Monday, November 29, 2021

ಸನ್ಮಾರ್ಗಕ್ಕಾಗಿ ಕಥೆಗಳು (Sanmaargakkaagi Kathegalu)

ಲೇಖಕಿ: ಸೌಮ್ಯಾ ಪ್ರದೀಪ್ 

(ಪ್ರತಿಕ್ರಿಯಿಸಿರಿ lekhana@ayvm.in)


ಮಹಿಲಾರೋಪ್ಯವೆಂಬ ನಗರದಲ್ಲಿ ಅಮರಶಕ್ತಿಯೆoಬ ಶೂರನಾದ ರಾಜನಿದ್ದನು, ಅವನ ಮೂರು ಗಂಡು ಮಕ್ಕಳೂ ನ್ಯಾಯ ನೀತಿ ರಹಿತರಾಗಿ ಮಹಾಮೂರ್ಖರಾಗಿದ್ದರು.  ಇದರಿಂದ ಬಹಳ ಚಿಂತಾಕ್ರಾಂತನಾದ ರಾಜನು ಮಂತ್ರಿಗಳೊಂದಿಗೆ ಸಮಾಲೋಚಿಸಿ ತನ್ನ ಮಕ್ಕಳು ನೀತಿವಂತರೂ ಬುದ್ಧಿವಂತರೂ ಆಗುವಂತಹ ಮಾರ್ಗವನ್ನು ಶೋಧಿಸಲು ಸೂಚಿಸುತ್ತಾನೆ.  ಆಗ ವಿಷ್ಣುಶರ್ಮನೆಂಬ ವಿದ್ವಾಂಸನು ರಾಜನ ಮೂವರು ಮಕ್ಕಳನ್ನು ಆರು ತಿಂಗಳಲ್ಲಿ ವಿದ್ಯಾವಂತರನ್ನಾಗಿ ಮಾಡುವ ಭರವಸೆ ನೀಡಿ ರಾಜನ ಮಕ್ಕಳನ್ನು ಕರೆದೊಯ್ದು ಮಕ್ಕಳಿಗೆ ನೀತಿಯುಕ್ತವಾದ ಐದು ತಂತ್ರಗಳನ್ನೊಳಗೊಂಡ ಕಥೆಯನ್ನು ರಚಿಸಿ ಮನಮುಟ್ಟುವಂತೆ ಹೇಳಿ ಅವರನ್ನು ವಿದ್ಯಾವಂತರನ್ನಾಗಿ ಮಾಡಿದನು.  ಅದೇ ಇಂದಿಗೂ ಪಂಚತಂತ್ರವೆಂಬ ಹೆಸರಿನ ಬಹೂಪಯೋಗಿ ಗ್ರಂಥವಾಗಿದೆ.


ಮಕ್ಕಳನ್ನು ಸನ್ಮಾರ್ಗಕ್ಕೆ ಕೊಂಡೊಯ್ಯಲು ಕಥೆಗಳು ಅತ್ಯಂತ ಪ್ರಮುಖವಾದ ಪಾತ್ರವನ್ನು ವಹಿಸುತ್ತವೆ. ಭಾರತೀಯ ಪುರಾಣೇತಿಹಾಸಗಳಿಂದ ಆಯ್ದ ಕಥೆಗಳು ಲೌಕಿಕ ವ್ಯವಹಾರದ ಜ್ಞಾನವನ್ನು ಅಂದರೆ ಯಾರೊಂದಿಗೆ ಎಂತಹ ವ್ಯವಹಾರವನ್ನು ಇಟ್ಟುಕೊಳ್ಳಬೇಕು ಎಂಬ ಜ್ಞಾನವನ್ನು ನೀಡುವುದರ ಜೊತೆಗೆ ಅನೇಕ ನೀತಿತತ್ತ್ವಗಳನ್ನು ಬೋಧಿಸಿ ಮಕ್ಕಳಲ್ಲಿ ಸದ್ಗುಣಗಳನ್ನು ಬೆಳೆಸಿ ಸತ್ಪ್ರಜೆಗಳನ್ನಾಗಿ ಮಾಡಲು ಸಹಕಾರಿಯಾಗಿವೆ.


ಸತ್ತ್ವ-ರಜಸ್ಸು-ತಮಸ್ಸುಗಳೆಂಬ ತ್ರಿಗುಣಗಳು ಇಡೀ ಬ್ರಹ್ಮಾಂಡ (ವಿಶ್ವ)ದಲ್ಲಿ ಹಾಗೂ ಪಿಂಡಾಂಡ (ಶರೀರ)ದಲ್ಲಿ ಹಾಸುಹೊಕ್ಕಾಗಿ ವ್ಯಾಪಿಸಿದೆ.  ಈ ತ್ರಿಗುಣಗಳ ಕ್ರಿಯೆಗಳಿಲ್ಲದೆ ಸೃಷ್ಟಿ ಚಕ್ರವು ನಡೆಯುವುದೇ ಇಲ್ಲ.  ಪ್ರಕೃತಿಯ ಸಮತೋಲನ ಕಾಪಾಡಿಕೊಳ್ಳಲು ತ್ರಿಗುಣಗಳು ಅತ್ಯವಶ್ಯಕ.  ಶಾಂತಿ ಸಮಾಧಾನಗಳಿಗೆ ಸತ್ತ್ವಗುಣವು ಅವಶ್ಯಕವಾದರೆ ಕಾರ್ಯಪ್ರವೃತ್ತಿಗೆ ರಜೋಗುಣವು ಬೇಕು; ಆಲಸ್ಯವನ್ನು ಉಂಟುಮಾಡುವ ತಮೋಗುಣವನ್ನು ನಿದ್ರೆಗಾಗಿ ಅವಲಂಬಿಸಲೇಬೇಕು. ಸತ್ತ್ವದ ಆಧಿಕ್ಯವನ್ನು ಸಾಧಿಸಿ ಅದರ ಅಧೀನದಲ್ಲಿ ರಜಸ್ಸು ಮತ್ತು ತಮಸ್ಸುಗಳಿರುವಂತೆ ನೋಡಿಕೊಂಡಾಗ ಜೀವನ ಧರ್ಮಮಯವಾಗಿರುತ್ತದೆ.  ಅಂತಹ ಸತ್ತ್ವಗುಣದ ಆಧಿಕ್ಯವನ್ನು ಸಾಧಿಸಲು ಸದ್ವಿಚಾರಗಳ ಶ್ರವಣ ಅತ್ಯವಶ್ಯಕ, ಎಳೆಯ ಮನಸ್ಸಿನ ಮಕ್ಕಳಿಗೆ ರಾಮನಂತೆ ವರ್ತಿಸಬೇಕು ರಾವಣನಂತೆ ವರ್ತಿಸಬಾರದು ಎಂಬಿತ್ಯಾದಿ ಸದ್ವಿಚಾರಗಳನ್ನು ತತ್ತ್ವಸಹಿತವಾಗಿ ಕೊಟ್ಟಾಗ ಅವರನ್ನು ಸನ್ಮಾರ್ಗದಲ್ಲಿ ಮುನ್ನಡೆಸಿ ಸಂಸ್ಕಾರವಂತರನ್ನಾಗಿ ಮಾಡಬಹುದು.  ತಾಯಿ ಜೀಜಾಭಾಯಿಯವರು ಹೇಳುತ್ತಿದ್ದ ಮಹಾಭಾರತದ ಕಥೆಯನ್ನು ಕೇಳಿ ಶಿವಾಜಿ ಮಹಾರಾಜರು ಬೆಳೆದುದರ ಪರಿಣಾಮ ಭಾರತಭೂಮಿಯು ಅಂತಹ ಒಬ್ಬ ಧರ್ಮಿಷ್ಠನಾದ ರಾಜನನ್ನು ಕಾಣಲು ಸಾಧ್ಯವಾಯಿತು.


ವೇದದಲ್ಲಿರುವ ಧರ್ಮಸೂಕ್ಷ್ಮಗಳನ್ನು ಪುರಾಣೇತಿಹಾಸಗಳಲ್ಲಿ ಹಾಗೂ ಕಾವ್ಯಗಳಲ್ಲಿ ಕಥಾರೂಪದಲ್ಲಿ ಹೆಣೆದು ಮಹರ್ಷಿಗಳು ಲೋಕಕ್ಕೆ ನೀಡಿದ್ದಾರೆ. ಆ ಕಥೆಗಳೇ ಪುಟ್ಟ ಮಕ್ಕಳಿಗೆ ಅರ್ಥವಾಗುವಂತೆ ಪ್ರಾಣಿ-ಪಕ್ಷಿಗಳ ಕಥೆಗಳ ಮೂಲಕ ಪಂಚತಂತ್ರ ಇತ್ಯಾದಿಗಳಲ್ಲಿ ಚಿತ್ರಿಸಲ್ಪಟ್ಟಿವೆ.  "ಮಹರ್ಷಿಯು ತನ್ನ ಮಟ್ಟದಲ್ಲೇ ತಾನು ಇದ್ದುಬಿಟ್ಟರೆ ಲೋಕಕ್ಕೆ ಅದಾವುದೂ ಅರ್ಥವಾಗೋಲ್ಲ. ಲೋಕವು ಆ ಮಟ್ಟಕ್ಕೆ ಏರಲಾಗುವುದಿಲ್ಲ.  ಪುಟ್ಟ ಮಕ್ಕಳಿಗೆ ನಾವೇನಾದರೂ ಕೂಗಿಕೊಡುವ ಸಂನಿವೇಶ ಬಂದಾಗ ನಾವು ಆ ಮಕ್ಕಳ ಮಟ್ಟಕ್ಕೇ ಇಳಿದು ಮಾತನಾಡಿಸಿ ಕೊಡಬೇಕೇ ಹೊರತು ನಮ್ಮ ಮಟ್ಟದಲ್ಲೇ ನಮ್ಮ ಪಿಚ್ಚಿನಲ್ಲೇ ನಮ್ಮ ಭಾಷಾಗಾಂಭೀರ್ಯದಲ್ಲೇ ನಾವು ಮಾತನಾಡುವುದಾದರೆ ಮಕ್ಕಳು ನಮ್ಮ ಹತ್ತಿರದಲ್ಲೇ ಸುಳಿಯಲಾರವು" ಎಂಬ ಶ್ರೀರಂಗಮಹಾಗುರುಗಳ ಮಾತಿನಂತೆ ಮಕ್ಕಳಿಗೆ ವೇದೋಪನಿಷತ್ತುಗಳಲ್ಲಿರುವ ಸದ್ವಿಚಾರಗಳನ್ನು ಕಥೆಗಳ ಮೂಲಕ ಕೊಡಲು ಪ್ರಯತ್ನಿಸೋಣ.


ಸೂಚನೆ: 28/11/2021 ರಂದು ಈ ಲೇಖನ ವಿಜಯವಾಣಿಯ  ಮನೋಲ್ಲಾಸ ದಲ್ಲಿ ಪ್ರಕಟವಾಗಿದೆ.  

Sunday, November 28, 2021

ಶ್ರೀರಾಮನ ಗುಣಗಳು - 33 ಸ್ಮೃತಿಮಾನ್ - ಶ್ರೀರಾಮ (Sriramana Gunagalu - 33 Smrutimaan - Shreeraama)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ 

(ಪ್ರತಿಕ್ರಿಯಿಸಿರಿ lekhana@ayvm.in)ಸ್ಮೃತಿ ಉಳ್ಳವನು ಶ್ರೀರಾಮ. ಸ್ಮೃತಿ ಎಂಬ ಗುಣವು ಎಲ್ಲಾ ಪ್ರಾಣಿಗಳಲ್ಲು ಇರುವ ಒಂದು ಸಾಮಾನ್ಯವಾದ ಗುಣವಾಗಿದೆ. ಅದು ಮಾನವನಲ್ಲಿ ಅತಿಶಯವಾಗಿ ಇರುತ್ತದೆ. ಅದು ಶ್ರೀರಾಮನಲ್ಲಂತೂ ಇನ್ನೂ ವಿಶೇಷವಾಗಿ ಗೋಚರಿಸುತ್ತದೆ. ಹಾಗಾದರೆ ಅಂತಹ ವಿಶೇಷ ಗುಣವಾಗಿ ಶ್ರೀರಾಮನಲ್ಲಿ ಹೇಗೆ ಬಿಂಬಿತವಾಗಿದೆ ಎಂಬುದನ್ನು ನೋಡೋಣ.

ಸ್ಮೃತಿ ಎಂಬ ಗುಣವು ಅನುಭವದಿಂದ ಹುಟ್ಟುತ್ತದೆ. ಅನುಭೂತವಾದ ವಿಷಯವು ಸ್ವಲ್ಪವೂ ಮಾಸದೇ ಇರುವುದನ್ನು 'ಸ್ಮೃತಿ' ಎಂದು ಯೋಗಶಾಸ್ತ್ರವು ಹೇಳಿದೆ. ಸಂಸ್ಕಾರದಿಂದ ಹುಟ್ಟಿದ್ದು ಸ್ಮೃತಿ ಎಂದೂ ಹೇಳಲಾಗಿದೆ. ಅಂದರೆ ಸ್ಮೃತಿಯು ಪರಿಶುದ್ಧವಾಗಿ ಇರಬೇಕಾದರೆ ಅದರ ಹಿಂದಿನ ಅನುಭವವೂ ಅಷ್ಟೇ ಪರಿಪೂರ್ಣವಾಗಿ ಇದ್ದಾಗ ಮಾತ್ರ ಸಾಧ್ಯ. ಅನುಭವಕ್ಕೆ ಬೇಕಾದ ಅನುಕೂಲ ಸಾಮಗ್ರಿಗಳಾದ ವಿಷಯ, ಇಂದ್ರಿಯ, ಮನಸ್ಸು ಮತ್ತು ಆತ್ಮ ಇವು ಏಕಾಗ್ರವಾಗಿ ಇದ್ದಾಗ ಪರಿಪೂರ್ಣವಾಗುವುದು. ಕೆಲವೊಮ್ಮೆ ನಮ್ಮ ಎದುರಿಗೆ ವಿಷಯವಿದ್ದರೂ, ನಮ್ಮ ಮನಸ್ಸು ಅಲ್ಲಿ ಇಲ್ಲವಾದರೆ ವಿಷಯದ ಅರಿವು ಬರುವುದಿಲ್ಲ. ಉದಾಹರಣೆಗೆ ಸೂಜಿಯ ರಂಧ್ರದಲ್ಲಿ ನೂಲನ್ನು ಪೋಣಿಸುವಾಗ ನೂಲಿನ ಅಗ್ರಭಾಗವು ಸೇರಿಕೊಂಡಾಗ ಮಾತ್ರ ಸಾಧ್ಯ. ಹಾಗಾಗಲು ನೂಲನ್ನು ನೊಣೆದು ಆ ರಂಧ್ರದಲ್ಲಿ ಸರಾಗವಾಗಿ ನುಸುಳುವಂತೆ ಮಾಡುತ್ತೇವೆ. ಆಗ ನೂಲು ಸುಲಭವಾಗಿ ಸೂಜಿಯ ರಂಧ್ರದಲ್ಲಿ ಸೇರುಕೊಳ್ಳುತ್ತದೆ. ಅದರಿಂದ ನಮ್ಮ ಬಟ್ಟೆಯನ್ನು ಹೊಲಿಯುವ ಕಾರ್ಯ ಸರಳವಾಗುವುದು. ಅಂತೆಯೇ ವಿಷಯದ ಅರಿವಿಗೆ ಬೇಕಾದ ಸಾಮಗ್ರಿಗಳೆಲ್ಲವನ್ನು ಪಳಗಿಸಿ ಹರಿತವನ್ನಾಗಿ ಮಾಡಿದಾಗ ಸ್ಫುಟವಾದ ತಿಳಿವಳಿಕೆ ಬರುತ್ತದೆ. ಇಂತಹ ತಿಳಿಯಾದ ತಿಳಿವಕೆಯಿಂದ ಮಾತ್ರ ತಿಳಿಯಾದ ಸ್ಮೃತಿ ಸಾಧ್ಯ. ಅನುಭವಕ್ಕೂ ಸ್ಮೃತಿಗೂ ಮಧ್ಯದಲ್ಲಿ ಸಂಸ್ಕಾರವೆಂಬುದು ಮುಖ್ಯವಾಹಿನಿಯಾಗಿ ಕಾರ್ಯ ಮಾಡುತ್ತದೆ. ಸ್ಮೃತಿಯು ಬರುವ ತನಕವೂ ಸಂಸ್ಕಾರವನ್ನು ಕೆಡದಂತೆ ಇಟ್ಟುಕೊಳ್ಳಬೇಕಾದ ಜವಾಬ್ದಾರಿಯೂ ಇರುತ್ತದೆ. ಹೀಗೆ ಅನುಭವ ಮತ್ತು ಸಂಸ್ಕಾರಗಳ ಬಲದ ಮೇಲೆ ಜನ್ಮಜನ್ಮಾಂತರದ ಅನುಭವಗಳೂ ಸ್ಮೃತಿಪಟಲದಲ್ಲಿ ಗೋಚರಿಸುತ್ತವೆ ಎಂಬುದಾಗಿ ಯೋಗಶಾಸ್ತ್ರವು ಸ್ಪಷ್ಟವಾಗಿ ನಿರೂಪಿಸುತ್ತದೆ.

ಸ್ಮರಣೆಯು ಯಾವ ಇಂದ್ರಿಯದ ಮೂಲಕ ಅರಿವನ್ನು ಪಡೆದಿರುತ್ತೇವೋ, ಅದಕ್ಕನುಗುಣವಾಗಿ ಬರುತ್ತದೆ. ನೋಡಿದ್ದರಿಂದ, ಕೇಳಿದ್ದರಿಂದ ಆಘ್ರಾಣಿಸಿದ್ದರಿಂದ, ಹೀಗೆ ಬರುವ ಸ್ಮೃತಿಯನ್ನು ಪ್ರಬೋಧಗೊಳಿಸುವ ಯಾವುದಾದರೂ ಸಂಗತಿಯು ಎದುರಾದಾಗ ಬರುವ ಅರಿವೇ ಸ್ಮೃತಿಯಾಗುತ್ತದೆ.

ಶ್ರೀರಾಮನು ಇಂತಹ ಅಸಾಧಾರಣವಾದ ಸ್ಮೃತಿಶಕ್ತಿಸಂಪನ್ನನಾಗಿದ್ದ ಎಂಬುದಕ್ಕೆ ಶ್ರೀರಾಮಾಯಣದಲ್ಲಿ ಸಂದರ್ಭ ಸಿಗುತ್ತದೆ. ಮಹರ್ಷಿ ವಿಶ್ವಾಮಿತ್ರರು ತಮ್ಮ ಯಜ್ಞರಕ್ಷಣೆಯ ನೆಪದಿಂದ ಶ್ರೀರಾಮಲಕ್ಷ್ಮಣರನ್ನು ತಮ್ಮ ಆಶ್ರಮಕ್ಕೆ ಕರೆದೊಯ್ಯುತ್ತಾರೆ. ಅಲ್ಲಿ ಅನೇಕ ಅಸ್ತ್ರ-ಶಸ್ತ್ರ-ಶಾಸ್ತ್ರ-ಇತಿಹಾಸಗಳನ್ನು ಬೋಧಿಸುತ್ತಾರೆ. ವಿಶೇಷವಾಗಿ ಬಲ ಮತ್ತು ಅತಿಬಲ ಎಂಬ ಎರಡು ಮಹದಸ್ತ್ರಗಳ ಉಪದೇಶವನ್ನೂ ಕೂಡ ಮಾಡುತ್ತಾರೆ. ಇವುಗಳನ್ನು ಶ್ರೀರಾಮರು ಮುಂದಿನ ಯುದ್ಧಗಳ ಸಂದರ್ಭಗಳಲ್ಲಿ ಬಳಸುತ್ತಾರೆ. ಈ ವಿಶೇಷವಾದ ಅಸ್ತ್ರಗಳನ್ನು ನೆನಪಲ್ಲಿ ಇಟ್ಟುಕೊಟ್ಟುವುದಕ್ಕೆ ಅಂತಹ ಸ್ಮೃತಿಶಕ್ತಿಯು ಬೇಕಾಗುತ್ತದೆ. ಶ್ರೀರಾಮನಂತ ಮಹಾಮಹಿಮರು ಮಾತ್ರವೇ ಇಂತಹ ಅಸ್ತ್ರಗಳನ್ನು ಧಾರಣೆ ಮಾಡಬಲ್ಲರು. ಅದಕ್ಕೆ ಕಾರಣವಿಷ್ಟೆ ಅವರ ಜೀವನಕ್ರಮ, ಸತ್ಯ, ಪ್ರಾಮಾಣಿಕತೆ ಮೊದಲಾದ ಗುಣಗಳನ್ನು ಆತ್ಮಸಾತ್ ಮಾಡಿಕೊಂಡಿರುವುದು. ಅಷ್ಟೇ ಅಲ್ಲ, ವೇದವೇದಾಂಗಗಳ ಮರ್ಮವನ್ನು ತಿಳಿಯಲು ಅಂತಹದ್ದೇ ಸ್ಮೃತಿಶಕ್ತಿಯ ಅವಶ್ಯಕತೆ ಇದ್ದೇಇದೆ.

ಸೂಚನೆ : 28/11/2021 ರಂದು ಈ ಲೇಖನವು  ಹೊಸದಿಗಂತ ಪತ್ರಿಕೆಯ "ಶ್ರೀರಾಮನ ಗುಣಗಳು" ಅಂಕಣದಲ್ಲಿ ಪ್ರಕಟವಾಗಿ

Saturday, November 27, 2021

ನವವಿಧ ಭಕ್ತಿ - 4 ಭಕ್ತಿಯ ಪರಾಕಾಷ್ಠೆಗೆ ಕೀರ್ತನವೆಂಬ ಸಾಧನ (Navavidha Bhakti - 4 Bhaktiya Paraakaashtege Keertanavemba Saadhana)

 ಲೇಖಕರು:  ಡಾ ಸಿ.ಆರ್. ರಾಮಸ್ವಾಮಿ

(ಪ್ರತಿಕ್ರಿಯಿಸಿರಿ lekhana@ayvm.in)


ಗುಣಗಾನವನ್ನು, ರೂಪದ ವರ್ಣನೆಯನ್ನು ಮೈಗೂಡಿಸಿ ಕಥನ ಮಾಡುವವರೆಲ್ಲರೂ ಭಕ್ತರೇ. ಭಗವಂತನ ಗುಣಕೀರ್ತನೆಯನ್ನು ಆಸ್ವಾದಿಸಿ ಅದನ್ನು ಮತ್ತೊಬ್ಬರಿಗೆ ಹೇಳುವುದೂ ಕೀರ್ತನೆಯೇ. ಹೀಗೆ ಕೀರ್ತನೆ ಮಾಡುತ್ತಾ ಕ್ರಮೇಣ ಭಕ್ತಿಯು ವೃದ್ಧಿಯಾಗುತ್ತದೆ. ಕೀರ್ತನ ಭಕ್ತಿಗೆ ಶುಕಬ್ರಹ್ಮರ್ಷಿಯನ್ನೇ ಉದಾಹರಣೆಯಾಗಿ ಕೊಡುತ್ತಾರೆ. ಭಾಗವತೋತ್ತಮರಾದ ಶುಕರು ಭಗವಂತನನ್ನು ನೇರವಾಗಿ ಒಳಗಣ್ಣಿನಿಂದ ನೋಡಿದವರಾಗಿ ಹಾಗೆಯೇ ಭಾಗವತವನ್ನು ಹಾಡಿಹೊಗಳಿದವರು.  

ಕೀರ್ತನೆ ಎಂದರೆ ಭಗವಂತನ ವಿಷಯಗಳನ್ನು ಮಾತ್ರವೇ ಹೇಳಬೇಕೆಂದಿಲ್ಲ, ಭಗವಂತನಲ್ಲಿ ತಾದಾತ್ಮ್ಯವನ್ನು ಹೊಂದಿರುವ ಸಿದ್ಧಭಕ್ತರ ಕಥೆಯನ್ನು ಕೇಳುವುದೂ ಕೂಡ ಭಕ್ತಿಗೆ ಪೋಷಕವಾಗಿರುತ್ತದೆ ಎನ್ನುವುದನ್ನು ಸ್ಪಷ್ಟವಾಗಿ ಭಕ್ತಿಶಾಸ್ತ್ರಗಳು ಸಾರುತ್ತವೆ. ನಾವು  ಭಗವಂತನನ್ನು ನೇರವಾಗಿ ನೋಡದಿರಬಹುದು, ಆದರೆ ಭಕ್ತರನ್ನು ನೋಡುತ್ತೇವೆ. ಅವರ ಬಗೆಗಿನ ಅತ್ಯಂತ ರೋಚಕವಾದ ವೃತ್ತಾಂತಗಳನ್ನು ಕೇಳಿದರೂ ಕೂಡ ಭಕ್ತಿ ರಸವು ವೃದ್ಧಿಯಾಗುವುದರಲ್ಲಿ ಸಂಶಯವಿಲ್ಲ. ಅಂತಹ ಭಕ್ತರ ವಿಸ್ತಾರವಾದ ಪಟ್ಟಿಯನ್ನೇ ಕೊಡಬಹುದು. 

ದೇವರ್ಷಿ ನಾರದರು ಸದಾಕಾಲ ನಾರಾಯಣನ ನಾಮ ಸಂಕೀರ್ತನೆಯನ್ನು ಮಾಡುತ್ತಲೇ ತ್ರಿಲೋಕಸಂಚಾರಿಯಾಗಿ ಲೋಕಕಲ್ಯಾಣ ಮಾಡುವವರು.

