Sunday, November 21, 2021

ಶ್ರೀರಾಮನ ಗುಣಗಳು - 32 ಪಿತ್ರಾಜ್ಞಾಪಾಲಕ - ಶ್ರೀರಾಮ (Sriramana Gunagalu -32 Pitraajnaapaalakanaada Shrirama)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ 

(ಪ್ರತಿಕ್ರಿಯಿಸಿರಿ lekhana@ayvm.in)



ಶ್ರೀರಾಮನು ತಂದೆಯ ಮಾತಿಗೆ ಒಪ್ಪಿಗೆಯನ್ನು ಸೂಚಿಸಿ ಅರಣ್ಯಕ್ಕೆ ತೆರಳುವ ಸಂದರ್ಭವು ಶ್ರೀರಾಮನಿಗೆ 'ಪಿತ್ರಾಜ್ಞಾಪಾಲಕ' ಎಂಬ ಶಾಶ್ವತವಾದ ಬಿರುದನ್ನು ಕೊಟ್ಟಿತು. ಅಷ್ಟೇ ಅಲ್ಲ ಈ ಗುಣದಿಂದ ಲೋಕಕ್ಕೆ ಆದರ್ಶನಾದ. ಈ ಘಟನೆಯಿಂದ ಅದೆಂತಹ ಶ್ರೇಷ್ಠತ್ವನನ್ನು ಅವನಲ್ಲಿ ಕಾಣುವಂತಾಯಿತು! ಇದು ಶ್ರೀಮದ್ರಾಮಾಯಣದಲ್ಲಿ ಕಾಣುವ ಪ್ರಮುಖವಾದ ಘಟ್ಟವಾಗಿ ಮಾರ್ಪಟ್ಟಿತು. ಶ್ರೀರಾಮನು ದಶರಥನಿಗೆ ಜ್ಯೇಷ್ಠಪುತ್ರ. ತಂದೆಯ ಅನಂತರ ಸಿಂಹಾಸನಕ್ಕೆ ಅಧಿಕಾರಿ ಶ್ರೀರಾಮನೇ. ಮತ್ತು ಅಷ್ಟ ಮಹಾಮಂತ್ರಿಗಳಿಗೂ ಮತ್ತು ಪ್ರಜಾಜನರಿಗೂ ಸರ್ವಸಮ್ಮತನಾದ ವ್ಯಕ್ತಿ. ರಾಜನಾಗಲು ಬೇಕಾದ ಸರ್ವವಿಧವಾದ ಅಧಿಕಾರಸಂಪತ್ತಿನಿಂದಲೂ ಕೂಡಿದ್ದ. ಈ ಕಾರಣದಿಂದ ಒಂದು ಶುಭಮುಹೂರ್ತದಲ್ಲಿ ಶ್ರೀರಾಮನಿಗೆ ಪಟ್ಟಾಭಿಷೇಕವನ್ನು ಘೋಷಿಸಲಾಗಿತ್ತು. ಆದರೆ 'ತಾನೊಂದು ಬಗೆದರೆ ದೈವವೊಂದು ಬಗೆಯಿತು' ಎಂಬ ಗಾದೆಮಾತಿನಂತೆ ಆದದ್ದೇ ಬೇರೆ. ಯಾವ ಮುಹೂರ್ತವು ಪಟ್ಟಾಭಿಷೇಕಕ್ಕೆಂದು ನಿಗದಿಯಾಗಿತ್ತೋ ಅದೇ ಮುಹೂರ್ತವು ಅರಣ್ಯಗಮನಕ್ಕೆ ಸಾಕ್ಷಿಯಾಯಿತು. ಇಲ್ಲಿ ಶ್ರೀರಾಮನ ನಡೆ ಲೋಕಮಾನ್ಯವಾಯುತು. ಶ್ರೀರಾಮನನ್ನು ಪಿತ್ರಾಜ್ಞಾಪಾಲಕ ಎಂದು ವಿಶೇಷವಾಗಿ ಇಂದೂ ಗುರುತಿಸುವಂತಾಯಿತು. 

