Thursday, November 4, 2021

ದೀಪಾವಳೀ - ಸ್ವರ್ಗಕ್ಕೆ ಬೆಳಕಿನ ದಾರಿ -1(Deepaavali Svargakke Belakina Dari -1)

 ಕನ್ನಡ ಅನುವಾದ : ಎಂ. ಆರ್. ಭಾಷ್ಯಮ್
ಮೂಲ ಆಂಗ್ಲಭಾಷೆ : ಡಾ. ಮೋಹನ್ ರಾಘವನ್
(ಪ್ರತಿಕ್ರಿಯಿಸಿರಿ lekhana@ayvm.in)ದೀಪಾವಳೀ ಇದು ಬೆಳಕಿನ ಹಬ್ಬ. ಇಡೀ ದೇಶ ಸಂಭ್ರಮ ಸಡಗರದಲ್ಲಿರುವ ಸಮಯ. ದೀಪಾವಳೀ ಒಂದೇ ಹಬ್ಬವಲ್ಲದೆ, ಹಬ್ಬಗಳ ಸಾಲು. ಅಶ್ವಯುಜ ಮಾಸದ ಕೃಷ್ಣಪಕ್ಷ ತ್ರಯೋದಶಿ ಮೊದಲ್ಗೊಂಡು  ಧನತ್ರಯೋದಶಿ (ಧನ್ತೇರಸ್), ಧನ್ವಂತರಿ ಜಯಂತೀ , ನರಕ ಚತುರ್ದಶೀ, ಅಮಾವಾಸ್ಯೆ ಲಕ್ಷ್ಮೀಪೂಜೆ, ಗೋವರ್ಧನಪೂಜೆ, ಬಲಿಪಾಡ್ಯಮಿ, ಭಾಯೀದೂಜ್, ಭಗಿನೀದ್ವಿತೀಯೆ, ಯಮದ್ವಿತೀಯಾ ಎಂಬ ಹಬ್ಬಗಳ ಸಾಲು. ದೀಪಬೆಳಗಿಸುವುದು ಪಟಾಕಿಸಿಡಿಸುವುದು, ಸಿಹಿ ಮತ್ತು ಉಡುಗೊರೆ ಹಂಚುವುದು ಈ ಹಬ್ಬಗಳ ಮಾಲೆಯಲ್ಲಿ ದೇಶದಾದ್ಯಂತ ಸರ್ವೇಸಾಮಾನ್ಯ. ಹಬ್ಬದಮುನ್ನ ಲಕ್ಷ್ಮೀದೇವಿಯನ್ನು ಸ್ವಾಗತಿಸಲು ಇಡೀ ಮನೆಯನ್ನು ಸ್ವಚ್ಛಗೊಳಿಸಿ ಸಿಂಗರಿಸುವ ಸಂಭ್ರಮ. 

ಉತ್ತರಭಾರತದಲ್ಲಿ ಧನ್ತೇರಸ್ ಹೊಸ ಮನೆ, ಆಭರಣ, ವಾಹನ ಮೊದಲಾದವುಗಳನ್ನು ಕೊಂಡು ಸಂಗ್ರಹಮಾಡುವ ಕಾಲ. ದಕ್ಷಿಣಭಾರತದಲ್ಲಿ ಸಾಂಪ್ರದಾಯಿಕವಾಗಿ ಉಷಃಕಾಲದಲ್ಲಿ ಅಭ್ಯಂಜನವನ್ನು ಮಾಡುವ ವಾಡಿಕೆ. ವ್ಯಾಪಾರವಹಿವಾಟು ಮಾಡುವ ಜನತೆಗಿದು ಲಕ್ಷ್ಮೀಪೂಜೆಯಿಂದ ಆರಂಭವಾಗುವ ಹೊಸಆರ್ಥಿಕ ವರುಷ. ಗೋವರ್ಧನಪೂಜೆ ಉತ್ತರಭಾರತದ ವೈಷ್ಣವ ಸಂಪ್ರದಾಯದವರಲ್ಲಿ ಪ್ರಚಲಿತ. ನರಕಾಸುರನಮೇಲೆ ಕೃಷ್ಣನ ಜಯಭೇರಿಯ ನೆನಪು ತಮಿಳುನಾಡಿನಲ್ಲಾದರೆ, ಕರ್ನಾಟಕ ಹಾಗೂ ಆಂಧ್ರಪ್ರದೇಶಗಳಲ್ಲಿ ವಾಮನತ್ರಿವಿಕ್ರಮ ಅವತಾರಗಳೊಂದಿಗೆ ಬಲಿಚಕ್ರವರ್ತಿಯ ನೆನಪಿನೊಡನೆ  ಕೊಂಡಾಡುವ ಸರ್ವೇಸಾಮಾನ್ಯ ಆಚರಣೆ. ಈ ಹಬ್ಬಗಳಸಾಲಿನ ಕೊನೆಯದಿನ ಅಂದರೆ ಕಾರ್ತಿಕಮಾಸದ ಶುಕ್ಲಪಕ್ಷದ ದ್ವಿತೀಯೆಯನ್ನು ಅಣ್ಣತಂಗಿಯರ ಹಬ್ಬವೆಂದು ಬೇರೆಬೇರೆ ಹೆಸರುಗಳಿಂದ ಆಚರಿಸುವ ವಾಡಿಕೆ. 

