Saturday, November 20, 2021

ಯೋಗತಾರಾವಳಿ - 29 ಸಿಂಹಾವಲೋಕನ (Yogataravali - 29 Simhavalokana)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)




ಯೋಗತಾರಾವಳಿಯ ೨೯ ಶ್ಲೋಕಗಳನ್ನೂ ಬಿಡಿಬಿಡಿಯಾಗಿ ನೋಡಿದ್ದಾಯಿತು. ಒಮ್ಮೆ ಒಟ್ಟಾರೆ ನೋಟವನ್ನು ಮಾಡಿದರೆ ಸಂತೃಪ್ತಿಯಾದೀತು. ಭಗವತ್ಪಾದರು ಇಲ್ಲಿ ಏನನ್ನು ಹೇಳಹೊರಟಿದ್ದಾರೆಂಬುದರ ಗ್ರಹಿಕೆಯಾದೀತು.

ಗುರುಪಾದ


ಯೋಗತಾರಾವಳಿಯ ಆರಂಭವೇ ಗುರುಪಾದ-ವಂದನೆಯೊಂದಿಗೆ. ಸಂಸಾರವೆಂಬ ಹಾಲಾಹಲವೊಡ್ಡುವ ಮೋಹಕ್ಕೆ ಬಲಿಯಾಗದವರಾರು? ಅದರ ಶಮನಕ್ಕಾಗಿ ವಿಷವೈದ್ಯರಂತಿರುವುವೇ ಶ್ರೀಗುರುಚರಣಗಳು. ಅವೇ ಆತ್ಮಸುಖದ ಸಂದರ್ಶನ ಮಾಡಿಸತಕ್ಕವು.

ನಾದಾನುಸಂಧಾನ


ಯೋಗಗಳಲ್ಲಿ ಉತ್ಕೃಷ್ಟವಾದುದು ಲಯಯೋಗ. ಅದಕ್ಕೆ ಸಾಧನಗಳು ಲಕ್ಷಾಧಿಕ. ನಾದಾನುಸಂಧಾನವು ಅವಲ್ಲಿ ಮಾನ್ಯತಮ. ಕುಂಭಕಪ್ರಾಣಾಯಾಮದಿಂದ ನಾಡೀಶೋಧನವಾದಾಗಲೇ ನಾದಶ್ರವಣವಾಗುವುದು. ನಾದಾನುಸಂಧಾನದಿಂದ ಮನಸ್ಸೂ ಪ್ರಾಣವೂ ವಿಷ್ಣುಪದದಲ್ಲಿ ಲೀನವಾಗುವುವು.

ಬಂಧತ್ರಯ

ಜಾಲಂಧರ-ಉಡ್ಯಾಣ-ಮೂಲ ಎಂಬ ಮೂರು ಬಂಧಗಳು ಬಲವಾದಲ್ಲಿ ಯಮಪಾಶಬಂಧನದ ಭಯವೆಲ್ಲಿ? ಈ ಬಂಧಗಳಿಂದ ಕುಂಡಲಿನಿಯ ಪ್ರಬೋಧವಾಗುವುದು. ಪ್ರಾಣವು ಒಳಮುಖವಾಗಿ ಸುಷುಮ್ನೆಯನ್ನು ಪ್ರವೇಶಿಸುವುದು. ಉಸಿರಾಟವು ಸೂಕ್ಷ್ಮವಾಗುವುದು. ಮೂಲಾಧಾರಾಗ್ನಿಯು ಜ್ವಲಿಸುವುದು. ಇದಕ್ಕೆ ಅಪಾನದ ಆಕುಂಚನವು ಪುಷ್ಟಿಕೊಡುವುದು. ನಾಲಿಗೆಯ ಬುಡದಿಂದ ಆಪ್ಯಾಯಕದ್ರವವು ಜಿನುಗುವುದು. ಅದರ ಪಾನ ಮಾಡಿದವನು ಧನ್ಯ.

