Sunday, June 2, 2024

ಕಾಲಕ್ಕೆ ರಾಜನೇ ಕಾರಣ (Kalakke Rajane Karana)

ಲೇಖಕರು : ಡಾ. ಹಚ್.ಆರ್. ಮೀರಾ
(ಪ್ರತಿಕ್ರಿಯಿಸಿರಿ lekhana@ayvm.in)
ರಾಜಾ ಅಂಬರೀಷನ ಹೆಸರನ್ನು ಕೇಳಿಲ್ಲದವರಾರು? ಅಯೋಧ್ಯೆಯ ಒಬ್ಬ ಧರ್ಮಿಷ್ಠನೂ ಬಲಿಷ್ಠನೂ ಆದ ರಾಜ ಇವನಾಗಿದ್ದನು. ತನ್ನ ಧರ್ಮವನ್ನನುಸರಿಸಿ ಯಜ್ಞ ಮಾಡುತ್ತಿದ್ದಾಗ, ಅದರ ಯಜ್ಞಪಶುವನ್ನು ಅಪಹರಿಸಲಾಯಿತು. ಅದು ಸಕಾಲಕ್ಕೆ ಸಿಕ್ಕದಿದ್ದರೆ, ಯಜ್ಞದ ಯಜಮಾನನಾದ ಇವನ ಹೊಣೆಗಾರಿಕೆಯಲ್ಲಿ ಯಜ್ಞವು ವಿಫಲವಾಗುವಂತಾಗುತ್ತಿತ್ತು. ಆದ್ದರಿಂದ ಪುರೋಹಿತರು ಅವನಿಗೆ ಕೊಟ್ಟ ಆದೇಶದಂತೆ, ಅವನು ಅದರ ಸ್ಥಾನದಲ್ಲಿ ಬಲಿಯಾಗಲು ನರಪಶುವೊಂದು ದೊರೆಯುವುದೋ? - ಎಂದು ಹುಡುಕಿಕೊಂಡು ಹೊರಟನು.

ನಾನಾದೇಶಗಳನ್ನು ಹುಡುಕುತ್ತಿದ್ದ ಆತನಿಗೆ  ಕೊನೆಗೆ ಭೃಗುತುಂಗವೆಂಬ ಪರ್ವತಶಿಖರದಲ್ಲಿ ತಪಸ್ಸಾಚರಿಸುತ್ತಿದ್ದ ಋಚೀಕಮುನಿಯ ಭೇಟಿಯಾಯಿತು. ಆ ಬ್ರಹ್ಮರ್ಷಿಗಿದ್ದ ಮೂವರು ಗಂಡುಮಕ್ಕಳಲ್ಲಿ ಒಬ್ಬರು ಈ ಯಜ್ಞಕ್ಕೆ ಪಶುವಾಗಲೊಪ್ಪಿದರೆ, ತಾನು ಅವರಿಗೆ ಒಂದು ಲಕ್ಷ ಗೋವುಗಳನ್ನು ಕೊಡುವುದಾಗಿ ರಾಜನು ಹೇಳಿದನು. ತಂದೆಯು ಹಿರಿಯ ಮಗನನ್ನೂ, ತಾಯಿಯು ಕಿರಿಯ ಮಗನನ್ನೂ ಬಿಟ್ಟಿರಲಾರೆವೆಂದಾಗ, ಮಧ್ಯಮಪುತ್ರನಾದ ಶುನಃಶೇಫನು ತನ್ನನ್ನೇ ತನ್ನ ತಂದೆ-ತಾಯಿಯರು ಕೊಡಲೊಪ್ಪಿದ್ದಾರೆ ಎಂದು ನಿಶ್ಚಯಿಸಿ, ಧರ್ಮಕಾರ್ಯಕ್ಕೆ ಮುಂದಾದನು. 

ಅವನು ಬಲಿಪಶುವಾಗಲು ಒಪ್ಪಿ, ರಾಜನೊಂದಿಗೆ ಹೊರಟಾದ ಮೇಲೆ ದಾರಿಯಲ್ಲಿ ಸಿಕ್ಕವರು ವಿಶ್ವಾಮಿತ್ರಮುನಿಗಳು. ಅವರು ತನ್ನ ಸೋದರಮಾವ. ಅವರನ್ನು ಕಂಡು, ಪ್ರಯಾಣದಿಂದ ಆಯಾಸಗೊಂಡಿದ್ದ ಶುನಃಶೇಫನಿಗೆ ಉತ್ಕಟವಾದ ದುಃಖವುಂಟಾಯಿತು. ಅವರಿಗೆ ಶರಣುಹೋಗಿ, ಅವರ ಧರ್ಮದೃಷ್ಟಿಯನ್ನೂ ಕೊಂಡಾಡಿ, ಅವನು ಅವರಲ್ಲಿ ಹೀಗೆ ಬೇಡಿಕೊಂಡನು: "ಮುನಿಗಳೇ! ರಾಜನ ಯಜ್ಞವೂ ಸಂಪನ್ನಗೊಳ್ಳಬೇಕು. ನಾನೂ ಉಳಿದುಕೊಂಡು ದೀರ್ಘಾಯುವಾಗಿ, ತಪಸ್ಸನ್ನಾಚರಿಸುವಂತಾಗಬೇಕು. ತಾವೇ ನನ್ನನ್ನು ಕಾಪಾಡಬೇಕು", ಎಂದು.