ಉತ್ತರಭಾರತದಲ್ಲಿ ಭಾಯಿ ದೂಜ್ ಎಂದು,ಮಹಾರಾಷ್ಟ್ರದಲ್ಲಿ ಭಾಊಬೀಜ್ ಎಂದೂ, ಭಗಿನಿ ದ್ವಿತೀಯೆ ಅಥವಾ ಯಮದ್ವಿತೀಯೆ ಎಂದು ದಕ್ಷಿಣಭಾರತದಲ್ಲಿ ಆಚರಿಸುತ್ತಾರೆ.  ಅನೇಕಾನೇಕ ಸಾಂಪ್ರದಾಯಿಕ ಶಿಷ್ಟಾಚಾರಗಳು ಇಂದಿನ ಬದಲಾಗುತ್ತಿರುವ ಅವಸರದ  ಜೀವನಶೈಲಿಯಲ್ಲಿ ಮರೆಯಾಗುತ್ತಿವೆ. ಉದಾಹರಣೆಗೆ ಅಮಾವಾಸ್ಯೆಯ ಹಿಂದಿನ ಮೂರುದಿನಗಳ ಗೋತ್ರಿರಾತ್ರವ್ರತ ಇಂದು ಕೆಲವೇ ಹಳ್ಳಿಗಳಲ್ಲುಳಿದು ಮತ್ತೆಲ್ಲೂ ಕಾಣಸಿಗುತ್ತಿಲ್ಲ. ಎತ್ತರದ ಮೇರುವಿನಲ್ಲಿ  ಬೆಳಗುವ ಜ್ಯೋತಿ ಮತ್ತು ಅದನ್ನು ಸುತ್ತುವರಿದು ಎಂಟುದಿಕ್ಕುಗಳಲ್ಲಿ ಚೆಲ್ಲುವ ಬೆಳಕಿನ ದೀಪ ಕಂಭಗಳು ಕೇವಲ ಶಾಸ್ತ್ರ ಗ್ರಂಥಗಳಲ್ಲಿ ಕಂಡುಬರುತ್ತವೆ. ಬಲೀಂದ್ರನ ಮೂರ್ತಿಯನ್ನು ಪ್ರತಿಷ್ಠಾಪಿಸಿ ಆತನನ್ನು ಸ್ವರ್ಣ ವರ್ಣ ಪುಷ್ಪಗಳಿಂದ ಅರ್ಚಿಸುವ ಪರಿಪಾಠ ಕೆಲವೇ ಸಂಪ್ರದಾಯವನ್ನು  ಕಾಪಿಡುವ ಮನೆಗಳಲ್ಲಿ ಮಾತ್ರ ಕಾಣಬಹುದು.

