ್ತೇನೆ. ಭಗವದ್ಗೀತೆಯ ಮೊದಲ ಅಧ್ಯಾಯ ವಿಷಾದಯೋಗವಾದರೆ ಅಂತಿಮ ಅಧ್ಯಾಯ ಪ್ರಸಾದಯೋಗವಾಗಿದೆ. ಅಂದರೆ ಯುದ್ಧದ ಆರಂಭದಲ್ಲಿ ಅರ್ಜುನನಿಗೆ ಶೋಕ ಆವರಿಸಿತ್ತು. ಇದರ ಪರಿಣಾಮವಾಗಿ ಆತ ಯುದ್ಧವೇ ಬೇಡ ಎಂಬ ನಿರ್ಣಯಕ್ಕೆ ಬಂದಿದ್ದ. ಆಗ ಶ್ರೀಕೃಷ್ಣನು ಅರ್ಜುನನಿಗೆ ಯುದ್ಧದ ವಿಷಯದಲ್ಲಿ ಇದ್ದ ಅಜ್ಞಾನವನ್ನು ಹೋಗಲಾಡಿಸುವ ಕಾರ್ಯವನ್ನು ಮಾಡಿದ. ಯುದ್ಧವೆಂದರೇನು? ಯುದ್ಧದ ಪರಿಣಾಮವೇನು? ಯುದ್ಧ ಹೇಗೆ ಧರ್ಮಕಾರ್ಯವಾಗುತ್ತದೆ? ಎಂಬೆಲ್ಲಾ ವಿಷಯಗಳನ್ನು ವಿವರವಾಗಿ ಮನಮುಟ್ಟುವಂತೆ ಮಾಡಿದ. ಇದರ ಪರಿಣಾಮವಾಗಿ ಅರ್ಜುನನಿಗೆ ಯುದ್ಧದ ಬಗೆಗೆ ಇದ್ದ ಅಜ್ಞಾನ ನಿವೃತ್ತಿಯಾಯಿತು.  ವಿಷಾದ ಹೋಗಿ ಪ್ರಸಾದ ಉಂಟಾಯಿತು.  

ಭಗವದ್ಗೀತೆಯಲ್ಲಿ ಶೋಕವನ್ನು ಬಿಡಬೇಕಾದರೆ ಏನು ಮಾಡಬೇಕೆಂಬುದನ್ನು ಭಗವಾನ್ ಶ್ರೀಕೃಷ್ಣ ಹಿಗೇ ಹೇಳುತ್ತಾನೆ. ಯಾವುದು ನಿತ್ಯವಾದುದು? ಯಾವುದು ಅನಿತ್ಯವಾದುದು? ಯಾವುದು ಅವ್ಯಕ್ತವಾದುದು? ಯಾವುದು ವ್ಯಕ್ತವಾದುದು? ಯಾವುದು ಕಾರ್ಯ ?  ಯಾವುದು ಅಕಾರ್ಯ? ಯಾವುದು ಮರಣಶೀಲವಾದುದು? ಯಾವುದು ಅಲ್ಲ? ಹುಟ್ಟಿದವನು ಸಾಯಿಲೇಬೇಕು. ಮೃತನಾದವನು ಮತ್ತೆ ಹುಟ್ಟಲೇಬೇಕು ಎಂಬಿವೇ ಮೊದಲಾದವುಗಳ ಪರಿಜ್ಞಾನವಿದ್ದರೆ ಆತನಿಗೆ ಶೋಕವೆಂಬುದಿಲ್ಲ ಎಂದು. ಈ ಸೃಷ್ಟಿಗೆ ಕಾರಣವಾದ ಯಾವ ಪರಬ್ರಹ್ಮ ಎಂಬ ವಿಷಯವುಂಟೋ ಅದನ್ನು ಹೊರತುಪಡಿಸಿ ಉಳಿದೆಲ್ಲವೂ ಅನಿತ್ಯ, ವ್ಯಕ್ತ, ಮರಣಶೀಲವಾದವುಗಳು. ಇದರ ಬಗ್ಗೆ ಯಾರಿಗೆ ಅಂಟು ಅಥವಾ ಮೋಹವೆಂಬುದಿರುವುದೋ ಆತ ಮಾತ್ರ ಶೋಕಕ್ಕೆ ಈಡಾಗುತ್ತಾನೆ. ಭಗವಂತ ಮಾತ್ರ ನಿತ್ಯ, ಸತ್ಯ,  ಅವ್ಯಕ್ತ ಎಂದು ತಿಳಿದವನಿಗೆ ಕಾರ್ಯ ಅಕಾರ್ಯದ ಬಗ್ಗೆ ವಿವೇಕ ಹುಟ್ಟುತ್ತದೆ. ಈ ವಿವೇಕವಿಲ್ಲದಿರುವಿಕೆಯೇ ಅಜ್ಞಾನ ಎನ್ನಬಹುದು. ಅವಿವೇಕವೇ ಶೋಕ ಮೋಹಗಳಿಗೆ ಕಾರಣವಾಗುತ್ತದೆ ಎಂಬುದು ಈ ಪ್ರಶ್ನೋತ್ತ ರದ ಆಶಯವಾಗಿದೆ.    

ಸೂಚನೆ : 23/6/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.