Friday, November 5, 2021

ಯೋಗತಾರಾವಳಿ - 27 ಗುಹೆಯ ಕನಸು (Yogataravali - 27 Guheya Kanasu)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)




ಯೋಗತಾರಾವಳೀ (ಶ್ಲೋಕ ೨೮)


ಸಿದ್ಧಿಂ ತಥಾವಿಧ


ಹೊಸ ಹಂಬಲ!

ಈ ಶ್ಲೋಕದಲ್ಲಿ ಕೋರಿಕೆಯೊಂದನ್ನು ಸೂಚಿಸಿದೆ. "ಆಹಾ! ಈ ಸ್ಥಿತಿಯು ನನಗೆ ಅದೆಂದಿಗೆ ಬರಲಿದೆ!" ಎಂದು ಕೇಳಿಕೊಂಡಿದೆ.


ಬಯಸಿರುವುದು ಸಮಾಧಿ-ಸಿದ್ಧಿಯನ್ನು. ಅದೆಂತಹ ಸಿದ್ಧಿಯೆಂದರೆ ಮನೋವಿಲಯ-ರೂಪವಾದ ಸಿದ್ಧಿ. ಏನೆಲ್ಲ ಪ್ರಯತ್ನಪಟ್ಟರೂ ಮನಸ್ಸನ್ನು ವಿಲಯಗೊಳಿಸುವುದೆಂಬುದು ಅಗದ ಮಾತೇ. ಅದು ಗುರ್ವನುಗ್ರಹ-ರೂಪವಾದ ಪೂರ್ಣ-ದೈವಾನುಗ್ರಹ ಹಾಗೂ ಅತಿವಿಶಿಷ್ಟ-ಸ್ವಪ್ರಯತ್ನಗಳ ಸೇರ್ಪಡೆಯಿಂದಲೇ ಆಗುವಂತಹುದು. ಮತ್ತು ಇಲ್ಲಿ ಹೇಳಿರುವ ಮನೋ-ಲಯವಾದರೂ ಹಿಂದಿನ ಶ್ಲೋಕಗಳಲ್ಲಿ ಚಿತ್ರಿಸಿರುವ ಬಗೆಯದು. 

ಅಮನಸ್ಕ-ಸಹಜಾಮನಸ್ಕ-ಅಜಾಡ್ಯನಿದ್ರಾ-ಯೋಗನಿದ್ರಾ-ನಿರ್ವಿಕಲ್ಪನಿದ್ರಾ ಎಂಬ ನಾನಾವಸ್ಥೆಗಳ ವರ್ಣನೆಗಳಲ್ಲಿಉತ್ತರೋತ್ತರವಾಗಿ ಮನಸ್ಸು ಸೂಕ್ಷ್ಮ-ಸೂಕ್ಷ್ಮತರವಾಗಿ ಸಾಗುತ್ತಾ, ಕೊನೆಗೆ ಸೂಕ್ಷ್ಮತಮವಾಗಿ ತನ್ನ ಮೂಲದಲ್ಲಿ ಸೇರಿಕೊಳ್ಳುತ್ತದೆ. ಆಗಿನ ಬಗೆಯೇನುಂಟೋ ಅದನ್ನು ಇಲ್ಲಿ ಆಶಿಸಿದೆ. 

ಮನಸಸ್ಪತಿ

ಬ್ರಹ್ಮಕ್ಕೆ ಮನಸಸ್ಪತಿಯೆಂದೂ ಹೆಸರಿದೆ: ಮನಸ್ಸಿಗೆ ಒಡೆಯನೆಂದರೆ ಪರಬ್ರಹ್ಮವೇ. ಪರಬ್ರಹ್ಮದಿಂದ ಪ್ರೇರಿತವಾಗಿಯೇ ಮನಸ್ಸೂ ಪ್ರಾಣವೂ ಮುಂದಕ್ಕೆ ಹೆಜ್ಜೆಯಿಡಲಾಗುವುದು. ಯಾವ ಮೂಲದಿಂದಲೇ ಅವು ಹೊಮ್ಮಿದವೋ ಅದೇ ಮೂಲದಲ್ಲಿಯೇ ಹೋಗಿ ಸೇರಿಕೊಳ್ಳುವ ಅವಸ್ಥೆಯೇ ಮನೋ-ವಿಲಯ.

