Sunday, June 23, 2024

ವ್ಯಾಸ ವೀಕ್ಷಿತ 93 ಸುಂದೋಪಸುಂದರು ಮುನಿಜನರಿಗಿತ್ತ ಕಿರುಕುಳ (Vyasa Vikshita 93 Sundopasundaru Munijanarigitta Kirukula)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)



ಸುಂದೋಪಸುಂದರು ಬಂದುದು ದೇವತೆಗಳಿಗೆ ತಿಳಿಯಿತು. ಪ್ರಭುವು ಅವರಿಗೆ ಕೊಟ್ಟಿರುವ ವರದಾನವೂ ತಿಳಿದಿತ್ತು. ಆ ಕಾರಣದಿಂದಾಗಿ ತ್ರಿವಿಷ್ಟಪವನ್ನೇ, ಎಂದರೆ ಸ್ವರ್ಗವನ್ನೇ, ತೊರೆದು ದೇವತೆಗಳು ಬ್ರಹ್ಮಲೋಕಕ್ಕೆ ಹೊರಟುಹೋದರು!

ಇಂದ್ರಲೋಕವನ್ನು ಗೆದ್ದ ಬಳಿಕ,  ಯಕ್ಷಗಣ-ರಾಕ್ಷಸಗಣಗಳನ್ನೂ, ಖೇಚರರಾದ ಎಂದರೆ ಆಕಾಶ-ಸಂಚಾರಿಗಳಾದ, ಭೂತ-ಗಣಗಳನ್ನೂ- ತೀವ್ರಪರಾಕ್ರಮಿಗಳಾದ ಅವರಿಬ್ಬರೂ ಬಡಿದು ಹಾಕಿದರು. ಭೂಮಿಯೊಳಗಣ ನಾಗರನ್ನು ಸೋಲಿಸಿದರು, ಆ ಮಹಾರಥರು. ಮತ್ತು ಸಮುದ್ರ-ತಟದಲ್ಲಿ ವಾಸಮಾಡುತ್ತಿದ್ದ ಮ್ಲೇಚ್ಛ-ಜಾತಿಯವರನ್ನೆಲ್ಲಾ ಸೋಲಿಸಿದರು.

ಉಗ್ರ-ಶಾಸನರಾಗಿ, ಎಂದರೆ ಕ್ರೂರವಾಗಿ ಆಳುವವರಾಗಿ, ಭೂಮಿಯನ್ನೆಲ್ಲವನ್ನೂ ಆ ಬಳಿಕ ಗೆದ್ದರು; ಮತ್ತು ಸೈನಿಕರನ್ನು ಕರೆದು ಅವರಿಗೆ ಸುತೀಕ್ಷ್ಣವಾದ ಮಾತುಗಳನ್ನು ಹೇಳಿದರು: "ಮಹಾ-ಯಜ್ಞಗಳನ್ನು ಆಚರಿಸುವುದರಿಂದ ರಾಜರ್ಷಿಗಳು ದೇವತೆಗಳಿಗೆ ಉಪಕರಿಸುತ್ತಾರೆ; ಹಾಗೆಯೇ, ಹವ್ಯ-ಕವ್ಯಗಳನ್ನು - ಎಂದರೆ ದೇವತೆಗಳಿಗೂ ಪಿತೃ-ದೇವತೆಗಳಿಗೂ ಸಲ್ಲುವ ಅರ್ಪಣಗಳನ್ನು - ಕೊಡುವುದರಿಂದ ಬ್ರಾಹ್ಮಣರೂ ದೇವತೆಗಳಿಗೆ ಉಪಕರಿಸುತ್ತಾರೆ. ದೇವತೆಗಳ ತೇಜಸ್ಸು-ಬಲ-ಶ್ರೀಗಳನ್ನುಇವರಿಬ್ಬರೂ ಹೀಗೆ ವೃದ್ಧಿಪಡಿಸುತ್ತಾರೆ. ಅದುದರಿಂದ ಯಜ್ಞವೇ ಮೊದಲಾದ ಕರ್ಮಗಳಲ್ಲಿ ತೊಡಗಿರುವವರೆಲ್ಲರೂ ಅಸುರ-ದ್ವೇಷಿಗಳೆಂದೇ; ನಾವೆಲ್ಲರೂ ಒಗ್ಗಟ್ಟಾಗಿ ಅವರೆಲ್ಲರ ವಧೆಯನ್ನು ಸರ್ವಾತ್ಮನಾ, ಎಂದರೆ ಸರ್ವ-ಪ್ರಕಾರದಿಂದಲೂ, ಮಾಡತಕ್ಕದ್ದು" ಎಂದರು.

ಈ ರೀತಿಯಾಗಿ ಅವರಿಗೆ ಅಪ್ಪಣೆಯಿತ್ತು, ಕ್ರೂರ-ಬುದ್ಧಿಯನ್ನಿಟ್ಟುಕೊಂಡು, ಮಹೋದಧಿಯ ದಡಕ್ಕೂ, ಎಂದರೆ ಸಮುದ್ರದ ಪೂರ್ವತೀರಕ್ಕೂ, ಮತ್ತು ಎಲ್ಲ ದಿಕ್ಕುಗಳಿಗೂ ಆಕ್ರಮಣ ಮಾಡುತ್ತಾ ನಡೆದರು. ಯಾರು ಯಾರು ಯಜ್ಞ ಮಾಡುತ್ತಿದ್ದರೋ ಅವರೆಲ್ಲರನ್ನೂ ಬಲ-ಪ್ರಯೋಗದಿಂದ ಕೊಂದು, ಆ ಇಬ್ಬರೂ ಬಲ-ಶಾಲಿಗಳು ಮುಂದೆ ಸಾಗಿದರು.

