ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್
(ಪ್ರತಿಕ್ರಿಯಿಸಿರಿ lekhana@ayvm.in)
ಒಂದು ವಾಕ್ಯದಲ್ಲಿ ಕರ್ತೃಪದ, ಕರ್ಮಪದ, ಕ್ರಿಯಾಪದ, ವಿಶೇಷ್ಯಪದ, ವಿಶೇಷಣಪದ ಹೀಗೆ ಎಷ್ಟೆಲ್ಲಾ ಬಗೆಯ ಪದಗಳು ಇರುತ್ತವೆ. ವಿಶೇಷಣವೆಂದರೆನು? ಎಂಬುದನ್ನು ವಿವರಿಸುವ ಸಂದರ್ಭದಲ್ಲಿ, ಅಧ್ಯಾಪಕರು ಬಳಸುವ ಅತ್ಯಂತ ಪ್ರಸಿದ್ಧವಾದ ಉದಾಹರಣೆಯೆಂದರೆ 'ಸುಂದರನಾದ ರಾಮ' ಎಂಬುದು. ಅಂದರೆ, 'ಸುಂದರ' ಎಂಬ ವಿಶೇಷಣಪದದಿಂದ ಶ್ರೀರಾಮನನ್ನು ಗುರುತಿಸುತ್ತೇವೆ. ವಿಶೇಷಣಪದದ ಅರ್ಥವೇ ಅದಲ್ಲವೇ! ಮುಖ್ಯವಾದದ್ದನ್ನು ಸಾಮಾನ್ಯಪದಾರ್ಥಗಳಿಂದ ಬೇರ್ಪಡಿಸುವಿಕೆ. ಆದ್ದರಿಂದ 'ಸುಂದರ' ಎಂಬ ಗುಣವಾಚಕವು ಶ್ರೀರಾಮನಲ್ಲಿರುವ ಅಸಾಧಾರಣ ಸ್ವಭಾವವನ್ನು ಪ್ರತೀಕಿಸುತ್ತದೆ. ರಾಮನಷ್ಟು ಸೌಂದರ್ಯ ಬೇರೆಲ್ಲಿ ಇರಲು ಸಾಧ್ಯ! ಎಂಬುದು ಗೂಢಾರ್ಥ. ಹಾಗಾದರೆ ಅಂತಹ ಅನಿತರಸಾಧಾರಣವಾದ ಗುಣ ಯಾವುದು? ಸೌಂದರ್ಯವು ಒಂದು ಗುಣವೇ? ಅದು ಯಾವ ಬಗೆಯದ್ದು? ಎಂದು ತಿಳಿಯಬೇಕಲ್ಲವೇ?
ಸೌಂದರ್ಯವೆಂಬುದು ಬಿಳಿ, ಕಪ್ಪು, ಒಳ್ಳೆಯವನು, ಕೆಟ್ಟವನು ಈ ಪ್ರಕಾರವಾದ ಆತ್ಮನಿಷ್ಠವಾದ ಆಥವಾ ಪದಾರ್ಥನಿಷ್ಠವಾದ ಗುಣವಲ್ಲ. ಎಲ್ಲವೂ ಸಮವಾಗಿ ಇದ್ದಾಗ ಕಾಣುವ ಪರಿ. ಅಂದರೆ ಯಾವುದು ಯಾವ ಪ್ರಮಾಣದಲ್ಲಿ ಇರಬೇಕೋ, ಅದಕ್ಕೆ ತಕ್ಕಂತೆ ಇದ್ದರೆ ಅದನ್ನು 'ಸುಂದರ' ಎನ್ನಬಹುದು. ಕಪಿಯೂ ತನ್ನ ಸ್ವಭಾವಕ್ಕೆ ಅನುಗುಣವಾಗಿ ಚೇಷ್ಟೆಯನ್ನು ಮಾಡಿದರೆ ಅದೂ ಸುಂದರವೇ. ಈ ಕಾರಣದಿಂದಲೇ ಶ್ರೀಮದ್ರಾಮಾಯಣದಲ್ಲಿ ಮಹಾಕಪಿ ಹನುಮಂತನನ್ನು 'ಸುಂದರ' ಎಂದು ಹೇಳಿ 'ಸುಂದರಕಾಂಡ' ಎಂದು ಅವನ ನಾಮಧೇಯವನ್ನೇ ಒಂದು ಕಾಂಡಕ್ಕೆ ಇಡಲಾಗಿದೆ. ಹಾಗಾದರೆ ಶ್ರೀರಾಮನಲ್ಲಿದ್ದ ಆ ಸೌಂದರ್ಯ ಎಂತಹದು? ಶ್ರೀರಾಮನು ಹೇಗಿದ್ದ? ಎಂಬುದಕ್ಕೆ ವಾಲ್ಮೀಕಿಗಳು ಹೇಳುವ ಮಾತು 'ಸಮಃ ಸಮವಿಭಕ್ತಾಂಗಃ' ಎಂದು. ಶ್ರೀರಾಮನ ಎಲ್ಲಾ ಅಂಗಗಳೂ ಸಮವಾಗಿದ್ದವು. ಅಂದರೆ ಎಲ್ಲವೂ ಒಂದೇ ಪ್ರಮಾಣದಲ್ಲಿದ್ದವು ಎಂಬರ್ಥವಲ್ಲ. ಯಾವ ಯಾವ ಅಂಗಗಳು ಎಷ್ಟೆಷ್ಟು ಇರಬೇಕೋ, ಅವೆಲ್ಲವೂ ಅಷ್ಟಷ್ಟು ಪ್ರಮಾಣದಲ್ಲಿದ್ದವು ಎಂದರ್ಥ. ಸಾಮುದ್ರಿಕಶಾಸ್ತ್ರವೂ ಯಾವ ಅಂಗ ಹೇಗಿರಬೇಕು? ಹೇಗಿದ್ದರೆ ಅದು ಯಾರ ಲಕ್ಷಣ? ಎಂಬುದನ್ನು ದೀರ್ಘವಾಗಿ ವಿವರಿಸುತ್ತದೆ. ಅಂತೆಯೇ ವಾಲ್ಮೀಕಿಗಳು ಕೂಡ ಶ್ರೀರಾಮನ ಅಂಗಾಂಗಗಳ ಪ್ರಮಾಣಬದ್ಧ ಮಾಹಿತಿಯನ್ನು ನೀಡುತ್ತಾರೆ. ಸುಂದರಕಾಂಡದಲ್ಲಿ ಹನುಮಂತನು ಸೀತೆಗೆ ಶ್ರೀರಾಮನ ಅಂಗಾಂಗಗಳ ಬಗೆಗಿನ ನಖಶಿಖಾಂತ ಮಾಹಿತಿಯನ್ನು ನೀಡುತ್ತಾನೆ. ಇದರಿಂದ ಸೀತೆಗೆ ಹನುಮಂತನ ಮೇಲೆ ವಿಶ್ವಸನೀಯಭಾವ ಬರಲು ಇದು ಕಾರಣವಾಗುತ್ತದೆ.
ವಾಲ್ಮೀಕಿಗಳು ನೀಡಿದ ಸಮತ್ವದ ವಿವರಣೆ ಇಂತಿದೆ- ವಿಶಾಲವಾದ ವಕ್ಷಸ್ಥಲ, ಉಬ್ಬಿದ ಮಣಿಕಟ್ಟು, ಕಲಶದಂತೆ ಉದ್ದವಾದ ಕತ್ತು, ವಿಶಾಲವಾದ ಕೆನ್ನೆ, ಮಂಡಿಯನ್ನು ಸ್ಪರ್ಶಿಸುವ ನೀಳವಾದ ಬಾಹು, ಉತ್ತಮವಾದ ಶಿರಸ್ಸು. ವಿಶಾಲವಾದ ಹಣೆ, ಹೀಗೆ ಸಾಮುದ್ರಿಕಶಾಸ್ತ್ರದಲ್ಲಿ ಯಾವ ಪ್ರಕಾರ ಒಬ್ಬ ಮಹಾಪುರುಷನ ಲಕ್ಶ್ಜಣವನ್ನು ಹೇಳಿದೆಯೋ ಆ ಎಲ್ಲ ಲಕ್ಷಣಗಳನ್ನೂ ಹೊಂದಿರುವುದರಿಂದ ಶ್ರೀರಾಮನು ಸುಂದರನಾಗಿದ್ದ. ಅವು ಶ್ರೀರಾಮನ ಸೌಂದರ್ಯವನ್ನು ಬಿತ್ತರಿಸುವಂತಿದ್ದವು. ಪ್ರಕೃತಿಯಲ್ಲಿ ಪ್ರತಿಯೊಂದೂ ಅದರದರ ಪ್ರಮಾಣದಂತೆ ಇದ್ದರೆ ಎಲ್ಲವೂ ಸುಂದರವೇ. ಇದು ಶ್ರೀರಾಮನ ಬಾಹ್ಯ ಸೌಂದರ್ಯ. ಅಂತರಂಗದ ಸೌಂದರ್ಯದಿಂದ ಮಾತ್ರವೇ ಬಾಹ್ಯಸೌಂದರ್ಯಕ್ಕೆ ಬೆಲೆ ಬರುವುದು. ಅವನ ಅಂತರಂಗದ ತೇಜಸ್ಸು ಬಾಹ್ಯಸೌಂದರ್ಯಕ್ಕೆ ಇನ್ನಷ್ಟು ಮೆರಗು ಕೊಡುವಂತಿತ್ತು. ಒಟ್ಟಾರೆ ಶ್ರೀರಾಮನು ಒಳಗೂ ಹೊರಗೂ ಆಕರ್ಷಿಸುವ ಸುಂದರಮೂರ್ತಿಯಾಗಿದ್ದ.
ಸೂಚನೆ : 11/11/2021 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯ "ಶ್ರೀರಾಮನ ಗುಣಗಳು" ಅಂಕಣದಲ್ಲಿ ಪ್ರಕಟವಾಗಿದೆ.