ಲೇಖಕರು : ಡಾ|| ಕೆ. ಎಸ್. ಕಣ್ಣನ್
(ಪ್ರತಿಕ್ರಿಯಿಸಿರಿ lekhana@ayvm.in)
ಯೋಗತಾರಾವಳೀ (ಶ್ಲೋಕ ೨೯)
ವಿಚರತು ಮತಿರೇಷಾ
ಯೋಗತಾರಾವಳಿಯ ಕೊನೆಯ ಶ್ಲೋಕವಿದು. ನನ್ನ ಮನಸ್ಸು ಹೀಗಾದರೂ ಆಡಲಿ ಹಾಗಾದರೂ ಆಡಲಿ - ಎನ್ನುತ್ತಾರೆ, ಶಂಕರರು!
ಇಪ್ಪತ್ತೆಂಟು ಶ್ಲೋಕಗಳಲ್ಲಿ ಮನಸ್ಸಿನ ನಿಗ್ರಹ-ನಿಯಂತ್ರಣಗಳ ಬಗ್ಗೆ ಹೇಳಿ, ಮನಸ್ಸನ್ನು ಮೀರುವ ಸ್ಥಿತಿಯನ್ನು ನಿರೂಪಿಸಿ, ಮನಸ್ಸೇ ಇಲ್ಲದಂತಾಗುವ ಸ್ಥಿತಿಯನ್ನೂ ಚಿತ್ರಿಸಿ, ಈಗ ಇದ್ದಕ್ಕಿದ್ದಂತೆ ಅಷ್ಟೆತ್ತರದಿಂದ ಇಷ್ಟು ಸಾಧಾರಣವಾದ ಮಟ್ಟಕ್ಕೆ ಬರಲಾದೀತೇ? - ಎಂಬ ಪ್ರಶ್ನೆಯು ಯಾರಿಗಾದರೂ ಬರಬಹುದು. ಪರಮಾಶ್ಚರ್ಯವೂ ಆಗಬಹುದು!
ಎಂದೇ ಮತ್ತೆ ಕೆಲವರು ಈ ಶ್ಲೋಕವು ಶಂಕರಾಚಾರ್ಯಕೃತವೇ ಆಗಿರಲಾರದು ಎನ್ನುತ್ತಾರೆ. ಕೆಲವು ಹಸ್ತಪ್ರತಿಗಳಲ್ಲಿಲ್ಲ, ಆದ್ದರಿಂದಲೂ ಇದು ಯಾವುದೋ ಪ್ರಕ್ಷಿಪ್ತ-ಶ್ಲೋಕವಿರಬೇಕು - ಎಂದುಕೊಂಡವರೂ ಇದ್ದಾರೆ.
ಶ್ರೀಗುರು ನೋಡಿದ ನೋಟ
ಆದರೆ ಮಹಾಯೋಗಿಗಳಾದ ಶ್ರೀರಂಗಮಹಾಗುರುಗಳು ಈ ಶ್ಲೋಕವನ್ನು ಉದ್ಧರಿಸಿದ್ದಾರೆ, ಕಿಂಚಿತ್ತಾಗಿ ವಿವರಿಸಿಯೂ ಇದ್ದಾರೆ. ಇದರ ಭಾವವನ್ನು ವಿಶದೀಕರಿಸಿದ್ದಾರೆ.
ಹಾಗಿದ್ದರೆ ಈ ಶ್ಲೋಕ ಏನೆಂದು ಹೇಳಿದೆ, ಒಮ್ಮೆ ನೋಡಬೇಕಲ್ಲವೇ?: "ನನ್ನ ಈ ಮನಸ್ಸು ನಿರ್ವಿಕಲ್ಪ-ಸಮಾಧಿಯಲ್ಲಾದರೂ ವಿಹರಿಸಲಿ; ಅಥವಾ ಜಿಂಕೆಗಳ ಕಣ್ಣುಗಳನ್ನು ಹೋಲುವ ಹೆಣ್ಣುಗಳ, ಕಲಶಗಳನ್ನು ಹೋಲುವ ಸ್ತನ-ಯುಗಲಗಳ ಮೇಲಾದರೂ ಹರಿದಾಡಲಿ; ಹಾಗೆಯೇ ಜಡ-ಮತದಲ್ಲಾದರೂ ಸಂಚರಿಸಲಿ; ಅಥವಾ ಸಜ್ಜನರ ಮತದಲ್ಲಾದರೂ ವಿಹರಿಸಲಿ - ಮತಿಯಿಂದಾಗುವ ಗುಣ-ದೋಷಗಳು ವಿಭುವಾದ ನನ್ನನ್ನು ಸ್ಪರ್ಶಿಸವು".