ಕೇವಲಕುಂಭಕ


ಬಂಧತ್ರಯದಲ್ಲಿ ಪಳಗಿದಲ್ಲಿ ಕೇವಲಕುಂಭವೆಂಬ ವಿದ್ಯೆಯ ಉದಯವಾಗುವುದು. ರೇಚಕ-ಪೂರಕಗಳನ್ನು ಕ್ಷೀಣಗೊಳಿಸಿ ಇಂದ್ರಿಯವಿಷಯಗಳ ಪ್ರವಾಹವನ್ನಿದು ನಿಲ್ಲಿಸುವುದು. ಅನಾಹತದತ್ತ ದತ್ತಚಿತ್ತರಾದವರ ಮನಃಪ್ರಾಣಗಳ ಸ್ತಂಭನವನ್ನು ಕೇವಲಕುಂಭಕವು ಸಾಧಿಸಿಕೊಡುವುದು. 


ಈ ಉತ್ತಮಕುಂಭಕವುಂಟಾದಾಗ ಪ್ರಾಕೃತ/ವೈಕೃತ-ಪ್ರಕಾರಗಳು ಉಸಿರಿಗಿರವು; ಸ್ತಿಮಿತಗೊಂಡ ಮನಸ್ಸು ತ್ರಿಕೂಟವೆನಿಸುವ ಭ್ರೂಮಧ್ಯಸ್ಥಾನದಲ್ಲಿ ಸ್ತಂಭಿತವಾಗುವುದು; ಇಡಾ-ಪಿಂಗಳಾನಾಡಿಗಳನ್ನು ತೊರೆದು ಪ್ರಾಣವಾಯುವು ಶೀಘ್ರವಾಗಿ ಲಯಹೊಂದುವುದು.

ಕೇವಲಕುಂಭಕದಿಂದಲೇ ಪ್ರಾಣದ ಪ್ರತ್ಯಾಹಾರದ ಸಾಧನೆಯಾಗಿ, ಕುಂಡಲಿನಿಗೆ ಪ್ರಾಣವು ಗ್ರಾಸವಾಗಿ, ಸುಷುಮ್ನಾಮಾರ್ಗದಲ್ಲಿ ಹಾದು ವಿಷ್ಣುಪದಸ್ಥಾನದಲ್ಲಿ ಪ್ರಾಣವು ವಿಲಯವಾಗುವುದು.

ಹತೋಟಿಯಿದ್ದಿಲ್ಲದ ಶ್ವಾಸಕ್ಕೆ ಈ ಕೇವಲಕುಂಭಕದಿಂದಲೇ ನಿರೋಧವು ದೊರಕುವುದು; ಇಂದ್ರಿಯಗಳು ವೃತ್ತಿಶೂನ್ಯವಾಗಲು ಪ್ರಾಣಲಯವಾಗುವುದು.

ರಾಜಯೋಗ


ಮುಂದಿನ ಘಟ್ಟವಾದ ರಾಜಯೋಗವು ಪ್ರವರ್ಧಮಾನಕ್ಕೆ ಬಂದರೆ, ದೃಷ್ಟಿಗೆ ಲಕ್ಷ್ಯವೆಂಬ ನಿರ್ಬಂಧವಿಲ್ಲ; ಚಿತ್ತಕ್ಕೂ ಬಂಧವಿಲ್ಲ; ದೇಶ-ಕಾಲಗಳ ಲೆಕ್ಕಾಚಾರವಿಲ್ಲ; ಪ್ರಾಣರೋಧವೂ ಅವಶ್ಯವಿಲ್ಲ; ಧಾರಣಾ-ಧ್ಯಾನಗಳಿಗೂ ಶ್ರಮವಿಲ್ಲ.

