Thursday, May 30, 2024

ಶ್ರೀಕೃಷ್ಣನ ತೂಕ ಎಷ್ಟು? (Śrikrsnana Tuka Estu?)

ಲೇಖಕರು:ವಾದಿರಾಜ್ ಪ್ರಸನ್ನ

(ಪ್ರತಿಕ್ರಿಯಿಸಿರಿ lekhana@ayvm.in) 




ಜಗದೊಡೆಯನಾದ ಶ್ರೀಕೃಷ್ಣನನ್ನು ಅಳೆಯಲು ಸಾಧ್ಯವೇ ? ಅವನು ಎಲ್ಲರಲ್ಲಿಯೂ, ಎಲ್ಲದರಲ್ಲಿಯೂ ಸದಾ ಇರುವವನು.(ಸರ್ವಾಂತರ್ಯಾಮಿ)  ಅಂತಹವನ ತೂಕ ಎಷ್ಟು? ಎನ್ನುವ ಪ್ರಶ್ನೆಯೇ ಸರಿಯಿಲ್ಲ ಎನ್ನಿಸುವುದು. ಆದರೂ ಶ್ರೀಕೃಷ್ಣನನ್ನು ತೂಕಹಾಕಿದ ಮಹಾಭಾರತದ ರಸಮಯವಾದ ಪ್ರಸಂಗವನ್ನು ಗಮನಿಸೋಣ.   

ಒಮ್ಮೆ ಸತ್ಯಭಾಮೆಯ ಮನಸ್ಸಿನಲ್ಲಿ ತನ್ನ ಪತಿಯಾದ ಶ್ರೀಕೃಷ್ಣನು ಸದಾಕಾಲ ತನ್ನ ಬಳಿಯೇ ಇರಬೇಕು ಮತ್ತು ಬೇರೆ ಹೆಂಡತಿಯರ ಒಡನೆಯಾಗಲೀ, ಸಖಿಯರೊಂದಿಗೂ ಇರಬಾರದೆಂಬ ಭಾವವು ಮೂಡುತ್ತದೆ. 


ಆ ಯೋಚನೆಯಲ್ಲಿದ್ದಾಗ ಸತ್ಯಭಾಮೆಯ ಮುಂದೆ 'ನಾರಾಯಣ, ನಾರಾಯಣ' ಎನ್ನುತ್ತಾ ನಾರದರು  ಬರುತ್ತಾರೆ. ಆಗ ಅವರಲ್ಲಿ ತನ್ನ ಮನದಾಳದ ವಿಷಯವನ್ನು ಅರಿಕೆ ಮಾಡಿಕೊಳ್ಳುತ್ತಾಳೆ. ನಾರದರು, "ಐದು ದಿನಗಳ ಶ್ರೀಮಹಾಲಕ್ಷ್ಮಿ ವ್ರತವನ್ನು ಮಾಡು ಹಾಗೂ ಕಡೆಯದಿನ ನಿನ್ನ ಗಂಡನಾದ ಶ್ರೀಕೃಷ್ಣನನ್ನು ಒಬ್ಬ ಯೋಗ್ಯ ಬ್ರಾಹ್ಮಣನಿಗೆ ದಾನವಾಗಿ ಕೊಡು". ಎಂದು ಉಪಾಯವನ್ನು ತಿಳಿಸುತ್ತಾರೆ.


