Thursday, May 30, 2024

ಹುಟ್ಟು - ಒಂದು ಅವಲೋಕನ (Huttu - Ondu avalokana

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)




ಭಾರತೀಯರ ವಿವಾಹಪದ್ಧತಿಯು ಅತ್ಯಂತ ವಿಶಿಷ್ಟವೂ, ಅತ್ಯಂತ ಶ್ರೇಷ್ಠವೂ ಆಗಿದೆ. ಇದಕ್ಕೆ ಕಾರಣ ಹಲವಾರು. ಅವುಗಳಲ್ಲಿ ಮುಖ್ಯವಾದ ಕಾರಣ ಸತ್ಪ್ರಜಾ - ಸಂತತಿ ಪ್ರಾಪ್ತಿ. 'ಸಂತತಿ' ಎಂಬ ಶಬ್ದದ ಅರ್ಥವೇ ಹೀಗಿದೆ - ಸಮ್- ಚೆನ್ನಾಗಿ, ತತಿ- ವಿಸ್ತಾರವಾದುದು ಎನ್ನುವುದಾಗಿ. ಹಾಗಾದರೆ ಚೆನ್ನಾಗಿ ವಿಸ್ತಾರ ಆಗುವುದು ಎಂದರೇನು? ಇದನ್ನು ನಾವು ಅರ್ಥವನ್ನು ಮಾಡಿಕೊಂಡರೆ ಭಾರತೀಯ ವಿವಾಹಪದ್ಧತಿಗೆ ಒಂದು ಮೆರಗು ಸಿಕ್ಕಂತಾಗುವುದು. 


ಹಾಗಾಗಿ ಅದನ್ನು ಸ್ವಲ್ಪ ವಿವರಿಸುವುದಕ್ಕೆ ಒಂದು ಉದಾಹರಣೆಯನ್ನು ತೆಗೆದುಕೊಳ್ಳೋಣ. ಒಂದು ಮಾವಿನ ಬೀಜದಿಂದ ಮೊಳಕೆಯನ್ನು ಬರಿಸಿ, ಮರವನ್ನು ಮಾಡುತ್ತೇವೆ. ಮರದಿಂದ ಹಣ್ಣನ್ನು ಪಡೆಯುತ್ತೇವೆ. ಎಂತಹ ಹಣ್ಣನ್ನು ಅಪೇಕ್ಷೆ ಪಟ್ಟು ಅ ಬೀಜವನ್ನು ನೀಡುತ್ತೇವೆ ಎಂದರೆ ಒಳ್ಳೆಯ ಬೀಜವನ್ನು ತಾನೇ!. ಅಂದರೆ ನಮಗೆ ಮಾವಿನ ಬೀಜದಿಂದ ಒಳ್ಳೆಯ ಮಾವಿನಹಣ್ಣು ಬೇಕು; ಹುಳಿ ಮಾವಿನ ಹಣ್ಣು ಅಥವಾ ಕೆಟ್ಟು ಹೋಗುವಂತಹ ಮಾವಿನ ಹಣ್ಣು ಬೇಡ ಅಲ್ಲವೇ? ಹಾಗೆ ಮಾನವನು ಕೂಡ ಇದೇ ರೀತಿಯಾಗಿ ಆಸೆ ಪಡುವುದು ಸಹಜವಲ್ಲವೇ? ನಿರ್ವಿಕಾರವಾದ ಸಂತತಿ ಬೇಕೆನ್ನುವುದಾದರೆ ನಮ್ಮ ಮುಂಜಾಗ್ರತೆಯ ಕ್ರಮ ಹೇಗಿರಬೇಕು? ಅನ್ನುವುದನ್ನು ಕೂಡ ನಾವು ತಿಳಿದುಕೊಳ್ಳಬೇಕು. ಅದಕ್ಕಾಗಿ ಒಳ್ಳೆಯ ಬೀಜವನ್ನು ಆಯ್ದುಕೊಳ್ಳುತ್ತೇವೆ; ಆ ಒಳ್ಳೆಯ ಬೀಜವನ್ನು ಒಳ್ಳೆಯ ಕ್ಷೇತ್ರದಲ್ಲಿ ನೆಡುತ್ತೇವೆ; ಆದ್ದರಿಂದ ಒಳ್ಳೆಯ ವೃಕ್ಷ ಆಗಬೇಕು ಎನ್ನುವುದಾದರೆ, ಒಳ್ಳೆಯ ಬೀಜ ಬೇಕು ಮತ್ತು ಒಳ್ಳೆಯ ಕ್ಷೇತ್ರ ಬೇಕು, ಈ ಎರಡರ ಸಂಗಮದಿಂದ ತಾನೇ ನಾವು ಒಳ್ಳೆಯ ಮರವನ್ನು ಪಡೆಯಲು ಸಾಧ್ಯ!. ಅಂತ ಒಳ್ಳೆಯ ಮರದಿಂದ ತಾನೇ ನಾವು ಒಳ್ಳೆಯ ಹಣ್ಣನ್ನು ಪಡೆಯಲು ಸಾಧ್ಯ!. ಇದು ಸೃಷ್ಟಿ ಸಹಜವಾದದ್ದಲ್ಲವೇ. 