ಸಂತೋಷ, ಸಂಭ್ರಮ, ಭೂರಿಭೋಜನ ಮತ್ತು ಮೋಜು ಸ್ವಾಗತವೇ.   ಪ್ರತಿಯೊಂದು ಸಂಸ್ಕೃತಿಯೂ  ಉತ್ಸವಗಳ ಆಚರಣೆಗೆ ತನ್ನದೇ ಆದ  ಪದ್ಧತಿಗಳನ್ನು   ರೂಪಿಸಿಕೊಂಡಿದೆ. ನೀರಸ ದಿನಚರಿಯಿಂದ ಬೇಸತ್ತ ಮನಸ್ಸನ್ನು ಮೇಲೆತ್ತುವ ಕಾಲ್ಪನಿಕ ಸಾಧನಗಳೆಂದು ಪರ್ವಗಳನ್ನು, ದೀಪಾವಳಿಯನ್ನು  ಪರಿಗಣಿಸಿ, ತಿರ್ಮಾನಿಸುತ್ತಾರೆ. ಪೌರಾಣಿಕ ಕಥೆಗಳಾದ ಕೃಷ್ಣ-ನರಕಾಸುರ, ಬಲಿ-ತ್ರಿವಿಕ್ರಮ, ಗೋವರ್ಧನ-ಕೃಷ್ಣ, ಇವೆಲ್ಲವೂ ಆ ಸಂದರ್ಭಕ್ಕೆ ಅರ್ಥಕೊಡಲು ಕಲ್ಪಿಸಿದ ಕಟ್ಟು ಕಥೆಗಳೆಂದು ಪ್ರಸ್ತುತ ಪಡಿಸುತ್ತಾರೆ. ಆಚಾರ - ಆಚರಣೆಗಳನ್ನು ಕತ್ತೆಲೆಗಿಂತ ಬೆಳಕು, ನೀರಸಕ್ಕಿಂತ ಉತ್ಸಾಹ, ದೌಷ್ಟ್ಯಕ್ಕಿಂತ ಸಾಧುತನದ ನಮ್ಮ ಸ್ವಾಭಾವಿಕ ಒಲವಿನ ಅಭಿವ್ಯಕ್ತಿ ಎಂದು ತಮ್ಮ ಔದಾರ್ಯದ ಪರಮಾವಧಿಯ ಮನೋಭಾವದಿಂದ ಒಪ್ಪಿಕ್ಕೊಳ್ಳುತ್ತಾರೆ.  ಮತ್ತು, ಇದರಲ್ಲಿನ ದುಷ್ಟ  ಶಿಷ್ಟದ ಅರ್ಥವ್ಯಾಪ್ತಿಯನ್ನು ಅವರವರ ಸಿದ್ಧಾಂತಕ್ಕೆ ತಕ್ಕಂತೆ ಬಾಗಿಸಲಾಗುತ್ತದೆ. ನಮ್ಮ ಧಾರ್ಮಿಕ,ವಿಧಿ-ವಿಧಾನಗಳ, ಆಚಾರವಿಚಾರ ಸನ್ನಿವೇಶಗಳ ವೈಶಾಲ್ಯಗಳನ್ನು  ಬದಿಗೊತ್ತಿ, ಸರ್ವೇ ಸಾಮಾನ್ಯ ವಿಷಯಗಳನ್ನು ಒತ್ತಿಹೇಳಿ ಪ್ರಸ್ತುತಪಡಿಸುವ  ಪ್ರವೃತ್ತಿ,  ದೀಪಾವಳಿಯ ಆಚರಣೆಯಬಗ್ಗೆ ಬೆಳೆಯುತ್ತಿದೆ.  ಜನಪ್ರಿಯವಾಗಿಸುವ ಯತ್ನಗಳನ್ನು ಸ್ವಾಗತಿಸಬಹುದಾದರೂ, ಆ ಪ್ರಯತ್ನಗಳ ಬೆಲೆ, ನಮ್ಮ ಸಂಸ್ಕೃತಿಯಲ್ಲಿನ ಅಧ್ಯಾತ್ಮನೆಲೆಯಾಗುವಂತಾಗಬಾರದು. "ಕರ್ಮಗಳನ್ನು ಮರ್ಮವರಿತು ಆಚರಿಸು" ಎಂದು ಶ್ರೀ ರಂಗ ಮಹಾಗುರುಗಳು ಹೇಳುತ್ತಿದ್ದರು. ಈ ರೀತಿ ಮಾಡುವುದಾದರೆ, ನಮ್ಮ ಸಂಸ್ಕೃತಿಯ ಸಾರವನ್ನುಕುಂದಿಸದೆ, ಅದರ ಮೇಲಿನ ನಿಗೂಢತೆಯ ತೆರೆಯನ್ನು ತೆರೆದು ತಿಳಿಯಾಗಿಸಿದಂತಾಗುತ್ತದೆ. ಬರಿಯ ಹಬ್ಬಗಳನ್ನಷ್ಟೇ ಜನತೆಯ ಕಂಠಕ್ಕೆ ಬಲವಂತವಾಗಿ ಇಳಿಸದೆ, ಅವುಗಳ ಆಧ್ಯಾತ್ಮಿಕ ತಿರುಳನ್ನು ಸಾಮಾನ್ಯ  ಜನರಿಗೂ ದೊರಕುವಂತೆಮಾಡಬೇಕು. ಈ ಲೇಖನಗಳು, ದೀಪಾವಳಿಯ ಬೇರೆ ಬೇರೆ ಮುಖಗಳ ಪ್ರಾಮುಖ್ಯತೆಯನ್ನು ಮತ್ತು ಅದು  ನಮ್ಮ ಜೀವನದಮೇಲೆ ಮಾಡುವ  ಆಳವಾದ ಪ್ರಭಾವವನ್ನು ಸಂಕ್ಷಿಪ್ತವಾಗಿ ಕೊಡುವ ಪ್ರಯತ್ನವಾಗಿದೆ. ಹೊಸದೇನನ್ನೂ ಸೃಷ್ಟಿಸದೆ, ಋಷಿಮುನಿಗಳ ಚಿಂತನೆ, ಶಾಸ್ತ್ರದ  ಆಧಾರ  ಹಾಗೂ ಬೆಳಕನ್ನು ಕಂಡ ಯೋಗಿಗಳ ಪ್ರಮಾಣ ವಚನಗಳಮೇಲೆ ಈ ಯತ್ನ ಅವಲಂಬಿತವಾಗಿದೆ.