 ಹಾಗೆಯೇ ತಮಿಳುನಾಡಿನ ಆಳ್ವಾರರುಗಳು. ಭಗವದ್ಭಾವದಲ್ಲಿ, ಭಗವದ್ಭಕ್ತಿಯಲ್ಲಿ ಆಳವಾಗಿ ಮುಳುಗಿದ್ದರಿಂದ ಅವರಿಗೆ 'ಆಳ್ವಾರ್' ಎಂಬ  ಹೆಸರು ಎಂದು ವಿವರಿಸುತ್ತಾರೆ.  ಆಳ್ವಾರರು ತಮ್ಮ ಒಳಗಣ್ಣಿನಿಂದ ಭಗವಂತನನ್ನು ನೋಡುತ್ತಲೇ ಕೊಂಡಾಡುತ್ತಾರೆ. ಅವರು ದೇವಸ್ಥಾನಗಳಲ್ಲಿನ ದೇವರ ವಿಗ್ರಹವನ್ನು ವೀಕ್ಷಿಸುತ್ತಾ ಭಕ್ತಿಭಾವಕ್ಕೆ ಆರೋಹಣ ಮಾಡಿದಾಗ ಪಾಶುರಗಳು(ಪದ್ಯಗಳು) ಸಹಜವಾಗಿ ಅವರಿಂದ ಹೊರಬರುತಿದ್ದವು. ಅವುಗಳನ್ನು ಹಾಗೆಯೇ ಗಾನಮಾಡುತ್ತಿದ್ದರು. ಅಂದರೆ ಅವರ ಅನುಭವಗಳೇ ಪದ್ಯರೂಪದಲ್ಲಿ ಹೊರಹೊಮ್ಮುತ್ತಿದ್ದವು. "ಎಷ್ಟು ಪ್ರಕಾಶಮಯನಾಗಿದ್ದೀಯಪ್ಪಾ ನೀನು!" ಎಂಬುದಾಗಿ ವರ್ಣಿಸಿದರೆ, ಆ ವಿಗ್ರಹದಲ್ಲಿ ಪ್ರಕಾಶ ಕಾಣದಿರಬಹುದು. ಅವರು  ಅಂತರಂಗದಲ್ಲಿ ದರ್ಶಿಸುವ ಭಗವಂತನು ಪ್ರಕಾಶಮಯನಾಗಿ ಗೊಚರಿಸಿದಾಗ ತಕ್ಷಣವೇ ಚಿಮ್ಮಿ ಬರುತ್ತದೆ ಆ ವರ್ಣನೆ. ಹೊರಗಿನ ವಿಗ್ರಹ ಸಹಾಯ ಮಾಡುತ್ತಿದೆ ಅಷ್ಟೇ. ವಾಸ್ತವವಾಗಿ ಅವರು ವಿವರಿಸುವುದು ಒಳಗಿನ ಮೂರ್ತಿಯನ್ನೇ. "ಒಳಗಿರುವುದು ನಿಧಿ; ಹೊರಗೆ ವಿಗ್ರಹ ರೂಪದಲ್ಲಿರುವುದು ಪ್ರತಿನಿಧಿ. ಪ್ರತಿನಿಧಿಯು ನಿಧಿಯಕಡೆ ಒಯ್ಯುವಂತಿರಬೇಕು" ಎಂಬ ಶ್ರೀರಂಗ ಮಹಾಗುರುವಿನ ವಾಣಿಯು ಸ್ಮರಣೆಗೆ ಬರುತ್ತದೆ. ಭಗವಂತನ ಗುಣಗಳನ್ನು, ವೀರ್ಯವನ್ನು, ಶೌರ್ಯವನ್ನು ವಿವರಿಸುವಾಗ ಶಿಲಾವಿಗ್ರಹದಲ್ಲಿ ಅವು ಯಾವುದೂ ಕಾಣದಿರಬಹುದು.  ಆದರೆ ವಿಗ್ರಹದಲ್ಲಿ ರಾಮನನ್ನು ನೋಡುವಾಗ, ಅವನು ಧನಸ್ಸನ್ನು ಹಿಡಿದಿರುವ ಭಂಗಿಯನ್ನು  ನೋಡಿದಕೂಡಲೇ ಅವರ ಮನಸ್ಸು ಒಳಗೆಳೆದು, ಅಂತರಂಗದ ರಾಮನ ದರ್ಶನವಾಗಿ ಅವನ ವೀರ್ಯ-ಶೌರ್ಯ-ಪರಾಕ್ರಮಗಳ ಬಳಿ ನಯನ ಮಾಡುತ್ತದೆ. ಕವಿಗಳೂ ಆಗಿದ್ದರಿಂದ ತಾನಾಗಿಯೇ ಕಾವ್ಯಮಯವಾದ ಪದ್ಯಗಳು ಅವರಿಂದ ಹೊರಹೊಮ್ಮುವುದು. 

 ಹಾಗೆಯೇ ಬಂಗಾಳದ ಶ್ರೀಕೃಷ್ಣಚೈತನ್ಯರು. ಅವರು ಕಥೆಗಳನ್ನು ಹೇಳುತ್ತಿರಲಿಲ್ಲ,  ಕೃಷ್ಣನನಾಮ ಸಂಕೀರ್ತನೆ ಮಾಡುತ್ತಲ್ಲೇ ಬೀದಿಬೀದಿಗಳಲ್ಲಿ ನಡೆದಾಡುತ್ತಿದ್ದವರು. ಅವರ ನಾಮ ಸಂಕೀರ್ತನೆಯ ಮಧುರ ಧ್ವನಿಯನ್ನು ಆಲಿಸುತ್ತ ಅವರನ್ನು ಹಿಂಬಾಲಿಸುತ್ತಿದ್ದವರು ನೂರಾರು ಮಂದಿ! ಅಷ್ಟು ಆಕರ್ಷಣೆ! ಅವರ ಸಂಕೀರ್ತನೆ ಕೇವಲ ಮನುಷ್ಯರನ್ನು ಆಕರ್ಷಿಸಿದ್ದಷ್ಟೆ  ಅಲ್ಲ,  ಪ್ರಾಣಿಗಳ ಮೇಲೂ ಅನಿರ್ವಚನೀಯವಾದ ಪರಿಣಾಮವನ್ನು ಉಂಟುಮಾಡುತ್ತಿತ್ತು ಎಂಬುದಾಗಿ ಅವರ ಜೀವನ ಚರಿತ್ರೆಯಲ್ಲಿ ನೋಡುತ್ತೇವೆ. ಒಮ್ಮೆ ಯಾತ್ರೆಯಲ್ಲಿ  ದಟ್ಟವಾದ ಕಾಡಿನ ಮಧ್ಯೆ ಹುಲಿ, ಸಿಂಹ, ಆನೆ ಮುಂತಾದ ಅನೇಕ ಪ್ರಾಣಿಗಳು ಗುಂಪುಗುಂಪಾಗಿ ಬಂದಾಗ, ಅವರು ಯಾವುದಕ್ಕೂ ಹೆದರಲಿಲ್ಲ.  ತನ್ಮಯರಾಗಿ ಭಗವದ್ಭಾವದಲ್ಲಿ ಮುಳುಗಿ ಸಂಕೀರ್ತನೆ ಮಾಡುವವರಿಗೆ ಭಯವೇ  ಇರುವುದಿಲ್ಲ ಎಂಬ ಮಾತಿಗೆ ಉದಾಹರಣೆ ಶ್ರೀಕೃಷ್ಣಚೈತನ್ಯರೇ. ಅವರ ಮಧುರವಾದ ಸಂಕೀರ್ತನೆಯನ್ನು ಆಲಿಸುತ್ತ  ಅವುಗಳೂ ಕೂಡ ಕುಣಿಯಲಿಕ್ಕೆ ಆರಂಭಿಸಿದುವಂತೆ! ಯಾವ ಪ್ರಾಣಿಯೂ ಇವರಿಗೆ ಹಿಂಸೆಯನ್ನು ಮಾಡಲಿಲ್ಲ. ಅವುಗಳಿಗೆ ಏನರ್ಥವಾಯಿತೋ ಬಿಟ್ಟಿತೋ ತಿಳಿಯದು, ಆದರೆ ಈ ಪರಿಣಾಮವು ನಾಮಸಂಕೀರ್ತನೆಯ ಪ್ರಭಾವವನ್ನು ಎತ್ತಿತೋರಿಸುತ್ತದೆ. 

 ಹಾಗೆಯೇ ಮರಾಠಿಯ ತುಕಾರಾಮರು, ನಾಮದೇವರು, ಕರ್ನಾಟಕದ ಪುರಂದರದಾಸರು, ಕನಕದಾಸರು, ವಾಗ್ಗೇಯಕಾರರಾದ ತ್ಯಾಗರಾಜರು ಮುಂತಾದ ಅನೇಕಾನೇಕ ಭಕ್ತಶಿರೋಮಣಿಗಳ ಕೀರ್ತನೆಯ  ಪ್ರಭಾವ ಸುಪ್ರಸಿದ್ಧ. ಇವರುಗಳ ಸಾಹಿತ್ಯ ರಾಶಿಯೂ ವಿಪುಲವಾಗಿವೆ. ಶತಮಾನಗಳಿಂದ ರಾಜ್ಯದಾದ್ಯಂತ ಭಕ್ತ ಗೋಷ್ಠಿಗಳು ಈ ಸಾಹಿತ್ಯದಿಂದ ಸ್ಫೂರ್ತಿಯನ್ನು ಪಡೆದು ಭಜನೆ, ಗಾನ, ನೃತ್ಯಗಳಲ್ಲೂ ನಿತ್ಯ ಜೀವನದಲ್ಲೂ ಅಳವಡಿಸಿಕೊಂಡು  ತಮ್ಮ ಜೀವನವನ್ನು ಪಾವನ ಮಾಡಿಕೊಂಡಿರುವುದು ಸರ್ವ ವಿದಿತ.

 ಕೀರ್ತನ ಭಕ್ತಿಯಲ್ಲಿ, ಭಜನೆಯಲ್ಲಿ ಉತ್ತರಭಾರತದ ಮೀರಾಭಾಯಿಯನ್ನು ಮೀರಿಸುವವರಿಲ್ಲ ಎನ್ನಬೇಕು. ಆಕೆಯ ಭಜನೆಯ ಪರವಶತೆಯಲ್ಲಿ ಅನೇಕ ಭಕ್ತರೂ ಸೇರಿ ರಾತ್ರಿಯೆಲ್ಲ ಭಜನೆಯಲ್ಲೇ ಕಳೆದುಬಿಡುತ್ತಿದ್ದರಂತೆ.  ಭಜನೆಯು ಕ್ರಮೇಣ ನೃತ್ಯಕ್ಕೆ ತಿರುಗಿದುದೂ ಅಪರೂಪವೇನಲ್ಲ. ಎದುರುಗಿದ್ದ ಆ ರ್ಕೃಷ್ಣನ ವಿಗ್ರಹವು ಅವಳ ಪಾಲಿಗೆ ವಿಗ್ರಹವಲ್ಲ; ಸಾಕ್ಷಾತ್ ಕೃಷ್ಣನೇ ಆಗಿದ್ದು ಅವನ ಜೊತೆ ಸಂಭಾಷಣೆ ಮಾಡುತ್ತಿದ್ದುದೂ ಜನಜನಿತ ವಿಷಯವೇ ಅಗಿತ್ತು. ಆದರೆ ಕೃಷ್ಣನ ಮಾತುಗಳು ಮಾತ್ರ ಅವಳ ಕಿವಿಗಷ್ಟೇ, ಇತರರಿಗಲ್ಲ!

ಇವರೆಲ್ಲರೂ ಸಿದ್ಧ ಭಕ್ತರುಗಳು. ಕೀರ್ತನ ಭಕ್ತಿಗೆ ಉದಾಹರಣೆಯಾಗಿ ಜ್ಞಾಪಿಸಿಕೊಳ್ಳ ಬಹುದು. ಆ ಭಕ್ತ ಶಿರೋಮಣಿಗಳ ಧ್ವನಿಗಳು ಎಷ್ಟು ಪ್ರಭಾವಶಾಲಿಯಾಗಿ ಇದ್ದಿರಬೇಕು. ದುರದೃಷ್ಟವಶಾತ್ ಆ ಧ್ವನಿ-ಮುದ್ರಣಗಳು ನಮಗೆ ಇಂದು ಲಭ್ಯವಿಲ್ಲ; ಸಾಹಿತ್ಯ ಮಾತ್ರವೇ ಉಪಲಬ್ದವಿರುವುದು.  

ಆದರೆ, ನಮ್ಮ ಅಭಿಪ್ರಾಯದಲ್ಲಿ, ಆಧುನಿಕ ಯುಗದಲ್ಲಿನ ಅನೇಕಾನೇಕ ಯಂತ್ರೋಪಕರಣಗಳ ಸಹಾಯದಿಂದ ಉತ್ತಮವಾದ ಸಾಕ್ಷ್ಯ-ಚಿತ್ರಗಳ ತಯಾರಿಕೆ ಸಾಧ್ಯವಾಗಿವೆ. ಅವುಗಳ ಮೂಲಕ ರಾಮಾಯಣ, ಮಹಾಭಾರತ, ಭಾಗವತ ಮುಂತಾದವುಗಳನ್ನು  ವೀಕ್ಷಣೆ ಮಾಡಬಹುದಾಗಿದೆ. ಕೇವಲ ಶ್ರವಣ ಅಷ್ಟೇ ಅಲ್ಲ, ದೃಶ್ಯಮಾಧ್ಯಮವೂ ದೊರಕುವುದು ಇನ್ನೆಷ್ಟು ಪರಿಣಾಮಕಾರಿ. ಕೃಷ್ಣನ ಕಥೆಗಳನ್ನೆಲ್ಲಾ  ಟಿವಿಯಲ್ಲಿ ನೋಡುತ್ತೇವೆ.  ಎಷ್ಟು ಪರಿಣಾಮಕಾರಿಯಾಗಿರುತ್ತವೆ! ಎನ್ನುವುದು ಎಲ್ಲರ ಅನುಭವಕ್ಕೂ ಬಂದಿರುವ ವಿಷಯವೇ ಆಗಿದೆ.  ಭಕ್ತಿಭಾವ ತುಂಬಿದ ಪಟುವಾದ ನಟನಾದರೆ ಭಗವದ್ರಸವನ್ನು ಉತ್ಕೃಷ್ಟ ರೀತಿಯಲ್ಲಿ ಬಿಂಬಿಸಲು ಸಾಧ್ಯವಾದೀತು.  ಆಯಾ ಸನ್ನಿವೇಶಗಳನ್ನು ಕಣ್ಣಿಗೆ ಕಟ್ಟಿದಂತೆ ಚಿತ್ರಿಸುವುದು ಅದೆಷ್ಟು ಪರಿಣಾಮಕಾರೀ ! ಭಕ್ತಿರಸ ಪ್ರವೃದ್ಧಿಗೆ ಅದೆಷ್ಟು ಪ್ರಯೋಜನಕಾರೀ !

ಇವೆಲ್ಲವೂ ಕೂಡ ಕೀರ್ತನ ಭಕ್ತಿಯ ವಿವಿಧ ರೂಪಗಳು. ಭಕ್ತಿಯನ್ನು ವೃದ್ಧಿ ಮಾಡುವಂತಹ ಉತ್ತಮೋತ್ತಮವಾದ ಮಾಧ್ಯಮಗಳು.

(ಮುಂದುವರಿಯುವುದು)

ಸೂಚನೆ : 27/11/2021 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.

Friday, November 26, 2021

Ananda Tandava Of Nataraja - 33

Respond to (lekhana@ayvm.in)Ardhanarīśvara

An important aspect of Naṭarāja, and for that matter of Śiva Himself, is His being Ardha-nārīśvara ("The Lord Who Is Half Woman"). According to this symbolism, the Unitary Principle divides itself vertically: the right-hand side is masculine/Male, and the left-hand side feminine/Female. We find corroborations for this from various texts, and even in Manu-smṛti.

