Sunday, May 12, 2024

ವ್ಯಾಸ ವೀಕ್ಷಿತ - 87 ನೆರವೇರಿತು ಯುಧಿಷ್ಠಿರನ ಪಟ್ಟಾಭಿಷೇಕ! (Vyasa Vikshita 87 Neraveritu Yudhishthirana Pattabhisheka!)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)




 

ಧೃತರಾಷ್ಟ್ರನು ವಿದುರನಿಗೆ ಹೇಳಿದನು: ಎಲ್ಲ ಪ್ರಮುಖರನ್ನೂ ಬಾಂಧವರನ್ನೂ ಕರೆಯೋಣವಾಗಲಿ! ಪುಣ್ಯಾಹವಾಚನವಾಗಲಿ! ಗೋಸಹಸ್ರದಾನವಾಗಲಿ!

 

ವಿದುರ, ಕಿರೀಟವನ್ನು ಅಂಗದಗಳನ್ನು ಹಸ್ತಾಭರಣವನ್ನು ಹಾರ-ಕುಂಡಲಗಳನ್ನು ಮುಂತಾದೆಲ್ಲವನ್ನೂ ತನ್ನಿ. ಗಂಗಾಜಲವನ್ನು ಶೀಘ್ರವಾಗಿ ತನ್ನಿ. ಯುಧಿಷ್ಠಿರನ ಮೇಲೆ ಪಟ್ಟಾಭಿಷೇಕಜಲವು ಸುರಿಯುವುದನ್ನು ಪುರಜನರೆಲ್ಲ ಕಾಣಲಿ! ಸರ್ವಾಭರಣಭೂಷಿತನೂ ದಿವ್ಯಚಾಮರಸೇವೆಯುಳ್ಳವನೂ ಸುವರ್ಣಮಣಿಗಳುಳ್ಳ ಶ್ವೇತಚ್ಛತ್ರದಿಂದ ಶೋಭಿತನೂ ಆದ ಅವನನ್ನು ನೋಡಲಿ! "ಜಯ" ಎಂಬ ಮಾತನ್ನು ದ್ವಿಜರೂ ಇತರ ನೃಪರೂ ಘೋಷಿಸುತ್ತಿರುವುದನ್ನು ನೋಡಿ ಸಂತೋಷಪಡಲಿ! ಸಂತುಷ್ಟವಾದ ಮನಸ್ಸಿನಿಂದ ಪುರಜನರು ಕೊಂಡಾಡಲಿ!

 

ತನ್ನ ರಾಜ್ಯವನ್ನು ನನಗಿತ್ತು ಪಾಂಡುವು ನನಗೆ ಉಪಕಾರಮಾಡಿದನಲ್ಲವೆ? ಅದಕ್ಕೆ ಪ್ರತಿಯಾಗಿ ಯುಧಿಷ್ಠಿರನಿಗೆ ರಾಜ್ಯವನ್ನು ಈಗ ಕೊಡಲಾಗುತ್ತಿದೆ - ಎಂದನು.

ಧೃತರಾಷ್ಟ್ರನ ಈ ಉಕ್ತಿಗೆ ಭೀಷ್ಮ-ದ್ರೋಣ-ಕೃಪರೂ ವಿದುರನೂ "ಸಾಧು ಸಾಧು!" (ಭಲೆ! ಭಲೆ!!) ಎಂದರು. ಕೃಷ್ಣನೂ ಹೇಳಿದನು: ಮಹಾರಾಜ, ಇದು ಸರಿಯಾಗಿದೆ. ಕೌರವರಿಗೆ ಕೀರ್ತಿಕರವಾಗಿದೆ. ನೀನು ಹೇಳಿದುದನ್ನು ಅಂತೆಯೇ ಈಗಲೇ ಪೂರೈಸಿಬಿಡುವುದೊಳಿತು - ಎಂದು. ಹೀಗೆ ಹೇಳಿದವನಾಗಿ, ಕೃಷ್ಣನು ಧೃತರಾಷ್ಟ್ರನನ್ನು ತ್ವರೆಗೊಳಿಸಿದನು. ಧೃತರಾಷ್ಟ್ರನು ಏನನ್ನು ಹೇಳಿದ್ದನೋ ಅದನ್ನು ಮಾಡಿಸಿಯೇಬಿಟ್ಟನು.

 

ಆ ಹೊತ್ತಿಗೆ ಶ್ರೀಕೃಷ್ಣದ್ವೈಪಾಯನರು (ಎಂದರೆ ವ್ಯಾಸರು) ಅಲ್ಲಿಗೆ ಆಗಮಿಸಿದರು. ಕೌರವರೂ ಅವರ ಮಿತ್ರರೂ ಅವರಿಗೆ ವಂದಿಸಿದರು. ಆಗ ಯುಧಿಷ್ಠಿರನಿಗೆ ಅಭಿಷೇಕವನ್ನು ಮಾಡಿದವರೆಂದರೆ ಕೃಪ, ದ್ರೋಣ, ಭೀಷ್ಮ, ಧೌಮ್ಯ, ವ್ಯಾಸ, ಹಾಗೂ ಕೇಶವ; ಅಲ್ಲದೆ ಬಾಹ್ಲೀಕ, ಸೋಮದತ್ತರು. ನಾಲ್ಕೂ ವೇದಗಳಲ್ಲಿ ಪಾರಂಗತರಾದವರೊಂದಿಗೆ ಇದು ನೆರವೇರಿತು.

