Sunday, May 26, 2024

ಯಕ್ಷ ಪ್ರಶ್ನೆ 91 (Yaksha prashne 91 )

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)



ಪ್ರಶ್ನೆ – 90 ಸಾಧು ಎಂದರೆ ಯಾರು?

ಉತ್ತರ - ಸರ್ವಪ್ರಾಣಿಗಳಿಗೂ ಹಿತವನ್ನು ಬಯಸುವವ.  

ನಿಜವಾದ ಸಜ್ಜನ ಯಾರು ? ಎಂಬ ಪ್ರಶ್ನೆಯನ್ನು ಯಕ್ಷನು ಕೇಳುತ್ತಾನೆ. ಯಾರು ಎಲ್ಲರಿಗೂ ಒಳ್ಳೆಯದು ಆಗಬೇಕು ಎಂದು ಬಯಸುತ್ತಾರೋ ಅವರನ್ನು 'ಸಾಧು' ಎನ್ನಬಹುದು. ಸಾಮಾನ್ಯ ಪ್ರಾಣಿಗಳ ಬಯಕೆ ಏನೆಂದರೆ ತಾನು ಬದುಕಬೇಕು. ಅದಕ್ಕೆ ಬೇಕಾದ ರೀತಿಯಲ್ಲಿ ಆ ಪ್ರಾಣಿಗಳ ಬದುಕು ಸಾಗುತ್ತಿರುತ್ತದೆ. ಬೆಳಗಾಯಿತೆಂದರೆ ಅವುಗಳಿಗೆ ಜೀವಿಕೆಯ ಹುಡುಕಾಟ ಶುರುವಾಗುತ್ತದೆ. ಅವುಗಳ ಜೀವಿಕೆಯೆಂದರೆ ಇನ್ನೊಂದು ಜೀವಿಯನ್ನು ತಿಂದು ಬದುಕುವುದು. ಅದು ಸಸ್ಯವನ್ನು ತಿನ್ನು ಜೀವಿಸುವಿದಿರಲಿ ಅಥವಾ ಪ್ರಾಣಿಯನ್ನು ತಿಂದು ಜೀವಿಸುವುದಿರಲಿ. ಆದರೆ ಅವರ ಜೀವಿಕೆಯೇ ಇನ್ನೊಂದು ಜೀವಿಯ ಮೇಲೆ ನಿಂತಿದೆ. ಇದು ಸಮಸ್ತ ಜೀವಜಾತಗಳ ನಡೆ. ಇದು ನಿಸರ್ಗ ಸಹಜ. ಆದರೆ ಇದನ್ನು ಬಿಟ್ಟು ಉಳಿದ ಪ್ರಾಣಿಗಳಿಗೆ ಬೇರೊಂದು ಜೀವವ್ಯಾಪಾರವೇ ಇರಲಾರದು. ಇದನ್ನು 'ಹಿಂಸೆ' ಎಂದು ಕರೆಯಲಾಗದು. ಆದರೆ ಮಾನವ ಮಾತ್ರ ಇದಕ್ಕೆ ಭಿನ್ನ. ಅವನು ತನ್ನ ಸುತ್ತಮುತ್ತಲಿನ ಪ್ರಾಣಿಸಂಕುಲದ ಮೇಲೆ ಸ್ವಾಮಿತ್ವವನ್ನು ಹೊಂದಬಲ್ಲ. ಅದನ್ನು ತನ್ನ ಬದುಕಿಗಾಗಿ ಹೇಗೆಲ್ಲಾ ಬಳಸಿಕೊಳ್ಳಬಲ್ಲ. ಆದರೆ ಅದನ್ನೂ ತಪ್ಪು ಎನ್ನಲು ಸಾಧ್ಯವಿಲ್ಲ. ಏಕೆಂದರೆ ಅವನ ಬದುಕೇ ಈ ಸಂಕುಲವನ್ನು ಅವಲಂಬಿಸಿಕೊಂಡಿರುತ್ತದೆ. ಆದರೆ ಇದರಲ್ಲೂ ಆತ ದಯೆ ಎಂಬ ಅತಿ ಉತ್ಕೃಷ್ಟವಾದ ಆತ್ಮಗುಣವನ್ನು ತೋರಿಸಲು ಸಾಧ್ಯ. ಈ ಜಗತ್ತಿನಲ್ಲಿ ಪ್ರತಿಯೊಂದು ಜೀವಿಗೂ ಸಹಜವಾಗಿ ಬದುಕುವ ಹಕ್ಕಿದೆ. ಅದನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ; ಕಸಿದುಕೊಳ್ಳಲೂಬಾರದು. ಬಲಾತ್ಕಾರವಾಗಿ ಅವುಗಳ ಜೀವಿಕೆಯ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವ ಕೆಲಸಕ್ಕೆ ಕೈಹಾಕಿದರೆ ಅದುವೇ ಹಿಂಸೆ ಎನಿಸಿಕೊಳ್ಳುವುದು.  ಆದ್ದರಿಂದ ಆತನ ಜೀವಿಕೆಯ ಉದ್ದೇಶಕ್ಕನುಗುಣವಾಗಿ ಹಿಂಸೆ ಮತ್ತು ಅಹಿಂಸೆ ಎಂಬುದರ ವಿಷಯ ನಿಂತಿರುತ್ತದೆ. 

