Sunday, June 9, 2024

ಯಕ್ಷ ಪ್ರಶ್ನೆ93 (Yaksha prashne 93 )

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)


ಪ್ರಶ್ನೆ – 92 ಮಾನ ಎಂದರೆ ಯಾವುದು?

ಉತ್ತರ - ಆತ್ಮಾಭಿಮಾನ. 

ಮಾನ ಎಂಬ ಶಬ್ದವನ್ನು ಅನೇಕ ಕಡೆ ಭಿನ್ನ ಭಿನ್ನವಾದ ಅರ್ಥದಲ್ಲಿ ಬಳಸುವುದನ್ನು ಕಾಣಬಹುದು. ಮಾನವೆಂದರೆ ಪ್ರಮಾಣ. ಮಾನವೆಂದರೆ ಗೌರವ, ನಾನು ಎಂಬ ಭಾವನೆ ಇತ್ಯಾದಿಯಾಗಿ. ಅಮರಕೋಷ ಎಂಬ ಶಬ್ದಕೋಷದಲ್ಲಿ ಮನಸ್ಸಿನ ಉನ್ನತವಾದ ಸ್ಥಿತಿ ಎಂದು ಹೇಳಲಾಗಿದೆ. ಒಂದು ಸುಭಾಷಿತವೂ ಇದೇ ಅರ್ಥವನ್ನು ತಿಳಿಸುತ್ತದೆ. 'ಮಾನೋ ಹಿ ಮಹತಾಂ ಧನಮ್' ಎಂದು. ಅಂದರೆ ಮಹಾತ್ಮರಾದವರು ಅವರ ಮನಸ್ಸಿನ ಸ್ಥಿತಿಯನ್ನು ಉನ್ನತವಾಗಿರುವಂತೆ ಮತ್ತು ಅದು ಎಂದೂ ಕೆಳಗಿಳಿಯದಂತೆ ನೋಡಿಕೊಳ್ಳುತ್ತಾರೆ. ಮನಸ್ಸಿನ ಯಾವ ಸ್ಥಿತಿ ಅಥವಾ ಭಾವವಿದ್ದರೆ ಅದು ಲೋಕಕ್ಷೇಮಕರವೋ ಮತ್ತು ಆತ್ಮದ ಉದ್ಧಾರಕ್ಕೂ ಸಹಕಾರಿಯೋ ಹಾಗೆ ಇರಲು ಮಹಾತ್ಮರ ಪ್ರಯತ್ನವಿರುತ್ತದೆ. ಅವರು ಯಾವುದೇ ಕಾರಣಕ್ಕೂ ಯಾವುದೇ ಆಮಿಷಕ್ಕೂ; ಪ್ರಲೋಭನೆಗೂ ಬಲಿಯಾಗುವುದಿಲ್ಲ. ಅಲ್ಲಿಂದ ಕೆಳಗಿಳಿಯಲು ಅವರಿಗೆ ಸರ್ವಥಾ ಇಷ್ಟವಿರುವುದಿಲ್ಲ. ಇಂತಹ ಸ್ಥಿತಿಯಿಂದ ಅವರು ಎಂದೂ ಜಾರುವುದಿಲ್ಲ. ಅದಕ್ಕೆ ಕಾರಣ ಇಷ್ಟೆ- 

