Sunday, June 16, 2024

ದುರುಳರಿಗೆ ವರಲಾಭ: ಮಿತಿರಹಿತ ಸುಖಲೋಭ Durularige Varalabha: Mitirahita Sukhalobha

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)
ತಮಗೆ ಅಮರತ್ವವನ್ನು ಕೊಡು – ಎಂದು ಸುಂದೋಪಸುಂದರು ಕೇಳಿಕೊಂಡಾಗ ಬ್ರಹ್ಮನು ಅವರಿಗೆ ತನ್ನ ಕಟ್ಟುಪಾಡನ್ನು ಹೇಳಿದನು: ಮೂರೂ ಲೋಕಗಳ ಪ್ರಭುತ್ವವನ್ನು ಹೊಂದಬೇಕೆಂದಾಶಿಸಿ ನೀವು ತಪಸ್ಸಿನಲ್ಲಿ ತೊಡಗಿಕೊಂಡಿರಿ. ಆ ಕಾರಣಕ್ಕಾಗಿ, ಈಗ ಅದರ ಬದಲಾಗಿ ಅಮರತ್ವವನ್ನು ಕೊಡಲಾಗುವುದಿಲ್ಲ. ತ್ರೈಲೋಕ್ಯವಿಜಯ ಎಂಬುದಕ್ಕಾಗಿಯೇ ತಾವು ತಪಸ್ಸನ್ನು ಕೈಗೊಂಡಿರೆಂಬ ಕಾರಣದಿಂದ, ತಮ್ಮ ಈ (ಅಮರತ್ವದ ಹೊಸ) ಬಯಕೆಯನ್ನು ನಾ ಪೂರೈಸುವುದಿಲ್ಲ - ಎಂದನು.


ಸುಂದೋಪಸುಂದರು ಹೇಳಿದರು: "ಮೂರೂ ಲೋಕಗಳಲ್ಲಿ ಸ್ಥಾವರವೋ ಜಂಗಮವೋ ಆದ ಯಾವುದೇ ಭೂತವಿರಲಿ -ಅರ್ಥಾತ್, ಚಲನರಹಿತವಾದ ವೃಕ್ಷಾದಿಗಳು, ಹಾಗೂ ಓಡಾಡುವ ಪ್ರಾಣಿಗಳು ಎಂಬ ಯಾವುವೇ ಜೀವಿಗಳಿರಲಿ - ಅವಿಂದ ನಮಗೆ ಭಯವು ಬರಬಾರದು; ಕೇವಲ ನಮ್ಮಿಂದ ಪರಸ್ಪರವಾಗಿ ಮಾತ್ರ ಆಗಬಹುದು, ನಮ್ಮ ಸಾವು. ಅಷ್ಟೇ." ಎಂದು.


ಅದಕ್ಕೆ ಪಿತಾಮಹನು, "ನೀವು ಏನೆಂದು ಪ್ರಾರ್ಥಿಸಿಕೊಂಡಿರೋ, ಏನೆಂಬುದಾಗಿ ಹೇಳಿದಿರೋ, ಅದೇ ರೀತಿಯಾಗಿ ವರ ಕೊಡುತ್ತಿದ್ದೇನೆ. ಹಾಗೆಯೇ ನಿಮ್ಮೀರ್ವರ ಸಾವೂ ಅದೇ ಪ್ರಕಾರವಾಗಿಯೇ ಆಗುವುದು" ಎಂದನು.


ಹೀಗೆ ಸುಂದೋಪಸುಂದರಿಗೆ ವರವನ್ನಿತ್ತು ಅವರನ್ನು ತಪಸ್ಸಿನಿಂದ ನಿವೃತ್ತರಾಗುವಂತೆ ಮಾಡಿ, ಬ್ರಹ್ಮಲೋಕಕ್ಕೆ ತೆರಳಿದನು, ಬ್ರಹ್ಮ. ಅವರಿಬ್ಬರೂ "ಸರ್ವರಿಂದಲೂ ಅವಧ್ಯರು" – ಎಂದೆನಿಸಿದವರಾಗಿ, ಸ್ವಭವನಕ್ಕೆ ಹೋದರು.


ಮನಸ್ವಿಗಳಾದ ಅವರಿಬ್ಬರು ಈಗ ವರಪಡೆದು ಪೂರ್ಣಕಾಮರಾದುದನ್ನು ಕಂಡು ಅವರ ಮಿತ್ರವರ್ಗವೆಲ್ಲ ಪ್ರಹರ್ಷವನ್ನು ಹೊಂದಿತು.


