Monday, May 20, 2024

ಕೃಷ್ಣಕರ್ಣಾಮೃತ - 14 ಕಿರಿದಾದ ಚೇತಸ್ಸಿನಲ್ಲಿ ಹಿರಿದಾದ ತೇಜಸ್ಸು Kiridada Chetassinalli Hiridada Tejassu

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)



ನಮಗೆಲ್ಲ ತಿಳಿದಿರುವಂತೆ ಇಂದ್ರಿಯಗಳು ಐದು: ಕಣ್ಣು, ಕಿವಿ, ಮೂಗು, ನಾಲಿಗೆ, ಮತ್ತು ಚರ್ಮ. ಅವುಗಳ ವಿಷಯಗಳೂ ಐದು: ರೂಪ, ಶಬ್ದ, ಗಂಧ, ರಸ, ಹಾಗೂ ಸ್ಪರ್ಶ. ಈ ಐದನ್ನೂ ಅಮರಕೋಶವು ಒಟ್ಟಿಗೆ ಪಟ್ಟಿಮಾಡುತ್ತದೆ: ರೂಪಂ ಶಬ್ದೋ ಗಂಧರಸೌ ಸ್ಪರ್ಶಶ್ಚ ವಿಷಯಾ ಅಮೀ - ಎಂದು. ನಾವು ಎಚ್ಚರವಾಗಿರುವಾಗೆಲ್ಲ ನಮ್ಮ ಮನಸ್ಸು ಸಾಮಾನ್ಯವಾಗಿ ಈ ಐದರಲ್ಲೇ ಮುಳುಗಿರುತ್ತದೆ. (ಕನಸಿನಲ್ಲಿಯೂ ಇವುಗಳ ಛಾಯೆಗಳೇ).

ಇವು ಕೆಟ್ಟವೆಂದಲ್ಲ; ಆದರೆ ಮನಸ್ಸು ಸದಾ ಇವಲ್ಲೇ ಮಗ್ನವಾಗಿದ್ದರೆ ಒಳಿತಲ್ಲ. ಅತಿಯಾದರೆ ಅಮೃತವೂ ವಿಷವಾದೀತು – ಎನ್ನುವರಲ್ಲವೇ? ಹಾಗಿರಲು, ಈ ಐದು ವಿಷಯಗಳು ಅತಿಯಾದರೆ ತೊಂದರೆಯೇ.

ಅಷ್ಟೇ ಅಲ್ಲ. ಇವುಗಳಲ್ಲೂ ಸೇವ್ಯ-ಅಸೇವ್ಯ ಎಂಬ ವಿಭಾಗವೂ ಬೇಕಾದದ್ದೇ. ದೈಹಿಕ ಆರೋಗ್ಯದ ಬಗ್ಗೆ ನಮ್ಮ ಪ್ರವೃತ್ತಿಯು ಹೇಗೋ, ಹಾಗೆಯೇ ಮಾನಸಿಕ-ಆತ್ಮಿಕ ಆರೋಗ್ಯದ ಬಗ್ಗೆಯೂ: ಯಾವುದು ಕೆಟ್ಟದ್ದೋ ಅದೇ ಕೆಲವೊಮ್ಮೆ ಹೆಚ್ಚು ರುಚಿಯೆನಿಸಿಬಿಡುವುದೂ ಉಂಟು! ಅಷ್ಟೇ ಅಲ್ಲ. ಹೇಗೆ ಚಿಕ್ಕಂದಿನ ಪುಟ್ಟ ಆಸೆಗಳು ತಾರುಣ್ಯದಲ್ಲಿ ರುಚಿಸವೋ, ಹಾಗೆ ಇಲ್ಲೂ ಪಕ್ವತೆಗೆ ಆಸ್ಪದವುಂಟು. ಆದರೂ ನಮ್ಮ ಮನಸ್ಸು ಎಷ್ಟೋ ವೇಳೆ ಕ್ಷುದ್ರವೋ ಸಾಧಾರಣವೋ ಆದುದರಲ್ಲಿ/ಲ್ಲೇ ರುಚಿ ಕಾಣುತ್ತದೆ! ಹಳೆಯ ವಾಸನೆಗಳು ಸುಲಭವಾಗಿ ಬಿಟ್ಟುಬಿಡುವುವೇ?