Manusmṛti 1.32:

dvidhā kṛtvā''tmano deham ardhena puruṣo'bhavat | ardhena nārī ||

द्विधा कृत्वाऽऽत्मनो देहम् अर्धेन पुरुषोऽभवत् अर्धेन नारी

Also, Bṛhadāraṇyakopaniṣad 1.4.3: ātmānaṁ dvedhā'pātayat;

and even in a play of Bhāsa. See Avimāraka 2.12:

pūrvā tu kāṣṭhā  timirā'nuliptā  sandhyā'ruṇā bhāti ca paścimā''śā |

dvidhā vibhaktā'ntaram antarikṣaṁ yāty ardha-nārīśvara-rūpa-śobhām ||

पूर्वा तु काष्ठा तिमिराऽनुलिप्ता सन्ध्याऽरुणा भाति पश्चिमाऽऽशा

द्विधा विभक्ताऽन्तरम् अन्तरिक्षं यात्यर्ध-नारीश्वर-रूप-शोभाम्

The idea occurs in Kālidāsa's Kumārasambhava with specific reference to Śiva.

Kumārasambhava 2.7:

strī-puṁsāv ātma-bhāgau te bhinna-mūrtes sisṛkṣayā;

स्त्री-पुंसाव् आत्म-भागौ ते भिन्न-मूर्तेस् सिसृक्षया;

Cf. Mālavikāgnimitra 1.4:

Rudreṇedam Umākṛta-vyatikare svāṅge vibhaktaṁ dvidhā; रुद्रेणेदम् उमाकृत-व्यतिकरे स्वाङ्गे विभक्तं द्विधा;

also 1.1: kāntā-saṁmiśra-deho'py aviṣaya-manasāṁ yaḥ parastād yatīnām. कान्ता-संमिश्र-देहोऽप्यविषय-मनसां यः परस्ताद् यतीनाम्।

In the image under our consideration, Naṭarāja exhibits a conspicuous orientation of the limbs towards the right side, as all except one (the hind left hand), are turned that way. The bent left leg is also stretched towards the right. Once again, this orientation towards the right emphasizes Naṭarāja's dominant Puruṣa aspect.

           Naṭarāja's ears present a study in contrast, between the masculine and the feminine. The left ear has a patra-kuṇḍala ("Leaf-Ornament"), worn typically by women, and the right ear has a makara-kuṇḍala (Crocodile Ornament), worn typically by men, even though the latter is not so easily noticeable. A double-string necklace adorns His throat, easily discernible as being the maṅgala-sūtra, the "Auspicious String" of a woman, which also goes to emphasize once again the Ardha-nārīśvara aspect. This masculine-feminine contrast is also evident in the depiction of the fingers of the left hands and the right hands, as too, the toes of the left foot and the right foot: the ones on the left look slenderer, tenderer, and more graceful.


Sunday, November 21, 2021

ಶ್ರೀರಾಮನ ಗುಣಗಳು - 32 ಪಿತ್ರಾಜ್ಞಾಪಾಲಕ - ಶ್ರೀರಾಮ (Sriramana Gunagalu -32 Pitraajnaapaalakanaada Shrirama)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ 

(ಪ್ರತಿಕ್ರಿಯಿಸಿರಿ lekhana@ayvm.in)ಶ್ರೀರಾಮನು ತಂದೆಯ ಮಾತಿಗೆ ಒಪ್ಪಿಗೆಯನ್ನು ಸೂಚಿಸಿ ಅರಣ್ಯಕ್ಕೆ ತೆರಳುವ ಸಂದರ್ಭವು ಶ್ರೀರಾಮನಿಗೆ 'ಪಿತ್ರಾಜ್ಞಾಪಾಲಕ' ಎಂಬ ಶಾಶ್ವತವಾದ ಬಿರುದನ್ನು ಕೊಟ್ಟಿತು. ಅಷ್ಟೇ ಅಲ್ಲ ಈ ಗುಣದಿಂದ ಲೋಕಕ್ಕೆ ಆದರ್ಶನಾದ. ಈ ಘಟನೆಯಿಂದ ಅದೆಂತಹ ಶ್ರೇಷ್ಠತ್ವನನ್ನು ಅವನಲ್ಲಿ ಕಾಣುವಂತಾಯಿತು! ಇದು ಶ್ರೀಮದ್ರಾಮಾಯಣದಲ್ಲಿ ಕಾಣುವ ಪ್ರಮುಖವಾದ ಘಟ್ಟವಾಗಿ ಮಾರ್ಪಟ್ಟಿತು. ಶ್ರೀರಾಮನು ದಶರಥನಿಗೆ ಜ್ಯೇಷ್ಠಪುತ್ರ. ತಂದೆಯ ಅನಂತರ ಸಿಂಹಾಸನಕ್ಕೆ ಅಧಿಕಾರಿ ಶ್ರೀರಾಮನೇ. ಮತ್ತು ಅಷ್ಟ ಮಹಾಮಂತ್ರಿಗಳಿಗೂ ಮತ್ತು ಪ್ರಜಾಜನರಿಗೂ ಸರ್ವಸಮ್ಮತನಾದ ವ್ಯಕ್ತಿ. ರಾಜನಾಗಲು ಬೇಕಾದ ಸರ್ವವಿಧವಾದ ಅಧಿಕಾರಸಂಪತ್ತಿನಿಂದಲೂ ಕೂಡಿದ್ದ. ಈ ಕಾರಣದಿಂದ ಒಂದು ಶುಭಮುಹೂರ್ತದಲ್ಲಿ ಶ್ರೀರಾಮನಿಗೆ ಪಟ್ಟಾಭಿಷೇಕವನ್ನು ಘೋಷಿಸಲಾಗಿತ್ತು. ಆದರೆ 'ತಾನೊಂದು ಬಗೆದರೆ ದೈವವೊಂದು ಬಗೆಯಿತು' ಎಂಬ ಗಾದೆಮಾತಿನಂತೆ ಆದದ್ದೇ ಬೇರೆ. ಯಾವ ಮುಹೂರ್ತವು ಪಟ್ಟಾಭಿಷೇಕಕ್ಕೆಂದು ನಿಗದಿಯಾಗಿತ್ತೋ ಅದೇ ಮುಹೂರ್ತವು ಅರಣ್ಯಗಮನಕ್ಕೆ ಸಾಕ್ಷಿಯಾಯಿತು. ಇಲ್ಲಿ ಶ್ರೀರಾಮನ ನಡೆ ಲೋಕಮಾನ್ಯವಾಯುತು. ಶ್ರೀರಾಮನನ್ನು ಪಿತ್ರಾಜ್ಞಾಪಾಲಕ ಎಂದು ವಿಶೇಷವಾಗಿ ಇಂದೂ ಗುರುತಿಸುವಂತಾಯಿತು. 

ಕೈಕೇಯಿಯ ಯಾವುದೋ ಕಾಲದ ಎರಡು ವರಗಳಿಗೆ ಅಂದು ಕಾಲವೊದಗಿತ್ತು. ಅದರ ಫಲವಾಗಿ ಆಕೆಯು, ರಾಮನ ಅರಣ್ಯವಾಸ ಮತ್ತು ಭರತನ ಅಭಿಷೇಕ ಎಂಬ ಎರಡು ವರಗಳನ್ನು ದಶರಥನಲ್ಲಿ ಕೇಳಿದಳು. ವರವು ಕಾರ್ಯರೂಪಕ್ಕೆ ಬರಬೇಕಾದರೆ ಶ್ರೀರಾಮನು ತಂದೆಯ ಮಾತನ್ನು ನೆರವೇರಿಸಿಕೊಡಬೇಕಾಗಿತ್ತು. 'ತಂದೆಯು ಕೊಟ್ಟ ಮಾತನ್ನು ನಡೆಸಲಿಲ್ಲ' ಎಂಬ ಅಪವಾದ ರಘುಕುಲ ರಾಮನಿಗೆ ಇಷ್ಟವಿರಲಿಲ್ಲ. ಆದ್ದರಿಂದಲೇ ತಂದೆಯ ಮಾತನ್ನು ಶಿರಸಾ ವಹಿಸಿಕೊಂಡು ವನಕ್ಕೆ ತೆರಳಿದ. ಇದು ಶ್ರೀರಾಮನು ತಂದೆಯ ಆಜ್ಞೆಯನ್ನು ಆಚರಿಸಿದ ರೀತಿ. ಇದಕ್ಕೆ ಹಿನ್ನೆಲೆ ಏನೆಂದರೆ- ತಂದೆಯನ್ನು ಗುರುಸ್ಥಾನದಲ್ಲಿ ಗೌರವಿಸಿ ಕಾಣುವ ಸಂಸ್ಕೃತಿ. ಈ ಒಡಲಿಗೆ ಕಾರಣೀಭೂತವಾದುದನ್ನು ಆದರದಿಂದ ಕಾಣುವ ವಿಧಾನ. ಶ್ರೀರಂಗಮಹಾಗುರುಗಳು ಹೇಳುವಂತೆ "ತಂದೆ ಏನು ತಂದೆ? ಎಂದರೆ ಜ್ಞಾನವನ್ನು ತಂದೆ" ಎಂಬಂತೆ ಜ್ಞಾನರೂಪನಾದ ಭಗವಂತನನ್ನು ಕಾಣಲು ಬೇಕಾದ ಈ ಒಡಲಿಗೆ ಕಾರಣನಾದ್ದರಿಂದ ತಂದೆಗೆ ಅಷ್ಟೊಂದು ಆದರ ನಮ್ಮ ಸಂಸ್ಕೃತಿಯಲ್ಲಿದೆ. ಋಣಗಳಲ್ಲಿ ಪಿತೃಋಣವು ತೀರಿಸಲು ಆಗದ ಋಣ ಎಂಬಷ್ಟರ ಮಟ್ಟಿಗೆ ಅದಕ್ಕೆ ಮಹತ್ತ್ವವನ್ನು ನೀಡಿದ್ದನ್ನು ನೋಡುತ್ತೇವೆ. ಈ ಎಲ್ಲ ಕಾರಣಗಳಿಂದಾಗಿ  ತಂದೆಗೆ ಅಷ್ಟು ಗೌರವ ಮತ್ತು ಅವನ ಮಾತಿಗೂ ಅಷ್ಟೇ ಬೆಲೆ. ಅದನ್ನು 'ಆಜ್ಞಾ ಗುರೂಣಾಮ್ ಅವಿಚಾರಣೀಯಾ' ಎಂಬ ಕಾಳಿದಾಸನ ಮಾತಿನಂತೆ ಪ್ರಾಜ್ಞನಾದ ತಂದೆಯ ಆಜ್ಞೆಯನ್ನು ವಿಚಾರಿಸದೆ ನಡೆಸಬೇಕಾದದ್ದು ಎಲ್ಲಾ ಮಕ್ಕಳ ಕರ್ತವ್ಯ. ಶ್ರೀರಾಮನು ತಂದೆಯಲ್ಲಿ ಆ ರೀತಿಯಾದ ಗೌರವವನ್ನು ಸಮರ್ಪಿಸಿದ. 'ಪಿತೃ' ಎಂಬುದು ಒಂದು ದೇವತಾ ಸ್ಥಾನ. ಅದು ತಾಯಿಗೂ ಬರುವಂತಹದ್ದೇ. ಶ್ರೀರಾಮನು ತನ್ನ ಸ್ವಂತ ತಾಯಿ ಕೌಸಲ್ಯೆಯಲ್ಲೂ ಕೈಕೇಯಿ, ಸುಮಿತ್ರೆಯರಲ್ಲೂ ಯಾವ ವಿಧವಾದ ಭೇದವನ್ನು ಕಾಣದೇ ಸಮಾನವಾದ ಗೌರವವನ್ನು ಕೊಟ್ಟ. ತಂದೆಯ ಮಾತನ್ನು ನಡೆಸಿದ್ದಷ್ಟೇ ಅಲ್ಲ, ತಾಯಿ ಕೈಕೇಯಿಯ ಮಾತನ್ನೂ ಪರೋಕ್ಷವಾಗಿ ನಡೆಸಿ ಸತ್ಯಾರ್ಥದಲ್ಲಿ ಪಿತ್ರಾಜ್ಞಾಪಾಲಕನಾದ ಶ್ರೀರಾಮ. 

ಸೂಚನೆ : 21/11/2021 ರಂದು ಈ ಲೇಖನವು  ಹೊಸದಿಗಂತ ಪತ್ರಿಕೆಯ "ಶ್ರೀರಾಮನ ಗುಣಗಳು" ಅಂಕಣದಲ್ಲಿ ಪ್ರಕಟವಾಗಿದೆ.

ನವವಿಧ ಭಕ್ತಿ - 3 ಭಕ್ತಿಯನ್ನು ವರ್ಧಿಸುವ ಕಥಾಶ್ರವಣ (Navavidha Bhakti - 3 Bhaktiyannu Vardhisuva Kathashravana)

 ಲೇಖಕರು:  ಡಾ ಸಿ.ಆರ್. ರಾಮಸ್ವಾಮಿ

(ಪ್ರತಿಕ್ರಿಯಿಸಿರಿ lekhana@ayvm.in)ಭಕ್ತಿಮಾರ್ಗವನ್ನು ಅಪೇಕ್ಷಿಸುವವರಿಗೆ, ಭಕ್ತಿಮಾರ್ಗವನ್ನು ಅವಲಂಬಿಸಲು, ಭಕ್ತಿಯನ್ನು ವೃದ್ಧಿಪಡಿಸಿಕೊಳ್ಳಲು ಶ್ರವಣಭಕ್ತಿ ಒಂದು ಉತ್ತಮ ವಿಧಾನ. ಭಗವಂತನ ಕಥಾಮೃತವನ್ನು ಎಷ್ಟೆಷ್ಟು ಶ್ರವಣ ಮಾಡುತ್ತೇವೆಯೋ ಅಷ್ಟಷ್ಟು ಭಕ್ತಿ ವೃದ್ಧಿಯಾಗುತ್ತದೆ. ಶ್ರವಣದಲ್ಲಿ ಮುಖ್ಯವಾದ ಅಂಶವೆಂದರೆ ಭಗವಂತನ ರಸವನ್ನು ಅನುಭವಿಸಿದ ಮಹಾತ್ಮರ ಮೂಲಕ ಕಥಾಮೃತವನ್ನು ಕೇಳಬೇಕು.