ನಾರದರು ಹೀಗೆ ಹೇಳಿದಾಗ ಸತ್ಯಭಾಮೆಗೆ ಕಸಿವಿಸಿಯಾಗುತ್ತದೆ. ' ಅಲ್ಲ ನಾರದರೇ, ನನ್ನ ಗಂಡ ನನ್ನ ಬಳಿಯೇ ಇರಬೇಕೆಂದು ಕೇಳಿಕೊಂಡರೆ, ವ್ರತಾಂತ್ಯದಲ್ಲಿ ದಾನಕೊಡುವುದೇ? ನೀವು ಕಲಹಪ್ರಿಯರೆಂದು ಮತ್ತೊಮ್ಮೆ ಸಾಬೀತು ಪಡಿಸಿದಿರಿ!'  ಎಂದು ಹೇಳುತ್ತಾಳೆ.  ಅದಕ್ಕೆ ನಾರದರು 'ಸ್ವಲ್ಪತಾಳು, ಪೂರ್ತಿಕೇಳು. ಕೊಟ್ಟ ದಾನಕ್ಕೆ ಸಮನಾದ ತೂಕದ ವಸ್ತುವನ್ನು ಕೊಟ್ಟು ಆ ಬ್ರಾಹ್ಮಣನಿಂದ ನಿನ್ನ ಕೃಷ್ಣನನ್ನು ಹಿಂಪಡೆ.  ಹೀಗೆ ಈ ವ್ರತಾಚರಣೆ ಮಾಡಿದರೆ ನಿನ್ನ ಕೃಷ್ಣ ಯಾರ ಬಳಿಯೂ ಹೋಗುವುದಿಲ್ಲ, ನಿನ್ನ ಬಳಿಯೇ ಸದಾ  ಇರುವನು' ಎಂದು ಹೇಳುತ್ತಾರೆ.  


ಇದಕ್ಕೆ ಸಮ್ಮತಿಸಿದ ಸತ್ಯಭಾಮೆಯು ಐದು ದಿನಗಳ ಆ ಮಹಾಲಕ್ಷ್ಮಿ ವ್ರತವನ್ನು ಆಚರಿಸಿ ಕಡೆಯ ದಿನದಂದು ದಾನವನ್ನು ಕೊಡಲು ಉತ್ತಮ ಬ್ರಾಹ್ಮಣನನ್ನು ಹುಡುಕುತ್ತಿರಲು, ಹರಿನಾಮ ಸ್ಮರಣೆ ಮಾಡುತ್ತಾ ನಾರದರು ಅಲ್ಲಿಗೆ ಬರುತ್ತಾರೆ . 


ಸಂತೋಷದಿಂದ ಸತ್ಯಭಾಮೆಯು 'ನೀವೇ ದಾನವನ್ನು ಸ್ವೀಕರಿಸಲು ಶ್ರೇಷ್ಠರು. ನೀವೇ  ಶ್ರೀಕೃಷ್ಣನನ್ನು ದಾನವಾಗಿ ಸ್ವೀಕರಿಸಿ' ಎಂದಳು. ನಾರದರು ಮನಸ್ಸಿನಲ್ಲಿಯೇ "ಕೃಷ್ಣ ಯಾರಿಗೆ ತಾನೇ ಬೇಡ ? ಅದೂ ದಾನವಾಗಿ ಕೊಟ್ಟರೆ !" ಎಂದು ಯೋಚಿಸಿ ಪರಮಸಂತೋಷದಿಂದ ಹಸನ್ಮುಖರಾಗಿ ದಾನವನ್ನು ಪಡೆಯುತ್ತಾರೆ. ನಂತರ ತಕ್ಷಣ, ಕೃಷ್ಣನ ನವಿಲುಗರಿಯ ಪೇಟವನ್ನು ತೆಗೆದು  ನಾರದರು ತನ್ನ ರುಮಾಲನ್ನು ಸುತ್ತುತ್ತಾರೆ.  ಅವನ ಕೈಗೆ ಮಹತಿಯನ್ನು (ನಾರದರ ತಂಬೂರಿ) ಕೊಟ್ಟು 'ಕೃಷ್ಣಾ ! ಇನ್ನು ನೀನು ನನ್ನ ದಾಸ, ನನ್ನ ಹಿಂದೆ ನಡೆ ' ಎಂದು ಹೇಳಿ ನಾರಾಯಣ ನಾಮಸ್ಮರಣೆ ಮಾಡುತ್ತಾ ಹೊರಡಲು ಸಿದ್ದರಾಗುತ್ತಾರೆ. ಆಗ ಗಾಬರಿಗೊಂಡ ಸತ್ಯಭಾಮೆಯು,  'ನಿಲ್ಲಿ 