ಆತ್ಮೋನ್ನತಿಯ ದೃಷ್ಟಿಯಿಂದ ನೋಡಿದಾಗ ನಾವು ಸಾಧಾರಣವಾಗಿ ಬಯಸುವ ಅಥವಾ ಬಳಸುವ ವಿಷಯಸುಖಗಳು ಬಹುತೇಕ ವಿಷಾಮಿಷಗಳೇ ಆಗಿರುತ್ತವೆ. (ಆಮಿಷವೆಂದರೆ ಮಾಂಸ; ಹುಲಿ-ಚಿರತೆ ಮುಂತಾದ ಕಾಡುಪ್ರಾಣಿಗಳನ್ನು ಹಿಡಿಯುವುದಕ್ಕಾಗಿ ಆಮಿಷವನ್ನೊಡ್ಡಿ ಸೆಳೆದು ಅವು ಬೋನಿನಲ್ಲಿ ಸಿಲುಕಿಕೊಳ್ಳುವಂತೆ ಮಾಡುವುದುಂಟು. ಹೀಗೆ ಯಾರಿಗಾದರೂ ಪ್ರಲೋಭನೆಯನ್ನುಂಟುಮಾಡಲು ಬಳಸುವ ವಸ್ತುವನ್ನು ಸಹ ಆಮಿಷವೆನ್ನುವರು. ಹೀಗಾಗಿ ಆಮಿಷವೆಂಬ ಪದಕ್ಕೆ ಎರಡು ಅರ್ಥಗಳು - ಮಾಂಸ ಮತ್ತು ಲೋಭವುಂಟುಮಾಡುವ ವಸ್ತು - ಎಂದು). ಯಾವ ಆಮಿಷಕ್ಕೆ ಒಂದಿಷ್ಟು ವಿಷವನ್ನೂ ಸೇರಿಸಲಾಗಿದೆಯೋ, ಅಥವಾ ಯಾವುದು ಒಟ್ಟಿನಲ್ಲಿ ವಿಷಮಯವೋ, ಅಂತಹ ಆಮಿಷವನ್ನು ವಿಷಾಮಿಷವೆನ್ನುತ್ತಾರೆ.

ಲೀಲಾಶುಕನು ಹೇಳುವುದು ಹೀಗೆ: ಮೇಲೆ ಹೇಳಿದ ಇಂದ್ರಿಯವಿಷಯಗಳೇನುಂಟೋ ಅವು ವಿಷಾಮಿಷಗಳೇ ಸರಿ. ಆದರೆ ನಮ್ಮ ಮನಸ್ಸು ಸ್ತಿಮಿತವಿಲ್ಲದ್ದು (ಸ್ಥಿಮಿತವೆನ್ನುವುದು ತಪ್ಪು; ಸ್ತಿಮಿತವೆಂದು ಅಲ್ಪಪ್ರಾಣವನ್ನೇ ಹೇಳಬೇಕು): ತಿಳಿದೂ ತಿಳಿದೂ ತಪ್ಪೆಸಗುವುದುಂಟು. ವಿಷಯಗಳು ವಿಷಾಮಿಷಗಳೆಂದು ಗೊತ್ತಿದ್ದೂ ಅವುಗಳನ್ನು ಗ್ರಸಿಸುವುದರಲ್ಲಿ ಗೃಧ್ನುವಾಗಿರುತ್ತದೆ, ನಮ್ಮ ಮನಸ್ಸು. ಏನು ಹಾಗೆಂದರೆ? ಗ್ರಸಿಸುವುದು ಎಂದರೆ ಸ್ವೀಕರಿಸುವುದು, ಸೇವಿಸುವುದು; ಅಥವಾ ಇನ್ನೂ ಹೆಚ್ಚಾಗಿ, "ಸಿಕ್ಕೊಡನೆ ಗಬಕ್ಕನೆ ಬಾಯಿಗೆ ಹಾಕಿಕೊಳ್ಳುವುದು". ಇಂತಹ ಗ್ರಸನ-ಕಾರ್ಯದ ವಿಷಯದಲ್ಲಿ ತೀರದ ಬಯಕೆಯುಳ್ಳದ್ದು. ಗೃಧ್ನು ಎಂದರೆ ಆಸೆಬುರುಕ, ಹಪಹಪಿಸುವನು. ನಮ್ಮ ಚೇತಸ್ಸು ಗೃಧ್ನು. ಅಂತೂ, ನಮ್ಮ ಚಿತ್ತವು ಹೀಗೆ ವಿಷಯ-ವಿಷಾಮಿಷ-ಗ್ರಸನ-ಗೃಧ್ನು! ದೊಡ್ಡಪದವೇ ಆಯಿತು!

