Sunday, June 16, 2024

ಕೃಷ್ಣಕರ್ಣಾಮೃತ - 18 ಕೃಷ್ಣನ ಕೊಳಲಿಗೊಂದು ಪ್ರಾರ್ಥನೆ Krishnana Kolaligondu Prarthane

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)ವಾಲ್ಮೀಕಿಮಹರ್ಷಿಗಳು ನಿರೂಪಿಸಿರುವ ಶ್ರೀರಾಮನೋ ವ್ಯಾಸಮಹರ್ಷಿಗಳು ನಿರೂಪಿಸಿರುವ ಶ್ರೀಕೃಷ್ಣನೋ ಭಗವಂತನ ಸಾಕ್ಷಾದ್ ಅವತಾರಗಳು; ಎಂದೇ ಅವರ ಚಿತ್ರ- ಶಿಲ್ಪಗಳಿಗೆ ಸಹ ನಮಸ್ಕಾರವುಂಟು. ಆದರೆ ನಮ್ಮ ದೇಶದಲ್ಲಿ ಸಂಗೀತವಾದ್ಯಗಳಿಗೆಲ್ಲ ನಮಸ್ಕರಿಸುವರೆಲ್ಲ! ಇದೇನಿದು? ಪಾಶ್ಚಾತ್ತ್ಯರಲ್ಲೂ ಅನೇಕರು ವಾದ್ಯಕುಶಲರಾಗಿರುವುದು ಸುವಿದಿತವೇ. ಅವರಾರೂ ಹಾಗೆಲ್ಲ ಮಾಡುವುದಿಲ್ಲವಲ್ಲಾ? ಎಂದು ಆಶ್ಚರ್ಯಪಡುವವರೂ ಉಂಟು. ವೀಣೆಯು ಬ್ರಹ್ಮಹತ್ಯಾ-ಪಾಪವನ್ನೂ ನೀಗಿಸಬಲ್ಲದು! - ಎಂಬ ಮಾತಿದೆಯಲ್ಲವೇ?

ಹಾಗೆಲ್ಲಾ ಹೇಗೆ ಸಾಧ್ಯ? - ಎಂಬ ಪ್ರಶ್ನೆ ಸುಲಭ; ಉತ್ತರವು ಸುಲಭವಲ್ಲ. ನಮ್ಮ ಕೈಯಲ್ಲಿರುವ ಪುಟ್ಟ ಮೊಬೈಲಿನಿಂದ ಸಾವಿರಾರು ಮೈಲಿ ದೂರದಲ್ಲಿರುವವರನ್ನು ಸಂಪರ್ಕಿಸಲೂ ಕಾಣಲೂ ಸಾಧ್ಯವೆಂಬುದನ್ನು ಈಗೊಂದೈವತ್ತು ವರ್ಷಗಳ ಹಿಂದೆ ಊಹಿಸುವುದೂ ಶಕ್ಯವಿರಲಿಲ್ಲವಷ್ಟೆ? ತೀರ ಸರಳವೂ ಸಾರಭೂತವೂ ಅತ್ಯಂತಸಂಕ್ಷಿಪ್ತವೂ ಆದ ಉತ್ತರ ಬೇಕೆ? ಈ ವಿಷಯದಲ್ಲಿ ಶ್ರೀರಂಗಮಹಾಗುರುಗಳಿತ್ತ ಟೆಲಿಗ್ರಾಮಿನ ಉಪಮಾನವನ್ನು ನೆನೆಸಿಕೊಳ್ಳಬಹುದು:  "ಯುಕ್ತ-ತರಂಗಗಳನ್ನು ಬಳಸಿ ಸಂದೇಶಗಳನ್ನು ಕಳುಹಿಸಲಾಗುವುದಲ್ಲವೇ? ಹಾಗೆಯೇ ಅಧ್ಯಾತ್ಮಕ್ಷೇತ್ರದಲ್ಲೂ." ಈ ವಿಷಯಗಳಿಗೆ ವಿಸ್ತೃತವಾದ ವಿವರಣೆಯೇ ಬೇಕು. ಇಲ್ಲದು ಅಪ್ರಸ್ತುತ.