ನಾರದರೆ, ಈ ವ್ರತದ ವಿಷಯವನ್ನು ತಿಳಿಸುವಾಗ ದಾನವನ್ನು ಕೊಟ್ಟು ಅದಕ್ಕೆ ಸಮಾನವಾದ ವಸ್ತು ಕೊಡಬಹುದು ಎಂದು ಹೇಳಿದ್ದಿರಿ; ಈಗ ಅದನ್ನು ನಡೆಸಿಕೊಡಿ' ಎನ್ನುತ್ತಾಳೆ. ಅದಕ್ಕೆ ನಾರದರು 'ಸಮಾನ ತೂಕದ ವಿಷಯ ಪ್ರಸ್ತಾಪಿಸಿಲ್ಲ; ಹಾಗಾಗಿ ನಾವು ಹೊರಟೆವು. ಈಗಲೂ ಇನ್ನೂ ಕಾಲ ಮಿಂಚಿಲ್ಲ. ಶ್ರೀಕೃಷ್ಣನ ಸಮಾನ ತೂಕದ ವಸ್ತುವನ್ನು ಕೊಟ್ಟರೆ ಅದನ್ನೇ ಸ್ವೀಕರಿಸುವೆ ನೀನು ಕೃಷ್ಣನನ್ನು ಹಿಂಪಡೆಯಬಹುದು' ಎಂದು ಹೇಳುತ್ತಾರೆ.


ಆಗ ಸತ್ಯಭಾಮೆ ದೊಡ್ಡ ತಕ್ಕಡಿಯ ಎಡಭಾಗದಲ್ಲಿ ಶ್ರೀ ಕೃಷ್ಣನನ್ನು ಕೂರಿಸುತ್ತಾಳೆ; ಬಲಭಾಗಕ್ಕೆ ತನ್ನ ಬಳಿ ಇದ್ದ ಚಿನ್ನದ ಸರಗಳು, ಬಳೆಗಳು, ಇತ್ಯಾದಿ  ಅನೇಕ ಆಭರಣಗಳ ರಾಶಿ ತುಂಬುತ್ತಾಳೆ. ಆದರೂ ತಕ್ಕಡಿಯು ಮೇಲೆ ಏಳುವುದಿಲ್ಲ. ತನ್ನ ಸಖಿಯರ ಹಾಗೂ ಸ್ನೇಹಿತೆಯರ ಚಿನ್ನದ ಒಡವೆಗಳನ್ನೆಲ್ಲಾ ಹಾಕಿದಾಗಲೂ, ಆ ತಕ್ಕಡಿಯು ಪೂರ್ಣ ತುಂಬಿದ್ದರೂ, ಸ್ವಲ್ಪವೂ ಕೃಷ್ಣನು ಕುಳಿತಿದ್ದ ತಕ್ಕಡಿಯ ಭಾಗವು ಮೇಲೆ ಏಳುವುದಿಲ್ಲ.


ಈಗ ಸತ್ಯಭಾಮೆಗೆ ಗಾಬರಿಯಾಗುತ್ತದೆ. ಸತ್ಯಭಾಮೆಯು ರುಕ್ಮಿಣಿಯನ್ನು ಕಂಡು ಈ ವಿಚಾರವನ್ನು ತಿಳಿಸಿದಾಗ ರುಕ್ಮಿಣಿಯು ಅಲ್ಲಿಗೆ ಬಂದು ಸತ್ಯಭಾಮೆ ಹಾಕಿದ್ದ ಒಡವೆಗಳ ರಾಶಿಯನ್ನು ತೆಗೆಸುವಳು. ಅಲ್ಲಿದ್ದ ತುಳಸಿ ಬೃಂದಾವನಕ್ಕೆ ನಮಸ್ಕರಿಸಿ ನಾಲ್ಕು ದಳದ ತುಳಸಿ ಕುಡಿಯೊಂದನ್ನು ಬಲ ಭಾಗದ ಖಾಲಿ ತಕ್ಕಡಿಯಲ್ಲಿ ಭಕ್ತಿಯಿಂದ ಹಾಕುತ್ತಾಳೆ  ಮತ್ತು ತಕ್ಕಡಿಗೆ ಭಕ್ತಿಯಿಂದ ಪ್ರದಕ್ಷಣೆ ಮಾಡಿ ನಮಸ್ಕಾರ ಮಾಡುತ್ತಿದ್ದಂತೆಯೇ ಕೃಷ್ಣನು ಕುಳಿತಿದ್ದ ತಕ್ಕಡಿಯ ಭಾಗವು ಮೇಲೆದ್ದು ಒಂದೇ ತುಳಸಿಯ ಕುಡಿಯ ಭಾಗದ ತಕ್ಕಡಿಯು ನೆಲವನ್ನು ಮುಟ್ಟುತ್ತದೆ. ಆಗ ಅಲ್ಲಿದ್ದ ಸತ್ಯಭಾಮೆ  ಮತ್ತು ಅವರ ಸಖಿಯರುಗಳಿಗೆಲ್ಲಾ ಆಶ್ಚರ್ಯವಾಗುವುದು. ನಾರದರು ಸಂತೋಷದಿಂದ ಆ ತುಳಸಿಯನ್ನು ದಾನವಾಗಿ ಪಡೆದು ಹೊರಡುವರು.  ಇದು ರುಕ್ಮಿಣಿ ಸತ್ಯಭಾಮೆಯರನ್ನೊಳಗೊಂಡ ಪ್ರಸಿದ್ಧವಾದ ಪ್ರಸಂಗ.