ಹಾಗಿರುವ ನನ್ನ ಮನಸ್ಸಿನಲ್ಲೂ ಶ್ರೀಕೃಷ್ಣನು ಚಿರಕಾಲ ಸ್ಫುರಿಸಲಿ! - ಎಂಬ ಪ್ರಾರ್ಥನೆ, ಲೀಲಾಶುಕನದು. ಕೆಟ್ಟದ್ದೆಲ್ಲ ಪೂರ್ತಿಯಾಗಿ ಕಳೆಯುವ ತನಕ ಒಳ್ಳೆಯದಕ್ಕೆ ಎಡೆಯೆಲ್ಲಿ? - ಎಂದು ಚಿಂತಿಸುವವರುಂಟು. ಆದರೆ ಶ್ರೀರಂಗಮಹಾಗುರುಗಳ ನಿಲುವು ಹಾಗಿರಲಿಲ್ಲ. ಒಳ್ಳೆಯದರತ್ತ ಮನಸ್ಸನ್ನು ಹೆಚ್ಚುಹೆಚ್ಚಾಗಿ ಹರಿಸುತ್ತಿದ್ದರೆ ಅದುವೇ ಕಾಲಕ್ರಮದಲ್ಲಿ ದೃಢವಾಗಿಕೊಳ್ಳುತ್ತದೆ; ಪರಿಣಾಮವಾಗಿ, ಒಳಿತಲ್ಲದ್ದು ಬರಬರುತ್ತಾ ಶಿಥಿಲವಾಗಿ ತಾನಾಗಿ ಕಳಚಿಹೋಗುವ ಪರಿಯೂ ಒಂದುಂಟು. ಆ ಬಗೆಯ ಸಫಲತೆಯನ್ನೂ ಅವರು ಸೂಚಿಸಿದ್ದುಂಟು. ಇಲ್ಲಿ ಲೀಲಾಶುಕನು ಕೇಳಿಕೊಳ್ಳುತ್ತಿರುವುದೂ ಆ ಪರಿಯೇ. ತನ್ನ ಮನಸ್ಸು ವಿಷಯಗಳಿಂದ ಕಲುಷಿತವಾಗಿದ್ದರೂ, ಕೃಷ್ಣನು ತೋರಿಕೊಳ್ಳಲಿ ಎಂಬ ಪ್ರಾರ್ಥನೆ ಆತನದು.

ಇಲ್ಲಿ ಶ್ರೀಕೃಷ್ಣನನ್ನು ಕೃಷ್ಣನೆಂದೇ ಹೆಸರಿಸದೆ ಧಾಮವೆಂದು ಕರೆದಿದೆ. ಧಾಮವೆಂದರೆ ಸ್ಥಾನ, ಎಡೆ - ಎಂಬುದು ಪ್ರಸಿದ್ಧಾರ್ಥ. ಆದರೆ ಧಾಮವೆಂಬುದಕ್ಕೆ ತೇಜಸ್ಸೆಂಬ ಅರ್ಥವೂ ಇದೆ. (ಬೇರೆ ಇನ್ನೊಂದೆರಡು ಅರ್ಥಗಳೂ ಉಂಟು, ಅವು ಅಷ್ಟು ಪ್ರಸಿದ್ಧವಲ್ಲ). ಇಲ್ಲಿ ತೇಜಸ್ಸೆಂಬ ಅರ್ಥವೇ ಪ್ರಕೃತ.