ರಾಜಯೋಗದಲ್ಲಿ ನೆಲೆಕಾಣುತ್ತಿರಲು, ದೃಶ್ಯಗಳು ಕಳೆದು ಇಂದ್ರಿಯಗಳು ಸ್ತಬ್ಧವಾಗುವುವು: ಆಗಿನ ಸ್ಥಿತಿ ಜಾಗರ-ನಿದ್ರೆಗಳಲ್ಲ, ಬದುಕಿರುವ/ಸತ್ತಿರುವ ಲಕ್ಷಣಗಳೂ ಅಲ್ಲಿಲ್ಲ. ಇದು ಅತ್ಯಂತವಿಶಿಷ್ಟ.

ಅಹಂ-ಮಮಗಳನ್ನು ಮೀರಿ ರಾಜಯೋಗದಲ್ಲಿ ಸ್ಥಿರವಾದಾಗ ನೋಡುವವ-ನೋಡಲಾಗುವ ಎಂಬ ವಸ್ತುಗಳೆರಡೂ ಇಲ್ಲವಾಗಿ, ಕೇವಲಜ್ಞಾನವೆಂಬುದಷ್ಟೇ ಉಳಿಯುವುದು.

ಮನೋನ್ಮನೀ


ರೆಪ್ಪೆಗಳ ಬಡಿತ, ರೇಚಕ-ಪೂರಕಗಳು, ಸಂಕಲ್ಪ-ವಿಕಲ್ಪಗಳು -ಇವಾವುವೂ ಇಲ್ಲದ ಮನೋನ್ಮನಿಯು ಆಗ ಉಂಟಾಗುವುದು.
ಉಸಿರಾಟವು ಶಾಂತವಾಗಿ ಇಂದ್ರಿಯ ಮನಸ್ಸುಗಳ ನಿಗ್ರಹವಾದಾಗ ಮನೋನ್ಮನಿಯಲ್ಲಿ ಮುಳುಗಿದ ಯೋಗಿಗಳ ಅಂಗಗಳು ನಿಶ್ಚಲವಾಗಿರುತ್ತವೆ: ಗಾಳಿಯಾಡದೆಡೆಯ ದೀಪದಂತೆ.

ಉನ್ಮನ್ಯವಸ್ಥೆಯು ದೊರೆಯಲು ಬೇಕಾದುದು: ಪ್ರಪಂಚದ ಬಗ್ಗೆ ಉದಾಸೀನತೆ,  ಎಚ್ಚರದಿಂದ ಸಂಕಲ್ಪವನ್ನು ಕಿತ್ತುಹಾಕುವುದು. ಸಂಕಲ್ಪಗಳ ಪರಂಪರೆ ನಿಂತಿತೆಂದರೆ, ಆಲಂಬನವಿಲ್ಲವಾಗಿ ಚಿತ್ತವು ಶಮನಗೊಳ್ಳುವುದು.

ಅಮನಸ್ಕ


ಉಸಿರಾಟವೂ ತೋರದಂತಾಗಿ ಶರೀರವು ನಿಶ್ಚಲಗೊಂಡು ಕಣ್ಣುಗಳು ಅರ್ಧಮುಚ್ಚಿರಲು ಅಮನಸ್ಕ-ಮುದ್ರೆಯು ತೋರಿಬರುವುದು. ಅಹಂಕಾರ-ಮಮಕಾರಗಳು ತಾವೇ ಕಳಚಿ, ಪ್ರಾಣ-ಮನಸ್ಸುಗಳನ್ನು ಮೀರುವುದಾಗುವುದು, ಸಹಜಾಮನಸ್ಕವು ಬಂದಾಗ. ಇಂದ್ರಿಯಗಳು ಹಿಂದಿರುಗಿರಲು, ಪರಮಾತ್ಮಯೋಗದ ಹೆಜ್ಜೆಗಳು ಆರಂಭವಾಗುವುವು.