ಪ್ರಕೃತ, ಲೀಲಾಶುಕನ ಈ ಕೃತಿಯಲ್ಲಿ ಶ್ರೀಕೃಷ್ಣನ ಕೊಳಲನ್ನು ಕುರಿತಾದ ಮಾತಿದೆ. ಕೊಳಲನ್ನೇ ಸಂಬೋಧಿಸಿ ಮಾತನ್ನಾಡಿದೆ: ಎಲೈ ಮುರಳಿಯೇ! (ಅಯಿ ಮುರಲಿ!) ಎಂಬುದಾಗಿ. ಯಾರನ್ನಾದರೂ ಕರೆದರೆ ಅವರ ಪ್ರತಿಕ್ರಿಯೆಯೇನು? ಕರೆದವರತ್ತ ಅವರು ನೋಡುತ್ತಾರೆ. ಯಾರನ್ನಾದರೂ ಸಂಬೋಧಿಸಿದಾಗ, ಅವರು ಕರೆದವರತ್ತ ಮುಖ ಮಾಡುವುದನ್ನೇ "ಅಭಿಮುಖೀಭಾವ' ಎನ್ನುವುದು.

ಕೊಳಲನ್ನು ಅಭಿಮುಖಮಾಡಿಕೊಂಡು ಏನನ್ನೋ ಕೇಳಬೇಕಾಗಿದೆ. ಬೇರೆಯವರಿಗೆ ನಮ್ಮಿಂದ ಏನೋ ಕೆಲಸವಾಗಬೇಕಾಗಿದ್ದಲ್ಲಿ ಕೆಲವೊಮ್ಮೆ ದರ್ಪತೋರುತ್ತೇವೋ ಏನೋ; ಬೇರೆಯವರಿಂದ ನಮಗೆ ಕೆಲಸವಾಗಬೇಕಿದ್ದಾಗ ದೈನ್ಯದಿಂದ ಕೇಳುತ್ತೇವೆ. ಇಲ್ಲಂತೂ ಈ ಕೊಳಲನ್ನು ಬೇಡಿಕೊಳ್ಳುವ ಸಂನಿವೇಶ. ಎಂದೇ, "ಕೈಮುಗಿದು ನಿನ್ನನ್ನು ಯಾಚಿಸುತ್ತಿದ್ದೇನೆ" - ಎಂದಿರುವುದು.

ನಾವು ಯಾರನ್ನಾದರೂ ಬೇಡುವುದೆಂದರೆ ಅವರಲ್ಲಿ ಏನೋ ಹಿರಿತನವಿದೆಯೆಂದೇ. ಕೊನೆಯ ಪಕ್ಷ, ಬಹಳ ಹಿರಿದಾದವರೊಂದಿಗೆ ಅವರಿಗೆ ನಿಕಟಸಂಪರ್ಕವಿದೆಯೆಂದೇ. ಯಾರಿಗಾದರೂ ಮಹಾರಾಜರೊಂದಿಗೆ ನೈಕಟ್ಯವಿದೆ (ಸಲಿಗೆಯಿದೆ) - ಎಂದರೆ, ಆಹಾ ಅಂತಹವರೊಡನೆ ಸಂಪರ್ಕ ಬೇಕು, ಏನಾದರೂ ಕೆಲಸಕ್ಕೆ ಬೇಕಾದೀತು - ಎಂದುಕೊಳ್ಳುವವರುಂಟು.

ಹಾಗೆಯೇ ಈ ಕೊಳಲಿಗಿಲ್ಲಿ ಸಲ್ಲುವ ಗೌರವ! ಸಾಕ್ಷಾತ್ ಮುಕುಂದನೊಂದಿಗೇ ನಿಕಟತೆಯುಂಟು, ಈ ಕೊಳಲಿಗೆ. ಎಷ್ಟು? ಆತನ ಸ್ಮೇರ-ವಕ್ತ್ರವಿದೆಯಲ್ಲಾ, ಎಂದರೆ ಮಂದಹಾಸದಿಂದ ಕೂಡಿರುವ ಮುಖವಿದೆಯಲ್ಲಾ, ಅದರ ಬಳಿಯೇ ಸುಳಿಯುವ ಭಾಗ್ಯವಿದಕ್ಕೆ! ಆತನ ಮುಖವಂತೂ ಒಳ್ಳೆಯ ಕಮಲದಂತಿರುವುದಲ್ಲವೇ?

