ಲೇಖಕರು : ಪ್ರೊ. ಕೆ. ಎಸ್. ಕಣ್ಣನ್
ಪ್ರತಿಕ್ರಿಯಿಸಿರಿ (lekhana@ayvm.in)
ದಾರಿ ಯಾವುದಯ್ಯಾ ವೈಕುಂಠಕೆ? - ಎಂಬ ಪ್ರಶ್ನೆಯು ಆಗೊಮ್ಮೆ ಈಗೊಮ್ಮೆಯಾದರೂ ನಮಗೆ ಬರುವಂತಹುದೇ. ಈಗ ನಾವಿರುವ ಎಡೆಗೂ ನಮ್ಮ ಗಮ್ಯಕ್ಕೂ ಬಹಳವೇ ದೂರವೆಂದಾಗಿ, ಜೊತೆಗೆ ತೀರಾ ಸುತ್ತುಬಳಸಿನ ದಾರಿಯೆಂದೋ ಕಲ್ಲುಮುಳ್ಳುಗಳ ದಾರಿಯೆಂದೋ ಆಗಿಬಿಟ್ಟರೆ, ಪ್ರಯಾಣವು ಪ್ರಯಾಸವೆನಿಸಿ, "ನನ್ನ ಕೈಲಿದಾಗದು" - ಎಂದು ಕೈಚೆಲ್ಲಿ ಕುಳಿತುಕೊಳ್ಳುವಂತಾದೀತಲ್ಲವೇ?
ಆದ್ದರಿಂದ ರಾಜಮಾರ್ಗವನ್ನು ತೋರತಕ್ಕವರೇ ಸಿಕ್ಕರೆ ನಮ್ಮ ಕೆಲಸವಾದಂತೆಯೇ ಅಲ್ಲವೇ? ಮಿಕ್ಕೆಲ್ಲದ್ದಕ್ಕೂ ಸಲ್ಲುವ ಗೂಗಲ್ಲಿನ ಭೂಪಟವು (ಮ್ಯಾಪು) ಇಲ್ಲಿ ಸಲ್ಲದಲ್ಲವೇ? ಹಾಗಾದರೆ ದಾರಿತೋರುವವರಾರಾದರೂ ಉಂಟೇ? - ಎಂಬುದೇ ಪ್ರಶ್ನೆ.
ಉಂಟೆಂಬ ಉತ್ತರವನ್ನೇ ಲೀಲಾಜಾಲವಾಗಿ ಕೊಡುತ್ತಾನೆ, ನಮ್ಮ ಲೀಲಾಶುಕ. ಆ ಮಾರ್ಗ-ದರ್ಶಕನೆಲ್ಲಿದ್ದಾನೆಂದೂ ತಿಳಿಸುತ್ತಾನೆ. ಯಾರವನು? ಎಲ್ಲಿಹನು? - ಎಂಬ ಪ್ರಶ್ನೆಗಳನ್ನು ನೀವು ಕೇಳುವ ಮೊದಲೇ ತಾನೇ ಹೇಳಿದ್ದಾನೆ.
ಉತ್ತರಹೇಳುವವರು ಬಿಡಿಸಿ ಹೇಳಬೇಕು. ಪ್ರೀತಿಯಿಂದ ಹೇಳಬೇಕು, ಅಲ್ಲವೆ? ನಮ್ಮಲ್ಲಿ ಅನೇಕರಿಗೆ ಗಣಿತ-ಭಯ! ಏಕೆ? ಗಣಿತದ ಪಾಠವನ್ನು ಮಾಡುವ ಅಧ್ಯಾಪಕರು ಚೆನ್ನಾಗಿ ಬಿಡಿಸಿ ಹೇಳದಿದ್ದರೆ ಗಣಿತದ ಬಗ್ಗೆಯೇ ದ್ವೇಷ ಬಂದುಬಿಡುತ್ತದೆ. ಅದಕ್ಕಿಂತಲೂ ಹೆಚ್ಚಾಗಿ, ಪ್ರೀತಿಯಿಂದ ಹೇಳಿಕೊಡುವುದರ ಬದಲು ಸಿಡುಕಿ ಹೇಳಿಕೊಡುವುದಾದರೆ ಇನ್ನೂ ಹೆಚ್ಚಿನ ದ್ವೇಷವೇ ಬಂದೀತೇನೋ ಗಣಿತದ ಬಗೆಗೆ!