ಯೋಗನಿದ್ರೆ


ಒಳಮುಖವಾದ ವಿಮರ್ಶೆಯಿಂದಾಗಿ ಪೂರ್ವವಾಸನೆಗಳನ್ನು ಹತ್ತಿಕ್ಕಿದಾಗ ಜಾಡ್ಯವಿಲ್ಲದೊಂದು ನಿದ್ರೆಯೇರ್ಪಡುವುದು; ಪ್ರಪಂಚದ ಗೊಡವೆಯನ್ನೇ ಅದು ತೊರೆದಿರುವುದು. ಸಂಕಲ್ಪ-ವಿಕಲ್ಪಗಳನ್ನೂ ಕರ್ಮಜಾಲವನ್ನೂ ಮೀರುವ ಅಭ್ಯಾಸವಾಗುತ್ತಿದ್ದಂತೆ  ಯೋಗನಿದ್ರೆಯುಂಟಾಗುವುದು.

ಜಾಗ್ರತ್-ಸ್ವಪ್ನ-ಸುಷುಪ್ತಿಗಳೆಂಬ ಮೂರು ಅವಸ್ಥೆಗಳನ್ನು ಮೀರಿದ ತುರೀಯ ಎಂಬುದೇ ಹಾಸಿಗೆ; ಅಲ್ಲಿ ಒದಗುವ ನಿರ್ವಿಕಲ್ಪ-ನಿದ್ರೆಯು ಎಷ್ಟು ಕಮನೀಯವಾದುದು! ಈ ಅವಸ್ಥೆಯಲ್ಲೇ ಪರಮಾತ್ಮನ ಸ್ಫುರಣವಾಗುವುದು: ಆ ಸೂರ್ಯನಿಂದಾಗಿ ಅವಿದ್ಯೆಯೆಂಬ ಕತ್ತಲೆಯು ಮಾಯವಾಗುವುದು; ದೃಷ್ಟಿಯು ನಿರ್ಮಲವಾಗಿದ್ದರೂ ಜಗತ್ತೇ ತೋರದು!

ಸಮಾಧಿಸ್ಥಿತಿಯಲ್ಲಿ ದೊರಕುವ ಈ ಬಗೆಯ ಮನೋಲಯವನ್ನು ಶ್ರೀಶೈಲಪರ್ವತಗುಹೆಗಳಲ್ಲಿ ಹೊಂದುವ ಬಯಕೆ ಎನಗೆ! ನಾನು ತಪಸ್ಸಿನಲ್ಲಿ ಮುಳುಗಿರಲು ಬಳ್ಳಿಗಳು ನನ್ನ ಮೈಮೇಲೆ ಹಬ್ಬಿಕೊಂಡಾವು, ಪಕ್ಷಿಗಳು ನನ್ನ ಕಿವಿಯಲ್ಲಿ ಗೂಡುಕಟ್ಟಿಯಾವು!

ಇಷ್ಟಾದ ಮೇಲಿನ್ನು ಚಿಂತೆಯಿಲ್ಲ. ನನ್ನ ಮನಸ್ಸು ನಿರ್ವಿಕಲ್ಪಸಮಾಧಿಯಲ್ಲಾದರೂ ಸುಂದರಿಯರ ಕುಚಗಳ ಮೇಲಾದರೂ ಹರಿಯಲಿ!; ಜಡರ ಮತವೋ ಸಜ್ಜನರ ಮತವೋ - ಅತ್ತಿತ್ತ ವಾಲಿದರೂ ಮತಿಯಿಂದಾದ ಗುಣದೋಷಗಳು ವಿಭುವಾದ ನನ್ನನ್ನು ಬಾಧಿಸವು!

ಹೀಗೆ ಮನಃಪ್ರಾಣಗಳ ಗುಟ್ಟನ್ನರಿತು, ಅವನ್ನು ಮೀರುವ  ಈ ಅದ್ಭುತಯೋಗವಿದ್ಯಾಸಾಧನೆಗೆ ಸಮನಾದ ಧನ್ಯತೆಯಿನ್ನೊಂದುಂಟೆ? 


ಅದಕ್ಕೆ ಮಾರ್ಗವೇ: ವಂದೇ ಗುರೂಣಾಂ ಚರಣಾರವಿಂದೇ!

ಸೂಚನೆ : 20/11/2021 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