ಮಾನವೆಂಬುದು ಅದರ ಮೂಲಕಾರಣವಾದ ತ್ರಿಗುಣದಿಂದ ಮೂರಾಗಿ ತೋರುತ್ತದೆ. ಸಾತ್ತ್ವಿಕ, ರಾಜಸಿಕ ಮತ್ತು ತಾಮಸಿಕ ಎಂದು. ಈ ಗುಣಗಳ ಕಾರಣದಿಂದ ಮನಸ್ಸಿನ ಪ್ರಭೇಧಗಳು ಉಂಟಾಗುತ್ತವೆ. ಸತ್ತ್ವಗುಣದ ಆಧಿಕ್ಯದಿಂದ ಉಂಟಾದ ಮಾನವನ್ನು ಸಾತ್ತ್ವಿಕ ಅಹಂಕಾರ, ಅಭಿಮಾನ ಅಥವಾ ಆತ್ಮಾಭಿಮಾನ ಎನ್ನಬಹುದು. ಉಳಿದ ರಾಜಸಿಕ ಮತ್ತು ತಾಮಸಿಕ ಗುಣಗಳ ಪ್ರಭಾವದಿಂದ ಉಂಟಾದ ಮಾನವನ್ನು ದುರಂಹಂಕಾರ ಅಥವಾ ಗರ್ವ, ದರ್ಪ ಇತ್ಯಾದಿ ಪದಗಳಿಂದ ಕರೆಯುತ್ತಾರೆ. ಆಂಗ್ಲಭಾಷೆಯಲ್ಲಿ ಇದಕ್ಕೆ 'ಈಗೋ' ಎಂದೂ ಕರೆಯುತ್ತಾರೆ. ಇಲ್ಲಿ ಸಾತ್ತ್ವಿಕವಾದ ಅಹಂಕಾರವು ಶ್ಲಾಘ್ಯವಾದುದು; ಉಳಿದೆರಡು ಅಹಂಕಾರಗಳು ನಿಂದ್ಯವಾದವು. ಸಾತ್ತ್ವಿಕವಾದ ಅಹಂಕಾರವುಳ್ಳವನು ಶಾಸ್ತ್ರದ ವಿಧಿಯನ್ನು ಎಂದು ಉಲ್ಲಂಘನೆ ಮಾಡುವುದಿಲ್ಲ. ಶಾಸ್ತ್ರವೆಂದರೆ ಸೃಷ್ಟಿಯ ನಿಯಮ. ಅದನ್ನು ಯಾವುದೇ ಕಾರಣಕ್ಕೂ ಆತ ಮೀರುವುದಿಲ್ಲ. ಮೀರಿದರೆ ಅವನ ಯಾವ ಚಿತ್ತಸಮುನ್ನತಿ ಎಂಬ ಅವಸ್ಥೆ ಉಂಟೋ ಅಲ್ಲಿಂದ ಆತ ಚ್ಯುತನಾಗುತ್ತಾನೆ. ಹಾಗಾಗಿ ಆತ ಕೇವಲ ಕರ್ತವ್ಯಬುದ್ಧಿಯಿಂದ ಮಾತ್ರ ಕಾರ್ಯವನ್ನು ಮಾಡುತ್ತಾನೆ. ಅಲ್ಲಿ ಯಾವುದೇ ಫಲದ ಅಪೇಕ್ಷೆ ಇರುವುದಿಲ್ಲ. ಫಲಾಪೇಕ್ಷೆ ಇಲ್ಲದ ಕಾರಣ ಅವನಲ್ಲಿ ಯಾವುದೇ ರಾಗ ಅಥವಾ ದ್ವೇಷಕ್ಕೆ ಅವಕಾಶವೇ ಇರುವುದಿಲ್ಲ. ಯಾರ ಕರ್ಮ ಫಲಾಪೇಕ್ಷೆಯಿಂದ ಕೂಡಿರುತ್ತದೆಯೋ; ಕರ್ಮವು ವಿಫಲವಾದ ಪಕ್ಷೆ ಆತನಿಗೆ ದ್ವೇಷಭಾವವು ಉಂಟಾಗುತ್ತದೆ. ಮತ್ತು ಫಲವನ್ನು ಹೇಗಾದರೂ ಆಗಲಿ ಪಡೆಯಲೇ ಬೇಕೆಂಬ ಪ್ರವೃತ್ತಿಯು ಉಂಟಾಗಿ ಅನ್ಯಾನ್ಯ ಮಾರ್ಗವನ್ನೂ ಅವಲಂಬಿಸುವ ತವಕ ಆತನಲ್ಲಿ ಸಂಭವಿಸುತ್ತದೆ. ಆದರೆ ಸಾತ್ತ್ವಿಕವಾದ ಅಹಂಕಾರವು ಮನಸ್ಸನ್ನು ನಿಷ್ಕಲ್ಮಷನನ್ನಾಗಿ ಮಾಡುತ್ತದೆ. ಇದರ ಪರಿಣಾಮವಾಗಿ ಅಧಃಪತನವು ಉಂಟಾಗುವುದಿಲ್ಲ. ಯಾವಾಗಲೂ ಆತನ ಪ್ರವೃತ್ತಿಯಲ್ಲಿ ಬದಲಾವಣೆಯನ್ನೂ ಕಾಣುವುದಿಲ್ಲ. ಇದನ್ನೇ 'ಸ್ಥಿರತೆ' ಆತ್ಮಾನಂದವನ್ನು ಅನುಭವಿಸುವ ಸ್ಥಿತಿ ಎಂದೂ ಕರೆಯುತ್ತಾರೆ. ಆದ್ದರಿಂದ ನಿಜವಾದ ಮಾನ, ಆತ್ಮಾಭಿಮಾನ, ಅಹಂಕಾರ ಇದುವೇ. ಇದು ಇರಬೇಕಾದುದು. ಇಲ್ಲದಿದ್ದರೆ ಪಡೆಯಬೇಕಾದುದು. ಇದಕ್ಕೆ ವಿರುದ್ಧವಾದುದು ಸರ್ವಥಾ ತ್ಯಾಜ್ಯವಷ್ಟೇ.

ಸೂಚನೆ : 9/6/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.