ಲೇಖಕರು : ಪ್ರೊ. ಕೆ. ಎಸ್. ಕಣ್ಣನ್
ಪ್ರತಿಕ್ರಿಯಿಸಿರಿ (lekhana@ayvm.in)
ಚಿಕ್ಕಂದಿನಲ್ಲೇ ನಮಗೆ ಸತ್ಸಂಸ್ಕಾರಗಳು ದೊರೆಯಬೇಕು. ಆಗಷ್ಟೆ ನಾವು ದೊಡ್ಡವರಾದ ಮೇಲೆ ಸತ್ಪ್ರಜೆಗಳಾಗಲು ಸಾಧ್ಯ. ಆದರೆ ಚಿಕ್ಕಮಕ್ಕಳಾಗಿದ್ದಾಗಲೇ ಸದುಪದೇಶಗಳಾಗುವುದರ ಬದಲು ದುರ್ಬೋಧೆಗಳಾಗಿಬಿಟ್ಟರೆ, ನಮ್ಮ ಚಿಂತನೆಯಲ್ಲಿ ಆ ತಪ್ಪು ಜಾಡೇ ಊರಿಬಿಡುತ್ತದೆ. ನಾವು ದೊಡ್ಡವರಾದ ಮೇಲೂ ನಮ್ಮ ಮನೋಬುದ್ಧಿಗಳು ಆ ಜಾಡನ್ನು ಬಿಡುವುದಿಲ್ಲ. ಗಿಡವಾಗಿದ್ದಾಗ ಬಗ್ಗಿಸದೆ ಮರವಾದ ಮೇಲೆ ಬಗ್ಗಿಸಹೋದರೆ ಶ್ರಮವೂ ಹೆಚ್ಚು, ಸಫಲತೆಯೂ ಕಡಿಮೆ. ಅದು ತಪ್ಪೆಂದು ತಿಳಿದರೂ ತೊರೆಯುವುದು ಕಷ್ಟ. "ಆರ್ಯರು ಹೊರದೇಶದಿಂದ ಬಂದರು" – ಎಂಬುದಾಗಿ ಪಾಠ ಕೇಳಿದ ಮೇಲೆ, ಅದು ವಾಸ್ತವವಲ್ಲವೆಂದು ಯಾರಾದರೂ ತಿಳಿಸಿದರೂ, ಮನಸ್ಸದೇಕೋ ಒಪ್ಪದು. ಬಿಳೀಚರ್ಮದ ಆರ್ಯರು ತಮ್ಮನ್ನೇ ದೇವತೆಗಳೆಂದು ಕರೆದುಕೊಂಡರು – ಎಂದೆಲ್ಲಾ ಬೋಧಿಸಿದ್ದರು! ಆದರೆ ದೇವರೆಂದು ನಾವರ್ಚಿಸುವ ರಾಮನನ್ನಾಗಲಿ ಕೃಷ್ಣನನ್ನಾಗಲಿ ಅವರು ಬೆಳ್ಳಗಿದ್ದರೆಂದು ರಾಮಾಯಣ-ಮಹಾಭಾರತಗಳಲ್ಲಿ ಎಲ್ಲಿಯೂ ಹೇಳಿಲ್ಲ. ಹಾಗೇ ನೋಡಿದರೆ ಶಿವನೇ ಬಿಳಿ! ದ್ರಾವಿಡದೇವ ಕರಿಯನಾಗಿರಬೇಕಾಗಿತ್ತಲ್ಲವೇ? ಹೊರದೇಶದವರ ಬಿಳಿಚರ್ಮ ಇಲ್ಲಿಯವರದು ಕರಿಚರ್ಮ – ಎಂದೆಲ್ಲಾ ಪಾಶ್ಚಾತ್ತ್ಯರು ಹುಟ್ಟಿಸಿದ್ದು ತಮ್ಮ ರಾಜಕೀಯಕ್ಕಾಗಿ – ಎಂಬುದು ಭಾರತೀಯರಿಗೆ ಗೋಚರವಾಗುತ್ತಿರುವುದು ಇತ್ತೀಚೆಗಷ್ಟೆ – ಎಂಬುದನ್ನು ಗಮನಿಸಬೇಕು.