ಸುಂದೋಪಸುಂದರು ಈಗ ತಮ್ಮ ಜಟೆಗಳನ್ನು ಕತ್ತರಿಸಿಕೊಂಡರು. ಕಿರೀಟಧರಿಸಿದರು. ಬಹಳ ಬೆಲೆಬಾಳುವ ಆಭರಣಗಳನ್ನು ಧರಿಸಿಕೊಂಡರು, ನಿರ್ಮಲವಾದ ವಸ್ತ್ರಗಳನ್ನು ಉಟ್ಟರು. ಅಕಾಲದಲ್ಲಿ ಬೆಳದಿಂಗಳನ್ನು ತಂದರು! ಸಾರ್ವಕಾಲಿಕವಾದ ಬೆಳದಿಂಗಳೂ ಆದಂತಾಯಿತು! ಎಲ್ಲರೂ, ವಿಶೇಷವಾಗಿ ಅವರ ಸ್ನೇಹಿತರು, ನಿತ್ಯವೂ ಪ್ರಮೋದಗೊಂಡಿರುವಂತಾಯಿತು. ಆಗ ಮನೆಮನೆಯಲ್ಲೂ ಇರುತ್ತಿದ್ದ ಮಾತೆಂದರೆ "ತಿನ್ನಿರಿ, ಭೋಗಪಡಿ, ಲೂಟಿ ಮಾಡಿ, ಮೋಜು ಮಾಡಿ, ಹಾಡಿರಿ, ಕುಡಿಯಿರಿ" ಎಂಬುದಾಗಿ. ಜೋರುಜೋರಾಗಿ ಹಾಕಲಾಗುತಿದ್ದ ತಾಳಧ್ವನಿಗಳೊಂದಿಗಿನ ಮಹಾನಾದಗಳಿಂದ ದೈತ್ಯರ ಪುರವೆಲ್ಲ ತುಂಬಿಹೋಯಿತು. ಕಾಮರೂಪಿಗಳಾದ ಆ ದೈತ್ಯರ ಬಹುವಿಧವಾದ ಆಯಾ ವಿಹಾರಗಳಿಂದಾಗಿ, ಆಡುತ್ತಾಡುತ್ತಾ ವರ್ಷಗಳೇ ದಿನಗಳಂತೆ ಕಳೆದುಹೋದವು, ಅವರಿಗೆ.


ತಮ್ಮೀ ಉತ್ಸವವು ಕಳೆಯುತ್ತಲೇ, ಅವರಿಬ್ಬರೂ ಲೋಕತ್ರಯದ ಮೇಲೆ ತಮ್ಮ ಅಧಿಕಾರವನ್ನು ಸ್ಥಾಪಿಸುವ ಮನಸ್ಸಾಯಿತು. ಅದಕ್ಕಾಗಿ ಮಂತ್ರಾಲೋಚನೆಯನ್ನು ನಡೆಸಿ, ಸೇನೆಗೆ ಅಣತಿಯಿತ್ತರು. ತಮ್ಮ ಸ್ನೇಹಿತರಿಂದಲೂ ದೈತ್ಯವೃದ್ಧರಾದ ಮಂತ್ರಿಗಳಿಂದಲೂ ಅನುಮತಿಯನ್ನು ಪಡೆದವರಾಗಿ, ಮಖಾನಕ್ಷತ್ರವಿರುವ ಸಮಯದಲ್ಲಿ ರಾತ್ರಿಯ ಹೊತ್ತಿನಲ್ಲಿ ಪ್ರಾಸ್ಥಾನಿಕವನ್ನು, ಎಂದರೆ ಪ್ರಸ್ಥಾನಮಂಗಳವನ್ನು, ನೆರವೇರಿಸಿ ವಿಜಯಯಾತ್ರೆಯನ್ನು ಆರಂಭಿಸಿದರು. ಮಹಾದೈತ್ಯಸೇನೆಯೊಂದಿಗೆ ಅವರು ಹೊರಟರು. ಆ ಸೈನ್ಯವಾದರೂ ಗದೆ-ಪಟ್ಟಿಶಗಳನ್ನೂ ಶೂಲ-ಮುದ್ಗರಗಳನ್ನೂ ಕೈಯಲ್ಲಿ ಹಿಡಿದಿತ್ತು. ರಕ್ಷಾಕವಚವೂ ಎಲ್ಲರಿಗೂ ಇತ್ತು. ಅವರಿಬ್ಬರನ್ನು ಚಾರಣರೂ ಸ್ತುತಿಸುತ್ತಿದ್ದರು; ಅವರ ಸ್ತುತಿಗಳೂ ಮಂಗಲಮಯವಾಗಿದ್ದವು,


ಅವರಿಗೆ ವಿಜಯವನ್ನು ಸೂಚಿಸುವುದಾಗಿದ್ದವು. ಇದರೊಂದಿಗೆ ಪರಮಸಂತೋಷದಿಂದ ಹೊರಟುಬಂದರು, ಸುಂದೋಪಸುಂದರು.

 

ಇನ್ನೇನು? ಅಂತರಿಕ್ಷಕ್ಕೇ ಜಿಗಿದರು. ಅವರು ಕಾಮ-ಗಮರಾಗಿದ್ದರು - ಎಂದರೆ ಇಚ್ಛೆ ಬಂದಂತೆ ಮತ್ತು ಇಚ್ಛೆ ಬಂದಲ್ಲಿಗೆ ಹೋಗಬಲ್ಲವರು - ಆಗಿದ್ದರು. ಯುದ್ಧದ ವಿಷಯದಲ್ಲಿ ದುರ್ಮದವನ್ನು ಹೊಂದಿದ್ದ ಅವರು ದೇವತೆಗಳ ಭವನಗಳಿಗೇ ನುಗ್ಗಿದರು.


ಸೂಚನೆ : 16/6/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.