ಪದ್ಮಸದೃಶವಾದ ಆ ಸುಂದರ-ವದನದ ಬಳಿ ಸಾರುವುದಷ್ಟೇ ಇದರ ಸೌಭಾಗ್ಯವಲ್ಲ! ಆತನ ಉಸಿರಿನ ಸಂಪರ್ಕವೇ ಇದಕ್ಕುಂಟು. ಕೊಳಲನ್ನೂದುವುದೆಂದರೆ ತನ್ನುಸಿರನ್ನು ತುಂಬಿಸಿ ತಾನೆ ಊದುವುದು? "ಮಧುರಾಧಿಪತೇರಖಿಲಂ ಮಧುರಂ" ಎನ್ನುವಂತೆ, ಶ್ರೀಕೃಷ್ಣನ ಉಸಿರೂ ಮಧುರವಾದದ್ದೇ.

ಮಧುರವೆಂಬ ಪದ ಬಂದಿರುವುದೇ ಮಧು ಎಂಬುದರಿಂದ. ಮಧುವೆಂದರೆ ಜೇನು. ಜೇನಿಗಿಂತಲೂ ಮಧುರವೇ? ಕೃಷ್ಣನ ಉಸಿರೂ ಮಧುವಿನಂತಿರುವುದು! ಅರವಿಂದವೆಂದಾಗಲೇ ಅದರಲ್ಲಿ ಸೌರಭವು ತುಂಬಿರುವುದೆಂಬುದು ನಮಗೆ ಹೊಳೆಯುತ್ತದೆ. ಹಾಗಿರುವಾಗ, ಅಲ್ಲಿ ಶ್ರೀಕೃಷ್ಣನ ಶ್ವಸನ(ಉಸಿರು) ಎಂದ ಮೇಲೆ ಆ ಮಧುವೆಂತಹುದೆಂದು ಹೇಳಬೇಕೆ? ಜೇನುತುಪ್ಪದ ಬಾಟಲೊಂದನ್ನು ನೋಡಿಯೇ, ಸವಿಗಂಡ ಮಕ್ಕಳ ಬಾಯಲ್ಲಿ ಜೊಲ್ಲು ಸುರಿಯಬಹುದು. ಆದರೆ ಅದರ ರಸವನ್ನೇ ಆಸ್ವಾದಿಸುವವರ ಸಂತೋಷವು ಮತ್ತೂ ಅತಿಶಯವಲ್ಲವೇ?

ನಮ್ಮೀ ಕೊಳಲಂತೂ ಕೃಷ್ಣನ ಉಸಿರೆಂಬ ಮಧುವಿನ ರಸವನ್ನು ಚೆನ್ನಾಗಿಯೇ ಬಲ್ಲುದು. ಓಹ್! ಅದೆಂತಹ ಸಾಮೀಪ್ಯ, ಎಂತಹ ಸಾಂನಿಧ್ಯ! ಎಂತಹ ನೈಕಟ್ಯ! ಅದೆಂತಹ ಪುಣ್ಯವದು, ಕೃಷ್ಣನ ಮುರಲಿಯದು!

ಯಾರಿಂದಲಾದರೂ ನಮಗೆ ಏನಾದರೂ ಕೆಲಸವಾಗಬೇಕಾದರೆ ಅವರಲ್ಲಿರುವ ಉತ್ಕೃಷ್ಟ-ಗುಣವೊಂದನ್ನು ಎತ್ತಿ ಹೇಳಿ ಮಾತಿಗಾರಂಭಿಸುವೆವಲ್ಲವೆ? ಏಕೆ? ಯಾರನ್ನಾದರೂ ಬೈದರೆ ಅಸಮಾಧಾನವೋ ಕೋಪವೋ ಅವರಲ್ಲುಕ್ಕುವಂತೆ, ಅವರಲ್ಲಿರುವ ಗುಣವೊಂದನ್ನು ಎತ್ತಿ ಹೇಳಿದರೆ ಏನೋ ಒಂದು ಪ್ರಸನ್ನತೆಯು ತಾನೇ ತಾನಾಗಿ ಅವರಲ್ಲಿ ಮೂಡುವುದಲ್ಲವೆ? ಯಾರಾದರೂ ಪ್ರಸನ್ನರಾಗಿದ್ದಾಗ ಅವರಲ್ಲಿಟ್ಟ ಪ್ರಾರ್ಥನೆಯು ಬೇಗನೇ ಕೈಗೂಡುವ ಸಂಭವ ಹೆಚ್ಚು.

