Sunday, June 16, 2024

ಸರಿಯಾದ ಗುರು - ತಪ್ಪಿದ ಗುರಿ (Sariyada Guru - Tappida Guri)


ಲೇಖಕರು : 
ಡಾ. ಹಚ್.ಆರ್. ಮೀರಾ

(ಪ್ರತಿಕ್ರಿಯಿಸಿರಿ lekhana@ayvm.in)ಯಾರಾದರೂ ತ್ರಿಶಂಕುಸ್ವರ್ಗದಲ್ಲಿದ್ದಾರೆಂದರೆ ಏನರ್ಥ? ಯಾರು ಈ ತ್ರಿಶಂಕು? ಬಹಳ ಧಾರ್ಮಿಕನಾಗಿದ್ದ, ರಘುವಂಶದ ರಾಜ ತ್ರಿಶಂಕು. ಸಶರೀರನಾಗಿ (ಎಂದರೆ ಶರೀರಸಹಿತವಾಗಿ) ಸ್ವರ್ಗಕ್ಕೆ ಹೋಗಬೇಕೆಂಬ ಆಸೆಯಿಂದ ಯಜ್ಞವನ್ನು ಮಾಡಿಸಲು ಕುಲಗುರುವಾಗಿದ್ದ ವಸಿಷ್ಠರನ್ನು ಅವನು ಬೇಡಿಕೊಂಡ. ಅದು ಸಾಧ್ಯವಿಲ್ಲವೆಂದು ಅವರೆಂದಾಗ, ತಪೋನಿಷ್ಠರಾಗಿದ್ದ ಅವರ ಮಕ್ಕಳನ್ನು ಮೊರೆಹೊಕ್ಕ. ತಮ್ಮ ತಂದೆಯೂ, ಬ್ರಹ್ಮರ್ಷಿಯೂ, ರಾಜನ ಕುಲಗುರುವೂ, ಆಗಿದ್ದ ವಸಿಷ್ಠರ ಮಾತನ್ನು ಮೀರಿ ಈತನು ತಮ್ಮನ್ನು ಕೇಳಿದ್ದನ್ನು ಗುರುವಚನಧಿಕ್ಕಾರವಾಗಿ ಅವರು ಕಂಡರು. ಕ್ರೋಧದಿಂದ ಅವನ ಯಾಚನೆಯನ್ನವರು ನಿರಾಕರಿಸಿದರು. ಈ ಅಭಿಲಾಷೆಯನ್ನು ಪೂರೈಸುವ ಬೇರೊಬ್ಬರನ್ನು ಅರಸಿ ಹೋಗುತ್ತೇನೆಂದು ಅವನು ವಿನಯಪೂರ್ವಕವಾಗಿಯೇ ಅವರಿಗೆಂದಾಗ, ಆ ಗುರುಪುತ್ರರು ಸಂಕ್ರುದ್ಧರಾಗಿ ಅವನನ್ನು ಚಂಡಾಲನಾಗೆಂದು ಶಪಿಸಿಬಿಟ್ಟರು. ರಾಜನು ಮರುದಿನವೇ ಚಂಡಾಲರೂಪ ಹೊಂದಿಬಿಟ್ಟನು. ಹೀಗಿದ್ದಾಗ ತಪೋಧನರಾದ, ಮತ್ತು ತಪಶ್ಚರ್ಯೆಯಲ್ಲಿ ಮುಳುಗಿದ್ದ, ವಿಶ್ವಾಮಿತ್ರರನ್ನು ಆತ ಮೊರೆಹೊಕ್ಕ. ನೂರು ಯಜ್ಞಗಳನ್ನು ತಾನು ಮಾಡಿದ್ದಾಗಿಯೂ, ಎಂದೂ ಸತ್ಯವಂತನೂ ಪ್ರಜಾರಕ್ಷಕನೂ ಆಗಿರುವುದಾಗಿಯೂ ಅರುಹಿ, ತನ್ನ ಮನೋಭಿಲಾಷೆಯನ್ನು ತ್ರಿಶಂಕು ತೋಡಿಕೊಂಡ.

ಧರ್ಮಿಷ್ಠನಾದ ಅವನ ದುರ್ಗತಿಗೆ ಮರುಕಪಟ್ಟು, ವಿಶ್ವಾಮಿತ್ರರು ಅವನ ಪ್ರಾರ್ಥನೆಯನ್ನು ಮನ್ನಿಸಿ ಯಜ್ಞ ನಡೆಸಿದರು. ಹವಿಸ್ಸನ್ನು ಸ್ವೀಕರಿಸಲು ದೇವತೆಗಳು ಬರದಿದ್ದಾಗಲೂ ತಮ್ಮ ತಪೋಬಲದಿಂದಲೇ ತ್ರಿಶಂಕುವನ್ನು ಸ್ವರ್ಗಕ್ಕೇರಿಸಿದರು. ಸ್ವರ್ಗದಿಂದ ಅವನನ್ನು ಕೆಳಗೆ ಇಂದ್ರನು ದೂಡಿದಾಗ, ಇನ್ನೊಂದು ಸ್ವರ್ಗವನ್ನೇ ವಿಶ್ವಾಮಿತ್ರರು ಸೃಷ್ಟಿಸಲು ಪ್ರಾರಂಭಿಸಿದರು. ತಲ್ಲಣಿಸಿದ ದೇವತೆಗಳು ಅವರನ್ನು ಪ್ರಾರ್ಥಿಸಲಾಗಿ ಅವರು ಹಾಗಿದ್ದರೆ ತಮ್ಮ ಸೃಷ್ಟಿಯು ಎಂದಿಗೂ ನಿಂತಿರಬೇಕೆಂದೂ, ತ್ರಿಶಂಕುವಿಗೆ ತಾವು ಕೊಟ್ಟ ಮಾತು ಸುಳ್ಳಾಗಬಾರದೆಂದೂ ಕೇಳಿಕೊಂಡರು. ದೇವತೆಗಳು ಅದಕ್ಕೆ ಒಪ್ಪಲು, ಕೌಶಿಕಸೃಷ್ಟವಾದ ಸ್ವರ್ಗದಲ್ಲಿ ತ್ರಿಶಂಕುವು ತಲೆಕೆಳಕಾಗಿ ಶಾಶ್ವತವಾಗಿ ವಿರಾಜಿಸುವಂತಾಯಿತು.


