Monday, May 27, 2024

ಸಂಸ್ಕೃತ ಭಾಷೆಯೇ ಎಲ್ಲವೂ ಅಲ್ಲ, ಸಂಸ್ಕೃತ ಭಾಷೆಯಲ್ಲಿ ಎಲ್ಲವೂ. (Sanskrta Bhaseye Ellavu Alla, Sanskrta Bhaseyalli Ellavu.)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)



ಸಂಸ್ಕೃತಭಾಷೆ ಅತ್ಯಂತ ಪ್ರಾಚೀನವಾದ ಭಾಷೆ. ಇದರಲ್ಲಿ ಎಲ್ಲ ರೀತಿಯಾಗಿರುವ ಸೌಲಭ್ಯ ಇದೆ. ಈ ಭಾಷೆಯ ವ್ಯಾಕರಣ ಅತ್ಯಂತ ಅಚ್ಚು ಕಟ್ಟು. ಇಲ್ಲಿರುವ ಶಬ್ದ ಭಂಡಾರ ಅಸೀಮವಾದದ್ದು. ಒಂದು ಶಬ್ದಕ್ಕೆ ಅನೇಕ ಅರ್ಥಗಳು; ಅನೇಕ ಅರ್ಥವನ್ನು ಹೇಳುವ ಒಂದು ಶಬ್ದ; ಹೀಗೆ ಅನೇಕ ವೈಶಿಷ್ಟ್ಯದಿಂದ ಕೂಡಿರುವ ಭಾಷೆ ಇದಾಗಿದೆ. ಇದು ಯಾವುದೋ ಒಂದು ಪ್ರದೇಶಕ್ಕೋ ಅಥವಾ ಯಾವುದೋ ಒಂದು ದೇಶಕ್ಕೋ ಸೀಮಿತವಾದ ಭಾಷೆಯಲ್ಲ. ಅದಕ್ಕಾಗಿ ಈ ಭಾಷೆಗೆ ಸಂಸ್ಕೃತಭಾಷೆ ಎಂದು ಮಾತ್ರ ಹೇಳಲಾಗಿದೆ. ಉಳಿದ ಭಾಷೆಗಳಿಗಾದರೋ ಪ್ರಾದೇಶಿಕವಾದ ಹೆಸರನ್ನೇ ಆ ಭಾಷೆಗೆ ಇಡಲಾಗಿದೆ. ಕರ್ನಾಟಕದಲ್ಲಿ ಆಡುವ ಭಾಷೆ ಕನ್ನಡ; ತಮಿಳುನಾಡಿನಲ್ಲಿ ಆಡುವ ಭಾಷೆ ತಮಿಳು; ಮಹಾರಾಷ್ಟ್ರದಲ್ಲಿ ಆಡುವ ಭಾಷೆ ಮರಾಠಿ, ಹಿಂದುಸ್ತಾನದಲ್ಲಿ ಮಾತನಾಡುವ ಭಾಷೆ ಹಿಂದಿ; ಫ್ರಾನ್ಸ್ ಅಲ್ಲಿ ಮಾತನಾಡುವ ಭಾಷೆ ಫ್ರೆಂಚ್; ಇಂಗ್ಲೆಂಡ್ನಲ್ಲಿ ಮಾತನಾಡುವ ಭಾಷೆ ಇಂಗ್ಲಿಷ್; ಇತ್ಯಾದಿಯಾಗಿ ಎಲ್ಲ ಭಾಷೆಗಳಿಗೂ ಆ ಆ ದೇಶದ ನಂಟು ಇರುವುದು ಕಂಡುಬರುತ್ತದೆ.