ಮೊದಲನೆಯದಾಗಿ, ಬಿಡಿಸಿ ಹೇಳಿಕೊಡುವುದೆಂದರೇನು? ನಮಗೆ ಗೊತ್ತಿರುವ ಅಂಶವೇನೆಂಬುದನ್ನು ಮೊದಲು ಪತ್ತೆ ಮಾಡಿಕೊಂಡು, ಗೊತ್ತಿಲ್ಲದ ಅಂಶವು ಯಾವುದೋ ಅದರತ್ತ ಹೆಜ್ಜೆಹೆಜ್ಜೆಯಾಗಿ ಕರೆದುಕೊಂಡು ಹೋಗುವುದೇ ಅದು. ಅಲ್ಲವೆ?
ಎರಡನೆಯದಾಗಿ, ಪ್ರೀತಿಯಿಂದ ಎಂದರೆ ಹೇಗೆ? ಸ್ನೇಹಿತನೊಡನೆ ಮಾತನಾಡುವಂತೆ ಮಾತನ್ನಾಡಬೇಕು. ಇದನ್ನೇ ಲೀಲಾಶುಕನು ಮಾಡಿರುವುದು. ಎಂದೇ "ಸಖೇ!" ಎಂದೇ ನಮ್ಮನ್ನು ಸಂಬೋಧಿಸುವುದು. ಅದಕ್ಕೆ "ಮಿತ್ರನೇ!" ಎಂದು ಅರ್ಥ. ಹೀಗೆ ಪ್ರೀತಿ-ವಿಶ್ವಾಸಗಳಿಂದಲೇ ಮಾತನಾಡಿಸಿ, ನಮಗೆ ಹಾದಿತೋರಬೇಕು.
ಅಂತಹವನು ಯಾರು? ಎಲ್ಲಿದ್ದಾನೆ? ಆತನನ್ನು ಗುರುತು ಹಿಡಿಯುವುದು ಹೇಗೆ? ಆತ ಏನನ್ನು ಮಾಡು(ತ್ತಿರು)ತ್ತಾನೆ? - ಎಂಬೆಲ್ಲ ಪ್ರಶ್ನೆಗಳಿಗೂ ಹೆಜ್ಜೆಹೆಜ್ಜೆಯಾಗಿ ಉತ್ತರ ಕೊಡುತ್ತಾನೆ, ಲೀಲಾಶುಕ.
ಅದೋ ಅಲ್ಲಿ ಕಾಣಿಸುತ್ತಿದೆಯಲ್ಲವೇ ಎತ್ತರದ ಅರ್ಜುನ-ವೃಕ್ಷ? - ಎಂದು ಆರಂಭಿಸುತ್ತಾನೆ. ದೂರದ ವಸ್ತುವಾದರೆ ಸುಲಭಕ್ಕೆ ಕಾಣದು. ಎಂದೇ ಎತ್ತರವಾದ ಒಂದು ವಸ್ತುವಿನತ್ತ ಮೊದಲು ನಿರ್ದೇಶಮಾಡುತ್ತಾನೆ. ಎತ್ತರವಾದದ್ದು ಬಲು ದೂರದವರೆಗೂ ಕಾಣುತ್ತದಲ್ಲವೇ?