ನಮ್ಮ ಋಷಿಮುನಿಗಳು, ಮಾನವನ ಅಸ್ತಿತ್ವದ ಉದ್ದೇಶ ಇಬ್ಬಗೆ ಎಂದು ಗುರುತಿಸದರು - ಸುಖ ಸಮೃದ್ಧಿಗಳ ಹೊರಜೀವನ ಮತ್ತು ಶಾಂತಿ, ತೃಪ್ತಿ ಮತ್ತು ಆನಂದದಾಯಕ ಒಳಜೀವನ. ಈ ಎರಡು ಉದ್ದೇಶಗಳ ಸಮತೋಲನ, ನಾಜೂಕಾದ ವಿಷಯವೇ ಸರಿ. ಅರ್ಥಕಾಮಗಳನ್ನು ಅರಸುವಾಗ ಮೋಕ್ಷದ ದಾರಿಯನ್ನು ಮರೆಯದೇ ಇರುವುದು ಅಷ್ಟೇ ಮುಖ್ಯ. ಈ ಸಮತೋಲನವನ್ನು ಸಾಧಿಸುವ ಮಾನಸಿಕ ಸ್ಥಿತಿಯೇ ಧರ್ಮ. ನಾವು ಆಚರಿಸುವ ಪ್ರತಿಯೊಂದು ಕರ್ಮವೂ ಈ ಗುರಿಯೆಡೆಗೆ ಕರೆದುಕೊಂಡು ಹೋಗಬಹುದು ಅಥವಾ ಬೇರೆಬೇರೆ ಪ್ರಮಾಣದಲ್ಲಿ ದಾರಿತಪ್ಪಿಸಿ ಗೊಂಡಾರಣ್ಯಕ್ಕೆ  ಎಳೆಯಬಹುದು. ಕರ್ಮಗಳ ಪರಿಣಾಮ ಇಬ್ಬಗೆ - ಪಾಪ ಅಥವಾ  ಪುಣ್ಯ; ಪಾಪಗಳು ದಾರಿತಪ್ಪಿಸುವುವಾದರೆ ಪುಣ್ಯಗಳು ಸರಿದಾರಿಯಲ್ಲಿ ನಡೆಸುತ್ತವೆ. ದಾರಿತಪ್ಪಿದವನನ್ನು ಮೊದಲು ಅರಣ್ಯದಿಂದ ಹೊರತಂದು, ನಂತರ ತನ್ನ ಊರು-ಮನೆಗಳಿಗೆ  ಮುಂದುವರೆಯಲು ಪ್ರೋತ್ಸಾಹಿಸಬೇಕಾಗುತ್ತದೆ.  ಆದ್ದರಿಂದ, ಅತ್ಯುನ್ನತ ಸ್ಥಾನದಲ್ಲಿರುವ ಮೋಕ್ಷವನ್ನು ಸಾಧಿಸಬೇಕಾದರೆ,  ಪಾಪ ಕರ್ಮಗಳ ಪರಿಣಾಮಗಳನ್ನು ಮೊದಲು ಕ್ಷಯಗೊಳಿಸಿ, ನಂತರ ಹೆಚ್ಚಿನ ಪುಣ್ಯಕರ್ಮಗಳನ್ನು ಮಾಡಲು ಪ್ರೇರೇಪಿಸಬೇಕಾಗುತ್ತದೆ. ನಮ್ಮ ಋಷಿಮುನಿಗಳು, ಈ ಕಾಲಖಂಡವನ್ನು, ಪಾಪಪರಿಣಾಮಗಳನ್ನು ಕುಗ್ಗಿಸಲು ಹಾಗೂ ಪುಣ್ಯ ಪರಿಣಾಮಗಳನ್ನು ಹೆಚ್ಚಿಸಿ ಮೋಕ್ಷದೆಡೆಗೆ ಒಯ್ಯಲು ಶ್ರೇಷ್ಠವಾದ  ಸಮಯವೆಂದು ಗುರುತಿಸಿದರು. ದೀಪಗಳಆವಳಿ, ಗುಂಪು