ಕೃಷ್ಣ – ಎಂಬ ಪದಕ್ಕೇ 'ಕಪ್ಪನೆಯ' ಎಂಬರ್ಥವಿದೆಯಷ್ಟೆ. ಕೃಷ್ಣಪಕ್ಷದ ರಾತ್ರಿಯಲ್ಲೇ ಕೃಷ್ಣನು ಹುಟ್ಟಿದ್ದು. ಕೆಲ(ಳ) ಜಾತಿಗಳಲ್ಲಿ 'ಕರಿಯ' 'ಕರಿಯಪ್ಪ' 'ಕರಿಯಣ್ಣ' – ಎಂದೆಲ್ಲಾ ಹೆಸರಿಟ್ಟುಕೊಳ್ಳುವುದುಂಟಷ್ಟೆ? ಅವೆಲ್ಲಕ್ಕೂ ' ಕೃಷ್ಣ' ಎಂದೇ ಆರ್ಥ. ಹೀಗಾಗಿ 'ಕರಿಯ' ಎಂಬ ಹೆಸರು ಮೆಚ್ಚಬೇಕಾದದ್ದೇ ವಿನಾ, ಅದರ ಬಗ್ಗೆ ಕೀಳರಿಮೆ ಪಡಬೇಕಾದದ್ದಿಲ್ಲ. ಕೃಷ್ಣಾರ್ಜುನರು - ಎಂದು ಹೇಳುವಾಗಲೂ ಅರ್ಜುನ - ಎಂಬ ಪದಕ್ಕೆ ಬಿಳಿಯ ಬಣ್ಣವೆಂಬ ಅರ್ಥವಿದೆಯಾದರೂ, ಅರ್ಜುನನ ಬಣ್ಣವೂ ವಾಸ್ತವವಾಗಿ ಕಪ್ಪೇ. "ನನ್ನ ಕರ್ಮವು ಶುಭ್ರವಾದುದರಿಂದ ನಾನು ಅರ್ಜುನ" – ಎಂಬುದು ಆತನದೇ ಮಾತು ಮಹಾಭಾರತದಲ್ಲಿ. ಕೃಷ್ಣ ಎಂಬುದು ಅರ್ಜುನನ ದಶನಾಮಗಳಲ್ಲಿ (ಹತ್ತು ಹೆಸರುಗಳಲ್ಲಿ) ಒಂದು ಕೂಡ. ಹೀಗೆ ಕೃಷ್ಣಾರ್ಜುನರೆಂದರೆ ಇಬ್ಬರು ಕೃಷ್ಣರೆಂದೇ. ವ್ಯಾಸರನ್ನೂ ಸೇರಿಸಿಕೊಂಡರೆ ಮೂರು ಮಂದಿ ಕೃಷ್ಣರಾದರು! ವ್ಯಾಸರಿಗೆ ಕೃಷ್ಣದ್ವೈಪಾಯನರೆಂದೇ ಹೆಸರು. ಮಹಾಭಾರತಕ್ಕೆ ಕಾರ್ಷ್ಣವೇದವೆಂದೇ ಹೆಸರು. ಕರಿಯ(ರಾದ ವ್ಯಾಸರು) ತಂದ ವೇದ - ಎಂದದರ ಅರ್ಥ. ದ್ರೌಪದಿಯ ವರ್ಣವೂ ಕಪ್ಪೇ. ಎಂದೇ ಅವಳ ಮತ್ತೊಂದು ಹೆಸರೇ ಕೃಷ್ಣೆ.
