Tuesday, June 11, 2024

ಅಷ್ಟಾಕ್ಷರೀ 59 ಪರ-ಪಾಪೈಃ ವಿನಶ್ಯಂತಿ (Astaksari 59 – Parapapaih Vinashyanti)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in) ರಾಮಾಯಣದಲ್ಲಿ ಸೀತಾಪಹರಣವನ್ನು ಮಾಡಲು ರಾವಣನು ಹಾಕಿದ ಸಂಚು-ಹೊಂಚುಗಳ ಚಿತ್ರಣವು ರೋಚಕವಾಗಿದೆ.

ಸೀತೆಯನ್ನು ಅಪಹರಿಸುವ ದುರ್ಬೋಧನೆಯನ್ನು ರಾವಣನಿಗೆ ಮಾಡಿದವಳು ಶೂರ್ಪಣಖೆ. ಆದರೆ ಅದಕ್ಕಿಂತ ಮೊದಲೇ ಅದೇ ದುರ್ಬೋಧನೆಯನ್ನು ರಾವಣನಿಗೆ ಮಾಡಿದವನು ಅಕಂಪನ.

ಅಕಂಪನನು ಸುಮಾಲಿಯೆಂಬ ರಾಕ್ಷಸನ ಮಗ. ದೂಷಣ, ತ್ರಿಶಿರಸ್ ಹಾಗೂ ಖರ - ಇವರನ್ನು ಕೊಂದದ್ದಲ್ಲದೆ, ಹದಿನಾಲ್ಕುಸಹಸ್ರ ರಾಕ್ಷಸರನ್ನು ರಾಮನೊಬ್ಬನೇ ಪದಾತಿಯಾಗಿದ್ದೂ ಸಂಹರಿಸಿದನಲ್ಲವೇ? ಎಂದೇ, ತ್ವರೆ ಮಾಡುತ್ತ ವೇಗವಾಗಿ ಲಂಕೆಗೆ ಹೋಗಿ ರಾವಣನಿಗೆ ಎಲ್ಲವನ್ನೂ ಅಕಂಪನ ತಿಳಿಸಿದ. ಅದಕ್ಕೆ, ರಾಮ-ಲಕ್ಷ್ಮಣರಿಬ್ಬರನ್ನೂ ಸಂಹರಿಸುವುದಾಗಿ ಹೇಳಿದ, ರಾವಣ. ಅದು ಅಶಕ್ಯವೆಂದು ತಿಳಿಹೇಳಿದ ಅಕಂಪನ, ಸ್ತ್ರೀರತ್ನವೆನಿಸುವ ಸೀತೆಯ ಪರಮಸೌಂದರ್ಯವನ್ನು ಚಿತ್ರಿಸಿದ. ಅವಳೊಬ್ಬಳನ್ನು ಅಪಹರಿಸಿದರೆ, ರಾಮನು ಪ್ರಾಣಬಿಡುವನೆಂದ.

ಆತನ ಮಾತಿನ ಮೇರೆಗೆ ರಾವಣನು ಮಾರೀಚನಲ್ಲಿಗೆ ಹೋದ.  ರಾಮಭಾರ್ಯಾಪಹರಣದಲ್ಲಿ ಮಾರೀಚನ ಸಹಕಾರವನ್ನು ಯಾಚಿಸಿದ. ಆದರೆ ಮಾರೀಚ ರಾವಣನಿಗೇ ರಾಮನ ಎಲ್ಲೆಯಿಲ್ಲದ ಪರಾಕ್ರಮವನ್ನು ತಿಳಿಸಿ, "ರಾಮನನ್ನು ಕೆಣಕಿದೆಯಾದರೆ ನೀ ಕೆಟ್ಟೆ" - ಎಂದೆಚ್ಚರಿಸಿದ. ಮರುಮಾತಿಲ್ಲದೆ ರಾವಣ ಹಿಂದಿರುಗಿದ.

ಆಮೇಲೆ ಬಂದಳು ಶೂರ್ಪಣಖೆ. "ಬುದ್ಧಿಹೀನನಾದ ನೀನದೆಂತಹ ರಾಜ?  ಖರಾದಿ-ರಾಕ್ಷಸರು ಹದಿನಾಲ್ಕುಸಾವಿರ ಮಂದಿ ಹತರಾದರೂ ಎಚ್ಚೆತ್ತುಕೊಳ್ಳಲಿಲ್ಲವೆ? - ಎಂದು ಮೂದಲಿಸಿದಳು. ರಾವಣ ಕೆಂಡವಾದ. ಅವಳನ್ನೇ ವಿಚಾರಿಸಿದ, ರಾಮನ ಬಗ್ಗೆ. ರಾಮ-ಲಕ್ಷ್ಮಣರ ಮಹಾಪರಾಕ್ರಮವನ್ನಷ್ಟೇ ಅಲ್ಲದೆ, ಸೀತೆಯ ಪರಮಸೌಂದರ್ಯವನ್ನೂ ಬಣ್ಣಿಸಿದಳಾಕೆ. ಆತನ ಕಾಮವನ್ನು ಕೆರಳಿಸಲೆಂದೇ ಸೀತೆಯ ಸ್ತನ-ಜಘನಗಳ ಪೀನತೆ-ಸೌಷ್ಠವಗಳನ್ನೂ ಚಿತ್ರಿಸಿದಳು. "ನಿನಗೆ ಹೆಂಡತಿಯಾಗಲೆಂದು ಅವಳನ್ನು ತರಹೋಗಿ ನಾನು ವಿರೂಪಳಾದೆ" - ಎಂದು ಸುಳ್ಳೇ ತೋಡಿಕೊಂಡಳು!