 ಶ್ರವಣಭಕ್ತಿ ಎಂದರೆ ಪ್ರಧಾನವಾಗಿ ಭಗವಂತನ ರೂಪವರ್ಣನೆಯನ್ನೂ, ಆತನ ಗುಣಗಳನ್ನೂ ಕಥಾರೂಪದಲ್ಲಿ ಶ್ರವಣ ಮಾಡುವುದು. ಕಥೆಯಷ್ಟೇ ಅಲ್ಲ; ಸ್ತೋತ್ರ, ಗೀತ  ಅಥವಾ ದೇವರನಾಮಗಳನ್ನು  ಶ್ರವಣಮಾಡುವುದೂಕೂಡ ಭಕ್ತಿಗೆ ಪೋಷಕವಾದದ್ದೇ. ಇವುಗಳನ್ನು ಕ್ರಮವರಿತು ಹೇಳಿದಾಗ ಅದರ ಶ್ರವಣ ಮಾತ್ರದಿಂದಲೇ ಭಕ್ತಿರಸವು ಉದ್ಭವಿಸುತ್ತದೆ. ಹೀಗೆ ಜಿನುಗಿದ ರಸವೇ ಮನಸ್ಸನ್ನು ಭಗವಂತನಬಳಿ ನಯನ ಮಾಡುತ್ತದೆ.  

ರಸ ಉಂಟಾಗುವುದೆನ್ನುವುದನ್ನು ಒಂದು ಉದಾಹರಣೆಯಮೂಲಕ ಅರ್ಥಮಾಡಿ ಕೊಳ್ಳಬಹುದು. ಒಂದು ಮುದ್ದಾದ ಮಗುವಿನ ನಗುವನ್ನು ಆಸ್ವಾದಿಸಬೇಕಾದರೆ ಅದರ ಕೈಯನ್ನು ಹೀಗೆ ಹಿಡಿದುಕೊಳ್ಳಬೇಕು, ಅದನ್ನು ಹೀಗೆ ಬಾಚಿ ತಬ್ಬಿಕೊಳ್ಳಬೇಕು, ಅದರ ಮುಖವನ್ನು ಸವರಬೇಕು ಎಂದು  ಕಲಿಸಿದ ಥಿಯರಿಯನ್ನು ಯಾಂತ್ರಿಕವಾಗಿ ಬಳಸಿದರೆ ಮಗುವೇ ದೂರ ಸರಿಯುತ್ತದೆ! ಆದರೆ ಮಗುವಿನ ಅರಳಿದ ಮುಖಮಂಡಲದ ನೋಟವೇ ಸಂತೋಷ (ರಸ)ವನ್ನುಂಟುಮಾಡುತ್ತದೆ. ನಮ್ಮ ಅರಿವಿಲ್ಲದೆಯೇ ನಾವು ಅದರಿಂದ ಎಳೆಯಲ್ಪಡುತ್ತೇವೆ.  ಆಗ ಮುಖ ಸವರುವುದು, ಜಿಗುಟುವುದು, ಅಪ್ಪಿಕೊಳ್ಳುವುದು ಮುಂತಾದ ಕ್ರಿಯೆಗಳು ಯಾರೂ ಕಲಿಸದಿದ್ದರೂ ತಾವಾಗಿಯೇ ಏರ್ಪಡುತ್ತವೆ. ಅಲ್ಲಿ ಮಗುವನ್ನು ಮುದ್ದಿಸುವ ಶಾಸ್ತ್ರ ಸಹಜವಾಗಿಯೇ  ಹುಟ್ಟಿಕೊಳ್ಳುತ್ತದೆ. ಮಗುವು ತನ್ನ ನಗುವಿನಮೂಲಕವೇ ಎಲ್ಲವನ್ನೂ ತೋರಿಸಿ ಕೊಡುವುದು. 

  ಅಂತೆಯೇ ಭಗವದ್ರಸದ ಜಿನುಗುವಿಕೆಯೇ ಭಕ್ತಿಯ ಉತ್ಕರ್ಷದ ಲಕ್ಷಣ.  ಶ್ರವಣಾದಿ ನವವಿಧಭಕ್ತಿಗಳಲ್ಲಿ ಒಂದೊಂದರಿಂದಲೂ ಆಗಬೇಕಾದದ್ದು ಭಕ್ತಿರಸ ಸ್ರವಿಸುವಿಕೆಯೇ.  ಅದು ಕ್ರಮೇಣ ವೃದ್ಧಿಯಾಗುತ್ತಾ ಬರುವುದು ಅತ್ಯಾವಶ್ಯಕ. 

 ಶ್ರವಣ ಮಾಡಿಸಲು ಅಧಿಕಾರಿ ಯಾರು? 

ವಾಸ್ತವವಾಗಿ ಯಾರು ಭಗವಂತನನ್ನು ನೇರವಾಗಿ ಅನುಭವಿಸಿರುವರೋ ಅಂತಹವರ ಮುಖಾರವಿಂದದಿಂದ ಶ್ರವಣಮಾಡಬೇಕು. ಆದರೆ ಶ್ರೀರಾಮನ ವಿಷಯವನ್ನು ತಿಳಿಯಬೇಕಾದ ಪಕ್ಷದಲ್ಲಿ ವಾಲ್ಮೀಕಿ ಮಹರ್ಷಿಗಳಿಂದ ನೇರವಾಗಿ ತೆಗೆದುಕೊಳ್ಳುವುದು ಈಗ ಸಾಧ್ಯವಿಲ್ಲ. ಅವರು ಅಂತಃಚಕ್ಷುಸ್ಸಿನಿಂದ ನೋಡಿದ್ದನ್ನು ಯಥಾವತ್ತಾಗಿ ಕಾವ್ಯರೂಪದಲ್ಲಿ ಬರೆದಿಟ್ಟು ಮಹದುಪಕಾರ ಮಾಡಿರುತ್ತಾರೆ. ನಾವೀಗ ನೇರವಾಗಿ ನೋಡಲಾಗದಿದ್ದರೂ ರಾಮಾಯಣದ ಉಪದೇಶವನ್ನು ಪಡೆದವರ ಮೂಲಕ ತಿಳಿಯುವ  ಅವಕಾಶವಿದೆ.  ಈಗ ರಾಮಾಯಣ, ಮಹಾಭಾರತ, ಭಾಗವತ ಮುಂತಾದ ಸಾಹಿತ್ಯಗಳು ಮಾತ್ರ ಉಳಿದಿವೆ. ಆ ಸಾಹಿತ್ಯಗಳನ್ನು ಕವಿಹೃದಯದೊಡನೆ ಅರ್ಥಮಾಡಿಕೊಂಡು ರಸದೊಂದಿಗೆ ಅದನ್ನು ವಿವರಿಸುವವರು ಬೇಕು. ರಾಮಾಯಣದ ಸನ್ನಿವೇಶಕ್ಕೆ, ಅದರ ಸಮೀಪಕ್ಕೆ ನಮ್ಮ ಮನಸ್ಸನ್ನು ಒಯ್ಯುವುದೇ ಉಪದೇಶ ಎಂದೆನಿಸಿಕೊಳ್ಳುತ್ತದೆ ಎಂಬ ಶ್ರೀರಂಗಮಹಾಗುರುವಿನ ವ್ಯಾಖ್ಯಾನ ಇಲ್ಲಿ ಗಮನಾರ್ಹವಾದುದು.

 ಅನುಭವಿಸಿದವರ ಕಥನದ ಪರಿಣಾಮವೇ ವಿಶೇಷ. ಜಾಮೂನನ್ನು ಆಸ್ವಾದಿಸಿದವನು ವರ್ಣನೆ ಮಾಡುವುದಕ್ಕೂ ಪದಾರ್ಥವನ್ನೇ ನೋಡದೆ, ಆಸ್ವಾದಿಸದೇ ಇರುವವನು ವರ್ಣನೆ ಮಾಡುವುದಕ್ಕೂ ಎಷ್ಟು ವ್ಯತ್ಯಾಸ ಇರುತ್ತದೆ!? ಆಸ್ವಾದಿಸಿದವನ ಮಾತಿನಲ್ಲಿ ಆ ರಸ ಜಿನಗುತ್ತದೆ.

ಶುಕಬ್ರಹ್ಮರ್ಷಿ ಭಗವಂತನನ್ನು ಒಳಗಣ್ಣಿನಿಂದ ನೋಡಿ, ಆತನ ಕಥಾಮೃತವನ್ನು ಅನುಭವಿಸಿದವರು. ಅಂತಹವರು  ಅದನ್ನು ಹಾಗೆಯೇ ಹೇಳಿದಾಗ ಅದರಲ್ಲಿ ಭಗವದ್ರಸ ಉಕ್ಕಿಬರುತ್ತದೆ. ಮುಂದೆ ಸೂತಪುರಾಣಿಕರು ನೇರವಾಗಿ ನೋಡಿರದಿದ್ದರೂ ಸಕ್ರಮವಾಗಿ ಉಪದೇಶ ಪಡೆದು ಅನುಭವಿಸಿದವರು. ಹಾಗೆ ಅನುಭವಿಸಿ ರಸಭರಿತವಾಗಿ ಕಥನಮಾಡುವವರ ಮೂಲಕ ಶ್ರವಣಮಾಡುವುದು ಒಂದು ವಿಧಾನ. ಆಗ ಆ ರಸ ಕೇಳುವವರ ಒಳಹೊಕ್ಕುತ್ತದೆ.

 ನಿತ್ಯಜೀವನದಲ್ಲೂ ಇದರ ಅರಿವು ನಮಗುಂಟಾಗುತ್ತದೆ. ಅತ್ಯಂತ ದುಃಖದಲ್ಲಿರುವವನು ಮಾತನಾಡಿದರೆ  ನಮಗೂ ದುಃಖವು ಸಂಕ್ರಮಣವಾಗುತ್ತದೆ. ತುಂಬ ಸಂತೋಷದಿಂದ ಮಾತನಾಡುತ್ತಿದ್ದರೆ  ನಮಗೂ ಸಂತೋಷವಾಗುತ್ತದೆ. ಹಾಗೆಯೇ ಭಗವದ್ಭಾವವನ್ನು, ಭಗವಂತನ ರಸವನ್ನು, ಆತ್ಮರಸವನ್ನು ಅನುಭವಿಸಿ ಹಾಗೆಯೇ ಅದನ್ನು ಕಥನ ಮಾಡಿದಾಗ ಶ್ರವಣಮಾಡಿದವರಲ್ಲೂ ಆ ರಸ ಜಿನುಗುತ್ತದೆ. ಹೇಳಿದವರಿಗೆ ಯಾವ ಮಟ್ಟದಲ್ಲಿ ರಸಜಿನುಗುತ್ತದೋ ಆ ಮಟ್ಟಕ್ಕೆ ಕೇಳಿದವರಿಗೆ ಬರದಿರಬಹುದು, ಆದರೆ ಒಂದು ಗುಟುಕು ಕೊಟ್ಟೇಕೊಡುತ್ತದೆ. 

ಶಾಲಾ-ಕಾಲೇಜುಗಳಲ್ಲಿ ವಿಷಯವರಿತು ಆಸ್ವಾದಿಸಿ ಪಾಠಹೇಳಿದಾಗ ವಿದ್ಯಾರ್ಥಿಗಳಿಗೆ ಎಷ್ಟು ಸುಲಭವಾಗಿಯೂ, ಸ್ಪಷ್ಟವಾಗಿಯೂ ಅರ್ಥವಾಗುವುದೋ ಆ ಮಟ್ಟದಲ್ಲಿ ವಿಷಯದ ಅರಿವಿಲ್ಲದೇ ಕೇವಲ ಪುಸ್ತಕದ ಸಹಾಯದಿಂದ ಪಾಠಮಾಡಿದಾಗ  ಅರ್ಥವೂ ಆಗುವುದಿಲ್ಲ, ಆಸ್ವಾದನೆಗೆ ವಿಷಯವೂ ಇರುವುದಿಲ್ಲ.  ವಿರುದ್ಧವಾಗಿ ನಿದ್ರೆಯನ್ನೇ ಉಂಟುಮಾಡುವುದು ಎಲ್ಲರಿಗೂ ಸುಪರಿಚಿತವೇ!

ಶ್ರವಣಭಕ್ತಿಗೆ ಉದಾಹರಣೆ 

 ಶ್ರವಣಭಕ್ತಿಗೆ ಉತ್ತಮ ಉದಾಹರಣೆಯೆಂದರೆ ಪರೀಕ್ಷಿತ ಮಹಾರಾಜ. ಆತನ  ಕಥೆ ಪ್ರಸಿದ್ಧವಾದದ್ದು. ಒಮ್ಮೆ ಕಾಡಿನಲ್ಲಿ ಬಹಳ ಹೊತ್ತು ಬೇಟೆಯಾಡಿದಮೇಲೆ, ಬಿಸಿಲು-ಬಾಯಾರಿಕೆಗಳಿಂದ ಬಳಲಿದ್ದ.  ಆಗ ಒಂದು ಆಶ್ರಮಕ್ಕೆ ಹೋಗುತ್ತಾನೆ. ಅಲ್ಲಿ ತಪಸ್ಸಿನಲ್ಲಿ ನಿರತರಾಗಿದ್ದ ಋಷಿಯಲ್ಲಿ ನೀರು ಬೇಕೆಂದು ಪ್ರಾರ್ಥಿಸುತ್ತಾನೆ.  ಋಷಿಯು   ಧ್ಯಾನದಲ್ಲಿ ಮುಳುಗಿದ್ದ ಕಾರಣದಿಂದ ಎಚ್ಚರವಿಲ್ಲದೇ ಎಷ್ಟು ಕರೆದರೂ ನೀರು ಕೊಡುವುದಿಲ್ಲ. ತಡೆಯಲಾರದ ಹಸಿವು ಬಾಯಾರಿಕೆಗಳಿಂದ ಕುಪಿತನಾಗಿ ರಾಜನು ಸಮೀಪದಲ್ಲಿದ್ದ ಒಂದು ಮೃತಹಾವನ್ನು ಅವರ ಕುತ್ತಿಗೆಗೆ ಹಾಕಿ ಹೊರಡುತ್ತಾನೆ. ನಂತರ ಆ ಋಷಿಯ ಪುತ್ರನು ನೋಡಿ ಕೋಪಗೊಂಡು "ಧ್ಯಾನದಲ್ಲಿರುವ ನನ್ನ ತಂದೆಗೆ ಯಾರು  ಇಂತಹ ಅಪಚಾರವೆಸಗಿದರೋ ಅವರು ಏಳು ದಿನಗಳಲ್ಲಿ ಸರ್ಪಕಚ್ಚಿ ಮರಣ ಹೊಂದಲಿ" ಎಂದು ಶಪಿಸುತ್ತಾನೆ.

