Sunday, November 14, 2021

ಶ್ರೀರಾಮನ ಗುಣಗಳು - 31 ಜಿತಕ್ರೋಧ - ಶ್ರೀರಾಮ (Sriramana Gunagalu - 31 Jitakrodha- ShriRama)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ 

(ಪ್ರತಿಕ್ರಿಯಿಸಿರಿ lekhana@ayvm.in)



ಶ್ರೀರಾಮನು ಕ್ರೋಧವನ್ನು ಜಯಿಸಿರುವುದರಿಂದ ಅವನಿಗೆ 'ಜಿತಕ್ರೋಧ'ನೆಂಬ ಅಭಿಧಾನವಿದೆ. ಈ ಕ್ರೋಧವನ್ನು ಜಯಿಸುವುದು ಹೇಗೆ? ಮತ್ತು ಅದನ್ನು ಜಯಿಸುವುದರಿಂದ ಆಗುವ ಪರಿವರ್ತನೆಗಳೇನು? ಇತ್ಯಾದಿ ವಿಷಯಗಳನ್ನು ತಿಳಿಯುವುದರಿಂದ ಆತ ಯಾವ ರೀತಿ ಕ್ರೋಧವನ್ನು ಜಯಿಸಿದ್ದ ಎಂಬುದನ್ನು ತಿಳಿಯಬಹುದು. 

ಕ್ರೋಧವೆಂಬ ಗುಣವು ಕಾಮ ಎಂಬ ಗುಣದ ಕೂಸು. ಕಾಮವೆಂದರೆ ನಮಗೆ ಬೇಕಾದದ್ದನ್ನು ಬಯಸುವುದು ಎಂಬುದು ಸಾಮಾನ್ಯವಾದ ಅರ್ಥ. ಬೇಕಾದುದನ್ನು ಪಡೆಯಲು ಆಗದಿರುವಾಗ ಅಲ್ಲಿ ಕ್ರೋಧವೆಂಬ ಗುಣವು ಉದಯಿಸುವುದು. ಅಂದರೆ ಕಾಮನೆಯು ತೀವ್ರತರವಾದ ಘಟ್ಟವನ್ನು ತಲುಪಿ, ಅದು ಈಡೇರದ ಸನ್ನಿವೇಶದಲ್ಲಿ ಕ್ರೋಧವು ಆವಿರ್ಭವಿಸುವುದು. ಮಗುವಿಗೆ ಚಾಕಲೇಟನ್ನು ತಿನ್ನಲೇಬೇಕೆಂಬ ಆಸೆಯುಂಟಾಗಬಹುದು ಅಥವಾ ಯಾವುದೋ ಬೊಂಬೆಯು, ಆಟಕ್ಕೆ ಬೇಕೆನಿಸಬಹುದು. ಅವು ಸಿಗದಿದ್ದಾಗ ಕಿರುಚಾಟ, ಚಂಡಿಹಿಡಿಯುವುದು ಇತ್ಯಾದಿ ಆ ಮಗುವಿನಲ್ಲಿ ಕಾಣುವುದು. ಆ ಸಂದರ್ಭದಲ್ಲಿ ಮಗುವಿನ ಮನಸ್ಸು ಹತೋಟಿಯಲ್ಲಿರುವುದಿಲ್ಲ. ಅದರ ಮುಖ ಕೆಂಪಗಾಗುತ್ತದೆ. ಕಣ್ಣಲ್ಲಿ ನೀರು ತುಂಬುತ್ತದೆ. ಬಿದ್ದು ಬಿದ್ದು ಹೊರಳಾಡಿ ತನ್ನ ಮೈಯ್ಯನ್ನೆಲ್ಲ ಪರಚಿಕೊಳ್ಳುತ್ತದೆ. ಇವೆಲ್ಲವೂ ಆ ಕ್ರೋಧದಿಂದುಂಟಾಗುವ ಪರಿಣಾಮಗಳು. ಅಂದರೆ ಮನಸ್ಸು ಅಲ್ಲಿ ಕ್ರೋಧವನ್ನು ನಿಯಂತ್ರಿಸಲು ಪಳಗಿಲ್ಲವೆಂದರ್ಥ. ಜನರಿಗೆ ಕೋಪವು ಬಂದಾಗ ತಮ್ಮ ನಿಯಂತ್ರಣವನ್ನು ಕಳೆದುಕೊಳ್ಳುತ್ತಾರೆ; ಆಗ ಮನಸ್ಸಿನ ಹದ ತಪ್ಪುತ್ತದೆ. ಮನಸ್ಸು ಮಲಿನವಾಗುತ್ತದೆ. ಅಲ್ಲಿ ಮನಸ್ಸಿನಿಂದ ಆಗಬೇಕಾದ ನಿರ್ದಿಷ್ಟ ಕಾರ್ಯ ಸಾಧ್ಯವಾಗುವುದಿಲ್ಲ. 

