Monday, May 6, 2024

ವ್ಯಾಸ ವೀಕ್ಷಿತ - 86 ಮತ್ತೆ ಬಂದರು ಪಾಂಡವರು ಹಸ್ತಿನಾವತಿಗೆ ವೈಭವದಿಂದ ! (Vyaasa Vikshita - 86 Matte Bandaru Paṇḍavaru Hastinavatige Vaibhavadinda !)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)





ದುಃಖಾರ್ತಳಾಗಿ ಶೋಕಿಸಿದ ಕುಂತಿಗೆ ಪ್ರಣಿಪಾತವನ್ನು ಮಾಡಿ (ಎಂದರೆ ಬಗ್ಗಿ ನಮಸ್ಕರಿಸಿ), ದುಃಖಿಸಬೇಡಮ್ಮಾ - ಎನ್ನುತ್ತಾ ವಿದುರನು ಹೇಳಿದನು. "ಯದುವಂಶದ ನಾರಿ, ಶೋಕಿಸಬೇಡ. ನಿನ್ನ ಮಕ್ಕಳು ಮಹಾಬಲಶಾಲಿಗಳು. ಅವರು ನಿಶ್ಚಯವಾಗಿಯೂ ಹಾಳಾಗರು. ಸ್ವಲ್ಪವೇ ಕಾಲದಲ್ಲಿ ಅವರು ಸ್ವರಾಜ್ಯಸ್ಥರಾಗುವರು. ಎಲ್ಲ ಬಂಧುಗಳೊಂದಿಗೂ ಸೇರಿಕೊಳ್ಳುವರು" ಎಂದನು.


ಆಮೇಲೆ ಮಹಾತ್ಮನಾದ ದ್ರುಪದನ ಅನುಮತಿಯಂತೆ, ಪಾಂಡವರು, ಕೃಷ್ಣ ಹಾಗೂ ವಿದುರರು ಕುಂತೀ-ದ್ರೌಪದೀ-ಸಮೇತರಾಗಿ ಸುಖವಾಗಿ ವಿಹರಿಸುತ್ತಾ ಹಸ್ತಿನಾವತಿಯನ್ನು ಸೇರಿದರು. ದ್ರುಪದನಾದರೂ ಗಜಸಹಸ್ರ-ರಥಸಹಸ್ರ-ಅಶ್ವಸಹಸ್ರ-ದಾಸದಾಸೀಸಹಸ್ರಾದಿಗಳನ್ನು ಬಳುವಳಿಯಾಗಿತ್ತು ಕಳುಹಿಸಿಕೊಟ್ಟನು. ಸಾಕ್ಷಾದ್ ಧೃಷ್ಟದ್ಯುಮ್ನನೇ ದ್ರೌಪದಿಯ ಕೈಹಿಡಿದು ನಡೆಸಿದನು.


ವೀರರಾದ ಪಾಂಡವರು ಬಂದ ಸಮಾಚಾರವು ರಾಜಾ ಧೃತರಾಷ್ಟ್ರನನ್ನು ಮುಟ್ಟಿತು. ಅವರನ್ನು ಬರಮಾಡಿಕೊಳ್ಳಲೆಂದು ಕೌರವರನ್ನು ಕಳುಹಿಸಿದನು - ವಿಕರ್ಣ, ಮಹಾಧನುರ್ಧರ ಚಿತ್ರಸೇನ, ವಿಶಿಷ್ಟಧನುಸ್ಸಂಪನ್ನನಾದ ದ್ರೋಣ, ಗೌತಮವಂಶದ ಕೃಪಾಚಾರ್ಯ - ಇವರುಗಳೆಲ್ಲರೂ ಬಂದಿದ್ದರು. ಅವರಿಂದ ಸುತ್ತುವರೆಯಲ್ಪಟ್ಟ ಪಾಂಡವರು, ವೀರರೂ ಮಹಾಬಲರೂ ಆಗಿ ಶೋಭಿಸುತ್ತಿದ್ದವರಾಗಿ, ಹಸ್ತಿನಾಪುರಿಯನ್ನು ಮೆಲ್ಲಮೆಲ್ಲನೆ ಪ್ರವೇಶಿಸಿದರು.


ಪಾಂಡವರು ಬಂದುದನ್ನು ಕೇಳುತ್ತಲೇ ನಗರಜನರು ಕುತೂಹಲಭರಿತರಾದರು. ಊರನ್ನು ಅಲಂಕರಿಸಿದರು. ಎಲ್ಲೆಲ್ಲೂ ಹೂಚೆಲ್ಲಿ ನೀರನ್ನು ಸಿಂಪಡಿಸಿದರು. ದಿವ್ಯಧೂಪಗಳನ್ನು ಹಚ್ಚಿದರು. ನಾನಾಲಂಕಾರಗಳಿಂದ ಕೂಡಿದುದೂ ಉತ್ತುಂಗವಾದ ಬಾವುಟಗಳ ಮೇಲೆ ಹೂಮಾಲೆಗಳುಳ್ಳದ್ದೂ ಆದ ಆ ಪುರವು ಅಪ್ರತಿಮವಾಗಿ ಬೆಳಗಿತು. ಶಂಖಭೇರೀನಾದಗಳೇನು, ನಾನಾವಾದ್ಯಗಳ ಧ್ವನಿಗಳೇನು - ಇವೆಲ್ಲದರಿಂದಲೂ ಊರಿಗೆ ಊರೇ ಬೆಳಗಿತು!