  ಕೊನೆಗೆ ಪರೀಕ್ಷಿತನು ಶುಕಬ್ರಹ್ಮರ್ಷಿಯನ್ನು ಆಶ್ರಯಿಸಿ "ನನಗೆ ಮೋಕ್ಷಮಾರ್ಗವನ್ನು ಉಪದೇಶ ಮಾಡಿ" ಎಂದು ಕೇಳಿದಾಗ ಅವರು ಭಾಗವತವನ್ನು ಹೇಳುತ್ತಾರೆ. "ಏಳು ದಿನಗಳು ಅನನ್ಯ ಭಕ್ತಿಯಿಂದ ಅದನ್ನೇ ಕೇಳಿದಾಗ ಮುಕ್ತಿ ದೊರಕುತ್ತದೆ" ಎಂದು ಆಶ್ವಾಸನೆ ನೀಡುತ್ತಾರೆ. ಅವರು ಭಾಗವತವನ್ನು ಹೇಳುತ್ತಲಿದ್ದಾಗ ಅವನು ಭಗವದ್ಭಾವದಲ್ಲಿ ಪೂರ್ಣವಾಗಿ ಮಗ್ನನಾಗಿ ಕಥೆಯನ್ನು ಆಸ್ವಾದಿಸುತ್ತಾನೆ. ಅದಾದನಂತರ ತಕ್ಷಕನಿಂದ ಅವನು ಮರಣಹೊಂದುವುದು ಅವನ  ಶರೀರಕ್ಕೆ ಕೊನೆಯೇ ಹೊರತು, ಅವನ ಆತ್ಮವು ಮುಕ್ತಿಯನ್ನು ಪಡೆಯಿತೆನ್ನುತ್ತಾರೆ.  

ಪರೀಕ್ಷಿತ್ರಾಜನ ಶ್ರವಣಭಕ್ತಿಯ ಸಫಲತೆಗೆ ಮುಖ್ಯಕಾರಣವೆಂದರೆ ಹೇಳಿದವರು ಪರಮಾತ್ಮನಲ್ಲಿ ಪೂರ್ಣ ತಾದಾತ್ಮ್ಯವನ್ನು ಹೊಂದಿದ್ದ ಶುಕಬ್ರಹ್ಮರ್ಷಿ. ಅವರು ತನ್ನ ಹದಿನಾರನೆಯ ವಯಸ್ಸಿನಲ್ಲಿಯೇ ಬ್ರಹ್ಮರ್ಷಿಯಾದವರು, ಸಾಕ್ಷಾತ್ ವ್ಯಾಸಮಹರ್ಷಿಯ ಔರಸಪುತ್ರರು; ಪಿತಾಮಹರು ಬ್ರಹ್ಮರ್ಷಿ ಪರಾಶರರು. ಹೀಗೆ ಬ್ರಹ್ಮರ್ಷಿತ್ವವು ಸಹಜವಾಗಿ ಶುಕರಲ್ಲಿ ಬೇರೂರಿದೆ. ಇವರ ಸಾಧನೆಯೂ ಸೇರಿಕೊಂಡಿದೆ, ಸದಾ ಕೃಷ್ಣಭಕ್ತಿಯಲ್ಲಿ ತನ್ಮಯರಾಗಿರುತ್ತಾರೆ. ಪರಮಭಕ್ತರು. ಅಂತಹ ಪರಮಭಾಗವತರಾದ ಶುಕಬ್ರಹ್ಮರ್ಷಿಯ ಕೀರ್ತನೆಯಿಂದಲೇ ಶ್ರವಣಮಾಡಿದ ಪರೀಕ್ಷಿತನಿಗೆ ಅಲ್ಪಕಾಲದಲ್ಲೇ ಪೂರ್ಣಫಲ ದೊರಕುವಂತೆ ಆಯಿತು. ಶ್ರವಣಭಕ್ತಿಯಂತೆಯೇ ಕೀರ್ತನವೂ ಭಕ್ತಿಯನ್ನು ಪಡೆಯುವ ಒಂದು ವಿಧಾನವೇ ಆಗಿದೆ.     (ಮುಂದುವರೆಯುವುದು)

ಸೂಚನೆ : 20/11/2021 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ

Saturday, November 20, 2021

"ಕಾರ್ಪೊರೇಟ್ ಜಗತ್ತಿನಲ್ಲಿ ಅಲೆಎಬ್ಬಿಸಿರುವ ಅಪರಿಗ್ರಹ ಯೋಗ (Corporate jagattinalli Ale Ebbisiruva Aparigraha Yoga)"

ಲೇಖಕರು: ಶ್ರೀ ಜಿ ನಾಗರಾಜ
(ಪ್ರತಿಕ್ರಿಯಿಸಿರಿ lekhana@ayvm.in)ಪರಿಗ್ರಹ ಎನ್ನುವುದು ಪತಂಜಲಿ ಸೂತ್ರದ ಅಷ್ಟಾಂಗಯೋಗದ ಯಮ ಎನ್ನುವ ಮೆಟ್ಟಿಲಿನ ಒಂದು ಭಾಗ. ಪರಿಗ್ರಹ ಎಂದರೆ ಸ್ವೀಕಾರ ಮಾಡುವುದು, ತೆಗೆದುಕೊಳ್ಳುವುದು ಎಂದರ್ಥ ಮತ್ತು ದಾನವನ್ನು ಸ್ವೀಕಾರ ಮಾಡದೇಇರುವಿಕೆಯೇ ಅಪರಿಗ್ರಹ. ಮೇಲುನೋಟದಲ್ಲಿ ಈ ಯಮವು ಇಂದಿನ ಆಧುನಿಕ ಜೀವನದ ಚಿಂತನಾಕ್ರಮ ಹಾಗೂ ಜೀವನಶೈಲಿಯ ಚೌಕಟ್ಟಿನಲ್ಲಿ ಅಪ್ರಸ್ತುತ ಎಂದು ಅನ್ನಿಸಬಹುದೇನೋ! ಆದರೆ ಈ ಯಮದ ಹಿಂದಿರುವ ತತ್ತ್ವದ ಅಳವಡಿಕೆ ಆಧುನಿಕ ಕಾರ್ಪೊರೇಟ್ ಜಗತ್ತಿನಲ್ಲಿ ಅಲೆಗಳನ್ನೇ ಎಬ್ಬಿಸಿ ಜಾಗತಿಕ ಮಟ್ಟದಲ್ಲಿ ಕ್ರಾಂತಿ ಉಂಟು ಮಾಡಿದೆ. ಆದುದರಿಂದ ಈ ವಿಷಯದ ಹಿಂದಿರುವ ತತ್ತ್ವವೇನು? ಹೇಗೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎನ್ನುವುದನ್ನು ಮೌಲಿಕವಾಗಿ ತಿಳಿಯಬೇಕಾಗಿದೆ.

ಮೌಲಿಕವಾಗಿ ಚಿಂತಿಸುವುದಾದರೆ, ಪತಂಜಲಿಗಳ ಪ್ರಕಾರ, ಯೋಗ ಎಂದರೆ ಚಿತ್ತವೃತ್ತಿಗಳ ನಿರೋಧವೇ ಆಗಿದೆ. ಮನಸ್ಸಿನ ಅಲೆಗಳು ಸಂಪೂರ್ಣವಾಗಿ ಶಾಂತವಾದಾಗ, ವ್ಯಕ್ತಿಯು ತನ್ನ ಮೂಲಸ್ವರೂಪವನ್ನು ದರ್ಶನ ಮಾಡಬಹುದು ಎನ್ನುವುದು ಈ ಸೂತ್ರದ ತಾತ್ಪರ್ಯ. ಯಾವ ಅಭ್ಯಾಸಗಳು ಚಿತ್ತವೃತ್ತಿಗಳನ್ನು ಕಡಿಮೆ ಮಾಡುತ್ತವೆಯೋ ಅವೆಲ್ಲವೂ ಯೋಗಕ್ಕೆ ಪೋಷಕ ಮತ್ತು ಯಾವ ಅಭ್ಯಾಸಗಳು ಚಿತ್ತವೃತ್ತಿಯನ್ನು ಹೆಚ್ಚಿಸುತ್ತವೆಯೋ ಅವು ಯೋಗಕ್ಕೆ ವಿರೋಧ ಎಂದು ಪರಿಗಣಿಸಬಹುದು. ವಸ್ತುಗಳು ಅಥವಾ ಪದಾರ್ಥಗಳು ನಮ್ಮ ಮನಸ್ಸಿನ ಮೇಲೆ ಪರಿಣಾಮವನ್ನು ಬೀರಿ ಚಿತ್ತವೃತ್ತಿಗಳನ್ನು ಹೆಚ್ಚಿಸುತ್ತವೆ. ಪರಿಗ್ರಹ ಮಾಡುತ್ತಿದ್ದರೆ, ಅಂದರೆ ದಾನ ಕೊಟ್ಟ ವಸ್ತುಗಳನ್ನು ಸ್ವೀಕರಿಸುತ್ತಿದ್ದರೆ ನಮ್ಮಲ್ಲಿ ಪದಾರ್ಥಸಂಗ್ರಹವು ಜಾಸ್ತಿಯಾಗೆ ತನ್ಮೂಲಕ ಚಿತ್ತವೃತ್ತಿಗಳು ಜಾಸ್ತಿಯಾಗಿ ಯೋಗಕ್ಕೆ ಬಾಧಕವಾಗುತ್ತದೆ. ಆದುದರಿಂದ ದಾನವನ್ನು ಸ್ವೀಕರಿಸದೇ ಇರುವುದರಿಂದ, ಪದಾರ್ಥ ಸಂಗ್ರಹವು ಮಿತಿಯಲ್ಲಿದ್ದು ತನ್ಮೂಲಕ ಚಿತ್ತವೃತ್ತಿಗಳನ್ನು ಹತೋಟಿಯಲ್ಲಿರುವಂತೆ ಆಗುವುದರಿಂದ ಅಪರಿಗ್ರಹ ಎನ್ನುವ ಯಮವು ಒಂದು ಯೋಗಾಂಗವಾಗಿದೆ.

ಪದಾರ್ಥಗಳಿಗೂ ಮತ್ತು ಮನಸ್ಸಿಗೂ ಇರುವ ಸಂಬಂಧವೇನು? ಅವು ಹೇಗೆ ಚಿತ್ತವೃತ್ತಿಗಳನ್ನು ಹೆಚ್ಚಿಸುತ್ತವೆ ಎನ್ನುವುದನ್ನು ನಮ್ಮ ದೈನಂದಿನ ಜೀವನವನ್ನು ಗಮನಿಸುವ ಮೂಲಕವೇ ಅರ್ಥ ಮಾಡಿಕೊಳ್ಳಬಹುದು. ಒಂದು ಪದಾರ್ಥ ನಮ್ಮಲ್ಲಿ ಬಂದು ಸೇರಿದರೆ ಅದರ ಉಪಯೋಗ ಏನು? ಅದನ್ನು ಎಲ್ಲಿಟ್ಟಿರುವುದು? ಅದರ maintenance ಹೇಗೆ? ಮುಂತಾಗಿ ಆಲೋಚಿಸಬೇಕಾಗುತ್ತದೆ. ಕನಿಷ್ಠ ಪಕ್ಷ ಅದರ ಧೂಳು ಹೊಡೆಯುವುದಷ್ಟು ಕೆಲಸವನ್ನಂತೂ ಮಾಡಲೇಬೇಕಾಗುತ್ತದೆ. ಮನೆಯಲ್ಲಿ ವಸ್ತುಗಳು ಚೊಕ್ಕವಾಗಿದ್ದರೆ ಮನಸ್ಸು ಪ್ರಸನ್ನವಾಗಿರುತ್ತದೆ. ಶುಭ್ರವಾಗಿ, ಚೊಕ್ಕವಾಗಿ, ಅಂದವಾಗಿಟ್ಟುರುವ ಸನ್ನಿವೇಶವೇ ಮನಸ್ಸು ಅರಳುವಂತೆ ಮಾಡುತ್ತದೆ. ಆದರೆ ವಸ್ತುಗಳು ಅಸ್ತ್ಯವಸ್ತ್ಯವಾಗಿ ಹರಡಿದ್ದರೆ ಅಥವಾ ಬಿಸಾಡಲ್ಪಟ್ಟಿದ್ದರೆ ಮನಸ್ಸು ಕೆರಳಬಹುದು ಅಥವಾ ಒಂದು ಮಬ್ಬು ಕವಿಯಬಹುದು ಒಟ್ಟಿನಲ್ಲಿ ಪ್ರಸನ್ನತೆ ಹಾಳಾಗಬಹುದು. ಒಟ್ಟಾರೆ ವಸ್ತುಗಳಿಗೂ ಮನಸ್ಥಿತಿಗೂ ಸಂಬಂಧವುಂಟು ಎನ್ನುವುದು ಸ್ಪಷ್ಟವಾಗುತ್ತದೆ. ಹೀಗೆ, ವಸ್ತುಗಳಿಗೂ ಚಿತ್ತವೃತ್ತಿಗಳಿಗೂ ಸಂಬಂಧವಿರುವುದರಿಂದ ವಸ್ತು ಸಂಗ್ರಹವನ್ನು ಕನಿಷ್ಠವಾಗಿಟ್ಟುಕೊಳ್ಳುವುದು ಚಿತ್ತವೃತ್ತಿಗಳು ಕಡಿಮೆಯಾಗುವುದಕ್ಕೆ ಕಾರಣವಾಗಿ ಯೋಗಕ್ಕೆ ಪೋಷಕವಾಗಿರುತ್ತದೆ. ಈ ಕನಿಷ್ಠ ಪದಾರ್ಥ ಸಂಗ್ರಹವೇ ಅಪರಿಗ್ರಹ ಎನ್ನುವ ಯಮದ ಹಿಂದಿರುವ ತತ್ತ್ವ. ಈ ತತ್ತ್ವವನ್ನೇ ಆಧುನಿಕ ಕಾರ್ಪೊರೇಟ್ ಜಗತ್ತು ವ್ಯಾಪಕವಾಗಿ, ಜಾಗತಿಕ ಮಟ್ಟದಲ್ಲಿ ಅಳವಡಿಸಿಕೊಂಡು ಬಹಳ ದೊಡ್ಡ ಮಟ್ಟದ ಪ್ರಯೋಜನವನ್ನು ಗಳಿಸಿರುವುದು.


