Saturday, June 29, 2024

ಕೃಷ್ಣಕರ್ಣಾಮೃತ - 20 ರಂಗವೇರಿದ ರಂಗ ಎಂತೆಂತು ಕಂಡ? (Krishnakarnamrta -20 Rangaverida Ranga Ententu Kanda?)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)
ಕಪಟಪ್ರೇಮವನ್ನು ತೋರಿ ಕಂಸನು ಅಕ್ರೂರನ ಮೂಲಕ ಕೃಷ್ಣ-ಬಲರಾಮರನ್ನು ನಂದ-ಗೋಕುಲದಿಂದ ಮಥುರೆಗೆ ಬರಮಾಡಿಕೊಂಡನಷ್ಟೆ. ಕೃಷ್ಣ-ಸಂಹಾರಕ್ಕಾಗಿ ಕುವಲಯಾಪೀಡವೆಂಬ ಆನೆಯನ್ನೂ ಪ್ರಯೋಗಿಸಿದನಷ್ಟೆ. ಅದರ ಸಂಹಾರವನ್ನು ಮಾಡಿ ಬಂದ ಕೃಷ್ಣ-ಬಲರಾಮರು, ಇನ್ನು ಇಬ್ಬರು ಮಲ್ಲರನ್ನು ಮಲ್ಲರಂಗದ ಮೇಲೆ ನ್ನು ಎದುರಿಸುವುದಾಯಿತು. ಆ ಇಬ್ಬರೇ ಚಾಣೂರ-ಮುಷ್ಟಿಕರು. ಕಂಸ-ಸಂಹಾರವಾಗುವುದು ಇವರಿಬ್ಬರನ್ನು ಸಂಹರಿಸಿದ ಮೇಲೇ.

ರಂಗಮಂಚವನ್ನೇರುತ್ತಿದ್ದ ಆ ಕೃಷ್ಣ-ಬಲರಾಮರನ್ನು ನೋಡುತ್ತಿದ್ದವರಾರು? ನೋಡಿದವರಿಗೆ ಹೇಗೆ ಹೇಗೆ ಕಾಣುತ್ತಿದ್ದರು, ಈ ಗೋಕುಲದ ಸೋದರರು? ಎಂಬೀ ಪ್ರಶ್ನೆಗೆ ಸುಂದರವಾದ ಉತ್ತರವನ್ನು ಕೊಡುತ್ತಾನೆ, ಲೀಲಾಶುಕ.

ಮಲ್ಲರು, ಸಾಧಾರಣಜನರು, ಅಂಗನೆಯರು, ಗೋಪಾಲಕರು, ಅತ್ತ ಇಂದ್ರ, ಸಾಕ್ಷಾತ್ ಕಂಸ, ಕೊನೆಗೆ ಯೋಗಿಗಳು - ಈ ಏಳು ಮಂದಿಗೆ ಕೃಷ್ಣನು ತೋರಿದುದೆಂತು? - ಎಂಬುದನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾನೆ, ಈ ಕೃಷ್ಣಕವಿ.

ರಂಗಾವತಾರ ಸಂದರ್ಭದಲ್ಲಿ, ಎಂದರೆ ಮಲ್ಲರಂಗವನ್ನೇರಿಬಂದ ಸಂದರ್ಭದಲ್ಲಿ, ಮಲ್ಲರಿಗೆ ಶ್ರೀಕೃಷ್ಣನು ಶೈಲೇಂದ್ರನಂತೆ ಕಂಡನಂತೆ. ಶೈಲವೆಂದರೆ ಬೆಟ್ಟ. ಶೈಲೇಂದ್ರನೆಂದರೆ ಮತ್ತಾರು, ಗಿರಿರಾಜನಾದ ಹಿಮವಂತನೇ. ಅಂತೂ ಮಲ್ಲರಿಗೆ ಹಿಮಾಲಯದಂತೆ ಕಂಡಿದ್ದಾನೆ, ಕೃಷ್ಣ. ಎಂತಹ ಮಲ್ಲನಾದರೂ ಹಿಮವತ್ಪರ್ವತವನ್ನು ಎದುರಿಸಿ ಮಣಿಸಲಾದೀತೇ? ಹೀಗೆ ಕೃಷ್ಣನನ್ನು ಕೊಲ್ಲಲೆಂದು ಬಂದಿದ್ದ ಮಲ್ಲರಿಗೆ ಮಲ್ಲಯುದ್ಧವಾರಂಭವಾಗುವ ಮೊದಲೇ ಎದುರಾಳಿಯನ್ನು ಕಂಡು ಬೆದರುವಂತಾಯಿತು! ಅಲ್ಲಿನ್ನೂ ಹಲವು ಮಲ್ಲರು ಜಮಾಯಿಸಿದ್ದರಲ್ಲವೆ? ಅವರಿಗೂ ಕೃಷ್ಣನು ಅಜಯ್ಯನಾಗಿ ಕಂಡಿದ್ದಾನೆ. ಎಂದರೆ ಜಯಿಸಲಾಗದವನಾಗಿ ತೋರಿದ್ದಾನೆ.