ಮೂಲದಲ್ಲಿ ಹೀಗೆ ಸೇರಿಕೊಂಡದ್ದು ಮತ್ತೆ ಹಿಂತಿರುಗದೇನೋ! - ಎಂದು ಭ್ರಮಿಸಬೇಕಿಲ್ಲ, ಹೆದರಬೇಕಿಲ್ಲ. ಹೇಗೆ ನಿದ್ರಾವಸ್ಥೆಗೆ ಹೋದವರು ಆ ಅವಸ್ಥೆಯಿಂದ ತಾವಾಗಿ "ಹಿಂದಿರುಗಿಬರು"ವರೋ, ಇಲ್ಲೂ ಹಾಗೆಯೇ. ಅಷ್ಟೇ ಅಲ್ಲ. ನಿದ್ದೆಯು ಚೆನ್ನಾಗಿ ಬಂದು ಪೂರ್ಣವಾಗಿ ಮುಗಿದ ಮೇಲೆ ಏನೋ ಒಂದು ಹುರುಪು ಬಂದಂತಾಗುವುದು; ಹಾಗಿರಲು, ಈ ನಿಜವಾಗಿಯೂ ಪೂರ್ಣವೆನಿಸುವ ನಿರ್ವಿಕಲ್ಪ-ನಿದ್ರೆಯಾದ ಬಳಿಕ, ಮೂಲ-ಚೈತನ್ಯದೊಂದಿಗಿನ ಸಂಸ್ಪರ್ಶದಿಂದಾಗಿ ನವ-ಚೈತನ್ಯವು ಉಕ್ಕುವುದು. ಇದು ಅನ್ಯಾದೃಶವಾದುದು. 

ಕ್ಷೇತ್ರ-ಮಾಹಾತ್ಮ್ಯ

ಇಂತಹ ಸ್ಥಿತಿಯು ಎಲ್ಲಿಯಾದರೂ ಲಭ್ಯವಾಗಬಹುದು: ತಾನಿರುವೆಡೆಯಲ್ಲೇ, ತನ್ನ ಮನೆಯಲ್ಲಿಯೇ ಲಭಿಸಬಹುದು! ಮತ್ತು ಅದು ಎಲ್ಲಿಯೇ ಲಬ್ಧವಾದರೂ ಆ ಸುಖದ ಪೂರ್ಣತೆಯಲ್ಲಿ ಯಾವ ಊನತೆಯೂ ಇರಲಾರದು. ಆದರೂ ಶ್ರೇಷ್ಠ-ತೀರ್ಥಕ್ಷೇತ್ರಗಳಲ್ಲಿ ಈ ಸ್ಥಿತಿಯು ದಕ್ಕುವುದು ದೊಡ್ಡ ಲಾಭವೇ, ಹೆಚ್ಚು ಸ್ಥಾಯಿಯೇ. ವಾಸ್ತವವಾಗಿ ಕ್ಷೇತ್ರಗಳಲ್ಲಿಯೇ ಇಂತಹ ಸ್ಥಿತಿಯು ದೊರಕುವುದು ಹೆಚ್ಚು ಸುಲಭ, ಸುಕರ. ಕ್ಷೇತ್ರಗಳಲ್ಲಿರುವ ಪಾವಿತ್ರ್ಯವು ಸಮಾಧಿ-ಸ್ಥಿತಿ-ಲಾಭಕ್ಕೆ ಅತ್ಯಂತ ಸಹಕಾರಿಯೇ.

ಪ್ರಕೃತ, ಯೋಗತಾರಾವಳಿಯೆಂಬ ಈ ಕೃತಿಯಲ್ಲಿ, ಶ್ರೀ-ಶೈಲವೆಂಬ ಪವಿತ್ರ-ಕ್ಷೇತ್ರದ ಉಲ್ಲೇಖವು ಈ ಶ್ಲೋಕದಲ್ಲಿದೆ. ಶಂಕರಭಗವತ್ಪಾದರ ಶಿವಾನಂದಲಹರಿಯು ರಚಿತವಾದದ್ದೂ ಈ ಶ್ರೀಶೈಲದಲ್ಲೇ, ಈ ಶ್ರೀಶೈಲಾಧೀಶನ ಸಂನಿಧಿಯಲ್ಲಿಯೇ. ಪ್ರಕೃತ- ಶ್ಲೋಕದಲ್ಲಿ ಕೋರಿಕೆಯನ್ನು ವ್ಯಕ್ತಪಡಿಸಿರುವುದು ಈ "ಶ್ರೀಶೈಲಪರ್ವತದ ಶಿಖರಗಳಲ್ಲಿಯ ಗುಹೆಗಳಲ್ಲಿ ಇಂತಹ ಮನೋ-ವಿಲಯ-ರೂಪವಾದ ಸಮಾಧಿ-ಸ್ಥಿತಿಯನ್ನು ನಾನು ಅದೆಂದು ಪಡೆಯುವೆನೋ?" – ಎಂಬುದಾಗಿ.