ಇನ್ನು ನರವ್ಯಾಘ್ರರಾದ ಪಾಂಡವರು ಪುರಜನರೊಂದಿಗೆ ಮಾತನಾಡಿಕೊಂಡು ಬರುತ್ತಾ ಹೃದಯಂಗಮವಾದ ಅವರ ಹಲವಾರು ಮಾತುಗಳನ್ನು ಕೇಳಿಸಿಕೊಂಡರು. ಅವರುಗಳ ಮಾತುಗಳು ಹೀಗಿದ್ದವು: ಇದೋ ಯುಧಿಷ್ಠಿರನು ಬರುತ್ತಿದ್ದಾನೆ; ಈ ಪುರುಷವ್ಯಾಘ್ರನು ತನ್ನವರನ್ನು ಹೇಗೋ ಹಾಗೆಯೇ ತನ್ನ ದಾಯಾದರನ್ನೂ ಕಾಪಾಡತಕ್ಕವನು. ಈತನು ಬಂದದ್ದರಿಂದಾಗಿ, ಜನಪ್ರಿಯನಾದ ಪಾಂಡುಮಹಾರಾಜನೇ ಕಾಡಿನಿಂದ ಹಿಂದಿರುಗಿಬಂದಂತಾಗಿದೆ. ನಮಗೆಲ್ಲ ಪ್ರಿಯವನ್ನುಂಟುಮಾಡಲೆಂದೇ ಹಾಗೆ ಬಂದಿರುವಂತಿದೆ. ವೀರರಾದ ಕುಂತೀಪುತ್ರರು ಮತ್ತೆ ನಗರಕ್ಕೆ ಬಂದಿರುವರೆಂದರೆ, ನಮಗೆ ಇದಕ್ಕಿಂತಲೂ ಮತ್ತಿನ್ನಾವ ಪ್ರಿಯವನ್ನು ಮಾಡಲಾದೀತಯ್ಯಾ? ನಾವು ಹಿಂದೆಂದಾದರೂ ದಾನವಿತ್ತಿದ್ದರೆ, ಹೋಮಮಾಡಿದ್ದರೆ, ತಪಸ್ಸನ್ನೇನಾದರೂ ಮಾಡಿದ್ದರೆ, ಪಾಂಡವರಿದೇ ನಗರದಲಿ ನೂರುವರ್ಷಗಳ ಕಾಲ ನಿಲ್ಲಲಿ!


ಬಳಿಕ ಆ ಪಾಂಡವರು ಧೃತರಾಷ್ಟ್ರನಿಗೂ ಭೀಷ್ಮನಿಗೂ ಇನ್ನು ಬೇರೆ ವಂದನೀಯರಿಗೂ ಪಾದಾಭಿವಂದನವನ್ನು ಮಾಡಿದರು. ಪುರಜನರೆಲ್ಲರೊಂದಿಗೆ ಕುಶಲಪ್ರಶ್ನವನ್ನು ಮಾಡಿದರು. ಹಾಗೂ ಧೃತರಾಷ್ಟ್ರನ ಅಪ್ಪಣೆಯಂತೆ ವ್ಯವಸ್ಥಿತವಾಗಿದ್ದ ರಾಜವೇಶ್ಮಗಳೊಳಗೆ ಸೇರಿಕೊಂಡರು. ಕೆಲಕಾಲ ವಿಶ್ರಾಂತಿಯನ್ನು ಪಡೆದುಕೊಂಡರು. ಧೃತರಾಷ್ಟ್ರನೂ ಭೀಷ್ಮನೂ ಆಮೇಲೆ ಪಾಂಡವರನ್ನು ಬರಮಾಡಿಕೊಂಡರು.


ಆಮೇಲೆ ಧೃತರಾಷ್ಟ್ರನು ಹೇಳಿದನು: ಯುಧಿಷ್ಠಿರ, ನಾನೀಗ ಹೇಳುವ ವಿಷಯವನ್ನು ಪಾಂಡವರೊಂದಿಗೆ ಕೇಳಿಸಿಕೋ. ನಿಮ್ಮೊಳಗೆ ಮತ್ತೆ ಕಲಹವಾಗದಿರಲಿ: ಅದಕ್ಕಾಗಿ ಖಾಂಡವಪ್ರಸ್ಥದಲ್ಲಿ ಹೋಗಿ ನೆಲೆಸಿರಿ. ನೀವಲ್ಲಿ ವಾಸಿಸುತ್ತಿರುವಾಗ ನಿಮಗಾರೂ ಬಾಧೆಕೊಡಲಾರರು. ದೇವತೆಗಳನ್ನು ಇಂದ್ರನು ಹೇಗೋ ಹಾಗೆ ನಿಮ್ಮನ್ನು ಅರ್ಜುನನು ಅಲ್ಲಿ ರಕ್ಷಿಸುವವನಾಗುವನು. ಅರ್ಧರಾಜ್ಯವನ್ನು ಸ್ವೀಕರಿಸಿ ನೀವು ಖಾಂಡವಪ್ರಸ್ಥವನ್ನು ಸೇರಿಕೊಳ್ಳಿರಿ.


ಅಲ್ಲದೆ, ವಿದುರನನ್ನು ಸಂಬೋಧಿಸಿ ಹೇಳಿದನು: ವಿದುರ, ಪಟ್ಟಾಭಿಷೇಕದ ಸಂಭಾರಗಳನ್ನು (ಎಂದರೆ ಸಾಮಗ್ರಿಗಳನ್ನು) ತೆಗೆದುಕೊಂಡು ಬಾ. ಈಗಲೇ ಯುಧಿಷ್ಠಿರನನ್ನು ಪಟ್ಟಾಭಿಷಿಕ್ತನನ್ನಾಗಿ ಮಾಡುತ್ತೇನೆ – ಎಂದನು.


ಸೂಚನೆ : 5/5/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.