ಯಾವುದಾದರೂ ವಸ್ತು ಅದ್ಭುತವಾಗಿದ್ದರೆ ಅದನ್ನು 'ಕಿಮಪಿ' ಎನ್ನುವುದುಂಟು: ಅಂದರೆ ಹೀಗೆಂದು ಹೇಳಲಾಗದ್ದು ಎಂದರ್ಥ. ಹೀಗಾಗಿ, ಕೃಷ್ಣನು ಒಂದು ಅದ್ಭುತವಾದ ತೇಜಸ್ಸೇ ಸರಿ. ಒಟ್ಟಿನಲ್ಲಿ ವರ್ಣಿಸಲಾಗದ್ದೆಂದಾದರೂ ಅದರ ಹಿರಿಮೆಯನ್ನು ಕುರಿತು ನಾಲ್ಕು ಮಾತನ್ನಾದರೂ ಆಡಲೇಬೇಕು - ಎಂಬ ಚಾಪಲ್ಯದಿಂದ ಕವಿಯು ಅದಕ್ಕೆ ನಾಲ್ಕು ವಿಶೇಷಣಗಳನ್ನು ಕೊಟ್ಟಿದ್ದಾನೆ.

ಕೃಷ್ಣನೆಂಬ ಆ ತೇಜಸ್ಸು ಸುಂದರವಾದ ಮುಖಕಮಲವನ್ನು ಹೊಂದಿದೆ. ಅಂಬುರುಹವೆಂದರೆ ಕಮಲ (ಅಂಬುವೆಂದರೆ ನೀರು. ಅಲ್ಲೇ ಬೆಳೆಯುವುದು ಅಂಬುರುಹ). ಪದ್ಮಕ್ಕೆ ಕಳೆಕೊಟ್ಟಿರುವುದು ಮುಖದಲ್ಲಿಯ ಸ್ಮಿತ. ಸ್ಮಿತವೆಂದರೆ ಮುಗುಳ್ನಗೆ. ಬಾಯಿಬಿಟ್ಟುಕೊಂಡು ನಗುವುದಕ್ಕೆ ಸ್ಮಿತ ಎನ್ನುವುದಿಲ್ಲ. ಸ್ಮಿತವೆಂಬುದು 'ಅಲಕ್ಷಿತ-ದ್ವಿಜ'ವಾಗಿರುತ್ತದೆ. ಹಾಗೆಂದರೆ ಹಲ್ಲುಗಳು ಕಾಣಿಸದ್ದು. ಅಂತಹ ನಗೆಯದು. ಆ ಮುಗುಳ್ನಗೆಯ ಸಮಯದಲ್ಲಿ ಕಪೋಲಗಳು (ಎಂದರೆ ಕೆನ್ನೆಗಳು) ಕಿಂಚಿತ್ತಾಗಿ ವಿಕಸಿತವಾಗಿರುತ್ತವೆ. ಇಂತಹ ಸ್ಮಿತವು ಅತ್ಯಂತಮಧುರವಾದದ್ದು; ಎಂದೇ ಅದನ್ನು ಸ್ಮಿತಾಮೃತ - ಎನ್ನಲಾಗುತ್ತದೆ. ಅಮೃತದಂತಿರುವ ಸ್ಮಿತವೇ ಸ್ಮಿತಾಮೃತ. ಇದು ಮೊದಲ ವಿಶೇಷಣ.

ಎರಡನೆಯದಾಗಿ ಶ್ರೀಕೃಷ್ಣನ ಕಚಪ್ರಚಯವು ಮನೋಜ್ಞವಾಗಿದೆ. ಕಚ-ಪ್ರಚಯವೆಂದರೆ ಕೇಶರಾಶಿ. ಅದು ಸಹಜವಾಗಿಯೇ ಮನೋಜ್ಞ. ಅದರ ಮನೋಜ್ಞತೆಯು ಎದ್ದು ಕಾಣುವಂತೆ ಮಾಡಿರುವುದು ಅದರ ಮೇಲಿನ ಶಿಖಿ-ಪಿಚ್ಛ - ಎಂದರೆ ನವಿಲುಗರಿ. ನವಿಲುಗಳಿಗೆ ಶಿಖೆಯಿರುವುದರಿಂದ ನವಿಲನ್ನು ಶಿಖಿಯೆಂದು ಕರೆಯುತ್ತಾರೆ. ಗರಿಗೆದರಿ ಕುಣಿಯುವುದು ಗಂಡುನವಿಲೇ ವಿನಾ ಹೆಣ್ಣುನವಿಲಲ್ಲ: ಮಯೂರವೇ ವಿನಾ ಮಯೂರಿಯಲ್ಲ. ಮತ್ತು ಮದವೇರಿದಾಗಲೇ ಮಯೂರದ ನರ್ತನವೂ.