ಕ್ರೋಧವನ್ನು ನಿಯಂತ್ರಿಸುವುದೆಂದರೆ ಏನು? ತನ್ನ ಸಾತ್ತ್ವಿಕವಾದ ಇಂಗಿತಕ್ಕೆ ತಡೆ ಬಂದಾಗ ಅಲ್ಲಿ ಕ್ರೋಧವನ್ನು ಆವಾಹಿಸಿಕೊಳ್ಳುವಂತಿದ್ದರೆ 'ಜಿತಕ್ರೋಧ' ಎನ್ನಬಹುದು. ಇದು ಶ್ರೀರಾಮನಲ್ಲಿ ಕಂಡುಬರುವ ವಿಶೇಷ ಗುಣ. ಶ್ರೀರಾಮನು ಯಾವಾಗಲೂ ಅತ್ಯಂತ ಶಾಂತಚಿತ್ತ. ಆದರೆ ತನ್ನ ಧರ್ಮಯುತವಾದ ನಡೆಗೆ ವಿರೋಧ ಬಂದಾಗ ಅಲ್ಲಿ ಸಹಿಸುವ ಗುಣ ಅವನಿಗಿಲ್ಲ. ಸಾತ್ತ್ವಿಕವಾದ ಬಯಕೆ ಎಂದರೇನು? ಯಾವ ಕಾಮನೆಯು ಧರ್ಮ-ಅರ್ಥ-ಕಾಮ-ಮೋಕ್ಷಗಳೆಂಬ ಪುರುಷಾರ್ಥಗಳಲ್ಲಿ ಬರುತ್ತದೆಯೋ ಅದನ್ನು ಬಯಸಬೇಕು. ಅಲ್ಲಿ ತೊಡಕುಂಟಾದಾಗ ಪ್ರತಿಭಟಿಸಬೇಕು. ಅಲ್ಲಿ ಕ್ರೋಧವೆಂಬ ಗುಣ ಅವಶ್ಯವಾಗಿ ಬೇಕು. ಅರಿಷಡ್ವರ್ಗಗಳಲ್ಲಿ ಒಂದಾದ ಕಾಮವು ದೊರಕದಿದ್ದಾಗಲೂ ನಮ್ಮಲ್ಲಿ ಕೋಪವು ಬರುತ್ತದೆ. ಆದರೆ ಅಲ್ಲಿ ಬರುವ ಕ್ರೋಧವನ್ನು ಅವಶ್ಯವಾಗಿ ನಿಗ್ರಹಿಸಬೇಕು ಎಂದರ್ಥ. ಇದಕ್ಕೆ ಶ್ರೀಮದ್ರಾಮಾಯಣದಲ್ಲಿ ಬರುವ ಒಂದು ಉದಾಹರಣೆಯನ್ನು ಗಮನಿಸಬಹುದು. ಶ್ರೀರಾಮನು ಸೀತಾಮಾತೆಯನ್ನು ರಾವಣನಿಂದ ಮರಳಿ ಪಡೆಯಲು ಲಂಕೆಗೆ ಹೋಗಲು ಸೈನ್ಯ ಸಮೇತನಾಗಿ ಸಮುದ್ರದೆಡೆಗೆ ಬರುತ್ತಾನೆ. ಆದರೆ ಸಮುದ್ರರಾಜನು ರಾಮನ ಈ ಮಹತ್ಕಾರ್ಯಕ್ಕೆ ಅಸಹಕಾರವನ್ನು ನೀಡುತ್ತಾನೆ. ಪರಿಪರಿಯಾಗಿ ಕೇಳಿಕೊಂಡಾಗಲೂ ಸಹಕರಿಸದ ಸಮುದ್ರರಾಜನನ್ನು ಸಹಿಸದೇ ಶ್ರೀರಾಮನು 'ಕ್ರೋಧಮಾಹಾರಯನ್ ತೀವ್ರಂ' ಎಂಬಂತೆ ಆ ಸನ್ನಿವೇಶಕ್ಕೆ ಮಾತ್ರ ಬೇಕಾಗುವಂತೆ ಕ್ರೋಧವನ್ನು ತನ್ನೊಳಗೆ ಆವಾಹಿಸಿಕೊಂಡ. ಇದನ್ನು ನೋಡಿದ ಸಮುದ್ರರಾಜನು ಭಯಗೊಂಡು ಅವನ ಮಹತ್ಕಾರ್ಯಕ್ಕೆ ಅನುವು ಮಾಡಿಕೊಟ್ಟ. ಇಲ್ಲಿ ಶ್ರೀರಾಮನು ತಂದುಕೊಂಡ ಕೋಪವು ತಾತ್ಕಾಲಿಕವಾದುದು. ಧರ್ಮಕಾರ್ಯಕ್ಕೆ ಬಂದ ವಿರೋಧವನ್ನು ಶಮನ ಮಾಡಲು ತಂದುಕೊಂಡದ್ದು. ಹೀಗೆ, ಯಾವಾಗ ಬೇಕೋ ಆವಾಗ ಕ್ರೋಧವನ್ನು ತಂದುಕೊಳ್ಳುವುದು; ಬೇಡವೆಂದಾಗ ಅದನ್ನು ನಿಗ್ರಹಿಸುವ ಈ ಗುಣವಿದ್ದುದರಿಂದಲೇ 'ಜಿತಕ್ರೋಧ' ಎಂಬುದಾಗಿ ಶ್ರೀರಾಮನನ್ನು ಕೊಂಡಾಡುವುದು.  

ಸೂಚನೆ : 14/11/2021 ರಂದು ಈ ಲೇಖನವು  ಹೊಸದಿಗಂತ ಪತ್ರಿಕೆಯ "ಶ್ರೀರಾಮನ ಗುಣಗಳು" ಅಂಕಣದಲ್ಲಿ ಪ್ರಕಟವಾಗಿದೆ.