ಆದರೆ ಈ ಭಾಷೆಗೆ ಸಂಸ್ಕೃತಭಾಷೆ ಎಂದಿಷ್ಟೇ ಇದೆ. ಹಾಗಾದರೆ ಇದು ಯಾವ ದೇಶದ ಭಾಷೆಯು ಅಲ್ಲವೋ? ಅಥವಾ ಇದು ಒಂದು ಭಾಷೆಯೇ ಅಲ್ಲವೋ? ಮಾತನಾಡುವ ಭಾಷೆಯೇ ಅಲ್ಲವೋ? ಅಥವಾ ಯಾವುದೇ ದೇಶದಲ್ಲೂ ಈ ಭಾಷೆ ಬಳಕೆಯೇ ಇಲ್ಲವೋ? ಎಂಬ ಅನೇಕ ಸಂದೇಹಗಳು ಬರುವುದುಂಟು. ಆದರೆ ಈ ಸಂದೇಶಕ್ಕೆಲ್ಲ ಪರಿಹಾರ ಇಷ್ಟೇ ಇದು 'ಸಂಸ್ಕೃತಭಾಷೆ' ಎಂಬುದಾಗಿ. ಅಂದರೆ ಇದಕ್ಕೆ ಎಲ್ಲ ದೇಶಗಳಿಗೂ ಎಲ್ಲ ಕಾಲಕ್ಕೂ ಹೊಂದುವಂತಹ ಭಾಷೆ. ಆದ್ದರಿಂದ ಇದಕ್ಕೆ ಸಂಸ್ಕೃತಭಾಷೆ ಎಂದಿಷ್ಟು ಮಾತ್ರ ಹೇಳಲು ಸಾಧ್ಯ. 'ಸಂಸ್ಕೃತ' ಎಂದರೆ ಚೆನ್ನಾಗಿ ಮಾಡಿದ್ದು ಎಂದರ್ಥ. ಭಾಷೆಯನ್ನು ನಾವು ಭಾವದ ಅಭಿವ್ಯಕ್ತಿಗೆ ಬಳಸುವುದುಂಟು. ಭಾವಾಭಿವ್ಯಕ್ತಿಗೆ ಅತ್ಯಂತ ಸ್ಪಷ್ಟವಾದ ಸಾಧನ ಭಾಷೆ. ಆದ್ದರಿಂದ ಇದಕ್ಕೆ 'ಸಂಸ್ಕೃತಭಾಷೆ' ಎಂಬುದಾಗಿ ಕರೆಯಲಾಗಿದೆ. 

ಯಾವುದೇ ಭಾಷೆಯಾದರೂ ಅದರ ಹುಟ್ಟಿನ ಹಿಂದೆ, ಅದರ ಮಹತ್ತ್ವವು ಅಡಗಿದೆ. ಈ ಭಾಷೆಯ ಹುಟ್ಟು ಎಲ್ಲಿಂದ ಇದೆ? ಎಂದರೆ ಇದು ಹುಟ್ಟಿದ್ದಲ್ಲ. ಹಾಗಾಗಿ ಇದಕ್ಕೆ ಸಾವು ಇಲ್ಲ. ಯಾವಾಗ ಸೃಷ್ಟಿಯಾಯಿತೋ ಅಂದಿನಿಂದಲೇ ಈ ಭಾಷೆಯೂ ಕೂಡ ಬಂದಿತು. ಭಗವಂತ ಯಾವಾಗ ಸೃಷ್ಟಿಯನ್ನು ಮಾಡಿದನೋ, ಈ ಸೃಷ್ಟಿ ಎಲ್ಲಿಯವರೆಗೆ ಮುಂದುವರೆದುಕೊಂಡು ಹೋಗುವುದೋ ಈ ವಿಷಯವನ್ನು ಆಧರಿಸಿ ಈ ಭಾಷೆ ನಿಂತಿದೆ. ಸೃಷ್ಟಿ ನಿರಂತರ ಪ್ರಕ್ರಿಯೆ. ಹಾಗಾಗಿ ಈ ಭಾಷೆಯು ಕೂಡ. ಈ ಭಾಷೆಗೆ ಅಷ್ಟು ವಿಸ್ತಾರವಾದ ವ್ಯಾಪ್ತಿ ಇದೆ. ಇದು ಕೇವಲ ಭೌತಿಕವಾದ ವಿಷಯವನ್ನು ಮಾತ್ರ ತಿಳಿಸಲು ಬಂದಿದ್ದಲ್ಲ. ಇದು ದೈವಿಕಪ್ರಪಂಚದ ಮತ್ತು ಆಧ್ಯಾತ್ಮಿಕ ಪ್ರಪಂಚವನ್ನು ಕೂಡ ತಿಳಿಸುವ ಸಾಧನವಾಗಿದೆ. ಈ ಭಾಷೆಯು ಎಲ್ಲವನ್ನು ತನ್ನಲ್ಲಿ ಅಡಗಿಸಿಕೊಂಡಿದೆ. ಸಂಸ್ಕೃತ ಭಾಷೆ ತಿಳಿದರೆ ಎಲ್ಲವೂ ತಿಳಿದಂತೆ ಎಂಬುದಾಗಿ ಒಂದು ಭ್ರಮೆ ಇದೆ. ಇಲ್ಲ ಸಂಸ್ಕೃತ ಭಾಷೆಯು ಎಲ್ಲವೂ ಅಲ್ಲ. ಅಲ್ಲೇ ಎಲ್ಲವೂ ಇದೆ. ಅಂದರೆ ಸಂಸ್ಕೃತ ಭಾಷೆ ಬಂದರೆ ಎಲ್ಲವೂ ತಿಳಿದಂತೆ ಎಂದು ಅಂದುಕೊಳ್ಳುವಂತಿಲ್ಲ. ಸಂಸ್ಕೃತಭಾಷೆಯಲ್ಲಿ ಎಲ್ಲವೂ ಇದೆ ಎಂದರ್ಥ. ಈ ಪ್ರಪಂಚವನ್ನು ತಿಳಿದುಕೊಳ್ಳಲು ಸಂಸ್ಕೃತಭಾಷೆ ಅತ್ಯಂತ ಉತ್ತಮವಾದ ಮಾಧ್ಯಮ ಅಷ್ಟೇ. ಇದರಲ್ಲಿ ನಾವು ಹೊರಗಡೆ ಕಾಡುವಂತಹ ಎಲ್ಲ ವಿಷಯಗಳನ್ನು ಕೂಡ ನೋಡಬಹುದು. ಶಾಲಾ-ಕಾಲೇಜುಗಳಲ್ಲಿ ಕಾಡುವಂತಹ ವಿಜ್ಞಾನ, ಗಣಿತ, ಸಮಾಜ, ಖಗೋಲ, ಭೂಗೋಲ, ರಸಾಯನಶಾಸ್ತ್ರ, ಜೀವವಿಜ್ಞಾನ, ಭೂಗರ್ಭಶಾಸ್ತ್ರ, ವಿಮಾನಶಾಸ್ತ್ರ, ಲೋಹ ಹೀಗೆ ಒಂದೋ ಎರಡೋ ಯಾವುದೇ ವಿಷಯವನ್ನು ತೆಗೆದುಕೊಂಡರು ಕೂಡ ಈ ಭಾಷೆಯಲ್ಲಿ ಇದೆಯೋ! ಎಂದರೆ ಎಲ್ಲವೂ ಇದೆ. 