ಈ ಕಥೆಯು ಇಂದಿಗೂ ಪ್ರಸ್ತುತವಾಗಿದ್ದು, ಈ ಕಥೆಯಿಂದ ಕಲಿಯಬೇಕಾದ ಅಂಶಗಳು ಬಹಳಷ್ಟು ಇವೆ. ನಾರದರು ಎಂದರೆ ಜಗಳ ತಂದಿಡುವವರು ಎಂಬ ಮಾತಿದೆ. ಆದರೆ ಅವರು ಮೋಕ್ಷಮಾರ್ಗದ ಪಾಠವನ್ನೇ ಕಲಿಸುವವರು. ಸತ್ಯಭಾಮೆಗೆ ಶಿಕ್ಷಣ ಕೊಡಲೆಂದೇ  ಸಕಾಲದಲ್ಲಿ ಬಂದಿದ್ದು. ಸತ್ಯಭಾಮೆಯು ಕೃಷ್ಣನ ಭಕ್ತೆಯಾಗಿ ಪರಮಪ್ರೇಮವನ್ನು ಹೊಂದಿದವಳಾಗಿದ್ದಳು. ಆದರೂ ಸಹ ಕೃಷ್ಣನು ತನ್ನ ವಶದಲ್ಲಿರಬೇಕೆಂಬ ಸ್ವಾರ್ಥ ಮನೋಭಾವ ಉಳ್ಳವಳಾಗಿದ್ದಳು. ತಾನೇ  ಕೃಷ್ಣನಿಗೆ ಅತ್ಯಂತ ಪ್ರಿಯಳಾದವಳು ಎಂಬ ಗರ್ವವೂ ಇರುತ್ತದೆ. ಆ ಗರ್ವ ಮನೋಭಾವದಿಂದಲೇ ಚಿನ್ನದ ಆಭರಣಗಳಿಂದ ಕೃಷ್ಣನನ್ನು ಅಳೆದು ವಿಫಲಳಾದಳು. ಭಕ್ತ ಪರಾಧೀನ ಭಗವಂತ ಎಂಬುದನ್ನು ಮರೆತಳು. 


ಸರ್ವಾಂತರ್ಯಾಮಿಯಾದ ಕೃಷ್ಣನು ತನ್ನ ಅಧೀನದಲ್ಲಿಯೇ ಇರಬೇಕೆಂಬ  ಮನೋಭಾವದಿಂದ ಕೂಡಿದ್ದಳು. ಹೊಟ್ಟೆಕಿಚ್ಚಿನಿಂದ ಬೇರೆಯವರ ಬಳಿ ಅವನು ಇರಬಾರದೆಂದು ಇಚ್ಛಿಸಿದ್ದಳು.  ಕೃಷ್ಣನನ್ನು ತನ್ನ ಅಧೀನದಲ್ಲಿರಿಸಿಕೊಳ್ಳಲು ಆ ವ್ರತವನ್ನಾಚರಿಸಿದಳು. ಆದರೆ ಕೃಷ್ಣಪರಮಾತ್ಮ ಯಾರ ಅಧೀನಕ್ಕೂ ಒಳಪಡುವುದಿಲ್ಲ. ಆದುದರಿಂದ ಶ್ರೀಕೃಷ್ಣನು, ತನ್ನ ಪ್ರೀತಿಯ ಮಡದಿಯೇ ಆದರೂ ಸತ್ಯಭಾಮೆಯ ಗರ್ವ ಪಡುವ ಬುದ್ಧಿಯನ್ನು ಒಪ್ಪಿರಲಿಲ್ಲ. ಹಾಗಾಗಿ ಪಾಠವನ್ನು ಕಲಿಸಲು ಪರೋಕ್ಷವಾಗಿ ನಾರದರನ್ನು ಅನುಮೋದಿಸಿರುತ್ತಾನೆ.  ಅಧರ್ಮಿಗಳಾದ ದುರ್ಯೋಧನ, ಶಿಶುಪಾಲರಂತಹವರಿಗೆ ಸಾವೇ ಶಿಕ್ಷೆ. ಭಕ್ತಳಾದ ಸತ್ಯಭಾಮೆಯ ಗರ್ವಭಂಗಕ್ಕೆ ಸೋಲಿನ ಶಿಕ್ಷೆ.