ಅರ್ಜುನ-ವೃಕ್ಷವೆಂದರೆ ಕೆಂಪುಮತ್ತಿಮರ. ಅದು ಎಷ್ಟೆತ್ತರ? ಅದು ೩೫ ಮೀಟರ್ ಗಳವರೆಗೆ ಬೆಳೆಯುತ್ತದಂತೆ. ಅಂದರೆ ಸುಮರು ೧೧೪ ಅಡಿಗಳು! ಎಂದರೆ ಒಂದು ತೆಂಗಿನ ಮರಕ್ಕಿಂತಲೂ ಸುಮಾರು ೨೦-೩೦ ಅಡಿ ಹೆಚ್ಚು ಎತ್ತರ! ಅಷ್ಟು ಮಹೋನ್ನತವಾದ ಮರವನ್ನು ಯಾರಾದರೂ "ಅದು ಕಾಣಿಸುತ್ತಿಲ್ಲ" ಎನ್ನಲಾದೀತೇ?
ಎಂದೇ ಲೀಲಾಶುಕನು ನಿರ್ದೇಶಿಸುತ್ತಿರುವ ಮೊದಲ ಸ್ಥಾನವೇ ಈ ಮುಗಿಲುಮುಟ್ಟುವ ಮರ. ಅದರ ಎತ್ತರವನ್ನು ಜ್ಞಾಪಿಸಲೆಂದೇ 'ದೀರ್ಘ-ವೃಕ್ಷ' ಎಂದಷ್ಟು ಮಾತ್ರ ಹೇಳದೆ "ದೀರ್ಘತರವಾದ ಅರ್ಜುನ-ತರು" ಎನ್ನುತ್ತಿದ್ದಾನೆ. ಅದೂ ಎದುರಿಗೇ ಇರುವಂತಹುದು. ಹಾಗಾಗಿ ಆರಂಭ-ಸ್ಥಾನ ಜ್ಞಾತವಾಯಿತು. ಅಲ್ಲಿಂದ ಇನ್ನು ಅಜ್ಞಾತದೆಡೆಗೆ ಸಾಗಬೇಕು. ಹಾದಿಯಲ್ಲಿ ಅಲ್ಲಲ್ಲಿ ಗುರುತಿಸಬಹುದಾದ ಅಂಶಗಳನ್ನು ಹೇಳಬೇಕು.
ಅದರ ಮುಂದೆಯೇ ಇದೆ, ಒಂದು ವರ್ತನೀ. ವರ್ತನಿಯೆಂದರೆ ಹಾದಿ. ಆ ಹಾದಿ ಎಲ್ಲಿಗೆ ಹೋಗುತ್ತದೆ? ಒಂದು ಘೋಷಕ್ಕೆ. ಘೋಷವೆಂದರೆ ಆಭೀರ-ಪಲ್ಲಿ - ಅರ್ಥಾತ್ - ಗೋವಳರ ಹಳ್ಳಿ, ಅದುವೇ ನಮ್ಮ ನಂದ-ವ್ರಜ, ನಂದ-ಗೋಕುಲ.
ಆ ಘೋಷದ ಬಳಿಯೇ ಆ ಪರಿಸರದಲ್ಲಿಯೇ ಹರಿಯುತ್ತಿದ್ದಾಳೆ, ಯಮುನೆ. ಕಳಿಂದನ ಪುತ್ರಿಯೆನಿಸುವುದರಿಂದ ಯಮುನೆಗೆ ಕಳಿಂದ-ಪುತ್ರಿ, ಕಳಿಂದಾತ್ಮಜಾ - ಎಂಬ ಹೆಸರುಗಳು.
ಆ ಯಮುನೆಯ ತೀರದಲ್ಲಿ ತಮಾಲ-ಕಾನನ, ಅರ್ಥಾತ್, ಹೊಂಗೇಮರಗಳ ಕಾಡುಂಟು. ಆ ಪ್ರದೇಶಕ್ಕೆ ಹೋಗಬೇಕು. ಅಲ್ಲೊಬ್ಬ ಗೊಲ್ಲನಿದ್ದಾನೆ. ಆತನನ್ನು ಗೊಲ್ಲ ಎನ್ನುವುದಕ್ಕಿಂತ ಗೊಲ್ಲರ ವೇಷದಲ್ಲಿ ಇರುವವನೆನ್ನಬೇಕು. ಆತನನ್ನು ಗೋಪನೆಂದರೂ ಗೋಪವೇಷ-ಧಾರಿಯೆಂದೇ ಅರ್ಥ.