ನನ್ನ ಮನಸ್ಸು ನಿರ್ವಿಕಲ್ಪ-ಸಮಾಧಿಸ್ಥಿತಿಯಲ್ಲಿ ವಿಚರಿಸಲಿ, ವಿಹರಿಸಲಿ – ಎಂಬ ಭಾಗವೇನೋ ಸರಿಯಾಗಿಯೇ ಇದೆ. ಆದರೆ ಅದರ ಮುಂದಿನ ಪಾದದಲ್ಲಿ!: ಸಂಕೋಚಬಿಟ್ಟು ಹೇಳುವುದಾದರೆ, ಆಶ್ಚರ್ಯಕ್ಕಿಂತಲೂ ಲಜ್ಜಾಸ್ಪದವಾಗಿಯೇ ಇದೆ!
ಏನೋ ಭರ್ತೃಹರಿಯ ಶೃಂಗಾರ-ಶತಕದ ಶ್ಲೋಕವೊಂದರಲ್ಲಿ ಹೀಗೆ ಹೇಳಿದೆಯೆಂದರೆ ಅಲ್ಲಿ ತುಂಬ ಆಶ್ಚರ್ಯಪಡುವ ವಿಷಯವೇನಿಲ್ಲ. ಏಕೆಂದರೆ ಎಷ್ಟಾದರೂ ಶೃಂಗಾರ-ಕಾವ್ಯವೇ ಅದು. ಇಲ್ಲಿನ ದ್ವಿತೀಯ-ಪಾದದಲ್ಲಿರುವ ಬಗೆಯ ಶ್ಲೋಕಗಳೇ ಅಲ್ಲಿಯ ವಸ್ತು.
ಮೇಲೆ ಹತ್ತಿ ಮತ್ತೆ ಬೀಳುವುದೇ?
ಆದರೆ ಯೋಗಿಯೊಬ್ಬನ ಉತ್ತುಂಗ-ಸಾಧನೆಯನ್ನು ಚಿತ್ರಿಸುತ್ತಿರುವ ಸಂದರ್ಭದಲ್ಲಿ, ಅದೂ ಈಗಷ್ಟೆ ಅದು ಮುಗಿಯುತ್ತಿದ್ದಂತೆ, ಸುಂದರ-ಸ್ತ್ರೀಯರ ಕುಚಕುಂಭದತ್ತ ಮನಸ್ಸು ಹೊರಳುವುದು ಸಾಧ್ಯವೇ?: ಹಾಗಾಗಲೆಂದು ಹಾಗಾಡಲೆಂದು ಇಲ್ಲಿ ಮಾತಾಡಲಾದೀತೇ? – ಎಂಬುದೇ ಪ್ರಶ್ನೆ.
"ಓ ಕಪಾಲಿಯೇ, ಕಪಿಯಂತಹ ಈ ಮನಸ್ಸು ಯುವತಿಯರ ಕುಚ-ಗಿರಿಯ ಮೇಲೆ ಅಲೆಯುತ್ತಿದೆ! ಭಕ್ತಿಯೆಂಬ ಹಗ್ಗದಿಂದ ಅದನ್ನು ಕಟ್ಟಿಹಾಕಯ್ಯಾ!" ಎಂದೆಲ್ಲ ಶಿವಾನಂದ-ಲಹರಿಯಲ್ಲಿ ವ್ಯಥೆಪಟ್ಟು, ಅಂಗಲಾಚಿ ಬೇಡಿ, ಇಲ್ಲಿ ಹೀಗೆ ಮನಸ್ಸನ್ನು ಯಥೇಚ್ಛವಾಗಿ ಹರಿಬಿಡುವುದರಲ್ಲಿ ಔಚಿತ್ಯವಿದೆಯೇ? ಶೃಂಗಾರವೂ ಅಧ್ಯಾತ್ಮವೂ ಪರಸ್ಪರ-ವಿರುದ್ಧ-ದಿಕ್ಕಿನವುಗಳಲ್ಲವೇ? ಅವುಗಳೆರಡನ್ನೂ ಒಂದೇ ಶ್ಲೋಕದ ಒಂದೇ ಅರ್ಧದ ಎರಡು ಅಕ್ಕಪಕ್ಕದ ಪಾದಗಳಲ್ಲೇ ತರಬೇಕೇ?