ಮತ್ತೆ ಹೊರಟ ರಾವಣ, ಮಾರೀಚನಲ್ಲಿಗೆ. "ಬೆಳ್ಳಿಯ ಬೊಟ್ಟುಗಳಿರುವ ಚಿನ್ನದ ಜಿಂಕೆಯಾಗಿ ಸೀತೆಯ ಕಣ್ಣನ್ನು ಸೆಳೆ. ರಾಮಲಕ್ಷ್ಮಣರು ಅಲ್ಲಿಲ್ಲವಾಗಲು ಸೀತೆಯನ್ನು ನಾನಪಹರಿಸುವೆ" - ಎಂದ.

ಮಹಾಪ್ರಾಜ್ಞನಾದ ಮಾರೀಚ ರಾವಣನಿಗೆ ದೀರ್ಘವಾಗಿಯೇ ಉಪದೇಶಿಸಿದ. "ನಿನ್ನನ್ನು  ಕೊನೆಗಾಣಿಸಲೆಂದೇ ಸೀತೆ ಹುಟ್ಟಿರುವಳೇನು? ಅಪ್ರಮೇಯನಾದ ರಾಮ ಮೈತಾಳಿಬಂದಿರುವ ಧರ್ಮ. ಸೀತೆಯು ಆತನಿಗೆ ಪ್ರಾಣಿಕ್ಕಿಂತಲೂ ಹೆಚ್ಚು" ಎಂದನಲ್ಲದೆ, ರಾಮಬಾಣದ ರುಚಿಯನ್ನು ತಾನು ಹಿಂದೆಯೇ ಕಂಡಿರುವೆನೆಂದ. "ಬಾಲ್ಯದಲ್ಲೂ ಕಡುಪರಾಕ್ರಮಿ ರಾಮ! ಈ ಪರಸ್ತ್ರೀ-ಚಿಂತೆಯನ್ನು ಬಿಡು, ನೆಮ್ಮದಿಗಿದು ದಾರಿಯಲ್ಲ" ಎಂದೆಲ್ಲಾ ಪರಿಪರಿಯಾಗಿ ಎಚ್ಚರಿಸಿದ. ಕೇಡುಗಾಲ ಬಂದಿದ್ದ ರಾವಣ ಕೇಳಿಯಾನೇ?  

ತನ್ನ ಹಿತನುಡಿಗಳ ನಡುವೆ ಮಾರೀಚನಾಡಿದ ಮಾತೊಂದು ಮನನೀಯವಾಗಿದೆ: ಪಾಪ  ಮಾಡದವರೂ ಪಾಪಿ-ಸಂಗದಿಂದಾಗಿ, ಅವರ ಪಾಪಗಳಿಂದ ನಾಶಹೊಂದುವರು": ಪರ-ಪಾಪೈಃ ವಿನಶ್ಯಂತಿ.

ಏನಿದು? ಬೇರೆಯವರ ಪಾಪ ನಮಗೆ ತಟ್ಟುವುದೇ? ಯಾವ ನ್ಯಾಯವಿದು? ನಮ್ಮ ಕರ್ಮಕ್ಕೆ ನಾವು ಹೊಣೆಯೆಂದರೆ ಸರಿ. ಅನ್ಯರ ಕರ್ಮವೂ ನಮ್ಮನ್ನು ಬಾಧಿಸುವುದುಂಟೇ?

ಸಂಗದೋಷವೆನ್ನುವುದಿದನ್ನೇ. ಗುಣ-ದೋಷಗಳು ಒಬ್ಬರಿಂದೊಬ್ಬರಿಗೆ ಸಂಕ್ರಮಿಸುವುವು. "ನಾನು ಸರಿಯಾಗಿದ್ದರೆ ಸಾಕು; ನನ್ನ ಜೊತೆಗಾರರು ಏನನ್ನಾದರೂ ಮಾಡಿಕೊಳ್ಳಲಿ; ಅವರವರಿಗೆ ಅವರವರ ಪುಣ್ಯಪಾಪಗಳು. ಮಾಡಿದ್ದುಣ್ಣೋ ಮಹರಾಯ. ಒಬ್ಬರು ಮಾಡಿದ್ದನ್ನಿನ್ನೊಬ್ಬರುಣ್ಣುವುದುಂಟೇ? " - ಎಂದೆಲ್ಲಾ ಯೋಚಿಸುವವರುಂಟು. ಆದರದು ಸರಿಯಲ್ಲ.