ತುಂಬು ಯೌವನದಲ್ಲಿಯೇ ಪ್ರಾಣಿಗಳಿಗೆ ಮತ್ತೇರುವುದು. ಆ ಅವಸ್ಥೆಯಲ್ಲಿಯೇ ಶರೀರದ ಸರ್ವಾಂಗದಲ್ಲಿಯೂ ಕಾಂತಿಯು ಕಳೆಕಟ್ಟುವುದು. ಮದದಲ್ಲಿರುವ ನವಿಲಿಗೇ ಸೊಂಪಾಗಿ ಗರಿಗಳೇಳುವುದು. ಅದು ಮದಿಸಿ ನರ್ತಿಸುವಾಗ ಉದುರಿದ ಗರಿಯೂ ಕಾಂತಿಭರಿತವಾಗಿರುವುದು. ಕಳಕಳಿಸುವ ಗರಿಯು ಒತ್ತಾದ ಕೇಶಪಾಶಕ್ಕೂ ಒಂದು ಮೆರುಗು ತರುವುದು. (ಕೇಶಪಾಶವೆಂದರೆ ಕೇಶಕಲಾಪ, ಕೇಶರಾಶಿ).

ಇದಲ್ಲದೆ, ಮೂರನೆಯದಾಗಿ, ಆತನ ಕಣ್ಣುಗಳು ಅಗಲವಾಗಿವೆ. ಬೊಗಸೆಗಣ್ಣವನಲ್ಲವೇ ನಮ್ಮ ಕೃಷ್ಣ?

ಒಟ್ಟಿನಲ್ಲಿ ಈ ಶ್ಲೋಕವು ಕೃಷ್ಣನ ಮುಖಪದ್ಮ, ಗರಿಯುಳ್ಳ ಕೇಶರಾಶಿ, ವಿಪುಲನೇತ್ರ – ಎಂಬೀ ಮೂರನ್ನು ವರ್ಣಿಸಿ, ಆತನನ್ನು ಒಂದು ವಿಶಿಷ್ಟ-ತೇಜಸ್ಸೆಂದು ಚಿತ್ರಿಸಿದೆ.

ಒಟ್ಟಿನಲ್ಲಿ, ತನಗೆ ಭೋಗದತ್ತ ಸೆಳೆತವು ಬಿಟ್ಟಿಲ್ಲವಾದರೂ, ಕ್ಷೀಣವಾಗಿಲ್ಲವಾದರೂ - ವಾಸ್ತವವಾಗಿ ಪ್ರಬಲವಾಗಿಯೇ ಇದೆಯೆನಿಸಿದರೂ - ಅತ್ತ ಪರತತ್ತ್ವದತ್ತ ಇರುವ ಸೆಳೆತವೂ ಉತ್ಕಟವಾಗಿಯೇ ಇದೆ, ಎನ್ನುತ್ತಾನೆ ಲೀಲಾಶುಕ.

ಶ್ಲೋಕ ಹೀಗಿದೆ:
ಮಧುರತರ-ಸ್ಮಿತಾಮೃತ-ವಿಮುಗ್ಧ-ಮುಖಾಂಬುರುಹಂ
  ಮದ-ಶಿಖಿ-ಪಿಚ್ಛ-ಲಾಂಛಿತ-ಮನೋಜ್ಞ-ಕಚ-ಪ್ರಚಯಂ |
ವಿಷಯ-ವಿಷಾಽಮಿಷ-ಗ್ರಸನ-ಗೃಧ್ನುನಿ ಚೇತಸಿ ಮೇ
          ವಿಪುಲ-ವಿಲೋಚನಂ ಕಿಮಪಿ ಧಾಮ ಚಕಾಸ್ತು ಚಿರಂ ||

.ಸೂಚನೆ: ಈ ಲೇಖನವು ವಿಜಯ ಕರ್ನಾಟಕದ ಪತ್ರಿಕೆಯ ಬೋಧಿ ವೃಕ್ಷ ದಲ್ಲಿ 18/5/2024 ರಂದು ಪ್ರಕಟವಾಗಿದೆ.