ಆದರೆ ಅದನ್ನು ತಿಳಿಯಲು ಮುಖ್ಯವಾಗಿ ಸಂಸ್ಕೃತ ಭಾಷೆ ಬೇಕು ಅಷ್ಟೇ. ಸಂಸ್ಕೃತವನ್ನು ತಿಳಿಯುವುದರಿಂದ ಇದರಲ್ಲಿ ಅಡಕವಾಗಿರುವಂತ ಎಲ್ಲ ವಿಷಯವನ್ನು ತಿಳಿಯಲು ಸಾಧ್ಯ. ಈ ಪ್ರಪಂಚದ ಮೊಟ್ಟ ಮೊದಲ ಸಾಹಿತ್ಯ ಎಂದರೆ ವೇದ ಇರುವುದು ಸಂಸ್ಕೃತದಲ್ಲೇ. ಯಾವುದನ್ನು ಅತ್ಯಂತ ಪ್ರಾಚೀನವಾದ ವೈದ್ಯವಿಜ್ಞಾನ ಎಂಬುದಾಗಿ ಹೇಳುತ್ತೇವೋ, ಅಂತಹ ಆಯುರ್ವೇದ ಇರುವುದು ಸಂಸ್ಕೃತಭಾಷೆಯಲ್ಲಿ. ಅತ್ಯಂತ ಪ್ರಾಚೀನವಾಗಿರುವ ಖಗೋಳವಿಜ್ಞಾನವನ್ನು ತಿಳಿಸುವ ಜ್ಯೋತಿಷ್ಯ ಶಾಸ್ತ್ರವು ಇರುವುದು ಈ ಸಂಸ್ಕೃತ ಭಾಷೆಯಲ್ಲಿ. ಹೀಗೆ ಸಮಸ್ತ ಪ್ರಪಂಚದ ಸಮಸ್ತ ವಿಷಯವನ್ನು ತಿಳಿಸುವ ವಿಷಯ ಈ ಸಂಸ್ಕೃತ ಭಾಷೆಯಲ್ಲಿ ಇದೆ. ಆದ್ದರಿಂದ ಸಂಸ್ಕೃತದ ಭಾಷೆ ಪರಿಚಯವಾದ ಮಾತ್ರಕ್ಕೆ ಎಲ್ಲವೂ ತಿಳಿದಂತಾಗದು. ಸಂಸ್ಕೃತಭಾಷೆಯಲ್ಲಿ ಎಲ್ಲವೂ ಇದೆ. ಎಲ್ಲವನ್ನೂ ತಿಳಿಯಬೇಕಾದರೆ ಈ ಭಾಷೆಯಿಂದ ಸಾಧ್ಯ. ಹಾಗಾಗಿ ಸಂಸ್ಕೃತವೇ ಎಲ್ಲವೂ ಅಲ್ಲ; ಸಂಸ್ಕೃತದಲ್ಲಿ ಎಲ್ಲವೂ.

ಸೂಚನೆ: 26/05/2024 ರಂದು ಈ ಲೇಖನ ವಿಜಯವಾಣಿಯ ಸುದಿನ ಲ್ಲಿ ಪ್ರಕಟವಾಗಿದೆ.