ಆತನು ಅಲ್ಲೇನು ಮಾಡುತ್ತಿದ್ದಾನೆ? ಗೊಲ್ಲರೇನು ಮಾಡುತ್ತಾರೆ? ಹಸುಗಳನ್ನು ಮೇಯಿಸುತ್ತಾರೆ. ಅದನ್ನೇ "ಗೋ-ಚಕ್ರವನ್ನು ಮೇಯಿಸುತ್ತಿರುವನು ಅವನು" - ಎಂದು ಇಲ್ಲಿ ಹೇಳಿರುವುದು.
ದನಕಾಯುವುದೆಂದರೆ ಬಹಳ ಎಚ್ಚರವಾಗಿ ಮಾಡುವ ಕೆಲಸವೆಂದೇನಲ್ಲ. ಕ್ರೂರ-ಪ್ರಾಣಿಗಳ ಸಂಭವವಿರದ ಗೋಮಾಳವಾದರೆ, ಗೋಗಳು ತಮ್ಮ ಪಾಡಿಗೆ ಮೇಯ್ದುಕೊಳ್ಳುತ್ತಿರುತ್ತವೆ. ಅಗ ಆ ಗೋಪನಿಗೇನು ಕೆಲಸ? ಎಂದೇ, ಗೊಲ್ಲರೊಡನೆ ಆಟವಾಡುತ್ತಿದ್ದಾನೆ ಆತ - ಎಂದಿರುವುದು.
ಆತ ಬಲ್ಲ, ಪರಂಧಾಮಕ್ಕೆ ಹಾದಿಯನ್ನು! ಆತನು ತೋರುವ ದಾರಿಯೂ ಸಾಧಾರಣವಾದದ್ದಲ್ಲ. ಅದು ಅವ್ಯಾಹತವಾದ ಮಾರ್ಗ, ಎನ್ನುತ್ತಾನೆ ಕವಿ. ಎಂದರೆ ಅಡೆತಡೆಗಳಿಲ್ಲದ ದಾರಿಯದು.
ಪುಣ್ಯಕರ್ಮ-ಪಾಪಕರ್ಮಗಳನ್ನು ಮಾಡಿ ಮಾಡಿ ಅವುಗಳ ಫಲವನ್ನು ಭುಜಿಸಲು ಮತ್ತೆ ಮತ್ತೆ ಹಿಂದಿರುಗುತ್ತಿರುತ್ತೇವೆ. ಪುಣ್ಯ-ಪಾಪಗಳನ್ನು ಮೀರಿದ ಎಡೆಗೊಯ್ಯುವವನು ಶ್ರೀಕೃಷ್ಣ. ಎಲ್ಲಿಗೆ ಹೋದ ಮೇಲೆ ಮತ್ತೆ ಹಿಂದಿರುಗಿ ಬಂದು ಕರ್ಮಫಲಗಳನ್ನನುಭವಿಸಬೇಕಿಲ್ಲವೋ ಅಂತಹ ತನ್ನ ಸ್ಥಾನಕ್ಕೆ ದಾರಿತೋರುವವನು ಕೃಷ್ಣ.
ಆತನನ್ನು ಆಶ್ರಯಿಸು, ಮಿತ್ರನೇ - ಎಂಬ ಪ್ರೀತಿಯ ಹಿತೋಪದೇಶವನ್ನು ಕೊಡುತ್ತಿದ್ದಾನೆ, ಕವಿ.
ಶ್ಲೋಕವಿಂತಿದೆ:
ಅಗ್ರೇ ದೀರ್ಘತರೋಽಯಂ ಅರ್ಜುನ-ತರುಃ ತಸ್ಯಾಗ್ರತೋ ವರ್ತನೀ/
ಸಾ ಘೋಷಂ ಸಮುಪೈತಿ ತತ್ ಪರಿಸರೇ ದೇಶೇ ಕಲಿಂದಾತ್ಮಜಾ |
ತಸ್ಯಾಃ ತೀರ-ತಮಾಲ-ಕಾನನ-ತಲೇ ಚಕ್ರಂ ಗವಾಂ ಚಾರಯನ್/
ಗೋಪಃ ಕ್ರೀಡತಿ ದರ್ಶಯಿಷ್ಯತಿ ಸಖೇ ಪಂಥಾನಂ ಅವ್ಯಾಹತಂ ||
ಕೃಷ್ಣಕರ್ಣಾಮೃತದಲ್ಲೇ ಮತ್ತೊಂದೆಡೆ ಬರುವ ಒಂದು ಕಿರುಚಿತ್ರಣವನ್ನು ನೋಡಿ.