ಎಂದೇ "ಕೃಷ್ಣ ಉಸಿರಿನ ಸವಿಗಂಡವಳೇ" ಎಂದು ಕೊಳಲನ್ನಿಲ್ಲಿ ಸ್ತುತಿಸಿರುವುದು. ಕೊಳಲು ನಪುಂಸಕಲಿಂಗವೆಂಬುದು ಕನ್ನಡದಲ್ಲಿ. "ಮುರಳೀ" ಎಂಬುದು ಸ್ತ್ರೀಲಿಂಗಶಬ್ದ, ಸಂಸ್ಕೃತದಲ್ಲಿ.

ನಿನ್ನನ್ನು ನಮಸ್ಕರಿಸಿ ಬೇಡುವೆ - ಎಂದದ್ದು ಯಾವುದಕ್ಕಾಗಿ? ಕೃಷ್ಣನು ಕೊಳಲನ್ನೂದುವಾಗ ಆತನ ಕೆಳದುಟಿಯನ್ನು ನೀನು ಸಮೀಪಿಸುವೆಯಲ್ಲವೆ? (ಆಹಾ ಒಬ್ಬಳಿಗೆ ಕೃಷ್ಣನ ಅಧರಮಣಿಯ ಸನಿಹ ದೊರೆಯಿತೆಂದರೆ ಎಂತಹ ಭಾಗ್ಯವದು!) ಆಗ ನನಗೊಂದು ಸಹಾಯ ಬೇಕು. ಏನು ಸಹಾಯ? ಕೃಷ್ಣನ ಕಿವಿಯಲ್ಲಿ ನೀನು ಹೇಳಬೇಕಾದ ವಿಷಯವೊಂದಿದೆ. ನನ್ನ ಅವಸ್ಥೆಯನ್ನು ದಯಮಾಡಿ ಆತನಿಗೆ ಗುಟ್ಟಾಗಿ ತಿಳಿಸು. ಇದನ್ನೇ ಬೇಡುತ್ತಿರುವುದು.

ಗೋಪಿಕೆಯೊಬ್ಬಳ ನುಡಿಯಿದಾದ್ದರಿಂದ ನಾವೇ ಊಹಿಸಿಕೊಳ್ಳಬಹುದು: ಕೃಷ್ಣನ ವಿಷಯದಲ್ಲಿ ತಾನು ಕಾಮಾರ್ತಳು. ನನ್ನ ವಿರಹ-ವೇದನೆಯನ್ನು ಆತನಲ್ಲಿ ನಿವೇದಿಸು. ಅದನ್ನೆಲ್ಲಾ ಗಟ್ಟಿಯಾಗಿ ಹೇಳಲಾದೀತೇ? ಕಿವಿಯಲ್ಲಿ ಗುಟ್ಟಾಗಿ ತಾನೆ ಹೇಳಬೇಕು! ದೂತಿಯೊಬ್ಬಳ ಮೂಲಕ ಪ್ರಿಯನಿಗೊಂದು ಸಂದೇಶವನ್ನು ಕಳುಹಿಸುವುದು ಹೇಗೋ ಹಾಗೇ ಇದು.