ವಿಶ್ವಾಮಿತ್ರರಿಗೆ ಮೊದಲು ಹೊಳೆದ ದಾರಿಯೆಂದರೆ, ತಮ್ಮ ಮಕ್ಕಳನ್ನೇ ಶುನಃಶೇಫನ ಸ್ಥಾನದಲ್ಲಿ ಕಳಿಸಿಕೊಡುವಂತಹುದು. ಧರ್ಮಪರಾಯಣರಾದ ತಮ್ಮ ಮಕ್ಕಳು ಈ ದೊಡ್ಡ ಧರ್ಮಕಾರ್ಯಕ್ಕೆ ಸಹಾಯಕರಾದರೆ, ಅವರಿಗೂ, ಅವರನ್ನು ಪುತ್ರರನ್ನಾಗಿ ಪಡೆದ ತಮಗೂ, ಶ್ರೇಯಸ್ಸೆಂದೆಣಿಸಿದರು. ಆದರೆ ಆ ಮಕ್ಕಳು ನಕ್ಕುಬಿಟ್ಟು ಅಹಂಕಾರದಿಂದ ನಿರಾಕರಿಸಿ ಶಾಪಕ್ಕೆ ತುತ್ತಾದರು. 

ಆದರೂ ಶರಣಾಗತನಾಗಿದ್ದ ಈ ಬಾಲಕನಿಗೆ ಬೇರೊಂದು ರಕ್ಷಣೆ ಯೋಚಿಸಲೇಬೇಕೆಂದು, ಮೇಧಾವಿಗಳೂ ತಪಸ್ವಿಗಳೂ ಆಗಿದ್ದ ಆ ಮುನಿಗಳು ಎರಡು ರಹಸ್ಯಮಂತ್ರಗಳನ್ನು ಶುನಃಶೇಫನಿಗೆ ಉಪದೇಶಿಸಿದರು. ಯಜ್ಞಕಾಲದಲ್ಲಿ ದೇವತೆಗಳನ್ನು ಅವುಗಳ ಮೂಲಕ ಸ್ತುತಿಸಲು ಅವನಿಗೆ ಹೇಳಿದರು. ಸಮಾಧಾನಗೊಂಡ ಆ ಬಾಲಕನು ಸಂತೋಷವಾಗಿ ರಾಜನೊಂದಿಗೆ ಯಜ್ಞಕ್ಕೆ ತೆರಳಿದನು. ಅವನನ್ನು ಯೂಪಸ್ತಂಭ(ಯಜ್ಞದಲ್ಲಿ ಬಲಿಪಶುವನ್ನು ಕಟ್ಟುವ ಕಂಬ)ಕ್ಕೆ ಕಟ್ಟಿದಾಗ, ಆ ರಹಸ್ಯಮಂತ್ರಗಳಿಂದ ಇಂದ್ರ-ಉಪೇಂದ್ರರನ್ನು ಭಕ್ತಿಯಿಂದ ಸ್ತುತಿಸಿದನು. ಪ್ರಸನ್ನರಾದ ಆ ದೇವತೆಗಳು ಅವನಿಗೆ ದೀರ್ಘಾಯುಸ್ಸನ್ನೂ, ರಾಜನಿಗೆ ಸಂಪೂರ್ಣ ಯಜ್ಞಫಲವನ್ನೂ ಕರುಣಿಸಿದರು.

ಈ ಕಥೆಯ ಪ್ರಸಂಗದಲ್ಲಿ ಬರುವ ಪ್ರಶ್ನೆಗಳೂ ಹಲವು, ಪಾಠಗಳೂ ಹಲವು. ಅದಲ್ಲಿ ಕೆಲವನ್ನು ಇಲ್ಲಿ ವಿಮರ್ಶಿಸೋಣ. ವಿಶ್ವಾಮಿತ್ರರೂ ಇತರ ಋಷಿಗಳೂ ವಿನಾ (ಭೌತಿಕ)ಕಾರಣವೇ ಯಜ್ಞವನ್ನಾಚರಿಸುತ್ತಿದ್ದದ್ದು. ಈಗ ಅಂಬರೀಷನು ಮಾಡುತ್ತಿದ್ದ ಯಾಗಕ್ಕ್ಕೂ ಇಂಥದ್ದೇ ಕಾರಣವೆಂದಿರಲಿಲ್ಲ: ಯಜ್ಞಗಳನ್ನೂ ತಪಸ್ಸನ್ನೂ ಧರ್ಮಿಷ್ಠರು ನಡೆಸುತ್ತಿದ್ದುದು ಧರ್ಮರಕ್ಷಣೆಗಾಗಿ. ಅಂಬರೀಷನಾದರೋ ಬಲಿಷ್ಠನಾದ ರಾಜ. ಅವನಿಗೆ ಒಬ್ಬ ನರಪಶು ಮಾತ್ರ ಬೇಕಿದ್ದರೆ, ಬಲಪ್ರಯೋಗದಿಂದ ಯಾರನ್ನಾದರೂ ಒಯ್ಯಬಹುದಿತ್ತು. ಆದರೆ ಬಲವಿದ್ದರೂ ಧರ್ಮಿಯಾಗಿದ್ದ ಅವನು  ಹಾಗೆ ಮಾಡದೇ, ಧರ್ಮ್ಯವಾದ ರೀತಿಯಲ್ಲೇ ಅರಸಿ ಹೊರಟನು. 

