Sunday, May 26, 2024

ವ್ಯಾಸ ವೀಕ್ಷಿತ 89 ಖಾಂಡವದಲ್ಲಾಯಿತು ವೈಭವದ ತಾಂಡವ (Vyasa Vikshita 89 Khandavadallayitu Vaibhavada Tandava)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)




ಕಾಡಾಗಿದ್ದ ಖಾಂಡವವನ್ನು ಸೊಬಗಿನ ಸೆಲೆಯಾಗಿಸಿದರು, ಪಾಂಡವರು.  ಅದರಿಂದಾಗಿ, ಅಲ್ಲಿಗೆ ಎಲ್ಲ ಬಗೆಯ ಜನರೂ ಬಂದು ನೆಲೆಸಲು ಇಷ್ಟಪಡುವಂತಾಯಿತು.

ಸರ್ವವೇದಗಳನ್ನು ಬಲ್ಲವರಲ್ಲಿ ಶ್ರೇಷ್ಠರೆನಿಸಿದವರು, ಸರ್ವಭಾಷೆಗಳನ್ನು ಬಲ್ಲವರು, ವರ್ತಕರು - ಇವರುಗಳೆಲ್ಲರೂ ಧನಾರ್ಥಿಗಳಾಗಿ (ಎಂದರೆ ಸಂಪತ್ತನ್ನು ಬಯಸುವವರಾಗಿ) ನಾನಾ ದಿಕ್ಕುಗಳಿಂದ ಬಂದರು. ಹಾಗೆಯೇ ನಾನಾ ಶಿಲ್ಪಜ್ಞರೂ (ಎಂದರೆ ನಾನಾ ಕಲಾವಿದರೂ), ಅಲ್ಲಿಗೆ ವಾಸಕ್ಕಾಗಿ ಬಂದರು.

ಅಲ್ಲಿ ಸಜ್ಜುಗೊಂಡ ಉದ್ಯಾನವನಗಳು ಎಷ್ಟು ಸೊಗಸಾಗಿದ್ದವು! ಅಲ್ಲಿಯ ಸಸ್ಯಸಮೃದ್ಧಿ ಹೀಗಿತ್ತು: ಆಮ್ರ (ಮಾವು), ಅಶೋಕ, ಚಂಪಕ (ಸಂಪಿಗೆ), ಪುಂನಾಗ, ನಾಗಪುಷ್ಪ, ಪನಸ (ಹಲಸು), ತಾಲ, ತಮಾಲ, ಕೇತಕ (ಕೇದಗೆ) - ಮುಂತಾದವುಗಳ ಫಲಪುಷ್ಪಗಳಿಂದಾಗಿ ಆ ಮರಗಳು ಬಗ್ಗಿದ್ದವು. ಇವಲ್ಲದೆ ಅಂಕೋಲ, ಜಂಬೂ (ನೇರಳೆ), ಪಾಟಲ, ಕರವೀರ, ಪಾರಿಜಾತ ಮುಂತಾದ ಇನ್ನೂ ಹತ್ತು ಹಲವು ಮರಗಳಿದ್ದವು. (ಒಂದಲ್ಲ ಒಂದು ಮರದಲ್ಲಿ ಹೂಹಣ್ಣುಗಳು ಬಿಡುತ್ತಲೇ ಇದ್ದುದರಿಂದ) ಆ ಮರಗಳು ನಿತ್ಯ-ಪುಷ್ಪಫಲ-ಸಹಿತವಾಗಿದ್ದವು. ಅಷ್ಟೊಂದು ವೃಕ್ಷಸಂಪತ್ತಿದ್ದ ಮೇಲೆ ಪಕ್ಷಿಸಂಪತ್ತಿಗೇನು ಕಡಿಮೆಯೇ? ಮದಿಸಿದ ಬರ್ಹಿಣಗಳು (ಎಂದರೆ ನವಿಲುಗಳು) ಮಾಡುವ ಕೇಕಾಧ್ವನಿ, ಹಾಗೆಯೇ ಮತ್ತು ಬಂದಿದ್ದ ಕೋಗಿಲಗಳ ಇಂಪಾದ ಇಂಚರ - ಇವೆಲ್ಲ ತುಂಬಿದ್ದವು.

ಮನೆಗಳು ಕನ್ನಡಿಯಂತೆ ನಿರ್ಮಲವಾಗಿದ್ದವು. ಅಲ್ಲಿ ಅನೇಕ ಲತಾಗೃಹಗಳಿದ್ದವು. ಮನೋಹರವಾದ ಚಿತ್ರಶಾಲೆಗಳಿದ್ದವು. ಕೃತಕವಾದ ಪರ್ವತಗಳಿದ್ದವು. ಬಗೆಬಗೆಯ ವಾಪಿಗಳು (ಕೊಳಗಳು) ಇದ್ದವು. ಅವಾದರೂ ಉತ್ತಮವಾದ ಜಲದಿಂದ ಕೂಡಿದ್ದವಾಗಿದ್ದವು. ಅತಿರಮ್ಯವಾದ ಸರಸ್ಸುಗಳಿದ್ದವು. ಪದ್ಮಗಳಿಂದಲೂ ಉತ್ಪಲಗಳಿಂದಲೂ ಅವು ಸುಗಂಧಭರಿತವಾಗಿದ್ದವು. ಅಲ್ಲಿಯ ಪಕ್ಷಿಸ್ತೋಮವೂ ಅತಿಶಯವಾಗಿದ್ದಿತು. ಹಂಸಗಳು, ಕಾರಂಡವಗಳು, ಚಕ್ರವಾಕಗಳು - ಇವೆಲ್ಲ ಇದ್ದು ಅವು ಕಳೆಕಟ್ಟಿದ್ದವು. ಸುತ್ತಲಲ್ಲಿ ವನಸಂನಿವೇಶವಿರುವ ಪುಷ್ಕರಿಣಿಗಳೂ ಹಲವಿದ್ದವು. ದೊಡ್ಡದಾದ ಹಾಗೂ ರಮಣೀಯವಾದ ತಟಾಕಗಳೂ ಹಲವಿದ್ದವು.