ಮನಸ್ಸು ಅದೆಷ್ಟು ಪೂರ್ಣವಾಗಿ ವಿಲಯಗೊಳ್ಳಬೇಕೆಂಬುದನ್ನು ಎರಡು ನಿದರ್ಶನಗಳಿಂದ ಹೇಳಿದೆ: ನಿಶ್ಚಲನಾಗಿ ದೀರ್ಘಕಾಲ ಕುಳಿತು ತಪಸ್ಸು ಮಾಡುತ್ತಿದ್ದರೆ, ಮೈಮೇಲೆ ಬಳ್ಳಿಗಳು ಹಬ್ಬಿಯಾವು! ಕಿವಿಯಲ್ಲಿ ಪಕ್ಷಿಗಳು ಗೂಡು ಕಟ್ಟಿಯಾವು!

ಧ್ಯಾನದಲ್ಲಿ ಮುಳುಗು!

ವಾಲ್ಮೀಕಿ-ಮಹರ್ಷಿಗಳ ಕಥೆಯಲ್ಲಿ ಆ ಋಷಿಯ ಸುತ್ತಲೂ ಹುತ್ತವೇ ಬೆಳೆದುಕೊಂಡದ್ದನ್ನು ಕೇಳುತ್ತೇವಲ್ಲವೆ? ಬಗೆಬಗೆಯಾದ ತಪಸ್ಸುಗಳಲ್ಲಿ ಮುಳುಗಿರುವವರ ವರ್ಣನೆಯು ವಾಲ್ಮೀಕಿ-ರಾಮಾಯಣದಲ್ಲಿ ಬರುತ್ತದೆ. ಹೊರಗಿನ ಪರಿವೆಯೇ ಇಲ್ಲದಂತೆ ಪಾರ್ವತಿಯು ಮಾಡಿದ ತಪಸ್ಸನ್ನು ಕಾಳಿದಾಸನೂ ಚಿತ್ರಿಸಿರುವನು. ಗೊಮ್ಮಟೇಶ್ವರನ ವಿಗ್ರಹದಲ್ಲೂ ಆತನ ಬಾಹುಗಳ ಮೇಲೆ ಲತೆಗಳು ಬೆಳೆದಂತೆ ಚಿತ್ರಿಸಿರುವರಲ್ಲವೆ?

ಧ್ಯಾನದಲ್ಲಿ ದೀರ್ಘಕಾಲ ಮುಳುಗಿರುವವನಿಗೆ ಬಾಹ್ಯ-ಜ್ಞಾನವೇ ಇಲ್ಲದಂತಾಗಿ ಲತೆಗಳು ಮೈಮೇಲೆ ಹಬ್ಬಿ ಬೆಳೆಯಬಹುದು. ಆದರೆ ಅದಕ್ಕಿಂತಲೂ ಹೆಚ್ಚೆಂದರೆ, "ಇಲ್ಲೇನೂ ಭಯಕ್ಕೆ ಆಸ್ಪದವಿಲ್ಲ"ವೆಂದು ಪಕ್ಷಿಗಳು ತೀರ್ಮಾನಿಸಿ, ಧ್ಯಾನಿಯ ಕಿವಿಯಲ್ಲಿ ಗೂಡನ್ನು ಸಹ ಕಟ್ಟಬಹುದು! ಶರೀರದ ಪರಮ-ನಿಶ್ಚೇಷ್ಟತೆಯನ್ನು ಅನುಲಕ್ಷಿಸಿದ ಮೇಲೆಯೇ ಪಕ್ಷಿಗಳಲ್ಲಿ ಒಂದಿಷ್ಟು ಧೈರ್ಯವು ಮೂಡುತ್ತದೆ.  ಸಮಾಧಿ-ಸ್ಥಿತಿಯಲ್ಲಿ ನೆಲೆಗೊಂಡವನ ಚಿತ್ರವನ್ನು ಈ ಶ್ಲೋಕವು ನಮ್ಮ ಕಣ್ಣ ಮುಂದಿರಿಸುತ್ತದೆ. ಇಂತಹ ಸ್ಥಿತಿಯುಂಟಾದಲ್ಲಿ, ತಪಸ್ಸಿನ ಪೂರ್ಣಫಲ, ಯೋಗದ ಪೂರ್ಣಫಲಗಳು ದೊರೆತಂತೆಯೇ ಸರಿ!


ಸಿದ್ಧಿಂ ತಥಾ-ವಿಧ-ಮನೋ-ವಿಲಯಾಂ ಸಮಾಧೌ

   ಶ್ರೀಶೈಲ-ಶೃಂಗ-ಕುಹರೇಷು ಕದೋಪಲಪ್ಸ್ಯೇ? |

ಗಾತ್ರಂ ಯದಾ ಮಮ ಲತಾಃ ಪರಿವೇಷ್ಟಯಂತಿ!

   ಕರ್ಣೇ ಯದಾ ವಿರಚಯಂತಿ ಖಗಾಶ್ಚ ನೀಡಾನ್! ||೨೮||

ಸೂಚನೆ : 05/11/2021 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.