ಕೃಷ್ಣಾದಿಗಳ ಕರಿಯ ಬಣ್ಣವನ್ನು ಕುರಿತು ಇಷ್ಟೊಂದು ಮಾತೇಕೆ? - ಎಂಬ ಪ್ರಶ್ನೆ ಬರಬಹುದು. ಕವಿ ಲೀಲಾಶುಕನು ಒಂದು ಶ್ಲೋಕ ಪೂರ್ತಿ ಕೃಷ್ಣನ ಕಪ್ಪು ಬಣ್ಣವನ್ನೇ ಬಣ್ಣಿಸಿದ್ದಾನೆ! ಅದಕ್ಕಾಗಿಯೇ ಈ ನಿರೂಪಣೆ. ಕೃಷ್ಣನ ಕಪ್ಪು ಬಣ್ಣಕ್ಕೆ ಸರಿಹೋಲುವ ಮೂರು ವಸ್ತುಗಳನ್ನು ಕವಿಯು ತನ್ನ ಕವಿತ್ವದ ಛಾಪಿನೊಡನೆ ನಮ್ಮ ಮುಂದಿಡುತ್ತಾನೆ.
ಆ ಮೂರೆಂದರೆ ಯಮುನೆ-ಮೇಘ-ತಮಾಲಗಳು. ಯಮುನೆಯನ್ನೇ ತನ್ನ ವಾಸಸ್ಥಾನವನ್ನಾಗಿ ಮಾಡಿಕೊಂಡಿದ್ದವನು ಕಾಳಿಯಸರ್ಪ. ಯಮುನೆಯನ್ನು ವಿಷಮಯವನ್ನಾಗಿಸಿ ಎಲ್ಲರಿಗೂ ಭಯವನ್ನೂ ಕ್ಲೇಶವನ್ನೂ ಉಂಟುಮಾಡಿದವನವನು. ಆತನಿಗೆ ತಕ್ಕ ಶಾಸ್ತಿ ಮಾಡಿದವನು ಶ್ರೀಕೃಷ್ಣ. ಶಾಸ್ತಿ ಮಾಡುವುದೆಂದರೂ ಶಾಸನ ಮಾಡುವುದೆಂದರೂ ಒಂದೇ. ಎಂದೇ ಕೃಷ್ಣನನ್ನು "ಕಾಳಿಯಶಾಸನಃ" ಎಂದು ಕರೆಯುವುದು. ಕರಿಯ ಕಾಳಿಯನಿಗೆ ಶಿಕ್ಷೆಯಿತ್ತ ಕೃಷ್ಣನೂ ಕರಿಯನೇ.
ನಮ್ಮೀ ಕಾಳಿಯಶಾಸನನ ಕಪ್ಪು ಬರೀ ಇಜ್ಜಲಗಪ್ಪಲ್ಲ. ಅದು ಹೊಳಪಿನ ಕಪ್ಪು. ಕಪ್ಪು ಬಣ್ಣವನ್ನು ಕಂಡವರಿಗೆ ಕಪ್ಪುಬಣ್ಣವುಳ್ಳ ವಸ್ತುವೂ ಮನಸ್ಸಿಗೆ ಸ್ಫುರಿಸುವುದು. ಈ ಕರಿಯನ ಕಪ್ಪನ್ನು ಕಂಡವರಿಗೆ ತಮಗೆ ಇಷ್ಟವೆನಿಸುವ ಕಪ್ಪಾದ ವಸ್ತುಗಳೇ ಜ್ಞಾಪಕಬರುತ್ತವೆ. ಜ್ಞಾಪಕ ಬರುವುದೇನು, ಒಂದು ಭ್ರಮೆಯೇ ಉಂಟಾಗುತ್ತದೆ, ಎನ್ನುತ್ತಾನೆ ನಮ್ಮ ಕವಿ.