ಲೀಲಾಶುಕನಿಗೆ ಬಾಲಕೃಷ್ಣನನ್ನು ಕಾಣುವಾಸೆ. ಅದಿನ್ನೂ ದಕ್ಕಿಲ್ಲವೆಂಬ ದುಃಖ.
ಅಂಬುಜ-ದಲವೆಂದರೆ ಕಮಲದ ದಳ. ಅದರಂತೆ ಲಲಿತವಾಗಿದೆ, ಅರ್ಥಾತ್ ಸೊಬಗಿನಿಂದ ಕೂಡಿದೆ, ಬಾಲಕೃಷ್ಣನ ಲೋಚನ. ಅದನ್ನು ಕಣ್ತುಂಬ ತುಂಬಿಸಿಕೊಳ್ಳಬೇಕು – ಎಂಬ ಹಂಬಲ. ಅದನ್ನೇ ಕವಿಯು ಬಣ್ಣಿಸುವ ಬಗೆಯೇ ವಿಶಿಷ್ಟ. "ನನ್ನೆರಡೂ ನೇತ್ರಗಳಿಂದ ಆತನನ್ನು ಆಲಿಂಗಿಸಿಕೊಳ್ಳುವ ಆಸೆಯೆನ್ನದು" – ಎನ್ನುತ್ತಾನೆ! ಕಣ್ಣುಗಳಿಂದ ಆಲಿಂಗಿಸಿಕೊಳ್ಳಬೇಕು! ಆಹಾ!
ಒಂದು ಕೆಲಸ ಮಾಡಲು ಏನೇನು ಬೇಕೋ ಅದೆಲ್ಲವನ್ನೂ ಸಮಗ್ರವಾಗಿ ಹೇಳಿದರೆ ಅದು ಸಾಮಗ್ರಿಯೆನಿಸಿಕೊಳ್ಳುತ್ತದೆ. ಅಡುಗೆ(ಅನ್ನ) ಮಾಡಲು ಬೇಕಾದ ಅಕ್ಕಿ, ನೀರು, ಪಾತ್ರೆ, ಒಲೆ, ಇಂಧನಗಳು ಪಾಕ-ಸಾಮಗ್ರಿ.
ನನ್ನ ಕಣ್ಣುಗಳಿಗೆ ಎಲ್ಲವೂ ಕಾಣಿಸುತ್ತವೆ, ಆದರೆ ಕೃಷ್ಣನು ಕಾಣಿಸ. ಆತ ಕಾಣಿಸಬೇಕೆಂದರೆ ಅದೃಷ್ಟವೂ ಬೇಕಲ್ಲವೇ? ಆ ದೈವ-ಸಾಮಗ್ರಿಯು ಇನ್ನೂ ದೂರದಲ್ಲಿದೆಯೆಲ್ಲಾ, ಅಯ್ಯೋ! – ಎಂಬ ಕೊರಗು ಕವಿಯದು.
ಆಭ್ಯಾಂ ವಿಲೋಚನಾಭ್ಯಾಂ/ಅಂಬುಜ-ದಲ-ಲಲಿತ-ಲೋಚನಂ ಬಾಲಂ| ದ್ವಾಭ್ಯಾಂ ಅಪಿ ಪರಿರಬ್ಧುಂ/ ದೂರೇ ಮಮ ಹಂತ ದೈವಸಾಮಗ್ರೀ||
ಸೂಚನೆ : 23/6/2024 ರಂದು ಈ ಲೇಖನವು ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.