ಕಾಳಿದಾಸನು ರಘುವಂಶ ಎಂಬ ತನ್ನ ಮಹಾಕಾವ್ಯದಲ್ಲಿ ಹೀಗೆ ಹೇಳುತ್ತಾನೆ :- "ಪ್ರವರ್ತಿತೋ ದೀಪ ಇವ ಪ್ರದೀಪಾದ್" ಎಂದು. ರಘುಮಹಾರಾಜನು ಪುತ್ರರೂಪವಾದ ಸಂತತಿಯನ್ನು ಪಡೆದನು. ಅದು ಹೇಗಿತ್ತು? ಎಂದರೆ 'ದೀಪದಿಂದ ದೀಪವನ್ನು ಹಚ್ಚಿದಂತೆ' ಎಂದು. ದೀಪದಿಂದ ಮತ್ತೊಂದು ದೀಪವನ್ನು ಬೆಳಗಿಸಿದರೆ ಪ್ರಕಾಶದಲ್ಲಿ ಯಾವ ವಿಕಾರವನ್ನು ಕಾಣಲಾಗದು. ಎಷ್ಟೇ ದೀಪವನ್ನು ಬೆಳಗಿಸಿದರೂ ಆ ಎಲ್ಲಾ ದೀಪಗಳ ಬೆಳಕಿನಲ್ಲಿ ಯಾವುದೇ ದೋಷವನ್ನು ಕಾಣಲಾಗದು. 'ಆತ್ಮಾ ವೈ ಪುತ್ರ ನಾಮಾಸಿ' - ತನ್ನಂತೆ ಮಗ ಎಂದರ್ಥ. ತಾನು ದೋಷರಹಿತನಾಗಿದ್ದರೆ ಹುಟ್ಟುವ ಮಗುವೂ ದೋಷರಹಿತವಾಗುತ್ತದೆ. ಇದನ್ನೇ ಸಂ-ತತಿ - ಒಳ್ಳೆಯ ಸೃಷ್ಟಿ ಎನ್ನಬಹುದು. ಅಂತಹ ನಿರ್ದುಷ್ಟವಾದ ಸಂತತಿಯನ್ನು ಪಡೆಯುವುದೇ ವಿವಾಹದ ಮುಖ್ಯವಾದ ಧ್ಯೇಯವಾಗಿದೆ.  ಈ ವ್ಯವಸ್ಥೆ ಸಮಸ್ತ ಜಂತುಗಳಲ್ಲಿ ತಾನಾಗಿಯೇ ನಡೆದುಕೊಂಡು ಬರುತ್ತಿದೆ. ಆದರೆ ಎಲ್ಲ ಶ್ರೇಷ್ಠತೆಗಳು ನೆಲೆಸಿರುವ, ಪ್ರಾಣಿ ಸಂಕುಲಗಳಲ್ಲಿ ಅತ್ಯಂತ ಶ್ರೇಷ್ಠನಾದ, ಜಗತ್ತಿನ ಮೇಲೆ ತನ್ನ ಆಧಿಪತ್ಯವನ್ನು ಹೊಂದಿರುವಂತಹ ಮನುಷ್ಯನ ಸೃಷ್ಟಿ ಹೇಗಾಗಿದೆ!! ಮನುಷ್ಯನ ಸಂತತಿ ಪ್ರಾಣಿಗಳು ಅಥವಾ ಸಸ್ಯಗಳಂತೆ ಅಲ್ಲವೇ ಅಲ್ವಾ! ಇಷ್ಟೊಂದು ಮಹತ್ತ್ವಪೂರ್ಣವಾದ ವಿಷಯವನ್ನು ನಾವಿಂದು ಎಷ್ಟು ಹಗುರವಾಗಿ ತೆಗೆದುಕೊಂಡಿದ್ದೇವೆ!? ಗಂಡು ಹೆಣ್ಣು ಎರಡು ಕೂಡಿ ಬಾಳಲು ಇರುವ ವ್ಯವಸ್ಥೆ, ಅಥವಾ  ಒಂದು ಗಂಡು ಮತ್ತು ಹೆಣ್ಣು ಇಬ್ಬರೂ ಒಟ್ಟಿಗೆ ಇರಲು ಸಮಾಜದಿಂದ ಅನುಮತಿಯನ್ನು ಪಡೆಯಲು ಏರ್ಪಡಿಸುವ ಕಾರ್ಯಕ್ರಮವೇ 'ವಿವಾಹ' ಎನ್ನುವಂತಾಗಿದೆ. ಇಂದಿನ ವಿವಾಹ ಮಹೋತ್ಸದಲ್ಲಿ ನೂರಾರು ಸಾವಿರಾರು ಜನರಿಗೆ ಭೋಜವನ್ನು ಉಣಿಸುವುದಷ್ಟೇ ಉದ್ದೇಶವಾಗಿದೆ. 