ಕೈಕೇಯಿಯ ಯಾವುದೋ ಕಾಲದ ಎರಡು ವರಗಳಿಗೆ ಅಂದು ಕಾಲವೊದಗಿತ್ತು. ಅದರ ಫಲವಾಗಿ ಆಕೆಯು, ರಾಮನ ಅರಣ್ಯವಾಸ ಮತ್ತು ಭರತನ ಅಭಿಷೇಕ ಎಂಬ ಎರಡು ವರಗಳನ್ನು ದಶರಥನಲ್ಲಿ ಕೇಳಿದಳು. ವರವು ಕಾರ್ಯರೂಪಕ್ಕೆ ಬರಬೇಕಾದರೆ ಶ್ರೀರಾಮನು ತಂದೆಯ ಮಾತನ್ನು ನೆರವೇರಿಸಿಕೊಡಬೇಕಾಗಿತ್ತು. 'ತಂದೆಯು ಕೊಟ್ಟ ಮಾತನ್ನು ನಡೆಸಲಿಲ್ಲ' ಎಂಬ ಅಪವಾದ ರಘುಕುಲ ರಾಮನಿಗೆ ಇಷ್ಟವಿರಲಿಲ್ಲ. ಆದ್ದರಿಂದಲೇ ತಂದೆಯ ಮಾತನ್ನು ಶಿರಸಾ ವಹಿಸಿಕೊಂಡು ವನಕ್ಕೆ ತೆರಳಿದ. ಇದು ಶ್ರೀರಾಮನು ತಂದೆಯ ಆಜ್ಞೆಯನ್ನು ಆಚರಿಸಿದ ರೀತಿ. ಇದಕ್ಕೆ ಹಿನ್ನೆಲೆ ಏನೆಂದರೆ- ತಂದೆಯನ್ನು ಗುರುಸ್ಥಾನದಲ್ಲಿ ಗೌರವಿಸಿ ಕಾಣುವ ಸಂಸ್ಕೃತಿ. ಈ ಒಡಲಿಗೆ ಕಾರಣೀಭೂತವಾದುದನ್ನು ಆದರದಿಂದ ಕಾಣುವ ವಿಧಾನ. ಶ್ರೀರಂಗಮಹಾಗುರುಗಳು ಹೇಳುವಂತೆ "ತಂದೆ ಏನು ತಂದೆ? ಎಂದರೆ ಜ್ಞಾನವನ್ನು ತಂದೆ" ಎಂಬಂತೆ ಜ್ಞಾನರೂಪನಾದ ಭಗವಂತನನ್ನು ಕಾಣಲು ಬೇಕಾದ ಈ ಒಡಲಿಗೆ ಕಾರಣನಾದ್ದರಿಂದ ತಂದೆಗೆ ಅಷ್ಟೊಂದು ಆದರ ನಮ್ಮ ಸಂಸ್ಕೃತಿಯಲ್ಲಿದೆ. ಋಣಗಳಲ್ಲಿ ಪಿತೃಋಣವು ತೀರಿಸಲು ಆಗದ ಋಣ ಎಂಬಷ್ಟರ ಮಟ್ಟಿಗೆ ಅದಕ್ಕೆ ಮಹತ್ತ್ವವನ್ನು ನೀಡಿದ್ದನ್ನು ನೋಡುತ್ತೇವೆ. ಈ ಎಲ್ಲ ಕಾರಣಗಳಿಂದಾಗಿ  ತಂದೆಗೆ ಅಷ್ಟು ಗೌರವ ಮತ್ತು ಅವನ ಮಾತಿಗೂ ಅಷ್ಟೇ ಬೆಲೆ. ಅದನ್ನು 'ಆಜ್ಞಾ ಗುರೂಣಾಮ್ ಅವಿಚಾರಣೀಯಾ' ಎಂಬ ಕಾಳಿದಾಸನ ಮಾತಿನಂತೆ ಪ್ರಾಜ್ಞನಾದ ತಂದೆಯ ಆಜ್ಞೆಯನ್ನು ವಿಚಾರಿಸದೆ ನಡೆಸಬೇಕಾದದ್ದು ಎಲ್ಲಾ ಮಕ್ಕಳ ಕರ್ತವ್ಯ. ಶ್ರೀರಾಮನು ತಂದೆಯಲ್ಲಿ ಆ ರೀತಿಯಾದ ಗೌರವವನ್ನು ಸಮರ್ಪಿಸಿದ. 'ಪಿತೃ' ಎಂಬುದು ಒಂದು ದೇವತಾ ಸ್ಥಾನ. ಅದು ತಾಯಿಗೂ ಬರುವಂತಹದ್ದೇ. ಶ್ರೀರಾಮನು ತನ್ನ ಸ್ವಂತ ತಾಯಿ ಕೌಸಲ್ಯೆಯಲ್ಲೂ ಕೈಕೇಯಿ, ಸುಮಿತ್ರೆಯರಲ್ಲೂ ಯಾವ ವಿಧವಾದ ಭೇದವನ್ನು ಕಾಣದೇ ಸಮಾನವಾದ ಗೌರವವನ್ನು ಕೊಟ್ಟ. ತಂದೆಯ ಮಾತನ್ನು ನಡೆಸಿದ್ದಷ್ಟೇ ಅಲ್ಲ, ತಾಯಿ ಕೈಕೇಯಿಯ ಮಾತನ್ನೂ ಪರೋಕ್ಷವಾಗಿ ನಡೆಸಿ ಸತ್ಯಾರ್ಥದಲ್ಲಿ ಪಿತ್ರಾಜ್ಞಾಪಾಲಕನಾದ ಶ್ರೀರಾಮ. 

ಸೂಚನೆ : 21/11/2021 ರಂದು ಈ ಲೇಖನವು  ಹೊಸದಿಗಂತ ಪತ್ರಿಕೆಯ "ಶ್ರೀರಾಮನ ಗುಣಗಳು" ಅಂಕಣದಲ್ಲಿ ಪ್ರಕಟವಾಗಿದೆ.