ಎಂದರೆ, ದಿವಿ ಅಥವಾ ಸ್ವರ್ಗದೆಡೆಗೆ ಸಾಗುವ ಹೆದ್ದಾರಿಗೆ  ಬೆಳಕುಚೆಲ್ಲುವ ದೀಪಗಳಸಾಲು  ಎಂಬರ್ಥ. ನಮ್ಮ ಪಾಪ ಕರ್ಮಗಳ ಗಂಟಿನ ಮೂಟೆಗಳನ್ನು ಕಿತ್ತೊಗೆಯಲು ದೀಪಾವಳಿ ಪ್ರೇರಣೆ ನೀಡುತ್ತದೆ. ಜೊತೆಜೊತೆಗೆ, ಆರ್ಥಿಕ ಹೆಗ್ಗಳಿಕೆಯನ್ನು ಧರ್ಮಮಾರ್ಗವನ್ನು ಬಿಡದೆ ಆಸ್ವಾದಿಸುವ ಕಲೆಯನ್ನು ನಮ್ಮ ಮನೋಬುದ್ಧಿಗಳಿಗೆ ಕಲಿಸುತ್ತದೆ.  ಪಾಪಕರ್ಮಗಳ ನಾಶ ಹಾಗೂ ಐಹಿಕ ಸುಖವನ್ನು ಧರ್ಮಮಾರ್ಗವನ್ನು ಬಿಡದೆ ಅನುಭವಿಸುವ ಈ ಎರಡೂ ಆಶಯಗಳು, ಒಂದೇ ಕೇಂದ್ರಬಿಂದುವಿನಲ್ಲಿ ಲಯವಾಗುತ್ತವೆ. ಅದೇ ಪರಂಜ್ಯೋತಿ, ಬೆಳಕು, ದೀಪ. ದೀಪಾವಳಿಯ ಉಗಮ ಸ್ಥಾನ.

ಮೋಕ್ಷದ ಸ್ಥಾನ, ಪರಮಪದ, ಪರಮೋನ್ನತ  ಸ್ಥಿತಿಯನ್ನು ಬೆಳಕು ಅಥವಾ ಪರಂಜ್ಯೋತಿಯೆಂದೇ ವರ್ಣಿಸುತ್ತಾರೆ.ಹುಟ್ಟುಸಾವುಗಳ ಚಕ್ರದಿಂದ ಬಿಡುಗಡೆಯನ್ನು ಜೀವನದ ಪರಮ ಗುರಿ ಎಂದು ಪರಿಗಣಿಸುತ್ತಾರೆ. ಸಮಾಧಿಸ್ಥಿತಿಯನ್ನು ಏರುವ ಬ್ರಹ್ಮಜ್ಞಾನಿಯನ್ನು ಇಹದಲ್ಲೇ ಜೀವನ್ಮುಕ್ತ ಎಂದು ತಿಳಿಯಬೇಕು. ಶ್ರೀ  ಶ್ರೀರಂಗ ಮಹಾಗುರುಗಳು ತಿಳಿಸಿದಂತೆ, ಅವರುಗಳು, ಪರಮಪದಕ್ಕೆ ಅತ್ಯಂತ ಸಮೀಪದಲ್ಲಿರುತ್ತಾರೆ. ಆ ಮಹಾತ್ಮರು, ಈ ಪ್ರಪಂಚದಲ್ಲಿ ವ್ಯವಹರಿಸುತಿದ್ದರೂ  ಮುಕ್ತರೇ. ಈ ಬೆಳಕಿನ ಅನುಭವವನ್ನು ಕೋಟಿಸೂರ್ಯಪ್ರಕಾಶ - ಕೋಟಿಕೋಟಿಸೂರ್ಯಪ್ರಕಾಶ, ಆದರೂ ಚಂದ್ರಕಿರಣಗಳಂತೆ ಶೀತಲ ಮತ್ತು ಆಹ್ಲಾದಕರ, ಸೂರ್ಯನಂತೆ ಸುಡುವ ಬಿಸಿಯಲ್ಲ  ಎಂದು ಶ್ರೀರಂಗಮಹಾಗುರುಗಳು