ಹೀಗೆ ತಲೆಕೆಳಕಾಗಿ ನಿಂತ ತ್ರಿಶಂಕುವಿಗೆ ಸಿಕ್ಕದ್ದು ತ್ರಿಶಂಕುಸ್ವರ್ಗವೋ "ತ್ರಿಶಂಕುನರಕ"ವೋ ಎಂಬ ಪ್ರಶ್ನೆಯೇಳಬಹುದು. ಅವನು ಧಾರ್ಮಿಕನಾದ ರಾಜ; ಹಲವು ಯಜ್ಞಗಳನ್ನು ಮಾಡಿದ್ದವನು. ಸಶರೀರನಾಗಿ ಸ್ವರ್ಗಕ್ಕೇರಬೇಕೆಂಬ ಆಸೆಯೊಂದನ್ನು ವ್ಯಕ್ತಪಡಿಸಿದ್ದಕ್ಕೆ ಇಷ್ಟು ದೊಡ್ಡ ಶಾಪವೇ? - ಎನಿಸಬಹುದು. ಬ್ರಹ್ಮರ್ಷಿಗಳಾದ ವಸಿಷ್ಠರು ಮಹಾಜ್ಞಾನಿಗಳು. ಹಾಗೂ ತ್ರಿಶಂಕುವಿನ ಗುರುಗಳು. ಗುರುವಿನ ಸ್ಥಾನ ಬಹುದೊಡ್ಡದು. ಶಿಷ್ಯನ ಶ್ರೇಯಸ್ಸಿನ ಬಗ್ಗೆ ಅವರ ಕಾಳಜಿ ಸದಾ ಇರುತ್ತದೆ. ಅಂತಹವರು ಏನನ್ನಾದರೂ ಸಾಧ್ಯವಿಲ್ಲ ಅಥವಾ ಬೇಡವೆಂದಾಗ, ಅವರ ಮಾತನ್ನು ಶಿರಸಾವಹಿಸುವುದು ಶಿಷ್ಯನ ಧರ್ಮ. ಗುರುವೆಂದರೆ ಯಾರು? ಶ್ರೀರಂಗಮಹಾಗುರುಗಳ ಮಾತಿನಲ್ಲಿ "ಗುರುವು ಕೇವಲ ವ್ಯಕ್ತಿಯಲ್ಲ, ಜ್ಞಾನಕೋಶ. ಆ ಕೋಶವನ್ನು ಒಳಗಿಟ್ಟುಕೊಂಡು ಒಳಗಿರುವುದನ್ನು ಅನುಭವಿಸಬೇಕು. ಅಂಧಕಾರವನ್ನು ನಿವೃತ್ತಿಮಾಡುವ ಜಾಗವೇ ಗುರು."


ತ್ರಿಶಂಕು ಆಸೆಪಟ್ಟದ್ದೇ ತಪ್ಪೆಂದು ಹೇಳಲಾಗುವುದಿಲ್ಲ. ಆದರೆ ಗುರುವು ಹಾಗಾಗುವುದಿಲ್ಲವೆಂದಾಗ, ಅವರ ಮಾತಿನ ಮಹತ್ತ್ವವನ್ನರಿಯದೆ, ಅದೇ ಕಾರ್ಯವನ್ನು ಬೇರೊಬ್ಬರಿಂದ ಮಾಡಿಸಹೊರಟದ್ದು ಅಪರಾಧವಾಯಿತು. ಕೊನೆಗೆ ತ್ರಿಶಂಕುವಿಗಾಗಿ ವಿಶ್ವಾಮಿತ್ರರು ಮತ್ತೊಂದು ಸ್ವರ್ಗವನ್ನೇ ಸೃಷ್ಟಿಸಿದರೂ, ಅದು ನಿಜವಾದ ಸ್ವರ್ಗವಾಗಲಿಲ್ಲ. ಧರ್ಮಿಷ್ಠನಾದ್ದರಿಂದ ಅವನಿಗೊಂದು ಶಾಶ್ವತಸ್ಥಾನ ಸಿಕ್ಕಿತಾದರೂ ಅದು ಇಲ್ಲೂ ಇಲ್ಲ ಅಲ್ಲೂ ಇಲ್ಲವೆಂಬಂತಾಯಿತು. ನಮಗೆ ಶ್ರೇಯಸ್ಸನ್ನು ಬಯಸುವ ಗುರುವಿನ ವಿಷಯದಲ್ಲಿ ನಿಷ್ಠೆಯಿಂದಿರುವುದು ನಮಗೆ ಅವರಲ್ಲಿ ಭಕ್ತಿ-ಗೌರವಗಳಿರುವಷ್ಟೇ ಮುಖ್ಯ.

ಸೂಚನೆ: 15/6/2024 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ದಲ್ಲಿ ಪ್ರಕಟವಾಗಿದೆ.