Sunday, November 28, 2021

ಶ್ರೀರಾಮನ ಗುಣಗಳು - 33 ಸ್ಮೃತಿಮಾನ್ - ಶ್ರೀರಾಮ (Sriramana Gunagalu - 33 Smrutimaan - Shreeraama)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ 

(ಪ್ರತಿಕ್ರಿಯಿಸಿರಿ lekhana@ayvm.in)



ಸ್ಮೃತಿ ಉಳ್ಳವನು ಶ್ರೀರಾಮ. ಸ್ಮೃತಿ ಎಂಬ ಗುಣವು ಎಲ್ಲಾ ಪ್ರಾಣಿಗಳಲ್ಲು ಇರುವ ಒಂದು ಸಾಮಾನ್ಯವಾದ ಗುಣವಾಗಿದೆ. ಅದು ಮಾನವನಲ್ಲಿ ಅತಿಶಯವಾಗಿ ಇರುತ್ತದೆ. ಅದು ಶ್ರೀರಾಮನಲ್ಲಂತೂ ಇನ್ನೂ ವಿಶೇಷವಾಗಿ ಗೋಚರಿಸುತ್ತದೆ. ಹಾಗಾದರೆ ಅಂತಹ ವಿಶೇಷ ಗುಣವಾಗಿ ಶ್ರೀರಾಮನಲ್ಲಿ ಹೇಗೆ ಬಿಂಬಿತವಾಗಿದೆ ಎಂಬುದನ್ನು ನೋಡೋಣ.

ಸ್ಮೃತಿ ಎಂಬ ಗುಣವು ಅನುಭವದಿಂದ ಹುಟ್ಟುತ್ತದೆ. ಅನುಭೂತವಾದ ವಿಷಯವು ಸ್ವಲ್ಪವೂ ಮಾಸದೇ ಇರುವುದನ್ನು 'ಸ್ಮೃತಿ' ಎಂದು ಯೋಗಶಾಸ್ತ್ರವು ಹೇಳಿದೆ. ಸಂಸ್ಕಾರದಿಂದ ಹುಟ್ಟಿದ್ದು ಸ್ಮೃತಿ ಎಂದೂ ಹೇಳಲಾಗಿದೆ. ಅಂದರೆ ಸ್ಮೃತಿಯು ಪರಿಶುದ್ಧವಾಗಿ ಇರಬೇಕಾದರೆ ಅದರ ಹಿಂದಿನ ಅನುಭವವೂ ಅಷ್ಟೇ ಪರಿಪೂರ್ಣವಾಗಿ ಇದ್ದಾಗ ಮಾತ್ರ ಸಾಧ್ಯ. ಅನುಭವಕ್ಕೆ ಬೇಕಾದ ಅನುಕೂಲ ಸಾಮಗ್ರಿಗಳಾದ ವಿಷಯ, ಇಂದ್ರಿಯ, ಮನಸ್ಸು ಮತ್ತು ಆತ್ಮ ಇವು ಏಕಾಗ್ರವಾಗಿ ಇದ್ದಾಗ ಪರಿಪೂರ್ಣವಾಗುವುದು. ಕೆಲವೊಮ್ಮೆ ನಮ್ಮ ಎದುರಿಗೆ ವಿಷಯವಿದ್ದರೂ, ನಮ್ಮ ಮನಸ್ಸು ಅಲ್ಲಿ ಇಲ್ಲವಾದರೆ ವಿಷಯದ ಅರಿವು ಬರುವುದಿಲ್ಲ. ಉದಾಹರಣೆಗೆ ಸೂಜಿಯ ರಂಧ್ರದಲ್ಲಿ ನೂಲನ್ನು ಪೋಣಿಸುವಾಗ ನೂಲಿನ ಅಗ್ರಭಾಗವು ಸೇರಿಕೊಂಡಾಗ ಮಾತ್ರ ಸಾಧ್ಯ. ಹಾಗಾಗಲು ನೂಲನ್ನು ನೊಣೆದು ಆ ರಂಧ್ರದಲ್ಲಿ ಸರಾಗವಾಗಿ ನುಸುಳುವಂತೆ ಮಾಡುತ್ತೇವೆ. ಆಗ ನೂಲು ಸುಲಭವಾಗಿ ಸೂಜಿಯ ರಂಧ್ರದಲ್ಲಿ ಸೇರುಕೊಳ್ಳುತ್ತದೆ. ಅದರಿಂದ ನಮ್ಮ ಬಟ್ಟೆಯನ್ನು ಹೊಲಿಯುವ ಕಾರ್ಯ ಸರಳವಾಗುವುದು. ಅಂತೆಯೇ ವಿಷಯದ ಅರಿವಿಗೆ ಬೇಕಾದ ಸಾಮಗ್ರಿಗಳೆಲ್ಲವನ್ನು ಪಳಗಿಸಿ ಹರಿತವನ್ನಾಗಿ ಮಾಡಿದಾಗ ಸ್ಫುಟವಾದ ತಿಳಿವಳಿಕೆ ಬರುತ್ತದೆ. ಇಂತಹ ತಿಳಿಯಾದ ತಿಳಿವಕೆಯಿಂದ ಮಾತ್ರ ತಿಳಿಯಾದ ಸ್ಮೃತಿ ಸಾಧ್ಯ. ಅನುಭವಕ್ಕೂ ಸ್ಮೃತಿಗೂ ಮಧ್ಯದಲ್ಲಿ ಸಂಸ್ಕಾರವೆಂಬುದು ಮುಖ್ಯವಾಹಿನಿಯಾಗಿ ಕಾರ್ಯ ಮಾಡುತ್ತದೆ. ಸ್ಮೃತಿಯು ಬರುವ ತನಕವೂ ಸಂಸ್ಕಾರವನ್ನು ಕೆಡದಂತೆ ಇಟ್ಟುಕೊಳ್ಳಬೇಕಾದ ಜವಾಬ್ದಾರಿಯೂ ಇರುತ್ತದೆ. ಹೀಗೆ ಅನುಭವ ಮತ್ತು ಸಂಸ್ಕಾರಗಳ ಬಲದ ಮೇಲೆ ಜನ್ಮಜನ್ಮಾಂತರದ ಅನುಭವಗಳೂ ಸ್ಮೃತಿಪಟಲದಲ್ಲಿ ಗೋಚರಿಸುತ್ತವೆ ಎಂಬುದಾಗಿ ಯೋಗಶಾಸ್ತ್ರವು ಸ್ಪಷ್ಟವಾಗಿ ನಿರೂಪಿಸುತ್ತದೆ.