ಸತ್ಯಭಾಮೆಗೆ ಮೊದಲು ಆಡಿದ ಭಾವವು ನಮ್ಮಲ್ಲೂ ಸಹ ಆಡಬಹುದು. ಭಗವಂತ ನಮಗೆ ಹತ್ತಿರವೆನಿಸಿದಾಗ ಗರ್ವಪಡುವ ಸಾಧ್ಯತೆಯುಂಟು. ಈ ಪ್ರಸಂಗ ನಮಗೆ ಎಚ್ಚರಿಕೆಯ ಘಂಟೆಯನ್ನು ಬಾರಿಸುತ್ತದೆ.  ಎಷ್ಟೋ ವೇಳೆ ದೇವಾಲಯಗಳಲ್ಲಿ ದಾನವಾಗಿ ಕೊಟ್ಟ ವಸ್ತುವಿನ ಮೇಲೆ ತಮ್ಮ ಹೆಸರುಗಳನ್ನು ಬರಿಸುವುದನ್ನು ನೋಡುತ್ತೇವೆ.   ಅದು ಭಗವಂತನಿಗೆ ಸಮರ್ಪಣಾ ಭಾವವಿಲ್ಲದೆ, ತೋರಿಕೆಯ ಮನೋಭಾವದಿಂದ ಕೂಡಿರುತ್ತದೆ.  


ರುಕ್ಮಿಣಿಯು ಸಂಪೂರ್ಣ ಭಕ್ತಿ ಮತ್ತು ಸಮರ್ಪಣಾಭಾವದಿಂದ ಕೂಡಿದ ಪ್ರೇಮಾನುರಾಗದಿಂದ ತನ್ನನ್ನು ಭಗವಂತನಿಗೆ ಸಮರ್ಪಿಸಿಕೊಂಡಿದ್ದವಳು. ಸತ್ಯಭಾಮೆಯ ತದ್ವಿರುದ್ಧವಾದ ನಡೆ ರುಕ್ಮಿಣಿಯದು! ಅವಳು  ಕೃಷ್ಣನ ತೂಕ ಎಷ್ಟು? ಎಂದರೆ 'ಅಣೋರಣೀಯಾನ್' ಅಣುವಿಗಿಂತಲೂ ಸಣ್ಣ ಅಣು. ಹಾಗೂ 'ಮಹತೋ ಮಹೀಯಾನ್' ಎಲ್ಲಕ್ಕಿಂತಲೂ ಬೃಹತ್ತಾದವನು  ಎಂಬ ವಿಷಯವನ್ನು ಬಲ್ಲವಳಾಗಿದ್ದಳು.


