Tuesday, May 21, 2024

ವ್ಯಾಸ ವೀಕ್ಷಿತ 88 ಖಾಂಡವವು ಇಂದ್ರಪ್ರಸ್ಥವಾಯಿತು: ಕಾಡು ನಾಡಾಯಿತು! (Vyasa Vikshita 88 Khandavavu Indraprasthavayitu: Kadu Nadayitu!)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್ 
(ಪ್ರತಿಕ್ರಿಯಿಸಿರಿ lekhana@ayvm.in)



ಪಾಂಡವರಿಗೆ ಖಾಂಡವವನವನ್ನು ರಾಜ್ಯವೆಂದಿತ್ತು ಕಳುಹಿಸಿಕೊಡುತ್ತಾ, ಧೃತರಾಷ್ಟ್ರನು ಯುಧಿಷ್ಠಿರನಿಗೆ ಈ ಮಾತನ್ನು ಕೊನೆಗೆ ಹೇಳಿದನು:

ಈ ಪುರವೂ ರಾಷ್ಟ್ರವೂ ಧನಧಾನ್ಯಗಳಿಂದ ತುಂಬಿತುಳುಕಿ ಸಮೃದ್ಧವಾಗಲಿ. ಸೋದರರಿಂದ ಸಹಿತನಾಗಿ ನೀನು ಹೊರಡುವವನಾಗು, ಶುದ್ಧಾತ್ಮನಾದ ಯುಧಿಷ್ಠಿರನೇ" ಎಂದು.

ಆತನ ಆ ಮಾತನ್ನು ಸ್ವೀಕರಿಸಿದ್ದಾಯಿತು. ಎಲ್ಲರೂ ರಾಜಾ ಧೃತರಾಷ್ಟ್ರನಿಗೆ ನಮಸ್ಕಾರವನ್ನು ಮಾಡಿದರು. "ಅರ್ಧರಾಜ್ಯ"ವೆನಿಸಿದ್ದ ಆ ಖಾಂಡವಪ್ರಸ್ಥವು ವಾಸ್ತವವಾಗಿ ಘೋರವಾದ ಕಾಡಾಗಿತ್ತು! ಅದನ್ನೇ ಪಡೆದವರಾಗಿ ಆ ನರಶ್ರೇಷ್ಠರೆಲ್ಲಾ ಖಾಂಡವಕ್ಕೆ ಪ್ರವೇಶಮಾಡಿದರು. ಶ್ರೀಕೃಷ್ಣನನ್ನು ಮುಂದಿಟ್ಟುಕೊಂಡು ಆ ನಗರವನ್ನು ಸ್ವರ್ಗವೆಂಬಂತೆ ಅಲಂಕರಿಸಿದರು.

ಜಗನ್ನಾಥನಾದ ವಾಸುದೇವನು ಆಗ ಇಂದ್ರನನ್ನು ಸ್ಮರಿಸಿದನು. ಹಾಗಾಗುತ್ತಲೇ ಇಂದ್ರನು ವಿಶ್ವಕರ್ಮನಿಗೆ ಹೀಗೆಂದು ಅಪ್ಪಣೆಯಿತ್ತನು: "ಮಹಾಪ್ರಾಜ್ಞನಾದ ವಿಶ್ವಕರ್ಮನೇ, ಇನ್ನು ಮುಂದಕ್ಕೆ ಆ ಪುರವು ದಿವ್ಯವೂ ರಮ್ಯವೂ ಆಗಬೇಕು: ಹಾಗೆ ನೀ ಮಾಡು."

ಇಂದ್ರನ ಆಜ್ಞೆಯಂತೆ ವಿಶ್ವಕರ್ಮನು ಕೇಶವನಲ್ಲಿಗೆ ಹೋದನು. ವಂದನೀಯನಾದ ಆತನಿಗೆ ನಮಸ್ಕರಿಸಿ, "ನಾನೇನು ಮಾಡಬೇಕು?" - ಎಂಬುದಾಗಿ ಕೇಳಿಕೊಂಡನು. ಅದಕ್ಕೆ ಕೃಷ್ಣನು, " ಮಹೇಂದ್ರನ ಪುರವನ್ನು (ಎಂದರೆ ಅಮರಾವತಿಯನ್ನು) ಹೋಲುವಂತಹ ಮಹಾಪುರವನ್ನು ಕುರುರಾಜನಾದ ಯುಧಿಷ್ಠಿರನಿಗಾಗಿ ನಿರ್ಮಿಸಿಕೊಡು. ಇಂದ್ರಪ್ರಸ್ಥವೆಂಬುದಾಗಿ ಅದಕ್ಕೆ ಇಂದ್ರನೇ ನಾಮಕರಣವನ್ನು ಮಾಡಿದ್ದಾನೆ" ಎಂದನು.