ಅನೇಕ ಪುಣ್ಯಾತ್ಮರು ಆ ರಾಷ್ಟ್ರದಲ್ಲಿ ನೆಲೆಸಿದ್ದರಾಗಿ ಪಾಂಡವರ ಸಂತೋಷಕ್ಕೆ ಪಾರವೇ ಇಲ್ಲವಾಯಿತು. ಅಂತೂ ಭೀಷ್ಮ-ಧೃತರಾಷ್ಟ್ರರು ಧರ್ಮಾನುಸಾರ ವ್ಯವಸ್ಥೆಮಾಡಲಾಗಿ, ಪಾಂಡವರಂತೂ ಖಾಂಡವಪ್ರಸ್ಥದಲ್ಲಿಯೇ ನೆಲೆಗೊಂಡರು.

ಪಾಂಡವರೊಬ್ಬೊಬ್ಬರೂ ಮಹಾಧನುರ್ಧಾರಿಗಳು, ಒಬ್ಬೊಬ್ಬರೂ ಇಂದ್ರನಂತಿದ್ದವರು. ಅವರುಗಳಿಂದಾಗಿ ಆ ಶ್ರೇಷ್ಠನಗರವು ಶೋಭಿಸಿತು - ನಾಗಗಳಿಂದ ಕೂಡಿದ ಭೋಗವತೀನಗರಿಯು ಹೇಗೆ ಶೋಭಿಸುವುದೋ ಹಾಗೆ. ಎಲ್ಲವೂ ವ್ಯವಸ್ಥೆಗೊಂಡಿರಲು ಪಾಂಡವರ ಅನುಮತಿಯನ್ನು ಪಡೆದವನಾಗಿ, ಕೃಷ್ಣನು ಬಲರಾಮನೊಂದಿಗೆ ದ್ವಾರವತಿಗೆ ತೆರಳಿದನು.

ಜನಮೇಜಯ-ವೈಶಂಪಾಯನರ ಸಂಭಾಷಣೆಯಾಗಿ ಮಹಾಭಾರತ ಕಥೆಯು ನಿರೂಪಣೆಗೊಳ್ಳುತ್ತಿದೆಯಷ್ಟೆ. ಜನಮೇಜಯನು ಪ್ರಚ್ಛಕ. ವೈಶಂಪಾಯನರು ಭಾರತವೃತ್ತಾಂತವನ್ನು ಬಲ್ಲವರು. ಜನಮೇಜಯನ ಪ್ರಶ್ನೆ ಈ ಸಂದರ್ಭದಲ್ಲಿ ಹೀಗೆ ಬರುತ್ತದೆ: ಇಂದ್ರಪಸ್ಥದಲ್ಲಿ ನೆಲೆಸಿದ ಪಾಂಡವರು ಮುಂದೇನು ಮಾಡಿದರು? ಧರ್ಮಪತ್ನಿಯೆನಿಸಿದ ದ್ರೌಪದಿಯು ಅವರೆಲ್ಲರನ್ನೂ ಹೇಗೆ ಅನುಸರಿಸಿದಳು? ಒಬ್ಬಳಲ್ಲೇ ಅನುರಕ್ತರಾದ ಈ ಐವರಾದರೂ ಹೇಗೆ ಒಡಕಿಲ್ಲದೆ ಇದ್ದರು? ಅವರಲ್ಲೇ ಪರಸ್ಪರವರ್ತನೆಯೆಂಬುದು ಹೇಗಿದ್ದಿತು?

ಕಥೆಯನ್ನು ಮುಂದುವರೆಸಿದ ವೈಶಂಪಾಯನರು ಹೇಳಿದರು: ಖಾಂಡವಪ್ರಸ್ಥರಾಜ್ಯವನ್ನು ಧೃತರಾಷ್ಟ್ರನಿಂದ ಪಡೆದ ಪಾಂಡವರು ಕೃಷ್ಣೆಯೊಂದಿಗೆ ಸಂತೋಷದಿಂದಿದ್ದರು. ಸತ್ಯಸಂಧನಾದ ಯುಧಿಷ್ಠಿರನು ತನ್ನ ಭ್ರಾತೃಗಳೊಂದಿಗೆ ಭೂಮಿಯನ್ನು ಧರ್ಮದಿಂದಲೇ ಪಾಲಿಸಿದನು. ಸತ್ಯಧರ್ಮಗಳೇ ಪಾಂಡವರ ಜೀವನಸೂತ್ರವಾಗಿದ್ದಿತು.

ಸೂಚನೆ : 26/5/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.