ಒಬ್ಬ ಸಾಧುವಾದವನ ಜೀವಿಕೆಯು ಧರ್ಮಮಯವಾಗಿರುತ್ತದೆ. ಧರ್ಮದ ಚೌಕಟ್ಟಿನಲ್ಲಿರುತ್ತದೆ. ಅವನ ಜೀವಿಕೆಯ ಉದ್ದೇಶ ಚರಮಪುರುಷಾರ್ಥವಾದ ಮೋಕ್ಷಪ್ರಾಪ್ತಿಯೇ ಆಗಿರುತ್ತದೆ. ಯಾರಿಗೆ ಇಂತಹ ಮಾಹಾಧ್ಯೇಯವಿರುತ್ತದೆಯೋ ಅವನ ಬದುಕಿನಲ್ಲಿ ಹಪಿಹಪಿತನ ಇರುವುದಿಲ್ಲ. ಮಿತವಾದ ಪದಾರ್ಥಸಂಗ್ರಹ ಅವನದ್ದಾಗಿರುತ್ತದೆ. ಆಗ ಇಲ್ಲಸಲ್ಲದ ಆಸೆಯು ಅವನನ್ನು ಕಾಡುವುದಿಲ್ಲ. ತನ್ನ ಧರ್ಮಮಯವಾದ ಜೀವಿಕೆಗೆ ಅಗತ್ಯವಿರುವಷ್ಟು ಮಾತ್ರವೇ ಅವನಿಂದ ಅರ್ಥ ಮತ್ತು ಕಾಮಗಳ ಬಳಕೆ ಇರುತ್ತದೆ. ಸದಾ ಭವಂತನ ಚಿಂತನೆಯೆಲ್ಲೇ ಕಾಲ ಕಳೆಯುವ ವ್ಯಕ್ತಿಗೆ ಶರೀರವ್ಯಾಪಾರವೂ ಕಡಿಯಾಗುತ್ತದೆ. ಅದರ ಪರಿಣಾಮವಾಗಿ ಆತನಿಗೆ ಹಸಿವು ಬಾಯಾರಿಕೆ ಎಂಬ ಅತ್ಯಗತ್ಯವಾದ ಶರೀರವ್ಯಾಪಾರವನ್ನು ಬಾಧಿಸುವುದಿಲ್ಲ. ಯಾವಾಗ ಮನಸ್ಸು ಬಾಹ್ಯವಾದ ವ್ಯಾಪಾರದಲ್ಲಿ ತೊಡಗಿಕೊಳ್ಳುವುದೋ ಆಗತಾನೆ ಹಸಿವು ಬಾಯಾರಿಕೆಗೆ ಅವಕಾಶ. ಸಾಮಾನ್ಯ ಜೀವನನಿರ್ವಹಣೆಗೇ ಬೇಕಾದ ಪದಾರ್ಥದ ಬಯಕೆ ಕ್ಷೀಣಿಸುತ್ತಾ ಕ್ಷೀಣೀಸುತ್ತಾ ಕೊನೆಯಲ್ಲಿ ಉಸಿರಾಟವೇ ಜೀವನದ ಬಯಕೆಯಾಗುತ್ತದೆ. ಅದೂ ಕೂಡ ಬೇಡದ ಅವಸ್ಥೆಗೆ ಹೋಗುವಂತಹ ಸಂದರ್ಭ ಬರುತ್ತದೆ. ಕೊನೆಯಲ್ಲಿ ಈ ಉಸಿರಾಟವೂ ಸ್ತಬ್ಧವಾಗಿ ಸಮಾಧಿಯಲ್ಲೇ ನಿಲ್ಲುವವನು ನಿಜವಾದ ಸಾಧು. ಇಂತಹವನು ಮಾತ್ರ ಸರ್ವರ ಹಿತವನ್ನು ಬಯಸಲು ಸಾಧ್ಯ. ಇವನೇ ನಿಜವಾದ ಸಾಧು ಎನಿಸುವನು. ಇದೇ ನಿಜವಾದ ಭೂತದಯೆಯೆಂಬ ಆತ್ಮಗುಣವನ್ನು ಮೈಗೂಡಿಸಿಕೊಳ್ಳುವ ಪರಿ. ಇದಕ್ಕೆ ವಿರುದ್ಧವಾದ ಸ್ವಭಾವ ಉಳ್ಳವನು ಅಸಾಧು.

ಸೂಚನೆ : 26
/5/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.