 

ಅವರೆಲ್ಲರೂ ಯುಧಿಷ್ಠಿರನಿಗೆ ಆಶೀರ್ವಾದವನ್ನಿತ್ತರು - ಭೂಮಿಯನ್ನೆಲ್ಲ ಜಯಿಸಿ, ನರಶ್ರೇಷ್ಠರನ್ನು ತನ್ನ ವಶಕ್ಕೆ ತಂದುಕೊಂಡವನಾಗಿ, ರಾಜಸೂಯ ಮೊದಲಾದ ಯಜ್ಞಗಳನ್ನು ಮಾಡಿ, ಭೂರಿದಕ್ಷಿಣೆಯಿತ್ತು (ಭೂರಿ ಎಂದರೆ ಹೆಚ್ಚಾದ), ಅವಭೃಥಸ್ನಾನವನ್ನು ಮಾಡಿ, ಬಂಧುಗಳೊಂದಿಗೆ ಸಂತೋಷಪಡಲಿ - ಎಂಬ ಆಶೀರ್ವಾದಗಳೊಂದಿಗೆ ಅವರೆಲ್ಲರೂ ಯುಧಿಷ್ಠಿರನನ್ನು ಆದರಿಸಿದರು.

ಹೀಗೆ ಮೂರ್ಧಾಭಿಷಿಕ್ತನಾದ ಯುಧಿಷ್ಠಿರನು ಸರ್ವಾಭರಣಭೂಷಿತನಾಗಿ ಜಯಕಾರವನ್ನು ಸ್ವೀಕರಿಸುತ್ತಾ ಅಕ್ಷಯವಾದ ಧನವನ್ನು ಪ್ರದಾನಮಾಡಿದನು. ಮೂರ್ಧಾಭಿಷಿಕ್ತರಾದ ರಾಜರೆಲ್ಲರೂ ಯುಧಿಷ್ಠಿರನಿಗೆ ಪೂಜೆಯನ್ನು ಸಲ್ಲಿಸಿದರು. ಗಜರಾಜನನ್ನೇರಿ ಶ್ವೇತಚ್ಛತ್ರದಿಂದ ಶೋಭಿಸುವವನಾಗಿ ಅನೇಕಪ್ರಜೆಗಳಿಂದ ಅನುಸೃತನಾಗಿ ಕಂಗೊಳಿಸಿದನು - ದೇವತೆಗಳಿಂದ ಸುತ್ತುವರೆಯಲ್ಪಟ್ಟ ಮಹೇಂದ್ರನ ಹಾಗೆ. ಆಮೇಲೆ ಹಸ್ತಿನಾವತಿಯನ್ನು ಪ್ರದಕ್ಷಿಣೆಮಾಡಿದನು. ನಗರಜನರಿಂದ ಪೂಜಿತನಾಗಿ, ಬಳಿಕ ಪುರಪ್ರವೇಶವನ್ನು ಮಾಡಿದನು. ಬಂಧುಗಳು ಆತನನ್ನು ಅಭಿನಂದಿಸಿದರು.

ಆದರೆ ಗಾಂಧಾರಿಯ ಮಕ್ಕಳಾದ ಕೌರವರು ಇದನ್ನೆಲ್ಲ ಕಂಡು ಬಂಧುಗಳೊಂದಿಗೆ ಸಂಕಟಪಟ್ಟುಕೊಂಡರು. ಮಕ್ಕಳ ಶೋಕವನ್ನು ಧೃತರಾಷ್ಟ್ರನು ಅರಿತುಕೊಂಡನು. ಶ್ರೀಕೃಷ್ಣನೆದುರಿಗೇ ಹಾಗೂ ಕೌರವರ ಎದುರಿಗೇ ಈ ಮಾತುಗಳನ್ನಾಡಿದನು.

"ಯುಧಿಷ್ಠಿರನೇ, ನಿನಗೆ ರಾಜ್ಯಾಭಿಷೇಕವು ಉಂಟಾಗಿರುವುದಷ್ಟೆ. ಇದು ಜಿತಾತ್ಮರಲ್ಲದವರಿಗೆ (ಎಂದರೆ ಸಂಯಮರಹಿತರಿಗೆ) ದುಷ್ಪ್ರಾಪವಾದದ್ದು (ಪಡೆಯಲು ಅಶಕ್ಯವಾದದ್ದು). ನೀನು ಕೃತಕೃತ್ಯನಾಗಿದ್ದೀಯೇ. ಇಂದೇ ಹೊರಡು. ಆಯುಸ್, ಪುರೂರವಸ್, ನಹುಷ, ಯಯಾತಿ - ಇವರುಗಳೆಲ್ಲರೂ ಈ ಖಾಂಡವದಲ್ಲಿಯೇ ನಿವಾಸಮಾಡುತ್ತಿದ್ದರು, ನೃಪವರನೇ. ಎಲ್ಲ ಪೌರವರಿಗೂ (ಎಂದರೆ ಪುರುವಂಶದ ಅರಸರಿಗೂ) ಇದುವೇ ರಾಜಧಾನಿಯಾಗಿತ್ತು, ಮಹಾಭುಜನೇ. ಮುಂದಿನ ಕಾಲಕ್ಕೆ ಬುಧಪುತ್ರನ ಲೋಭದಿಂದಾಗಿ ಮುನಿಗಣಗಳೇ ಇದನ್ನು ಹಾಳುಗೆಡವುವಂತಾಯಿತು. ಆದ್ದರಿಂದ ನೀನು ಖಾಂಡವಪ್ರಸ್ಥಪುರವನ್ನೂ ರಾಷ್ಟ್ರವನ್ನೂ ಬೆಳೆಸು."


ಸೂಚನೆ : 12
/5/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.