ಎರಡನೆಯದಾಗಿ, ಇತರರಿಗೆ ಎಂದರೆ ಮಲ್ಲರನ್ನುಳಿದ ಸಾಧಾರಣಮಂದಿಗೆ ಕೃಷ್ಣನು ಶಿಶುವಿನಂತೆ - ಎಂದರೆ ಇನ್ನೂ ಸರಿಯಾಗಿ ಬೆಳೆದೇ ಇಲ್ಲದವನಂತೆ, ದೊಡ್ಡವನೇ ಆಗಿಲ್ಲದವನಂತೆ, ತೋರಿದ್ದಾನೆ. ಪ್ರಸಿದ್ಧಮಲ್ಲರೊಂದಿಗೆ ಸೆಣಸಬೇಕಾದರೆ ತಾನೂ ಪ್ರೌಢನಾಗಿ ಪಳಗಿದವನಾಗಿರಬೇಕಲ್ಲವೇ? ಬದಲಾಗಿ, ಇನ್ನೂ ಎಳೆಯವನಂತೆಯೇ, ಬಾಲತರುಣನಂತೆಯೇ ಕಂಡಿದ್ದಾನೆ, ಕೃಷ್ಣ.

ಸಾರ್ವಜನಿಕವಾದ ಕ್ರೀಡೆಗಳೆಂದರೆ ಜನಸ್ತೋಮವೇ ಸೇರುವುದಲ್ಲವೇ? ಹಾಗೆಯೇ, ನಾರಿಯರೂ ಕುತೂಹಲದಿಂದ ನೆರೆದಿದ್ದಾರೆ, ಮಲ್ಲಯುದ್ಧ ಮೊದಲಾದ ವಿನೋದಗಳ ಪ್ರದರ್ಶನವಿದೆಂಬ ಭಾವನೆಯಿಂದ. ಅವರ ಕಣ್ಣಿಗೆ ಕೃಷ್ಣನು ಕಂಡದ್ದೇ ಬೇರೆಯ ಬಗೆಯಲ್ಲಿ. ಅವರಿಗೆ ಆತನು ತೋರಿದುದು ಪುಷ್ಪ-ಚಾಪನಾಗಿ. ಹೂವನ್ನೇ ತನ್ನ ಬಿಲ್ಲನ್ನಾಗಿ ಹೊಂದಿರತಕ್ಕ ಮನ್ಮಥನನ್ನೇ ಪುಷ್ಪ-ಚಾಪನೆನ್ನುವುದು. ಮದನನು ಘಾಸಿಮಾಡುವುದು ಶರೀರವನ್ನಲ್ಲ, ಮನಸ್ಸನ್ನು. ಎಂದೇ ಆತನ ಬಾಣಗಳು ಲೋಹಮಯವಲ್ಲ, ತೀಕ್ಷ್ಣವಲ್ಲ. ಆತನ ಬಿಲ್ಲೂ ಬಾಣಗಳೂ ಹೂವೇ. ಆದರೆ ಘಾತವು ತೀವ್ರ, ಮನಸ್ಸಿನಾಳಕ್ಕೆ. ಅಂತೂ ಅಂತಹ ಮನ್ಮಥನಾಗಿ ಕಂಡಿದ್ದಾನೆ, ಕೃಷ್ಣ. ಕಾಮದೇವನ ಹಾಗೆ ಯಾರಾದರೂ ಕಂಡನೆಂದರೆ, ಅಂತಹವನ ವಿಷಯದಲ್ಲಿ ಸ್ತ್ರೀಯರಿಗೆ ಕಾಮವುಕ್ಕಿತೆಂದು ಬೇರೆಯಾಗಿ ಹೇಳಬೇಕಿಲ್ಲ. ಹೀಗಾಗಿ ಅಲ್ಲಿದ್ದ ನಾರಿಯರ ಚಿತ್ತವು ಸೂರೆಗೊಂಡಿತು, ಈತನಿಂದಾಗಿ.