ಜಡಮತ-ಸಜ್ಜನಮತ
ಅಷ್ಟೇ ಅಲ್ಲ. ಜಡಮತ-ಸಜ್ಜನಮತ – ಎಂಬ ಮತ್ತೆರಡು ವಿಷಯಗಳನ್ನೂ ಉತ್ತರಾರ್ಧದಲ್ಲಿ ತರಲಾಗಿದೆ. ಇವೂ ಹಾಗೆಯೇ: ಪರಸ್ಪರ ವಿರುದ್ಧವಾದವುಗಳು. ಹೇಗೆ? ಜಡ-ಮತವೆಂದರೆ ದೇಹವನ್ನೇ ತಾನೆಂದು ಭಾವಿಸುವುದು. ಸಜ್ಜನ-ಮತವೆಂದರೆ ಜಗನ್ಮೂಲವಾದ ಸದ್-ವಸ್ತುವಿನಲ್ಲಿ ಏಕೀಭೂತರಾಗುವ ಉತ್ಕಟೇಚ್ಛೆ-ತಪಃಪ್ರವೃತ್ತಿಗಳನ್ನು ಹೊಂದಿರುವುದು.
ಅದಾದರೂ ಸರಿ, ಇದಾದರೂ ಸರಿ – ಎಂದು ಹೇಳುವುದು ಎಷ್ಟು ಸರಿ? – ಎಂಬ ಪ್ರಶ್ನೆ. ಜಡ-ಮತವೆಂದರೆ ನಾಸ್ತಿಕ್ಯಕ್ಕೆ ಸಮಾನವಾದದ್ದೇ. ಸಜ್ಜನ-ಮತವೆಂದರೆ ಇದಕ್ಕೆ ಪ್ರತಿಯಾಗಿ, "ಅಸ್ತಿ ಬ್ರಹ್ಮೇತಿ ಚೇದ್ ವೇದ ಸನ್ತಮೇನಂ ತತೋ ವಿದುಃ" – ಎಂಬಂತಲ್ಲವೇ? ಸತ್ – ಎಂದರೆ ಸದ್ಭಾವ-ಸಾಧುಭಾವಗಳು -ಎಂದು ಗೀತೆಯ ಉಕ್ತಿಯಿಲ್ಲವೇ? - ಎಂದೆಲ್ಲ ಪ್ರಶ್ನೆಗಳು ಬರತಕ್ಕವೇ.
ಶ್ಲೋಕದ ಕೊನೆಯ ಪಾದದಲ್ಲಿ ಇಷ್ಟಕ್ಕೂ ಉತ್ತರವಿದೆ. ಸಮಾಧಿ-ಸ್ಥಿತನಾಗಿ, ವಿಭುವಾದ ಸದ್ವಸ್ತುವಿನೊಂದಿಗೆ ಏಕೀಭಾವವನ್ನು ಒಮ್ಮೆ ವಾಸ್ತವವಾಗಿ ಹೊಂದಿರುವವನಿಗೆ, ಈ ಪ್ರವೃತ್ತಿಯೂ ಉಂಟಾಗದು, ಅಕಸ್ಮಾತ್ ಉಂಟಾದರೂ ದೋಷವಾಗದು. (ಪಾಪ-ಲೇಪವಿಲ್ಲದ ಈ ಸ್ಥಿತಿಯು ಹೇಗೆಂದು ಗೀತೆಯ ೫.೧೦, ೧೮.೧೭ಗಳಲ್ಲಿ ವಿವರಿಸಿದೆ).
ಹೀಗೆ ನಿರ್ಲಿಪ್ತಾವಸ್ಥೆಯ ತುಂಗಸ್ಥಿತಿಯನ್ನೇ ಇಲ್ಲಿ ಹೇಳಲಾಗಿದೆ.
ವಿಚರತು ಮತಿರ್ ಏಷಾ ನಿರ್ವಿಕಲ್ಪೇ ಸಮಾಧೌ
ಕುಚ-ಕಲಶ-ಯುಗೇ ವಾ ಕೃಷ್ಣಸಾರೇಕ್ಷಣಾನಾಮ್ |
ಚರತು ಜಡಮತೇ ವಾ ಸಜ್ಜನಾನಾಂ ಮತೇ ವಾ
ಮತಿ-ಕೃತ-ಗುಣ-ದೋಷಾ ಮಾಂ ವಿಭುಂ ನ ಸ್ಪೃಶಂತಿ ||೨೯||
ಸೂಚನೆ : 13/11/2021 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.