ಕಂಡವರಾರು, ಅವರಿಗಾದ ಭ್ರಮೆಗಳೇನು? - ಎಂಬುದನ್ನು ಕವಿ ಚಿತ್ರಿಸುತ್ತಾನೆ. ಗೋಸಮೂಹವು ಕೃಷ್ಣನನ್ನು ಕಂಡಿತಂತೆ. ಅವುಗಳಿಗೆ ಯಮುನೆಯ ನೀರನ್ನು ಕಂಡಂತಾಯಿತಂತೆ. ಯಮುನೆಯ ನೀರು ಕಪ್ಪಗಿರುವುದು. ಇಂದೂ ಗಂಗಾ-ಯಮುನಾ-ಸಂಗಮದಲ್ಲಿ ಗಂಗೆಯ ಬಿಳಿಬಣ್ಣ ಯಮುನೆಯ ಕರಿಬಣ್ಣಗಳು ಸೇರುವುದನ್ನು ಕಾಣಬಹುದು. ವೇದದಲ್ಲಿ ಕೂಡ ಈ ನದಿಗಳನ್ನು ಸಿತ-ಅಸಿತ-ಸರಿತ್ತುಗಳೆಂದು ಕರೆದಿದೆ. ಸಿತವೆಂದರೆ ಬಿಳಿ. ಅಸಿತವೆಂದರೆ ಕಪ್ಪು. ಹಾಗಿವೆ ಈ ಎರಡು ಸರಿತ್ತುಗಳು,ಅರ್ಥಾತ್ ನದಿಗಳು. ಅಂತೂ ಬಾಯಾರಿದ ಗೋ-ಸ್ತೋಮ (ಎಂದರೆ ಗೋಸಮೂಹ) ಆತನ ಕಪ್ಪನೆಯ ಕಾಂತಿಯನ್ನು ಕಂಡೊಡನೆ ಯಮುನೆಯನ್ನು ಕಂಡಂತಾಗಿ ನೀರಡಿಕೆಯನ್ನು ತೀರಿಸಿಕೊಳ್ಳಲು ಮುಂದಾಯಿತಂತೆ!
ಗೋಸಮೂಹಕ್ಕೆ ಹಾಗಾದರೆ, ಮಯೂರಸಮೂಹಕ್ಕೆ ಮತ್ತೊಂದು ಬಗೆಯ ಭ್ರಮೆಯುಂಟಾಯಿತಂತೆ. ನವಿಲುಗಳಿಗೆಲ್ಲ ತುಂಬ ಇಷ್ಟವಾದ ಕಾಲವೆಂದರೆ ಮಳೆಗಾಲವೇ ಸರಿ. ನವಿಲುಗಳಿಗೆ ತಾಪವು ತಾಳದು. ಅವುಗಳಿಗೆ ತಂಪೇ ಪ್ರಿಯವಾದದ್ದು. ಆಕಾಶದಲ್ಲಿ ಮೋಡಗಳು ಕಾಣಿಸಿಕೊಳ್ಳುತ್ತಿದ್ದಂತೆಯೇ ಅವುಗಳಿಗೆ ಖುಷಿಯೋ ಖುಷಿ. ಬಿಳೀಮೋಡಗಳು ಅವಕ್ಕೆ ಖುಷಿ ಕೊಡವು. ಕಾರ್ಮೋಡಗಳೇ ಅವುಗಳಿಗೆ ಸಂತೋಷವುಕ್ಕಿಸುವುದು. ಆಗಲೇ ಅವುಗಳು ಧ್ವನಿಗೈಯುವುದು, ಗರಿಗೆದರಿ ಕುಣಿಯುವುದು. ಹೀಗಾಗಿ ನೀರುಂಡಮೋಡಗಳ ಸ್ಮರಣೆಯನ್ನು ತರುವ ಕೃಷ್ಣನ ವರ್ಣ ಅವುಗಳ ಮೇಲೆ ಪ್ರಭಾವ ಬೀರುವುದು. ಅದನ್ನು ಮತ್ತೆ ಮತ್ತೆ ನೋಡಬೇಕೆಂಬ ಬಯಕೆಯನ್ನುಕ್ಕಿಸುವುದು. ನವಿಲು ಅದೆಷ್ಟು ಬಣ್ಣಗಳ ಪಕ್ಷಿ! ಅದರ ಕತ್ತಿನ ನೀಲವರ್ಣ ಮೋಹಕವಾದದ್ದೇ ಸರಿ. ಎಂದೇ ನೀಲಕಂಠ - ಎಂಬ ಪದಕ್ಕೆ ನವಿಲೆಂಬ ಅರ್ಥ. ಕೃಷ್ಣನ ಮೈಕಾಂತಿಯನ್ನು ನೀಲಕಂಠಗಳು ಮತ್ತೆ ಮತ್ತೆ ನೋಡಬಯಸುತ್ತವೆ. ಅದುವೇ ನೀಲಮೇಘವೋ - ಎಂಬ ಭ್ರಾಂತಿಯಿಂದಾಗಿ.