ಇನ್ನು ನಾಲ್ಕನೆಯವರಾಗಿ ಅಲ್ಲಿದ್ದ ಗೋಪಾಲಕರು ಆತನನ್ನು ಕಂಡದ್ದು ಮತ್ತೊಂದು ಬಗೆಯಲ್ಲೇ. ಇಷ್ಟುದಿನ ತಮ್ಮೊಂದಿಗೋ ತಮ್ಮಂತಹವರೊಂದಿಗೋ ಆಡುತ್ತಿದ್ದವನಲ್ಲವೇ ಈತ? ಎಂದೇ ಒಬ್ಬ ಪ್ರಾಕೃತನಂತೆ ಕಂಡಿದ್ದಾನೆ, ಕೃಷ್ಣ. ಪ್ರಾಕೃತನೆಂದರೆ ಸಾಧಾರಣ ಮನುಷ್ಯ. ಯಾವ ವಿಶೇಷವಾದ ಸಾಧನೆಯೂ ಇಲ್ಲದ ಸಾಮಾನ್ಯ ವ್ಯಕ್ತಿ. ತಮ್ಮಂತೆಯೇ ಈತನೂ - ಎಂದವರು ಭಾವಿಸುವಂತಾಗಿದೆ.  

ಕೃಷ್ಣನನ್ನು ಕಂಸ-ಚಾಣೂರ-ಮರ್ದನನೆಂದೇ ಸ್ತುತಿಸುವರಲ್ಲವೇ? ಕಂಸವಧೆಯು ಕೃಷ್ಣನ ಜೀವನದಲ್ಲಿ ಒಂದು ಮುಖ್ಯವಾದ ಘಟ್ಟ. ಏಕೆ? ಕಂಸನು ಸಾಧಾರಣನಲ್ಲ. ಆತ ಕಾಲನೇಮಿಯೆಂಬ ರಾಕ್ಷಸನಿಂದ ಜನಿಸಿದವ. ಹೀಗಗಿ, ಕೃಷ್ಣ-ಕಂಸರ ಯುದ್ಧವೆಂದರೆ ದೇವಾಸುರಯುದ್ಧವೇ ಸರಿ.

ಎಂದೇ, ಈ ಬಗ್ಗೆ ಕಳವಳ-ಕಾಳಜಿಗಳು ಮನುಷ್ಯರಿಗೆ ಮಾತ್ರವಲ್ಲದೆ ದೇವತೆಗಳಿಗೂ ಇದ್ದವು. ಎಂದೇ ದೇವತೆಗಳಿಗೆಲ್ಲ ಒಡೆಯನಾದ ಇಂದ್ರನೇ ಆಕಾಶದಲ್ಲಿ ನಿಂತು ನೋಡುತ್ತಿದ್ದಾನೆ. ಇಂದ್ರನ ಪ್ರಮುಖಶಸ್ತ್ರವೆಂದರೆ ವಜ್ರಾಯುಧವೇ. ಅದಕ್ಕೆ ಕುಲಿಶವೆಂದೂ ಪವಿಯೆಂದೂ ನಾಮಾಂತರಗಳಿವೆ. ನಾಮಾಂತರವೆಂದರೆ ಬೇರೆ ಹೆಸರು. ಅಂತೂ ಕುಲಿಶ-ಧಾರಿಯಾಗಿ ಸಾಕ್ಷಾದ್ ಇಂದ್ರನೇ ದಿವಿಯಿಂದ ನೋಡುತ್ತಿದ್ದಾನೆ, ಭುವಿಯಲ್ಲಾಗುವ ಈ ಘಟನೆಯನ್ನು.