ಸ್ಮರಣೆಯು ಯಾವ ಇಂದ್ರಿಯದ ಮೂಲಕ ಅರಿವನ್ನು ಪಡೆದಿರುತ್ತೇವೋ, ಅದಕ್ಕನುಗುಣವಾಗಿ ಬರುತ್ತದೆ. ನೋಡಿದ್ದರಿಂದ, ಕೇಳಿದ್ದರಿಂದ ಆಘ್ರಾಣಿಸಿದ್ದರಿಂದ, ಹೀಗೆ ಬರುವ ಸ್ಮೃತಿಯನ್ನು ಪ್ರಬೋಧಗೊಳಿಸುವ ಯಾವುದಾದರೂ ಸಂಗತಿಯು ಎದುರಾದಾಗ ಬರುವ ಅರಿವೇ ಸ್ಮೃತಿಯಾಗುತ್ತದೆ.

ಶ್ರೀರಾಮನು ಇಂತಹ ಅಸಾಧಾರಣವಾದ ಸ್ಮೃತಿಶಕ್ತಿಸಂಪನ್ನನಾಗಿದ್ದ ಎಂಬುದಕ್ಕೆ ಶ್ರೀರಾಮಾಯಣದಲ್ಲಿ ಸಂದರ್ಭ ಸಿಗುತ್ತದೆ. ಮಹರ್ಷಿ ವಿಶ್ವಾಮಿತ್ರರು ತಮ್ಮ ಯಜ್ಞರಕ್ಷಣೆಯ ನೆಪದಿಂದ ಶ್ರೀರಾಮಲಕ್ಷ್ಮಣರನ್ನು ತಮ್ಮ ಆಶ್ರಮಕ್ಕೆ ಕರೆದೊಯ್ಯುತ್ತಾರೆ. ಅಲ್ಲಿ ಅನೇಕ ಅಸ್ತ್ರ-ಶಸ್ತ್ರ-ಶಾಸ್ತ್ರ-ಇತಿಹಾಸಗಳನ್ನು ಬೋಧಿಸುತ್ತಾರೆ. ವಿಶೇಷವಾಗಿ ಬಲ ಮತ್ತು ಅತಿಬಲ ಎಂಬ ಎರಡು ಮಹದಸ್ತ್ರಗಳ ಉಪದೇಶವನ್ನೂ ಕೂಡ ಮಾಡುತ್ತಾರೆ. ಇವುಗಳನ್ನು ಶ್ರೀರಾಮರು ಮುಂದಿನ ಯುದ್ಧಗಳ ಸಂದರ್ಭಗಳಲ್ಲಿ ಬಳಸುತ್ತಾರೆ. ಈ ವಿಶೇಷವಾದ ಅಸ್ತ್ರಗಳನ್ನು ನೆನಪಲ್ಲಿ ಇಟ್ಟುಕೊಟ್ಟುವುದಕ್ಕೆ ಅಂತಹ ಸ್ಮೃತಿಶಕ್ತಿಯು ಬೇಕಾಗುತ್ತದೆ. ಶ್ರೀರಾಮನಂತ ಮಹಾಮಹಿಮರು ಮಾತ್ರವೇ ಇಂತಹ ಅಸ್ತ್ರಗಳನ್ನು ಧಾರಣೆ ಮಾಡಬಲ್ಲರು. ಅದಕ್ಕೆ ಕಾರಣವಿಷ್ಟೆ ಅವರ ಜೀವನಕ್ರಮ, ಸತ್ಯ, ಪ್ರಾಮಾಣಿಕತೆ ಮೊದಲಾದ ಗುಣಗಳನ್ನು ಆತ್ಮಸಾತ್ ಮಾಡಿಕೊಂಡಿರುವುದು. ಅಷ್ಟೇ ಅಲ್ಲ, ವೇದವೇದಾಂಗಗಳ ಮರ್ಮವನ್ನು ತಿಳಿಯಲು ಅಂತಹದ್ದೇ ಸ್ಮೃತಿಶಕ್ತಿಯ ಅವಶ್ಯಕತೆ ಇದ್ದೇಇದೆ.

ಸೂಚನೆ : 28/11/2021 ರಂದು ಈ ಲೇಖನವು  ಹೊಸದಿಗಂತ ಪತ್ರಿಕೆಯ "ಶ್ರೀರಾಮನ ಗುಣಗಳು" ಅಂಕಣದಲ್ಲಿ ಪ್ರಕಟವಾಗಿ