ಕೆಲವೊಮ್ಮೆ ಕೆಟ್ಟದರ ಸೋಂಕು ಎಷ್ಟು ಬೇಗನೆ ಮತ್ತು ಎಷ್ಟು ತೀವ್ರವಾಗಿ ಪರಿಣಾಮ ಮಾಡಬಲ್ಲುದು! - ಎಂಬುದನ್ನು ತಿಳಿಯಪಡಿಸಲು ಶ್ರೀರಂಗಮಹಾಗುರುಗಳು ಸೆಪ್ಟಿಕ್ ಆಗುವುದರ ಉದಾಹರಣೆಯನ್ನು ನೀಡಿದ್ದರು. ಆಯುರ್ವೇದದ ಆಂತರ್ಯವನ್ನು ಅರಿತಿದ್ದ ಅವರ ನುಡಿಗಳಲ್ಲಿ ಆರೋಗ್ಯಸಂಬಂಧಿಯಾದ ಉದಾಹರಣೆಗಳು ಹೇರಳವಾಗಿ ಬರುತ್ತಿದ್ದವು: "ಕೆಟ್ಟ ರಕ್ತ ಮೈಯಲ್ಲಿದ್ದು ಅದು ಸೆಪ್ಟಿಕ್ ಆದರೆ ಮಹಾಹಾನಿ: ಆದ್ದರಿಂದ ಅದರ ಮೇಲೆ ದಾಳಿ ಮಾಡಿ ಅದನ್ನು ತೆಗೆದುಹಾಕಬೇಕು: ಸತ್ಯಸ್ವರೂಪಕ್ಕೆ ಅಡ್ಡಿಬರುವುದಾವುದಿದ್ದರೂ ಅದನ್ನು ತೊಲಗಿಸಬೇಕು" - ಎಂದು ಉದಾಹರಣೆ(ಯಿತ್ತು ಅದಕ್ಕೊಂದು ಅನ್ವಯವನ್ನೂ) ಕೊಟ್ಟಿದ್ದರು.

ಸೆಪ್ಟಿಕ್ ಆಗುವುದೆಂದರೆ ಸಾಮಾನ್ಯವಲ್ಲ. ಒಂದೆಡೆ ಅದು ಆರಂಭವಾಗುತ್ತಿದ್ದಂತೆಯೇ ಇಡೀ ಮೈಯನ್ನದು ಬೇಗನೆ ವ್ಯಾಪಿಸುವುದು. ಒಡನೆಯೇ ಅದಕ್ಕೆ ವೈದ್ಯಕೀಯ ಕ್ರಮ ಕೈಗೊಳ್ಳಲಿಲ್ಲವೋ ಸರ್ವಾಂಗಗಳಿಗೂ ಪ್ರಸರಿಸುವುದು. ರಕ್ತದೊತ್ತಡ ಹ್ರಾಸಗೊಳ್ಳುವುದು. ಕೈಕಾಲುಗಳು ತಣ್ಣಗಾಗುವುವು. ಉಸಿರಾಟವು ಕ್ಲಿಷ್ಟವಾಗುವುದು. ಚಿತ್ತಭ್ರಮಣವಾಗುವುದು. ಸಾವಿನ್ನು ದೂರವೇನಿಲ್ಲ!.

ಹೀಗೆ, ಆರೋಗ್ಯವಾಗಿಯೇ ಇದ್ದ ಅಂಗಗಳೂ ಸಹ, ಹದಗೆಟ್ಟ ಯಾವುದೋ ಒಂದಂಗ(ಶ)ದಿಂದಾಗಿ ಹತವಾಗುವುವು. ಎಂದೇ, ಘಾತಕ-ಪಾತಕಿಗಳ ಬಗ್ಗೆ ಎಚ್ಚರವಿರಬೇಕು.

ರಾಕ್ಷಸನೊಬ್ಬನ ನುಡಿಯಾದರೂ ಮಾರೀಚನ ಮಾತು ಸಾರವತ್ತಾದದ್ದು! ಆತನು ಹೇಳಿದಂತೆಯೇ ಮುಂದೆ ಘಟಿಸಿತಲ್ಲವೇ? 

ಸೂಚನೆ: 25/05/2024 ರಂದು ಈ ಲೇಖನ ವಿಜಯವಾಣಿಯ ಸುದಿನ ಲ್ಲಿ ಪ್ರಕಟವಾಗಿದೆ.