ಅಥವಾ, ಮುರಲಿಯೆಂಬುದು ಅಚೇತನವಸ್ತುವಲ್ಲವೇ? – ಎನ್ನುವಿರೋ? ಹಾಗೂ ಸರಿಯೇ! ಕಾಮಾರ್ತರಿಗೆ, ಇದು ಚೇತನ, ಇದು ಅಚೇತನ - ಎಂಬ ವಿವೇಕವು ಹಾರಿಹೋಗಿರುವುದಲ್ಲವೆ? ನನ್ನ ಪ್ರಿಯೆಗೊಂದು ಸಂದೇಶ ತಲುಪಿಸು - ಎಂದು ಮೇಘದೂತದಲ್ಲಿ ಯಕ್ಷನು ಕೇಳಿಕೊಳ್ಳಲಿಲ್ಲವೆ? ಸೀತೆಯ ಅಪಹರಣವಾದಾಗ ಗಿಡಮರಗಳನ್ನೆಲ್ಲ ರಾಮನು ಕೇಳಿಕೊಳ್ಳಲಿಲ್ಲವೆ - ನನ್ನ ಸೀತೆಯನ್ನು ಕಂಡಿರಾ – ಎಂದು? ಹಾಗೆಯೇ ಇದೂ.

ಅಥವಾ ಇಲ್ಲಿ ಗೋಪಿಕೆಯರೂ ಬೇಡ, ಅವರ ನೋವೂ ಬೇಡ; ಏಕೆಂದರೆ ಇದೊಂದು ಗೋಪಿಕೆಯ ಆರ್ತನುಡಿ - ಎಂದೇನೂ ಶ್ಲೋಕದಲ್ಲಿ ಹೇಳಿಲ್ಲವಲ್ಲ? - ಎನ್ನುವುದಾದರೆ, ಭಕ್ತನೊಬ್ಬನ ದೀನವಾದ ಪ್ರಾರ್ಥನೆಯಿದೆಂದುಕೊಳ್ಳಿ. ಅಥವಾ ಲೀಲಾಶುಕನೇ ಭಗವಂತನ ದರ್ಶನವು ತನಗಿನ್ನೂ ಪ್ರಾಪ್ತವಾಗಿಲ್ಲವಲ್ಲಾ! - ಎಂದು ಕಂಗೆಟ್ಟು ತನ್ನ ದುರ್ದಶೆಯನ್ನು ಹೇಳಿಕೊಳ್ಳುತ್ತಿದ್ದಾನೆಂದು ಭಾವಿಸಬಹುದು: ಶೋಚನೀಯವಾದ ಕಷ್ಟಸ್ಥಿತಿಯನ್ನು ಗುಟ್ಟಾಗಿ ತಾನೆ ತಿಳಿಸುವುದು?

ಹೇಗಿಟ್ಟುಕೊಂಡರೂ, ಒಂದು ರಮಣೀಯವಾದ ಭಾವವು ಈ ಶ್ಲೋಕದಲ್ಲಿ ಮೂಡಿಬಂದಿದೆ - ಎನ್ನುವುದರಲ್ಲಿ ಸಂಶಯವೇ ಇಲ್ಲ.

ನಮಗೂ ಅನ್ವಯವಾಗುವ ಇಂತಹ ಮುಗ್ಧ-ಭಾವವೊಂದನ್ನು ಸುಭಗವಾಗಿ ಚಿತ್ರಿಸಿದ್ದಕ್ಕಾಗಿ ನಾವು ಲೀಲಾಶುಕನಿಗೆ ಋಣಿಗಳು.


ಶ್ಲೋಕ ಹೀಗಿದೆ:

ಅಯಿ ಮುರಲಿ! ಮುಕುಂದ-ಸ್ಮೇರ-ವಕ್ತ್ರಾರವಿಂದ-

-ಶ್ವಸನ-ಮಧು-ರಸಜ್ಞೇ ತ್ವಾಂ ಪ್ರಣಮ್ಯಾದ್ಯ ಯಾಚೇ |

ಅಧರ-ಮಣಿ-ಸಮೀಪಂ ಪ್ರಾಪ್ತವತ್ಯಾಂ ಭವತ್ಯಾಂ

ಕಥಯ ರಹಸಿ ಕರ್ಣೇ ಮದ್ದಶಾಂ ನಂದ-ಸೂನೋಃ ||

ಸೂಚನೆ : 17/6/2024 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ  ಪತ್ರಿಕೆಯಲ್ಲಿ ಪ್ರಕಟವಾಗಿದೆ.