ಕೃಷ್ಣನಿಗೆ ಪ್ರಿಯವಾದ ತುಳಸಿಪತ್ರೆಯ  ಶ್ರೇಷ್ಠತೆಯನ್ನು ತಿಳಿದಿದ್ದಳು. 'ತುಳಸಿ' ಎಂದರೆ  ತುಲ-ಸ್ಯಾಮ್ ಇದಕ್ಕೆ ಸಮಾನದ ತೂಕದ ವಸ್ತು ಈ ಲೋಕದಲ್ಲಿ ಇನ್ನೊಂದಿಲ್ಲವೆಂದು ತಿಳಿದಿದ್ದಳು. ಅವಳಲ್ಲಿ  ಭಕ್ತಿ-ಸಮರ್ಪಣಾಭಾವವು ತುಂಬಿತ್ತು. ಇದರ ಜೊತೆಗೇ ಸತ್ಯಭಾಮೆಯ ಗರ್ವಭಂಗವು ಆಗಿದೆ. ಇದಕ್ಕೆ ಕಾರಣ ಸತ್ಯಭಾಮೆಯು ತನಗೆ ಯಾವುದು ಪ್ರಿಯವೋ ಅದರಿಂದ ಕೃಷ್ಣನನ್ನು ಅಳೆದಳು. ಆದರೆ ರುಕ್ಮಿಣಿಯು ಕೃಷ್ಣನಿಗೆ ಪ್ರಿಯವಾದುದನ್ನು ಅರ್ಪಿಸಿದಳು. ಈ ಘಟನೆಯಲ್ಲಿ  ತುಳಸಿಯ ಹಿರಿಮೆಯು ಪ್ರಕಟವಾಗಿದೆ. 'ತೇನ ವಿನಾ ತೃಣಮಪಿ  ನ ಚಲತಿ' ಎಂದರೆ ಭಗವಂತನ ಅನುಮತಿ ಇಲ್ಲದೆ ಒಂದು ಹುಲ್ಲುಕಡ್ಡಿಯೂ ಚಲಿಸುವುದಿಲ್ಲ ಹಾಗೂ ಅವನು ಭಕ್ತ ಪರಾಧೀನ ಎಂಬುದು ಸಿದ್ಧವಾಗುತ್ತದೆ.  

ಶ್ರೀರಂಗಮಹಾಗುರುಗಳು ಭಕ್ತಿ ಮತ್ತು ಸಮರ್ಪಣೆಗೆ ಮರದ ಹಣ್ಣಿನ ಉದಾಹರಣೆಯೊಂದನ್ನು ಹೀಗೆ ತಿಳಿಸಿದ್ದರು. "ಹಣ್ಣು ಪರಿಪಕ್ವವಾಗಿಬಿಟ್ಟಾಗ ಅದರ ತೊಟ್ಟು ಇದು ನನಗಲ್ಲ ಭೂಮಾತೆಗೆ ಎಂದು ಹೇಗೆ ಹಗುರವಾಗಿ ಮತ್ತು ಸಹಜವಾಗಿ ಅದನ್ನು ಬಿಟ್ಟು ಕೊಡುತ್ತದೆಯೋ ಹಾಗೆ ಹಗುರವಾದ ಮನಸ್ಸಿನಿಂದ ಭಗವಂತನಿಗೆ ಕೃಷ್ಣಾರ್ಪಣ ಬುದ್ಧಿಯಿಂದ ಸಮರ್ಪಣೆ ಮಾಡಬೇಕು" 

ಆದುದರಿಂದ  ನಾವುಗಳೆಲ್ಲ ಶ್ರೀ ಕೃಷ್ಣನ ಒಲುಮೆಗೆ ಪಾತ್ರರಾಗಬೇಕೆಂದರೆ ಗರ್ವ ಪಡಬಾರದು, ಭಗವಂತನ ಆಶಯಕ್ಕೆ ತಕ್ಕಂತೆ ನಡೆಯಬೇಕು. ಭಕ್ತಿ ಶ್ರದ್ಧೆಗಳಿಂದ ಸಮರ್ಪಣೆ ಭಾವದಿಂದ ನ ಮಮ-ನ ಮಮ (ನನ್ನದಲ್ಲ ನನ್ನದಲ್ಲ) ಎಂದು ಅರ್ಪಿಸೋಣ. ಜಗದೊಡೆಯನಾದ ಶ್ರೀಕೃಷ್ಣನ ಒಲುಮೆಗೆ ಪಾತ್ರರಾಗೋಣ.


ಸೂಚನೆ: 30/05/2023 ರಂದು ಈ ಲೇಖನ ವಿಜಯವಾಣಿಯ ಸಂಸ್ಕೃತಿ ದಲ್ಲಿ ಪ್ರಕಟವಾಗಿದೆ.