ಆ ಬಳಿಕ ಪವಿತ್ರವೂ ಕಲ್ಯಾಣಮಯವೂ ಆದ ಆ ಪ್ರವೇಶದಲ್ಲಿ ಶಾಂತಿಕರ್ಮವನ್ನು ನೆರವೇರಿಸಿ, ದ್ವೈಪಾಯನರನ್ನು (ಎಂದರೆ ವ್ಯಾಸರನ್ನು) ಮುಂದಿಟ್ಟುಕೊಂಡ ಮಹಾರಥರಾದ ಆ ಪಾಂಡವರು ನಗರದ ಅಳತೆಯನ್ನು ಮಾಡಿಸಿದರು. ಆ ನಗರವು ಆಮೇಲೆ ಹೇಗೆ ಶೋಭಿಸಿತು! ಸಾಗರವನ್ನು ಹೋಲುವಂತಹ ಪರಿಖೆಗಳಿಂದ ಅಲಂಕೃತವಾಗಿತ್ತು. (ಪರಿಖೆಯೆಂದರೆ ಕೋಟೆಕೊತ್ತಲಗಳ ಸುತ್ತ ರಕ್ಷಣೆಗಾಗಿ ನಿರ್ಮಿಸಲಾಗಿರುವ ದೊಡ್ಡ ಹಳ್ಳ). ದೇವಲೋಕವನ್ನೇ ಎಟುಕಿಸಿಕೊಂಡಿದ್ದಂತಹ ಪ್ರಾಕಾರದಿಂದ ಅದು ಬೆಳಗಿತು. ಆ ಪ್ರಾಕಾರವಾದರೂ ಬಿಳಿಯ ಮೋಡದ ಕಾಂತಿಯಿಂದ ಕೂಡಿದ್ದಿತು. ಭೋಗವತೀನಗರಿಯು ಹೋಗೆ ಶೋಭಿಸುವುದೋ ಹಾಗೆ ಶೋಭಿಸುವುದಾಗಿದ್ದಿತು, ಆ ಪ್ರದೇಶ.

ಅಲ್ಲಿಯ ದ್ವಾರಗಳು ಗರುಡನ ರೆಕ್ಕೆಗಳೆರಡು ಬಿಚ್ಚಿದಂತಿದ್ದವು. ಒಳ್ಳೊಳ್ಳೆಯ ಸೌಧಗಳಿಂದ ಕಂಗೊಳಿಸಿತು, ಖಾಂಡವ. ಅಲ್ಲಿಯ ಗೋಪುರಗಳು ಮಂದರಪರ್ವತವನ್ನು ಹೋಲುವಂತಹುವಾಗಿದ್ದವು. ಮೇಘಸ್ತೋಮಗಳಂತಿದ್ದ ಅವುಗಳಿಂದ ನಗರವು ಗುಪ್ತವಾಗಿದ್ದಿತು.

ನಗರದ  ಸುರಕ್ಷೆಗಾಗಿ ಗುಟ್ಟಾದ ಎಡೆಗಳಲ್ಲಿಯ ಶಸ್ತ್ರಾಗಾರಗಳಿದ್ದವು. ಅಲ್ಲಿದ್ದ ಶಕ್ತ್ಯಾಯುಧಗಳು ಎರಡು ನಾಲಿಗೆಗಳಿಂದ ಕೂಡಿದ ಹಾವುಗಳಂತಿದ್ದವು. ಸೈನಿಕರು ಶಸ್ತ್ರಾಭ್ಯಾಸಗಳನ್ನು ಮಾಡಿಕೊಳ್ಳಲು ಯುಕ್ತವಾದ ಎಡೆಗಳಿದ್ದವು. ತೀಕ್ಷ್ಣವಾದ ಅಂಕುಶಗಳು, ಶತಘ್ನಿಗಳು (ಎಂದರೆ ನೂರುಮಂದಿಯನ್ನು ಒಟ್ಟಿಗೆ ಸಂಹರಿಸುವ ಶಸ್ತ್ರವಿನ್ಯಾಸಗಳು), ಯುದ್ಧಕ್ಕೆ ಬಳಸಲಾಗುವ ಯಂತ್ರಗಳು, ಕಬ್ಬಿಣದ ಮಹಾಚಕ್ರಗಳು - ಇವೆಲ್ಲವುಗಳಿಂದಲೂ ಆ ನಗರವು ಶೋಭಿಸಿತು.

ದೊಡ್ಡ ದೊಡ್ಡ ರಥಬೀದಿಗಳಿದ್ದವು; ಅಲ್ಲಿ ಜನಸಂಚಾರವೇ ಮೊದಲಾದುವಕ್ಕಾಗಿ ಬೇರ್ಪಡಿಸಿಟ್ಟಿದ್ದ ಭಾಗಗಳೇ ಇದ್ದವು. ದೈವಿಕವಾದ ಆಪತ್ತುಗಳಿಗೆ ಆಸ್ಪದವಿರಲಿಲ್ಲ. ಶುಭ್ರವಾದ ವಿವಿಧ ಉತ್ತಮಭವನಗಳಿಂದಾಗಿ, ದೇವಲೋಕದಂತೆ ಬೆಳಗಿತು ಆ ಇಂದ್ರಪ್ರಸ್ಥ.

ಆಕಾಶದಲ್ಲಿಯ ಮೇಘರಾಶಿಯ ನಡುವೆ ಮಿಂಚು ಹೇಗೆ ತೋರುವುದೋ ಹಾಗದು ತೋರುತ್ತಿತ್ತು, ಆ ರಮ್ಯವೂ ಶಿವವೂ (ಮಂಗಳವೂ) ಆದ ಪ್ರದೇಶದಲ್ಲಿದ್ದ ಯುಧಿಷ್ಠಿರಭವನ! ಧನಭರಿತವಾದ ಕುಬೇರಗೃಹವು ಹೇಗೆ ಶೋಭಿಸುವುದೋ ಹಾಗೆ ಶೋಭಿಸುವುದಾಗಿತ್ತು, ಅದು.  


ಸೂಚನೆ : 19/5/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.