ಇಂದಿನ ಕಾರ್ಪೊರೇಟ್ ಜಗತ್ತಿನಲ್ಲಿ 'ಲೀನ್ ಪ್ರಿನ್ಸಿಪಲ್' (Lean principles) ಬಹಳ ವ್ಯಾಪಕವಾಗಿ ರೂಢಿಯಲ್ಲಿದ್ದು ಅನೇಕ ಸಂಸ್ಥೆಗಳು ದೊಡ್ಡ ಗುಣಮಟ್ಟದ ಉತ್ಪನ್ನಗಳನ್ನು ಕಡಿಮೆ ವೆಚ್ಚದಲ್ಲಿ ತಯಾರಿಸಿ ಜಾಗತಿಕ ಮಾರುಕಟ್ಟೆಯಲ್ಲಿ ಕ್ರಾಂತಿಯನ್ನೇ ಉಂಟುಮಾಡಿವೆ. ಇಂತಹ ಸಂಸ್ಥೆಗಳಲ್ಲಿ ಅಗ್ರಗಣ್ಯವಾಗಿರುವುದು ಜಪಾನಿನಟೊಯೋಟ ಸಂಸ್ಥೆ. ಜಪಾನಿನಲ್ಲಿ ಶಿಂಟೋಯಿಸಮ್ ಹಾಗೂ ಜೆನ್ ಬುದ್ಧಿಸಂ ಗಳು ಪ್ರಚಲಿತವಿದ್ದು ಇವು ಭಾರತೀಯ ಸಂಸ್ಕೃತಿಯಿಂದ ಪ್ರಭಾವಿತವಾಗಿವೆ ಎನ್ನುವುದು ಬಹುತೇಕ ಮಾನ್ಯವಾಗಿರುವ ವಿಷಯವಾಗಿದೆ. ಈ ಮತಗಳ ಪ್ರಭಾವದಿಂದ ಜಪಾನ್ ಸಂಸ್ಕೃತಿಯಲ್ಲಿ ಕನಿಷ್ಠ ಪದಾರ್ಥ ಸಂಗ್ರಹ ಎನ್ನುವುದು ಬಹಳ ವ್ಯಾಪಕವಾಗಿ ರೂಢಿಯಲ್ಲಿದೆ. ಆ ಸಂಸ್ಕೃತಿಯಲ್ಲಿ ಯಾವುದೇ ವಸ್ತುವನ್ನು ಅವರು ಉಡಾಫೆಯಿಂದ ನೋಡುವುದಿಲ್ಲ. ಪ್ರತಿಯೊಂದು ಪದಾರ್ಥಕ್ಕೂ ಅದರದರ ಗೌರವವನ್ನು ಕೊಡುತ್ತಾರೆ. ಬೇರೆ ದೇಶದ ಜನರಜೊತೆ ವ್ಯವಹರಿಸಬೇಕಾದರೆ ಅವರ ಈ ವರ್ತನೆ ಹೆಚ್ಚು ಬೆಳಕಿಗೆ ಬರುತ್ತದೆ. ಉದಾಹರಣೆಗೆ ಯಾವುದಾದರೂ use and throw pen ಅನ್ನು ಬೇರೆ ದೇಶದವನೊಬ್ಬ ಪೂರ್ಣವಾಗಿ ಬಳಸದೇ, ಅಸಡ್ಡೆಯಿಂದ ಅಥವಾ ಉಡಾಫೆಯಿಂದ ಎಸೆದರೆ, ಜಪಾನಿನವರು ಬಹಳ ಬೇಸರ ಪಟ್ಟುಕೊಂಡುಬಿಡುತ್ತಾರೆ. ಭಾರತೀಯ ಮಹರ್ಷಿ ಸಂಸ್ಕೃತಿಯ "ಪ್ರತಿಯೊಂದು ಪದಾರ್ಥವೂ ದೈವಪ್ರೀತಿಗಾಗಿ ನಿರ್ಮಿತವಾದದ್ದು" ಎನ್ನುವ ಭಾವನೆ ಶಿಂಟೋಯಿಸಮ್ ನಲ್ಲಿಯೂ ಇದೆ. ಆಧುನಿಕ ಭಾರತೀಯ ಸಮಾಜದಲ್ಲಿ ಬಹುತೇಕ ಮರೆಯಾಗಿರುವ ಈ ಭಾವನೆ ಜಪಾನಿನಲ್ಲಿ ಮಾತ್ರ ಬಹುತೇಕಸಜೀವವಾಗಿದೆ. ಆದುದರಿಂದ ಇಲ್ಲಿ ಪದಾರ್ಥಗಳನ್ನು ನೋಡುವ ನೋಟವೇ ಬೇರೆಯಾಗಿರುತ್ತದೆ. ಅವರುಗಳ ಮನೆಗೆ ಒಂದು ಹೊಸಪದಾರ್ಥ ತರಬೇಕಾದರೆ ಮನೆಯಲ್ಲಿರುವ ಯಾವವಸ್ತು ಹೊರಗೆ ಹೋಗಬೇಕು ಎಂದು ಆಲೋಚಿಸಿ ನಂತರವೇ ಒಂದು ಹೊಸಪದಾರ್ಥವನ್ನು ಖರೀದಿಸುತ್ತಾರೆ. ಹೀಗೆ ಅವರು ಕನಿಷ್ಠಪದಾರ್ಥ ಸಂಗ್ರಹವನ್ನು ಬಹಳ ಶಿಸ್ತಿನಿಂದ ಪಾಲಿಸುತ್ತಾರೆ.

ಜಪಾನ್ ಸಂಸ್ಥೆಗಳು ತಮ್ಮ ಸಂಸ್ಕೃತಿಯನ್ನು ಗೌರವದಿಂದ ಕಾಣುತ್ತಾರೆ ಮತ್ತು ಸಂಸ್ಕೃತಿಯ ಯಾವುದಾದರೂ ರೂಢಿಯು ಸಂಸ್ಥೆಗೆ ಪ್ರಯೋಜನಕಾರಿಯಾಗಿದ್ದರೆ ಅದನ್ನು ಹಿಂಜರಿಯದೇ, ಪಾಶ್ಯಾತ್ಯ ಜಗತ್ತಿನ ಅನುಮೋದನೆಗೆ ಕಾಯದೇ ಅಳವಡಿಸಿಕೊಳ್ಳುತ್ತಾರೆ. ಅಲ್ಲಿನ ಟೊಯೋಟ ಸಂಸ್ಥೆಯು ಈ ಕನಿಷ್ಠ ಪದಾರ್ಥಸಂಗ್ರಹ ಎನ್ನುವ ತತ್ತ್ವವನ್ನು ಲೀನ್ ಪ್ರಿನ್ಸಿಪಲ್ ಗಳಲ್ಲಿ ಒಂದಾದ ಶೂನ್ಯದಾಸ್ತಾನು (zero inventory) ಎನ್ನುವ ಹೆಸರಿನಲ್ಲಿ ಅಳವಡಿಸಿಕೊಂಡಿದೆ. ಉದಾಹರಣೆಗೆ ಕರ್ನಾಟಕದ ಬಿಡದಿಯಲ್ಲಿರುವ ಟೊಯೋಟ ಸಂಸ್ಥೆಯು ಕಾರು ತಯಾರಿಕೆಗೆ ಬೇಕಾದ ಬಿಡಿಭಾಗಗಳನ್ನು ತಂದಿಟ್ಟುಕೊಳ್ಳುವುದೇ ಇಲ್ಲ. ಬಿಡಿಭಾಗಗಳ ಪೂರೈಕೆದಾರರು ನಿಗಧಿತ ಸಮಯಕ್ಕೆ ಮುಂಚೆಯೇ ತಮ್ಮ ಸರಕುವಾಹನಗಳನ್ನು ತಯಾರಿಟ್ಟುಕೊಂಡು ನಿಗಧಿತ ಸಮಯಕ್ಕೆ ಸರಿಯಾಗಿ ಬಿಡಿಭಾಗಗಳನ್ನು ತಯಾರಿಕಾ ಘಟಕಕ್ಕೆ ಒದಗಿಸುತ್ತಾರೆ. ಈ ರೂಢಿಯಿಂದ ಸಂಸ್ಥೆಯು ತಯಾರಿಕೆಯ ವೆಚ್ಚವನ್ನು ಕಡಿಮೆ ಮಾಡಿ, ಗ್ರಾಹಕರಿಗೆ ಕಡಿಮೆ ದರದಲ್ಲಿ ಕಾರುಗಳನ್ನು ಒದಗಿಸುವ ಮೂಲಕ ಮಾರುಕಟ್ಟೆಯ ದೊಡ್ಡ ಪಾಲನ್ನು ತಮ್ಮದಾಗಿಸಿಕೊಳ್ಳುವುದರಲ್ಲಿ ಯಶಸ್ವಿಯಾಗಿದ್ದಾರೆ. ಶೂನ್ಯದಾಸ್ತಾನಲ್ಲದೇ, ಇನ್ನಿತರ ಲೀನ್ ರೂಢಿಗಳಿಂದಾಗಿ ತಯಾರಿಕೆಯ ಗುಣಮಟ್ಟವನ್ನು ಹೆಚ್ಚಿಸಿ, ಟೊಯೋಟಸಂಸ್ಥೆಯು ತಾನು ಜಾಗತಿಕ ಮಾರುಕಟ್ಟೆಗಳಲ್ಲಿ ಅಗ್ರಗಣ್ಯ ಸ್ಥಾನವನ್ನು ಪಡೆಯುವುದಲ್ಲದೇ ಕೈಗಾರಿಕಾಡಳಿತ ಚಿಂತನೆಯಲ್ಲಿ ಒಂದು ಕ್ರಾಂತಿಯನ್ನೇ ಉಂಟುಮಾಡಿದ್ದಾರೆ. ವಿವಿಧ ಕೈಗಾರಿಕಾ ಕ್ಷೇತ್ರಗಳು, ಆಡಳಿತಗಳು, ಲೀನ್ ಪ್ರಿನ್ಸಿಪಲ್ ಗಳನ್ನು ಅಳವಡಿಸಿಕೊಳ್ಳುತ್ತವೆ. ಸಂಶೋಧನಾ ಸಂಸ್ಥೆಗಳು, ಶೈಕ್ಷಣಿಕ ಸಂಸ್ಥೆಗಳು ಸಂಶೋಧನೆ ಮತ್ತು ಅಧ್ಯಯನ ಮಾಡುತ್ತವೆ. ಒಟ್ಟಿನಲ್ಲಿ ಲೀನ್ ಎನ್ನುವ ಪದ ಇಂದು ಒಂದು ಮಾರುಕಟ್ಟೆ ಮಂತ್ರವಾಗಿದೆ.

ಹೀಗೆ, ಹೊರನೋಟದಲ್ಲಿ ಅಪ್ರಸ್ತುತ ಎನ್ನಿಸಬಹುದಾದ ಒಂದು ಯೋಗಾಂಗವು ಆಳವಾಗಿ ರೂಢಿಸಿಕೊಂಡಲ್ಲಿ ಎಂತಹಾ ಪರಿಣಾಮವನ್ನಾದರೂ ಉಂಟು ಮಾಡಬಹುದೆಂಬುದಕ್ಕೆ ಟೊಯೋಟಸಂಸ್ಥೆಯೇ ನಿದರ್ಶನವಾಗಿದೆ. ಈ ನಿದರ್ಶನದಿಂದ ನಾವೂ ಸಹ ಯೋಗಾಂಗಗಳನ್ನು ನಿತ್ಯಜೀವನದಲ್ಲಿ ಅಳವಡಿಸಿಕೊಳ್ಳಲಿಕ್ಕೆ ಸ್ಪೂರ್ತಿಯನ್ನು ಪಡೆಯೋಣ. 

ಸೂಚನೆ : 20/11/2021 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.

ಯೋಗತಾರಾವಳಿ - 29 ಸಿಂಹಾವಲೋಕನ (Yogataravali - 29 Simhavalokana)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)
ಯೋಗತಾರಾವಳಿಯ ೨೯ ಶ್ಲೋಕಗಳನ್ನೂ ಬಿಡಿಬಿಡಿಯಾಗಿ ನೋಡಿದ್ದಾಯಿತು. ಒಮ್ಮೆ ಒಟ್ಟಾರೆ ನೋಟವನ್ನು ಮಾಡಿದರೆ ಸಂತೃಪ್ತಿಯಾದೀತು. ಭಗವತ್ಪಾದರು ಇಲ್ಲಿ ಏನನ್ನು ಹೇಳಹೊರಟಿದ್ದಾರೆಂಬುದರ ಗ್ರಹಿಕೆಯಾದೀತು.

ಗುರುಪಾದ


ಯೋಗತಾರಾವಳಿಯ ಆರಂಭವೇ ಗುರುಪಾದ-ವಂದನೆಯೊಂದಿಗೆ. ಸಂಸಾರವೆಂಬ ಹಾಲಾಹಲವೊಡ್ಡುವ ಮೋಹಕ್ಕೆ ಬಲಿಯಾಗದವರಾರು? ಅದರ ಶಮನಕ್ಕಾಗಿ ವಿಷವೈದ್ಯರಂತಿರುವುವೇ ಶ್ರೀಗುರುಚರಣಗಳು. ಅವೇ ಆತ್ಮಸುಖದ ಸಂದರ್ಶನ ಮಾಡಿಸತಕ್ಕವು.