ಈ ಕ್ಷಣದಲ್ಲಿ ಕೃಷ್ಣನು ಆತನಿಗೆ ಹೇಗೆ ಕಂಡ? ವಿಶ್ವ-ಕಾಯನಾಗಿ ಕಾಣಿಸಿದ, ಕೃಷ್ಣ! ಹಾಗೆಂದರೇನು? ವಿಶ್ವವೆಲ್ಲ ಕೃಷ್ಣನ ಶರೀರವೆಂಬಂತೆ ತೋರಿದೆ. ಹೀಗೆ ಜಗಚ್ಛರೀರಿಯಾಗಿ ಕಾಣಿಸಿದ ಕೃಷ್ಣ! ಹಾಗೆಂದರೆ ಹೇಗಿರಬಹುದೆಂದು ಊಹಿಸುವುದೇ ನಮಗೆ ಕಷ್ಟವಲ್ಲವೇ? ನಮಗೇನು, ಇಂದ್ರನಿಗೇ ಅದು ಅರ್ಥವಾಗದಂತಿತ್ತು!

ಏಕೆ? ಯಾವುದಾದರೂ ಒಂದು ವಸ್ತುವನ್ನು ನಾವು ಅರ್ಥಮಾಡಿಕೊಂಡಿದ್ದೇವೆಂದರೆ ಅದರ ಅಳತೆಗೆ ಏನೋ ಒಂದು ಲೆಕ್ಕ ಸಿಕ್ಕಿದೆಯೆಂದೇ. ಮಾನವೆಂದರೆ ಅಳತೆ. ಯಾವುದನ್ನು ಅಳೆಯಲಾಗುವುದೋ ಅದು ಮೇಯ. ಪ್ರಮೇಯವೆಂದರೂ ಅದೇ - ಚೆನ್ನಾಗಿ ಅಥವಾ ಸ್ಫುಟವಾಗಿ ಅಳತೆಗೆ ಸಿಕ್ಕುವಂತಹುದು. ಅ-ಪ್ರಮೇಯವೆಂದರೆ ಸುತರಾಂ ಅಳತೆಗೇ ನಿಲುಕದಂತಹುದು! ಹಾಗೆ ಅಪ್ರಮೇಯನಾದ ವಿಶ್ವಕಾಯನಾಗಿ ಕಂಡನಂತೆ ಇಂದ್ರನಿಗೆ, ಕಂಸಸಂಹಾರಕ್ಕೆ ಸಂನದ್ಧನಾಗುತ್ತಿದ್ದ ಕೃಷ್ಣ!

ದೇವೇಂದ್ರನಿಗೆ ಹಾಗೆ ಕಂಡ ಕೃಷ್ಣನು, ಇನ್ನು ಸ್ವರೂಪತಃ ಅಸಾಮಾನ್ಯ-ರಾಕ್ಷಸನೇ ಆದ ಕಂಸನಿಗೆ ಹೇಗೆ ಕಂಡನಂತೆ? - ಎಂಬ ಪ್ರಶ್ನೆ ಬರುವುದಲ್ಲವೇ? ಅನಾಚಾರ-ದುರಾಚಾರಗಳಿಗೆ ನೆಲೆಯಾದ ಕಂಸನು ತನ್ನ ಸೋದರಮಾವನೇ ಆಗಿದ್ದರೂ, ಕಡುಕೋಪ ಕೃಷ್ಣನಿಗೆ, ಕಂಸನನ್ನು ಕಂಡರೆ. ಪ್ರಕೃಷ್ಟ-ಶಕ್ತಿಯುಳ್ಳ ದುಷ್ಟ-ಕಂಸ ಒಂದು ಕಡೆಯಾದರೆ, ಉತ್ಕೃಷ್ಟ-ಶಕ್ತಿಯುಳ್ಳ ಗೋಪ-ರೂಪಿ ಕೃಷ್ಣನೊಂದು ಕಡೆ. ತಮಸ್ಸಿನೊಂದಿಗೆ ಸೇರಿರುವ ಪ್ರಬಲ-ರಜಸ್ಸು ಕಂಸ. ಸತ್ತ್ವದೊಂದಿಗೆ ಸೇರಿರುವ ಪ್ರಬಲ-ರಜಸ್ಸು ಕೃಷ್ಣ.