ಅವನ ಧರ್ಮೋದ್ದೇಶವನ್ನು ಗುರುತಿಸಿಯೇ ಶುನಃಶೇಫನೂ ತನ್ನನ್ನು ಕೊಟ್ಟುಕೊಂಡದ್ದು (ತನ್ನ ತಂದೆತಾಯಿಯ ಪಕ್ಷಪಾತವನ್ನು ಕಂಡು ಸ್ವಲ್ಪ ಬೇಸರಿಸಿದ್ದರೂ). ಶ್ರೀರಂಗಮಹಾಗುರುಗಳು ವಿವರಿಸಿದಂತೆ " ಸತ್ಯಮೇವೋದ್ಧರಾಮ್ಯಹಮ್ ಎಂದು ಮೇಲೆತ್ತಿ ಬೆಳಗಿಸಿದಂಥ ಸತ್ಯ-ಧರ್ಮಗಳಿಗೆ ಅವನು [ರಾಜನು] ಪ್ರತಿನಿಧಿಯಾಗಿರುವಾಗ ಮಾತ್ರ ಅವನಿಗೆ ಪ್ರಜೆಗಳು ತಲೆಬಾಗಿದ್ದು". 

ಶುನಃಶೇಫನಿಗೆ ವಿಶ್ವಾಮಿತ್ರರನ್ನು ಕಂಡಾಗ ತಾನು ಜೀವಿಸಬೇಕೆಂಬಾಸೆ ಉಂಟಾದರೂ, ಅಂಬರೀಷನ ಧ್ಯೇಯೋದ್ದೇಶಗಳ ಬಗ್ಗೆ ಅವನಿಗೆ ಸಂಪೂರ್ಣ ನಂಬಿಕೆಯಿದ್ದ ಕಾರಣದಿಂದಲೇ ರಾಜನ ಯಜ್ಞವೂ ಸಫಲವಾಗಬೇಕೆಂಬ ಬೇಡಿಕೆಯಿಟ್ಟದ್ದು. ಇಲ್ಲಿ ರಾಜನ ಧಾರ್ಮಿಕವಾದ ನಡತೆ-ಶಾಸನಗಳಿಂದ ಆ ದೇಶದಲ್ಲಿದ್ದ ಧರ್ಮದ ಪಾರಮ್ಯ ಅರಿವಿಗೆ ಬರುತ್ತದೆ. 

ಮಹಾಭಾರತದಲ್ಲಿ ಬಂದೊಂದು ಪ್ರಶ್ನೆಯೆಂದರೆ "ಕಾಲವು ರಾಜನಿಗೆ ಕಾರಣವೋ, ರಾಜನು ಕಾಲಕ್ಕೆ ಕಾರಣನೋ?" ಎಂದು. ಅಲ್ಲಿಯೇ ಬರುವ ಉತ್ತರವೆಂದರೆ: ಇದರ ವಿಷಯದಲ್ಲಿ ಸಂಶಯವೇ ಬೇಡ - ರಾಜನೇ ಕಾಲಕ್ಕೆ ಕಾರಣ (ರಾಜಾ ಕಾಲಸ್ಯ ಕಾರಣಮ್). 

ಆಳುವವ ಒಳ್ಳೆಯವನಾಗಿದ್ದರೆ  ರಾಜ್ಯಕ್ಕೆ ಒಳ್ಳೆಯ ಕಾಲ ಬರುವುದು - ಎಂಬ ನಿಶ್ಚಯ ಅಲ್ಲಿ ಬಂದಿದೆ. ಈಚೆಗೆ ಅದು ನಮ್ಮ ನಿಮ್ಮ ಅನುಭವಕ್ಕೂ ಬಂದಿರಬಹುದು, ಅಲ್ಲವೆ?

ಸೂಚನೆ: 2/06/2024 ರಂದು ಈ ಲೇಖನ ವಿಜಯವಾಣಿಯ ಸುದಿನ ಲ್ಲಿ ಪ್ರಕಟವಾಗಿದೆ.