ನಾದಾನುಸಂಧಾನ


ಯೋಗಗಳಲ್ಲಿ ಉತ್ಕೃಷ್ಟವಾದುದು ಲಯಯೋಗ. ಅದಕ್ಕೆ ಸಾಧನಗಳು ಲಕ್ಷಾಧಿಕ. ನಾದಾನುಸಂಧಾನವು ಅವಲ್ಲಿ ಮಾನ್ಯತಮ. ಕುಂಭಕಪ್ರಾಣಾಯಾಮದಿಂದ ನಾಡೀಶೋಧನವಾದಾಗಲೇ ನಾದಶ್ರವಣವಾಗುವುದು. ನಾದಾನುಸಂಧಾನದಿಂದ ಮನಸ್ಸೂ ಪ್ರಾಣವೂ ವಿಷ್ಣುಪದದಲ್ಲಿ ಲೀನವಾಗುವುವು.

ಬಂಧತ್ರಯ

ಜಾಲಂಧರ-ಉಡ್ಯಾಣ-ಮೂಲ ಎಂಬ ಮೂರು ಬಂಧಗಳು ಬಲವಾದಲ್ಲಿ ಯಮಪಾಶಬಂಧನದ ಭಯವೆಲ್ಲಿ? ಈ ಬಂಧಗಳಿಂದ ಕುಂಡಲಿನಿಯ ಪ್ರಬೋಧವಾಗುವುದು. ಪ್ರಾಣವು ಒಳಮುಖವಾಗಿ ಸುಷುಮ್ನೆಯನ್ನು ಪ್ರವೇಶಿಸುವುದು. ಉಸಿರಾಟವು ಸೂಕ್ಷ್ಮವಾಗುವುದು. ಮೂಲಾಧಾರಾಗ್ನಿಯು ಜ್ವಲಿಸುವುದು. ಇದಕ್ಕೆ ಅಪಾನದ ಆಕುಂಚನವು ಪುಷ್ಟಿಕೊಡುವುದು. ನಾಲಿಗೆಯ ಬುಡದಿಂದ ಆಪ್ಯಾಯಕದ್ರವವು ಜಿನುಗುವುದು. ಅದರ ಪಾನ ಮಾಡಿದವನು ಧನ್ಯ.

ಕೇವಲಕುಂಭಕ


ಬಂಧತ್ರಯದಲ್ಲಿ ಪಳಗಿದಲ್ಲಿ ಕೇವಲಕುಂಭವೆಂಬ ವಿದ್ಯೆಯ ಉದಯವಾಗುವುದು. ರೇಚಕ-ಪೂರಕಗಳನ್ನು ಕ್ಷೀಣಗೊಳಿಸಿ ಇಂದ್ರಿಯವಿಷಯಗಳ ಪ್ರವಾಹವನ್ನಿದು ನಿಲ್ಲಿಸುವುದು. ಅನಾಹತದತ್ತ ದತ್ತಚಿತ್ತರಾದವರ ಮನಃಪ್ರಾಣಗಳ ಸ್ತಂಭನವನ್ನು ಕೇವಲಕುಂಭಕವು ಸಾಧಿಸಿಕೊಡುವುದು. 


ಈ ಉತ್ತಮಕುಂಭಕವುಂಟಾದಾಗ ಪ್ರಾಕೃತ/ವೈಕೃತ-ಪ್ರಕಾರಗಳು ಉಸಿರಿಗಿರವು; ಸ್ತಿಮಿತಗೊಂಡ ಮನಸ್ಸು ತ್ರಿಕೂಟವೆನಿಸುವ ಭ್ರೂಮಧ್ಯಸ್ಥಾನದಲ್ಲಿ ಸ್ತಂಭಿತವಾಗುವುದು; ಇಡಾ-ಪಿಂಗಳಾನಾಡಿಗಳನ್ನು ತೊರೆದು ಪ್ರಾಣವಾಯುವು ಶೀಘ್ರವಾಗಿ ಲಯಹೊಂದುವುದು.

ಕೇವಲಕುಂಭಕದಿಂದಲೇ ಪ್ರಾಣದ ಪ್ರತ್ಯಾಹಾರದ ಸಾಧನೆಯಾಗಿ, ಕುಂಡಲಿನಿಗೆ ಪ್ರಾಣವು ಗ್ರಾಸವಾಗಿ, ಸುಷುಮ್ನಾಮಾರ್ಗದಲ್ಲಿ ಹಾದು ವಿಷ್ಣುಪದಸ್ಥಾನದಲ್ಲಿ ಪ್ರಾಣವು ವಿಲಯವಾಗುವುದು.

ಹತೋಟಿಯಿದ್ದಿಲ್ಲದ ಶ್ವಾಸಕ್ಕೆ ಈ ಕೇವಲಕುಂಭಕದಿಂದಲೇ ನಿರೋಧವು ದೊರಕುವುದು; ಇಂದ್ರಿಯಗಳು ವೃತ್ತಿಶೂನ್ಯವಾಗಲು ಪ್ರಾಣಲಯವಾಗುವುದು.

ರಾಜಯೋಗ


ಮುಂದಿನ ಘಟ್ಟವಾದ ರಾಜಯೋಗವು ಪ್ರವರ್ಧಮಾನಕ್ಕೆ ಬಂದರೆ, ದೃಷ್ಟಿಗೆ ಲಕ್ಷ್ಯವೆಂಬ ನಿರ್ಬಂಧವಿಲ್ಲ; ಚಿತ್ತಕ್ಕೂ ಬಂಧವಿಲ್ಲ; ದೇಶ-ಕಾಲಗಳ ಲೆಕ್ಕಾಚಾರವಿಲ್ಲ; ಪ್ರಾಣರೋಧವೂ ಅವಶ್ಯವಿಲ್ಲ; ಧಾರಣಾ-ಧ್ಯಾನಗಳಿಗೂ ಶ್ರಮವಿಲ್ಲ.

ರಾಜಯೋಗದಲ್ಲಿ ನೆಲೆಕಾಣುತ್ತಿರಲು, ದೃಶ್ಯಗಳು ಕಳೆದು ಇಂದ್ರಿಯಗಳು ಸ್ತಬ್ಧವಾಗುವುವು: ಆಗಿನ ಸ್ಥಿತಿ ಜಾಗರ-ನಿದ್ರೆಗಳಲ್ಲ, ಬದುಕಿರುವ/ಸತ್ತಿರುವ ಲಕ್ಷಣಗಳೂ ಅಲ್ಲಿಲ್ಲ. ಇದು ಅತ್ಯಂತವಿಶಿಷ್ಟ.

ಅಹಂ-ಮಮಗಳನ್ನು ಮೀರಿ ರಾಜಯೋಗದಲ್ಲಿ ಸ್ಥಿರವಾದಾಗ ನೋಡುವವ-ನೋಡಲಾಗುವ ಎಂಬ ವಸ್ತುಗಳೆರಡೂ ಇಲ್ಲವಾಗಿ, ಕೇವಲಜ್ಞಾನವೆಂಬುದಷ್ಟೇ ಉಳಿಯುವುದು.

ಮನೋನ್ಮನೀ


ರೆಪ್ಪೆಗಳ ಬಡಿತ, ರೇಚಕ-ಪೂರಕಗಳು, ಸಂಕಲ್ಪ-ವಿಕಲ್ಪಗಳು -ಇವಾವುವೂ ಇಲ್ಲದ ಮನೋನ್ಮನಿಯು ಆಗ ಉಂಟಾಗುವುದು.
ಉಸಿರಾಟವು ಶಾಂತವಾಗಿ ಇಂದ್ರಿಯ ಮನಸ್ಸುಗಳ ನಿಗ್ರಹವಾದಾಗ ಮನೋನ್ಮನಿಯಲ್ಲಿ ಮುಳುಗಿದ ಯೋಗಿಗಳ ಅಂಗಗಳು ನಿಶ್ಚಲವಾಗಿರುತ್ತವೆ: ಗಾಳಿಯಾಡದೆಡೆಯ ದೀಪದಂತೆ.

ಉನ್ಮನ್ಯವಸ್ಥೆಯು ದೊರೆಯಲು ಬೇಕಾದುದು: ಪ್ರಪಂಚದ ಬಗ್ಗೆ ಉದಾಸೀನತೆ,  ಎಚ್ಚರದಿಂದ ಸಂಕಲ್ಪವನ್ನು ಕಿತ್ತುಹಾಕುವುದು. ಸಂಕಲ್ಪಗಳ ಪರಂಪರೆ ನಿಂತಿತೆಂದರೆ, ಆಲಂಬನವಿಲ್ಲವಾಗಿ ಚಿತ್ತವು ಶಮನಗೊಳ್ಳುವುದು.

ಅಮನಸ್ಕ


ಉಸಿರಾಟವೂ ತೋರದಂತಾಗಿ ಶರೀರವು ನಿಶ್ಚಲಗೊಂಡು ಕಣ್ಣುಗಳು ಅರ್ಧಮುಚ್ಚಿರಲು ಅಮನಸ್ಕ-ಮುದ್ರೆಯು ತೋರಿಬರುವುದು. ಅಹಂಕಾರ-ಮಮಕಾರಗಳು ತಾವೇ ಕಳಚಿ, ಪ್ರಾಣ-ಮನಸ್ಸುಗಳನ್ನು ಮೀರುವುದಾಗುವುದು, ಸಹಜಾಮನಸ್ಕವು ಬಂದಾಗ. ಇಂದ್ರಿಯಗಳು ಹಿಂದಿರುಗಿರಲು, ಪರಮಾತ್ಮಯೋಗದ ಹೆಜ್ಜೆಗಳು ಆರಂಭವಾಗುವುವು.

ಯೋಗನಿದ್ರೆ


ಒಳಮುಖವಾದ ವಿಮರ್ಶೆಯಿಂದಾಗಿ ಪೂರ್ವವಾಸನೆಗಳನ್ನು ಹತ್ತಿಕ್ಕಿದಾಗ ಜಾಡ್ಯವಿಲ್ಲದೊಂದು ನಿದ್ರೆಯೇರ್ಪಡುವುದು; ಪ್ರಪಂಚದ ಗೊಡವೆಯನ್ನೇ ಅದು ತೊರೆದಿರುವುದು. ಸಂಕಲ್ಪ-ವಿಕಲ್ಪಗಳನ್ನೂ ಕರ್ಮಜಾಲವನ್ನೂ ಮೀರುವ ಅಭ್ಯಾಸವಾಗುತ್ತಿದ್ದಂತೆ  ಯೋಗನಿದ್ರೆಯುಂಟಾಗುವುದು.

ಜಾಗ್ರತ್-ಸ್ವಪ್ನ-ಸುಷುಪ್ತಿಗಳೆಂಬ ಮೂರು ಅವಸ್ಥೆಗಳನ್ನು ಮೀರಿದ ತುರೀಯ ಎಂಬುದೇ ಹಾಸಿಗೆ; ಅಲ್ಲಿ ಒದಗುವ ನಿರ್ವಿಕಲ್ಪ-ನಿದ್ರೆಯು ಎಷ್ಟು ಕಮನೀಯವಾದುದು! ಈ ಅವಸ್ಥೆಯಲ್ಲೇ ಪರಮಾತ್ಮನ ಸ್ಫುರಣವಾಗುವುದು: ಆ ಸೂರ್ಯನಿಂದಾಗಿ ಅವಿದ್ಯೆಯೆಂಬ ಕತ್ತಲೆಯು ಮಾಯವಾಗುವುದು; ದೃಷ್ಟಿಯು ನಿರ್ಮಲವಾಗಿದ್ದರೂ ಜಗತ್ತೇ ತೋರದು!

ಸಮಾಧಿಸ್ಥಿತಿಯಲ್ಲಿ ದೊರಕುವ ಈ ಬಗೆಯ ಮನೋಲಯವನ್ನು ಶ್ರೀಶೈಲಪರ್ವತಗುಹೆಗಳಲ್ಲಿ ಹೊಂದುವ ಬಯಕೆ ಎನಗೆ! ನಾನು ತಪಸ್ಸಿನಲ್ಲಿ ಮುಳುಗಿರಲು ಬಳ್ಳಿಗಳು ನನ್ನ ಮೈಮೇಲೆ ಹಬ್ಬಿಕೊಂಡಾವು, ಪಕ್ಷಿಗಳು ನನ್ನ ಕಿವಿಯಲ್ಲಿ ಗೂಡುಕಟ್ಟಿಯಾವು!

ಇಷ್ಟಾದ ಮೇಲಿನ್ನು ಚಿಂತೆಯಿಲ್ಲ. ನನ್ನ ಮನಸ್ಸು ನಿರ್ವಿಕಲ್ಪಸಮಾಧಿಯಲ್ಲಾದರೂ ಸುಂದರಿಯರ ಕುಚಗಳ ಮೇಲಾದರೂ ಹರಿಯಲಿ!; ಜಡರ ಮತವೋ ಸಜ್ಜನರ ಮತವೋ - ಅತ್ತಿತ್ತ ವಾಲಿದರೂ ಮತಿಯಿಂದಾದ ಗುಣದೋಷಗಳು ವಿಭುವಾದ ನನ್ನನ್ನು ಬಾಧಿಸವು!

ಹೀಗೆ ಮನಃಪ್ರಾಣಗಳ ಗುಟ್ಟನ್ನರಿತು, ಅವನ್ನು ಮೀರುವ  ಈ ಅದ್ಭುತಯೋಗವಿದ್ಯಾಸಾಧನೆಗೆ ಸಮನಾದ ಧನ್ಯತೆಯಿನ್ನೊಂದುಂಟೆ? 


ಅದಕ್ಕೆ ಮಾರ್ಗವೇ: ವಂದೇ ಗುರೂಣಾಂ ಚರಣಾರವಿಂದೇ!

ಸೂಚನೆ : 20/11/2021 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