ಅಂತಹ ಕಂಸನಿಗೆ ಇಂತಹ ಕೃಷ್ಣನು ಕಂಡದ್ದು ಕೆರಳಿದ ಯಮನಂತೆ. ಯಮನೆಂದರೇ ಸಾಕು. ಇನ್ನು ಕ್ರುದ್ಧ-ಯಮನೆಂದರೆ? ತನ್ನ ಕಾಲವಿನ್ನು ಮುಗಿಯಿತೆನ್ನಿಸಿಬಿಡುವ ಕಾಲಪುರುಷನ ಹಾಗೆ ತೋರಿದ್ದಾನೆ, ಕೃಷ್ಣ. ಹಾಗೆ ಕಾಣುತ್ತಲೇ ಭಯವಾವರಿಸಿದೆ ಕಂಸನಿಗೆ.

ನಮ್ಮ ಯಾವುದೇ ಭಾವನೆಗಳೂ ಮೊದಲು ಕಾಣಿಸಿಕೊಳ್ಳುವುದು ಕಣ್ಣಲ್ಲಲ್ಲವೇ? ಅದರಲ್ಲೂ ತೀವ್ರ-ಭಯವಂತೂ ಸ್ಪಷ್ಟವಾಗಿಯೇ ತೋರುವುದು. ಕಂಸನ ಕಣ್ಣುಗಳು ಭಯ-ಚಕಿತವಾಗಿವೆ, ಎಂದರೆ ಭೀತಿಯಿಂದ ಚಂಚಲವಾಗಿವೆ! ಹೀಗೆ ಭೀತ-ಕಂಸನಿಗೆ ಕರಾಳ-ಯಮನಾಗಿ ಕಂಡಿದ್ದಾನೆ, ಶ್ರೀಕೃಷ್ಣ!

ಇವರಿಗೆಲ್ಲ ಹೀಗೆಲ್ಲ ತೋರಿದರೆ, ಯೋಗಿಗಳಿಗೆ ಮಾತ್ರ ಧ್ಯೇಯ-ಮೂರ್ತಿಯಾಗಿ ತೋರಿದ್ದಾನೆ, ಕೃಷ್ಣ. ಧ್ಯಾನಕ್ಕೆ ಒಂದು ಆಲಂಬನ ಬೇಕು. ಯಾವುದನ್ನು ಧ್ಯಾನಿಸಬೇಕೋ ಅದು ಧ್ಯೇಯ. ಅಂತಹ ಧ್ಯಾನಾರ್ಹವಾದ ರೂಪ ಕೃಷ್ಣನದು - ಈ ರಣರಂಗದಲ್ಲೂ! ಹಾಗಿರುವ ಕೃಷ್ಣನ ಧ್ಯಾನವು ನಮ್ಮೊಳಗಣ ತಮಸ್ಸನ್ನು ತೊಡೆಯಬಲ್ಲುದಲ್ಲವೇ?

ಅಂತೂ ದೇವ-ಸಮೂಹಕ್ಕೆಲ್ಲ, ಅಮರ-ಗಣಕ್ಕೆಲ್ಲ, ಆನಂದವುಂಟುಮಾಡುವವನಾಗಿ ರಂಗಾವತಾರದಲ್ಲಿ ಕಂಡ, ಶ್ರೀಕೃಷ್ಣ. ಭಗವದವತಾರವೇ ಆದ ಆತನೆಮ್ಮನು ಪೊರೆಯಲಿ - ಎನ್ನುತ್ತಾನೆ ಲೀಲಾಶುಕ.


ಮಲ್ಲೈಃ ಶೈಲೇಂದ್ರಕಲ್ಪಃ, ಶಿಶುರಿತರಜನೈಃ, ಪುಷ್ಪ-ಚಾಪೋಂಽಗನಾಭಿಃ,/

ಗೋಪೈಸ್ತು ಪ್ರಾಕೃತಾತ್ಮಾ, ದಿವಿ ಕುಲಿಶಭೃತಾ ವಿಶ್ವಕಾಯೋಽಪ್ರಮೇಯಃ, |

ಕ್ರುದ್ಧಃ ಕಂಸೇನ ಕಾಲೋ ಭಯ-ಚಕಿತ-ದೃಶಾ, ಯೋಗಿಭಿರ್ಧ್ಯೇಯ-ಮೂರ್ತಿಃ -

ದೃಷ್ಟೋ ರಂಗಾವತಾರೇ ಹರಿರಮರಜನಾನಂದಕೃತ್ ಪಾತು ಯುಷ್ಮಾನ್ ||

ಸೂಚನೆ : 29/6/2024 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ  ಪತ್ರಿಕೆಯಲ್ಲಿ ಪ್ರಕಟವಾಗಿದೆ.