ಶುದ್ಧಾತ್ಮರಾದ ಮುನಿಗಳು ಆಶ್ರಮಗಳಲ್ಲಿ ಸಿದ್ಧಪಡಿಸಿಕೊಂಡಿರುವ ಅಗ್ನಿಹೋತ್ರ-ಸಾಮಗ್ರಿಗಳನ್ನು ತೆಗೆದೆತ್ತಿ, ಯಾವುದೇ ಭಯವಿಲ್ಲದೆ, ಅವರಿಬ್ಬರ ಸೈನಿಕರು ನೀರಿನೊಳಗೆ ಬಿಸಾಡಿದರು.

ತಪಸ್ಸನ್ನೇ ಧನವಾಗಿ ಹೊಂದಿರುವ, ಎಂದರೆ ಅಪಾರವಾದ ತಪೋಬಲವನ್ನು ಸಂಪಾದಿಸಿರುವ, ಕೆಲ ಮಹಾತ್ಮರು ಕ್ರುದ್ಧರಾಗಿ ಇವರಿಬ್ಬರಿಗೆ ಶಾಪವಿತ್ತರು; ಆದರೇನು, ಆ ಶಾಪಗಳು ಏನೂ ಕೆಲಸಮಾಡದಾದವು, ಏಕೆಂದರೆ ಅವರಿಗೆ ಈ ಮೊದಲೇ ಕೊಡಲಾಗಿದ್ದ ವರಗಳ ಪ್ರಭಾವದಿಂದ ಅವು ಪ್ರತಿಹತವಾಗುತ್ತಿದ್ದವು: ಎಂದರೆ, ತಾವಿತ್ತ ಶಾಪಗಳು ಕಲ್ಲಿನ ಮೇಲೆ ಬಿಟ್ಟ ಬಾಣಗಳಂತಾಗುತ್ತಿದ್ದವು; ಯಾವಾಗ ತಮ್ಮ ಶಾಪಗಳು ಯಾವ ಬಾಧವನ್ನೂ ಅವರ ಮೇಲೆ ಉಂಟು ಮಾಡಲಿಲ್ಲವೋ, ಆಗ ಆ ಬ್ರಾಹ್ಮಣರು ತಮ್ಮ ನಿಯಮಗಳನ್ನೆಲ್ಲ ತೊರೆದು ಅಲ್ಲಿಂದ ಕಾಲ್ಕಿತ್ತರು!

ಭೂಮಿಯ ಮೇಲಿದ್ದ ತಪಃಸಿದ್ಧರು ಶಮ-ದಮ-ಸಂಪನ್ನರು -ಇವರುಗಳೆಲ್ಲಾ, ಅವರಿಬ್ಬರ ಭಯದಿಂದಾಗಿ ಓಡಿಹೋದರು - ಗರುಡನ ಭಯದಿಂದ ಸರ್ಪಗಳು ಓಡಿಹೋಗುವಂತೆ! ಆಶ್ರಮಗಳು ಮಥನಗೊಂಡವು. ಕಲಶಗಳೂ ಸ್ರುವಗಳೂ ಒಡೆದು ಚೆಲ್ಲಾಪಿಲ್ಲಿಯಾದವು. ಕಾಲನ ಹೊಡೆತಕ್ಕೆ ಸಿಲುಕಿಯೋ ಎಂಬಂತೆ, ಜಗತ್ತೆಲ್ಲವೂ ಶೂನ್ಯವಾಗಿ ಹೋಯಿತು.

ಋಷಿಗಳೆಲ್ಲ ಹೀಗೆ ಅದೃಶ್ಯರಾಗಿಹೋಗಿಬಿಡಲು, ಸುಂದೋಪಸುಂದರು ಒಂದು ನಿಶ್ಚಯವನ್ನು ಮಾಡಿಕೊಂಡರು: ತಮ್ಮ ರೂಪವನ್ನೇ ಬದಲಾಯಿಸಿಕೊಂಡರು - ವಧಕಾರ್ಯವನ್ನು ಮುಂದುವರೆಸಲೆಂದು!

ಮದಿಸಿದ ಆನೆಯ ರೂಪವನ್ನು ತಾಳಿ, ದುರ್ಗಮಸ್ಥಾನಗಳಲ್ಲಿ ಅಡಗಿಕುಳಿತಿದ್ದ ಋಷಿಗಳನ್ನು ಯಮನ ಮನೆಗೆ ಕಳುಹಿಸಿದರು. ಈಗ ಎರಡು ಸಿಂಹಗಳಾಗುವುದು, ಈಗ ಎರಡು ಹುಲಿಗಳಾಗುವುದು, ಮತ್ತೆ ಅಂತರ್ಧಾನ ಹೊಂದುವುದು - ಹೀಗೆ ನಾನಾ ಉಪಾಯಗಳನ್ನು ಮಾಡಿ ಋಷಿಗಳನ್ನು ಹುಡುಕಿ ಹುಡುಕಿ ಕೊಂದರು, ಆ ಕ್ರೂರದೈತ್ಯರು!

ಸೂಚನೆ : 23/6/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.