ಮೂರನೆಯದಾಗಿ. ಗೋಪಿಕೆಯರ ಮೇಲಾಗುವ ಪ್ರಭಾವ. ತಮಾಲದ ಚಿಗುರು ಗೋಪಿಕೆಯರ ಮುಡಿಯನ್ನೋ ಕಿವಿಯನ್ನೋ ಅಲಂಕರಿಸುವುದು. ತಮಾಲವೆಂದರೆ ಹೊಂಗೆ. ಹೀಗಾಗಿ, ಕೃಷ್ಣನ ಕಪ್ಪು ಕಾಂತಿಯನ್ನು ಕಂಡ ಗೋಪಿಕಾನಾರಿಯರು, ಅದು ತಮಾಲವೆಂದು ಭ್ರಮೆಗೊಂಡು, ಅದರ ಚಿಗುರನ್ನು ಕೀಳಲು ಮುಂದಾಗುವರಂತೆ!
ಹೀಗೆ ಗೋ-ಮಯೂರ-ಗೋಪಿಕೆಗಳೆಂಬ ಮೂರು ಸ್ತೋಮಗಳ ಮೇಲ ಕೃಷ್ಣವರ್ಣಪ್ರಭಾವವಿದೆ. ಕೃಷ್ಣನ ಕಾಂತಿ ಕಮನೀಯವಾದುದು. ಅದು ಎಲ್ಲ ಜೀವಿಗಳನ್ನೂ ತನ್ನತ್ತ ಆಕರ್ಷಿಸುವಂತಹುದು. ಇಲ್ಲಿ ಮೂರರ ಉಲ್ಲೇಖವಿದೆ. ಗೋ-ಮಯೂರಗಳೂ ಗೋಪಿಕೆಯರೂ ಮುಗ್ಧತೆಗೆ ಹೆಸರಾದವರು.
ಪವಿತ್ರವಾದ ಕೃಷ್ಣನ ಕಾಂತಿ ಎಲ್ಲರ ಮೇಲೂ ಪ್ರಭಾವಬೀರುವಂತಹುದು. ಅದು ನಮ್ಮನ್ನು ಪೊರೆಯಲಿ, ಎನ್ನುತ್ತಾನೆ. ಕವಿ. ಶ್ಲೋಕ ಹೀಗಿದೆ:
ಯಾಂ ದೃಷ್ಟ್ವಾ ಯಮುನಾಂ ಪಿಪಾಸುರನಿಶಂ ವ್ಯೂಹೋ ಗವಾಂ ಗಾಹತೇ /
ವಿದ್ಯುತ್ತ್ವಾನಿತಿ ನೀಲಕಂಠನಿವಹೋ ಯಾಂ ದ್ರಷ್ಟುಮುತ್ಕಂಠತೇ |
ಉತ್ತಂಸಾಯ ತಮಾಲಪಲ್ಲವಮಿತಿ ಚ್ಛಿಂದಂತಿ ಯಾಂ ಗೋಪಿಕಾಃ /
ಕಾಂತಿಃ ಕಾಲಿಯಶಾಸನಸ್ಯ ವಪುಷಃ ಸಾ ಪಾವನೀ ಪಾತು ನಃ ||
.ಸೂಚನೆ: ಈ ಲೇಖನವು ವಿಜಯ ಕರ್ನಾಟಕದ ಪತ್ರಿಕೆಯ ಬೋಧಿ ವೃಕ್ಷ ದಲ್ಲಿ 25/5/2024 ರಂದು ಪ್ರಕಟವಾಗಿದೆ.