ಅದರಲ್ಲೂ ಕೂಡ ಈ ವಿವಾಹದಲ್ಲಿ 'ನಾನು ಎಷ್ಟು ಭೂರಿಯಾದ ಭೋಜನವನ್ನ ಮಾಡಿಸಿದೆ; ಎಷ್ಟು ಜನರಿಗೆ ಊಟವನ್ನು ಮಾಡಿಸಿದೆ; ಎಷ್ಟು ಜನರಿಗೆ ಬೆಲೆಬಾಳುವ ದ್ರವ್ಯವನ್ನು ಕೊಟ್ಟೆ; ಎಂತೆಂಥ ಆಮಂತ್ರಣ ಪತ್ರಿಕೆಯನ್ನು ಪ್ರಿಂಟ್ ಮಾಡಿಸಿದೆ; ಎಷ್ಟು ಜನ ಬಂದಿದ್ದರು; ಯಾವ ಯಾವ ತರದ ಜನ ಬಂದಿದ್ದರು; ಹೀಗೆ ವೈಭವದ ಪ್ರದರ್ಶಿನಿಯಾಗಿದೆ ಈ ವಿವಾಹ.  ಪ್ರಸ್ತುತ ನಾವು ವಿವಾಹದಲ್ಲಿರುವಂತಹ ವೈಜ್ಞಾನಿಕತೆಯನ್ನು ಮತ್ತು ಋಷಿ ಹೃದಯವನ್ನು ಮರೆತಿದ್ದೇವೆ ಎಂದು ಹೇಳಿದರೆ ಖಂಡಿತ ತಪ್ಪಲ್ಲ. ಇಷ್ಟು ವಿಷಯಗಳನ್ನು ಮಾತ್ರ ನಿರೂಪಿಸಿ ಹೆಚ್ಚಿನ ವಿಷಯಗಳನ್ನು ಅಂದರೆ ವಿವಾಹ ಎಂದರೇನು? ವಿವಾಹದಲ್ಲಿ ಬರುವಂತಹ ಘಟ್ಟಗಳೇನು? ಅದರ ವೈಜ್ಞಾನಿಕವಾದ ಹಿನ್ನೆಲೆ ಏನು? ಇನ್ನಿತರ ವಿಷಯಗಳನ್ನು ಮುಂದೆ ನೋಡೋಣ.


ಸೂಚನೆ: 30/05/2023 ರಂದು ಈ ಲೇಖನ ವಿಜಯವಾಣಿಯ ಸಂಸ್ಕೃತಿ ದಲ್ಲಿ ಪ್ರಕಟವಾಗಿದೆ.