ವರ್ಣಿಸುತ್ತಿದ್ದರು. ಈ ಜ್ಯೋತಿಯೇ ಕತ್ತಲೆಯಾಚಿನ  ಬೆಳಕು, ಬೆಳಕಿನ ಒಳಬೆಳಕು, ಪರಂಜ್ಯೋತಿ. ಈ ವೇದಸಾರವಾದ, ಮುಕ್ತಿಯನ್ನು ದಯಪಾಲಿಸುವ  ಈ ದೀಪವೇ  ಋಷಿ-ಜ್ಞಾನಿಗಳು ತಮ್ಮ ಹೃದಯಾಲವಾಲದಲ್ಲಿ ಅನುಭವಿಸುವ ಪರಂಜ್ಯೋತಿ. ಕೃಷ್ಣನಾಗಿ ಕಂಡ ವಿಷ್ಣುವನ್ನು  ಆಧ್ಯಾತ್ಮ ದೀಪವಾಗಿ ದೇವಕೀದೇವಿ ಅನುಭವಿಸಿದಳೆಂದು  ಶ್ರೀಮದ್ ಭಾಗವತವು ತಿಳಿಸುತ್ತದೆ. ದೀಪಾವಳಿಯಲ್ಲಿ ನಾವು ಮನೆಯಲ್ಲಿ  ಬೆಳಗುವ ದೀಪಗಳು, ನಮಗೆ ಆ ಅಧ್ಯಾತ್ಮದೀಪದ ನೆನಪನ್ನುಂಟುಮಾಡುವ ಪ್ರತೀಕಗಳು. ಆ ಆಧ್ಯಾತ್ಮ ದೀಪವೇ ದೀಪಾವಳಿಯ ಕೇಂದ್ರ ಬಿಂದು,ಉಗಮಸ್ಥಾನ. ಯಾರು ಈ ಅಂತರ್ದೀಪದ  ಬೆಳಕಿನಲ್ಲಿ ಮುಂದೆಸಾಗುತ್ತಾರೋ, ಅವರು ಇಹವನ್ನು ಅನುಭವಿಸುತ್ತಿದ್ದರೂ,  ಭೋಗ್ಯ ವಸ್ತುಗಳ ಮಧ್ಯದಲ್ಲಿದ್ದರೂ, ಮೋಕ್ಷದೆಡೆಗೆ ಸಾಗುತ್ತಾರೆ.  ಅಂತಹ ಮನೋಬುದ್ಧಿಗಳು ಸ್ವಾಭಾವಿಕವಾಗಿಯೇ ಪಾಪಕರ್ಮಗಳ ಗೊಂಡಾರಣ್ಯದ ಕಡೆಗೆ ದಾರಿಯನ್ನು ಹರಿಯಬಿಡುವುದಿಲ್ಲ. ಇದೇ ದೀಪಾವಳಿ ಹಬ್ಬದ ತಿರುಳು. 

ನಾವು ದೀಪಾವಳಿಯಲ್ಲಿ ಆಚರಿಸುವ - ಕೊಂಡಾಡುವ  ವಿಧಿ-ಸಂಪ್ರದಾಯಗಳು,  ಈ ಇಬ್ಬಗೆಯ ಗುರಿಗಳಿಗೆ -ಅಂದರೆ ಪಾಪಗಳ ನಾಶ, ಧರ್ಮಮಾರ್ಗದಿಂದ ಐಹಿಕಸುಖ ಹಾಗೂ ಮೋಕ್ಷ ಸಾಧನೆಗೆ ಹೇಗೆ ಸಹಾಯಕವಾಗಿವೆಯೆಂದು ನೋಡಬೇಕಾಗಿದೆ. ಇದನ್ನು ಮುಂದಿನ ಲೇಖನದಲ್ಲಿ ತೆಗೆದುಕೊಳ್ಳೋಣ.

ಸೂಚನೆ : 13/11/2020 ರಂದು ಈ ಲೇಖನವು ಆಂಗ್ಲ ಭಾಷೆಯಲ್ಲಿ AYVM blogs ಪ್ರಕಟವಾಗಿದೆ.